"ಹಕ್ಕಿ ಹಾರುತಿದೆ ನೋಡಿದಿರಾ?"

Submitted by sasi.hebbar on Wed, 02/27/2013 - 15:29
 “ಇವತ್ತು ಇಲ್ಲಿ ಸುಮಾರು 15,000 ಹಕ್ಕಿಗಳು ಇದಾವೆ!”
     “ಇದಕ್ಕಿಂತಾ ಜಾಸ್ತಿ ಯಾವತ್ತಾದರೂ ಇರುತ್ತಾವಾ?”
     “ಒಂದೊಂದು ಸಲ 40,000 ಹಕ್ಕಿಗಳೂ ಇಲ್ಲಿ ಬಂದು ಸೇರುತ್ತವೆ”
ನಾವು ಕುಳಿತಿದ್ದ ದೋಣಿಯ ಅಂಬಿಗ ಹೀಗೆಂದಾಗ ನಮಗಂತೂ ಅಚ್ಚರಿಯೋ ಅಚ್ಚರಿ! ನಾವಿದ್ದದ್ದು ಮೈಸೂರಿನ ಹತ್ತಿರವಿರುವ ರಂಗನತಿಟ್ಟು ಪಕ್ಷಿಧಾಮದಲ್ಲಿ. ದೋಣಿಯಲ್ಲಿ ಕುಳಿತು ನಿಧಾನವಾಗಿ ಒಂದು ದೀರ್ಘ ಸುತ್ತು ಹೊಡೆಯುತ್ತಿದ್ದಾಗ ಎಲ್ಲೆಲ್ಲೂ ಹಕ್ಕಿಗಳ ಕಲರವ, ಹಾರಾಟ. ಆ ಸಂಜೆಯ ಇಳಿಬಿಸಿಲಿನಲ್ಲಿ, ಮೇಲಿನ ನೀಲ ಆಗಸ, ಅದರ ಬಣ್ಣವನ್ನೇ ಪ್ರತಿಫಲಿಸುತ್ತಿದ್ದ ಪ್ರಶಾಂತ ನೀರು, ಹತ್ತಿರದ ದ್ವೀಪದಲ್ಲಿ ಬೆಳೆದ ಮರಗಳ ಹಸಿರು ಸಿರಿ, ಅತ್ತಿಂದಿತ್ತ ಹಾರಾಡುತ್ತಿದ್ದ ಅಸಂಖ್ಯ ದೊಡ್ಡ ಮತ್ತು ಚಿಕ್ಕ ಹಕ್ಕಿಗಳ ನೋಟದೊಂದಿಗೆ ನಮ್ಮ ದೋಣಿವಿಹಾರವು ತುಂಬಾ ತೃಪ್ತಿ ಕೊಡುತ್ತಿತ್ತು. ಫೆಬ್ರವರಿ ತಿಂಗಳಲ್ಲಿ ರಂಗನತಿಟ್ಟಿನ ನೋಟವು ಭೂಲೋಕದಲ್ಲಿದ್ದ ಸ್ವರ್ಗದ ಒಂದು ತುಣುಕಿನಂತಿತ್ತು.
     ಆರು ದ್ವೀಪಗಳಿಂದ ಕೂಡಿದ ರಂಗನತಿಟ್ಟು ಪಕ್ಷಿಧಾಮ ಎಂದರೆ ಹಕ್ಕಿಗಳಿಗೆ ತುಂಬಾ ಪ್ರೀತಿ. ಆ ಪ್ರೀತಿಗೆ ಮುಖ್ಯ ಕಾರಣವೆಂದರೆ, ಸದಾ ಕಾಲ ಸುತ್ತಲೂ ನೀರಿನಿಂದ ಆವೃತವಾಗುವ ಆ ದ್ವೀಪಗಳಲ್ಲಿ ಅವುಗಳಿಗೆ ದೊರೆಯುವ ರಕ್ಷಣೆ ಎನ್ನಬಹುದು. 17ನೆಯ ಶತಮಾನದಲ್ಲಿ, ರಂಗನತಿಟ್ಟಿನಿಂದ ಸ್ವಲ್ಪ ಕೆಳಭಾಗದಲ್ಲಿ ಅಂದಿನ ಮೈಸೂರು ಅರಸರು ಒಂದು ಪುಟ್ಟ ಕಟ್ಟೆಯನ್ನು ಕಟ್ಟಿಸಿದರು - ಸುತ್ತಲಿನ ಜಮೀನಿಗೆ ನೀರಾವರಿ ಒದಗಿಸುವುದೇ ಆ ಒಡ್ಡಿನ ಉದ್ದೇಶವಾಗಿತ್ತು. ಆ ಕಟ್ಟೆಯಿಂದಾಗಿ, ಸುಮಾರು ಆರು ದ್ವೀಪಗಳ ನಿರ್ಮಾಣವಾಯಿತು. ಜಾಸ್ತಿ ಎತ್ತರವಿಲ್ಲ ಆ ಕಟ್ಟೆಯಲ್ಲಿ ಸದಾಕಾಲ ನೀರು ತುಂಬಿರುವುದರಿಂದಾಗಿ, ದ್ವೀಪಗಳಿಗೆ ನಿರಂತರ ರಕ್ಷಣೆ. ಆ ಪ್ರದೇಶದ ಸುತ್ತಲೂ ಹತ್ತಾರು ಮೈಲುಗಳ ತನಕ ಸಾಕಷ್ಟು ನೀರಾವರಿ ಪ್ರದೇಶ,ಕೆರೆ ಕುಂಟೆಗಳು ಇರುವುದರಿಂದಾಗಿ, ನೀರುಹಕ್ಕಿಗಳಿಗೆ ಆಹಾರವೂ ಸಿಗುವಂತಿದೆ. ಅಲ್ಲದೆ ಉದ್ದಕ್ಕೂ ಹರಿದು ಹೋಗಿರುವ ಕಾವೇರಿ ನದಿಯಿಂದಾಗಿ, ಹಕ್ಕಿಗಳಿಗೆ ಬೇಕಾಗುವ ಆಹಾರಕ್ಕೂ ಕೊರತೆ ಇಲ್ಲ. ಆದ್ದರಿಂದ, ಹಲವಾರು ಪ್ರಬೇಧದ ಹಕ್ಕಿಗಳಿಗೆ ರಂಗನ ತಿಟ್ಟು ಎಂದರೆ ತುಂಬಾ ಇಷ್ಟ. 1940ರಲ್ಲಿ ಇಲ್ಲಿಗೆ ಬಂದು ಪಕ್ಷಿವೀಕ್ಷಣೆ ಮಾಡಿದ ಡಾ. ಸಲೀಂ ಆಲಿಯವರ ಶಿಫಾರಸಿನ ಮೇರೆಗೆ ಮೈಸೂರು ಮಹಾರಾಜರು ಈ ಆರು ದ್ವೀಪಗಳನ್ನು ಪಕ್ಷಿಧಾಮವಾಗಿ ರೂಪಿಸಿದರು. ನಂತರದ ದಿನಗಳಲ್ಲಿ ಕರ್ನಾಟಕ ಅರಣ್ಯ ಇಲಾಖೆಯು ಇದನ್ನು ಸಾಕಷ್ಟು ಅಭಿವೃದ್ಧಿಪಡಿಸಿದೆ.
    ಸಾವಿರಾರು ಸ್ಥಳೀಯ ನೀರುಹಕ್ಕಿಗಳು ರಂಗನತಿಟ್ಟಿಗೆ ಬರುವುದು ಸಹಜವೇ. ದೂರದ ಊರುಗಳಿಂದ, ದೇಶಗಳಿಂದ ರಂಗನತಿಟ್ಟನ್ನು ಹುಡುಕಿಕೊಂಡು ಬರುವ ಹಕ್ಕಿಗಳ ಸಂಖ್ಯೆಯೂ ದೊಡ್ಡದು. ಸೈಬೀರಿಯಾ, ಲ್ಯಾಟಿನ್ ಅಮೆರಿಕಾ ಮತ್ತು ಉತ್ತರ ಭಾರತದ ಹಲವು ಪ್ರದೇಶಗಳಿಂದ ಸಾಕಷ್ಟು ಹಕ್ಕಿಗಳು ಇಲ್ಲಿಗೆ ವಲಸೆ ಬರುತ್ತವೆ. ಡಿಸೆಂಬರ್ – ಜನವರಿ ಸಮಯದಲ್ಲಿ ರಂಗನತಿಟ್ಟು ವಲಸೆ ಹಕ್ಕಿಗಳಿಂದ ತುಂಬಿ ಹೋಗುತ್ತವೆ ಎಂದರೆ ತಪ್ಪಾಗಲಾರದು. ಉತ್ತರ ಭಾರತ ಮತ್ತು ಅದರಿಂದಾಚೆಯ ಪ್ರದೇಶಗಳಲ್ಲಿ ಚಳಿ ಆರಂಭವಾದಾಗ, ಬೆಚ್ಚಗಿನ ಜಾಗಗಳನ್ನು ಹುಡುಕಿಕೊಂಡು ಬರುವ ಹಕ್ಕಿಗಳು ಆರಿಸಿಕೊಳ್ಳುವ ಹಲವು ಜಾಗಗಳಲ್ಲಿ ರಂಗನತಿಟ್ಟೂ ಒಂದು. ಇಲ್ಲಿನ ಸುರಕ್ಷಿತ ವಾತಾವರಣದಿಂದಾಗಿ ಪ್ರತಿ ವರುಷ ಪುನ: ಪುನ: ಈ ದ್ವೀಪಗಳಲ್ಲೇ ಬಂದು ಠಿಕಾಣಿ ಊರುವ ಹಕ್ಕಿಗಳ ಅಂತಹದೊಂದು ನೆನಪಿನ ಶಕ್ತಿಯ ಕುರಿತು ವಿಶ್ಲೇಷಣೆ ಮಾಡುವುದು ಕಷ್ಟವೇ ಸರಿ. ಅವುಗಳು ನೆನಪಿಟ್ಟುಕೊಳ್ಳುವ ಪ್ರಕ್ರಿಯೆಯು ಮನುಷ್ಯರಾದ ನಾವು ನೆನಪಿಟ್ಟುಕೊಳ್ಳುವ ಪ್ರಕ್ರಿಯೆಗಿಂತ ತುಂಬ ಬೇರೆಯೇ ತೆರನಾಗಿರುವುದರಿಂದಾಗಿ, ಅವು ಈ ಜಾಗವನ್ನೇ ನೆನಪಿಟ್ಟುಕೊಂಡು ಬರುತ್ತವೆ ಎನ್ನುವುದಕ್ಕಿಂತಾ, ಅವು ಅಯಾಚಿತವಾಗಿ, ವಿವರಿಸಲುಕಷ್ಟವಾದ ರೂಪದ ನೆನಪಿನ ಶಕ್ತಿಯೊಂದಿಗೆ ಇಲ್ಲಿಗೆ ಬಂದು ಹೋಗುತ್ತವೆ ಎನ್ನಬಹುದು.
     ವಲಸೆ ಹಕ್ಕಿಗಳು ಸಾವಿರಾರು ಮೈಲು ದೂರ ಸಾಗಿ ಬರುವ ವಿಸ್ಮಯವನ್ನು ಕಾಣುವುದರ ಜೊತೆ, ರಂಗನತಿಟ್ಟಿನಲ್ಲಿ ಕಾಣಬಹುದಾದ ಇನ್ನೊಂದು ವಿಸ್ಮಯವೆಂದರೆ ಸಾವಿರಾರು ಹಕ್ಕಿಗಳು ಇಲ್ಲಿನ ಮರಗಳಲ್ಲಿ ಗೂಡು ಕಟ್ಟಿ ಮರಿ ಮಾಡುವ ಸಂಪ್ರದಾಯ. ಪ್ರತಿ ವರ್ಷ ಮಳೆಗಾಲದ ಸಮಯದಲ್ಲಿ  ಈ ದ್ವೀಪಗಳಲ್ಲಿ ಬೆಳೆದಿರುವ ಸಣ್ಣ-ದೊಡ್ಡ ಮರಗಳಲ್ಲಿ ನೀರುಹಕ್ಕಿಗಳು ಗೂಡು ಕಟ್ಟಿ, ಮರಿ ಮಾಡುತ್ತವೆ. ಈ ಬಾರಿಯ ಫೆಬ್ರವರಿಯ ತಿಂಗಳಿನಲ್ಲಿ, ತೆರೆದ ಕೊಕ್ಕಿನ ಹಕ್ಕಿ, ಕೊಕ್ಕರೆ ಮತ್ತಿತರ ಹಕ್ಕಿಗಳು ನೂರಾರುಗೂಡುಗಳನ್ನು ಕಟ್ಟಿ, ಕಾವು ಕೊಡುತ್ತಾ ಕುಳಿತಿದ್ದವು. ಕೆಲವು ಗೂಡುಗಳಲ್ಲಿ ಮರಿಗಳಿದ್ದು, ಅವುಗಳಿಗೆ ಆಹಾರ ಕೊಡುವ ತಾಯಿ ಹಕ್ಕಿಗಳನ್ನೂ ಕಾಣಬಹುದು. ದೋಣಿಯಲ್ಲಿ ಕುಳಿತು, ಪ್ರಶಾಂತ ನೀರಿನಲ್ಲಿ ನಿಧಾನವಾಗಿ ಆ ದ್ವೀಪಗಳತ್ತ ಸಾಗಿದಾಗ, ನಮಗೆ ಕೈಗೆಟಕುವ ಎತ್ತರದ ಪುಟ್ಟ ಪುಟ್ಟ ಮರಗಳಲ್ಲಿ ಹಲವಾರು ಗೂಡುಗಳನ್ನು ಹತ್ತಿರದಿಂದ ನೋಡುವ ಅವಕಾಶ ಇಲ್ಲಿ ದೊರೆಯುತ್ತದೆ. ಇಲ್ಲಿನ ಮಾಹಿತಿಯ ಪ್ರಕಾರ, ಪ್ರತಿವರುಷ ಸುಮಾರು 4,000 ಕ್ಕಿಂತ ಹೆಚ್ಚು ಹಕ್ಕಿಗಳು ಗೂಡುಕಟ್ಟಿ ಮೊಟ್ಟೆ ಇಡುತ್ತವೆ, ಮತ್ತು ಸರಾಸರಿ ಪ್ರತಿ ಗೂಡಿಗೆ 2 ಮರಿಗಳಂತೆ ಲೆಕ್ಕಹಾಕಿದರೆ, ಪ್ರತಿ ವರ್ಷ 8,000 ಕ್ಕಿಂತ ಹೆಚ್ಚಿನ ಮರಿಗಳ ಸಂತಾನಾಭಿವೃದ್ಧಿಯಾಗುವ ಪಕ್ಷಿಧಾಮ ಇದು! 
     ಮಳೆಗಾಲದಲ್ಲಿ ಒಮ್ಮೊಮ್ಮೆ ನೀರುಹಕ್ಕಿಗಳ ಸಂತಾನಾಭಿವೃದ್ಧಿಗೆ ಇಲ್ಲಿ ಕಂಟಕ ಎದುರಾಗುವುದುಂಟು. ರಂಗನತಿಟ್ಟು ಪಕ್ಷಿಧಾಮಕ್ಕೂ ಸುಮಾರು 15 ಕಿ.ಮೀ. ದೂರದಲ್ಲಿರುವ ಕೃಷ್ಣರಾಜ ಸಾಗರ ಅಣೆಕಟ್ಟು ತುಂಬಿ, ಹೆಚ್ಚಿನ ನೀರನ್ನು ಕೆಳಗೆ ಹರಿಯಲು ಬಿಟ್ಟಾಗ, ನೆರೆ ಬಂದು ಪಕ್ಷಿಧಾಮವೇ ಮುಳುಗಿಹೋಗುವ ಅಪರೂಪದ ಸಂದರ್ಭಗಳುಂಟು. ಅಲ್ಲದೆ, ಬೇರೆ ಸಂದರ್ಭಗಳಲ್ಲಿ, ಒಮ್ಮೆಗೇ ನೀರನ್ನು ಬಿಟ್ಟಾಗ, ಕೆಳ ಮಟ್ಟದಲ್ಲಿರುವ ಹಕ್ಕಿಯ ಗೂಡುಗಳು ನಲುಗುವುದುಂಟು. ದ್ವೀಪಗಳ ಹತ್ತಿರವೇ ಹರಡಿರುವ ಕಲ್ಲುಬಂಡೆಗಳ ಮೇಲೆ ಗೂಡು ಕಟ್ಟುವ ರಿವರ್ ಟರ್ನ್ ಮೊದಲಾದ ಹಕ್ಕಿಗಳ ಗೂಡುಗಳು, ನಾಲ್ಕಾರು ಅಡಿ ನೀರು ಬಂದಾಗ ಸಹಾ ಮುಳುಗುವುದುಂಟು. ಆದರೂ, ಇಂತಹ ನೆರೆಗಳನ್ನು ಒಂದು ಕಂಟಕ ಎಂದು ನೆನಪಿಟ್ಟುಕೊಳ್ಳದೇ, ಮತ್ತೆ ಮತ್ತೆ ಇಲ್ಲೇ ಗೂಡು ಕಟ್ಟುತ್ತವೆ ರಂಗನತಿಟ್ಟಿನ ಹಕ್ಕಿಗಳು.
     “ಇಲ್ಲಿನ ಮೊಸಳೆಗಳಿಂದ ಒಂದು ಉಪಕಾರ ಉಂಟು” ಎಂದುಸುರಿದ ನಮ್ಮ ದೋಣಿಯ ಅಂಬಿಗ. ನೀರಿನ ಮಧ್ಯ ಇರುವ ಬಂಡೆಗಳ ಮೇಲೆ ಬಿಸಿಲು ಕಾಯಿಸುತ್ತಾ ಮಲಗಿದ್ದ ಭಾರೀ ಗಾತ್ರದ ಮೊಸಳೆಗಳು, ಬಂಡೆಯ ಬಣ್ಣದೊಂದಿಗೆ ತಮ್ಮ ಮೈಬಣ್ಣವನ್ನು ಮೇಳೈಸಿದ್ದವು. ರಂಗನತಿಟ್ಟಿನಲ್ಲಿ ನೂರಕ್ಕೂ ಹೆಚ್ಚಿನ ಸಂಖ್ಯೆಯ ಮೊಸಳೆಗಳಿದ್ದು, ಇದು ಕರ್ನಾಟಕದಲ್ಲೇ ಒಂದು ದಾಖಲೆ. ಕಲ್ಲು ಬಂಡೆಯ ಮೇಲೆ ಸಾಲಾಗಿ ಕುಳಿತ ಬಣ್ಣದ ಕೊಕ್ಕರೆಗಳು, ಮೊಸಳೆಯಿಂದ ಒಂದೆರಡು ಅಡಿ ಅಂತರವನ್ನು ಯಾವಾಗಲೂ ಕಾಪಾಡುತ್ತಿದ್ದವು. ಮೊಸಳೆ ಅಲುಗಾಡಿದರೆ, ಹಕ್ಕಿಗಳು ಸಹಾ ಅತ್ತಿತ್ತ ಸರಿದು, ಸದಾಕಾಲ ಒಂದೆರಡು ಅಡಿ ಅಂತರವನ್ನು ಕಾಪಾಡಿಕೊಳ್ಳುತ್ತಿದ್ದುದು ಕುತೂಹಲಕಾರಿಯಾಗಿತ್ತು. ನೋಡಲು ಭಯ ಹುಟ್ಟಿಸುತ್ತಾ, ಸದ್ಯ ನಮ್ಮ ದೋಣಿಯಿಂದ ಹತ್ತಾರು ಅಡಿ ದೂರದಲ್ಲೇ ಬಂಡೆಯಂತೆ ಮಲಗಿದ್ದ ಆ ಮೊಸಳೆಗಳಿಂದ ಯಾವುದಾದರೂ ಉಪಕಾರವಿದೆಯೆ?
     “ಈ ಮೊಸಳೆಗಳಿರುವುದರಿಂದಲೇ, ಇಲ್ಲಿನ ಹಕ್ಕಿಗಳಿಗೆ ಹೆಚ್ಚಿನ ರಕ್ಷಣೆ. ಮೊಸಳೆಗಳಿರುವುದರಿಂದಾಗಿ, ಹಕ್ಕಿಯ ಮೊಟ್ಟೆಗಳನ್ನು ತಿನ್ನಲು ಬಯಸುವ ನರಿ, ನಾಯಿ ಮತ್ತಿತರ ಇತ್ತ ಸುಳಿಯುವಂತಿಲ್ಲ, ಮನುಷ್ಯರಿಂದಲೂ ಹಕ್ಕಿಗಳನ್ನು ರಕ್ಷಿಸುವಲ್ಲಿ ಮೊಸಳೆಗಳ ಪಾತ್ರ ಉಂಟು” ಎಂದ ಹೇಳಿದ ನಮ್ಮ ದೋಣಿ ನಡೆಸುವಾತ. ಕರ್ನಾಟಕ ಅರಣ್ಯ ಇಲಾಖೆಯ ನೌಕರನಾದ ತನಗೆ, ಎರಡು ದಶಕಗಳ ಅನುಭವವಿರುವುದರಿಂದ, ಇಲ್ಲಿನ ಎಲ್ಲಾ ಪ್ರಕೃತಿ ವ್ಯಾಪಾರಗಳೂ ತನಗೆ ಗೊತ್ತು ಎಂದ ನಮ್ಮ ಅಂಬಿಗ. 
     “ ಈ ಮೊಸಳೆಗಳ ಆಹಾರವೇನು?”
     “ ಹಕ್ಕಿಗಳು ಮತ್ತು ಮೀನುಗಳು!” 
ಆಗಸದಲ್ಲಿ ಹಾರುವ ಹಕ್ಕಿಗಳನ್ನು ನೀರಿನಲ್ಲಿರುವ ಮೊಸಳೆಯು ಹಿಡಿದು ತಿನ್ನುವದಾದರೂ ಹೇಗೆ? ನಮ್ಮ ಅಂಬಿಗ ಅದಕ್ಕೆ ವಿವರಣೆ ನೀಡಿದ. ಹಕ್ಕಿಗಳು ಗೂಡುಕಟ್ಟಿರುವ ದ್ವೀಪಗಳಲ್ಲಿ, ಮೊಸಳೆಗಳು ಮರದ ಕೆಳಗೆ ಬಾಯಿ ತೆರೆದಿಟ್ಟುಕೊಂಡು ಮಲಗಿರುತ್ತವೆ. ಹಕ್ಕಿ ಮರಿಗಳು ಕೆಳಗೆ ಬಿದ್ದಾಗ, ಮೊಟ್ಟೆಗಳು ಕೆಳಗೆ ಬಿದ್ದಾಗ ಸ್ವಾಹಾ ಮಾಡುವ ಮೊಸಳೆಗಳು, ಆಗಾಗ ಕಲ್ಲುಗಳನ್ನು ಸಹಾ ತಿನ್ನುತ್ತವೆ ಎಂದ ನಮ್ಮ ಅಂಬಿಗ.
     ನೀರಿನ ಮಧ್ಯೆ ಇರುವ ಬಂಡೆಯೊಂದರ ಮೇಲೆ, ಸುಮಾರು 20ರಿಂದ 30 ಬಣ್ಣದ ಕೊಕ್ಕರೆಗಳು ಸಾಲಾಗಿ ಕುಳಿತು ಬಕಧ್ಯಾನ ಮಾಡುತ್ತಿದ್ದವು. ಮೂರು ಅಡಿ ಎತ್ತರವಿರುವ, ಬಣ್ಣಬಣ್ಣದ ರೆಕ್ಕೆ ಮತ್ತು ಕೊಕ್ಕು ಇರುವ ಆ ಹಕ್ಕಿಗಳ ಪ್ರತಿಬಿಂಬ, ಸಂಜೆಬಿಸಿಲಿನಲ್ಲಿ ಚಂದವಾಗಿ ಕಾಣುತ್ತಿತ್ತು. ದೋಣಿವಿಹಾರ ಮುಗಿಸಿಕೊಂಡು ನಿಧಾನವಾಗಿ ಹಿಂತಿರುಗಲುಪಕ್ರಮಿಸುತ್ತಿರುವಾಗ, ಒಮ್ಮೆಗೇ ನೀರಿನಲ್ಲಿ ಸದ್ದಾಯಿತು. ಏನೆಂದು ಅತ್ತ ತಿರುಗಿದರೆ, ಭಾರೀ ಗಾತ್ರದ ಮೊಸಳೆಯೊಂದು, ವೇಗವಾಗಿ ಆ ಬಂಡೆಯನ್ನು ಏರಿ, ಸಾಲಾಗಿ ಕುಳಿತಿದ್ದ ಕೊಕ್ಕರೆಗಳ ಗುಂಪಿಗೆ ಬಾಯಿ ಹಾಕಿತು. ಹಕ್ಕಿಗಳು ಗಾಬರಿಗೊಂಡು, ರೆಕ್ಕೆಗಳನ್ನು ಬರ ಬರ ಸದ್ದು ಮಾಡುತ್ತಾ ನೆಗೆದು, ಮೊಸಳೆಯ ಬಾಯಿಗೆ ಆಹಾರವಾಗುವನ್ನು ತಪ್ಪಿಸಿಕೊಂಡವು! ಮೊಸಳೆಯಿಂದ ನಾಲ್ಕಾರು ಅಡಿ ಅಂತರದಲ್ಲಿ ಪುನ: ಅಲ್ಲಲ್ಲಿ ಕುಳಿತುಕೊಂಡವು! ಬಾಯಿತೆರೆದದ್ದನ್ನು ಹಾಗೆಯೇ ತೆರೆದ ಸ್ಥಿತಿಯಲ್ಲೇ ಇಟ್ಟುಕೊಂಡು, ಆ ಮೊಸಳೆಯು ಕಲ್ಲು ಬಂಡೆಯಂತೆ ಆ ಬಂಡೆಯ ಮೇಲೆ ಮಲಗಿ ಬಿಸಿಲು ಕಾಯಿಸತೊಡಗಿತು. ಬರೆದಿಟ್ಟ ಚಿತ್ರದಂತಿದ್ದ ಸಂಜೆಯ ಆ ಸುಂದರ ದೃಶ್ಯದ ನಡುವೆ, ಆ ಪ್ರಶಾಂತ ವಾತಾವರಣವನ್ನು ಕಲಕಿದ ಮೊಸಳೆಯ ಈ ಸಾಹಸವು ನಮ್ಮನ್ನು ರೋಮಾಂಚನಗೊಳಿಸಿತು.
     “ಮೊಸಳೆಗಳಿಗೆ ಅದೇನೋ ಒಂದು ಅಭ್ಯಾಸಬಲದ ನೆನಪು ಇರುತ್ತದೆ. ದಿನಕ್ಕೆ ನಾಲ್ಕಾರು ಸಲ ಈ ರೀತಿ ನಿಶ್ಶಬ್ದವಾಗಿ ನೀರಿನಿಂದ ಬಂಡೆಯತ್ತ ನೆಗೆದು, ಸಾಲಾಗಿ ಕುಳಿತ ಹಕ್ಕಿಗಳನ್ನು ತಿನ್ನಲು ಪ್ರಯತ್ನಿಸುತ್ತವೆ. ಗುಂಪಿನಲ್ಲಿ ಕುಳಿತ ಹಕ್ಕಿಗಳು ಗಾಬರಿಯಿಂದ ಡಿಕ್ಕಿ ಹೊಡೆದಾಗ, ಒಮ್ಮೊಮ್ಮೆ ಮೊಸಳೆಗೆ ಆಹಾರವಾಗುವುದು ಇದ್ದೇ ಇದೆ!” ಎಂದು ವಿವರಿಸಿದ ನಮ್ಮ ಅಂಬಿಗ.
       ದೋಣಿವಿಹಾರ ಮುಗಿಸಿಕೊಂಡು, ದಡದಲ್ಲಿರುವ ಉದ್ಯಾನವನದಲ್ಲಿ ಸುತ್ತಾಡುವಾಗಲೂ, ಸನಿಹದ ನೀರಿನಲ್ಲಿ ಹಾರಾಡುವ ಹಕ್ಕಿಗಳ ದರ್ಶನ. ನೆಲದ ಮೇಲೆ, ಹತ್ತಿರದ ಮರಗಳ ಮೇಲೆ ಹಲವಾರು ಹಕ್ಕಿಗಳು ತಮ್ಮ ಚಟುವಟಿಕೆ ನಡೆಸಿದ್ದವು. ಅಪರೂಪಕ್ಕೆ ಬರುವ ಹಕ್ಕಿಗಳನ್ನೂ ಲೆಕ್ಕ ಹಾಕಿಕೊಂಡರೆ, 150ಕ್ಕೂ ಹೆಚ್ಚಿನ ಪ್ರಬೇಧದ ಹಕ್ಕಿಗಳನ್ನು ಇಲ್ಲಿ ಗುರುತಿಸಿದ್ದಾರೆ. ಬಣ್ಣದ ಕೊಕ್ಕರೆ, ತೆರೆದ ಕೊಕ್ಕಿನ ಕೊಕ್ಕರೆ, ಚಮಚೆ ಕೊಕ್ಕಿನ ಕೊಕ್ಕರೆ, ವಿವಿಧ ರೀತಿಯ ಕೊಕ್ಕರೆಗಳು,ರಾತ್ರಿ ಬಕ, ಕಪ್ಪುತಲೆಯ ಐಬೀಸು, ದೊಡ್ಡ ಮಿಂಚುಳ್ಳಿ, ಹಾವು ಹಕ್ಕಿ, ನೀರು ಕಾಗೆ, ಸ್ಟೋನ್ ಪ್ಲೋವರ್, ರಿವರ್ ಟರ್ನ್ ಮೊದಲಾದವುಗಳು ಇಲ್ಲಿ ಕಾಣಸಿಗುತ್ತವೆ. 50 ಜೊತೆ ಹೆಜ್ಜಾರ್ಲೆ ಹಕ್ಕಿಗಳು ಖಾಯಂ ಆಗಿ ಇಲ್ಲಿ ನೆಲಸಿವೆ.   ರಂಗನತಿಟ್ಟಿನಲ್ಲಿ ಎರಡು ಸೀಸನ್ ಇವೆ – 1. ಜೂನ್ ನಿಂದ ನವೆಂಬರ್ 2. ಜನವರಿಯಿಂದ ಅಕ್ಟೋಬರ್. ಭಾರತದಲ್ಲೇ ಅಪರೂಪದ ಪಕ್ಷಿಧಾಮ ರಂಗನತಿಟ್ಟು. (ಚಿತ್ರಗಳು : ಎಂ.ಶಶಿಧರ ಹೆಬ್ಬಾರ ಹಾಲಾಡಿ)