ಜೀವ ಹೂವಾಗಿದೆ - ಭಾಗ ೪

ಜೀವ ಹೂವಾಗಿದೆ - ಭಾಗ ೪

ಸಿಂಧು ಕೊಡೈನಿಂದ ಬಂದಾಗಿನಿಂದ ಸರಿಯಾಗಿ ಊಟ ಸಹ ಮಾಡಿರಲಿಲ್ಲ. ಸೃಜನ್ ಕುಟುಂಬದವರ ಪರಿಸ್ಥಿತಿಗೂ ಸಿಂಧು ಮನೆಯ ಪರಿಸ್ಥಿತಿಗೂ ಹೆಚ್ಚು ವ್ಯತ್ಯಾಸ ಏನಿರಲಿಲ್ಲ. ಎರಡೂ ಕುಟುಂಬದವರೂ ದಿಡೀರನೆ ಬಂದೊದಗಿದ ಆಘಾತದಿಂದ ಕಂಗಾಲಾಗಿ ಹೋಗಿದ್ದರು. ಸಿಂಧು ಅಂತೂ ಸಂಪೂರ್ಣ ಕುಗ್ಗಿ ಹೋಗಿದ್ದಳು. ಕೊಡೈನಿಂದ ಬಂದಾಗಿನಿಂದ ಸೃಜನ್ ನನ್ನು ನೋಡದೆ ಮತ್ತಷ್ಟು ಕುಗ್ಗಿದ್ದಳು. ಈಗ ಅವರ ಮಾತಿನಿಂದ ಸ್ವಲ್ಪ ಚೈತನ್ಯ ಬಂದಿತ್ತು. ಕೂಡಲೇ ಅವಳ ತಂದೆಯನ್ನು ಜೊತೆ ಮಾಡಿಕೊಂಡು ಆಸ್ಪತ್ರೆ ಬಳಿ ಬಂದಳು.

ಆಸ್ಪತ್ರೆಯ ರಿಸೆಪ್ಶನ್ ನಲ್ಲಿ ಕುಳಿತಿದ್ದ ಸೃಜನ್ ತಾಯಿಯನ್ನು ಕಂಡು ದುಃಖ ಕಟ್ಟೆ ಒಡೆದು ಕಣ್ಣೀರಾಗಿ ಆಚೆ ಬಂದಿತ್ತು. ಸೃಜನ್ ತಾಯಿ ಅವಳನ್ನು ಸಮಾಧಾನ ಮಾಡಿ, ನೋಡಮ್ಮ ಸಿಂಧು ನಾನು ಈಗಷ್ಟೇ ಒಳಗಿನಿಂದ ಬಂದೆ. ಅವನು ಈಗಷ್ಟೇ ಎದ್ದು ತಿಂಡಿ ತಿಂದು ಕೂತಿದ್ದಾನೆ. ನಿಮ್ಮ ಮಾವ ಅವನಿಗೆ ತಿಳಿಸಿದ್ದಾರೆ..ಈಗ ಅವರ ಸ್ನೇಹಿತ ಬರುವುದಾಗಿ ಹೇಳಿದ್ದಾರೆ. ನೀನು ಒಳಗೆ ಹೋದರೆ ದಯವಿಟ್ಟು ಸಮಾಧಾನವಾಗಿ ಮಾತಾಡಿಸು ಆಯ್ತಾ. ಹೌದು ಅಂದ ಹಾಗೆ ಅವನು ಅವನ ಮೊಬೈಲ್ ಎಲ್ಲಿ ಎಂದು ಕೇಳುತ್ತಿದ್ದ. ಅದು ನಿನ್ನ ಬಳಿ ಇದೆಯಾ?

ಇಲ್ಲ ಅತ್ತೆ....ಬಹುಶಃ ಅವರು ಬಿದ್ದಾಗ ಅದು ಎಲ್ಲೋ ಬಿದ್ದು ಹೋಗಿರಬೇಕು...ಏಕಂತೆ ಈಗ ಅವರಿಗೆ ಮೊಬೈಲ್?
ಗೊತ್ತಿಲ್ಲಮ್ಮ ಯಾರಿಗೋ ಫೋನ್ ಮಾಡಬೇಕು ಎನ್ನುತ್ತಿದ್ದ...ಯಾರಿಗೆ ಎಂದು ಕೇಳಿದ್ದಕ್ಕೆ...ಯಾರೋ ಅವನ ಸ್ನೇಹಿತನಿಗೆ ಕರೆ ಮಾಡಬೇಕು ಎನ್ನುತ್ತಿದ್ದ. ನಂತರ ಆಕ್ಸಿಡೆಂಟ್ ನಲ್ಲಿ ಎಲ್ಲೋ ಕಳೆದು ಹೋಗಿರಬೇಕು ಎಂದು ಹೇಳಿದ ಮೇಲೆ ಸುಮ್ಮನಾದ. ಸರಿ ನೀವು ಒಳಗೆ ಹೋಗಿ ಬನ್ನಿ.

ಸಿಂಧುಗೆ ತಾನಿಡುತ್ತಿದ್ದ ಪ್ರತಿಯೊಂದು ಹೆಜ್ಜೆಯೂ ಭಾರವಾಗಿ, ಭೂಮಿಯೇ ಕುಸಿಯುತ್ತಿದೆಯೇನೋ ಎನ್ನಿಸುತ್ತಿತ್ತು. ತನ್ನ ತಂದೆಯ ತೋಳನ್ನು ಗಟ್ಟಿಯಾಗಿ ಹಿಡಿದುಕೊಂಡು ಒಳಗೆ ಹೋದಳು. ಸೃಜನ್ ಆರಾಮಾಗಿ ಕುಳಿತು ಏನನ್ನೋ ಯೋಚನೆ ಮಾಡುತ್ತಿದ್ದ. ಇವರಿಬ್ಬರೂ ಒಳಗೆ ಬಂದದ್ದನ್ನು ನೋಡಿ ಮೊದಲು ಸಿಂಧುವಿನ ತಂದೆಗೆ ನಮಸ್ಕಾರ ಮಾಡಿ ನಂತರ ಸಿಂಧುಗೆ ಹಾಯ್ ಎಂದು ಹೇಳಿದ. ಸಿಂಧುಗೆ ತಕ್ಷಣ ಸೃಜನ್ ಎದ್ದು ಬಂದು ನನ್ನನ್ನು ಅಪ್ಪಿಕೊಳ್ಳಬಾರದ ಎನಿಸಿತು...ಆದರೆ ಸೃಜನ್ ಮಾತ್ರ ಯಾರೋ ಅಪರಿಚಿತರ ಬಳಿ ಮಾತನಾಡುವ ಹಾಗೆ ಮಾತಾಡುತ್ತಿದ್ದ.

ಸಿಂಧುಗೆ ಆ ಪರಿಸ್ಥಿತಿಯಲ್ಲಿ ಈಗಲೇ ತನ್ನ ಎದೆ ಒಡೆದು ಸತ್ತುಹೋಗಬಾರದ ಎನಿಸಿತು. ಸಿಂಧುವಿನ ತಂದೆ ಸೃಜನ್ ಜೊತೆ ಮಾತನಾಡುತ್ತಿದ್ದರೆ...ಸಿಂಧುಗೆ ಹೆಚ್ಚು ಹೊತ್ತು ಅಲ್ಲಿ ನಿಲ್ಲಲು ಆಗದೆ ಆಚೆ ಬಂದು ಅವರ ಅತ್ತೆಯ ತೊಡೆಯ ಮೇಲೆ ತಲೆ ಇಟ್ಟು ಗಳಗಳನೆ ಅಳಲು ಶುರು ಮಾಡಿದಳು. ಅವಳ ಪರಿಸ್ಥಿತಿ ಅರ್ಥ ಮಾಡಿಕೊಂಡ ಸೃಜನ್ ತಾಯಿ ಅವಳ ತಲೆಯನ್ನು ನೇವರಿಸಿ ಸಮಾಧಾನ ಮಾಡಿಕೋಮ್ಮ ಎಂದು ಹೇಳಿದರು.

ಸ್ವಲ್ಪ ಹೊತ್ತಿನ ನಂತರ ಆಚೆ ಬಂದ ಸಿಂಧು ತಂದೆ ಮತ್ತು ಸೃಜನ್ ತಂದೆ ಇವರ ಬಳಿ ಬಂದು...ಡಾಕ್ಟರ್ ಬಂದಿದ್ದರು, ನಾಳೆ ಡಿಸ್ಚಾರ್ಜ್ ಮಾಡುತ್ತಾರಂತೆ. ವಾರಕ್ಕೊಮ್ಮೆ ಕರೆದುಕೊಂಡು ಬಂದು ಚೆಕ್ ಮಾಡಿಸಿಕೊಂಡು ಹೋಗಬೇಕಂತೆ. ಔಷಧಿಗಂತೂ ಚೆನ್ನಾಗಿ ರೆಸ್ಪಾಂಡ್ ಮಾಡಿದ್ದಾನೆ...ಇನ್ನು ನಮ್ಮಗಳ ಕೈಲಿದೆ ಎಂದು ಡಾಕ್ಟರ್ ಹೇಳಿದರು.

ನಾಳೆಯಿಂದ ನಾವು ಇಡುವ ಪ್ರತಿಯೊಂದು ಹೆಜ್ಜೆಯೂ ಅವನನ್ನು ಮನಸಿನಲ್ಲಿಟ್ಟುಕೊಂಡು ಮುಂದುವರಿಯಬೇಕು. ಎಲ್ಲಿಯೂ ಅವನಿಗೆ ಹೀಗೊಂದು ಘಟನೆ ನಡೆದಿದೆ ಎಂದೇ ಗೊತ್ತಾಗಬಾರದು.

ಸರಿ ನಾವಿನ್ನೂ ಹೊರಡುತ್ತೇವೆ. ನೀವು ಡಿಸ್ಚಾರ್ಜ್ ಮಾಡಿದ ಮೇಲೆ ಹೇಳಿ...ನಾವು ಮನೆಗೆ ಬರುತ್ತೇವೆ ಎಂದು ಸಿಂಧು ತಂದೆ ಹೊರಡಲು ಅನುವಾದರು. ಸಿಂಧು ಮಾತ್ರ ಅಪ್ಪ ನನಗೆ ಅವರನ್ನು ಬಿಟ್ಟು ಬರಲು ಆಗುತ್ತಿಲ್ಲ ಎಂದು ಮುಗ್ದ ಮಗುವಿನಂತೆ ಅಳುತ್ತಿದ್ದಳು. ಕೊನೆಗೆ ಹೇಗೋ ಸಮಾಧಾನ ಮಾಡಿ ಕರೆದುಕೊಂಡು ಹೋದರು.

ಮಾರನೆಯ ದಿನ ಸೃಜನ್ ನನ್ನು ಡಿಸ್ಚಾರ್ಜ್ ಮಾಡಿಸಿ ಹಳೆಯ ಮನೆಗೆ ಕರೆದುಕೊಂಡು ಬಂದರು. ಮನೆಗೆ ಬಂದ ಸೃಜನ್ ಗೆ ಒಂದು ಕ್ಷಣ ಏನೋ ವ್ಯತ್ಯಾಸವಾಗಿದೆ ಎಂಬಂತೆ ಮನೆಯನ್ನು ಸುತ್ತಲೂ ಅವಲೋಕಿಸಿ ಅಪ್ಪ...ಮನೆಗೆ ಪೇಂಟ್ ಯಾವಾಗ ಹೊಡೆಸಿದಿರಿ?

ಈ ಪ್ರಶ್ನೆಯನ್ನು ನಿರೀಕ್ಷಿಸಿರದ ಸೃಜನ್ ತಂದೆಗೆ ತಕ್ಷಣಕ್ಕೆ ಏನು ಹೇಳಬೇಕೋ ಗೊತ್ತಾಗದೆ ಅದೂ...ಇದೂ...ಎಂದು ಆಲೋಚಿಸುತ್ತಿದ್ದಾಗ...ಸೃಜನ್ ತಾಯಿ ಮಧ್ಯದಲಿ ಬಾಯಿ ಹಾಕಿ, ಇಲ್ಲಪ್ಪ ಸೃಜನ್ ಮೊನ್ನೆ ಮನೆಗೆ ಶಾಸ್ತ್ರಿಗಳು ಬಂದಿದ್ದರು. ಆವಾಗ ನಿನ್ನ ವಿಷಯ ತಿಳಿಸಿದ್ದಕ್ಕೆ ಮನೆಯಲ್ಲಿ ವಾಸ್ತು ಸಮಸ್ಯೆ ಇದೆ....ಆದಷ್ಟು ಬೇಗ ಮನೆ ಬದಲಾಯಿಸಬೇಕು ಎಂದಿದ್ದಾರೆ. ತಕ್ಷಣದ ಪರಿಹಾರವಾಗಿ ಮನೆಯ ಬಣ್ಣ ಬದಲಿಸಿ ಎಂದಿದ್ದರು. ಅದಕ್ಕೆ ನೀನು ಆಸ್ಪತ್ರೆಯಲ್ಲಿ ಇದ್ದಾಗ ಪೇಂಟ್ ಹೊಡೆಸಿದೆವು ಎಂದು ಒಂದು ನಿಟ್ಟುಸಿರು ಬಿಟ್ಟರು.

ಆದರೂ ಸೃಜನ್ ಮತ್ತೆ ಮತ್ತೆ ಮನೆಯನ್ನು ನೋಡುತ್ತಾ ಅಮ್ಮ ಆದರೂ ಏನೋ ಬದಲಾವಣೆ ಆಗಿದೆ ಎನಿಸುತ್ತಿದೆ...
ಏನೂ ಇಲ್ಲ ಸೃಜನ್ ಪೇಂಟ್ ಹೊಡೆಸಲು ಎಲ್ಲ ಸಾಮಾನುಗಳನು ಆಚೆ ಇಟ್ಟಿದ್ದೆವು...ಅದನ್ನು ಇನ್ನೂ ಸರಿಪಡಿಸಬೇಕು....ಈ ನಿನ್ನ ಆಸ್ಪತ್ರೆ ಗಲಾಟೆಯಲ್ಲಿ ಎಲ್ಲ ಎಲ್ಲೆಂದರಲ್ಲಿ ಬಿಟ್ಟಿದ್ದೇವೆ. ನಿಧಾನವಾಗಿ ಜೋಡಿಸಬೇಕು. ಅಲ್ಲ ಅಪ್ಪ ಇನ್ನು ಎಷ್ಟು ದಿವಸ ಈ ಬಾಡಿಗೆ ಮನೆಯಲ್ಲಿ ಇರಬೇಕು....ಬೇಗನೆ ಮನೆ ಶುರುಮಾಡಬಾರದ?

ಇಲ್ಲ ಸೃಜನ್ ನಾವು ಸೈಟ್ ಕೊಂಡಿದ್ದೇವಲ್ಲ ಅದನ್ನು ಮಾರಿ ಯಾವುದಾದರೂ ಕಟ್ಟಿರುವ ಮನೆಯನ್ನೇ ತೆಗೆದುಕೊಳ್ಳೋಣ ಎಂದು ಯೋಚಿಸುತ್ತಿದ್ದೇನೆ...ಸರಿ..ಅದೆಲ್ಲ ಆಮೇಲೆ ಮಾತಾಡೋಣ...ಈಗ ನೀನು ಮೊದಲು ರೆಸ್ಟ್ ತೆಗೆದುಕೋ...ಅದೆಲ್ಲ ಆಮೇಲೆ ನೋಡೋಣ. ಲೇ ಮೊದಲು ಅಡಿಗೆ ಮಾಡಿ ಅವನಿಗೆ ಊಟ ಹಾಕು. ನಾನು ಆಮೇಲೆ ಮಾಡುತ್ತೇನೆ.

ಸೃಜನ್ ತನ್ನ ರೂಮಿಗೆ ಹೋಗಿ ತಕ್ಷಣ ಅಮ್ಮ ಎಂದು ಕೂಗುತ್ತ ಆಚೆ ಬಂದ. ಸೃಜನ್ ಪ್ರತಿಯೊಂದು ಬಾರಿಯೂ ಅಮ್ಮ, ಅಪ್ಪ ಎನ್ನುತ್ತಿದ್ದಂತೆ ಇಲ್ಲಿ ಇವರ ಎದೆಯಲ್ಲಿ ಭತ್ತ ಕುಟ್ಟಿದಂತಾಗುತ್ತಿತ್ತು. ಅವನು ಇನ್ನೇನು ಪ್ರಶ್ನೆ ಕೇಳುವನೋ...ಅದಕ್ಕೆ ಏನು ಉತ್ತರ ಹೇಳಬೇಕೋ....ಪ್ರತಿಯೊಂದಕ್ಕೂ ಏನಾದರೂ ಸುಳ್ಳನ್ನು ಹೊಂದಿಸಬೇಕು...ಛೇ....ಏನಿದು ಹೀಗಾಗಿ ಹೋಯಿತು ನಮ್ಮ ಜೀವನ ಎಂದುಕೊಂಡು....ಏನಪ್ಪಾ ಎಂದು ಆಚೆ ಬಂದರು ಸೃಜನ್ ತಾಯಿ.

ಅಮ್ಮ ಟೀವಿ ಯಾಕಿನ್ನೂ ಕನೆಕ್ಟ್ ಮಾಡಿಲ್ಲ...ನೀವು ನೋಡಿದರೆ ಆಚೆ ಹೋಗಬಾರದು ಎನ್ನುತ್ತಿದ್ದೀರಾ....ಕನಿಷ್ಠ ಪಕ್ಷ ಮನೆಯಲ್ಲಿ ಟೀವಿಯೂ ಇಲ್ಲದಿದ್ದರೆ ನನಗೆ ಹೇಗೆ ಟೈಮ್ ಪಾಸ್ ಆಗುವುದು?

ಹಿಂದಿನಿಂದ ಬಂದ ಸೃಜನ್ ತಂದೆ ಇಲ್ಲ ಸೃಜನ್ ತಲೆಗೆ ಪೆಟ್ಟು ಬಿದ್ದಿರುವುದರಿಂದ ನೀನು ಸಧ್ಯಕ್ಕೆ ಟೀವಿ ನೋಡುವ ಹಾಗಿಲ್ಲ. ಏಕೆಂದರೆ ಕಣ್ಣಿನ ಮೇಲೆ ಒತ್ತಡ ಬಿದ್ದಷ್ಟೂ ನಿನಗೆ ತಲೆ ನೋವು ಹೆಚ್ಚಾಗುತ್ತದೆ ಎಂದು ಡಾಕ್ಟರ್ ಹೇಳಿದ್ದಾರೆ. ನಿನ್ನ ಕಣ್ಣುಗಳಿಗೆ ಸಂಪೂರ್ಣ ರೆಸ್ಟ್ ಬೇಕು. ಹಾಗಾಗಿ ಅದು ಒಂದು ಹಂತಕ್ಕೆ ಬರುವವರೆಗೂ ನೀನು ಟೀವಿ, ನ್ಯೂಸ್ ಪೇಪರ್, ಬುಕ್ಸ್, ಕಂಪ್ಯೂಟರ್ ಯಾವುದನ್ನೂ ನೋಡಬಾರದು. ನಿನ್ನ ಆರೋಗ್ಯದ ದೃಷ್ಟಿಯಿಂದ ನೀನು ಇದನ್ನು ಪಾಲಿಸಲೇಬೇಕು.
ಅಪ್ಪ ಅದ್ಯಾರಪ್ಪ ಡಾಕ್ಟರ್....ಏನೂ ಮಾಡಬಾರದೆಂದರೆ ನನಗೆ ಸಮಯ ಕಳೆಯುವುದಾದರೂ ಹೇಗೆ? ಹೋಗಲಿ ನನಗೊಂದು ಫೋನ್ ಕೊಡಿ...ಇಲ್ಲ ಸೃಜನ್ ಫೋನಂತೂ ಅಪ್ಪಿ ತಪ್ಪಿ ಉಪಯೋಗಿಸುವ ಹಾಗಿಲ್ಲ. ಅದು ಎಲ್ಲಕ್ಕಿಂತಲೂ ಡೇಂಜರ್. ಅದು ಹೊರ ಹಾಕುವ ಸೂಕ್ಷ್ಮ ಕಿರಣಗಳು ಬಹಳ ಅಪಾಯಕಾರಿ...ಆದ್ದರಿಂದ ದಯವಿಟ್ಟು ನೀನು ಸಧ್ಯಕ್ಕೆ ಫೋನ್ ಬಳಸುವ ಹಾಗಿಲ್ಲ.

ಅಪ್ಪ...ಅಮ್ಮ...ಯಾಕೋ ಎಲ್ಲಾ ಅಯೋಮಯವಾಗಿದೆ...ಬರೀ ನನ್ನ ತಲೆಗೆ ಪೆಟ್ಟು ಬಿದ್ದಿದ್ದರೆ....ನೀವೆಲ್ಲ ಇಷ್ಟೊಂದು ನಿರ್ಬಂಧನೆಗಳನ್ನು ಯಾಕೆ ಹಾಕುತ್ತಿದ್ದೀರ? ನಿಜ ಹೇಳಿ ನನಗೇನಾಗಿದೆ? ನನ್ನ ಪ್ರಾಣಕ್ಕೆ ಏನಾದರೂ ಅಪಾಯವಿದೆಯ?

ಸೃಜನ್....ನಿಜವಾಗಿಯೂ ನಿನ್ನ ಪ್ರಾಣಕ್ಕೆ ಏನೂ ಅಪಾಯವಿಲ್ಲ...ಆದರೆ ನೀನು ಈ ನಿರ್ಬಂಧನೆಗಳನ್ನು ಪಾಲಿಸದಿದ್ದರೆ....ಆಗ ಹೆಚ್ಚು ಅಪಾಯ ಸಂಭವಿಸುವ ಸಾಧ್ಯತೆ ಇದೆ. ಆದ್ದರಿಂದ ನೀನು ದಯವಿಟ್ಟು ಸ್ವಲ್ಪ ದಿನ ಇದನ್ನೆಲ್ಲಾ ಸಹಿಸಲೇಬೇಕು.

ಸೃಜನ್....ನಮಗೋಸ್ಕರವಾದರೂ ನೀನು ಇದನ್ನೆಲ್ಲಾ ಸಹಿಸಲೇ ಬೇಕು..

ಆಯ್ತಮ್ಮ....ನೀವು ಇಷ್ಟು ಕಾಳಜಿ ತೆಗೆದುಕೊಳ್ಳಬೇಕಾದರೆ ನಾನು ಅಷ್ಟು ಮಾತ್ರ ಸಹಕರಿಸುವುದಿಲ್ಲವೇ....ಆಗಲಿ. ನಿಮ್ಮ ಇಷ್ಟದಂತೆ ನಡೆದುಕೊಳ್ಳುತ್ತೇನೆ

Rating
No votes yet