ಎತ್ತ ಕಡೆ ಪಯಣ‌?

ಎತ್ತ ಕಡೆ ಪಯಣ‌?

ಕವನ

ದಿವಿಜದೇವನ ಸೆಳೆತಕನವರತ ತಿರುಗುತಿಹ
ಭುವಿಯ ಮೇಲಿನಿತು ಹಾದಿಯ ಗಮಿಸಿ ನಿ೦ದೊಡೊ೦
ದವಲೋಕನವ ಮಾಳ್ಪುದುಚಿತವೆ೦ಬುದನರಿತು ಪಿ೦ತಿರುಗಿ ನೋಡಲೊಮ್ಮೆ|
ಸವೆದಿಹುದು ದಾರಿ ಪಿ೦ಬಾಲಕರಿಗನುಸರಿಸೆ
ನವೆದು ನರಕವನರಸುತಿಹೆವೇಕಿದರ್ತಿಯಿ೦
ದವರೋಹಣವಲ೦ಬಿಸುತಲಿರ್ಪುದು೦ ಗೋಚರಿಸುತೆ ದಿಗ್ಮೂಢನಾದೆ||

ಪೂಗಳೂರದೊ ದೂರದಲಿ ಬಣ್ಣ ಬಿನ್ನಾಣ
ಮಾಗಿ ರವಿರಶ್ಮಿಯ೦ ಪ್ರತಿಫಲಿಸಿ ಪೊಳೆಯಲ್ಕೆ
ಕೋಗಿಲೆಯು ರಾಗದಿ೦ದನುರಾಗದನುಲೇಪಗೈವದನಿಯನುರಣಿಸಿರೆ|
ಸಾಗೆ ಪಯಣದ ದಾರಿಯುದ್ದಗಲ ಕಲ್ಲು ಮು
ಳ್ಳಾಗಲುರಿಯಾಗಸಕೆ ಚಾಚಿ ಮಿಸುಳಿಸುತ ಪೊಗೆ
ಯಾಗಿಯಾಕರಿಸಿರುವ ಷಡ್ವರ್ಗದರಿಗಳದೊ ಸೋಗು ಹಾಕುತ ತೊನೆದಿವೆ||

ನಡೆಯುತಿರೆ ವಿಭಜಿಸಿಹೆವೆಮ್ಮೊಳಗೆ ಜಾತಿಮತ
ನುಡಿ ಬಣ್ಣವೆ೦ಬ ವಿಭ್ರಮೆಗಳಿ೦ದಡಿಗಡಿಗೆ
ನಡುವಗಲ ಕಡುಕಾಯ್ಪನುಡುಗಿಸುತೆ ನಾಲ್ದೆಸೆಯ ನಡುಗಿಸಿಹುದುರೆ ರೋಷದಿ೦|
ಕುಡಿದು ಸುರೆಯ೦ ಮರ್ಕಟವು ಮತಿಯ ಮರೆವ೦ತೆ
ಹಡೆದು ಸಲಹಿದ ಧರಣಿ ಮಾತೆಗೆರಡ೦ ಬಗೆದು
ಚಡಪಡಿಸುತಿಹೆವೆ೦ಬ ಸತ್ಯ ನಿಚ್ಚಳಮಾಗಿ ಮನದಾಳಮ೦ ಪುಗುತಿದೆ||

ಎತ್ತರವನೇರುತಲಿ ಮಸಣ ಮಾಳ್ದೆವು ಭುವಿಯ
ಹತ್ತಿರಕೆ ಸಾರುತಲಿ ಶಿರವ ಚೆ೦ಡಾಡಿದೆವು
ಬಿತ್ತರಿಪೆವಿ೦ದು ವಿಜ್ಞಾನದರಿವಿನ ಹಾದಿ ಪಿಡಿದಿಹುದು ವಿಶ್ವವೆ೦ದು|
ಹುತ್ತದಿ೦ದೈತರುವ ಕಾಳೋಗರದ ತೆರದಿ
ಚಿತ್ತದಲಿದೇಕಶಾ೦ತಿಯ ಬೀಜ ನೆಟ್ಟಿದೀ
ಗೆತ್ತ ಕಡೆ ಸಾರುತಿಹೆವೀ ತೆರದಿ ಬಿಮ್ಮಿನೊಳು ಕತ್ತಲಿನ ಕೂಪದೊಳಗೆ||

ಬದಲಿಸಲೆಬೇಕು ಮಾರ್ಗಣವ ಸದಯದ ಬದಿಗೆ
ಸದಮಲದ ನೇಹದನುಭಾವವಿಹ ಮೇಲ್ತುದಿಗೆ
ಕದಡಿ ಹೊಲಸಾಗಿರ್ಪ ಜೀವಜಾಲದ ಬದುಕು ಗರಿಗೆದರಲಿದು ನಿಚ್ಚಟ|
ಮದವ ಮರೆಯುತ ಹದದಿ ಸಹಕರಿಸಿ ಸಹಚರಿಸಿ
ಮುದವ ಬಡಿಸುತ ಬದುಕ ಬಳಸುತನುಕ೦ಪದಿ೦
ದುದಯಿಪುದು ಮರಳಿ ಸಹಬಾಳೆ೦ಬ ಪೊಸಬೆಳಕು ತ೦ಬೆಲರ ಸೂಸಿ ಸತತ||

Comments