ವಾಕಿಂಗ್ ನ್ಯೂಸ್!

ವಾಕಿಂಗ್ ನ್ಯೂಸ್!

ಒಂದೇ ಒಂದು "ದಿನಪತ್ರಿಕೆ" ಮನೆಗೆ ತರಿಸದಿದ್ದರೂ, ಎಲ್ಲಾ ಪತ್ರಿಕೆಗಳಲ್ಲಿ ಬಂದಿರುವ ಸುದ್ದಿ ನನಗೆ ಮುಂಜಾನೆಯೇ ಗೊತ್ತಿರುವುದು! ಮುಂಜಾನೆ ವಾಕಿಂಗ್‌ನ ಲಾಭವಿದು!

ಅದು ಹೇಗೆ ಎಂದು ಹೇಳುತ್ತೇನೆ ಕೇಳಿ- ವಾಕಿಂಗ್ ಹೋಗುವಾಗ, ದೂರದಲ್ಲಿ ಪತ್ರಿಕೆ ಮನೆಮನೆಗೆ ಹಾಕುವ ಹುಡುಗ ಕಂಡರೆ, ಒಂದು ಗೇಟಿನ ಬಳಿ ನಿಲ್ಲುವೆ. "ಏನಿವತ್ತು ಇಷ್ಟು ತಡಾ?" ಎನ್ನುವಾಗ, ಆತ ಏನೋ ಕಾರಣ ಹೇಳಿ ಆ ಮನೆಯೊಳಗೆ ಎಸೆಯುವ ಪತ್ರಿಕೆ ನನ್ನ ಕೈಗೆ ಕೊಟ್ಟು ಹೋಗುವನು. ಅದನ್ನು ಪೂರ್ತಿ ಓದಿ ಮನೆಯೊಳಗೆ ಎಸೆದು ವಾಕಿಂಗ್ ಮುಂದುವರೆಸುವೆ. :)

ಬೆಂಗಳೂರಿನಲ್ಲಿ ಒಂದೇ ತೊಂದರೆ ಎಂದರೆ, ಹೆಚ್ಚಿನ ಮನೆಯವರು ಪ್ರೆಸ್ಟಿಜ್‌ಗೆ ಎಂದೋ, ಪುಟ ಜಾಸ್ತಿ ಎಂದೋ ಟಾಯ್(TOI) ಪತ್ರಿಕೆ ತರಿಸುವರು. ಆದ್ದರಿಂದ ಪ್ರತೀ ಮನೆಗೆ ನುಗ್ಗುವ ಅಗತ್ಯವಿರುವುದಿಲ್ಲ.

ಈ ಕನ್ನಡ ಪತ್ರಿಕೆ ತರಿಸುವವರು ಎಂಟು ಗಂಟೆಗೆ ಆಫೀಸು ಇದ್ದರೆ ಏಳು ಗಂಟೆಗೆ ಎದ್ದು ದಡಬಡ ಹೊರಡುವವರು. ಅವರ ಮನೆಯೆದುರು ಪತ್ರಿಕೆ ಕೆಲವೊಮ್ಮೆ ಸಂಜೇವರೆಗೂ ಹಾಗೇ ಬಿದ್ದಿರುವುದು. ಅವರದೇ ಪತ್ರಿಕೆ ಅವರ ಮನೆಯೆದುರೇ ಓದುತ್ತಿದ್ದರೂ, "ಏನಿವತ್ತು ವಿಶೇಷ ಸುದ್ದಿ?" ಎಂದು ನಮ್ಮ ಬಳಿ ಕೇಳಿ, ಇಣುಕಿ ಪತ್ರಿಕೆಯ ಮೈನ್ ನ್ಯೂಸ್ ನೋಡಿ ಆಫೀಸ್‌ಗೆ ಓಡುವರು!

ಈದಿನ ಬೆಳಗ್ಗೆ ವಾಕಿಂಗ್ ಹೋಗುವಾಗ "ಕನ್ನಡ ಪತ್ರಿಕೆ" ಕಣ್ಣಿಗೆ ಬಿತ್ತು! ನೋಡಿದರೆ ಗೇಟಿಗೆ ಬೀಗ.. ಜಂಪ್ ಮಾಡಬಹುದು, ಆದರೆ ಆ ಬದಿಯಲ್ಲಿ ಮುಳ್ಳಿನ ಗಿಡವಿದ್ದರೆ..? ಅದೇ ಸಮಯದಲ್ಲಿ ಮನೆ ಯಜಮಾನ ನಿದ್ದೆಗಣ್ಣಲ್ಲಿ ಬಂದು ಬೀಗ ತೆಗೆಯಲು ಪರದಾಡುತ್ತಿದ್ದ. ಅವನ ಜತೆಯಲ್ಲಿದ್ದ ನಾಯಿ ಬೆಳಗ್ಗಿನ "ವಾಕಿಂಗ್‌‍"ಗೆ ಅವಸರಪಡಿಸುತ್ತಿತ್ತು. ಅವನ ಕೈಯಿಂದ ಕೀ ತೆಗೆದುಕೊಂಡು,ಗೇಟು ತೆಗೆಯುವುದರೊಳಗೆ ನಾಯಿ ಮತ್ತು ಆತ ನಾಗಾಲೋಟ... ಬೀಗ, ಕೀ ನನ್ನ ಕೈಯಲ್ಲಿ! ಒಳ್ಳೆಯದೇ ಆಯ್ತು ಬಿಡಿ. ಒಳಗೆ ಹೋಗಿ, ಪತ್ರಿಕೆ ಎತ್ತಿ, ವರಾಂಡದಲ್ಲಿರುವ ಟೇಬ್‌ಲ್ ಮೇಲೆ ಬೀಗ ಕೀ ಇಟ್ಟು, ಚೇರ್ನಲ್ಲಿ ಕುಳಿತು ಓದಲು ಪ್ರಾರಂಭಿಸಿದೆ. ಓದುವುದರಲ್ಲಿ ಎಷ್ಟು ಮಗ್ನವಾಗಿದ್ದೆ ಎಂದರೆ ಆತನ ಮನೆಯಾಕೆ ಕಾಫಿ ತಂದಿಟ್ಟು, ಬೀಗ ಕೀ ತೆಗೆದುಕೊಂಡು ಹೋದುದು ಗೊತ್ತೇ ಆಗಲಿಲ್ಲ. "ಕಾಫಿ ಆರುತ್ತೇ, ಬೇಗ ಕುಡಿಯಿರಿ" ಎನ್ನುವ ಮಾತು ಒಳಗಿಂದ ಕೇಳಿದಾಗ, ಪೇಪರಿಂದ ತಲೆ ಹೊರಗೆ ಹಾಕಿ ನೋಡಿದೆ. ಬಿಸಿಬಿಸಿ, ಗಮಗಮ ಕಾಫಿ ಟೇಬಲ್ ಮೇಲೆ ಇತ್ತು. ಬಿಡಲು ಸಾಧ್ಯನಾ? ಕಾಫಿ ಕುಡಿಯುತ್ತಾ ಓದು ಮುಂದುವರೆಸಿದೆ. ರಾಜಕೀಯ, ರೇಪ್, ರಸ್ತೆ ಅಪಘಾತ, ರಾಹುಲ್, ರವೀಂದ್ರ ಜಡೇಜ, ರಜನೀಕಾಂತ, ಪತ್ರಿಕೆ ತುಂಬಾ ರಾರಾರಗಳೆಗಳೇ....."ರಾಯರೇ...ನಮಸ್ತೇ.."ಸ್ವರ ಕೇಳಿ ಕುರ್ಚಿಯಿಂದ ಬೀಳುವುದು ಬಾಕಿ! ಕತ್ತೆತ್ತಿ ಮೇಲೆ ನೋಡಿದೆ...ಮಾತೇ..ಬರಲಿಲ್ಲಾ...

(ಇನ್ನೂ ಇದೆ)

Rating
No votes yet

Comments

Submitted by venkatb83 Sun, 03/10/2013 - 11:05

ನಮ್ಮ ಮನೆಯ ಪತ್ರಿಕೆ ಮುದುರಿರುವುದು-ಅಸ್ತವ್ಯಸ್ತವಾಗಿರುವುದು ಕಂಡಾಗಲೇ ಸಂಶಯವಿತ್ತು-ಈಗ ನಿಜವಾಯ್ತು..
ಅದು ನಿಮ್ಮದೇ ಕೆಲಸ...
ಹಿಂದೊಮ್ಮೆ ಹೀಗೆ ಮಾಡಿದ್ದಿರಿ..ಆದ್ರೆ ಕಸ ಎಸೆದು....
ಇಂತಿ ಪಕ್ಕದ್ ಮನೆ .ಪ......!
>>>ಕತ್ತೆತ್ತಿ ಮೇಲೆ ನೋಡಿದೆ...ಮಾತೇ..ಬರಲಿಲ್ಲಾ...

ಬಂದವರು ಕರೆದವರು ಅವರಲ್ಲ ತಾನೇ?
ಮಾ.ಮು...! ಬಾ.ಮು..!!

ಗಣೇಶ್ ಅಣ್ಣ
ಸಶೇಷ...ದ ಮುಂದಿನ ಭಾಗಕ್ಕೆ ಕಾಯ್ತಿರುವೆ..
ವಾಕಿಂಗ್ ಕಿಂಗ್ ಆಗಿ..!!
ಶುಭವಾಗಲಿ..

\।

Submitted by ಗಣೇಶ Mon, 03/11/2013 - 00:37

In reply to by venkatb83

>>> ಬರೀ ಸಿನೆಮಾ ಪತ್ರಿಕೆಗಳು ಎಂದು ಬೇಸರದಲ್ಲಿ ಎಸೆದೆ. ಅದು ನಿಮ್ಮ ಮನೆ ಎಂದು ಗೊತ್ತಿದ್ದರೆ, ಒಳಗೆ ಬಂದು ಟೀ ಕುಡಿದು,ನಿಮ್ಮ ಬಳಿ ಇರುವ ಡಿವಿಡಿಯಲ್ಲಿ ಒಂದೆರಡು ಸಿನೆಮಾ ನೋಡಿ ೫-೬ ಸಿ.ಡಿ ಹಿಡಕೊಂಡು ಹೋಗುತ್ತಿದ್ದೆ.:) ಮುಂದಿನ ಭಾಗ ಈ ಇಲೆಕ್ಷನ್ ರಿಸಲ್ಟ್ ನೋಡಿಕೊಂಡು..

Submitted by venkatb83 Mon, 03/11/2013 - 14:58

In reply to by ಗಣೇಶ

">>> ಬರೀ ಸಿನೆಮಾ ಪತ್ರಿಕೆಗಳು ಎಂದು ಬೇಸರದಲ್ಲಿ ಎಸೆದೆ."

ಗಣೇಶ್ ಅಣ್ಣ- ಆ ಮೇಲಿನ ನಿಮ್ಮ ವಾಕ್ಯ ನೋಡಿದಾಗ-
ನೀವು ಗುರುಗಳ ಪತ್ರಿಕೆಯನ್ನ ಅಲ್ಲಿಂದ(ಹೊಸಕೆರೆ ಹಳ್ಳಿ)ತಂದು ನಮ್ಮೆನೆಗೆ (ಅಬ್ಬಬ್ಬ ಗಿರಿ )ಗೆ ಎಸೆದಿರ?

ನಾವ್ ಮನೇಲಿ ಪೇಪರ್ ಹಾಕಿಸೋಲ್ಲ..ಟೀವಿ ಕಂ ಮಾನಿಟರ್ ಇದೆ-ಆದ್ರೆ ಕೆಲ ದಿನಗಳ ಹಿಂದೆ ಕೆಬಲ್ನವರು ಸೆಟ್ ಟಾಪ್ ಬಾಕ್ಸ್ ಹಾಕಿಸಬೇಕು ಎಂದು ಹೇಳಿ ಕೇಬಲ್ ಕಟ್ ಮಾಡಿಕೊಂಡು ಹೋದರು...ಪೀಡೆ ತೊಲಗಿತು ಅಂತ ಸುಮ್ನಾದೆ..!!
ನಾನು ಪತ್ರಿಕೆ ಓದೋದು ಆಫೀಸಿನ ಹತ್ತಿರದ ಬೀಡ ಅಂಗಡಿ ಒಂದರಲ್ಲಿ ಪುಕ್ಸಟ್ಟೆಯಾಗಿ ..!
ಅಲ್ದೆ ನೆಟ್ನಲ್ಲೇ ಇ ಪರಿಕೆ ಓದುವೆ..ಒಟ್ನಲ್ಲಿ ಎಲ್ಲವೂ ಪುಕ್ಸಟ್ಟೆ -!!

ಈಗ ಆಫೀಸಲ್ಲಿ ಯೂಟೂಬ್ನಿಂದ ಡೌನ್ಲೋಡ್ ಮಾಡಿದ ಹಳೆಯ ಕನ್ನಡ-ಆಂಗ್ಲ-ತೆಲುಗು ಹಿಂದಿ ಚಿತ್ರಗಳನ್ನು ಮನೇಲಿ ಸಿಸ್ಟಂಗೆ ಹಾಕಿ ನೋಡುವೆ..
ಈ ಮಧ್ಯೆ ಸಿನೆಮ ನೋಡೋದು -ಮತ್ತು ಓದೋದು ಕಡಿಮೆ ಆಗಿದೆ..!!
ಕಾರಣ ನಿಮಗೆ ಗೊತ್ತಿದೆ...!!

ಮರು ಪ್ರತಿಕ್ರಿಯೆಗೆ ನನ್ನಿ

ಶುಭವಾಗಲಿ..

\।

Submitted by partha1059 Sun, 03/10/2013 - 17:54

ಮೊನ್ನೆ ಶುಕ್ರವಾರ‌ ನಮ್ಮ ಮನೆಗೆ ಪೇಪರ್ ಬ0ದೆ ಇರಲಿಲ್ಲ, ಮಾರನೆ ದಿನ‌ ಕೇಳಿದರೆ ಆ ಪೇಪರ್ ಹುಡುಗ‌ ಹಾಕಿ ಹೋಗಿದ್ದೆ ಸಾರ್ ಎ0ದ‌ ನಾನು ನ0ಬದೆ , ಅವನಿಗೆ ಚೆನ್ನಾಗಿಯೆ ಬೈದೆ ಅನ್ನಿ, ಈಗ‌ ಪಾಪ‌ ಅನ್ನಿಸುತ್ತೆ. ನನಗೆ ನಿಮ್ಮ ವಾಕಿ0ಗ್ , ಪೇಪರ್ ಪಿಕಿ0ಗ್ ಸಮಾಚರ ತಿಳಿದಿರಲಿಲ್ಲ

Submitted by ಗಣೇಶ Mon, 03/11/2013 - 00:27

In reply to by partha1059

ಕ್ಷಮಿಸಿ ಪಾರ್ಥರೆ, ನನ್ನಲ್ಲೂ ನಿಯತ್ತು ಇದೆ! ಪೇಪರ್ ಓದಿ ಅಲ್ಲೇ ಇಟ್ಟು ಹೋಗುವೆ. ಶುಕ್ರವಾರ ದಿನ ಮಾತ್ರ "ದೇವರಿಗೆಂದು" ನಿಮ್ಮ ಮನೆಯಲ್ಲಿ ಬೆಳೆದ ದಾಸವಾಳ ಇತ್ಯಾದಿ ಹೂಗಳು (ಇಲ್ಲದಿದ್ದರೆ ಹಾಗೇ ಗಿಡದಲ್ಲಿ ಬಾಡಿ ಉದುರುತ್ತಿತ್ತು) ಕಿತ್ತು, ಬೇರೆ ಚೀಲ ಇಲ್ಲದಿದ್ದುದರಿಂದ, ಪೇಪರ್‌ನೊಳಗೆ ತುಂಬಿಸಿಕೊಂಡು ಬಂದೆ ಅಷ್ಟೇ..ಪೇಪರ್ ಪಿಕಿಂಗ್ ಅಲ್ಲಾ-ಹೂ ಪಿಕಿಂಗ್, ಪೇಪರ್‌ನಲ್ಲಿ ಫಿಲ್ಲಿಂಗ್.

Submitted by H A Patil Sun, 03/10/2013 - 18:26

ಗಣೇಶರೆ, ನಿಮ್ಮ ಲಘು ಹಾಸ್ಯ ಲೇಖನಗಳಿಗೆ ಪಾರ್ಥ ಅವರ ಜೊತೆಗೆ ನಮ್ಮ ಸಪ್ತಗಿರಿ,ಬಲ್ಲೆಯವರು ,ಕವಿನಾಗರಾಜರು,ರಾಮೊ ಅವರು ಮತ್ತು ಇತರ ಸ್ನೇಹಿತರು ಬರೆಯುವ ಪ್ರತಿಕ್ರಿಯೆಗಳನ್ನು ಓದುವುದೇ ನಮಗೊಂದು ಮೋಜನ ಸಂಗತಿ ಮಾರಯ್ರೆ.....ವಂದನೆಗಳು.

Submitted by ಗಣೇಶ Mon, 03/11/2013 - 00:20

In reply to by H A Patil

>>ನಿಮ್ಮ ಲಘು ಹಾಸ್ಯ ಲೇಖನಗಳಿಗೆ...-ಪಾಟೀಲರೆ, ನನ್ನ ಬರಹವೇನಿದ್ದರೂ "ಲಘು". ಹಾಸ್ಯ ಪ್ರಾರಂಭವಾಗುವುದೇ ಪಾರ್ಥರು, ಸಪ್ತಗಿರಿವಾಸಿ, ಭಲ್ಲೇಜಿ, ಕವಿನಾಗರಾಜರು, ರಾಮೋಜಿ, ಸತೀಶ್, ಶ್ರೀಕರ್,ಶ್ರೀಧರ್‌ಜಿ, ಚಿಕ್ಕು(ಈಗ ಸಂಪದದಲ್ಲಿ ಕಾಣಿಸುತ್ತಿಲ್ಲ) ಜಯಂತ್...ಹಾಗೂ ನಿಮ್ಮಂತಹವರ ಪ್ರತಿಕ್ರಿಯೆಗಳು ಬಂದಾಗಲೇ. ಓದಿ ಮೆಚ್ಚಿ ಪ್ರತಿಕ್ರಿಯೆ ನೀಡುವ ನಿಮ್ಮೆಲ್ಲರಿಗೂ ಧನ್ಯವಾದಗಳು.