ಎಳೆಯರ ಹೃನ್ಮನಗಳನರಳಿಸಲಿದೆ ... “ವಿಜ್ಞಾನ ವಿಸ್ಮಯ”
ದಿನ ನಿತ್ಯದ ಜೀವನದಲ್ಲಿ, ಸುತ್ತಮುತ್ತಲ ಆಗುಹೋಗುಗಳಲ್ಲಿ, ನೈಸರ್ಗಿಕ ವಿದ್ಯಮಾನಗಳಲ್ಲಿ ಸಂಭವಿಸುವ ಹಲವಾರು ಘಟನೆಗಳು ನಮ್ಮ ಮನಸ್ಸಿನಲ್ಲಿ ಕೌತುಕವನ್ನು, ವಿಸ್ಮಯವನ್ನು, ಪ್ರಶ್ನೆಗಳನ್ನು ಮೂಡಿಸುತ್ತವೆ. ಅದೇ ವಿಜ್ಞಾನ. ವಿಜ್ಞಾನ ನಮ್ಮ ಜೀವನದ ಅವಿಭಾಜ್ಯ ಅಂಗ. ಇಂದು ಕೃಷಿಯಲ್ಲಿ ವಿಜ್ಞಾನವಿದೆ. ಅಡುಗೆ ಮಾಡುವುದು ಕೂಡ ಒಂದು ವಿಜ್ಞಾನವೆಂದು ಪರಿಗಣಿಸಲ್ಪಟ್ಟಿದೆ.. ಬಟ್ಟೆ ತೊಳೆಯುವುದೂ ವಿಜ್ಞಾನವೇ. ಜೀವನದ ಪ್ರತಿಯೊಂದು ಚಟುವಟಿಕೆಯಲ್ಲೂ ಭೌತ, ರಸಾಯನ, ಜೀವಶಾಸ್ತ್ರಗಳಿವೆ. ಏನು? ಏಕೆ? ಹೇಗೆ? ಎಂಬ ಪ್ರಶ್ನೆಗಳನ್ನು ಮೂಡಿಸುವುದೇ ವಿಜ್ಞಾನದ ಲಕ್ಷಣ. ಆದರೆ ಈ ಪ್ರಶ್ನೆಗಳಿಗೆ ಉತ್ತರಗಳನ್ನು ಎಲ್ಲಿಂದ ಹೇಗೆ ಪಡೆಯಬೇಕೆಂಬುದು ತಿಳಿಯದೇ ಗೊಂದಲಕ್ಕೊಳಗಾಗಿ ನಾವು ಸುಮ್ಮನಾಗಿಬಿಡುತ್ತೇವೆ. ಆದರೆ ಅವೇ ಪ್ರಶ್ನೆಗಳನ್ನು ಎಳೆಯರು ನಮ್ಮ ಮುಂದಿಟ್ಟರೆ? ಬೆಳೆಯುವ ಎಳೆಯ ಮನಗಳು ಪ್ರಶ್ನಿಸುವ ಮನೋಭಾವಕ್ಕೆ ನೀರೆರೆದು ಪೋಷಿಸಬೇಕೇ ವಿನಃ ತಲೆ ಮೊಟಕಿ ಸುಮ್ಮನಾಗಿಸುವುದು ಸಾಧುವಲ್ಲ. ಆಗ ನಮಗೆ ನಮ್ಮ ಸಂದೇಹಗಳನ್ನು ಪರಿಹರಿಸಬಲ್ಲ ಮಾಹಿತಿ ಮೂಲಗಳು ಬೇಕೆನಿಸುತ್ತವೆ. ಇಂದು ಶಾಲೆಗಳ ಲ್ಯಾಪ್‍ಟಾಪ್ ಮಲ್ಟಿಮೀಡಿಯಾ ಲ್ಯಾಬ್ ಸೌಲಭ್ಯ, ವೈರ್‍ಲೆಸ್ ಅಂತರ್ಜಾಲ ಸೌಲಭ್ಯ ಮುಂತಾದ ವಿದ್ಯುನ್ಮಾನ ಮಾಧ್ಯಮಗಳಿರುವಾಗ ಮಾಹಿತಿ ಮೂಲಗಳಿಗೇನೂ ಕೊರತೆಯಿಲ್ಲ ಎನ್ನಬಹುದು. ಆದರೆ ಪುಸ್ತಕ ರೂಪದಲ್ಲಿ, ಅದರಲ್ಲೂ ವಿಶೇಷವಾಗಿ ಕನ್ನಡದಲ್ಲಿ ಇಂಥ ಸೌಲಭ್ಯಗಳ ಕೊರತೆ ನಮ್ಮನ್ನು ಕಾಡುತ್ತದೆ. ಗ್ರಾಮೀಣ ಪ್ರದೇಶಗಳ ವಿದ್ಯಾರ್ಥಿಗಳು, ಶಿಕ್ಷಕರು, ಪೆÇೀಷಕರಿಗೆ ವೈಜ್ಞಾನಿಕ ತಿಳಿವಳಿಕೆಗಾಗಿ ಸರಳವಾದ ಭಾಷೆಯಲ್ಲಿ, ಆಕರ್ಷಕ ನಿರೂಪಣೆಯಲ್ಲಿ ಚಿತ್ರಸಹಿತ ವಿವರಣೆಯೊಂದಿಗಿನ ಕನ್ನಡದ ಪುಸ್ತಕಗಳ ಲಭ್ಯತೆ ಇಂದಿನ ತೀರಾ ತುರ್ತಾದ ಅಗತ್ಯವಾಗಿದೆ ಎನ್ನುವುದು ನಿರ್ವಿವಾದವಾದ ಸಂಗತಿ.
ಅಂತಹ ಒಂದು ಜ್ಞಾನ ಮೂಲದ ಅಗತ್ಯವನ್ನು ಪೂರೈಸುವ ದಾರಿಯಲ್ಲಿ ಇತ್ತೀಚೆಗೆ ಪ್ರಕಟವಾದ ಪುಸ್ತಕ “ವಿಜ್ಞಾನ ವಿಸ್ಮಯ” ಎಳೆಯರ ಹೃನ್ಮನಗಳನರಳಿಸುವ ನಿಟ್ಟಿನಲ್ಲಿ ಸಶಕ್ತವಾಗಿ ನಿಲ್ಲುತ್ತದೆ ಎನ್ನಬಹುದು. ಶೀರ್ಷಿಕೆಯಂತೆಯೇ ವಿಸ್ಮಯಕರವಾದ ಅಂಶವೆಂದರೆ ಈ ಪುಸ್ತಕವನ್ನು ಬರೆದವರು ಬಿ.ಇ ಮತ್ತು ಎಂ.ಟೆಕ್ ವಿದ್ಯಾಭ್ಯಾಸ ಮಾಡುತ್ತಿರುವ ಮಂಗಳೂರಿನ ದೀಪ್ತಿ ಎಸ್. ರಾವ್ ಮತ್ತು ಸ್ವಾತಿ ಎಸ್. ರಾವ್ ಸಹೋದರಿಯರು. ತಮ್ಮ ರಜಾ ದಿನಗಳ ಅವಧಿಯಲ್ಲಿ ಇಂಗ್ಲಿಷ್‍ನಲ್ಲಿ ಲಭ್ಯವಿರುವ ವಿಜ್ಞಾನ ಪುಸ್ತಕಗಳು ಕನ್ನಡದಲ್ಲಿ ದೊರೆಯುತ್ತಿಲ್ಲ ಎಂಬುದನ್ನು ಮನಗಂಡು, ಆ ಕೊರತೆಯ ನಿವಾರಣೆಗಾಗಿ ಮಾಡಿದ ಜಂಟಿ ಯತ್ನದ ಫಲವೇ ಆ ಪುಸ್ತಕ. ಐದರಿಂದ ಹತ್ತನೆಯ ತರಗತಿಯವರೆಗಿನ ವಿದ್ಯಾರ್ಥಿಗಳು ಜ್ಞಾನಾರ್ಜನೆಗಾಗಿ ಅವಲಂಬಿಸಬಹುದಾದ ಈ ಪುಸ್ತಕ ಮಕ್ಕಳ ಸಾಹಿತ್ಯ ಕ್ಷೇತ್ರಕ್ಕೊಂದು ಮೌಲಿಕ ಕೊಡುಗೆ.
ಈ ಪುಸ್ತಕದಲ್ಲಿ ಅರವತ್ತು ವಿಜ್ಞಾನ ಸಂಬಂಧಿ ಪ್ರಶ್ನೆಗಳನ್ನು ಒಂದೊಂದು ಪುಟದಲ್ಲಿ ಚಿತ್ರಸಮೇತ ವಿವರಿಸಲಾಗಿದೆ. ಉತ್ತರಿಸುವಾಗ ಈ ಸಹೋದರಿಯರ ನಿರೂಪಣಾ ಶೈಲಿಯಂತೂ ಮನಮೋಹಕವೆನ್ನಿಸುವಷ್ಟು ಸರಳ, ಸುಂದರವಾಗಿದೆ. ವಿಜ್ಞಾನ ವಿಷಯಗಳನ್ನು ಕನ್ನಡದಲ್ಲಿ ವಿವರಿಸುವಾಗ ಅಭಿವ್ಯಕ್ತಿಯ ತೊಡಕು ಎಲ್ಲಿಯೂ ಕಂಡು ಬರುವುದಿಲ್ಲ. ಕೆಲವೆಡೆ ವಿಜ್ಞಾನದ ಕನ್ನಡ ಬಳಕೆಯ ಇಂಗ್ಲಿಷ್ ರೂಪವನ್ನು ಆವರಣ ಚಿಹ್ನೆಯಲ್ಲಿ ಕೊಡುತ್ತಾರೆ. ಉದಾಹರಣೆಗೆ ಕವಾಟು ಬೆಣೆ((valve Position), ಅನುರಣಕ(Resonator), ವಾಯುಸ್ತರಗೋಳ(Strato sphere) ಹೀಗೆ. ಇನ್ನು ಹಲವೆಡೆ ವಿಜ್ಞಾನದ ಇಂಗ್ಲಿಷ್ ಪದಗಳನ್ನು ಹಾಗೆಯೇ ಕನ್ನಡದಲ್ಲಿ ಬಳಸುತ್ತಾರೆ. ಉದಾಹರಣೆಗೆ ಡೆಸಿಬೆಲ್ಸ್, ಸರ್ಫೆಂಕ್ಟೆಂಟ್, ಫೆಬ್ರಿನೋಜೆನ್-ಹೀಗೆ. ಸಾಂದರ್ಭಿಕ ವಿವರಣೆಯೇ ಅವುಗಳನ್ನು ಅರ್ಥೈಸುತ್ತದೆ. ಪ್ರತಿ ಪುಟದ ಪ್ರಾರಂಭದಲ್ಲಿನ ಕನ್ನಡ ಪ್ರಶ್ನೆಗಳ ಕೆಳಗೆ ಆವರಣದಲ್ಲಿ ಇಂಗ್ಲಿಷ್‍ನಲ್ಲಿಯೂ ಕೇಳಲಾಗಿದೆ. ಇಲ್ಲಿ ವಿವರಿಸಲಾಗಿರುವ ಕೆಲವು ಪ್ರಶ್ನೆಗಳ ಉದಾಹರಣೆಗಳೆಂದರೆ ‘ರೈಲಿನ ಸರಪಳಿ ಎಳೆದಾಗ ರೈಲು ನಿಲ್ಲುವುದೇಕೆ? ಹೇಗೆ?, ‘ಲೇಸರ್ ಕಿರಣಗಳು ಎಂದರೇನು?, ಕಂಪ್ಯೂಟರ್ ವೈರಸ್ ಗಳೆಂದರೇನು? ಅನೃತಶೋಧಕ ಎಂದರೇನು? ಇತ್ಯಾದಿ. ಇವು ಭೌತ, ರಸಾಯನ, ಜೀವಶಾಸ್ತ್ರ, ಪರಿಸರ, ತಂತ್ರಜ್ಞಾನ, ತಂತ್ರಾಂಶ ಹೀಗೆ ವಿಜ್ಞಾನದ ವಿವಿಧ ಮೂಲಗಳಿಗೆ ಸಂಬಂಧಿಸಿವೆ.
ಆಪ್ತವೆನ್ನಿಸುವ ಸರಳ ಸುಂದರ ಶೈಲಿಯಲ್ಲಿ, ಸ್ವಾರಸ್ಯಕರ ಸನ್ನಿವೇಶಗಳನ್ನು ಸೃಷ್ಟಿಸಿ, ಲಘು ಹಾಸ್ಯವನ್ನು ಬಳಸಿ ಸುಲಲಿತವಾಗಿ ಸಹೋದರಿ ಲೇಖಕಿಯರು ವಿಜ್ಞಾನ ವಿಷಯಗಳನ್ನು ನಿರೂಪಿಸಿದ್ದಾರೆ. ಇಂಜಿನಿಯರಿಂಗ್ ವಿಧ್ಯಾರ್ಥಿಗಳಿಗೆ ಇಂತಹ ಕನ್ನಡ ಭಾಷೆಯ ಮೇಲಿನ ಹಿಡಿತ ಹೇಗೆ ಸಾಧ್ಯ ಎಂದು ಓದುಗರಿಗೆ ಅನ್ನಿಸುವುದು ಸಹಜ. ಈ ಲೇಖಕಿಯರ ತಂದೆ ಚ.ನ. ಶಂಕರರಾವ್ ಖ್ಯಾತ ಸಮಾಜಶಾಸ್ತ್ರ ಲೇಖಕರು, ತಾಯಿ ಡಾ||ಸರಸ್ವತಿ ಕಾಲೇಜಿನ ಭೌತಶಾಸ್ತ್ರ ವಿಭಾಗದ ಮುಖ್ಯಸ್ಥೆ ಹಾಗೂ ಅವರೂ ಕೂಡ ಕನ್ನಡದಲ್ಲಿ ಒಂದು ವಿಜ್ಞಾನ ಪುಸ್ತಕ ಬರೆದವರು. ಪ್ರಸಿದ್ಧ ಲೇಖಕಿ ಪಾರ್ವತಿ ಜಿ. ಐತಾಳ್ ಲೇಖಕಿಯರ ಸಮೀಪ ಬಂಧು. ಮುಖ್ಯವಾಗಿ ಮಾಧ್ಯಮಿಕ ಶಾಲಾ ಹಂತದವರೆಗೆ ಇವರು ಕನ್ನಡ ಮಾಧ್ಯಮದಲ್ಲಿ ಓದಿದ್ದಾರೆ. ಹೀಗೆ ಕೌಟುಂಬಿಕ ವಾತಾವರಣ ಇವರ ಭಾಷಾ ಪ್ರೌಢಿಮೆಗೆ ಕೊಡುಗೆ ನೀಡಿದೆ. ತಾವು ಇಲ್ಲಿನ ಪ್ರಶ್ನೋತ್ತರಗಳಿಗಾಗಿ ಪರಿಶೀಲಿಸಿದ ಇಂಗ್ಲಿಷ್ ಪುಸ್ತಕಗಳ ಕುರಿತು ‘ನಮ್ಮ ಮಾತು’ ವಿಭಾಗದಲ್ಲಿ ಪ್ರಸ್ತಾಪಿಸುತ್ತಾರೆ. ಈ ಪುಸ್ತಕದ ಪ್ರಕಾಶಕರು ಜೈ ಭಾರತ್ ಸರ್ವೀಸಸ್, ಮಂಗಳೂರು. 60 ಪುಟಗಳ, ಪ್ರತೀ ಪುಟಗಳಲ್ಲೂ ಚಿತ್ರಗಳಿರುವ ಈ ಪುಸ್ತಕದ ಬೆಲೆ ರೂ 50/-.
ಇಂದು ಕನ್ನಡದ ಸ್ಥಿತಿ ಗತಿಯ ಕುರಿತು ಅವಲೋಕಿಸುವಾಗ ಶಿಕ್ಷಣ ಕ್ಷೇತ್ರದಲ್ಲಿ ವಿಜ್ಞಾನ ವಿಷಯವನ್ನು ಕನ್ನಡದಲ್ಲಿ ಬೋಧಿಸುವ ಸ್ಥಿತಿ ನಿರ್ಮಾಣವಾಗಬೇಕು ಎಂದು ಪ್ರತಿಪಾದಿಸುತ್ತೇವೆ. ಆದರೆ ತಮಿಳುನಾಡಿನಲ್ಲಿ ವೃತ್ತಿಪರ ಶಿಕ್ಷಣ ಪರೀಕ್ಷೆಗಳಲ್ಲಿ ವಿದ್ಯಾರ್ಥಿಗಳು ಇಂಗ್ಲಿಷ್ ಮತ್ತು ತಮಿಳು ಎರಡನ್ನೂ ಬಳಸಿ ಉತ್ತರಿಸಿದ್ದರೂ ಕೂಡ ಅವರ ತಾಂತ್ರಿಕ ವಿಷಯ ಜ್ಞಾನವನ್ನು ಮಾತ್ರ ಪರಿಗಣಿಸಿ ಅಂಕಗಳನ್ನು ನೀಡುತ್ತಾರೆ. ಉತ್ತರ ಭಾರತದಲ್ಲಿ ರಾಷ್ಟ್ರೀಯ ಸಮ್ಮೇಳನಗಳಲ್ಲಿ ವೈಜ್ಞಾನಿಕ ಪ್ರಬಂಧಗಳನ್ನು ಮಂಡಿಸುವಾಗ ಇಂಗ್ಲಿಷ್‍ನೊಂದಿಗೆ ಹಿಂದಿಯನ್ನು ಧಾರಾಳವಾಗಿ ಬಳಸುತ್ತಾರೆ. ಅವರಿಗೆ ವಿಷಯವನ್ನು ಚೆನ್ನಾಗಿ ವಿವರಿಸುವುದಷ್ಟೇ ಮುಖ್ಯ. ಮೊನ್ನೆ ಗಣರಾಜ್ಯೋತ್ಸವದಲ್ಲಿ ಪದ್ಮಭೂಷಣ ಪ್ರಶಸ್ತಿ ಪುರಸ್ಕೃತರಾದ ಬಾಹ್ಯಾಕಾಶ ವಿಜ್ಞಾನಿ ಬಿ.ಎನ್. ಸುರೇಶ್ ಮಲೆನಾಡಿನ ಕೊಪ್ಪದವರು ಹಾಗೂ ಪ್ರೌಢಶಾಲಾ ಹಂತದವರೆಗೆ ಕನ್ನಡ ಮಾಧ್ಯಮದಲ್ಲಿ ಓದಿದವರು. ಶಿವರಾಮ ಕಾರಂತರು ಮಕ್ಕಳಿಗಾಗಿ ಬಾಲವಿಜ್ಞಾನ ಸರಣಿ ಸಂಚಿಕೆಗಳನ್ನು ರೂಪಿಸಿದರು. ವಿಶ್ವಾದಾದ್ಯಂತ 130 ಪಿ.ಹೆಚ್.ಡಿ ಮಾಡಿರುವ, ಲಂಡನ್ ರಾಯಲ್ ಸೊಸೈಟಿ ಸದಸ್ಯತ್ವ ಮತ್ತು ಹಲವಾರು ದೇಶಗಳ ಪ್ರತಿಷ್ಠಿತ ವಿಜ್ಞಾನ ಸಂಸ್ಥೆಗಳ ಸದಸ್ಯತ್ವ ಹೊಂದಿರುವ ಪ್ರೊ.ಸಿ.ಎನ್.ಆರ್. ರಾವ್‍ರವರು ಅದ್ಭುತವಾಗಿ ವಿಜ್ಞಾನವನ್ನು ಕನ್ನಡದಲ್ಲಿ ಬೋಧಿಸಬಲ್ಲವರು ಮತ್ತು ಮಾತೃಭಾಷಾ ಶಿಕ್ಷಣ ಮಾಧ್ಯಮವನ್ನು ಬೆಂಬಲಿಸುವವರು. ಆದರೆ ನಮ್ಮ ಜಡ್ಡುಗಟ್ಟಿದ ಶಿಕ್ಷಣ ವ್ಯವಸ್ಥೆಗೆ ಇಂತಹ ಅಂಶಗಳು ಪರಿಣಾಮ ಬೀರುತ್ತಿಲ್ಲ. ಇಂತಹ ಸಂದರ್ಭದಲ್ಲಿ ಸ್ವಾತಿ ಎಸ್. ರಾವ್ ಮತ್ತು ದೀಪ್ತಿ ಎಸ್. ರಾವ್ ಇವರ ‘ವಿಜ್ಞಾನ-ವಿಸ್ಮಯ’ ಪುಸ್ತಕ ಕನ್ನಡದಲ್ಲಿ ವಿಜ್ಞಾನ ವಿಷಯ ಪ್ರತಿಪಾದಿಸಿರುವುದು ಆಶಾದಾಯಕವಾದ ಸಂಗತಿ. ಈ ಸೋದರಿಯರು ತಮಗೆ ಇನ್ನೂ ಇಂತಹ ಪುಸ್ತಕಗಳನ್ನು ಹೊರತರುವ ವಿಚಾರವಿದೆ ಎಂದೂ ತಿಳಿಸಿದ್ದಾರೆ. ಅವರ ಆಶಯ ಈಡೇರಲಿ, ಬೆನ್ನುಡಿಯಲ್ಲಿ ಡಾ|| ಸರಸ್ವತಿ ಎಸ್.ರಾವ್ ಆಶಿಸಿದಂತೆ ‘ವೈಜ್ಞಾನಿಕತೆ ಹಾಗೂ ವೈಚಾರಿಕತೆಯ ಅಲೆಯ ಅನುರಣನ ಗ್ರಾಮಾಂತರ ಪ್ರದೇಶದ ಎಳೆಯರಿಗೂ ತಲುಪಲಿ’ ಎಂದು ಆಶಿಸೋಣ.
(ಈ ಲೇಖನವು ‘ಹೊಸದಿಗಂತ’ದಲ್ಲಿ ಪ್ರಕಟವಾಗಿದೆ)
- ಕೆ.ಆರ್.ಉಮಾದೇವಿ ಉರಾಳ್