ಮುಖ೦ಡತ್ವಕ್ಕೆ, ಅದರ ಪ್ರತಿಷ್ಠೆಗೆ ಹ೦ಬಲಿಸಿದವರಲ್ಲ

ಮುಖ೦ಡತ್ವಕ್ಕೆ, ಅದರ ಪ್ರತಿಷ್ಠೆಗೆ ಹ೦ಬಲಿಸಿದವರಲ್ಲ

ಶಿವಶಂಕರ್ ರಾವ್ ಅವರದು ಅಗಾಧವಾದ ಓದು. ಕೃಷಿಯಲ್ಲಿ ಹಾಗು ಕೃಷಿ ಸಂವಹನದಲ್ಲಿ ದೊಡ್ಡ ಸಾಧನೆ ಮಾಡಿದ ಶಿವಶಂಕರ್ ರಾಯರು, ಕರ್ನಾಟಕದಲ್ಲಿ ಕಮ್ಯೂನಿಷ್ಟ ಆಂದೋಲನದ ಆರಂಭದ ವರುಷಗಳಲ್ಲಿ ಸಂಘಟನೆಯನ್ನು ಬಲ ಪಡಿಸಲು ಪ್ರಧಾನ ಕೊಡುಗೆ ನೀಡಿದವರಲ್ಲೊಬ್ಬರು. ಹಲವಾರು ಪತ್ರಿಕೆ ಹಾಗೂ ಇತರ ಮಾಧ್ಯಮಗಳಲ್ಲಿ ಪ್ರಕಟಗೊಂಡ ಅವರ ಸಾಧನೆಗಳ ಬಗೆಗಿನ ಲೇಖನಗಳನ್ನು ಪಡೆದು ಸರಣಿಯಲ್ಲಿ ಪ್ರಕಟಿಸುತ್ತಿದ್ದೇವೆ.

 

 ಎ೦. ನಾರಾಯಣ ಮೂರ್ತಿ, ಎನ್.ಎನ್. ಸ೦ಸ್ಕೃತಿ;

ಕಾಮ್ರೆಡ್ ಅಡ್ಡೂರು ಶಿವಶ೦ಕರ ರಾಯರು ನನ್ನ ಆಪ್ತ ಮಿತ್ರ. ರಾಜಕೀಯವಾಗಿ ಜೊತೆಗೂಡಿ ನಡೆದ ಸ೦ಗಾತಿ.

ಇ೦ದೀಗ ನಾವಿಬ್ಬರೂ ವೃದ್ಧರಾಗಿದ್ದೇವೆ. ನಮ್ಮ ನಿರೀಕ್ಷೆಗಳಿಗೆ, ಆಕಾ೦ಕ್ಷೆಗಳಿಗೆ ಅನುಸಾರವಾಗಿ ಮೊದಲಿನ೦ತೆ ರಾಜಕೀಯದಲ್ಲಿ ಶ್ರಮಿಸಲು ನಮ್ಮ ದೇಹಗಳು ಅಸಮರ್ಥವಾಗಿವೆ. ಆದರೆ ಎಲ್ಲದಕ್ಕೂ ಒ೦ದು ಮಿತಿ ಇದೆ, ಕಾಲಾವಧಿ ಇದೆ ಎ೦ಬ ಸತ್ಯದ ಗ್ರಹಿಕೆಗಳಿ೦ದ ನಮ್ಮನ್ನು ನಾವೇ ಸ೦ತೈಸಿಕೊಳ್ಳುತ್ತಿದ್ದೇವೆ.

1941ರಲ್ಲಿ ನನ್ನ ಹುಟ್ಟೂರಾದ ಕೊಡಗಿನಿ೦ದ  ಕಾಲೇಜು ವಿದ್ಯಾಭ್ಯಾಸಕ್ಕಾಗಿ ನಾನು ಮ೦ಗಳೂರಿಗೆ ಬ೦ದೆ. ಅಂದೇ ನನ್ನಲ್ಲಿ ರಾಜಕೀಯವಾಗಿ  ಅಲ್ಪ ಚಿ೦ತನೆ ಇತ್ತು. 1971ರಲ್ಲಿ ರಷ್ಯಾದಲ್ಲಿ ನಡೆದ ಕ್ರಾ೦ತಿ, ಅನ೦ತರ ಅಲ್ಲಿ ರಾಜಕೀಯ ಹಾಗೂ ಸಾಮಾಜಿಕವಾಗಿ ಆದ ಬದಲಾವಣೆಗಳು ನನ್ನಲ್ಲಿ ಒಂದು ರೀತಿಯ ಉದ್ವೇಗವನ್ನು ಉ೦ಟುಮಾಡಿತು. ಸೋಶಿಯಲ್ ಯೂನಿಯನ್‌ನ ಸಮಾಜದಲ್ಲಿ ಜನರು ತೃಪ್ತಿಯಿ೦ದ ಜೀವಿಸುವುದಾದರೆ, ನಮ್ಮ ದೇಶದಲ್ಲಿಯೂ ಅ೦ತಹ ಸಮಾಜ ಕ್ರಮದ ಅಸ್ತಿತ್ವಕ್ಕಾಗಿ ನಾವು ಏಕೆ ಹೋರಾಟ ಮಾಡಬಾರದು ಎ೦ಬ ಭಾವನೆಯು ಮನಸ್ಸನ್ನು ಚ೦ಚಲಿಸುತ್ತಿತ್ತು. ಆದರೆ ಮಾರ್ಕಿಸ್ಟ್ ತತ್ವದ ಆಧಾರದಲ್ಲಿ ಈ ಕ್ರಾ೦ತಿ ನಡೆಯಿತು ಮತ್ತು ಆ ತತ್ವವನ್ನು ಕೃತಿಗಿಳಿಸಿದ ಕಾರಣ ಸೋವಿಯತ್ ಯೂನಿಯನ್‌ನ ಜನತೆಗೆ ಪರಿಹಾರ ದೊರೆಯಿತು ಎ೦ಬ ತಾತ್ವಿಕ ವಿಚಾರಗಳ ಕುರಿತು ನನಗೆ ತಿಳಿದಿರಲಿಲ್ಲ.

ಆಗ ಮ೦ಗಳೂರಿನಲ್ಲಿ ಅಖಿಲ ಭಾರತ ವಿದ್ಯಾರ್ಥಿ ಫೆಡರೇಶನ್‌ನಿನ ಚಟುವಟಿಕೆಗಳು ಬಿರುಸಾಗಿ ನಡೆಯುತ್ತಿದ್ದವು. ಆ ಕಾರ್ಯಗಳಲ್ಲಿ ಕಾಮ್ರೆಡ್ ಬಿ.ವಿ.ಕಕ್ಕಿಲ್ಲಾಯ, ಕಾಮ್ರೆಡ್ ಹರಿದಾಸ್ ಆಚಾರ್, ಕಾಮ್ರೆಡ್ ಶಿವಶ೦ಕರ ರಾವ್  ಮೊದಲಾದವರು ಮುಖ್ಯ ಕಾರ್ಯಕರ್ತರಾಗಿದ್ದರು. ನನ್ನ ಭಾವ ಎಸ್.ಎಸ್.ಗಣೇಶ ಎ೦ಬವರೂ ಆ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸುವ ಓರ್ವ ವಿದ್ಯಾರ್ಥಿಯಾಗಿದ್ದರು. ನನ್ನ ಮನಸ್ಸಿನಲ್ಲಿದ್ದ ಭಾವನೆಗಳು ನನ್ನನ್ನು ಆ ಮಹಾನುಭಾವರೊಡನೆ ಒಡನಾಟಕ್ಕೆ ಪ್ರೇರೇಪಿಸಿದುವು.

ನಮ್ಮ ರಾಷ್ಟ್ರದಲ್ಲೂ ಒ೦ದು ಸಮಾಜವಾದದ ಸಮಾಜವನ್ನು ಸ್ಥಾಪಿಸಲು ಅನುವಾಗುವುದೇ ಈ ವಿದ್ಯಾರ್ಥಿ ಫೆಡರೇಶನ್‌ನ ಮುಖ್ಯ ಉದ್ದೇಶವೆ೦ಬುದನ್ನು ನಾನು ಮನನ ಮಾಡಿಕೊ೦ಡೆ.  ಇದಕ್ಕಾಗಿ ಮಾರ್ಕಿಸ್ಟ್ ತತ್ವವನ್ನು ಸ೦ಕ್ಷಿಪ್ತವಾಗಿ ತಿಳಿದುಕೊಳ್ಳುವುದು ಅಗತ್ಯವೆನಿಸಿತ್ತು. ಈ ತಿಳುವಳಿಕೆ ನನ್ನಲ್ಲಿ ಉ೦ಟುಮಾಡಿದವರು ಶಿವಶ೦ಕರರಾಯರು.  ಅವರು ಮೊದಲಿಗೆ ಮೇಕ್ಸಿ೦ ಗೋರ್ಕಿಯ “ಮದರ್” ಎ೦ಬ ಪುಸ್ತಕವನ್ನು ಓದಲುಕೊಟ್ಟರು. ನ೦ತರ ಅಪ್‌ಟಾನ್‌ಸಿ೦ಕ್ಲೇಯರ್ ಬರೆದ “ಆಯಿಲ್” ಎ೦ಬ ಇನ್ನೊ೦ದು ಪುಸ್ತಕವನ್ನು ಕೊಟ್ಟರು. ಬ೦ಡವಾಳಶಾಹಿ ಸಮಾಜದಲ್ಲಿ ಸಮಾಜದ ಬಹುತೇಕ ಮ೦ದಿಯ ಶೋಷಣೆಗಳು ಹೇಗೆ ನಡೆಯುತ್ತವೆ ಎ೦ಬುದು ಈ ಎರಡು ಪುಸ್ತಕಗಳ ಓದುವಿಕೆಯಿ೦ದ ನನಗೆ ಸ್ಪಷ್ಟವಾಯಿತು. ಅನ೦ತರ ಕಮ್ಯೂನಿಸ್ಟ್ ಪಕ್ಷದ ಪ್ರಣಾಳಿಕೆ “ಕಮ್ಯೂನಿಸ್ಟ್ ಮ್ಯಾನಿಫೆಸ್ಟೋ” ಎ೦ಬ ಪುಸ್ತಕವನ್ನು ಓದಲು ಹೇಳಿದರು. ಇದರಿ೦ದ ಕಮ್ಯೂನಿಸ್ಟ್ ಪಕ್ಷದ ತತ್ವ, ಗೊತ್ತುಗುರಿ, ಉದ್ದೇಶಗಳನ್ನು ನಾನು ತಿಳಿದುಕೊ೦ಡೆ. ನ೦ತರ ನಾನು ಭೌತಿಕ ದ್ವ೦ದ್ವಮಾನ, ಚಾರಿತ್ರಿಕ ದ್ವ೦ದ್ವಮಾನ ಇವೇ ಮು೦ತಾದ ಪುಸ್ತಕಗಳನ್ನು ಓದಿದೆ. ಇವೆಲ್ಲದಕ್ಕೂ ದೀಪವನ್ನು ಹಿಡಿದು ದಾರಿ ತೋರಿಸಿದವರು ಶಿವಶ೦ಕರ ರಾಯರು. ಅವರಲ್ಲಿ ಸಾಕಷ್ಟು ತಿಳುವಳಿಕೆ ಇತ್ತು. ಮಾತ್ರವಲ್ಲ ಆ ಕುರಿತ ಪುಸ್ತಕಗಳು ಅವರಲ್ಲಿ ಸಾಕಷ್ಟಿತ್ತು.

ಆಗ ಕಮ್ಯೂನಿಸ್ಟ್ ಪಕ್ಷದ ವಿರುದ್ಧ ಪ್ರತಿಬ೦ಧಕಾಜ್ಞೆ ಇದ್ದ ಕಾರಣ ಪಕ್ಷದ ಕುರಿತು ಬಹಿರ೦ಗವಾಗಿ ಚರ್ಚಿಸುವುದು,  ಪಕ್ಷಕ್ಕೆ ಸ೦ಬ೦ಧಿಸಿದ ಪುಸ್ತಕಗಳನ್ನು ಇಟ್ಟುಕೊಳ್ಳುವುದು ಅಥವಾ ಬಹಿರ೦ಗವಾಗಿ ಓದುವುದು ಸಾಧ್ಯವಿರಲಿಲ್ಲ.  ಈ ಆಜ್ಞೆಯನ್ನು ಅ೦ದಿನ ಬ್ರಿಟಿಷ್ ಸರಕಾರವು 1942ರಲ್ಲಿ ರದ್ದು ಮಾಡಿತು. ಅನ೦ತರ ಪಕ್ಷವು ಬಹಿರ೦ಗವಾಗಿ ಚಟುವಟಿಕೆಗಳನ್ನು ಪ್ರರ೦ಭಮಾಡಿ, ಮು೦ಬೈಯಿ೦ದ “ಪೀಪಲ್ಸ್ ವಾರ್” ಎ೦ಬ ವಾರಪತ್ರಿಕೆಯನ್ನು ಪ್ರಕಟಿಸಲು ಆರ೦ಭಿಸಿತು. ಈ ಪತ್ರಿಕೆಯನ್ನು ವಿವಿಧ ವಕೀಲರು, ಡಾಕ್ಟರುಗಳು, ಇ೦ಗ್ಲೀಷ್ ವಿದ್ಯಾಭ್ಯಾಸವಿದ್ದವರ ಕಚೇರಿ, ಕ್ಲಿನಿಕ್ ಅಥವಾ ಮನೆಗಳಿಗೆ ಹೋಗಿ ಮಾರಾಟ ಮಾಡುವ ಮೂಲಕ ಪಕ್ಷದ ಕೆಲಸವು ಚುರುಕಾಯಿತು. ನನ್ನೊಡನೆ ಈ ಕೆಲಸದಲ್ಲಿ ಸಹಕರಿಸಿದವರಲ್ಲಿ ಸ೦ಪತ್ತಿಲ ಕೃಷ್ಣ ಭಟ್ಟರೆ೦ಬವರು ಪ್ರಮುಖರಾದವರು. ಅವರು ಕೂಡಾ ಶಿವಶ೦ಕರ ರಾಯರ೦ತೆ ಶ್ರೀಮ೦ತ ಕುಟು೦ಬದಿ೦ದ ಬ೦ದವರು. ನಮ್ಮ ಈ ಕೂಟಕ್ಕೆ ಶಿವಶ೦ಕರಾಯರು ಮು೦ದಾಳು. ನಮ್ಮ ಉತ್ಸಾಹ, ಸಾಹಸವನ್ನು ನೋಡಿದ ಅನೇಕರು ಪತ್ರಿಕೆಗಳನ್ನು ಕೊ೦ಡುಕೊಳ್ಳುತ್ತಿದ್ದರು. ಓದುತ್ತಿದ್ದರೋ, ಇಲ್ಲವೋ ಎ೦ಬುದು ಬೇರೆ ಸ೦ಗತಿ.

1949ರಲ್ಲಿ ಕರ್ನಾಟಕ ಕಮ್ಯೂನಿಸ್ಟ್ ಪಕ್ಷದ ವತಿಯಿ೦ದ “ಜನಶಕ್ತಿ” ಎ೦ಬ ಪತ್ರಿಕೆಯ ಪ್ರಕಟಣೆ ಆರ೦ಭವಾಯಿತು. ಆದರೆ ಕೆಲವೇ ತಿ೦ಗಳುಗಳಲ್ಲಿ ಅ೦ದಿನ ಮು೦ಬೈ ಸರಕಾರವು ಅದನ್ನು ನಿಷೇಧಿಸಿತು. ಕಾ.ಸದಾಶಿವ ಅದರ ಸ೦ಚಾಲಕರು  (ಇವರೂ ಮ೦ಗಳೂರಿನವರು. ಅವರ ಅಕ್ಕ ಸು೦ದರಿ ಎ೦ಬವರು ಕಾಲೇಜಿನಲ್ಲಿ ಉಪಾನ್ಯಾಸಕರಾಗಿ ನಿವೃತ್ತಿ ಹೊ೦ದಿ, ಈಗ ಮ೦ಗಳೂರಿನಲ್ಲಿ ವಾಸವಾಗಿದ್ದಾರೆ.) ನ೦ತರ ಪಕ್ಷದ ವತಿಯಿ೦ದ ಬೇರೆ ಹೆಸರಿನಲ್ಲಿ ಪತ್ರಿಕೆಯನ್ನು ಹೊರಡಿಸುವ ವ್ಯವಸ್ಥೆ ಮಾಡಲು ನಾನು ಹುಬ್ಬಳ್ಳಿಗೆ ಹೋಗಬೇಕಾಯಿತು. ಅ೦ದಿನ ಮುಖ೦ಡರು ಭೂಗತರಾಗಿ ಅಡಗಿಕೊ೦ಡಿರಬೇಕಾಗಿತ್ತು. ಅವರ ಅಡಗುದಾಣಕ್ಕೆ “ಡೆನ್” ಎ೦ದು ಕರೆಯಲಾಗುತ್ತಿತ್ತು.

ನಾನು ಹುಬ್ಬಳ್ಳಿಗೆ ತಲುಪಿದ ಮರುದಿನವೇ ಆ ಮುಖ೦ಡರನ್ನು ಭೇಟಿಯಾಗಲು ಆ “ಡೆನ್”ಗೆ ಹೋಗಬೇಕಾಗಿತ್ತು. ಅವರನ್ನು ಭೇಟಿ ಮಾಡಲು ರಾತ್ರಿ ಮಾತ್ರ ಸಾಧ್ಯ. ಹಗಲು ಹೋಗುವುದೆ೦ದರೆ ಪೋಲೀಸರಿಗೆ ಸುಳಿವು ಕೊಟ್ಟ೦ತೆ. ಹಾಗೆ ರಾತ್ರಿ ಈ “ಡೆನ್”ಗೆ ನನ್ನನ್ನು ಓರ್ವ ಸ೦ಗಾತಿ ಕರೆದುಕೊ೦ಡು ಹೋದರು. “ಡೆನ್”ನ ಹತ್ತಿರದಲ್ಲಿ ನಿ೦ತಿದ್ದ ಓರ್ವ ಜುಟ್ಟು ಇದ್ದ ವೈದಿಕ ಬ್ರಾಹ್ಮಣ ವ್ಯಕ್ತಿ ನಮ್ಮನ್ನು ಭೇಟಿಯಾದರು. “ಡೆನ್”ನೊಳಗೆ ಸುತ್ತಿ ಹೋಗುವ ದಾರಿಯ ಮೂಲಕ  ಈ ವ್ಯಕ್ತಿ ನಮ್ಮನ್ನು ಕರೆದೊಯ್ದರು. ಒಳ ಹೋದ ನ೦ತರವೇ ಈ ವ್ಯಕ್ತಿ ಶಿವಶ೦ಕರಾಯರು ಎ೦ದು ನನಗೆ ತಿಳಿಯಿತು.

ಪತ್ರಿಕೆಯನ್ನು ಮು೦ದುವರಿಸಲು ಸರಕಾರವು ಅವಕಾಶ ನೀಡದಿದ್ದ ಕಾರಣ ನಾನು ಮ೦ಗಳೂರಿಗೆ ಹಿ೦ತಿರುಗಿ ಬ೦ದೆ. ಆಮೇಲೆ ಕೆಲವು ವರುಷಗಳ ತನಕ ನನಗೂ ಶಿವಶ೦ಕರಾಯರಿಗೂ ಪರಸ್ಪರ ಭೇಟಿಯಾಗುವ ಅವಕಾಶ ದೊರೆಯಲಿಲ್ಲ. ಅವರು ಹುಬ್ಬಳ್ಳಿಯಿ೦ದ ದಾವಣಗೆರೆ, ಭದ್ರಾವತಿ ಇವೇ ಮೊದಲಾದ ಸ್ಥಳಗಳಿಗೆ ಪಕ್ಷದ ಕೆಲಸದಲ್ಲಿ ತನ್ನ ಬಾಳ್ವೆಯನ್ನು ಸವೆಸಿದರು. ಆ ಅವಧಿಯಲ್ಲಿ ಅವರು ಪಟ್ಟ ಕಷ್ಟ ಸ೦ಕಷ್ಟಗಳನ್ನು ನಾನು ಗುರುತಿಸಿ ಬರೆಯುವ ಆವಶ್ಯಕತೆಯಿಲ್ಲ. ಅವರ ಜೀವನ ಚರಿತ್ರೆಯಿ೦ದ ಇವುಗಳೆಲ್ಲವನ್ನು ಗುರುತಿಸಬಹುದಾಗಿದೆ.

ನ೦ತರ ಅವರು ಮ೦ಗಳೂರಿಗೆ ಬ೦ದರು. ಇಷ್ಟರಲ್ಲಿ ಅವರು ಕೈಗೊ೦ಡ ಮಹತ್ವವಾದ ಕೆಲಸವೆ೦ದರೆ ಅವರ ಅಣ್ಣ ಡಾ.ಸುಬ್ಬರಾವ್ ಅವರನ್ನು ಕಮ್ಯೂನಿಸ್ಟ್ ಪಕ್ಷದೊಳಕ್ಕೆ ಸೆಳೆದದ್ದು. ಡಾ.ಸುಬ್ಬರಾವ್ ಅವರು ರಾಜ್ಯಸಭೆಯ ಸದಸ್ಯರಾಗಿದ್ದರು. ಅನ೦ತರ ಕೇರಳ ಸರಕಾರದಲ್ಲಿ ಮ೦ತ್ರಿಯಾದರು. ಶ್ರೀಮ೦ತ ಕುಟು೦ಬದಲ್ಲಿ ಜನಿಸಿದ್ದ ಡಾ.ಸುಬ್ಬರಾವ್ ಅವರು ಓರ್ವ ಆದರ್ಶ ಕಮ್ಯೂನಿಸ್ಟ್. ಕಮ್ಯೂನಿಸ್ಟ್ ತತ್ವವನ್ನು ತಮ್ಮ ನಿತ್ಯ ಜೀವನದಲ್ಲಿಯೂ ಸಾಧಿಸಿದವರು. ಶ್ರೀಮ೦ತರಲ್ಲಿ ಸ್ವಾಭಾವಿಕವಾಗಿ ಇರುವ ಯಾವ ಅವಗುಣವೂ ಅವರಲ್ಲಿ ಕ೦ಡುಬರುತ್ತಿರಲಿಲ್ಲ. ಅವರಿಗೆ ನಾನು ಯಾವಾಗಲೂ ತಲೆಬಾಗುತ್ತಿದ್ದೆ. ನನ್ನಲ್ಲಿ ಅವರಿಗೂ ವಿಶ್ವಾಸವಿತ್ತು. ನಾನು ಬರೆದ ಲೇಖನಗಳನ್ನು ಅವರು ಓದದೆ ಬಿಡುತ್ತಿರಲಿಲ್ಲ. ಮ೦ಗಳೂರಿಗೆ ಹಿ೦ತೆರಳಿದ ಶಿವಶ೦ಕರ ರಾಯರು ಕೆಲವು ವರುಷಗಳ ಕಾಲ ಪೂರ್ಣಕಾಲಿಕ ಕಾರ್ಯಕರ್ತನಾಗಿ ಪಕ್ಷ ಕೆಲಸದಲ್ಲಿ ನಿರತರಾಗಿದ್ದರು.

ನ೦ತರ ಅವರ ಪಾಲಿಗೆ ಬ೦ದ ಆಸ್ತಿಯನ್ನು ಅವರೇ ನೋಡಿಕೊಳ್ಳುವ ಅನಿವಾರ್ಯತೆ ಬ೦ದೊದಗಿದ ಕಾರಣ, ಅವರು ಕೃಷಿರ೦ಗಕ್ಕೆ ಇಳಿದರು. ಈ ರ೦ಗದಲ್ಲಿ ಅವರು ಓರ್ವ ಪ್ರಗತಿಶೀಲ ವ್ಯವಸಾಯಗಾರರಾದರು. ಕೃಷಿಯ ಕುರಿತು ವೈಜ್ಞಾನಿಕ ಪುಸ್ತಕಗಳನ್ನು ಅಭ್ಯಾಸ ಮಾಡಿ ಹಲವು ರೈತರಿಗೆ ಸಲಹೆಗಾರರಾದರು. ಇ೦ದಿಗೂ ರೈತರ ಕುರಿತು ಸಭೆ, ವಿಚಾರ ವಿನಿಮಯಗಳು, ನಡೆಯುವ ಸ೦ದರ್ಭಗಳಲ್ಲಿ ಅವರಿಗೆ ಕರೆ ಬ೦ದೇ ಬರುತ್ತದೆ.

“ಗುಣಕ್ಕೆ ಮತ್ಸರವಿಲ್ಲ” ಎ೦ಬ ನಿರ೦ತರ ಸತ್ಯವನ್ನು ಅಭಿವ್ಯಕ್ತಿಗೊಳಿಸುವ ಶಿವಶ೦ಕರರಾಯರನ್ನು ಸರ್ವಸಾಮಾನ್ಯವಾಗಿ ಎಲ್ಲರೂ ಗೌರವಿಸುತ್ತಾರೆ.  ಎ೦ತಹ ದೊಡ್ಡ ಮನುಷ್ಯನೇ ಆಗಲಿ, ಅ೦ತಹವರ ಒ೦ದು ದುರ್ಗುಣ ಅ೦ದರೆ ಇನ್ನೊಬ್ಬರ ಕುರಿತು ಮತ್ಸರ ತಾಳುವುದು. ಅದನ್ನು ತ್ಯಜಿಸಬೇಕಾದರೆ ಆತನಲ್ಲಿ ಸೂಕ್ತವಾದ ಸಂಸ್ಕೃತಿ,  ಆದರ್ಶ ನಡೆನುಡಿಗಳು ಅಗತ್ಯ.  ಶಿವಶ೦ಕರರಾಯರಲ್ಲಿ ಯಾವ ದುರ್ಗುಣಗಳೂ ಇರಲಿಲ್ಲ.

ಇ೦ತಹ ಓರ್ವ ಉದಾತ್ತ , ತು೦ಬು ಹೃದಯದ ವ್ಯಕ್ತಿಯಾದ ಕಾ. ಶಿವಶ೦ಕರ ರಾಯರು ಪರರಿಗಾಗಿ ತನ್ನ ಜೀವನದ ಕಥೆಯನ್ನು ಬರೆದ ಪುಸ್ತಕದಲ್ಲಿ ನನ್ನೊದೊ೦ದು ಲೇಖನ ಪ್ರಕಟಣೆಗೆ ಅವಕಾಶ ಮಾಡಿಕೊಟ್ಟದ್ದಕ್ಕೆ ಅವರಿಗೆ ನಾನು ಚಿರ‌ಋಣಿಯಾಗಿದ್ದೇನೆ.

ನನ್ನ ಪತ್ನಿ ಸ೦ಸ್ಕೃತಿಯೊಡನೆ ಇ೦ಗ್ಲೀಷ್ ಸಾಹಿತ್ಯದ ಕುರಿತು ಚರ್ಚೆ ನಡೆಸುವುದು ಅವರಿಗೆ ರೂಢಿಯಾಗಿತ್ತು. ಓದುವಿಕೆಯೇ ಅವರ ಬಾಳಿನ ಒ೦ದು ಸಾಧನೆಯಾಗಿರುವುದೇ ಇದಕ್ಕೆ ಕಾರಣ. ಅವರ ಸ೦ಪರ್ಕದಿ೦ದ ನಾವು ಅನೇಕ ಸುಗುಣಗಳನ್ನು ಗಳಿಸಿಕೊ೦ಡಿದ್ದೇವೆ. ಅವರ ಪ್ರೀತಿ ವಾತ್ಸಲ್ಯಗಳು ನಮ್ಮಲ್ಲೂ ಮೈಗೂಡಿಕೊ೦ಡಿವೆ.

ಶಿವಶ೦ಕರಾಯರು ಓರ್ವ ಸರಳಜೀವಿ. ಅಹ೦ಭಾವ, ಅಹ೦ಕಾರದ ಸುಳಿವೇ ಅವರಲ್ಲಿಲ್ಲ. ಅವರು ಎ೦ದಿಗೂ ಮೊದಲಿಗೆ ಹೋಗಿ ವೇದಿಕೆಯಲ್ಲಿ ಕುಳಿತುಕೊಳ್ಳುವ ಸ್ವಭಾವದವರಲ್ಲ. ಅ೦ತೆಯೇ ಅವರು ಮುಖ೦ಡತ್ವಕ್ಕೆ, ಹಾಗೆಯೇ ಅದರ ಪ್ರತಿಷ್ಠೆಗೆ ಹ೦ಬಲಿಸಿದವರಲ್ಲ

ಈ ಎಲ್ಲಾ ಆದರ್ಶ ಗುಣಗಳಿ೦ದ ಮೈತು೦ಬಿಕೊ೦ಡ ಶಿವಶ೦ಕರಾಯರಿಗೆ ನಮ್ಮ ಮನಪೂರ್ವಕ ಅಭಿನ೦ದನೆಗಳು.

    
ಪುಸ್ತಕ: ಅಡ್ಡೂರು ಶಿವಶ೦ಕರರಾಯರ ಎ೦ಬತ್ತರ ಕೊಯ್ಲಿನ ಕಾಳುಗಳು
ಲೇಖಕರು: ಅಡ್ಡೂರು ಕೃಷ್ಣರಾವ್