ಹೊಂಬೆಳಕು (ಭಾಗ – 2)

Submitted by Shobha Kaduvalli on Wed, 02/27/2013 - 16:36

“ಸವಿತಾ... ಸವಿತಾ...”  ಯಾರೋ ದೂರದಿಂದ ಕರೆಯುತ್ತಿರುವಂತೆನಿಸಿ ಬೆಚ್ಚಿ ಕಣ್ಣು ತೆರೆದವಳಿಗೆ ಎಲ್ಲಿರುವೆನೆಂಬುದು ಅರಿವಾಗಲು ಕೆಲವು ಕ್ಷಣಗಳೇ ಬೇಕಾಯಿತು.   ದೊಡ್ಡಮ್ಮ ಕೆಳಗಿನಿಂದ ಕರೆಯುತ್ತಿದ್ದರು.  ವಾಚ್ ನೋಡಿದರೆ ಘಂಟೆ 2 ತೋರಿಸುತ್ತಿತ್ತು.  ಕೆಳಗಿಳಿದುಬಂದವಳನ್ನುದ್ದೇಶಿಸಿ ದೊಡ್ಡಮ್ಮ ನುಡಿದರು... “ಮಗಾ ಮುಖ ತೊಳ್ಕಂಡ್ ಬಾ ಉಣ್ಲಕ್ಕು”  ತಲೆಯಾಡಿಸಿ ಬಚ್ಚಲಿಗೆ ಹೋಗಿ ಮುಖ ತೊಳೆದು ಅಡಿಗೆ ಮನೆಗೆ ಬಂದೆ.  ಆಗಲೇ ಬಾಳೆಲೆ ಹಾಕಿ ಅನ್ನ ಬಡಿಸಿದ್ದರು.  ಎಲೆಯಲ್ಲಿದ್ದ ಅನ್ನ ನೋಡಿದವಳಿಗೆ ಜೀವ ಹಾರಿದಂತಾಯಿತು   ನನ್ನ ಎರಡು ಹೊತ್ತಿನ ಊಟಕ್ಕೆ ಸಾಕಾಗುವಂತಿತ್ತು ಅದು. ದೊಡ್ಡಮ್ಮನಿಗೆ ಮೆಲ್ಲಗೆ  “ದೊಡ್ಡಮ್ಮ ಅಷ್ಟು ಹೆಚ್ಚಾಗುತ್ತದೆ.. ಸ್ವಲ್ಪ ತೆಗೆಯಿರಿ” ಎಂದೆ.

“ಹೆಚ್ಚಾತ್ತಿಲ್ಲೆ ಎಂತಿಲ್ಲೆ ... ಸುಮ್ನೆ ಉಣ್ಣಿ ಸವಿತಕ್ಕಾ...” ನೇತ್ರಾಳ ಪ್ರೀತಿ ತುಂಬಿದ ಒತ್ತಾಯ.  ಕರಾವಳಿಯಲ್ಲಿ ಹಸಿವು ಜಾಸ್ತಿ ಎಂದು ನನಗೆ ತಿಳಿದಿತ್ತು.  ಚಿಕ್ಕಿ ಬಿಸಿ ಬಿಸಿ ಸಾರು ಸುರಿದು ಕೊಬ್ಬರಿ ಎಣ್ಣೆ ಎರಡು ಚಮಚ  ಸುರಿದು ಕರಿದ ಸಂಡಿಗೆ ಮೆಣಸಿನಕಾಯಿ ಹಾಕಿದಾಗ ಬಾಯಲ್ಲಿ ನಿರೂರಿತ್ತು.  ಹತ್ತು ನಿಮಿಷದಲ್ಲಿ ಅಷ್ಟೂ ಅನ್ನ  ಖಾಲಿ.  ಮತ್ತೆ ಮಜ್ಜಿಗೆ ಮಾವಿನ ಮಿಡಿ ಉಪ್ಪಿನಕಾಯಿಯೊಂದಿಗೆ ಮತ್ತಷ್ಟು ಅನ್ನ ಹೊಟ್ಟೆಗಿಳಿದಾಗ ಹೊಟ್ಟೆ ಭಾರವಾಗಿ ತೂಕಡಿಕೆ ಆರಂಭವಾಯಿತು.

 “ಸವಿತಕ್ಕಾ ...ಉಪ್ಪರಿಗೆ ಮೇಲೆ ಹಾಸಿಗೆ ಹಾಸಿದ್ದೆ.  ಹೋಯಿ  ಮನಿಕ್ಕಣಿ.  ಬೈಸರಿಗೆ ಗದ್ದೆ, ತೋಟ ಎಲ್ಲ ಕಂಡ್ಕಂಡ್ ಬಪ್ಪ..” ನೇತ್ರ ಉಂಡ ಜಾಗವನ್ನು ಹಾಳೆ ಕಡ್ಡಿಯಿಂದ ಸಾರಿಸುತ್ತಾ ನುಡಿದಾಗ  “ನೀನು ಮಲಗುವುದಿಲ್ಲವಾ?” ಎಂದೆ, ಅವಳು ಸಾರಿಸುವುದನ್ನೇ ನೋಡುತ್ತಾ.  ಅದು ಹೇಗೆ ಚೂರೂ ಸಗಣಿ ಉಳಿಯದಂತೆ ಸಾರಿಸುತ್ತಾರೋ ನನಗೆ ಆಶ್ಚರ್ಯವಾಗುತ್ತಿತ್ತು.  ಅಮ್ಮ ಊರಿಂದ ಬರುವಾಗಲೆಲ್ಲ ಹಾಳೆ ಕಡ್ಡಿ ತರುತ್ತಿದ್ದರು.  ಆದರೆ ಎಷ್ಟು ಪ್ರಯತ್ನ ಪಟ್ಟರೂ ನಮಗ್ಯಾರಿಗೂ ಸಾರಿಸುವುದಕ್ಕೆ ಬರುತಿರಲಿಲ್ಲ.  ಮಧ್ಯೆ ಮಧ್ಯೆ ಚೂರಾದರೂ ಸಗಣಿ ಉಳಿದುಕೊಳ್ಳುತ್ತಿತ್ತು.

 “ಸಾರಿಸಿ ಆಪೂಕೂ ನಾನೂ ಬತ್ತೆ” ಎಂದು ಅವಳು ಮರುನುಡಿದಾಗ ಉಪ್ಪರಿಗೆ ಏರಿದೆ.  ಬೆಳಿಗ್ಗೆ ಸರಿಯಾಗಿ ನೋಡಿರಲಿಲ್ಲ, ಉಪ್ಪರಿಗೆ ಎಂದರೆ ಎರಡು ಕೋಣೆ ಅಷ್ಟೆ.  ಎರಡು ದಾರಂದ ಇತ್ತು.  ಆದರೆ ಬಾಗಿಲು ಇರಲಿಲ್ಲ.  ಎರಡು ಕೋಣೆಗಳ ನಡುವೆಯೂ ಅಷ್ಟೆ ಗೋಡೆ ಕಟ್ಟಿರಲಿಲ್ಲ. ಒಂದೊದು ದಿಕ್ಕಿಗೂ ಒಂದೊಂದು ಕಿಟಕಿ.  ಗಾಳಿ ಬೆಳಕು ಧಾರಾಳವಾಗಿ ಒಳ ಬರುತ್ತಿತ್ತು.  ನಾನು ಚಾಪೆಯ ಮೇಲೆ ಕುಳಿತೇ ಅವಲೋಕಿಸುತ್ತಿರುವಂತೆಯೇ ನೇತ್ರ ಒಳಬಂದವಳೇ ಚಾಪೆಯ ಮೇಲೆ ಉರುಳಿಕೊಂಡಳು.  ಚಾಪೆಗೆ ಬೆನ್ನು ಕೊಡುತ್ತಿದ್ದಂತೆಯೇ ನಿದ್ರಾ ದೇವಿ ನಮ್ಮನ್ನಾಲಂಗಿಸಿದಳು.

  ಸಾಯಂಕಾಲ ಎದ್ದು ಮುಖ ತೊಳೆದು ಬರುವಷ್ಟರಲ್ಲೇ ದೊಡ್ಡಮ್ಮ ಕಾಫಿಯೊಂದಿಗೆ ಹಲಸಿನ ಹಪ್ಪಳ ಕೆಂಡದ ಮೇಲೆ ಸುಟ್ಟು ಕೊಬ್ಬರಿ ಎಣ್ಣೆ ಸವರಿ ತಯಾರಾಗಿಟ್ಟಿದ್ದರು.  “ಬೆಂಗ್ಳೂರಾಗೆ ಇದೆಲ್ಲ ಸಿಕ್ಕತ್ತಾ ಮಗಾ..?” ಎಂಬ ಅವರ ಪ್ರಶ್ನೆಗೆ’ ಬೆಂಗಳೂರಲ್ಲಿ ದುಡ್ಡೊಂದಿದ್ದರೆ ಎಲ್ಲಾ ಸಿಕ್ಕುತ್ತದೆ...’ ಎಂದುಕೊಂಡು ಸುಮ್ಮನೆ ನಕ್ಕೆ.  “ಮಗಾ...ನೀ ಎಂತಕ್ ಮಾತೇ ಆಡ್ತಿಲ್ಲೆ ...ಮಾತಾಡ್ತಿದ್ರೆ ಹಳೇ ನೆನಪೆಲ್ಲ ಮರಯೂಕಾತ್  ಅಲ್ದಾ..., ನಾನ್ ನಿನ್ನಷ್ಟ್ ಕಲ್ತಿಲ್ಲೆ ಮಗಾ... ಹೋದವ್ರ್ ಹಿಂದೆ ನಾವ್ ಹೊಪ್ಕಾತ್ತಾ...?”  ಎಂದಾಗ ಹೌದು ಎಂಬಂತೆ ತಲೆ ಆಡಿಸುತ್ತಿದ್ದಂತೆ ನೇತ್ರ ಬಂದಳು.  ಇಬ್ಬರೂ ಗದ್ದೆ, ತೋಟ ನೋಡಲು ಹೊರಟೆವು.  ಹೊಂಬಣ್ಣದ ಭತ್ತದ ಫಸಲು ಕೊಯ್ಲಿಗೆ ತಯಾರಾಗಿ ನಿಂತಿತ್ತು. 

 “ನಾರಾಯಣಾ... ಓ ನಾರಾಯಣ ... ಎಂತ ಮಾರಾಯ ಎಲ್ಲ ಕಡೆ ಕೊಯ್ಲ್ ಆಯ್ತಂಬ್ರಲೇ... ಇಂವ ಎಂತಕಾ ಸುಮ್ನಿದ್ದಾ ..?” ನೇತ್ರ ಅಲ್ಲೇ ಏನೋ ಕೆಲಸ ಮಾಡುತ್ತಿದ್ದ ಒಕ್ಕಲನ್ನು ಕೇಳಿದಳು.    

 “ಎಂತ ಹೇಳೂದ್ ನೇತ್ರಮ್ಮ, ಪದ್ನಾಭಟ್ರ್ ಬೀಜ ಬಿತ್ತಿದ್ದೇ   ಒಂದ್ ತಿಂಗ್ಳ್ ತಡ... ಕಡಿಗ್ ನೀರ್  ಸಮಾ ಬಿಟ್ಟಿಲ್ಲೆ ... ಭತ್ತ ಕಾಣಿ.... ಎಲ್ಲ ಚಟ್ಟು”.

“ಹಂಗಾರೆ ಜನ  ಹಾಕಿ ಕೆಲಸ ಮಾಡ್ಸೂಕ್ ಆತ್ತಿಲ್ಯಾ ಅವ್ನಿಗೆ .... ಅವ್ಳಿಗಾರೂ ಹೇಳೂಕಾತ್ತಿಲ್ಯ...ಎಂತ ನಾರಾಯ್ಣ ನೀನಾರೂ ಹೇಳೂಕಾಗ್ದ ಕಾಂಬ....ನಂಗ್ ಎಂತಕ್ಕೆ ? ಇಲ್ಕಾಣಿ ಸವಿತಕ್ಕ, ಅವ್ನಿಗ್ ಬೀಜ ಸಿಕ್ಕಿದ್ದೇ ತಡ ಅಂಬ್ರು.  ಬೀಜ ಸಿಕ್ಕೂಕು ಅವ್ನಿಗ್ ಹೊಟ್ಟೆ ನೋವು ಶುರು ಅಯ್ತಂಬ್ರು...ಕಡೀಗ್ ಬೀಜ ಬಿತ್ತೂಷ್ಟ್ರಾಗ್ ಒಂದು ತಿಂಗ್ಳ್  ಆಯಾತಂಬ್ರು .. ಬಂದಷ್ಟಾರೂ ಕೊಯ್ಲ್ ಮಾಡ್ಸುಕಾತ್ತಿಲ್ಯ ಹಂಗಾರೆ... ಅದ್ನೂ ಹೇಳ್ಕಾ... ಹೇಳಿ ಕಾಂಬ?... ಹಳ್ತಿನ್ ಕಾಲಕ್  ಮದಿ ಆಪ್ಕಾಗ್ದೆ ... ಅದರಲ್ಲೂ ಸಣ್ಣ ವಯಸ್ಸಿನ್ ಹೆಣ್ಣಿನ್ ಮಾಡ್ಕಂಬ್ಕಾಗ... ಮಾಡ್ಕಂಡ್ರೆ .. ಅಣ್ಣಯ್ಯನ್ ಕಣೆಗಾತ್ರ್... ಕಾಣಿ...ಅಲ್ದೇ..”

ನಾನೇನು ಹೇಳಬಹುದು?... ಅಲ್ಪ ಸಮಯದಲ್ಲೇ ನಾನು ಗಮನಿಸಿದ ಸಂಗತಿ ಎಂದರೆ ಅವಳಿಗೆ ಅಣ್ಣ ಅತ್ತಿಗೆಯರ ಮೇಲೆ ಅಸಹನೆ.  ಅವಳ ಪ್ರತಿಯೊಂದು ಮಾತು, ನಡತೆಯಿಂದ ಅದು ವ್ಯಕ್ತವಾಗುತ್ತಿತ್ತು.  ಅಣ್ಣನಿಗೆ ಮುಖ ಕೊಟ್ಟು ಮಾತನಾಡುತ್ತಿರಲಿಲ್ಲ ಅವಳು.  ಇನ್ನು ಅತ್ತಿಗೆಯಂತೂ ಸರಿಯೇ ಸರಿ.  ಇವಳಿಗಿಂತ 5 – 6 ವರ್ಷಕ್ಕೆ ಕಿರಿಯಳು ಅವಳು.  ಜೊತೆಗೆ ಈಗ 7 ತಿಂಗಳ ಗರ್ಭಿಣಿ.   ದೊಡ್ಡಪ್ಪ ಇರುವವರೆಗೆ ಇವಳದೇ ಯಜಮಾನಿಕೆ.. ಈಗ ಅದು ತಪ್ಪಿದ್ದೇ ಈ ಅಸಹನೆಗೆ ಮೂಲ ಕಾರಣ ಎಂದು ತಿಳಿಯದಷ್ಟು ಪೆದ್ದಿ ನಾನಲ್ಲ.  ದೊಡ್ಡಪ್ಪ ಸಾಯುವ ಮೊದಲು ಆಸ್ತಿ ಭಾಗ ಮಾಡಿದ್ದರೆ ಈ ತಾಪತ್ರಯವಿರುತ್ತಿರಲಿಲ್ಲ.  ಆದರೆ ಅವರು ವಿಲ್ ಬರೆಯದೆ ಸತ್ತರು.  ಪದ್ಮನಾಭನಿಗೆ ಆಸ್ತಿ ಭಾಗ ಮಾಡಲು ಮನಸ್ಸಿದೆಯೋ ಇಲ್ಲವೋ ಅವನಂತೂ ಯಾವುದನ್ನೂ ಮನಸ್ಸು ಬಿಚ್ಚಿ ಹೇಳುತ್ತಿರಲಿಲ್ಲ.  ದೊಡ್ಡಮ್ಮನ ಮಾತಿಗೆ  ಆ ಮನೆಯಲ್ಲಿ  ಕವಡೆ ಕಾಸಿನ ಬೆಲೆಯಿಲ್ಲ.  ಅಷ್ಟಕ್ಕೂ ಆಸ್ತಿ ಭಾಗ ಮಾಡಿದರೂ ಎರಡು ಪಾಲು ಮಾಡಬೇಕಾಗುತ್ತದೆ.  ಅರ್ಧ ಪಾಲು ಚಿಕ್ಕಿಗೆ, ಉಳಿದರ್ಧ ಪಾಲು ಅಣ್ಣಯ್ಯನಿಗೆ.  ಅಣ್ಣಯ್ಯನ ಪಾಲಿನ ಆಸ್ತಿಯಲ್ಲಿ ಅರ್ಧ ನೇತ್ರಳಿಗೆ ಸಿಗುತ್ತದೆ ಅಷ್ಟೇ..... ನನಗೇಕೆ ಆ ವಿಚಾರ?  ತಲೆ ಕೆಡಿಸಿಕೊಳ್ಳುವುದಕ್ಕೆ ಬೇರೆ ವಿಷಯಗಳು ನನಗೆ ಸಾಕಷ್ಟಿದ್ದವು.  ತಲೆ ಕೊಡವಿಕೊಂಡು ಸುತ್ತ ದೃಷ್ಟಿ ಹರಿಸಿದೆ..  ಕಣ್ಣು ಹಾಯಿಸಿದಷ್ಟು ದೂರವೂ ಭತ್ತದ ಗದ್ದೆ... ಬಾಳೆಯ, ತೆಂಗಿನ ತೋಟ ಕಣ್ಮನ ಸೆಳೆಯುತ್ತಿದ್ದವು. 

ನೇತ್ರಳ ತಂದೆ ಆನಂದ ಭಟ್ಟರು – ನಾನು ಅವರನ್ನು  ನೋಡಿದ್ದೇ ಇಲ್ಲ ಎನ್ನಬಹುದು.  ನಾನು ಅವರನ್ನು ಮೊದಲಬಾರಿ ನೋಡಿದ್ದು ನಾಲ್ಕೈದು ವರ್ಷಗಳ ಹಿಂದೆ.  ಅದೇ ಮೊದಲು, ಅದೇ ಕಡೆ  ನಾನವರನ್ನು ನೋಡಿದ್ದು.  ನಾನಾಗ ನನ್ನ ತಂದೆಯ ಅಣ್ಣನ ಮಗಳು ಗಾಯತ್ರಿಯೊಟ್ಟಿಗೆ ನಮ್ಮ ಊರಿಗೆ ಬಂದಿದ್ದೆ.  ನಮ್ಮ ತಂದೆಯ ದೊಡ್ಡ ಅಣ್ಣ ಊರಿನಲ್ಲೇ ಗದ್ದೆ ತೋಟ ನೋಡಿಕೊಂಡಿದ್ದರು.  ನಾವೆಲ್ಲಾ ವರ್ಷಕ್ಕೊಂದು ಬಾರಿ ಊರಿಗೆ ಬರುವ ಪರಿಪಾಠವಿತ್ತು.  ಹಾಗೆ ನಾನು ಮತ್ತು  ಗಾಯತ್ರಿ ಇಬ್ಬರೂ ಅಜ್ಜಯ್ಯನ ಮನೆಗೆ ಬಂದಿದ್ದೆವು.   ರಾಜೀವಿ ದೊಡ್ಡಮ್ಮನ ಮನೆ  ಅಲ್ಲಿಂದ ಸುಮಾರು ಏಳೆಂಟು ಕಿಲೋ ಮೀಟರ್ ದೂರದಲ್ಲಿತ್ತು.  ಸೀತಾ ದೊಡ್ಡಮ್ಮ – ನಮ್ಮ ದೊಡ್ಡ ದೊಡ್ಡಮ್ಮ – ನಮ್ಮಿಬ್ಬರನ್ನೂ ಕರೆದುಕೊಂಡು ಹೊರಟರು.  ಅವರಿಗೂ ಸಹ ರಾಜೀವಿ ದೊಡ್ಡಮ್ಮನ ಮನೆಯವರ ಪರಿಚಯ ಅಷ್ಟಾಗಿ ಇರಲಿಲ್ಲ.  ಬಸ್ಸಿನಿಂದಿಳಿದಾಗ, ಅಲ್ಲೇ ಇದ್ದ ಹೋಟೆಲೊಂದರ ಹತ್ತಿರ ನಿಂತಿದ್ದ ವ್ಯಕ್ತಿಯೊಬ್ಬರ ಹತ್ತಿರ ನಾನು ದೊಡ್ದಪ್ಪನ ಹೆಸರು ಹೇಳಿ ಅವರ ಮನೆಗೆ ಹೇಗೆ ಹೋಗಬೇಕು ಎಂದು ಕೇಳಿದ್ದೆ.... ಆದರೆ ತಮಾಷೆ ಎಂದರೆ ಅವರೇ ನನ್ನ ದೊಡ್ಡಪ್ಪ ಎಂದು ತಿಳಿದಾಗ ನನಗೆ ನಗಬೇಕೋ ಅಳಬೇಕೋ ತಿಳಿಯದಾಗಿತ್ತು.  ಹಾಗೆಯೇ “ಎಳ್ಳು ನೀರು – ಎಳನೀರು” ನಗುವಂತಹ ಘಟನೆ ಸಹಾ ಆಗ ನಡೆದಿತ್ತು.  ತಮ್ಮ ಪರಿಚಯ ಹೇಳಿಕೊಂಡ  ದೊಡ್ಡಪ್ಪ ನಮ್ಮನ್ನು ಹಾಗೇ ಕಳಿಸಿರಲಿಲ್ಲ... ಅದೇ ಹೋಟೆಲಿಗೆ ಕರೆದುಕೊಂಡು ಹೋಗಿದ್ದರು.  ಹೋಟೆಲ್ ಎಂದರೆ ಬೆಂಗಳೂರಿನ ಭವ್ಯ ಹೋಟೆಲ್ ನೆನಪಿಸಿಕೊಳ್ಳಬೇಡಿ... ಅದೊಂದು ದೊಡ್ಡ ಹಳ್ಳಿ ಮನೆ,  ಮನೆಯ ಮುಂಭಾಗದಲ್ಲೇ ಎರಡು ಟೇಬಲ್ ಮತ್ತು ಆರೆಂಟು ಕುರ್ಚಿಗಳನ್ನು ಹಾಕಿ ಹೋಟೆಲ್ ನಂತೆ ಪರಿವರ್ತಿಸಲಾಗಿತ್ತು.  ದೊಡ್ಡಪ್ಪ  “ಮಕ್ಳೇ  ಎಳ್ನೀರ್ ಕುಡೀತ್ರ್ಯಾ?” ಎಂದು ನಮ್ಮನ್ನು ಕೇಳಿಯೇ ತರಿಸಿದ್ದರು.  ತಂಬಿಗೆಯಲ್ಲಿ ಬಂದ ಎಂತದೋ ತಣ್ಣನೆಯ ಪಾನೀಯವನ್ನು ನಾನಂತೂ ಹೊಟ್ಟೆ ತುಂಬಾ ಕುಡಿದಿದ್ದೆ.  ಬಿಸಿಲಿಗೆ ಹಿತವಾಗಿದ್ದು ತುಂಬಾ ರುಚಿಯಾಗಿತ್ತದು.  “ಎಳ್ನೀರ್” ಅಂದರೆ “ಬೊಂಡ’ (ಎಳನೀರು) ಎಂದು ಅರ್ಥೈಸಿಕೊಂಡ ಗಾಯತ್ರಿ ಕಾದಿದ್ದೇ ಬಂತು,  ಸೀತಾ ದೊಡ್ಡಮ್ಮ ಅದು “ಬೊಂಡ’ಅಲ್ಲ ಮಗಾ, ಎಳ್ಳನ್ನು ಅರೆದು ಬೆಲ್ಲ ಹಾಕಿ ತಯಾರಿಸಿದ ಪಾನಕ ಎಂದು ವಿವರಿಸಿ ಹೇಳಿದಾಗ ಹಳಹಳಿಸಿದ್ದಳು.   

Rating
No votes yet