ಹೀರೇ ಕಾಯಿ ಸಿಪ್ಪೆಯ ಚಟ್ನಿ
ಹೀರೇಕಾಯಿ ಸಿಪ್ಪೆ – 1 ಕಪ್, ತೆಂಗಿನ ತುರಿ – ½ ಕಪ್, ಬ್ಯಾಡಗಿ ಮೆಣಸಿನ ಕಾಯಿ – ಖಾರಕ್ಕೆ ತಕ್ಕಂತೆ, ಉದ್ದಿನ ಬೇಳೆ – ¼ ಕಪ್, ಹುಣಿಸೆ ಹಣ್ಣು – 1 ಸಣ್ಣ ನೆಲ್ಲಿ ಗಾತ್ರ, ಉಪ್ಪು – ರುಚಿಗೆ ತಕ್ಕಂತೆ, ಎಣ್ಣೆ – 1 ಚಮಚ ... ಒಗ್ಗರಣೆಗೆ : ಎಣ್ಣೆ – 2 ಚಮಚ, ಸಾಸಿವೆ – ¼ ಚಮಚ, ಒಣ ಮೆಣಸಿನ ಕಾಯಿ - 4 ಅಥವಾ 5 ತುಂಡುಗಳು, ಕರಿಬೇವಿನ ಎಸಳು – 4 – 5, ಇಂಗು – 1 ಚಿಟಿಕೆ.
ದಪ್ಪ ತಳವಿರುವ ಬಾಣಲೆಗೆ ಎಣ್ಣೆ ಹಾಕಿ ಸ್ಟೌ ಮೇಲಿಡಿ. ಎಣ್ಣೆ ಬಿಸಿಯಾದ ನಂತರ ಉದ್ದಿನ ಬೇಳೆ ಹಾಕಿ ಹುರಿದು ಒಂದು ತಟ್ಟೆಗೆ ತೆಗೆದಿಟ್ಟುಕೊಳ್ಳಿ. ನಂತರ ಬಾಣಲೆಗೆ ಬ್ಯಾಡಗಿ ಮೆಣಸಿನ ಕಾಯಿ ಹಾಕಿ ಹುರಿಯಿರಿ. ಅರ್ಧ ಹುರಿದಾದಾಗ ಹೀರೇಕಾಯಿ ಸಿಪ್ಪೆ ಹಾಕಿ ಬಾಡಿಸಿ. ನಂತರ ಬಾಡಿಸಿದ ಹೀರೇಕಾಯಿ ಸಿಪ್ಪೆ, ಮೆಣಸಿನಕಾಯಿ, ತೆಂಗಿನ ತುರಿ, ಉಪ್ಪು ಮತ್ತು ಹುಣಿಸೆ ಹಣ್ಣು, ಇವೆಲ್ಲವನ್ನೂ ಮಿಕ್ಸಿಗೆ ಹಾಕಿ ತಿರುವಿಕೊಳ್ಳಿ. ಪೂರಾ ನುಣ್ಣಗಾಗುವ ಮೊದಲು ಹುರಿದ ಉದ್ದಿನ ಬೇಳೆ ಹಾಕಿ ತರಿತರಿಯಾಗಿ ತಿರುವಿ ಒಂದು ಬೌಲಿಗೆ ಬಗ್ಗಿಸಿಕೊಳ್ಳಿ. ನಂತರ ಮೇಲೆ ಹೇಳಿದ ಒಗ್ಗರಣೆ ಪದಾರ್ಥಗಳನ್ನು ಹಾಕಿ ಒಗ್ಗರಣೆ ಮಾಡಿ. ರುಚಿ ರುಚಿಯಾದ ಚಟ್ನಿ ರೆಡಿ..... ಬಿಸಿ ಬಿಸಿ ಅನ್ನ, ಕೊಬ್ಬರಿ ಎಣ್ಣೆಯೊಂದಿಗೆ ಈ ಚಟ್ನಿಯನ್ನು ಕಲೆಸಿಕೊಂಡು ತಿನ್ನಲು ಬಲು ರುಚಿಯಾಗಿರುತ್ತದೆ... ಸೂಚನೆ : ಸೀಮೆ ಬದನೆ ಕಾಯಿಯ ಸಿಪ್ಪೆಯಿಂದಲೂ ಮೇಲೆ ಹೇಳಿದ ವಿಧಾನದಲ್ಲಿ ಚಟ್ನಿಯನ್ನು ಮಾಡಬಹುದು.
Comments
ಹೀರೇಕಾಯಿ ಸಿಪ್ಪೆಯ ಚಟ್ನಿ ಎಂಬುದು
ಹೀರೇಕಾಯಿ ಸಿಪ್ಪೆಯ ಚಟ್ನಿ ಎಂಬುದು ನಮಗೆಲ್ಲ ಕೇಳಿರದ ಸಂಗತಿ. ಒಮ್ಮೆ ದೋಸೆಗೆ ಮಾಡಿದ ಚಟ್ನಿ ವಿಚಿತ್ರವಾಗಿದ್ದು ಏನೆಂದು ವಿಚಾರಿಸಲಾಗಿ ಅದು ಹೀರೇಕಾಯಿ ಸಿಪ್ಪೆಯ ಚಟ್ನಿ ಎಂಬುದು ತಿಳಿದುಬಂತು. ತರಕಾರಿ ಸಿಪ್ಪೆಯ ಚಟ್ನಿಗಳ ಬಗ್ಗೆ ಕೇಳಿ ಆಶ್ಚರ್ಯಪಟ್ಟಿದ್ದೆ.
ಬೆಂಗಳೂರಲ್ಲಿ ಈಗ ಔಷಧಿ ಹೊಡೆಯದ ತರಕಾರಿ ಸಿಗುವುದು ವಿರಳವಾದ್ದರಿಂದ ಸಿಪ್ಪೆಯ ಚಟ್ನಿ ಮಾಡುವ ಸಾಹಸಕ್ಕೆ ಕೈಹಾಕಿದವರು ಬಹುಶಃ ತರಕಾರಿಯನ್ನು ಚೆನ್ನಾಗಿ ತೊಳೆದು ಉಪಯೋಗಿಸುವುದು ಒಳ್ಳೆಯದು! :-)
In reply to ಹೀರೇಕಾಯಿ ಸಿಪ್ಪೆಯ ಚಟ್ನಿ ಎಂಬುದು by hpn
ಹೌದು ಸರ್ ನೀವು ಹೇಳಿದ್ದು ಸರಿ.
ಹೌದು ಸರ್ ನೀವು ಹೇಳಿದ್ದು ಸರಿ. ಸಾಧಾರಣವಾಗಿ ಎಲ್ಲರೂ ತರಕಾರಿಯನ್ನು ತೊಳೆದೇ ಉಪಯೋಗಿಸುತ್ತಾರಾದ್ದರಿಂದ ಬರೆಯಲಿಲ್ಲ.
In reply to ಹೌದು ಸರ್ ನೀವು ಹೇಳಿದ್ದು ಸರಿ. by Shobha Kaduvalli
ಏನು ಜನಾರಿ..ಸಿಪ್ಪೇನೂ ದನಕ್ಕೆ
ಏನು ಜನಾರಿ..ಸಿಪ್ಪೇನೂ ದನಕ್ಕೆ ಬಿಡುವುದಿಲ್ಲ! ಹೀರೆ, ಸೀಮೆಬದನೆ ಸಿಪ್ಪೆ ಚಟ್ನಿ ಚೆನ್ನಾಗಿರುತ್ತದೆ. ಕಿತ್ತಳೆ ಸಿಪ್ಪೆ ಚಟ್ನಿ ಸಹ ಮಾಡುವರು.