ಜೀವ ಹೂವಾಗಿದೆ - ಭಾಗ ೩

ಜೀವ ಹೂವಾಗಿದೆ - ಭಾಗ ೩

ಬೆಂಗಳೂರಿನ ಆಸ್ಪತ್ರೆಗೆ ಬಂದ ಮರುದಿನ ಬೆಳಿಗ್ಗೆ ಸೃಜನ್ ಗೆ ಪ್ರಜ್ಞೆ ಬಂದಿತ್ತು. ಆದರೆ ವಿಪರೀತ ತಲೆ ನೋವು ಕಾಣಿಸಿಕೊಂಡಿದ್ದರಿಂದ ಮತ್ತೆ ಮತ್ತು ಬರುವ ಇಂಜೆಕ್ಷನ್ ಕೊಟ್ಟು ಮಲಗಿಸಿದ್ದರು. ಸಂಜೆಯ ವೇಳೆಗೆ ಎಚ್ಚರಗೊಂಡ ಸೃಜನ್ ಗೆ ತಾನಿರುವುದು ಆಸ್ಪತ್ರೆಯಲ್ಲಿ ಎಂದು ಅರಿವಾಗುವುದಕ್ಕೆ ಸ್ವಲ್ಪ ಸಮಯ ತೆಗೆದುಕೊಂಡಿತು. ನಂತರ ನರ್ಸ್ ಆಚೆ ಬಂದು ಸೃಜನ್ ತಂದೆ ತಾಯಿಯನ್ನು ಒಳಗೆ ಕರೆದೊಯ್ದಳು. ಮೂರು ದಿನಗಳಿಂದ ಸತತವಾಗಿ ಅತ್ತೂ ಅತ್ತೂ ಸೃಜನ್ ನ ತಾಯಿಯ ಕಣ್ಣುಗಳು ಇಳಿದು ಹೋಗಿದ್ದವು.

ಒಳಗೆ ಹೋಗುತ್ತಲೇ ಅವನ ಎದುರುಗಡೆ ಅಳಬಾರದೆಂದು ಸೃಜನ್ ತಂದೆ ಮಡದಿಗೆ ತಿಳಿಸಿದ್ದರಿಂದ ಅಳು ಬರುತ್ತಿದ್ದರೂ ಅದನ್ನು ತಡೆದುಕೊಂಡು ಹಾಸಿಗೆ ಪಕ್ಕದಲ್ಲಿ ನಿಂತಿದ್ದರು. ಇಬ್ಬರಿಗೂ ಸೃಜನ್ ನ ಮೊದಲ ಪ್ರಶ್ನೆ ಏನಾಗಿರುತ್ತದೋ ಎಂಬ ಭಯ ಕಾಡುತ್ತಿತ್ತು. ಅದಕ್ಕೆ ಹೇಗೆ ಉತ್ತರಿಸುವುದೋ ಎಂಬ ಗೊಂದಲ ಕಾಡುತ್ತಿತ್ತು.

ಅಪ್ಪ....ನಾನೇಕೆ ಆಸ್ಪತ್ರೆಯಲ್ಲಿದ್ದೇನೆ? ನನಗೇನಾಗಿದೆ? ಎಷ್ಟು ದಿನದಿಂದ ನಾನು ಆಸ್ಪತ್ರೆಯಲ್ಲಿದ್ದೇನೆ?

ಇದೆ ಪ್ರಶ್ನೆಗಳನ್ನು ಎದುರು ನೋಡಿದ್ದ ಸೃಜನ್ ನ ತಂದೆ ಸಮಾಧಾನವಾಗಿ...ಸೃಜನ್ ಮೊನ್ನೆ ನೀನು ಆಫೀಸಿನಿಂದ ಬರುವಾಗ ನಿನಗೆ ಆಕ್ಸಿಡೆಂಟ್ ಆಗಿ ನಿನ್ನನ್ನು ಆಸ್ಪತ್ರೆಗೆ ಸೇರಿಸಿದೆವು. ಎರಡು ದಿನದಿಂದ ನಿನಗೆ ಪ್ರಜ್ಞೆ ಇರಲಿಲ್ಲ. ಇಂದು ನಿನಗೆ ಪ್ರಜ್ಞೆ ಬಂದಿದೆ. ತಲೆಗೆ ಸ್ವಲ್ಪ ಪೆಟ್ಟು ಬಿದ್ದಿದೆ ಅಷ್ಟೇ. ಇನ್ನೊಂದೆರೆಡು ದಿನ ಆದ ಮೇಲೆ ಮನೆಗೆ ಹೋಗಬಹುದು. ಆದರೆ ಒಂದು ತಿಂಗಳು ನಿನಗೆ ಬೆಡ್ ರೆಸ್ಟ್ ಬೇಕೆಂದು ಡಾಕ್ಟರ್ ಹೇಳಿದ್ದಾರೆ. ಅದಾದ ಮೇಲೆ ನೀನು ಕೆಲಸಕ್ಕೆ ಹೋಗಬಹುದು ಎಂದು ಹೇಳಿದ್ದಾರೆ.

ಅಪ್ಪ...ಒಂದು ತಿಂಗಳ? ಅಂಥದ್ದು ನನಗೇನಾಗಿದೆ? ನಿಜ ಹೇಳಿ....

ಸೃಜನ್ ...ನಿಜಾನಪ್ಪ ನಿನಗೆ ಏನೂ ಆಗಿಲ್ಲ...ತಲೆಗೆ ಸ್ವಲ್ಪ ಪೆಟ್ಟು ಬಿದ್ದಿರುವುದರಿಂದ ಆಚೆ ತಿರುಗಿದರೆ ಇನ್ಫೆಕ್ಷನ್ ಆಗುವುದರಿಂದ ಒಂದು ತಿಂಗಳ ರೆಸ್ಟ್ ಬೇಕು ಅಷ್ಟೇ ಹೊರತು ನಿನಗಿನ್ನೇನು ಆಗಿಲ್ಲ ಕಣೋ...ಎಂದು ಹೇಳುತ್ತಿದ್ದಂತೆ ದುಃಖ ಉಮ್ಮಳಿಸಿ ಬಂದು ಸರಿ ಕಣೋ ನಾನು ಆಚೆ ಹೋಗಿ ಬರುತ್ತೇನೆ ಎಂದು ಆಚೆ ಬಂದು ಕಣ್ಣೀರು ಹಾಕಲು ಶುರುಮಾಡಿದರು.ಹಿಂದೆಯೇ ಬಂದ ಅವರ ಮಡದಿ ಸಮಾಧಾನ ಮಾಡಿ ರೀ...ಅವನೆದುರಿಗೆ ನೀವು ಹೀಗೆ ದುಃಖಿಸಿದರೆ ಹೇಗೆ?

ತಕ್ಷಣ ಏನೋ ಹೊಳೆದವರಂತೆ ಗಾಭರಿ ಆದರು ಸೃಜನ್ ತಂದೆ....ಲೇ...ನಾಡಿದ್ದು ಅವನನ್ನು ಮನೆಗೆ ಕರೆದುಕೊಂಡು ಹೋಗುತ್ತೇವೆ ಅಂತೇನೋ ಹೇಳಿದೆವು...ಆದರೆ ಆರು ತಿಂಗಳ ಹಿಂದೆಯಷ್ಟೇ ನಾವು ಮನೆ ಕಟ್ಟಿಸಿಕೊಂಡು ಬದಲಾಯಿಸಿದ್ದೇವೆ...ಈಗ ಅವನನ್ನು ಅಲ್ಲಿಗೆ ಕರೆದುಕೊಂಡು ಹೋದರೆ.....

ತಕ್ಷಣ ತಾವು ಮುಂಚೆ ಬಾಡಿಗೆ ಇದ್ದ ಮನೆಯ ಓನರ್ ಗೆ ಕರೆ ಮಾಡಿ ನಿಮ್ಮನ್ನು ಅರ್ಜೆಂಟಾಗಿ ಭೇಟಿ ಮಾಡಬೇಕು. ಈಗಲೇ ಮನೆಗೆ ಬರುತ್ತೇನೆ ಎಂದು ಅಲ್ಲಿಂದ ತಾವು ಮೊದಲಿದ್ದ ಮನೆಗೆ ಬಂದರು.

ತಾವು ಮುಂಚೆ ಬಾಡಿಗೆಗೆ ಇದ್ದ ಮನೆಯಲ್ಲಿ ಈಗ ಬೇರೆ ಯಾರೋ ಬಾಡಿಗೆದಾರರು ಬಂದಿದ್ದರು.

ಅವರನ್ನು ಕೂಡಿಸಿಕೊಂಡು ನಡೆದ ವಿಷಯವನ್ನೆಲ್ಲ ತಿಳಿಸಿ ಒಂದು ನಾಲ್ಕು ತಿಂಗಳ ಮಟ್ಟಿಗೆ ನೀವು ನಮ್ಮ ಮನೆಯಲ್ಲಿದ್ದರೆ ನಾವು ಇಲ್ಲಿರುತ್ತೇವೆ...

ಎಂದಿದ್ದಕ್ಕೆ ಅವರೂ ಉದಾರ ಮನಸ್ಸಿನಿಂದ  ಅದಕ್ಕೆ ಒಪ್ಪಿ ನಾವು ನಾಳೆಯೇ ಅಲ್ಲಿಗೆ ಬರುತ್ತೇವೆ. ನೀವು ಇಲ್ಲಿಗೆ ಬರಬಹುದು ಎಂದು ತಿಳಿಸಿದರು.

 
ಅವರ ಉದಾರ ಮನಸಿಗೆ ಸೃಜನ್ ತಂದೆಗೆ ಹೃದಯ ತುಂಬಿ ಬಂದು ಅವರಿಗೆ ಕೈಮುಗಿದು ಅಲ್ಲಿಂದ ತೆರಳಿ ಸೀದಾ ಸೃಜನ್ ಕೆಲಸ ಮಾಡುವ ಕಂಪನಿಗೆ ತೆರಳಿದರು. ಸೀದಾ ಹೋಗಿ ಸೃಜನ್ ಮ್ಯಾನೇಜರ್ ಅನ್ನು ಭೇಟಿ ಮಾಡಿ ನಡೆದ ವಿಷಯ ಎಲ್ಲವನ್ನೂ ತಿಳಿಸಿದರು.
 
ಸೃಜನ್ ಮದುವೆಯ ಲೀವ್ ಅಲ್ಲಿದ್ದರಿಂದ ಆಫೀಸಿನಲ್ಲಿ ಯಾರಿಗೂ ವಿಷಯ ತಿಳಿದಿರಲಿಲ್ಲ. ಅವರೆಲ್ಲ ಸೃಜನ್ ಮದುವೆಗೆಂದು ಬಂದು ಶುಭ ಕೋರಿ ಹೋಗಿದ್ದರು. ಈಗ ಈ ವಿಷಯ ಕೇಳಿ ಮ್ಯಾನೇಜರ್ ಗೆ ಶಾಕ್ ಆಯಿತು. ಏನು ನೀವು ಹೇಳುತ್ತಿರುವುದು? ಇಂದು ನಿಜಕ್ಕೂ ದೊಡ್ಡ ವಿಪರ್ಯಾಸವೇ ಸರಿ....
 
ನೋಡಿ ಈ ಒಂದು ವರ್ಷದಲ್ಲಿ ಸಾಕಷ್ಟು ಬದಲಾವಣೆಗಳು ಆಗಿವೆ. ಸೃಜನ್ ವರ್ಷದ ಹಿಂದೆ ಕೆಲಸ ಮಾಡುತ್ತಿದ್ದ ಪ್ರಾಜೆಕ್ಟ್ ಈಗ ಅಸ್ತಿತ್ವದಲ್ಲಿಲ್ಲ. ಆರು ತಿಂಗಳ ಹಿಂದಷ್ಟೇ ಅವನ ಪ್ರಾಜೆಕ್ಟ್ ಕ್ಲೋಸ್ ಆಗಿ ಹೊಸ ಪ್ರಾಜೆಕ್ಟ್ ಶುರು ಆಗಿತ್ತು. ಈಗ ನೀವು ಹೇಳುವ ಪ್ರಕಾರ ಅವನಿಗೆ ಎಲ್ಲವೂ ವರ್ಷದ ಹಿಂದೆ ಹೇಗಿತ್ತೋ ಹಾಗೆಯೇ ಇರಬೇಕು ಎನ್ನುತ್ತಿದ್ದೀರಾ....ಒಂದು ದೀರ್ಘ ನಿಟ್ಟುಸಿರು ಬಿಟ್ಟು...ಹ್ಮ್ಮ್ಮ್...ಈಗ ಏನು ಮಾಡುವುದು??...ಹೇಗಿದ್ದರೂ ಸೃಜನ್ ಮತ್ತೆ ಕೆಲಸಕ್ಕೆ ಬರಲು ಒಂದು ತಿಂಗಳು ಆಗುವದು ಎಂದು ಹೇಳಿದಿರಿ ಅಲ್ಲವೇ?
 
ಹಾಗಿದ್ದಲ್ಲಿ ಅಷ್ಟರೊಳಗೆ ನಾನು ಏನಾದರೂ ವ್ಯವಸ್ಥೆ ಮಾಡಿರುತ್ತೇನೆ ಬಿಡಿ. ನೀವೇನೂ ಯೋಚನೆ ಮಾಡಬೇಡಿ....ಸೃಜನ್ ಅಂತ ಒಳ್ಳೆಯ ಹುಡುಗನಿಗೆ ನಾವು ಅಷ್ಟಾದರೂ ಸಹಾಯ ಮಾಡದಿದ್ದರೆ ಹೇಗೆ ಹೇಳಿ...ನೀವು ಆರಾಮಾಗಿ ಹೋಗಿ ಬನ್ನಿ....ನೀವು ಒಂದು ಕೆಲಸ ಮಾಡಿ ಇನ್ನೊಂದು ಹತ್ತು ದಿನ ಬಿಟ್ಟು ಮತ್ತೆ ಬನ್ನಿ...ಅಷ್ಟರೊಳಗೆ ನಾನು ಏನು ಮಾಡಬಹುದೆಂದು ಆಲೋಚಿಸಿರುತ್ತೇನೆ....
 
ಅವರಿಗೆ ಧನ್ಯವಾದ ತಿಳಿಸಿ ಸೀದಾ ಆಸ್ಪತ್ರೆಯ ಬಳಿ ತೆರಳಿದರು. ಸೃಜನ್ ಆಗಷ್ಟೇ ಗಂಜಿ ಕುಡಿದು ಮಲಗಿದ್ದ. ಸೃಜನ್ ತಾಯಿ ಅಲ್ಲೇ ಅವನ ಹಾಸಿಗೆ ಪಕ್ಕದಲ್ಲಿ ಕುರ್ಚಿಯ ಮೇಲೆ ಕುಳಿತು ಹಾಗೆಯೇ ಅಲ್ಲೇ ಮಲಗಿದ್ದರು. ಸೃಜನ್ ತಂದೆ ಒಳಬರುವ ವೇಳೆಗೆ ಸರಿಯಾಗಿ ಸಿಂಧು ಕರೆ ಮಾಡಿದ್ದಳು.
 
ಮತ್ತೆ ಆಚೆ ಬಂದು ಹೇಳಮ್ಮ ಸಿಂಧು ಹೇಗಿದ್ದೀಯ?
 
ಮಾವ ಹೇಗಿರಲು ಸಾಧ್ಯ ಮಾವ....ನನಗಂತೂ ಈ ನರಕಯಾತನೆ ಅನುಭವಿಸಲು ಸಾಧ್ಯವಿಲ್ಲ..ಅಲ್ಲಿ ಸೃಜನ್ ದೈಹಿಕವಾಗಿ ಹಿಂಸೆ ಅನುಭವಿಸುತ್ತಿದ್ದಾನೆ...ನಾನಿಲ್ಲಿ ಮಾನಸಿಕವಾಗಿ ಹಿಂಸೆ ಅನುಭವಿಸುತ್ತಿದ್ದೇನೆ...ಇನ್ನೂ ಎಷ್ಟು ದಿನ ಮಾವ ನನಗೆ ಈ ಶಿಕ್ಷೆ?
 
ಸಿಂಧು ನಿನ್ನ ಸಂಕಟ ನನಗೆ ಅರ್ಥ ಆಗುತ್ತಮ್ಮ...ಆದರೆ ಏನು ಮಾಡುವುದು...ಅವನನ್ನು ಉಳಿಸಿಕೊಳ್ಳಲು ನಮಗೆ ಬೇರೆ ದಾರಿಯೇ ಇಲ್ಲ....ಅವನು ಪ್ರಸ್ತುತ ಪರಿಸ್ಥಿತಿಗೆ ಬರುವವರೆಗೂ ನಿನಗೆ ಈ ಕಷ್ಟ ತಪ್ಪಿದ್ದಲ್ಲಮ್ಮ.
 
ಈಗ ಹೇಗಿದಾನೆ ಸೃಜನ್? ಅವನಿಗೆ ಎಚ್ಚರ ಬಂತ? ಅವನು ಮಾತನಾಡಿದನ?
 
ಹೌದಮ್ಮ? ಅವನಿಗೆ ಎಚ್ಚರ ಬಂದಿದೆ. ಅವನಿಗೆ ಆಫೀಸಿನಿಂದ ಬರುವಾಗ ಆಕ್ಸಿಡೆಂಟ್ ಆಗಿ ಇಲ್ಲಿ ಸೇರಿಸಿದ್ದೇವೆ ಎಂದು ತಿಳಿಸಿದ್ದೀವಿ. ಅವನು ಇನ್ನೂ ಜಾಸ್ತಿ ಮಾತನಾಡುತ್ತಿಲ್ಲ. ಆ ಆಂಟಿ ಬಯಾಟಿಕ್ಸ್ ಔಷಧಿಗಳ ಮತ್ತು ಇನ್ನೂ ಅವನ ದೇಹದಲ್ಲಿ ಹಾಗೆ ಇರುವುದರಿಂದ...ಅವನಿನ್ನೂ ಮತ್ತಿನಲ್ಲೇ ಇದ್ದಾನೆ. ಒಮ್ಮೆ ಮನೆಗೆ ಹೋದಮೇಲೆ ಸರಿಹೋಗುತ್ತಾನೆ ಎಂದು ಡಾಕ್ಟರ್ ಹೇಳಿದ್ದಾರೆ. ನಾಡಿದ್ದು ಡಿಸ್ಚಾರ್ಜ್ ಎಂದು ಹೇಳಿದ್ದಾರೆ. ನಿನಗೆ ಇನ್ನೊಂದು ವಿಷಯ ಹೇಳಬೇಕಮ್ಮ.
 
ನಾವು ಈಗ ಇಲ್ಲಿಂದ ಡಿಸ್ಚಾರ್ಜ್ ಆದಮೇಲೆ ನಾವು ಮುಂಚೆ ಇದ್ದ ಬಾಡಿಗೆ ಮನೆಗೆ ಅವನನ್ನು ಕರೆದುಕೊಂಡು ಹೋಗುತ್ತಿದ್ದೇವೆ. ಎಲ್ಲ ಸರಿಹೋಗುವವರೆಗೂ ಅಲ್ಲೇ ಇರುತ್ತೇವೆ. ಆಮೇಲೆ ಅವನ ಆಫೀಸಿನಲ್ಲೂ ಹೋಗಿ ಮಾತನಾಡಿ ಬಂದಿದ್ದೇನೆ. ಅವನಿಗೆ ವರ್ಷದ ಹಿಂದೆ ಯಾವ ವಾತಾವರಣ ಇತ್ತೋ ಹಾಗೆಯೇ ಮಾಡಿಕೊಡುತ್ತೇವೆ ಎಂದು ತಿಳಿಸಿದ್ದಾರೆ. ನೀನೇನೂ ಚಿಂತೆ ಮಾಡಬೇಡಮ್ಮ. ದೇವರು ಇದ್ದಾನೆ ಎಲ್ಲ ಸುಸೂತ್ರವಾಗಿ ನಡೆಯುತ್ತೆ.
 
ಏನು ದೇವರೋ ಏನೋ ಮಾವ....ನನಗೆ ಹೀಗಾಗಬೇಕ? ಮಾವ ನನಗೆ ಒಮ್ಮೆ ಅವರನ್ನು ನೋಡಬೇಕು ಎನಿಸುತ್ತಿದೆ. ಏನು ಮಾಡಲಿ.
 

ನೋಡಮ್ಮ ಸಿಂಧು ನೀನು ಇಲ್ಲಿಗೆ ಬರಬಹುದು,,,ಆದರೆ ಅಪ್ಪಿತಪ್ಪಿಯೂ ಅವನ ಮುಂದೆ ಅಳುವುದಾಗಲಿ...ದುಃಖಿಸುವುದಾಗಲಿ ಮಾಡಬಾರದು. ನೀನು ನಿಮ್ಮ ತಂದೆಯ ಜೊತೆ ಬಾ. ನಾನು ನನ್ನ ಸ್ನೇಹಿತ ಅವರ ಮಗಳು ಎಂದು ಸುಳ್ಳು ಹೇಳುತ್ತೇನೆ. ಏನು ವಿಧಿಯೋ ಏನೋ....ನಮ್ಮವರ ಎದುರೇ ನಾವು ಸುಳ್ಳು ಹೇಳುವ ಹಾಗಾಗಿದೆ...

Rating
No votes yet