ಕೃಷಿಯಿಂದ ನೆಮ್ಮದಿಯ ಬದುಕು ನಡೆಸಿದ ಅಡ್ಡೂರು ಶಿವಶಂಕರ ರಾಯರು

ಕೃಷಿಯಿಂದ ನೆಮ್ಮದಿಯ ಬದುಕು ನಡೆಸಿದ ಅಡ್ಡೂರು ಶಿವಶಂಕರ ರಾಯರು

ಅಡ್ಡೂರು ಕೃಷ್ಣ ರಾವ್ ಅವರ ಉದಯವಾಣಿ ಬೆಂಗಳೂರು ‍ಆವೃತ್ತಿಯ "‍ಬಹುಧಾನ್ಯ" ಅಂಕಣದಲ್ಲಿ  ಮಾರ್ಚ್ ‍೪, ೨೦೧೩ ರಂದು ಪ್ರಕಟವಾದ, ಅಡ್ಡೂರು ಶಿವಶಂಕರ ರಾಯರ ಬಗೆಗಿನ ಲೇಖನವನ್ನು, ಅವರಿಂದ ಪಡೆದು ಸಂಪದದಲ್ಲಿ ಪ್ರಕಟಿಸುತ್ತಿದ್ದೇವೆ.

- ನಿರ್ವಹಣೆ ತಂಡ

 ಮಂಗಳೂರಿನಿಂದ ೨೦ ಕಿಮೀ ದೂರದ ಅಡ್ಡೂರಿನಲ್ಲಿ ಕೃಷಿಯನ್ನೇ ನಂಬಿ ಬದುಕಿದ್ದ ನನ್ನ ತಂದೆ ಅಡ್ಡೂರು ಶಿವಶಂಕರ ರಾಯರು ಇನ್ನಿಲ್ಲ. ತೊಂಬತ್ತೊಂದು ವರುಷಗಳ ತುಂಬು ಬದುಕು ಮುಗಿಸಿ, ೧೯ ಫೆಬ್ರವರಿ ೨೦೧೩ರಂದು ಅವರು ವಿಧಿವಶರಾದರು.

ಕೃಷಿಯನ್ನೇ ನಂಬಿ ನೆಮ್ಮದಿಯಿಂದ ಬದುಕಬಹುದೆಂದು ತೋರಿಸಿಕೊಟ್ಟವರು ಶಿವಶಂಕರ ರಾಯರು. ಆ ನೆಮ್ಮದಿಗೆ ಕಾರಣ ಅವರ ಸರಳ ಜೀವನ. ನಾನು ಕಂಡಾಗಿನಿಂದಲೂ ಅವರ ಉಡುಪು ಖಾದಿಯ ಅರೆತೋಳಿನ ಷರಟು ಮತ್ತು ಬಿಳಿ ಮುಂಡು. ಯಾವಾಗಲೂ ಹೆಗಲಿಗೊಂದು ಚೀಲ, ಕೈಯಲ್ಲೊಂದು ಕೊಡೆ. ಇದಕ್ಕಿಂತ ಹೆಚ್ಚಾಗಿ ಏನನ್ನೂ ಬಯಸಿದವರಲ್ಲ. ತನಗೊಂದು ರೇಡಿಯೋ ಸಾಕು, ಟಿವಿ ಬೇಡ ಎಂದವರು. ಇದ್ದದ್ದರಲ್ಲೇ ತೃಪ್ತಿ ಪಟ್ಟವರು. ಊಟಕ್ಕೆ ಅನ್ನವಾದರೆ ಅನ್ನ, ಗಂಜಿಯಾದರ ಗಂಜಿ. ತನ್ನ ಪಾಲಿನ ಜಮೀನು ಕಳಕೊಂಡರೇ ವಿನಃ ಹೊಸದಾಗಿ ಖರೀದಿಸಲಿಲ್ಲ.

ಅವರ ನೆಮ್ಮದಿಗೆ ಇನ್ನೊಂದು ಕಾರಣ, ಕೊಡುವುದರಲ್ಲಿ ಅವರು ಕಂಡುಕೊಳ್ಳುತ್ತಿದ್ದ ಸಂತೋಷ. ಕೃಷಿಕರಿಗೆ ಉಪಯುಕ್ತ ಮಾಹಿತಿ ನೀಡಲಿಕ್ಕಾಗಿ ಹಾಗೂ ವಿಚಾರ ವಿನಿಮಯಕ್ಕಾಗಿ ಕೃಷಿಕ ಮಿತ್ರರೊಂದಿಗೆ ಸೇರಿ ಅವರು ಹುಟ್ಟು ಹಾಕಿದ ವೇದಿಕೆ “ಕೃಷಿ ಅನುಭವ ಕೂಟ”. ೧೯೬೫ರಿಂದ ೧೯೮೫ರ ವರೆಗೆ ೨೦ ವರುಷಗಳ ಅವಧಿಯಲ್ಲಿ, ಈ ವೇದಿಕೆಯ ಆಶ್ರಯದಲ್ಲಿ ಹಲವಾರು ಕಾರ್ಯಕ್ರಮಗಳನ್ನು ಜರಗಿಸಿ, ನೂರಾರು ಕೃಷಿಕರಿಗೆ ಅಮೂಲ್ಯ ಮಾಹಿತಿ ಹಂಚಿದರು. ದಕ್ಷಿಣ ಕನ್ನಡದ ಕೃಷಿಕರಲ್ಲಿ ಪ್ರಗತಿಪರ ಧೋರಣೆ ಬೆಳೆಸಲು ಕೃಷಿ ಅನುಭವ ಕೂಟ ನೀಡಿದ ಕೊಡುಗೆಗೆ ಬೆಲೆ ಕಟ್ಟಲಾಗದು.



ಅಡ್ಡೂರು ಶಿವಶಂಕರ ರಾಯರು ಭತ್ತದ ವಿವಿಧ ತಳಿಗಳ ಮತ್ತು ಹೊಸ ಬೆಳೆಗಳ ಬೀಜಗಳನ್ನು ನೂರಾರು ಕೃಷಿಕರಿಗೆ ಹಂಚಿದ್ದಾರೆ. ನಾಲ್ಕು ನೂರಕ್ಕೂ ಅಧಿಕ ಗಂಗಬೊಂಡ ತೆಂಗಿನ ಸಸಿಗಳನ್ನು ಅತೀ ಕಡಿಮೆ ಬೆಲೆಗೆ ಒದಗಿಸಿದ್ದಾರೆ. ಅವನ್ನು ಅವರು ಇಮ್ಮಡಿ ಬೆಲೆಗೆ ಮಾರಲು ಸಾಧ್ಯವಿತ್ತು. ಆದರೆ ಒಂದು ರೂಪಾಯಿ ಬೆಲೆ ಏರಿಸಲಿಕ್ಕೂ ಅವರು ತಯಾರಿರಲಿಲ್ಲ. ತನ್ನ ಮನೆಗೆ ಬಂದವರಿಗೆ ಅವರಂತೆ ಎಳನೀರು ಕೊಟ್ಟು ಸತ್ಕರಿಸುವ ಯಾರನ್ನೂ ನಾನು ಕಂಡಿಲ್ಲ.

ಪುಸ್ತಕಗಳ ವಿಚಾರದಲ್ಲಂತೂ ಅವರು ಕೊಡುಗೈ ದಾನಿ. ಮದುವೆಮುಂಜಿ ಇತ್ಯಾದಿ ಸಮಾರಂಭಗಳಲ್ಲಿ ಅವರು ಉಡುಗೊರೆಯಾಗಿ ಕೊಡುತ್ತಿದ್ದದ್ದು ಪುಸ್ತಕಗಳನ್ನು. ಕಾರಿನಲ್ಲಿ ಅಡ್ಡೂರಿಗೆ ಬರುತ್ತಿದ್ದ ಹಲವರು, ಇವರು ತೋರಿಸಿದ ಪುಸ್ತಕದ ಪುಟ ತಿರುಗಿಸಿ ನೋಡಿ, “ಇದನ್ನು ಓದಿ ಕೊಡುತ್ತೇನೆ” ಎಂದಾಗ, ಕೊಟ್ಟು ಬಿಡುತ್ತಿದ್ದರು (“ಇಂಥಲ್ಲಿ ಖರೀದಿಸಿ” ಎನ್ನುತ್ತಿರಲಿಲ್ಲ.) ಹಾಗೆ ಇವರು ಕಳೆದುಕೊಂಡ ಪುಸ್ತಕಗಳ ಲೆಕ್ಕ ಇಟ್ಟವರಿಲ್ಲ.

ಅಡ್ಡೂರಿಗೆ ವಿದ್ಯುತ್ ಸಂಪರ್ಕಕ್ಕಾಗಿ ಕರ್ನಾಟಕ ವಿದ್ಯುತ್ ಮಂಡಳಿಯವರಿಗೆ ಟ್ರಾನ್ಸ್ ಫಾರ್ಮರ್ ಹಾಕಲು ಸೂಕ್ತ ಜಾಗ ಬೇಕಾಗಿತ್ತು. ಆದರೆ ಜಾಗ ಒದಗಿಸಲು ಅಡ್ಡೂರಿನಲ್ಲಿ ಯಾರೂ ಮುಂದೆ ಬರಲಿಲ್ಲ. ಆ ಸಂದರ್ಭದಲ್ಲಿ “ಊರಿಗೆ ಕರೆಂಟ್ ಬರಲಿ” ಎಂಬ ಭಾವದಿಂದ, ತಮ್ಮ ಕುಟುಂಬದ ಮುಳಿಪಡ್ಪು ಎಂಬ ಜಾಗವನ್ನು ಅದಕ್ಕಾಗಿ ಒದಗಿಸಿದವರು ಶಿವಶಂಕರರಾಯರು. ಒಂದಿಂಚು ಜಾಗಕ್ಕಾಗಿ ಇಂದು ರಕ್ತಪಾತ ನಡೆಯುವುದನ್ನು ನಾವು ಕಾಣುತ್ತಿದ್ದೇವೆ. ಹಾಗಿರುವಾಗ, ಊರಿನ ರಸ್ತೆಗಾಗಿ ತನ್ನ ತೆಂಗಿನ ತೋಟದ ಎರಡೂ ಪಕ್ಕಗಳಲ್ಲಿ ಒಂದು ಎಕರೆ ಜಾಗ ಬಿಟ್ಟು ಕೊಟ್ಟ ಮಹಾನುಭಾವರು ಅವರು.

ಅಡ್ಡೂರಿನಲ್ಲಿ ೧೯೫೦ರ ದಶಕದ ಆರಂಭದಲ್ಲಿ ಕೃಷಿ ಕಾಯಕಕ್ಕೆ ತೊಡಗಿದವರು ಶಿವಶಂಕರ ರಾಯರು. ಆ ಸಂದರ್ಭದಲ್ಲಿ “ಒಂದು ಕಳಸೆ ಗದ್ದೆಯಲ್ಲಿ ಮೂರು ಮುಡಿ ಭತ್ತ ಬೆಳೆಯುವವನು ಐದು ಮುಡಿ ಬೆಳೆದರೆ ನೆಮ್ಮದಿಯಿಂದ ಇರಲು ಸಾಧ್ಯವಿಲ್ಲವೇ?” ಎಂಬ ವಿಚಾರ ಕೃಷಿ ಬಗ್ಗೆ ಮಾಹಿತಿ ಸಂಗ್ರಹಕ್ಕಾಗಿ ತನ್ನನ್ನು ಪ್ರೇರೇಪಿಸಿಸಿತು ಎಂದು ಅವರು ಹೇಳಿಕೊಂಡಿದ್ದಾರೆ.

ಆಗ ಅವರಿಗಿದ್ದ ಕನಸುಗಳು: ವೈಜ್ನಾನಿಕ ಕೃಷಿಯ ಮಾಹಿತಿಗಳನ್ನು ಕೃಷಿಕರಿಗೆ ತಲಪಿಸಬೇಕು; ಕೃಷಿಕರ ಸಂಶಯಗಳನ್ನು ಕೃಷಿವಿಜ್ನಾನಿಗಳಿಗೆ ತಿಳಿಸಿ ಪರಿಹಾರ ಕಂಡುಕೊಳ್ಳಬೇಕು; ಮೂರರಿಂದ ಐದು ಎಕರೆಯಲ್ಲಿ ಸಾಮಾನ್ಯ ಕೃಷಿಕನಾಗಿ ಒಂದು ಮಾದರಿ ಕೃಷಿಕ್ಷೇತ್ರ ನಿರ್ಮಿಸಬೇಕು.

ಈ ಎಲ್ಲ ಕನಸುಗಳನ್ನು ನನಸು ಮಾಡಿಕೊಂಡದ್ದೇ ಅವರ ಬದುಕಿನ ಸಾಧನೆ. ಈ ನಿಟ್ಟಿನಲ್ಲಿ, ಅಡ್ಡೂರಿನ ಅವರ ಕರ್ಮಭೂಮಿ “ಕೃಷ್ಣಾ ಫಾರ್ಮ್” ಹಲವಾರು ಕೃಷಿಪ್ರಯೋಗಗಳಿಗೆ ಪ್ರಯೋಗಶಾಲೆಯಾಗಿತ್ತು. ಅಲ್ಲಿ ಅವರು ಬೆಳೆಸಿ ನೋಡಿದ ಹೊಸಹೊಸ ಭತ್ತದ ತಳಿಗಳು ಹತ್ತುಹಲವು. ಇಂತಹ ಪ್ರಯೋಗಗಳ ಫಲಿತಾಂಶಗಳನ್ನು ಶ್ರದ್ಧೆಯಿಂದ ಕೃಷಿವಿಜ್ನಾನಿಗಳಿಗೆ ತಿಳಿಸುತ್ತಿದ್ದರು. ಆ ಮೂಲಕ ಇಲ್ಲಿನ ಮಣ್ಣಿಗೆ ಸೂಕ್ತವಾದ, ಕ್ರಿಮಿಕೀಟಗಳ ನಿರೋಧಗುಣ ಹೊಂದಿದ ತಳಿಗಳ ಅಭಿವೃದ್ಧಿಗೆ ಸಹಕರಿಸುತ್ತಿದ್ದರು. ಹಾಗಂತ ಕೃಷಿವಿಜ್ನಾನಿಗಳ ಮತ್ತು ಕೃಷಿ ಅಧಿಕಾರಿಗಳ ಶಿಫಾರಸುಗಳ ಟೊಳ್ಳುತನ ಬಹಿರಂಗ ಪಡಿಸಲು ಹಿಂಜರಿಯಲಿಲ್ಲ. ಉದಾಹರಣೆಗೆ, ಮಣ್ಣಿಗೆ ಹಾಕಬೇಕಾದ ಸುಣ್ಣದ ಪ್ರಮಾಣದ ಬಗ್ಗೆ ಶಿಫಾರಸನ್ನು ಕೃಷಿವಿಜ್ನಾನಿಗಳೂ ಕೃಷಿಅಧಿಕಾರಿಗಳೂ ಹಲವು ಬಾರಿ ಬದಲಾಯಿಸಿದ್ದನ್ನು ಸಾರ್ವಜನಿಕ ಸಭೆಯಲ್ಲೇ ಖಂಡಿಸಿದ್ದರು.

ಕೃಷಿ ಎಂಬುದು ದುಡ್ಡು ಮಾಡುವ ದಂಧೆಯಲ್ಲ; ಅದೊಂದು ಉದಾತ್ತ ಜೀವನ ವಿಧಾನ ಎಂದು ನಂಬಿದವರು ಶಿವಶಂಕರ ರಾಯರು. ಈ ತತ್ವವನ್ನು ನಂಬಿ, ಅದರಂತೆಯೇ ತನ್ನ ಜೀವನದ ಕೊನೆಯ ಅರುವತ್ತು ವರುಷ ಬದುಕಿದವರು. ತನ್ನ ಸರಳ ಹಾಗೂ ನೆಮ್ಮದಿಯ ಬದುಕಿನ ಅನುಭವ ಮತ್ತು ಸಂದೇಶಗಳನ್ನು “ಎಂಬತ್ತರ ಕೊಯ್ಲಿನ ಕಾಳುಗಳು” (ಪ್ರ: ಮಿತ್ರಮಾಧ್ಯಮ, ಬೆಂಗಳೂರು) ಎಂಬ ಪುಸ್ತಕದಲ್ಲಿ ಅವರು ದಾಖಲಿಸಿದ್ದಾರೆ. ಕೃಷಿಕರನ್ನು ಈಗ ಕಾಡುತ್ತಿರುವ ಹಲವು ಗೊಂದಲಗಳಿಗೆ ಶಿವಶಂಕರರಾಯರ ಬದುಕಿನ ಅನುಭವಗಳಿಂದ ಪರಿಹಾರ ಕಂಡುಕೊಳ್ಳಬಹುದು ಎನಿಸುತ್ತದೆ.
 

Comments

Submitted by venkatb83 Thu, 03/07/2013 - 16:15

"ಕೃಷಿ ಎಂಬುದು ದುಡ್ಡು ಮಾಡುವ ದಂಧೆಯಲ್ಲ; ಅದೊಂದು ಉದಾತ್ತ ಜೀವನ ವಿಧಾನ" ಭೂಮಿ ತಾಯಿ ಯಾವತ್ತೂ ಯಾರನ್ನೂ ಕೈ ಬಿಡೋಲ್ಲ-ಯಾರಿಗೂ ಕೈ ಕೊಡೋಲ್ಲ ಎಂದು ನಾವ್ ಚಿಕ್ಕವರಿದ್ದಾಗಿಂದ ಕೇಳುವ ಮಾತು... ಗಾಂಧೀಜಿ ಅವರು ಹೇಳಿದ್ದು ಅದನ್ನೇ 'ಈ ಭೂಮಿ ಮನುಜರ ಆಶೆಗಳನ್ನು ಪೂರೈಸಬಲ್ಲುದು-ದುರಾಷೆಯನ್ನು ಅಲ್ಲ ' ಅಂತ.... ಹಳ್ಳಿಯಲ್ಲಿ ಹುಟ್ಟಿ ಬೆಳೆದು ಜಮೀನುಗಳಲಿ ಕೆಲಸ ಮಾಡುತ್ತಾ (ಹತ್ತಿ ಭತ್ತ -ನವಣೆ ಸಜ್ಜೆ-ರಾಗಿ-ಗೋದಿ-ಸೂರ್ಯಕಾಂತಿ-ಕಡಲೆ-ಫಸಲು)ಬೆಳೆದ ನನಗೆ ಆಗಿಂದಲೂ ಕೃಷಿ ಬಗ್ಗೆ ಅತೆವ ಆಸಕ್ತಿ -ಆದರೆ ಮನುಜರು ತಾವ್ ಮಾಡೋ ತಪ್ಪುಗಳಿಂದ ಜಮೀನನ್ನು ಕೆಡಿಸಿ ಅದನ್ನು ಪ್ರಕೃತಿ ಮೇಲೆ ಹಾಕಿ -ಕೃಷಿ ಲಾಭದಾಯಕ ಉದ್ಯಮ ಉದ್ಯೋಗ ಅಲ್ಲ ಎಂದು ಹೇಳಿ ಮಕಳನ್ನು ಓದಿಗೆ ಹಚ್ಚಿ ನೌಕರಿಗೆ ಸೇರಿಸೋದು ದಿನ ನಿತ್ಯ ನಾ ನೋಡಿದ ದೃಶ್ಯ.. ತವ ಪಟ್ಟ ಪಡೋ ಕಷ್ಟ ತಮ್ಮ ಮಕಲಿಗೂ ಬಾರದಿರಲಿ ಎಂಬ ಅವರ ಕಳಕಳಿ ಒಳ್ಳ್ದೆದೆ ಆದರೆ ಅದಕ್ಕೆ ಕಾರಣ ಏನು ಎಂದು ಚಿಂತಿಸಿದವರು ಕಡಿಮೆ. ನಮ್ಮ ಕಡೆ ತುಂಗಭದ್ರ ಎಡ ಮತ್ತು ಬಲ ದಂಡೆ ಪ್ರದೇಶಗಳಲ್ಲಿ ೯೦ ಪ್ರತಿ ಶತ ಭಾಗ ಆಂಧ್ರ ರೈತರ ರೆಡ್ಡಿಗಳ ಪಾಲಾಗಿದೆ. ;(( (ಊರು ಕೊಳ್ಳೆ ಒಡೆದ ಮೇಲೆ ದಿಡ್ಡಿ ಬಾಗಿಲು ಹಾಕಿದರು ಎಂಬಂತೆ ಎಸ್ಸೆಂ ಕೃಷ ಸರ್ಕಾರ ತಮ್ಮ ಅಧಿಕಾರವಧಿಯಲಿ ಅಳಿಯ ಭೂಮಿ ಪರಭಾರೆಗೆ ಅಂಕುಶ್ ಹಾಕಿ ನಿಷೇಧಿಸಿತು ಆದರೆ ಅಸ್ತ್ರಲ್ಲಿ ರೆಡ್ಡಿಗಳು ಭೂಮಿ ಖರೀದಿಸಿ ಆಗಿತ್ತು-ಹಾಗಾಗಿ ಅವ್ರಿಗೆ ನಾವ್ ಜಮೀನು ಮಾರಲು ನಮ್ಮಲ್ಲಿ ಏನೂ ಉಳಿದಿರಲಿಲ್ಲ.;(() ಭತ್ತ ಮಾತು ಹತ್ತಿಯನ್ನು ವ್ಯಾಪಕವಾಗಿ ಬೆಳೆಯುವ ನಮ್ಮ ಕಡೆ (ರಾಯಚೂರು-ಬಳ್ಳಾರಿ-)ಅದಕಾಗಿ ವ್ಯಾಪಕ ಕ್ರಿಮಿನಾಶಕ-ರಸಗೊಬ್ಬರ ಬಳಸಿ-ಒಂದೇ ಬಗೆಯ ಬೆಳೆ ಬೆಳೆದು ಭೂತಾಯಿಯನ್ನು ವ್ಯಾಪಕವಾಗಿ ಹಿಂಸಿಸಿದ ಫಲವಾಗಿ ಭೂಮಿ ಉಪ್ಪಡರಿ ಬಂಜರು ಆಗಿದೆ..ಆದರೂ ಇನ್ನೂ ಬುದ್ಧಿ ಬೆಳೆಸಿಕೊಳ್ಳದ ಜನ ಅದೇ ಪ್ರವೃತ್ತಿಯನ್ನು ಮುಂದುವರೆಸುತ್ತಿರುವರು:((( ಈಗೀಗ ನಮ್ ಕಡೆ ಎಲ್ಲ ಬೆಳೆಗಳ ಇಳುವರಿ ಕಡಿಮೆ ಆಗಿದೆ..ರೈತರ ಸಾಲದ ಮಟ್ಟ -ಮೊತ್ತ ಏರುತ್ತಿದೆ.ಆಗಾಗ ಸರ್ಕಾರಗಳು ವೋಟಿಗಾಗಿ ಸಾಲ ಮನ್ನಾ ಮಾಡುತ್ತಾ ಜನರನ್ನ ಸಾಲಕ್ಕೆ ಪ್ರೇರೇಪಿಸುತ್ತಿವೆ..ಮನ್ನಾ ಆಗುತ್ತಿದ್ದಂತೆ ಮತ್ತೆ ಸಾಲಕ್ಕೆ ಬೇಡಿಕೆ ಮಂಜೂರು..!! ಹೆಚ್ಚಿನ ಫಲಾಪೇಕ್ಷೆ ಇಲ್ಲದೆ ತಾ ಬದುಕಿ ತಮ್ಮವರು ಬದುಕಿ ಸ್ವಲ ಹಣ ಬಂದರೆ ಸಾಕು ಎಂದು ಸರಿಯಾದ ರೀತಿಯಲ್ಲಿ ಕೃಷಿ ಮಾಡಿ ರಾಜರಂತೆ ಬಾಳುವ ಬದುಕುವ ಹಲವು ಜನ ಈಗಲೂ ಇರುವರು-ಅಪಾರ ಲಾಭ ಪಡೆದವರು ಪಡೆವವರೂ ಇರುವರು.... ಅವರ ಜೀವನ ಕಥೆ ಅನುಭವ ನಮಗೆ ಮಾರ್ಗದರ್ಶನ ನೀಡಬೇಕು.. ಕ್ರುಷಿತೋ ನಾಸ್ತಿ ದುರ್ಭಿಕ್ಷಂ ..... ಶುಭವಾಗಲಿ.. \।