ನಾನು ಓದಿದ ಪಾಬ್ಲೊ ನೆರೂದನ "ಕವಿತೆ"

ನಾನು ಓದಿದ ಪಾಬ್ಲೊ ನೆರೂದನ "ಕವಿತೆ"

ಕವನ

ಪಾಬ್ಲೊ ನೆರೂದ ನ ಈ "ಕವಿತೆ"ಯನ್ನು ಓದಿದಾಗ ಅನುವಾದ ಮಾಡಿ ನಿಮ್ಮೊಂದಿಗೆ ಹಂಚಿಕೊಳ್ಳೋಣವೆನ್ನಿಸಿತು. ಓದಿ.

 

ಆ ವಯಸ್ಸಾದಾಗ …. ಕವಿತೆ ಆಗಮಿಸಿತು

ನನ್ನನ್ನು ಹುಡುಕಿಕೊಂಡು. ನನಗೆ ಗೊತ್ತಿಲ್ಲ,

ನನಗೆ ಗೊತ್ತಿಲ್ಲ ಅದು ಎಲ್ಲಿಂದ ಬಂತೆಂದು,

ಚಳಿಗಾಲದ ತಂಗಾಳಿಯಿಂದ ಅಥವಾ ನದಿಯಿಂದ.

ನನಗೆ ಗೊತ್ತಿಲ್ಲ ಹೇಗೆ ಅಥವಾ ಯಾವಾಗ,

ಇಲ್ಲ, ಅವು ಧ್ವನಿಯಾಗಿರಲಿಲ್ಲ,

ಅವು ಶಬ್ದವಾಗಿರಲಿಲ್ಲ, ಮೌನವೂ ಅಲ್ಲ,

ಆದರೆ ಬೀದಿಯಿಂದ ಅದು ನನ್ನ ಕರೆಯಿತು,

ರಾತ್ರಿಯ ವ್ಯಾಪಕತೆಯಿಂದ,

ಏಕಾಏಕಿಯಾಗಿ ಬೇರೆಯವರಿಂದ,

ಕುದಿಯುವ ಬೆಂಕಿಯ ನಡುವಿನಿಂದ

ಅಥವಾ ಒಂಟಿತನದ ಮರಳುವಿಕೆಯಿಂದ,

ಮತ್ತು ಅದನ್ನು ನನ್ನನ್ನು ತಟ್ಟಿತು.

ನನಗೆ ಏನು ಹೇಳಬೇಕೆಂದು ತಿಳಿಯುತ್ತಿಲ್ಲ,

ನನ್ನ ನಾಲಿಗೆಯಲ್ಲಿ ಯಾವ ಹೆಸರುಗಳೂ

ಹೊಮ್ಮುತ್ತಿಲ್ಲ,

ನನ್ನ ಕಣ್ಣುಗಳು ಕುರುಡಾಗಿವೆ.

ಏನೋ ನನ್ನ ಹೃದಯವ ತಟ್ಟಿತು

ಸುಡು ಬೆಂಕಿ ಅಥವಾ ಮರೆತುಹೋದ ರೆಕ್ಕೆಗಳು,

ಆ ಬೆಂಕಿಯನ್ನು ಭೇಧಿಸಿ

ನಾನು ನನ್ನದೇ ದಾರಿಯನ್ನು ಮಾಡಿದೆ,

ಮತ್ತು ನಾನು ನನ್ನ ಮೊದಲ, ದುರ್ಬಲ ವಾಕ್ಯವನ್ನು ಬರೆದೆ,

ಏನೂ ಗೊತ್ತಿಲ್ಲದವನ

ದುರ್ಬಲ, ಸತ್ವಹೀನ,

ಶುದ್ಧ ಅಸಂಬದ್ಧ

ಶುದ್ಧ ಅರಿವು;

ಮತ್ತು ದಿಢೀರಾಗಿ ನಾನು ನೋಡಿದೆ

ಸ್ವರ್ಗವು

ಸಡಿಲಗೊಂಡಂತೆ

ಮತ್ತು ತೆರೆದುಕೊಂಡಂತೆ,

ಗ್ರಹಗಳು,

ಡವಗುಟ್ಟುವ ತೋಟಗಳು,

ಕತ್ತಲು ಮರೆಯಾದಂತೆ,

ಬಾಣ, ಬೆಂಕಿ ಮತ್ತು ಹೂವುಗಳಿಂದ

ಶೇಷ ಪ್ರಶ್ನೆಯಾಗಿ,

ಕತ್ತಲನ್ನು ಸೋಲಿಸಿದಂತೆ, ಜಗತ್ತು.

ಮತ್ತು ನಾನು, ತುಚ್ಛ ಜೀವಿ,

ಹಿರಿದಾದ ತೇಜಸ್ಸಿನ ಶೂನ್ಯದಿಂದ

ಅಮಲುಗೊಂಡು

ರಹಸ್ಯದ ನೆರಳಿನಂತೆ,

ನನ್ನನ್ನು ಕಂಡೆ

ಪ್ರಪಾತದ ಶುದ್ಧ ಭಾಗದಂತೆ,

ನಾನು ನಕ್ಷತ್ರದೊಂದಿಗೆ ಸುತ್ತಿದೆ.

ನನ್ನ ಹೃದಯವು ಗಾಳಿಯೊಂದಿಗೆ ಛಿದ್ರವಾಯಿತು.