ತರಕಾರಿ ಹುಳಿ
ತೊಗರಿ ಬೇಳೆ – 1 ಕಪ್, ಕೊತ್ತಂಬರಿ ಬೀಜ – 2 ಚಮಚ, ಮೆಂತೆ ಮತ್ತು ಸಾಸಿವೆ – ¼ ಚಮಚ, ಉದ್ದಿನ ಬೇಳೆ – 1 ½ ಚಮಚ, ಅಕ್ಕಿ – ½ ಚಮಚ, ಬ್ಯಾಡಗಿ ಮೆಣಸಿನ ಕಾಯಿ – 9(ಖಾರಕ್ಕೆ ತಕ್ಕಂತೆ), ಎಣ್ಣೆ – 2 ಚಮಚ, ಅರಿಶಿನ – ¼ ಚಮಚ, ಕರಿ ಬೇವಿನ ಸೊಪ್ಪು – 7 ಅಥವಾ 8 ಎಸಳು, ತೆಂಗಿನ ತುರಿ 1 ಕಪ್, ಹುಣಿಸೆ ಹಣ್ಣು – ಸಣ್ಣ ನೆಲ್ಲಿ ಗಾತ್ರ, ಉಪ್ಪು – ರುಚಿಗೆ ತಕ್ಕಂತೆ, ಬೆಲ್ಲ (ಬೇಕಿದ್ದರೆ) – ಸಣ್ಣ ನೆಲ್ಲಿ ಗಾತ್ರ..... ಒಗ್ಗರಣೆಗೆ : ಎಣ್ಣೆ – 2 ಚಮಚ, ಸಾಸಿವೆ – ½ ಚಮಚ, ಒಣಮೆಣಸಿನಕಾಯಿ 4 - 5 ತುಂಡುಗಳು, ಕರಿಬೇವಿನ ಎಸಳು 4 – 5, ಇಂಗು – 1 ಚಿಟಿಕೆ...
ಉಪಯೋಗಿಸಬಹುದಾದ ತರಕಾರಿಗಳು: ಎಲ್ಲಾ ಬಗೆಯವು
ಕುಕ್ಕರಿನಲ್ಲಿ ತೊಗರಿ ಬೇಳೆ, ನೀರು, ಅರಿಶಿನ ಮತ್ತು ಒಂದು ಚಮಚ ಎಣ್ಣೆ ಹಾಕಿ ಮೂರು – ನಾಲ್ಕು ಬಾರಿ ಕೂಗಿಸಿ, ಕೆಳಗಿಳಿಸಿಕೊಳ್ಳಿ. ಹುಣಿಸೆ ಹಣ್ಣನ್ನು ಸಣ್ಣ ಬೌಲಿನಲ್ಲಿ ನೆನೆಸಿಡಿ. ತರಕಾರಿಯನ್ನು ಹೋಳುಗಳನ್ನಾಗಿ ಮಾಡಿಟ್ಟುಕೊಳ್ಳಿ. ದಪ್ಪ ತಳದ ಬಾಣಲೆಗೆ ಕೊತ್ತಂಬರಿ ಬೀಜ, ಮೆಂತೆ, ಸಾಸಿವೆ, ಉದ್ದಿನ ಬೇಳೆ, ಬ್ಯಾಡಗಿ ಮೆಣಸಿನ ಕಾಯಿ ಮತ್ತು ಒಂದು ಚಮಚ ಎಣ್ಣೆ ಹಾಕಿ ಹುರಿಯಿರಿ. ಕೆಳಗಿಳಿಸುವ ಒಂದು ನಿಮಿಷ ಮೊದಲು ಕರಿಬೇವಿನ ಎಸಳನ್ನು ಹಾಕಿ ಬಾಡಿಸಿ. ಕೆಳಗಿಳಿಸಿದ ನಂತರ ತೆಂಗಿನ ತುರಿ ಹಾಕಿ ಬಾಡಿಸಿ. ಹುರಿದ ಮಸಾಲೆಯನ್ನು ಮಿಕ್ಸಿಗೆ ಹಾಕಿ ರುಬ್ಬಿಕೊಳ್ಳಿ. ಒಂದು ಅಗಲ ಬಾಯಿಯ ಪಾತ್ರೆಗೆ ಬೆಂದ ಬೇಳೆಯನ್ನು ಬಗ್ಗಿಸಿಕೊಂಡು ಹೆಚ್ಚಿಟ್ಟುಕೊಂಡ ತರಕಾರಿಯನ್ನು ಹಾಕಿ ಹದವಾಗಿ ಬೇಯಿಸಿ. ತರಕಾರಿ ಬೆಂದ ನಂತರ ರುಬ್ಬಿದ ಮಸಾಲೆಯನ್ನು ಹಾಕಿ. ಹುಣಿಸೆ ಹಣ್ಣನ್ನು ಕಿವಿಚಿ ರಸವನ್ನು ಮಿಶ್ರ ಮಾಡಿ. ಈ ಮಿಶ್ರಣಕ್ಕೆ ಉಪ್ಪು ಬೆಲ್ಲ ಮತ್ತು ಅಳತೆಗೆ ತಕ್ಕಷ್ಟು ನೀರು ಹಾಕಿ ಚೆನ್ನಾಗಿ ಕುದಿಸಿ. (ನಮ್ಮ ಅಮ್ಮಮ್ಮ ನೂರೊಂದು ಕುದಿ ಬರಬೇಕು ಅನ್ನುತ್ತಿದ್ದರು!). ಮೇಲೆ ಹೇಳಿದ ಒಗ್ಗರಣೆ ಪದಾರ್ಥಗಳನ್ನು ಹಾಕಿ ಒಗ್ಗರಣೆ ಮಾಡಿ. ರುಚಿ ರುಚಿಯಾದ ಹುಳಿಯನ್ನು ಅನ್ನ ಮತ್ತು ತುಪ್ಪದೊಂದಿಗೆ ಸವಿಯಿರಿ. ಇಡ್ಲಿಯೊಂದಿಗೆ ಸಹ ಇದು ಬಹಳ ರುಚಿಯಾಗಿರುತ್ತದೆ.
ಸೂಚನೆ : ಮಸಾಲೆ ಹುರಿಯುವಾಗ ದಾಲ್ಚಿನ್ನಿ ಚಕ್ಕೆಯನ್ನೂ ಬೇಕಿದ್ದರೆ ಹಾಕಬಹುದು.
Comments
Nice ...
Nice ...
ಧನ್ಯವಾದಗಳು
ಧನ್ಯವಾದಗಳು