ಹೆತ್ತತಾಯಿ ಹೆಣ್ಣಲ್ಲವೇ..?(ಕಥೆ)

ಹೆತ್ತತಾಯಿ ಹೆಣ್ಣಲ್ಲವೇ..?(ಕಥೆ)

ರಮೇಶ ಆಸ್ಪತ್ರೆಯ ಕಾರಿಡಾರಿನಲ್ಲಿ ಅತ್ತಿಂದಿತ್ತ ಶತಪಥ ತಿರುಗುತಿದ್ದ. ಅವನ ಮನಸ್ಸಿನಲ್ಲಿ ಇನ್ನಿಲ್ಲದ ಆತಂಕವೊಂದು ನೆಲೆಯೂರಿತ್ತು. ಅಲ್ಲಿ ಹೆರಿಗೆ ಕೋಣೆಯ ಹೊರಗೆ ಕೆನ್ನೆಗೆ ಕೈ ಊರಿಕೊಂಡು ಕುಳಿತಿದ್ದ ಅವನ ಅತ್ತೆ ಕಮಲಮ್ಮನವರ ಮುಖದಲ್ಲಿ ದುಗುಡ ತಳಮಳಗಳು ಮನೆಮಾಡಿದ್ದವು. ತನ್ನ ಅಳಿಯನ ಆಂತರ್ಯವನ್ನು ಅರಿತಿದ್ದ ಅವರಿಗೆ ಒಳಗೆ ತನ್ನ ಮಗಳು ಹೆರಿಗೆಯ ನೋವನ್ನು ತಿನ್ನುತ್ತಿದ್ದಾಳೆಂಬ ವೇದನೆಗಿಂತ ಈ ಬಾರಿಯಾದರೂ ಆ ದೇವರು ಅವಳ ಹೊಟ್ಟೆಯಲ್ಲಿ ಗಂಡುಮಗುವೊಂದನ್ನು ಕರುಣಿಸಿದರೆ ಸಾಕೆಂಬ ಪ್ರಾರ್ಥನಾಭಾವವೇ ಮನಸ್ಸಿನಲ್ಲಿ ಹೆಚ್ಚಾಗಿ ತುಂಬಿತ್ತು.

  ಒಂದರ ಹಿಂದೆ ಒಂದರಂತೆ ಎರಡು ಹೆಣ್ಣು ಮಕ್ಕಳಾದಾಗ ರಮೇಶನಿಗೆ ಆಕಾಶವೇ ಕಳಚಿ ತಲೆಯ ಮೇಲೆ ಬಿದ್ದಂತಾಗಿತ್ತು. ಅವನು ಅವರ ಅಪ್ಪನಿಗೆ ಒಬ್ಬನೇ ಮಗನಾಗಿದ್ದ. ತನ್ನ ವಂಶದ ಹೆಸರು ಹೇಳಲು ತನ್ನ ಹೆಂಡತಿ ಒಂದು ಗಂಡುಮಗುವನ್ನು ಹಡೆಯಲಿಲ್ಲವಲ್ಲ ಎಂಬ ಕೊರಗು ಅವನನ್ನು ಪೂರ್ತಿಯಾಗಿ ಆವರಿಸಿತ್ತು. ಅವನ ಹೆಂಡತಿ ಶಾರದಾ ಈಗಿನ ಕಾಲದಲ್ಲಿ ಯಾರೂ ಮೂರ್ನಾಲ್ಕು ಮಕ್ಕಳು ಮಾಡಿಕೊಳ್ಳುವುದಿಲ್ಲ ಎಂದು ಹಲವಾರು ರೀತಿಯಲ್ಲಿ ಬುದ್ಧಿವಾದ ಹೇಳಿ ಹೆಣ್ಣಾದರೇನು ಗಂಡಾದರೇನು ಎರಡು ಮಕ್ಕಳು ಸಾಕು ಆಪರೇಷನ್ ಮಾಡಿಸ್ಕೋತೀನಿ ಎಂದು ಅಲವತ್ತುಕೊಂಡಿದ್ದಳು. ರಮೇಶ ಸುತಾರಾಂ ಒಪ್ಪಿರಲಿಲ್ಲ. ಇನ್ನೊಮ್ಮೆ ಪ್ರಯತ್ನಿಸೋಣ ಮೂರನೆಯದು ಗಂಡು ಮಗುವಾಗುತ್ತದೆ ಎಂದು ನಾನಾ ರೀತಿಯಲ್ಲಿ ಅವಳನ್ನು ಹುರಿದುಂಬಿಸಿ ಸುಮ್ಮನಾಗಿರಿಸಿದ್ದ.

  ರಮೇಶನ ಸ್ನೇಹಿತರೂ ಅವನಿಗೆ ಸಾಕಷ್ಟು ಬುದ್ಧಿ ಹೇಳಿದ್ದರು. ‘ಲೋ ರಮೇಶ, ಈಗಿನ ಕಾಲದಲ್ಲಿ ಹೆಣ್ಣುಮಕ್ಕಳು ಗಂಡುಮಕ್ಕಳು ಎಲ್ಲಾ ಒಂದೇ. ಹೆಂಗಸರು ಗೃಹಕೃತ್ಯಗಳನ್ನೇ ತಮ್ಮ ಉದ್ಯೋಗವನ್ನಾಗಿಸಿಕೊಂಡಿದ್ದ ಕಾಲ ಎಂದೋ ಹೊರಟುಹೋಯಿತು. ಸಮಾಜದ ಎಲ್ಲಾ ಕ್ಷೇತ್ರಗಳಲ್ಲಿಯೂ ಅವರೂ ಗಂಡಸರಿಗೆ ಸರಿಸಮಾನರಾಗಿ ಭಾಗವಹಿಸಿ ತಮ್ಮದೇ ಆದ ಛಾಪನ್ನು ಮೂಡಿಸುತ್ತಿದ್ದಾರೆ. ದೇಶದ ಪ್ರಧಾನಿಯಾಗಿ, ರಾಷ್ಟ್ರಪತಿಯಾಗಿ, ಹಲವು ರಾಜ್ಯಗಳ ಮುಖ್ಯಮಂತಿಗಳಾಗಿ, ಉದ್ಯಮಿಗಳಾಗಿ ಅವರು ಯಶಸ್ವಿಯಾಗಿರುವುದು ನಿನಗೆ ತಿಳಿದಿಲ್ಲವೇನೋ? ಇರುವ ಎರಡು ಹೆಣ್ಣುಮಕ್ಕಳನ್ನೇ ಚೆನ್ನಾಗಿ ಓದಿಸಿ ಅವರಿಗೆ ಒಂದು ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಲು ಅನುಕೂಲ ಮಾಡಿಕೊಡು’ ಎಂದು ಏನೇ ಉಪದೇಶ ಮಾಡಿದರೂ ಅವನ ತಲೆಯಲ್ಲಿ ಹೊಕ್ಕಿದ್ದ ಗಂಡುಮಗ ವಂಶೋದ್ಧಾರಕನೆಂಬ ಪೂರ್ವಾಗ್ರಹ ಅವನನ್ನು ಬಿಡದೆ ಪದೇ ಪದೇ ಕಾಡಿಸುತಿತ್ತು.

  ಏನೇ ಆದರೂ ಒಂದು ಗಂಡುಮಗುವಿನ ತಂದೆಯಾಗಲೇಬೇಕೆಂಬ ಹಟದಿಂದ ತನಗೆ ತಿಳಿದಿದ್ದೆಲ್ಲವನ್ನೂ ಮಾಡತೊಡಗಿದ್ದ. ಗಂಡುಮಗುವಾದರೆ ಅವನಿಗೆ ಗೊತ್ತಿದ್ದ ಎಲ್ಲಾ ಜನಪ್ರಿಯ ದೇವರುಗಳ ದರ್ಶನ ಮಾಡಿ ಬರುತ್ತೇನೆಂದು ಹರಕೆ ಹೊತ್ತುಕೊಂಡಿದ್ದ. ಹಲವಾರು ಜ್ಯೋತಿಷಿಗಳನ್ನು ಭೇಟಿ ಮಾಡಿ ತನ್ನ ಗ್ರಹಗತಿಯನ್ನು ವಿಚಾರಿಸಿ ಗಂಡ-ಹೆಂಡತಿ ಯಾವ ಸಮಯದಲ್ಲಿ ಕೂಡಿದರೆ ಗಂಡುಮಗುವಾಗುತ್ತದೆ ಎಂದು ಸಲಹೆ ಪಡೆದುಕೊಂಡಿದ್ದ. ಕೆಲವು ಗೆಳೆಯರ ಸಲಹೆಯಂತೆ ಚೈನೀಸ್ ಚಾರ್ಟನ್ನು ಅಧ್ಯಯನ ಮಾಡಿದ್ದ. ಇದೆಲ್ಲಾ ತಯಾರಿ ನಡೆದು ಎರಡನೆಯ ಮಗಳಿಗೆ ಮೂರು ವರ್ಷ ತುಂಬುವುದರೊಳಗಾಗಿ ಶಾರದಾ ಮತ್ತೆ ಗರ್ಭಿಣಿಯಾಗಿದ್ದಳು. ಈ ಬಾರಿ ಗಂಡು ಮಗುವಿನ ತಂದೆಯಾಗುತ್ತೇನೆ ಎಂಬ ಆತ್ಮ ವಿಶ್ವಾಸದಿಂದ ಬೀಗುತ್ತಲಿದ್ದ ರಮೇಶನಿಗೆ ಹೆಣ್ಣಾದರೇನು ಗತಿ ಎಂಬ ಹೆದರಿಕೆ ಆಗಾಗ ಮೂಡಿ ತನ್ನ ಕುಟುಂಬ ವೈದ್ಯರನ್ನು ಕಂಡು ಭ್ರೂಣಪರೀಕ್ಷೆ ಮಾಡಿಸಿ ಮಗುವಿನ ಲಿಂಗವನ್ನು ತಿಳಿಸುವಂತೆ ಗೋಗರೆದಿದ್ದ. ವೈದ್ಯರು ಈಗ ಕಾನೂನು ಬಿಗಿಯಾಗಿದೆ. ಭ್ರೂಣಪರೀಕ್ಷೆ ಮಾಡಿಸಿ ಹುಟ್ಟುವ ಮಗುವಿನ ಲಿಂಗವನ್ನು ಪತ್ತೆ ಹಚ್ಚುವುದು ಅಕ್ಷಮ್ಯ ಅಪರಾಧ. ಆಗೊಮ್ಮೆ ಮಾಡಿದರೆ ನಾನು, ನೀನು ಮತ್ತು ಮಗುವಿನ ಲಿಂಗ ಪತ್ತೆ ಹಚ್ಚಿದ ಎಲ್ಲರೂ ಜೈಲು ಸೇರಬೇಕಾಗುತ್ತದೆ ಎಂದು ಎಚ್ಚರಿಸಿ ಕಳುಹಿಸಿದ್ದರು. ಏನೇ ಆದರೂ ಈ ಬಾರಿ ಗಂಡು ಮಗುವಾಗುತ್ತದೆ ಎಂದು ದೃಢವಾಗಿ ನಂಬಿದ್ದ ರಮೇಶನಿಗೆ ಅದನ್ನು ವಾಸ್ತವವಾಗಿ ತಿಳಿಯುವ ದಿನವೂ ಬಂದೇಬಿಟ್ಟಿತ್ತು.

  ಹೆರಿಗೆ ಕೋಣೆಯಿಂದ ಹೊರಬಂದ ವೈದ್ಯರು ಹಸನ್ಮುಖರಾಗಿ ‘ಹೆಣ್ಣುಮಗು.. ಸುಸೂತ್ರವಾಗಿ ಹೆರಿಗೆಯಾಯಿತು. ತಾಯಿ ಮಗು ಆರೋಗ್ಯವಾಗಿದ್ದಾರೆ ಯಾವುದೇ ತೊಂದರೆಯಿಲ್ಲ’ ಎಂದು ತಿಳಿಸಿದಾಗ ರಮೇಶನಿಗೆ ಬರಸಿಡಿಲು ಬಡಿದಂತಾಗಿ ಭ್ರಮನಿರಸನವಾಯಿತು. ತನ್ನ ಅಳಿಯನ ಕಪ್ಪಿಟ್ಟ ಮುಖವನ್ನು ಕಂಡು ಕಮಲಮ್ಮನವರಿಗೆ ಹುಟ್ಟಿರುವ ಮಗುವಿನ ಪಾಡೇನು ಎಂದು ತೀವ್ರ ಸಂಕಟವಾಗಿ ಕಣ್ಣುಗಳಲ್ಲಿ ಇಳಿಯುತ್ತಿದ್ದ ನೀರನ್ನು ಸೆರಗಿನ ತುದಿಯಿಂದ ಒರೆಸಿಕೊಂಡು ತನ್ನ ಮಗಳ ವಿಧಿಯನ್ನು ಹಳಿಯುತ್ತಾ ಹೆರಿಗೆಯ ಕೋಣೆಯ ಒಳಗೆ ನಡೆದರು. ರಮೇಶನಿಗೆ ಒಬ್ಬ ತಂದೆಯಾಗಿ ಹುಟ್ಟಿದ ಮಗುವಿನ ಮುಖವನ್ನು ತಕ್ಷಣವೇ ನೋಡಬೇಕು ಎಂಬ ಸಹಜ ಕಾತುರಭಾವ ಮೂಡಲೇ ಇಲ್ಲ. ನೆಟ್ಟಗೆ ಆಸ್ಪತ್ರೆಯಿಂದ ಹೊರಗೆ ನಡೆದುಹೋದ.

  ಆಸ್ಪತ್ರೆಯ ಕಾಂಪೌಂಡ್ ದಾಟಿ ರಸ್ತೆಗಿಳಿದ ರಮೇಶನ ಮನಸ್ಸಿನಲ್ಲಿ ನಿರಾಸೆಯ ಕಾರ್ಮೋಡ ಕವಿದಿತ್ತು. ಏನು ಮಾಡುವುದೆಂದು ತೋಚದೆ ಮತ್ತೊಮ್ಮೆ ಪ್ರಯತ್ನಿಸೋಣ ಗಂಡುಮಗುವಾಗಬಹುದು ಎಂಬ ದೂರದ ಆಸೆ ಚಿಗುರೊಡೆಯುತಿತ್ತು. ಯೋಚಿಸುತ್ತಲೇ ರಸ್ತೆ ದಾಟಿ ಆಸ್ಪತ್ರೆಯ ಎದುರಿಗಿದ್ದ ಪಾರ್ಕನ್ನು ಪ್ರವೇಶಿಸಿ ಮರವೊಂದರ ಕೆಳಗಿದ್ದ ಕಲ್ಲುಬೆಂಚಿನ ಮೇಲೆ ಖಿನ್ನನಾಗಿ ಕುಳಿತುಬಿಟ್ಟ.

  ಆಗಲೇ ಬಾನಿನಲ್ಲಿ ಸೂರ್ಯ ದಿಗಂತದೆಡೆಗೆ ಹೆಜ್ಜೆ ಹಾಕುತ್ತಿದ್ದ. ಪಾರ್ಕಿನಲ್ಲಿ ಹಲವಾರು ವಾಯುವಿಹಾರಿಗಳು ಸಂಜೆಯ ನಡಿಗೆಯಲ್ಲಿ ತೊಡಗಿದ್ದರು. ಅವರಲ್ಲೊಬ್ಬ ವೃದ್ಧರು ತೀವ್ರ ಖಿನ್ನನಾಗಿ ಕುಳಿತಿದ್ದ ರಮೇಶನನ್ನು ಗಮನಿಸಿಕೊಂಡೇ ಪಾರ್ಕಿನ ಸುತ್ತಾ ಬಿರುಸಾಗಿ ನಡೆಯುತ್ತಿದ್ದರು. ಅವರಿಗೆ ಏನನ್ನಿಸಿತೋ ಏನೋ ತಮ್ಮ ಕೈಯಲ್ಲಿದ್ದ ಬಿಳಿಯ ಕರವಸ್ತ್ರವನ್ನು ಜೇಬಿಗಿಟ್ಟುಕೊಳ್ಳುವ ನೆಪದಲ್ಲಿ ರಮೇಶನ ಮುಂದೆ ಬೀಳಿಸಿ ನಡೆದು ಹೋದರು. ಕರವಸ್ತ್ರ ಕೆಳಗೆ ಬಿದ್ದಿದನ್ನು ಗಮನಿಸಿದ ರಮೇಶ ಕುಳಿತಲ್ಲಿಂದ ಎದ್ದು ಅದನ್ನು ಕೈಗೆತ್ತಿಕೊಂಡು ‘ಸಾರ್.. ಸಾರ್..’ ಎಂದು ಕೂಗಿದ. ಹಿಂದೆ ತಿರುಗಿದ ವೃದ್ಧರು ವಾಪಾಸು ಬಂದು ರಮೇಶನ ಕೈಯಲ್ಲಿದ್ದ ಕರವಸ್ತ್ರವನ್ನು ಪಡೆದು ಧನ್ಯವಾದ ಹೇಳಿದ್ದಲ್ಲದೇ ‘ತಾವು ಯಾವ ಊರಿನವರು..’ ಎಂದು ಮಾತಿಗಾರಂಭಿಸಿ ಅದೇ ಬೆಂಚಿನ ಮೇಲೆ ಕುಳಿತು ರಮೇಶನಿಗೂ ಕುಳಿತುಕೊಳ್ಳುವಂತೆ ತಿಳಿಸಿದರು. ಅವರೊಂದಿಗೆ ಮಾತು ಬೆಳೆಸಲು ಇಷ್ಟವಿಲ್ಲದಿದ್ದರೂ ಮನಸ್ಸಿಲ್ಲದ ಮನಸ್ಸಿನಿಂದ ಕುಳಿತ ರಮೇಶ ‘ನಾನು ಇದೇ ಊರಿನವನು ಸಾರ್..’ ಎಂದ.

‘ಒಳ್ಳೆಯದು.. ತಮ್ಮ ಹೆಸರೇನು..?’ ಎಂದು ಕೇಳಿದ ವೃದ್ಧರಿಗೆ ತನ್ನ ಹೆಸರು ಹೇಳಿ ಕುಳಿತಲ್ಲಿಂದ ಎದ್ದು ‘ಬರ್ತೀನಿ ಸಾರ್..’ ಎಂದ. ವೃದ್ಧರು ‘ಅರೆ, ಎಲ್ಲರೂ ಹೋಗಲೇಬೇಕು.. ಇಲ್ಲಿಯೇ ಇರಲು ಆಗುತ್ತದೆಯೇ.. ಸ್ವಲ್ಪ ಹೊತ್ತು ಕುಳಿತುಕೊಳ್ಳಿ..’ ಎಂದರು. ತುಸು ಮುಜುಗರದಿಂದಲೇ ಮತ್ತೆ ಕುಳಿತ ರಮೇಶನಿಗೆ ‘ತಾವೂ ವಾಕ್ ಮಾಡಲು ಬಂದವರೋ..?’ ಎಂದು ಕೇಳಿದರು.

‘ಇಲ್ಲ ಸಾರ್.. ಇಲ್ಲಿ ಆಸ್ಪತ್ರೆಗೆ ಬಂದಿದ್ದೆ..’

‘ತಂದೆ-ತಾಯಿ ಯಾರಿಗಾದರೂ ಆರೋಗ್ಯ ಚೆನ್ನಾಗಿಲ್ಲವೋ..’

ಹಳ್ಳಿಯಲ್ಲಿದ್ದ ಅವನ ಇಳಿವಯಸ್ಸಿನ ತಂದೆ-ತಾಯಿಯರ ಆರೋಗ್ಯ ಚೆನ್ನಾಗಿಯೇ ಇತ್ತು.

‘ಅಂತಾದ್ದೇನೂ ಇಲ್ಲ ಸಾರ್.. ಅವರು ಆರೋಗ್ಯವಾಗಿಯೇ ಇದ್ದಾರೆ.. ಆಸ್ಪತ್ರೆಗೆ ನನ್ನ ಹೆಂಡತಿಯನ್ನು ಹೆರಿಗೆಗಾಗಿ ಕರೆದುಕೊಂಡು ಬಂದಿದ್ದೆ.. ಇದೀಗ ಹೆರಿಗೆಯಾಯಿತು’ ಎಂದ.

‘ತುಂಬಾ ಸಂತೋಷ.. ತಾವು ತಂದೆಯಾದಿರಿ.. ತಾಯಿ ಮಗು ಆರೋಗ್ಯವಾಗಿದ್ದಾರೆಯೇ..?’

‘ಅವರು ಆರೋಗ್ಯವಾಗಿದ್ದಾರೆ.. ಏನು ಹೇಳುವುದು ಸಾರ್ ನನ್ನ ದುರಾದೃಷ್ಟ.. ಈಗಾಗಲೇ ನನಗೆ ಎರಡು ಹೆಣ್ಣು ಮಕ್ಕಳಿವೆ. ಈಗ ಹುಟ್ಟಿರುವುದೂ ಹೆಣ್ಣೇ..’ ರಮೇಶನ ಧ್ವನಿಯಲ್ಲಿ ಅತೀವ ನಿರಾಸೆಯಿತ್ತು.

‘ಎಂತಹ ಸಂತೋಷದ ವಿಚಾರ ರಮೇಶ್.. ಈ ಪ್ರಪಂಚಕ್ಕೆ ಮೂವರು ತಾಯಂದಿರನ್ನು ನೀಡಿದ್ದೀರಿ..’

‘ಏನ್ ಸಾರ್ ತಮಾಷೆ ಮಾಡ್ತಾ ಇದೀರಾ..’ ರಮೇಶ ತುಸು ಗಡುಸಾಗಿಯೇ ಕೇಳಿದ.

‘ಛೇ.. ಛೇ.. ಇದು ತಮಾಷೆಯಲ್ಲ ರಮೇಶ್, ಬದುಕಿನ ಸತ್ಯ. ನಿಮ್ಮನ್ನು ಹೆತ್ತ ತಾಯಿ ಹೆಣ್ಣಲ್ಲವೇ..?’

‘ಅದೇನೋ ಸರಿ ಸಾರ್.. ಆದರೆ ನನ್ನ ವಂಶದ ಹೆಸರು ಹೇಳಲು ಒಂದು ಗಂಡು ಮಗು ಬೇಡವೇ..?’ ರಮೇಶ ತನ್ನೊಳಗಿದ್ದ ಆಕಾಂಕ್ಷೆಯನ್ನು ತೆರಿದಿಟ್ಟ.

‘ಯಾಕೆ ರಮೇಶ್.. ನಿಮ್ಮ ಮಕ್ಕಳು ನಿಮ್ಮ ತಂದೆ ಯಾರೆಂದು ಕೇಳಿದರೆ ನಿಮ್ಮ ಹೆಸರೇ ಅಲ್ಲವೆ ಹೇಳುವುದು..?’

‘ನಾನೇನೂ ಹೆಣ್ಣುಮಕ್ಕಳ ದ್ವೇಷಿಯಲ್ಲ ಸಾರ್.. ಆದರೆ ಎಲ್ಲರಿಗೂ ಒಂದು ಗಂಡು ಒಂದು ಹೆಣ್ಣು ಮಗುವಿದ್ದರೆ ಎಷ್ಟು ಚೆನ್ನಾಗಿರುತ್ತದೆ ಅಲ್ವಾ ಸಾರ್..’

‘ನಾವು ಬೇಕಾದಂತೆ ಮಕ್ಕಳನ್ನು ಸೃಷ್ಟಿಸಲು ಅವು ಮಣ್ಣಿನ ಗೊಂಬೆಗಳಲ್ಲವಲ್ಲ ರಮೇಶ್.. ನಮ್ಮ ಮಕ್ಕಳು ನಮಗೆ ದೇವರು ಕೊಟ್ಟ ಜೀವಂತ ಬೊಂಬೆಗಳು. ಅವುಗಳನ್ನು ಸಾಕಿ ಸಲಹಿ ವಿದ್ಯಾಬುದ್ಧಿ ನೀಡಿ ಮನುಷ್ಯರನ್ನಾಗಿ ಮಾಡುವುದು ನಮ್ಮ ಕರ್ತವ್ಯ..’

‘ಆದರೂ ಹೆಣ್ಣುಮಕ್ಕಳು ನಮ್ಮ ಮನೆಯಿಂದ ಹೊರಗೆ ಹೋಗುವವರು ತಾನೇ.. ಒಬ್ಬ ಮಗನಿದ್ದರೆ ಕೊನೆಗಾಲದಲ್ಲಿ ಆಸರೆಯಾಗಬಹುದಲ್ಲವೇ..?’

ವೃದ್ಧರು ವಿಷಾದದ ನಗೆಯೊಂದನ್ನು ನಕ್ಕರು.

  ‘ರಮೇಶ್.. ನಾನೂ ನಿಮ್ಮಂತೆ ತಿಳಿದಿದ್ದೆ.. ಆದರೆ ನನ್ನ ಜೀವನದಲ್ಲಿ ಅದು ನಿಜವಾಗಲಿಲ್ಲ.’ ಎಂದು ಕಣ್ಣುಗಳಲ್ಲಿ ನೀರು ತುಂಬಿಕೊಂಡು ಮುಂದುವರೆಸಿದರು.

  ‘ನೀವು ಹೇಳಿದಂತೆ ನನಗೆ ಒಂದು ಗಂಡು ಒಂದು ಹೆಣ್ಣು ಮಕ್ಕಳು. ನನ್ನ ಹೆಂಡತಿ ದೇವತೆಯಂತವಳು. ನಾನು ಸರ್ಕಾರಿ ನೌಕರನಾಗಿ ಪ್ರಾಮಾಣಿಕನಾಗಿ ಕೆಲಸ ಮಾಡಿ ಇಬ್ಬರೂ ಮಕ್ಕಳನ್ನು ಓದಿಸಿದೆ. ಒಂದು ಸ್ವಂತ ಮನೆ ಮಾಡಿಕೊಂಡೆ. ನನ್ನ ಮಗ, ಮಗಳು ಇಬ್ಬರೂ ಚೆನ್ನಾಗಿ ಓದಿ ಪದವಿ ಪಡೆದು ಕೆಲಸಕ್ಕೆ ಸೇರಿದರು. ಅವರಿಗೆ ಉತ್ತಮ ಸಂಬಂಧ ಹುಡುಕಿ ಮದುವೆ ಮಾಡಿದೆ. ಎಲ್ಲವೂ ಚೆನ್ನಾಗಿಯೇ ಇತ್ತು. ನಾನು ನಿವೃತ್ತಿ ಹೊಂದಿದ ಸುಮಾರು ವರ್ಷಗಳ ಬಳಿಕ ಒಂದು ದಿನ ನನ್ನನ್ನು ಮಗುವಿನಂತೆ ನೋಡಿಕೊಳ್ಳುತ್ತಿದ್ದ ನನ್ನ ಹೆಂಡತಿ ನನ್ನೊಬ್ಬನನ್ನೇ ಬಿಟ್ಟು ದೇವರ ಬಳಿ ನಡೆದುಬಿಟ್ಟಳು.’ ವೃದ್ಧರು ಕಣ್ಣುಗಳಲ್ಲಿ ಹರಿಯುತಿದ್ದ ನೀರನ್ನು ಎರಡೂ ಕೈಯಿಂದ ಒರೆಸಿಕೊಂಡರು. ರಮೇಶ ಸಹ ಭಾವುಕನಾಗಿ ‘ಸಮಾಧಾನ ಮಾಡಿಕೊಳ್ಳಿ ಸಾರ್..’ ಎಂದ. ವೃದ್ಧರು ಮಾತು ಮುಂದುವರೆಸಿದರು.

  ‘ನಂತರದ ದಿನಗಳು ನನ್ನ ಬದುಕಿನ ದುರಂತದ ದಿನಗಳು. ಮಗ ಬಂದು ನೀನೊಬ್ಬನೇ ಇಲ್ಯಾಕಿರ್ತೀಯಾ.. ಮನೆ ಮಾರಿಬಿಡು. ನನ್ನ ಜೊತೆಯೇ ಬಂದಿರುವಿಯಂತೆ ಅಂದ. ನನಗೆ ಮನೆ ಮಾರಲು ಇಷ್ಟವಿರಲಿಲ್ಲ. ನನಗೆ ತುರ್ತಾಗಿ ಹಣದ ಅವಶ್ಯಕತೆಯಿದೆ, ಈಗಲ್ಲದಿದ್ದರೂ ನೀನು ಸತ್ತ ಮೇಲಾದರೂ ಅದು ನನ್ನ ಆಸ್ತಿಯೇ ಎಂದು ಕಿರುಚಾಡಿದ. ಬೇರೆ ದಾರಿ ಕಾಣದೆ ಮನೆ ಮಾರಿ ಹಣವನ್ನು ಅವನಿಗೆ ಕೊಟ್ಟು ಅವನ ಮನೆಗೆ ಹೋದೆ. ಮೊಮ್ಮಕ್ಕಳು ಸೊಸೆಯೊಂದಿಗೆ ಹೇಗೋ ಕಾಲ ಕಳೆಯುತ್ತಿದ್ದೆ. ನಂತರ ನನ್ನ ಮಗನಿಗೆ ನನಗೆ ಬರುತಿದ್ದ ಪೆನ್‍ಷನ್ ಹಣದ ಮೇಲೆ ಕಣ್ಣು ಬಿತ್ತು. ಮನೆಯಲ್ಲಿಯೇ ಊಟ-ತಿಂಡಿ ಎಲ್ಲಾ ಆಗುತ್ತದಲ್ಲಾ ಹಣವನ್ನೇನು ಮಾಡುತ್ತಿಯಾ ಎಂದು ಪೀಡಿಸಲು ಶುರು ಮಾಡಿದ. ನನಗೆ ಜೀವನದಲ್ಲಿ ಜುಗುಪ್ಸೆ ಮೂಡಿತು. ಎಲ್ಲಾ ಸಂಪರ್ಕಗಳನ್ನೂ ಕಡಿದುಕೊಂಡು ಹೇಳದೆ ಕೇಳದೆ ಅವನ ಮನೆಯಿಂದ ಹೊರಟೆ. ಮನಃಶಾಂತಿಯನ್ನು ಅರಸುತ್ತಾ ಊರೂರು ಅಲೆಯತೊಡಗಿದೆ. ನನ್ನ ಮಗ ನನ್ನನ್ನು ಹುಡುಕುವ ಕನಿಷ್ಠ ಪ್ರಯತ್ನವನ್ನೂ ಮಾಡಲಿಲ್ಲ.’ ಎಂದು ಹೇಳಿ ವೃದ್ಧರು ನಿಟ್ಟುಸಿರುಬಿಟ್ಟರು.

  ರಮೇಶ ಅವರ ವೃತ್ತಾಂತವನ್ನು ಕೇಳಿ ಮನಕರಗಿ ಕುಳಿತಿದ್ದ. ವೃದ್ಧರು ತುಸು ಸಾವರಿಸಿಕೊಂಡು ಮತ್ತೆ ಮಾತನಾಡಿದರು.

  ‘ವಿಷಯ ತಿಳಿದ ನನ್ನ ಮಗಳು ಒಂದು ದಿನ ವೃತ್ತಪತ್ರಿಕೆಯೊಂದರಲ್ಲಿ ನನ್ನ ಭಾವಚಿತ್ರದೊಂದಿಗೆ ಜಾಹೀರಾತು ನೀಡಿದ್ದಳು. ಅಪ್ಪಾ..ಅಪ್ಪಾ..ಎಲ್ಲಿರುವೆಯಪ್ಪಾ.. ನನ್ನ ನೆನಪು ನಿನಗೆ ಬರಲಿಲ್ಲವೇನಪ್ಪಾ.. ನಾನೇನು ಸತ್ತುಹೋಗಿದ್ದೀನಿ ಎಂದುಕೊಂಡೆಯಾ.. ನಾನು ಇನ್ನೂ ಬದುಕಿದ್ದೇನಪ್ಪಾ.. ಎಲ್ಲಿದ್ದರೂ ಬಂದುಬಿಡಪ್ಪಾ. ಓದಿದ ನನಗೆ ನನ್ನ ತಾಯಿಯೇ ಕರೆದಂತಾಯಿತು. ಓಡೋಡಿ ಇಲ್ಲಿಗೆ ಬಂದೆ. ಆಮೇಲೆ ನನಗೆ ನೆಮ್ಮದಿಯ ದಿನಗಳು ಪುನಃ ಪ್ರಾರಂಭವಾದವು. ಮಗಳು ಅಳಿಯ ಮೊಮ್ಮಕ್ಕಳೊಂದಿಗೆ ಸುಖವಾಗಿ ಕಾಲ ಕಳೆಯುತ್ತಾ ದೇವರು ಯಾವಾಗ ಕರೆದರೂ ಹೋಗಲು ಸಿದ್ಧನಿದ್ದೇನೆ.’ ಎಂದು ಮುಖದಲ್ಲಿ ಸಮಾಧಾನದ ಛಾಯೆಯನ್ನೊತ್ತು ಮಾತು ಮುಗಿಸಿದ ವೃದ್ಧರನ್ನು ಕಂಡು ರಮೇಶನ ಮನಸ್ಸಿನಲ್ಲಿ ಗೌರವಭಾವನೆ ಉಕ್ಕಿ ಹರಿಯಿತು.

  ಸುತ್ತಲೂ ಬೆಳಕಿದ್ದೂ ಅದನ್ನು ಗುರುತಿಸದೆ ಕತ್ತಲು ಕತ್ತಲು ಎಂದು ಕನವರಿಸುತಿದ್ದ ರಮೇಶನಿಗೆ ಜ್ಞಾನೋದಯವಾದಂತಾಗಿ ದಿಗ್ಗನೆ ಎದ್ದು ವೃದ್ಧರ ಕೈಹಿಡಿದುಕೊಂಡು ‘ಸಾರ್ ನಿಮ್ಮನ್ನ ನಾನು ಯಾವತ್ತೂ ಮರೆಯೋದಿಲ್ಲ ಸಾರ್.. ಗುರುವಿನಂತೆ ಬಂದು ನನಗೆ ಬದುಕಿನ ವಾಸ್ತವವನ್ನು ತಿಳಿಸಿ ನನ್ನ ಭ್ರಮೆಯನ್ನು ಹೋಗಲಾಡಿಸಿದಿರಿ’ ಎಂದು ಮನದುಂಬಿ ನುಡಿದ.

  ‘ನೋಡಿ ರಮೇಶ್.. ಮಕ್ಕಳು ಹೆಣ್ಣಾದರೇನು ಗಂಡಾದರೇನು.. ತಂದೆತಾಯಿಯರ ಮೇಲೆ ಪೀತಿವಿಶ್ವಾಸವಿರುವ  ಸಹೃದಯವಂತರಾದರೆ ಸಾಕು’ ಎಂದು ರಮೇಶನ ಬೆನ್ನು ತಟ್ಟಿ ನುಡಿದ ವೃದ್ಧರಿಗೆ ‘ಎಂತಹ ಸತ್ಯವಾದ ಮಾತು ಹೇಳಿದಿರಿ ಸಾರ್.. ತುಂಬಾ ಥ್ಯಾಂಕ್ಸ್  ಸಾರ್.. ಬರ್ತೀನಿ’ ಎಂದು ವಂದಿಸಿ ಹುಟ್ಟಿದ ಮಗಳ ಮುಖವನ್ನು ನೋಡಲು ಆಸ್ಪತ್ರೆಯ ಕಡೆಗೆ ಆತುರಾತುರವಾಗಿ ನಡೆದುಹೋದ. ವೃದ್ಧರು ಕೊನೆಯಲ್ಲಿ ನುಡಿದ ಮಾತುಗಳು ಅವನ ಕಿವಿಯಲ್ಲಿ ಪ್ರತಿಧ್ವನಿಸುತಿದ್ದವು.

  ‘ಮಕ್ಕಳು ಹೆಣ್ಣಾದರೇನು ಗಂಡಾದರೇನು.. ತಂದೆತಾಯಿಯರ ಮೇಲೆ ಪೀತಿವಿಶ್ವಾಸವಿರುವ  ಸಹೃದಯವಂತರಾದರೆ ಸಾಕು’                          

                   

Comments