ಅತಿಥಿ ಸತ್ಕಾರ

ಅತಿಥಿ ಸತ್ಕಾರ

     ಹಿಂದೊಂದು ಕಾಲವಿತ್ತು. ಯಾರಾದರೂ ಅತಿಥಿಗಳು, ಹಸಿದವರು ಬರುತ್ತಾರೆಯೋ ಎಂದು ಕಾದಿದ್ದು ಅವರಿಗೆ ಊಟ ನೀಡಿದ ನಂತರ ಊಟ ಮಾಡುವ ಪರಿಪಾಠ ಸಜ್ಜನರಲ್ಲಿತ್ತು. ನನಗೆ ಗೊತ್ತಿದ್ದಂತೆ ಕೆಲವು ದಶಕಗಳ ಹಿಂದೆ ಒಂದು ಹೋಟೆಲಿನ ಮಾಲಿಕರು ಕೇವಲ ಸಾಂಕೇತಿಕವೆನ್ನುವ ಅತ್ಯಂತ ಕಡಿಮೆ ದರವಿಟ್ಟು ಓದುವ ಬಡ ವಿದ್ಯಾರ್ಥಿಗಳಿಗೆ ಹೊಟ್ಟೆ ತುಂಬಾ ಊಟ ಹಾಕುತ್ತಿದ್ದರು. ಅವರು ವಿದ್ಯಾರ್ಥಿಗಳಿಗೆ ಹಾಕುತ್ತಿದ್ದ ಒಂದೇ ನಿಬಂಧನೆಯೆಂದರೆ, 'ಎಷ್ಟು ಬೇಕಾದರೂ ತಿನ್ನಿ, ಬೇಕಾಗುವಷ್ಟನ್ನೇ ಹಾಕಿಸಿಕೊಂಡು ತಿನ್ನಿ, ಎಲೆಯಲ್ಲಿ ಮಾತ್ರ ಒಂದು ಅಗುಳನ್ನೂ ಉಳಿಸಬಾರದು, ಚೆನ್ನಾಗಿ ತಿನ್ನಿ, ಚೆನ್ನಾಗಿ ಓದಿ' ಎಂಬುದು ಮಾತ್ರ. ವಾರಾನ್ನ ಮಾಡಿಕೊಂಡು ಓದುತ್ತಿದ್ದ ವಿದ್ಯಾರ್ಥಿಗಳಿಗೂ ಕಡಿಮೆಯಿರಲಿಲ್ಲ. ಇಂದು ಈ ಕಲ್ಪನೆಯೇ ಕಾಣೆಯಾಗುತ್ತಿದೆ. ಹಸಿದವರಿಗೆ, ಬಡವರಿಗೆ, ಅಶಕ್ತರಿಗೆ ಊಟ ಹಾಕುವ ಧರ್ಮಛತ್ರಗಳಿರುತ್ತಿದ್ದವು. ಈಗ? ಅತಿಥಿಗಳಿರಲಿ, ರಕ್ತಸಂಬಂಧಿಗಳೂ, ಬಂಧುಗಳೂ ಸಹ ಅಪರಿಚಿತರೆನಿಸಿಬಿಡುತ್ತಿದ್ದಾರೆ. ಈ ವ್ಯತ್ಯಾಸಕ್ಕೆ ಕಾರಣ ಹುಡುಕುತ್ತಾ ಹೋದರೆ ನಮಗೆ ಸ್ಪಷ್ಟವಾಗಿ ಗೊತ್ತಾಗುವುದೆಂದರೆ ಪಾಶ್ಚಾತ್ಯ ಮೂಲದ ಹಣಸಂಪಾದನೆಯೇ ಪ್ರಮುಖವಾಗಿಸಿರುವ ಶಿಕ್ಷಣ ಪದ್ಧತಿ ಎಂಬುದು. ನೈತಿಕ ಶಿಕ್ಷಣದ ಕೊರತೆ, ಕೇಸರೀಕರಣದ ಗುಮ್ಮನನ್ನು ತೋರಿಸಿ ಸತ್‌ಸಂಸ್ಕಾರಗಳಿಗೆ ಅಡ್ಡಿ, ಮಕ್ಕಳಿಗೆ ಸಂಸ್ಕಾರ ಕಲಿಸಿಕೊಡಬೇಕಾದ ತಂದೆ-ತಾಯಿಯರಿಗೇ ಸಂಸ್ಕಾರದ ಕೊರತೆ, ಋಣಾತ್ಮಕ ವಿಷಯಗಳಿಗೆ ಪ್ರಾಧಾನ್ಯತೆ ಕೊಡುವ ಮಾಧ್ಯಮಗಳು, ಬುದ್ಧೂಜೀವಿಗಳು ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸುತ್ತಿರುವುದು ಸುಳ್ಳಲ್ಲ. ನಾವು ಪ್ರತಿನಿತ್ಯ ಊಟ ಮಾಡಬಲ್ಲಷ್ಟು ಭಾಗ್ಯಶಾಲಿಗಳಾಗಿದ್ದೇವೆ. ಆದರೆ, ಇದೇ ಪರಿಸ್ಥಿತಿ ಹೆಚ್ಚಿನವರಿಗೆ ಇಲ್ಲ. ಅಂತಹ ಯಾರಾದರೂ ಒಬ್ಬ ಅರ್ಹರಿಗೆ ಊಟ ಹಾಕುವ ಕೆಲಸ ನಾವು ಮಾಡಬಹುದೇನೋ! ವೈದಿಕ ಪರಂಪರೆಯಲ್ಲಿ ಪ್ರತಿನಿತ್ಯ ಮಾಡಬೇಕಾದ ಪಂಚಮಹಾಯಜ್ಞಗಳ ಪೈಕಿ ಅತಿಥಿಯಜ್ಞವೂ ಒಂದು. ಈ ಕುರಿತು ಪಂ. ಸುಧಾಕರ ಚತುರ್ವೇದಿಯವರು ಹೇಳಿರುವುದು ಹೀಗೆ:   

      ಅತಿಥಿಯಜ್ಞ - ಇದೂ ಮುಖ್ಯತಃ ಗೃಹಸ್ಥರಿಗೇ ಸಂಬಂಧಿಸಿದ ಯಜ್ಞ. ಯಾವ ಪೂರ್ವ ನಿಶ್ಚಯವೂ ಇಲ್ಲದೆ, ಬರುವ ದಿನದ ಅರಿವು ಇಲ್ಲದೆ, ತಾವಾಗಿ ಬಂದ ಸಂನ್ಯಾಸಿಗಳನ್ನೂ, ಸದಾಚಾರಿ ವಿದ್ವಾಂಸರನ್ನೂ, ಆತ್ಮಜರನ್ನೂ ಅದರದಿಂದ ಸ್ವಾಗತಿಸಿ, ಅವರಿಂದ ಆತ್ಮೋದ್ಧಾರಕಾರವಾದ ಉಪದೇಶಗಳನ್ನು ಪಡೆದುಕೊಂಡು, ಅವರನ್ನು ಭೋಜನಾದಿಗಳಿಂದ ಸತ್ಕರಿಸುವುದೇ ಅತಿಥಿಯಜ್ಞ. ಅತಿಥಿಯಜ್ಞದ ಮಹತ್ವವನ್ನು ವರ್ಣಿಸುತ್ತಾ ಅಥರ್ವವೇದ ಹೇಳುತ್ತದೆ:-

ಅಶಿತಾವತ್ಯಥಾವಶ್ನೀಯಾದ್ಯಜಸ್ಯ ಸಾತ್ಮತ್ವಾಯ ಯಜ್ಞಸ್ಯಾವಿಚ್ಛೇದಾಯ ತದ್ ವ್ರತಮ್ || (ಅಥರ್ವ.೯.೬.೩೮) 

     [ಅತಿಥೌ ಅಶಿತಾವತಿ] ಅತಿಥಿಯು ಊಟ ಮಾಡಿದ ಮೇಲೆ, [ಅಶ್ನೀಯಾತ್] ಗೃಹಸ್ಥನು ಊಟ ಮಾಡಬೇಕು. [ಯಜ್ಞಸ್ಯ ಸಾತ್ಮತ್ವಾಯ] ಯಜ್ಞವು ಆತ್ಮವಂತವಾಗುವಂತೆ ಮಾಡುವುದಕ್ಕಾಗಿ [ಯಜ್ಞಸ್ಯ ಆವಿಚ್ಛೇದಾಯ] ಯಜ್ಞವು ನಿರಂತರ ನಡೆಯುವಂತೆ ಮಾಡುವುದಕ್ಕಾಗಿ (ಎಂಬುದಾಗಿ ತಿಳಿಯಬೇಕು). [ತದ್ ವ್ರತಮ್] ಅದೇ ವ್ರತ.

     ಯಜ್ಞವು ಜಳ್ಳಾಗದಂತೆ, ಕೇವಲ ತಿರುಳಿಲ್ಲದ ಆಡಂಬರವಾಗದಂತೆ, ಅದು ಚೈತನ್ಯದಾಯಕವಾಗುವಂತೆ ಮಾಡಲಿಕ್ಕಾಗಿ ಮತ್ತು ಅದು ಮುರಿದು ಬೀಳದಂತೆ, ಸತತವೂ ನಡೆದು ಬರುವಂತೆ ಮಾಡುವುದಕ್ಕಾಗಿ, ಜ್ಞಾನಿಯಾದ ಸತ್ಯಮಯವಾದ ಆಧ್ಯಾತ್ಮಿಕ ಪ್ರವಚನವನ್ನು ನೀಡಬಲ್ಲ ಅತಿಥಿಯನ್ನು ಮೊದಲು ಭೋಜನಾದಿಗಳಿಂದ ಸತ್ಕರಿಸಿ, ಆಮೇಲೆ ತಾನು ಭುಂಜಿಸುವುದು ಗೃಹಸ್ಥನ ವ್ರತವಾಗಿರಬೇಕು. ಅತಿಥಿಯ ಲಕ್ಷಣವನ್ನು ಹೇಳುತ್ತಾ ಅಥರ್ವವೇದ ಹೀಗೆನ್ನುತ್ತದೆ:-

ಏಷ ವಾ ಅತಿಥಿರ್ಯಚ್ಛೋತ್ರೀಯಸ್ತಸ್ಮಾತ್ಪೂರ್ವೋ ನಾಶ್ನೀಯಾತ್ || (ಅಥರ್ವ.೯.೬.೩೭)

     [ಯತ್ ಶ್ರೋತ್ರೀಯಃ] ಯಾವನು ವೇದವೇತ್ತನಾಗಿದ್ದಾನೋ, [ಏಷ ವಾ ಅತಿಥಿಃ] ಅವನೇ ಅತಿಥಿಯು. [ತಸ್ಮಾತ್ ಏವ ಪೂರ್ವಃ] ಆತನಿಗಿಂತಲೂ ಮೊದಲಿಗನಾಗಿ, [ನ ಅಶ್ನೀಯಾತ್] ಊಟ ಮಾಡಬಾರದು. 

     ಚತುರ್ವೇದ ಪಾರಂಗತನಾದ ವಿದ್ವಾಂಸನೇ ಗೃಹಸ್ಥರಿಗೆ ಪಾರಮಾರ್ಥಿಕ - ಲೌಕಿಕ - ಜ್ಞಾನಗಳನ್ನು ಕೊಡಬಲ್ಲನು. ಧರ್ಮ, ಮನೆಮನೆಯಲ್ಲಿಯೂ ಜೀವಂತವಾಗಿ ಮೆರೆಯಬೇಕಾದರೆ, ವಿದ್ವಾನ್ ಅತಿಥಿಗಳ ಆಗಮನ ಅನಿವಾರ್ಯ. ಅತಿಥಿಸತ್ಕಾರ ಮಾಡದೆ, ತಾನೇ ಮೊದಲು ತಿನ್ನುವ ಗೃಹಸ್ಥನ ಬಗೆಗೆ ಅಥರ್ವವೇದ ಹೇಳುತ್ತದೆ:- 

ಊರ್ಜಾಂ ಚ ವಾ ಏಷ ಸ್ಫಾತಿಂ ಚ ಗೃಹಾಣಾಮಶ್ನಾತಿ ಯಃ ಪೂರ್ವೋsತಿಥೇರಶ್ನಾತಿ || (ಅಥರ್ವ.೯.೬.೩೩)

     [ಯಃ ಅತಿಥೇಃ ಪೂರ್ವಃ ಅಶ್ನಾತಿ] ಯಾವನು ಅತಿಥಿಗಿಂತ ಮೊದಲಿಗನಾಗಿ ಭುಂಜಿಸುತ್ತಾನೋ, [ಏಷ ಗೃಹಾಣಾಂ ಊರ್ಜಂ ಚ ವಾ ಸ್ಫಾತಿಂ ಚ ಅಶ್ನಾತಿ] ಅವನು ಮನೆಯ ತೇಜಸ್ಸನ್ನೂ, ಪಾರಸ್ಪರಿಕ ಪರಿಜ್ಞಾನವನ್ನೂ ನುಂಗಿಬಿಡುತ್ತಾನೆ.

ಶ್ರಿಯಂ ಚ ವಾ ಏಷ ಸಂವಿಧಂ ಚ ಗೃಹಾಣಾಮಶ್ನಾತಿ ಯಃ ಪೂರ್ವೋsತಿಥೇರಶ್ನಾತಿ || (ಅಥರ್ವ.೯.೬.೩೬)

     [ಯಃ ಅತಿಥೇಃ ಪೂರ್ವಃ ಅಶ್ನಾತಿ] ಯಾವನು ಅತಿಥಿಗಿಂತ ಮೊದಲಿಗನಾಗಿ ಭುಂಜಿಸುತ್ತಾನೋ, [ಏಷ ಗೃಹಾಣಾಂ ಶ್ರಿಯಂ ಚ ವಾ ಸಂವಿದಂ ಚ ಅಶ್ನಾತಿ] ಅವನು ಮನೆಯ ಸಂಪತ್ತನ್ನೂ, ಪಾರಸ್ಪರಿಕ ಪರಿಜ್ಞಾನವನ್ನೂ ನುಂಗಿಬಿಡುತ್ತಾನೆ. 

     ಗೃಹಸ್ಥರ ಧರ್ಮ, ಕೇವಲ ತಮ್ಮ ಹೊಟ್ಟೆ ಹೊರೆದುಕೊಳ್ಳುವುದಲ್ಲ. ಮಾನವಮಾತ್ರರ ಉತ್ಕರ್ಷಕ್ಕಾಗಿ ಸದುಪದೇಶ ಮಾಡುತ್ತಾ, ತಿರುಗುವ ಜ್ಞಾನಿಗಳಿಗೂ ಆದರ, ಸತ್ಕಾರ ಸಲ್ಲಿಸಿ, ಸಾಮಾಜಿಕ ಹಿತದಲ್ಲಿಯೂ ಭಾಗವಹಿಸಬೇಕಾದುದು ಅವರ ಕರ್ತವ್ಯ. ಅಭ್ಯಾಗತರನ್ನು ಅಂದರೆ, ಕರೆಸಿಕೊಂಡು ಬಂದವರನ್ನು ಸತ್ಕರಿಸುವುದರಲ್ಲಿ ವಿಶೇಷವೇನೂ ಇಲ್ಲ. ಅತಿಥಿಸತ್ಕಾರದಿಂದಲೇ ಗೃಹಸ್ಥರ ಹೃದಯ ವಿಶಾಲವಾಗುವುದು. ವಿದ್ವತ್ಸಂಗದಿಂದ ಅಧ್ಯಾತ್ಮಜ್ಞಾನವೂ ಬೆಳೆದುಬರುವುದು. 

 

Comments

Submitted by sathishnasa Mon, 02/25/2013 - 15:40

" ಈ ವ್ಯತ್ಯಾಸಕ್ಕೆ ಕಾರಣ ಹುಡುಕುತ್ತಾ ಹೋದರೆ ನಮಗೆ ಸ್ಪಷ್ಟವಾಗಿ ಗೊತ್ತಾಗುವುದೆಂದರೆ ಪಾಶ್ಚಾತ್ಯ ಮೂಲದ ಹಣಸಂಪಾದನೆಯೇ ಪ್ರಮುಖವಾಗಿಸಿರುವ ಶಿಕ್ಷಣ ಪದ್ಧತಿ ಎಂಬುದು. ನೈತಿಕ ಶಿಕ್ಷಣದ ಕೊರತೆ, ಕೇಸರೀಕರಣದ ಗುಮ್ಮನನ್ನು ತೋರಿಸಿ ಸತ್‌ಸಂಸ್ಕಾರಗಳಿಗೆ ಅಡ್ಡಿ, ಮಕ್ಕಳಿಗೆ ಸಂಸ್ಕಾರ ಕಲಿಸಿಕೊಡಬೇಕಾದ ತಂದೆ-ತಾಯಿಯರಿಗೇ ಸಂಸ್ಕಾರದ ಕೊರತೆ, ಋಣಾತ್ಮಕ ವಿಷಯಗಳಿಗೆ ಪ್ರಾಧಾನ್ಯತೆ ಕೊಡುವ ಮಾಧ್ಯಮಗಳು, ಬುದ್ಧೂಜೀವಿಗಳು ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸುತ್ತಿರುವುದು ಸುಳ್ಳಲ್ಲ." ಸತ್ಯವಾದ ಮಾತು ನಾಗರಾಜ್ ರವರೇ ಇಂದು ಹಣದ ಮೇಲಿನ ವ್ಯಾಮೋಹ ಜಾಸ್ತಿ ಆಗಿ ಭಾವನೆ, ಬಾಂಧವ್ಯ, ಕರುಣೆ ಇವುಗಳು ಮರೆಯಾಗುತ್ತಿವೆ ಇದು ವಿಷಾದದ ಸಂಗತಿ ಚಿಂತನಾರ್ಹ ಲೇಖನ ನಾಗರಾಜ್ ರವರೆ .......ಸತೀಶ್
Submitted by kavinagaraj Mon, 02/25/2013 - 17:12

In reply to by sathishnasa

ಪಾಶ್ಚಾತ್ಯರ ಶಿಕ್ಷಣ ಪದ್ಧತಿಯ ಪ್ರವಾಹದಲ್ಲಿ ಕೊಚ್ಚಿ ಬಹುದೂರ ಬಂದುಬಿಟ್ಟಿದ್ದೇವೆ. ಸರಿಪಡಿಸುವುದಕ್ಕೆ ಗಂಡೆದೆಯ ನಾಯಕರು ಅಧಿಕಾರದ ಚುಕ್ಕಾಣಿ ಹಿಡಿಯಬೇಕು. ಧನ್ಯವಾದ, ಸತೀಶರೇ.
Submitted by makara Tue, 02/26/2013 - 08:54

ಕವಿಗಳೆ, ಅತಿಥಿ ಅಭ್ಯಾಗತರು ಮನೆಗೆ ಬಂದರೆ ಇವರು ಯಾವಾಗ ಹೋಗುತ್ತಾರೆ ಎಂದು ಕಾಯುವ ಈ ಕಾಲದಲ್ಲಿ ನಮ್ಮ ಸಂಪ್ರದಾಯವನ್ನು ನೆನಪಿಸುವ ಇಂತಹ ಲೇಖನ ಸಮಯೋಚಿತ. ಚೀನಾ ದೇಶದಿಂದ ಬಂದ ಯಾತ್ರಿಕ ಹ್ಯೂಯೆನ್-ತ್ಸಾಂಗ್ ಹಿಮಾಲಯದ ತಪ್ಪಲಿಗೆ ಬಂದಾಗ ಅವನಿಗೆ ವಿಪರೀತ ಬಾಯಾರಿಕೆಯುಂಟಾಗಿ ಅಲ್ಲೇ ಇದ್ದ ಒಂದು ಹಳ್ಳಿಗೆ ಹೋಗಿ ಮನೆಯ ಬಾಗಿಲೊಂದನ್ನು ತಟ್ಟಿದನಂತೆ. ಆ ಮನೆಯೊಡತಿ ಬಂದಾಗ ಇವನು ಬಾಯಿ ಸನ್ನೆಯಿಂದಲೇ ತನಗೆ ಕುಡಿಯಲು ನೀರು ಬೇಕು ಎಂದನಂತೆ. ಆಗ ಆಕೆ ಅವನಿಗೆ ಪಾನೀಯವೊಂದನ್ನು ತಂದು ಕೊಟ್ಟರೆ ಅದನ್ನು ಬೇಡವೆಂದನಂತೆ, ಅದೇ ರೀತಿ ಆಕೆ ಮಜ್ಜಿಗೆ ಮೊದಲಾದವನ್ನು ತಂದ ನಂತರವೂ ಅದೇ ರೀತಿ ಅವೆಲ್ಲವನ್ನೂ ತಿರಸ್ಕರಿಸಿದನಂತೆ; ಕಡೆಯಲ್ಲಿ ಆಕೆ ನೀರು ತಂದಿತ್ತಾಗ ಅದನ್ನು ಸಂತೋಷದಿಂದ ಕುಡಿದನಂತೆ. ಆಗ ಆ ಹೆಂಗಸು ಇವನೆಡೆಗೆ ಒಂದು ಕೆಟ್ಟದಾದ ದೃಷ್ಟಿಯನ್ನು ಬೀರಿದಳಂತೆ ಕೇವಲ ನೀರಿಗೋಸ್ಕರ ನನ್ನ ಮನೆಯವರೆಗೆ ಬಂದಿದ್ದೀಯಾ ಎಂದು! ಅದು ಅಂದಿನ ಭಾರತ. ಕೇವಲ ೨೦-೨೫ ವರ್ಷಗಳ ಹಿಂದೆಯೂ ನೀರು ಕೇಳಲು ಮನೆಗೆ ಬಂದವರಿಗೆ ನೀರು-ಬೆಲ್ಲ ಅಥವಾ ಪಾನಕ/ ಮಜ್ಜಿಗೆ ಕೊಡುವ ಪರಿಪಾಟವಿತ್ತು. ಇಂದಿನ ಪಾಶ್ಚಿಮಾತ್ಯ ಪ್ರಭಾವಿತ ಸಮಾಜದಲ್ಲಿ ಇವೆಲ್ಲಾ ಮರೀಚಿಕೆಯೇ ಸರಿ. ಆದರೂ ಇದು ಇನ್ನೂ ಹಳ್ಳಿಗಳಲ್ಲಿ ಉಳಿದುಕೊಂಡಿರುವುದು ಸಮಾಧಾನಕರ ಸಂಗತಿ.
Submitted by kavinagaraj Tue, 02/26/2013 - 10:49

In reply to by makara

ಅತಿಥಿಗಳಿಗೆ ಊಟ ಹಾಕದೆ ಊಟ ಮಾಡದಿದ್ದ ಕಾಲವೊಂದಿತ್ತು ಎಂದರೆ ನಮ್ಮ ಮಕ್ಕಳಿರಲಿ, ಸಮಕಾಲೀನರೇ ನಂಬಲಾರರು! ಪ್ರತಿಕ್ರಿಯೆಗೆ ವಂದನೆಗಳು, ಶ್ರೀಧರರೇ.
Submitted by swara kamath Tue, 02/26/2013 - 12:30

ಕವಿ ನಾಗರಾಜರಿಗೆ ನಮಸ್ಕಾರಗಳು. ಅಂದು ಬಡ ಬಗ್ಗರಿಗೆ,ದುರ್ಬಲರಿಗೆ ಊಟ ಹಾಕುವ ಧರ್ಮಛತ್ರಗಳಿದ್ದವು.ಮಟ ಮಧ್ಯಾನ್ಹದಲ್ಲಿ ನೀರಡಿಕೆಗಾಗಿ ಬರುವ ಯಾರೆ ಇರಲಿ ಒಂದು ತುತ್ತು ಊಟ ಮಾಡಿಹೋಗು ಎನ್ನುವ ಹಿರಿಯರಿದ್ದರು. ಆದರೆ ಇಂದು ಕಾಲ ಬದಲಾದಂತೆ ಮಾನವನ ನಡೆತೆಯಲ್ಲೂ ಗಣನೀಯವಾಗಿ ಬದಲಾಗುತ್ತಾ ಹೋಗಿ ,ಕೆಲವರಿಗೆ ಮನೆ ಮುಂದೆ ಬಂದ ಅತಿಥಿ ಗಳನ್ನು ಬನ್ನಿ ಕುಳಿತುಕೊಳ್ಳಿ ಎನ್ನುವಷ್ಟು ಸೌಜನ್ನವು ಸಹ ಇರುವುದಿಲ‍್ಲಾ. "ಅತಿಥಿ ದೇವೊ ಬವಃ "ಎನ್ನುವ ಮಾತು ಕಾಲಸರಿದಂತೆ ಅರ್ಥ ಕಳೆದು ಕೊಳ್ಳುವದರಲ್ಲಿ ಆಶ್ಚರ್ಯವಿಲ್ಲ ಎನಿಸುತ್ತಿದೆ. ನಾವು ನಮ್ಮ ಮನೆಯಲ್ಲಿ ಆ ಪರಿಪಾಠ ಉಳಿಸಿಕೊಂಡು ನಮ್ಮಮಕ್ಕಳಿಗೆ ಆ ಪುಣ್ಯ ಕಾರ್ಯದ ಕುರಿತು ತಿಳುವಳಿಕೆ ಕೊಟ್ಟು ಅದನ್ನು ಅವರು ಪಾಲಿಸಿಕೊಂಡು ಹೋದರೆ ಅದು ನಮ್ಮ ಭಾಗ್ಯವಷ್ಟೆ ! ಉತ್ತಮ ಲೇಖನ ಬರೆದು ಆ ಕುರಿತು ನಮ್ಮ ಗಮನ ಸೆಳದಿದ್ದಕ್ಕೆ ವಂದನೆಗಳು.
Submitted by kavinagaraj Tue, 02/26/2013 - 15:06

In reply to by swara kamath

ವಂದನೆ, ರಮೇಶಕಾಮತರೇ. ಕಾಲ ಬದಲಾಗಿಲ್ಲ. ಮಾನವರು ಬದಲಾಗಿರುವ ಕಾಲವಿದು. ಕಾಲ ಹಿಂದೆ ಹೇಗೆ ಇತ್ತೋ ಹಾಗೆಯೇ ಮುಂದುವರೆಯುತ್ತಿದೆ.ಕೆಟ್ಟ ಶಿಕ್ಷಣ, ಸಂಸ್ಕಾರಗಳ ಫಲವಿದು. ಸ್ವಲ್ಪವಾದರೂ ಬದಲಾಗಲು/ಬದಲಾಯಿಸಲು ಪ್ರಯತ್ನಿಸೋಣ ಎಂಬ ಭಾವನೆ ಬರಬೇಕಿದೆ. ಸುಂದರ ಪ್ರತಿಕ್ರಿಯೆಗೆ ವಂದನೆಗಳು.