ಜೀವ ಹೂವಾಗಿದೆ - ಭಾಗ ೬
ಲೇ...ನಾನು ವಾಕಿಂಗ್ ಗೆ ಹೋಗಿ ಬರುತ್ತೇನೆ. ಹಾಗೆಯೇ ಬರುತ್ತಾ ಶರತ್ ಮನೆಗೆ ಹೋಗಿ ಬರುತ್ತೇನೆ.
ಸೃಜನ್ ತಂದೆ ದಾರಿಯಲ್ಲಿ ನಡೆಯುತ್ತಾ ಅದೇ ಯೋಚಿಸುತ್ತ ಸಾಗಿದ್ದರು...ಈಗ ಶರತ್ ನನ್ನು ಹೇಗೆ ಭೇಟಿ ಮಾಡಿಸುವದು? ಸೃಜನ್ ನೋಡಿದರೆ ಅರ್ಜೆಂಟ್ ವಿಷಯ ಎನ್ನುತ್ತಿದ್ದಾನೆ...ಹೀಗೆ ಯೋಚಿಸುತ್ತ ಸಾಗಿದ್ದಾಗ ಅವರ ಫೋನ್ ರಿಂಗಾಯಿತು. ಯಾರೆಂದು ನೋಡಿದರೆ ಸೃಜನ್ ಗೆ ಕೊಡೈ ನಲ್ಲಿ ಟ್ರೀಟ್ ಮಾಡಿದ್ದ ಡಾಕ್ಟರ್ ಗೋವಿಂದನ್ ಕರೆ ಮಾಡಿದ್ದರು.
ಹಲೋ ಡಾಕ್ಟರ್...ಹೇಗಿದ್ದೀರಾ? ಚೆನ್ನಾಗಿದ್ದೀರಾ?
ಹಾ...ನಾನು ಚೆನ್ನಾಗಿದ್ದೇನೆ. ಹೇಗಿದಾನೆ ನಮ್ಮ ಹುಡುಗ? ಏನು ತೊಂದರೆ ಇಲ್ಲ ತಾನೇ?
ಇಲ್ಲ ಡಾಕ್ಟರ್ ಒಂದೆರೆಡು ದಿನ ಸ್ವಲ್ಪ ತಲೆನೋವು ಎನ್ನುತ್ತಿದ್ದ. ಆದರೆ ಈಗ ಅದೇನು ತೊಂದರೆ ಇಲ್ಲ. ಆರಾಮಾಗಿದಾನೆ. ಡಾಕ್ಟರ್...ಅವನ ಆರೋಗ್ಯದ ಬಗ್ಗೆ ಚಿಂತೆ ಇಲ್ಲ. ಏಕೆಂದರೆ ಅವನಿಗೆ ಸಮಯ ಸಮಯಕ್ಕೆ ಸರಿಯಾಗಿ ಔಷಧಿಗಳನ್ನು ನೀಡುತ್ತಿದ್ದೇವೆ...ಆದರೆ ಅವನು ಕೇಳುವ ಪ್ರಶ್ನೆಗಳಿಗೆ ಉತ್ತರ ಕೊಡಲಾಗದೆ ಒದ್ದಾಡುತ್ತಿದ್ದೇವೆ. ಅವನ ಪ್ರತಿಯೊಂದು ಪ್ರಶ್ನೆಗೂ ಏನಾದರೂ ಸುಳ್ಳನ್ನು ಸಿದ್ಧ ಮಾಡಿಟ್ಟು ಕೊಂಡಿರಬೇಕು. ಹಾಗಾಗಿದೆ ನಮ್ಮ ಪರಿಸ್ಥಿತಿ...ಡಾಕ್ಟರ್ ಇದರಿಂದ ಯಾವಾಗ ನಮಗೆ ವಿಮುಕ್ತಿ ಡಾಕ್ಟರ್...ಅವನಿಗೆ ನಾವು ಯಾವಾಗ ಪ್ರಸ್ತುತದ ವಿಷಯ ತಿಳಿಸಲು ಪ್ರಯತ್ನಿಸಬಹುದು. ನಮ್ಮ ವಿಷಯ ಒಂದು ಕಡೆ ಆದರೆ ಪಾಪ....ಆ ಅಮಾಯಕ ಹುಡುಗಿ ಸಿಂಧು...ಅವಳು ಒಳಗೊಳಗೇ ನರಳುತ್ತಿದ್ದಾಳೆ.
ನಾವಾದರೂ ಪ್ರತಿದಿನ ಅವನನ್ನು ನೋಡುತ್ತಿದ್ದೇವೆ. ಆದರೆ ಆ ಹುಡುಗಿಗೆ ಆ ಭಾಗ್ಯವೂ ಇಲ್ಲ...ಪಾಪ ಮದುವೆ ಆದ ಎರಡೇ ದಿನಕ್ಕೆ ಹೀಗಾಗಿಹೋಯಿತು...ಆ ಹುಡುಗಿಗೆ ನಾವೇ ಅನ್ಯಾಯ ಮಾಡಿದೆವೆಂಬ ಪಾಪಪ್ರಜ್ಞೆ ಕಾಡುತ್ತಿದೆ ಡಾಕ್ಟರ್.
ನೋಡಿ ಮೂರ್ತಿಗಳೇ...ಮದುವೆ ಮಾಡುವ ಮುಂಚೆ ನಿಮಗೆ ಗೊತ್ತಿರಲಿಲ್ಲ...ಸೃಜನ್ ಗೆ ಹೀಗಾಗುತ್ತದೆಂದು...ಅಥವಾ ಸೃಜನ್ ಏನು ಬೇಕೆಂದು ಮಾಡಿಕೊಂಡಿದ್ದೆ ಈ ಘಟನೆಯನ್ನು? ಯಾಕೆ ಸುಮ್ಮನೆ ನಿಮ್ಮನ್ನು ನೀವು ಹಳಿದುಕೊಳ್ಳುತ್ತೀರಿ? ಇದರಲ್ಲಿ ಯಾರದ್ದೂ ತಪ್ಪಿಲ್ಲ...ಏನೋ...ಅವನ ಟೈಮ್ ಕೆಟ್ಟಿತ್ತು...ಹೀಗಾಯಿತು ಅಷ್ಟೇ. ಅವನು ಮತ್ತೆ ಸರಿ ಹೋದಾಗ ಎಲ್ಲವೂ ಸರಿ ಹೋಗುತ್ತೆ.
ಅದೇ ಡಾಕ್ಟರ್ ಆ ಸಮಯ ಬರುವುದು ಯಾವಾಗ?
ನೋಡಿ ಮೂರ್ತಿಗಳೇ....ನಾನು ಇವತ್ತು ಬೆಂಗಳೂರಿಗೆ ಬರುತ್ತಿದ್ದೇನೆ. ಮಣಿಪಾಲ್ ಆಸ್ಪತ್ರೆಯಲ್ಲಿ ಒಂದು ಸರ್ಜರಿ ಇದೆ. ಅದು ಮುಗಿಸಿಕೊಂಡು ನಾನು ನಿಮ್ಮ ಮನೆಗೆ ಬರುತ್ತೇನೆ. ಒಮ್ಮೆ ಸೃಜನ್ ನ ಚೆಕಪ್ ಮಾಡುತ್ತೇನೆ. ಅವನು ಔಷಧಿಗಳಿಗೆ ಹೇಗೆ ರೆಸ್ಪಾಂಡ್ ಆಗುತ್ತಿದ್ದಾನೆ ಎಂದು ನೋಡಿದರೆ, ಅವನಿಗೆ ಯಾವಾಗ ನೀವು ಪ್ರಸ್ತುತ ಪರಿಸ್ಥಿತಿಯ ಬಗ್ಗೆ ತಿಳಿಸಲು ಶುರುಮಾಡಬಹುದೆಂದು ನಾನು ತಿಳಿಸುತ್ತೇನೆ.
ತುಂಬಾ ಧನ್ಯವಾದಗಳು ಡಾಕ್ಟರ್. ನಾನು ನಿಮ್ಮ ಬರುವಿಕೆಯನ್ನು ಎದುರು ನೋಡುತ್ತಿರುತ್ತೇನೆ.
ಡಾಕ್ಟರ್ ಮಾತಿನಿಂದ ಸ್ವಲ್ಪ ಚೇತರಿಕೆ ಬಂದಂತಾಯಿತು ಮೂರ್ತಿಗಳಿಗೆ. ಅಲ್ಲಿಂದ ಸೀದಾ ಶರತ್ ಮನೆಗೆ ಹೋದರು. ಆದರೆ ಅಲ್ಲಿ ಅವರಿಗೆ ನಿರಾಶೆ ಕಾದಿತ್ತು. ಶರತ್ ಮನೆಯ ಬಾಗಿಲು ಹಾಕಿತ್ತು. ಅಕ್ಕಪಕ್ಕದವರನ್ನು ಕೇಳೋಣ ಎಂದುಕೊಂಡರೆ ಯಾರೂ ಕಾಣಲಿಲ್ಲ. ಸರಿ...ವಾಕಿಂಗ್ ಮುಗಿಸಿ ವಾಪಸ್ ಬರುವಾಗ ಮತ್ತೊಮ್ಮೆ ನೋಡಿದರಾಯಿತು, ಅಷ್ಟರಲ್ಲಿ ಹೋಗಿ ಕ್ಯಾಲೆಂಡರ್ ತೆಗೆದುಕೊಂಡು ಬರೋಣ ಎಂದು ಅಂಗಡಿಯ ಕಡೆ ಹೊರಟರು.
ಅಂಗಡಿಯವನ ಬಳಿ ಹೋದವರ್ಷದ ಕ್ಯಾಲೆಂಡರ್ ಕೊಡು ಎಂದು ಹೇಗಪ್ಪ ಕೇಳುವುದು? ಅದೂ ಅಲ್ಲದೆ ಅವನು ಏನಂದುಕೊಂಡಾನು??
ಅಯ್ಯೋ ಏನಾದರೂ ಅಂದುಕೊಳ್ಳಲಿ....ನನಗೆ ನನ್ನ ಮಗ ಮುಖ್ಯ...ಯಾರೇನು ಅಂದುಕೊಂಡರೂ ನನಗೆ ಚಿಂತೆ ಇಲ್ಲ. ಅಂಗಡಿಯ ಬಳಿ ಬಂದು ಹೋದವರ್ಷದ ಕ್ಯಾಲೆಂಡರ್ ಕೊಡಪ್ಪ ಒಂದು ಎಂದು ಕೇಳಿದ್ದಕ್ಕೆ, ಒಮ್ಮೆ ಇವರನ್ನೇ ಆಶ್ಚರ್ಯವಾಗಿ ನೋಡಿದ ಅಂಗಡಿಯವ...ಸರ್...ಹೋದವರ್ಷದ ಕ್ಯಾಲೆಂಡರ್ ಸ್ಟಾಕ್ ಇದೆಯೋ ಇಲ್ಲವೋ ಗೊತ್ತಿಲ್ಲ. ಅದೂ ಅಲ್ಲದೆ ಈ ವರ್ಷ ಶುರುವಾಗಿ ಆರು ತಿಂಗಳ ನಂತರ ಹೋದ ವರ್ಷದ ಕ್ಯಾಲೆಂಡರ್ ಕೇಳುತ್ತಿದ್ದೀರಾ...ನೋಡ್ತೀನಿ ಇರಿ ಎಂದು ಒಳಗಡೆ ಹೋದ ಅಂಗಡಿಯವ ಒಂದೆರೆಡು ನಿಮಿಷದ ನಂತರ ಆಚೆ ಬಂದು ಸರ್ ಸ್ಟಾಕ್ ಇಲ್ಲ.
ನಿಮಗೆ ಬೇಕೇ ಬೇಕೆಂದರೆ ನಾನು ಬೇರೆ ಎಲ್ಲಿಯಾದರೂ ತರಿಸಿ ಕೊಡುತ್ತೇನೆ. ನಾಳೆ ಸಂಜೆ ಬಂದರೆ ತರಿಸಿ ಇಟ್ಟಿರುತ್ತೇನೆ.
ಸರಿ ಹಾಗಿದ್ದರೆ ನಾನು ನಾಳೆ ಸಂಜೆ ಬರುತ್ತೇನೆ ಎಂದು ಅಲ್ಲಿಂದ ವಾಪಸ್ ಹೊರಟು ಮತ್ತೆ ಶರತ್ ಮನೆಯ ಬಳಿ ಬಂದರೆ ಮನೆಗೆ ಹಾಕಿದ್ದ ಬೀಗ ಹಾಗೆಯೇ ಇತ್ತು. ಛೇ....ಇದೇನಿದು..ಎಲ್ಲಿ ಹೋಗಿರಬಹುದು ಎಂದು ಆಲೋಚಿಸುತ್ತಿದ್ದಾಗ ಪಕ್ಕದ ಮನೆಯಿಂದ ಯಾರೋ ಒಬ್ಬರು ಆಚೆ ಬಂದು, ಅವರು ಇಲ್ಲ ಊರಿಗೆ ಹೋಗಿದ್ದಾರೆ...ಅವರ ಕಡೆಯವರು ಯಾರೋ ಹೋಗಿಬಿಟ್ಟರಂತೆ..ಅಲ್ಲಿಗೆ ಹೋಗಿದ್ದಾರೆ. ನಾಡಿದ್ದು ಬರುತ್ತಾರೆ.
ಸರಿ ಅವರು ಬಂದರೆ ಮೂರ್ತಿ ಬಂದಿದ್ದರು ಎಂದು ಹೇಳಿಬಿಡಿ. ನಾನು ಆಮೇಲೆ ಬರುತ್ತೇನೆ ಎಂದು ಅಲ್ಲಿಂದ ಹೊರಟರು. ಒಳ್ಳೆಯ ಕಾರಣ ಸಿಕ್ಕಿತು, ಅವರು ಬರುವವರೆಗೂ ಸೃಜನ್ ಗೆ ಇದೆ ಕಾರಣ ಹೇಳಿ ಮುಂದಕ್ಕೆ ಹಾಕಬಹುದು. ಆದರೆ ಅವರು ಬಂದ ಮೇಲೆ ಏನು ಹೇಳುವುದು? ಹ್ಮ್ಮ್....ನೋಡೋಣ ಅದನ್ನು ಮುಂದೆ ಯೋಚಿಸಿದರೆ ಆಯಿತು ಎಂದು ಮನೆಗೆ ಹೊರಟರು.
ಮನೆಗೆ ಬರುವ ವೇಳೆಗೆ ಸರಿಯಾಗಿ ಸಿಂಧು ಮತ್ತು ಅವರ ತಂದೆ ತಾಯಿ ಎದುರು ಸಿಕ್ಕರು. ಹೇಳಿ ರಾಯರೇ ಏನು ಅಳಿಯನನ್ನು ನೋಡಲು ಬಂದಿರಾ?
ಹೌದು ಮೂರ್ತಿಗಳೇ ನಾನು ಸಿಂಧು ಆದರೆ ಆಸ್ಪತ್ರೆಗೆ ಬಂದು ನೋಡಿ ಹೋಗಿದ್ದೆವು. ಆದರೆ ಇವಳು ಬಂದಿರಲಿಲ್ಲವಲ್ಲ, ಅದಕ್ಕೆ ನೋಡಲು ಹೋಗೋಣ ಎಂದು ಒಂದೇ ಸಮನೆ ಹಠ ಹಿಡಿದಿದ್ದಳು. ಅದಕ್ಕೆ ನಿಮಗೆ ತಿಳಿಸದೆಯೆ ಬಂದು ಬಿಟ್ಟೆವು. ನೀವೂ ಎಲ್ಲೋ ಆಚೆಯಿಂದ ಬರುತ್ತಿರುವ ಹಾಗಿದೆ.
ಹೌದು ರಾಯರೇ...ಎಲ್ಲ ಅವನ ಸಲುವಾಗಿಯೇ...ಯಾರೋ ಸ್ನೇಹಿತನನ್ನು ನೋಡಬೇಕು ಎಂದ. ಆದರೆ ಅವನು ಇವನ ಮದುವೆಗೆ ಎರಡು ವಾರದ ಮುಂಚೆಯಷ್ಟೇ ಆನ್ಸೈಟ್ ಹೋಗಿದ್ದಾನೆ. ಇನ್ನು ಎರಡು ವಾರದ ನಂತರವಷ್ಟೇ ಅವನು ವಾಪಸ್ ಬರುವುದು. ಆದರೆ ಅವನಿಗೆ ಈ ವಿಷಯ ಗೊತ್ತಿಲ್ಲವಲ್ಲ...ಅದಕ್ಕೆ ಸುಮ್ಮನೆ ಅವರ ಮನೆಗೆ ಹೋಗಿ ಹೇಳಿಬರುತ್ತೇನೆ ಎಂದು ಅವರ ಮನೆಗೆ ಹೋಗಿದ್ದೆ. ಕನಿಷ್ಠ ಪಕ್ಷ ಅವನ ನಂಬರ್ ತೆಗೆದುಕೊಂಡು ಅವನಿಗೆ ನಡೆದ ವಿಷಯ ತಿಳಿಸೋಣ ಎಂದುಕೊಂಡೆ. ಆದರೆ ದುರಾದೃಷ್ಟ ಅವರ ಕಡೆಯವರು ಯಾರೋ ಹೋಗಿಬಿಟ್ಟಿದ್ದಾರೆoದು ಅವರ ಮನೆಯವರು ಊರಿಗೆ ಹೋಗಿದ್ದಾರೆ.
ಅವನ ಬಳಿ ಏನೋ ಮುಖ್ಯವಾದ ವಿಷಯ ಮಾತಾಡಬೇಕು ಎನ್ನುತ್ತಿದ್ದಾನೆ ಸೃಜನ್!! ಅದೇನು ಅಂಥಹ ವಿಷಯವೋ ಗೊತ್ತಿಲ್ಲ. ನನ್ನ ಬಳಿ ಹೇಳು ಎಂದರೆ ಹೇಳಲಿಲ್ಲ. ಆಮೇಲೆ ಕ್ಯಾಲೆಂಡರ್ ಬೇಕು ಎಂದ. ಹೋದವರ್ಷದ ಕ್ಯಾಲೆಂಡರ್ ತರೋಣ ಎಂದು ಅಂಗಡಿಗೆ ಹೋಗಿದ್ದೆ. ಅವನು ಸ್ಟಾಕ್ ಇಲ್ಲ ನಾಳೆ ಸಂಜೆ ಬನ್ನಿ ಎಂದಿದ್ದಾನೆ.
ಹಾ ರಾಯರೇ ಅಂದ ಹಾಗೆ ಡಾಕ್ಟರ್ ಗೋವಿಂದನ್ ಫೋನ್ ಮಾಡಿದ್ದರು. ಅವರು ಇಂದು ಬೆಂಗಳೂರಿಗೆ ಬರುತ್ತಿದ್ದಾರಂತೆ. ಅವರ ಕೆಲಸ ಮುಗಿದ ಮೇಲೆ ಬಂದು ಸೃಜನ್ ನನ್ನು ಪರೀಕ್ಷಿಸುತ್ತಾರಂತೆ. ಅವನು ಔಷಧಿಗೆ ಹೇಗೆ ಪ್ರತಿಕ್ರಿಯಿಸುತ್ತಿದ್ದಾನೆ ಎಂಬುದರ ಆಧಾರದ ಮೇಲೆ ಅವನಿಗೆ ಪ್ರಸ್ತುತ ಪರಿಸ್ಥಿತಿಯ ವಿಷಯ ಯಾವಾಗ ತಿಳಿಸಬಹುದು ಎಂದು ಹೇಳುತ್ತಾರಂತೆ. ಹ್ಮ್ಮ್....ನೋಡಿ ಬೀಗರನ್ನು ಬೀದಿಯಲ್ಲೇ ನಿಲ್ಲಿಸಿ ಮಾತಾಡುವ ಪರಿಸ್ಥಿತಿ ಬಂದಿದೆ. ಬನ್ನಿ ಒಳಗೆ ಹೋಗೋಣ.