ಅಮ್ಮ! ಒಂದಷ್ಟು ಪಿಂಗಾಣಿ ಲೋಟಗಳನ್ನು ತಂದಿದ್ದಳು."ಸೋ-ಕೇಸ್ ನಲ್ಲಿ ಮೊದಲೇ ಜಾಗ ಇಲ್ಲ. ಇನ್ನು ಈ ಸೋ ಪೀಸುಗಳು ತಂದದ್ದು ಯಾಕೆ..? " ಅಂದೆ.
"ಹೆಂಗಂತಿಯಲ್ಲೋ..? ಇವು ಶೋ ಇಡೋದಕ್ಕಲ್ಲ, ಬಳಸೋದಕ್ಕೆ.. ತಂದಿರೋದು." ಎಂದಳು
ಅಮ್ಮನ ಆಸೆಯಂತೆ ಪಿಂಗಾಣಿ ಲೋಟದಲ್ಲೇ! ಟೀ ಸಮಾರಾಧನೆ ನಡೆಯುತ್ತಿತ್ತು. ಮೊದಮೊದಲು ತುಟಿ ಸುಟ್ಟುಕೊಳ್ಳುತ್ತಿದ್ದುದೂ,.. ಟೀ ಮುಗಿದು ಹೋದ ಮೇಲೆಯೂ, ತಳದಲ್ಲಿ ಇನ್ನೂ ಇರಬಹುದೇನೋ ಎಂದು ಲೋಟವನ್ನು ಎತ್ತಿ! ಸುರಿದುಕೊಂಡು, ಖಾಲಿ ಅಂತ ಗೊತ್ತಾದ ಮೇಲೆ ನಿರಾಶರಾಗಿ ಕೆಳಗಿಡುತ್ತಿದ್ದುದು ನಡೆದೇ ಇತ್ತು. ಇದು ಭಾರದ ಪಿಂಗಾಣಿ ಲೋಟ ಮತ್ತು ಹಿಂದೆ ಇದ್ದ ಹಗುರದ ಸ್ಟೀಲ್ ಲೋಟಗಳ ನಡುವಿದ್ದ inertia ಸಮಸ್ಯೆ.
ಅವಶ್ಯಕತೆ ಇರಲಿ ಬಿಡಲಿ, ಅಡುಗೆ ಮನೆಯು ತುಂಬಿ ತುಳುಕಬೇಕು ಎಂಬುದು ಅವಳ ಆಶಯ. ಅದಕ್ಕಾಗಿ ವಿವಿಧ ರೇಡಿಯಸ್ ಗಳ ತಟ್ಟೆ,ಪಾತ್ರೆ, ಬಾಕ್ಸು,ಲೋಟ, ಸೌಟುಗಳ ಪರ್ಮುಟೇಷನ್ನು ಕಾಂಬಿನೇಷನ್ನುಗಳು.
" ಇರೋರು ನಾಲಕ್ಕು ಜನಕ್ಕೆ ಇಷ್ಟೆಲಾ ಯಾಕಮ್ಮಿ ..? " ಅಂದ್ರೆ
" ನೆಂಟ್ರು ಬಂದರೆ, ಪಕ್ಕದ ಮನೆಗೆ ಹೋಗಿ ಅನ್ನೋದಕ್ಕಾಗುತ್ತೇನೊ ..? " ಎನ್ನುವಳು.
ಇನ್ನು ಸ್ಕೂಲ್ ಡೇ ಗಳಲ್ಲಿ ನಡೆಯುತ್ತಿದ್ದ ವಿವಿಧ ಸ್ಪರ್ಧೆಗಳಲ್ಲಿ, ತಟ್ಟೆ, ಟಿಫೀನು ಕ್ಯಾರಿಯರು, ದೊಡ್ಡ ಬೇಸಿನುಗಳನ್ನು ... ಗೆದ್ದು ತಂದಾಗ ಖುಷಿ ಪಡುತ್ತಿದ್ದಳು. ಅದನ್ನು ಹೇಳಿಕೊಳ್ಳುತ್ತಿದ್ದುದರಲ್ಲಿಯೂ ಯಾವುದೇ ಚೌಕಾಸಿ ಇರುತ್ತಿರಲಿಲ್ಲ. ಮನೆಗೆ ಬರುತ್ತಿದ್ದ ಹೆಣ್ಣು ಅತಿಥಿಗಳನ್ನು, ಸೀ...ದಾ ಅಡುಗೆ ಮನೆಗೆ ಕರೆದುಕೊಂಡು ಹೋಗಿ, ಅಕಸ್ಮಾತ್ ಗೆದ್ದು ತಂದಿದ್ದ ಬಾಕ್ಸಿನಲ್ಲಿ ಏನಾದರು ಇದ್ದರೆ, ಅದನ್ನು ಇನ್ನೊಂದಕ್ಕೆ ಸುರಿದು... ತೋರಿಸುತ್ತಾ ಹೇಳುವಳು-
" ಇವು ನನ್ನ ಮಗನಿಗೆ ಪ್ರೈಜ್ ಬಂದಿರೋವು " ಅಂತ.
ಸ್ಟೀಲ್ ತಟ್ಟೆ, ಬೇಸಿನ್ನುಗಳ ಮುಂದೆ, ಸರ್ಟಿಫಿಕೇಟುಗಳು.. ಸ್ಮರಣಿಕೆಯ ಮೊಮೆಂಟೋಗಳು ಅವಳ ಪಾಲಿಗೆ ತೃಣಕ್ಕೆ ಸಮಾನ. ಅವನ್ನೆಲ್ಲಾ ಸುಮ್ಮನೆ ಸೋ ಕೇಸಲ್ಲಿ ಧೂಳು ವರೆಸುತ್ತಾ ಇಡಬೇಕಲ್ಲಾ..? ಎಂಬುದು ಅವಳ ಅಂಬೋಣ. ಒಮ್ಮೆ ಓಲೆ ಕೊಳ್ಳಲು ಜೊಯಾಲುಕಾಸ್ ಚಿನ್ನದ ಅಂಗಡಿಗೆ ಹೋಗಿದ್ದೆವು. ಅಂಗಡಿಯ ಹೆಸರು ಉಚ್ಛಾರ ಮಾಡಲಾಗದೆ, "ಇದು ಎಂತ ಅಂಗಡಿಗೆ ಬಂದ್ಯೋ..? ಹೆಸರೇ ಹೇಳಕ್ಕೆ ಬರದೆ ಇರೋದು." ಅಂದಳು ಅಮ್ಮ. ಅಂಗಡಿಯ ಒಳಗೆ ಹೋಗುತ್ತಿದ್ದಂತೆ ಹಳೇ ಸಿನಿಮಾಗಳಲ್ಲಿ ವಿಲನ್ ಗಳಿಗೆ ನಿಧಿ ಸಿಕ್ಕಾಗ ಸಂಭ್ರಮ ಪಡುತ್ತಾ!ನೋಡುತ್ತಾ ನಿಲ್ಲುವರಲ್ಲಾ..? ಅಂತಹಾ reaction! ಅಮ್ಮನಿಂದ.
"ಚೇತನ! ಇವೆಲ್ಲಾ ನಿಜವಾಗಲು ಚಿನ್ನದ ಆಭರಣಗಳೇನೊ..? " ಎಂದಳು.
" ಹೂ ಮಮ್ಮಿ" ಅಂದೆ.
" ಟಿವಿನಲ್ಲಿ ಸುಮ್ಮನೆ ಉಮಾ ಗೋಲ್ಡು ಹಾಕ್ಕೊಂಡ್ ತೋರುಸ್ತಾರೆ ಅನ್ಕೊಂಡಿದ್ದೆ. ನಿಜವಾಗಲು ಇರುತ್ವೆ ಅಂತ ಗೊತ್ತೇ ಇರಲಿಲ್ಲ " ಅಂದಳು ನಗುತ್ತಾ.
ಅಮ್ಮನಿಗೆ ಬಂಗಾರದ ಮೇಲೆ ಸ್ತ್ರೀ ಸಹಜ ವ್ಯಾಮೋಹ. ನೋಡಿ ಸಂಭ್ರಮ ಪಟ್ಟು ಸುಮ್ಮನಾಗಿ ಬಿಡುವಳು. ಅಲ್ಲಿದ್ದ ಭವ್ಯವಾದ ದೊಡ್ಡ ಆಭರಣಗಳ, ಬೆಲೆ ತಿಳಿದುಕೊಳ್ಳುವ ಕುತೂಹಲ. ಆದರೂ ಅಷ್ಟು ದೊಡ್ಡ ಅಂಗಡಿ. ಬೆಲೆ ಕೇಳಿಬಿಟ್ಟರೆ, ಕೊಂಡುಕೊಳ್ಳಲೇ ಬೇಕಾಗುತ್ತದೇನೊ ಎಂಬ ಮುಜುಗರ ಅವಳಿಗೆ. ಆದರೂ ಕೇಳಬೇಕು ಆಂದುಕೊಂಡದ್ದನ್ನು, ಗಂಟಲೊಳಗೆ ಇಟ್ಟುಕೊಳ್ಳುವ ಸ್ತ್ರೀ ಜಾಯಮಾನವಲ್ಲ.
ಸೇಲ್ಸ್ ಮ್ಯಾನ್ ಹುಡುಗನಿಗೆ ಕೇಳಿದಳು.
ಆ ಹುಡುಗ ರೇಟು ಕೇಳಿದ್ದಕ್ಕೆ, ಆ ವಡವೆಯನ್ನೇ ತಂದು ಅವಳ ಕೈಗೆ ಕೊಟ್ಟು ಬಿಟ್ಟ.
"ಬೇಡ, ಬೇಡ ರೇಟ್ ತಿಳಿದುಕೊಳ್ಳೋಣ ಅಂತ ಅಷ್ಟೇ! ಪರ್ಚೇಸ್ ಮಾಡಲ್ಲ." ಎಂದಳು.
ಅದಕ್ಕವನು, "ಅಯ್ಯೋ! ನೋಡಿದ್ದನ್ನೆಲ್ಲಾ ತಗೋಬೇಕು ಅಂತೆಲ್ಲಾ ಇಲ್ಲಮ್ಮ. ಪರವಾಗಿಲ್ಲ ನೋಡಿ. " ಎನ್ನುತ್ತಾ ಅವಳು ಬೊಟ್ಟು ಮಾಡಿದ್ದನ್ನೆಲ್ಲಾ, ಶೋಕೇಸ್ ನಿಂದ ಹೊರ ತೆಗೆದು ತಂದು ತೋರಿಸಿದ.
"ಇವುನ್ನೆಲ್ಲಾ ಯಾರಾದ್ರು ಪರ್ಚೇಸ್ ಮಾಡ್ತಾರ..?" ಎಂಬ ಮುಗ್ಧ ಪ್ರಶ್ನೆಯೊಂದನ್ನು ಕೇಳಿದಳು.
ಅದಕ್ಕವನು "ಪರ್ಚೇಸ್ ಮಾಡದೆ, ಸುಮ್ಮನೆ ಇಲ್ಲಿ ಇಡೋದಕ್ಕಾಗುತ್ತಾ..?" ಎಂದ. ಕಲ್ಲುಗಳಷ್ಟೇ ಅಲ್ಲ, ಕನ್ಯೆಯರೂ ಈ ಪಾಟಿ ಮೇಘಾ ವಡವೆಗಳನ್ನು ಕೊಳ್ಳುವರೆಂಬುದನ್ನು ಹೇಳಿದ.
"ಚೇತನ! ಒಂದೇ ಒಂದು ಉಂಗುರ ತಗಳೋ ನಿನಗೆ. ಭಾರ ಇರೋದು ಬೇಡ. ತೆಳ್ಳುದೆ ತಗೋಳಪ್ಪ. ಗಂಡು ಮಕ್ಕಳ ಮೈ ಮೇಲೆ ಸ್ವಲ್ಪನಾದರು ಬೆಳ್ಳಿನೋ, ಚಿನ್ನಾನೋ ಇರ್ಬೇಕು. ಒಳ್ಳೇದಾಗುತ್ತೆ.. " - ಅಂತ ಅಂಗಡಿಯಲ್ಲಿ ತನ್ನ ಲಾಜಿಕ್ ಲೆಸ್ ಗೋಗರೆತ ಶುರು ಮಾಡಿದಳು.
" ನಿಲ್ಲದು ಮೈಮೇಲೆ ಉಡುದಾರ! ಜನಿವಾರ!, ಇನ್ನು ನನಗೇಕೆ..? ಬೆಳ್ಳಿ ಬಂಗಾರ! " ಅಂತ ಷಾಯರಿ ಬಿಟ್ಟೆ. ಸುಮ್ಮನಾದಳು ಮಮ್ಮಿ!
ಕೆಲ ದಿನಗಳು ಕಳೆದರೂ ಅಮ್ಮನಿಗೆ ಈ ಬಂಗಾರದ ಹ್ಯಾಂಗ್ ಓವರ್ ಕಮ್ಮಿ ಆಗಿರಲಿಲ್ಲ. "ಪ್ರಪಂಚ ಪ್ರಳಯ ಆಗೋದು ಪಕ್ಕಾ ಆದ್ರೆ ಹೇಳು!! ಮನೆ ತೋಟ ಎಲ್ಲಾ ಮಾರಾಕಿಬಿಟ್ಟು! ಆ ಹುಡುಗ ತೋರಿಸಿದ್ದನಲ್ಲ ಅಷ್ಟೂ ವಡವೆಗಳನ್ನ ಪರ್ಚೇಸ್ ಮಾಡಿ ತಂದು ಬಿಡೋಣ. " ಎಂದು ತನ್ನ ಮಹದಾಸೆಯನ್ನು ಹೇಳುವಳು.
ಇನ್ನು ಸೀರೆ! ಕಥೆ.
ಹೊಸ ಸೀರೆಗಳ ಬೇಕುಗಳಿಗೆ ತಲೆ ಕೊಟ್ಟವರಲ್ಲಿ ನನ್ನ ಅಮ್ಮನೂ ಹೊರತಾಗಿರಲಿಲ್ಲ. ಆದರೂ ಹೆಂಗಸರ ಪ್ರಪಂಚವನ್ನ ಅವರ ಮಾತು, ಜೋಕು, ಹರಟೆ, ಮುನಿಸು ಎಲ್ಲವನ್ನೂ ಮಿತಿಗೊಳಿಸಿ ಸುತ್ತುವರೆದಿರುವ ಸೀರೆ! ಎಂಬ ಸರ್ವಾಂತರ್ಯಾಮಿಯ ಬಗ್ಗೆ ಅಚ್ಚರಿ ಪಡದೆ ದಾರಿ ಇಲ್ಲ. ದೂರದರ್ಶನದಲ್ಲಿ ವಾರ್ತೆ ಓದುವ ಹೆಂಗಸರ ಐಡೆಂಟಿಟಿ ಇರುತ್ತಿದ್ದುದು ಕೂಡ ಅವರ ಸೀರೆಗಳಿಂದ ಎಂಬುದು ಹಳೆಯ ಮಾತು, ಇವರ ಕರಾಳ ದೃಷ್ಟಿಯಿಂದ ದೇವರ ಮೇಲಿನ ಸೀರೆಯು ತಪ್ಪಿಸಿಕೊಳ್ಳುವಂತಿಲ್ಲ.
ಈ ಸೀರೆಗಳ ಮಧ್ಯೆ, ಅಪರೂಪಕ್ಕೆ ಎಂಬಂತೆ ನನಗೂ ಬಟ್ಟೆ ತರುವಳು. ಅವುಗಳಲ್ಲಿ ಹೆಚ್ಚಿನವು ದೊಗಲೆ ದೊಗಲೆ. "ನಿಮ್ಮಮ್ಮನಿಗೆ! ತನ್ನ ಮಗ ಭಾರಿ ದಪ್ಪ ಇದಾನೆ ಅನ್ನೋ ಭ್ರಮೆ. ಅದಕ್ಕೆ ಸೈಜು ದೊಡ್ಡುದಾಗತ್ತೆ ಕಣೆ ಅಂದ್ರು, ಅಂತಹವನ್ನೇ ಸೆಲೆಕ್ಟು ಮಾಡಿ ತರ್ತಾಳೆ. " ಅಂತ ಅಪ್ಪಾಜಿ ಕಿಚಾಯಿಸುವರು.
ಒಂದ್ಸಾರಿ, ಊರಿಂದ ಬಂದ ಗೆಳೆಯ ರವಿ,
" ಇವತ್ತು ಊಟ ಪ್ಯಾಕ್ ಮಾಡಿರೋಳು ನಮ್ಮಕ್ಕ " ಅಂದ. ಹೆಂಗ್ ಹೇಳ್ತೀಯೋ ಅಂದ್ರೆ "ತುಂಬಾ ಸಿಂಪಲ್! ಊಟಕ್ಕೆ 'ಮೂರು ಚಪಾತಿ ಕಟ್ರಿ' ಅಂತ ಹೇಳಿದ್ದೆ. exact ಆಗಿ ಮೂರೇ ಚಪಾತಿ ಇದೆ ಬಾಕ್ಸಲ್ಲಿ. ಸೊ ಡೌಟೇ ಇಲ್ಲ. ಇದು ನಮ್ಮಕ್ಕ ತುಂಬಿರೋದು. ಅಮ್ಮ ತುಂಬಿದ್ರೆ! ನಾನು ಬಯ್ತೀನಿ ಅಂತ ಗೊತ್ತಿದ್ರು, ಕೊನೆಪಕ್ಷ ಇನ್ನು ಒಂದಾದ್ರು ಜಾಸ್ತಿ ತುಂಬಿರ್ತಿದ್ದಳು " ಅಂದ.
ಇಷ್ಟೇ! ಅಮ್ಮನಿಗೂ, ಬೇರೆಯವರಿಗೂ ಇರುವ ಚಿಕ್ಕ ವ್ಯತ್ಯಾಸ! .ಅಡುಗೆ ಚೆನ್ನಾಗಿದ್ದು, ಅಕಸ್ಮಾತ್ ಕ್ವಾಂಟಿಟಿ ಕಡಿಮೆ ಇದ್ದಲ್ಲಿ! ಯಾರಿಗೂ ಗೊತ್ತಾಗದ ಹಾಗೆ ಅಮ್ಮನ ಊಟದ ಸ್ಪೀಡ್ ಕಡಿಮೆ ಆಗಿ ಬಿಟ್ಟರತ್ತೆ. ಧರ್ಮ ಸೂಕ್ಷ್ಮಗಳ ನಡುವೆ ಸಿಕ್ಕಿ ಕೊಂಡಾಗಲು, ಅಮ್ಮನ ಒಂದೇ ಮಾತು ನನ್ನ ತಳಮಳಗಳನ್ನ ದೂರ ಮಾಡಿದ್ದುಂಟು. ಅಮ್ಮ ಓದಿದ್ದು ಮೂರನೇ ಕ್ಲಾಸ್. ಆದರೂ ನನ್ನ ಬಹಳಷ್ಟು ಪ್ರಾಕ್ಟಿಕಲ್ ಸಮಸ್ಯೆಗಳಿಗೆ ಅವಳು ಉತ್ತರ ಆಗಿದ್ದಾಳೆ.
ಚಿಕ್ಕೋನಾಗಿದ್ದಾಗ, ಜಿಮ್ಮಿ ಅನ್ನೋ ನಾಯಿ' ಸಾಕಿದ್ದೆ. ಆ ನಾಯಿಗೆ 'ಜಿಮ್ಮಿ' ಎಂದೇನೋ ನಾಮಕರಣ ಮಾಡಿದ್ದೆ. ಆದರೆ ಅದಕ್ಕೆ ತನ್ನ ಹೆಸರು 'ಜಿಮ್ಮಿ' ಎಂದು ಅರ್ಥ ಮಾಡಿಸುವುದಾದರು ಹೇಗೆ..? ನಾನು ಅದೆಷ್ಟು ಬಾರಿ 'ಜಿಮ್ಮಿ!' ಅಂದರೂ... ಒಮ್ಮೆಯೂ ನನ್ನ ಮಾತಿಗೆ ಸೊಪ್ಪು ಹಾಕುತ್ತಿರಲಿಲ್ಲ.
ಹೆಸರಿನ ಹಂಗಿರುವುದು! ಹೆಸರಿಗಾಗಿ ಜಗಳ ಮಾಡೋ ನಮಗೆ ಅಷ್ಟೇ ಇರಬೇಕು ಅನ್ನಿಸಿತು. ಅಥವಾ ಗುಂಪುಜೀವಿಗಳಾದ ನಾಯಿಗಳು, ನಾವು ಅವುಗಳಿಗೆ ಹೆಸರಿಟ್ಟಂತೆ ಅವು ತಮ್ಮ ನಾಯಿ ಭಾಷೆಯಲ್ಲಿ ತಮಗೂ! ಮತ್ತು ಸುತ್ತ ಇರುವ ನಮಗೂ ಏನಾದರೂ ಹೆಸರಿಟ್ಟಿರಬಹುದೇ ಎಂಬುದೊಂದು ಯೋಚನೆ ಬರುತ್ತಿತ್ತು.
ನನ್ನ ಈ ಹೆಸರ ಮತ್ತು ಐಡೆಂಟಿಟಿಗಳ ತಾಂತ್ರಿಕ ದೋಷವನ್ನು ಅಮ್ಮನಿಗೆ ಹೇಳಿದೆ. ಅದಕ್ಕವಳು -
" ಸ್ವಲ್ಪ ದಿನ ನಾಯಿಗೆ 'ಅನ್ನ' ಹಾಕೋವಾಗ ಮತ್ತೆ ಬಿಸ್ಕೇಟು , ಬನ್ನು ಕೊಡೋಕೆ ಮುಂಚೆ 'ಜಿಮ್ಮಿ ಜಿಮ್ಮಿ ಜಿಮ್ಮಿ' ಎಂದು ಕೂಗಿ ಕೊಡು."ಅಂದಳು
ಸರಿ ಎಂದು ಹಾಗೆಯೇ ಮಾಡಿದೆ. ಅದಕ್ಕೆ ತಿನ್ನಲು ಕೊಡುವ ಮುಂಚೆ 'ಜಿಮ್ಮಿ ಜಿಮ್ಮಿ ಜಿಮ್ಮಿ' ಎಂದು ಹೇಳುತ್ತಿದ್ದೆ. ನಂತರ ನಾನು 'ಜಿಮ್ಮಿ ಜಿಮ್ಮಿ ಜಿಮ್ಮಿ ...' ಎಂದ ತಕ್ಷಣ ಎಲ್ಲಿದ್ದರೂ ಬಾಲ ಅಲ್ಲಾಡಿಸಿಕೊಂಡು ಬರಲು ಪ್ರಾರಂಭಿಸಿತು.
ಆದರೂ ನನ್ನ ಜಿಮ್ಮಿಗೆ 'ಜಿಮ್ಮಿ' ಎಂಬುದು ಅದರ ಹೆಸರು ಎಂದು ತಿಳಿಸಿ ಹೇಳಲು ಪ್ರಯತ್ನಿಸುತ್ತಿದ್ದೆ. ಯಾಕಂದ್ರೆ 'ಜಿಮ್ಮಿ' ಅಂದ್ರೆ 'ತಿನ್ನೋಕೆ ಕರೆಯೋ ಯಾವುದೋ ಪದ' ಅಂದುಕೊಂಡು ಬಿಟ್ರೆ ಅನ್ನೋ ಅನುಮಾನ ಇತ್ತು.
ಅಮ್ಮನ ಫಾರ್ಮುಲ ಸಿದ್ಧಿಸಿದ್ದನ್ನು ಅವಳಿಗೆ ಹೇಳಿದೆ.
'ನಿನಗೆ ಹೆಂಗ್ ಗೊತ್ತಾಯ್ತು.. ಇದೆಲ್ಲಾ ' ಅಂತ ಕೇಳಿದ್ದಕ್ಕೆ 'ಅನುಭವ' ಎಂದಳು.
ಬಹುಷಃ ನಮ್ಮ ಹೆಸರು ನಮಗೆ ಅಭ್ಯಾಸ ಮಾಡಿಸೋದಕ್ಕು, ಅಮ್ಮಂದಿರು ಬಿಸ್ಕೇಟು! ಬನ್ನು!
ಟ್ರಿಕ್ಸು ಬಳಸುತ್ತಿದ್ದರಾ..? ಗೊತ್ತಿಲ್ಲ.
Comments
ಚೇತನ್ ಅವ್ರೆ ನಿಮ್ಮ ಲೇಖನ ಬಹಳ
ಅಮ್ಮನಿಂದ ಮಕ್ಕಳೆಡೆಗೆ ಹರಿದುಬರುವ ಅಮಿತ ಪ್ರೀತಿಯನ್ನ ಚಿತ್ರಿಸಿದೆ..
ಸಾಮಾನ್ಯವಾಗಿ ಎಲ್ಲಾ ಅಮ್ಮಂದಿರಲ್ಲು ಈ ಮೇಲ್ಕಂಡ ವಿಚಾರಗಳು ಸಾಮಾನ್ಯವಾಗಿದೆ.. ನೀವೆ ಉಲ್ಲೇಖಿಸಿದಂತೆ
>>"ಅಮ್ಮ ತುಂಬಿದ್ರೆ! ನಾನು ಬಯ್ತೀನಿ ಅಂತ ಗೊತ್ತಿದ್ರು, ಕೊನೆಪಕ್ಷ ಇನ್ನು ಒಂದಾದ್ರು ಜಾಸ್ತಿ ತುಂಬಿರ್ತಿದ್ದಳು.. " :-)
ಧನ್ಯವಾದಗಳು..
In reply to ಚೇತನ್ ಅವ್ರೆ ನಿಮ್ಮ ಲೇಖನ ಬಹಳ by vidyakumargv
ಧನ್ಯವಾದಗಳು!!ವಿದ್ಯಾಕುಮಾರ್ :)
>>>ಇಷ್ಟೇ! ಅಮ್ಮನಿಗೂ,
In reply to >>>ಇಷ್ಟೇ! ಅಮ್ಮನಿಗೂ, by ಗಣೇಶ
ಗಣೇಶ್ ಅವರೆ , ನಿಮ್ಮ ಮೆಚ್ಛುಗೆಯ
"ತುಂಬಾ ಸಿಂಪಲ್! ಊಟಕ್ಕೆ 'ಮೂರು