"ಶಿವರಾತ್ರಿಯ ಅರ್ಥಪೂರ್ಣತೆ "

"ಶಿವರಾತ್ರಿಯ ಅರ್ಥಪೂರ್ಣತೆ "

ಚಿತ್ರ

     ರಾತ್ರಿಯ ಸಮಯ ಮನುಷ್ಯ ತನ್ನ ಎಲ್ಲ ದೈನಂದಿನ ಚಟುವಟಿಕೆಗಳನ್ನು ಮುಗಿಸಿ ಆ ದಿನದ ವಿಶ್ರಾಂತಿಗಾಗಿ ಮತ್ತು ಮಾರನೆ ದಿನದ ಬದುಕಿನ ಚೈತನ್ಯಕ್ಕಾಗಿ ನಿದ್ರೆಗೆ ಜಾರಲು ಅಣಿಯಾಗುತ್ತಾನೆ, ಇದು ಪ್ರತಿಯೊಬ್ಬ ಮನುಷ್ಯ ಜೀವಿಯ ತಪ್ಪದ ದೈನಂದಿನ ದಿನಚರಿ. ಆದರೆ ಕೆಲವೆ ಕೆಲವು ಜೀವಿಗಳನ್ನು ಬಿಟ್ಟರೆ ಉಳಿದವರೆಲ್ಲರೂ ತಮ್ಮ ನಿತ್ಯದ ಎಲ್ಲ ಜಂಜಾಟಗಳ ಮಧ್ಯೆಯೂ  ಅದೊಂದು ದಿನ ಮಾತ್ರ ರಾತ್ರಿಯೆಲ್ಲ ಎಚ್ಚರವಿದ್ದು ಮಿಂದು ತನ್ನದೆ ಆದ ಮಿತಿಯಲ್ಲಿ ಶಿವನನ್ನು ಆರಾಧಿಸಿ ಉಪವಾಸ ಮಾಡಿ ಬಿಲ್ವಪತ್ರೆ ಬಿಳಿಯ ಹೂವುಗಳಿಂದ ಅಲಂಕರಿಸಿ ಶಿವನ ಸ್ತುತಿಮಾಡಿ ಹರಭಜನಗಳನ್ನು ಹಾಡಿ ಇಲ್ಲವೆ ಹರ ಕೀರ್ತನೆಗಳನ್ನು ಕೇಳಿ ಪಾವನನಾಗುತ್ತಾನೆ. ಅದುವೆ ಪ್ರತಿ ವರ್ಷ ತಪ್ಪದೆ ಬರುವ ಮಹಾ ಶಿವರಾತ್ರಿ.

     ಶಿವರಾತ್ರಿಯ ಆ ಶುಭದಿನದಂದು ಎಲ್ಲ ದೈವಭಕ್ತರೂ ಹೊಸ ಆಶಯಗಳೆಡೆಗೆ ತಮ್ಮ ಕಂಗಳನು ನೆಟ್ಟು ಶಿವನನ್ನು ಅರ್ಚಿಸಿ ಹೊಸ ಬದುಕಿನೆಡೆಗೆ ಪ್ರಬುದ್ಧ ಹೆಜ್ಜೆಗಳನ್ನಿಟ್ಟು ಸಾಗಲು ಮಾಡುವ ಸಂಕಲ್ಪವೆ ಒಂದು ಆರೋಗ್ಯಕರ ವಿಚಾರ. ಈ ಕುರಿತಂತೆ ಕನ್ನಡ ಸಾಹಿತ್ಯದಲ್ಲಿ ಶಿವನ ಕುರಿತು ವಿಭಿನ್ನ ಪರಿಕಲ್ಪನೆಗಳಿವೆ. ಶಿವ ಎಲ್ಲ ವರ್ಗದವರ ದೇವರು ಅದರಲ್ಲಿಯೂ ವಿಶೇಷವಾಗಿ ಆತ ಜನ ಸಾಮಾನ್ಯರ ಮತ್ತು ಶ್ರಮಿಕ ವರ್ಗದವರ ದೇವರು. ಇವರಿಗೆ ಶಿವ ಎನ್ನುವುದು ಬರಿ ದೇವರ ಹೆಸರಲ್ಲ ಅದೊಂದು ಭರವಸೆ ಬದುಕು ನಂಬಿಕೆ ಮತ್ತು ಮೌಲ್ಯ ಎಲ್ಲವೂ ಕೂಡ ಹೌದು. ವಚನಕಾರರ ಶಿವನಿಗೂ ಮತ್ತು ಜನ ಸಾಮಾನ್ಯರ ಶಿವನಿಗೂ ಒಂದು ಸಾಮ್ಯತೆಯಿದೆ. ಶಿವ ಮನೆಯಿಂದ ಮನೆಗೆ ಮತ್ತು ಮನದಿಂದ ಮನಕ್ಕೆ ನಿರಂತರವಾಗಿ ಚಲಿಸುವ ಒಂದು ನಂಬಿಕೆ ಮತ್ತು ಚೇತನ.

     ಆದರೆ ಇಂದಿನ ವೈಚಾರಿಕ ಯುಗದಲ್ಲಿ ಗ್ರಾಮೀಣರಿಗಿಂತ ಅನೇಕ ವಿದ್ಯಾವಂತರು ನಗರ ಪ್ರದೇಶದವರು ವೈಚಾರಿಕತೆಯನ್ನು ಬದಿಗೊತ್ತಿ ಬರಿ ಯಾಂತ್ರಿಕವಾಗಿ ತಮ್ಮದೆ ವೈಖರಿಯಲ್ಲಿ ಸಹ ಮನಸ್ಕರು ಒಂದೆಡೆ ಒಟ್ಟಿಗೆ ಸೇರಿ ಕುಡಿದು ಕುಣಿದು ಕುಪ್ಪಳಿಸಿ ಶಿವರಾತ್ರಿಯ ಆಚರಣೆಗೆ ತೊಡಗುತ್ತಿರುವುದು ಒಂದು ಖೇದಕರ ಸಂಗತಿ. ಧಾರ್ಮಿಕ ಮೂಢ ನಂಬಿಕೆಗಳು ಜನ ಸಮೂಹವನ್ನು ದಿಕ್ಕೆಡಿಸುತ್ತಿವೆ. ಹೀಗಾಗಿ ಯಾವುದೆ ಆಚರಣೆಗಳ ಕುರಿತಾಗಿ ಕೂಲಂಕುಷವಾಗಿ ವಿಚಾರ ವಿನಿಮಯ ಮಾಡಿ ವಿಮರ್ಶಿಸಿ ಅವುಗಳನ್ನು ಹೊಸ ಬೆಳಕಿನಲ್ಲಿ ನೋಡಿ ಒಪ್ಪುವುದು ಎಲ್ಲರ ಆದ್ಯ ಕರ್ತವ್ಯವಾಗಬೇಕು. 

     ಪರಶಿವನ ಕುರಿತು ಹನ್ನೆರಡನೆ ಶತಮಾನದಲ್ಲಿ ಆಗಿ ಹೋದ ವಚನಕಾರರು ನೀಡಿದ ಪರಿಕಲ್ಪನೆ ಬಹಳ ಅದ್ಭುತ ವಾದುದು. ಆತ ಸ್ಥಿರ ಜಂಗಮನಂತೆ ಚರ ಜಂಗಮ ಕೂಡ. ಈ ಹಿನ್ನೆಲೆಯಲ್ಲಿ ನಮ್ಮ ಆಚಾರ ವಿಚಾರಗಳು ಮತ್ತು ಸತ್ಯ ಹಾಗೂ ಮಿಥ್ಯಗಳು ವೈಚಾರಿಕ ಮೂಸೆಯಲ್ಲಿ ಪರೀಕ್ಷೆಗೊಳಪಟ್ಟು ಹೊಸ ರೂಪ ಪಡೆಯಬೇಕು. ಹುಟ್ಟಿದ ಮನುಷ್ಯ ಬದುಕಲೆ ಬೇಕು, ಆದರೆ ಅದು ಅಂಧಾಚರಣೆಯ ಬದುಕು ಆಗಬಾರದು ಯಾಕೆಂದರೆ ಶಿವ ಬಹಳ ಸರಳ ಮತ್ತು ಆತ ಪರಿಶ್ರಮದ ಒಂದು ಸಂಕೇತ. ಇದು ಆಗಿಹೋದ ವಚನಕಾರರ ಆಶಯ.

     ಇಂದಿನ ಆಧುನಿಕ ಯುಗದಲ್ಲಿ ವೈಜ್ಞಾನಿಕವಾಗಿ ಮನುಷ್ಯ ಎಷ್ಟೇ ಮುಂದುವರಿದಿರಲಿ ಇನ್ನೂ ಹಬ್ಬಗಳ ಆಚರಣೆ ಮತ್ತು ಧರ್ಮ ಕರ್ಮ ಮತ್ತು ಮೋಕ್ಷಗಳೆಂಬ ಪುರಾತನ ನಂಬಿಕೆಗಳನ್ನು ತಲತಲಾಂತರಗಳಿಂದ ಆಚರಣೆಯಲ್ಲಿ ಉಳಿಸಿಕೊಂಡು ಬಂದವನು. ಇದಕ್ಕೆ ಶಿವರಾತ್ರಿಯ ಆಚರಣೆ ಕೂಡ ಹೊರತಲ್ಲ. ಈ ನಂಬಿಕೆಗಳ ಪರಿಕಲ್ಪನೆ ಏನೇ ಇರಲಿ ಆತನ ಸರಳತನ, ತ್ಯಾಗಬುದ್ಧಿ, ಕಷ್ಟಸಹಿಷ್ಣುತೆ, ತೊಂದರೆ ಬಂದಾಗ ಮುಂದೆನಿಲ್ಲುವ ಪರಿ ಮತ್ತು ಪ್ರೀತಿ ಪಾತ್ರರಿಗೆ ವರಕೊಡುವ ಆತನ ಉದಾರತನ ನಮಗೆ ಆದರ್ಶಗಳಾದರೆ ಸಾಕು ಶಿವರಾತ್ರಿಯ ಆಚರಣೆ ಸಾರ್ಥಕ ವಾದಂತೆ. ಈ ಬಾರಿಯ ಶಿವರಾತ್ರಿಯ ಆಚರಣೆ ಒಂದು ಅರ್ಥಪೂರ್ಣ ಆಚರಣೆಯಾಗಲಿ.

    ಚಿತ್ರಕೃಪೆ : http://en.wikipedia.org/wiki/Shivaratri
 

Rating
No votes yet

Comments

Submitted by swara kamath Sun, 03/10/2013 - 17:27

ಪಾಟೀಲರಿಗೆ ನಮಸ್ಕಾರಗಳು. ತುಂಬಾ ದಿನಗಳ ತರುವಾಯ ಸಂಪದ ಅಂಕಣದಲ್ಲಿ ತಮ್ಮ ಲೇಖನ ಪ್ರಕಟಿಸಿರುವಿರಿ. ಶಿವರಾತ್ರಿ ಆಚರಣೆ ಕುರಿತು ತಮ್ಮ ವೈಚಾರಿಕ ಲೇಖನ ಮೆಚ್ಚುಗೆ ಆಯಿತು. ಹಬ್ಬದ ಆಚರಣೆಯಲ್ಲಿ ನಿಜವಾಗಲೂ ಶೃದ್ಧೆ ಇದ್ದರೆ ಮಾತ್ರ ರಾತ್ರಿಯ ಜಾಗರಣೆಮಾಡಿ ದೇವರ ನಾಮಸ್ಮರಣೆ ಮಾಡುತ್ತಾ ಪೂಜೆ ಪುನಸ್ಕಾರಗಳಲ್ಲಿ ಜನರು ಭಾಗಿಗಳಾಗಬೇಕು. ಇಲ್ಲದಿದ್ದರೆ ಹಬ್ಬಕ್ಕೆ ಯಾವ ಅರ್ಥವೂ ಇಲ್ಲಾ.ಜಾಗರಣೆಯ ಕಾರಣ ಒಡ್ಡಿ ರಾತ್ರಿಯೆಲ್ಲಾ ಜೂಜಾಡಿ ,ಕುಡಿದು ಇತರರ ಮನೆಗಳಮೇಲೆ ಕಲ್ಲು ಬೀರುವುದು(ಕೆಲವು ಊರು ಗಳಲ್ಲಿ ) ಖಂಡನೀಯ !.....ವಂದನೆಗಳು.

Submitted by H A Patil Sun, 03/10/2013 - 17:45

In reply to by swara kamath

ರಮೇಶ ಕಾಮತರಿಗೆ ವಂದನೆಗಳು
ಶಿವರಾತ್ರಿಯ ಕುರಿತ ಲೇಖನಕ್ಕೆ ಪ್ರತಿಕ್ರಿಯಿಸಿದ್ದೀರಿ, ಈಗ ಯಾವುದೆ ಹಬ್ಬಗಳಾಗಲಿ ಅದು ಹೊಸ ವರ್ಷಾಚರಣೆ, ದೀಪಾವಳಿಯ ಬೂರಿ ಹಬ್ಬ ಮತ್ತು ಶಿವರಾತ್ರಿಯ ಜಾಗರಣೆಗಳು ಜೂಜಾಟ ಕುಡಿತ ಮತ್ತು ಮನೆಗಳಿಗೆ ಕಲ್ಲುಬೀರಿ ವಿಕೃತ ಸಂತೋಷ ಪಡುವುದು, ಕ್ರಮೇಣ ಗ್ರಾಮೀಣ ಪರಿಸರದಲ್ಲೂ ಬೇರು ಬಿಡುತ್ತಿದೆ, ಹಾಗಾಗಬಾರದು. ತಮ್ಮ ಸಾಮಾಜಿಕ ಕಳಕಳಿಯ ಪ್ರತಿಕ್ರಿಯೆಗೆ ಧನ್ಯವಾದಗಳು

Submitted by venkatb83 Mon, 03/11/2013 - 15:08

In reply to by H A Patil

"ಶಿವರಾತ್ರಿಯ ಆ ಶುಭದಿನದಂದು ಎಲ್ಲ ದೈವಭಕ್ತರೂ ಹೊಸ ಆಶಯಗಳೆಡೆಗೆ ತಮ್ಮ ಕಂಗಳನು ನೆಟ್ಟು ಶಿವನನ್ನು ಅರ್ಚಿಸಿ ಹೊಸ ಬದುಕಿನೆಡೆಗೆ ಪ್ರಬುದ್ಧ ಹೆಜ್ಜೆಗಳನ್ನಿಟ್ಟು ಸಾಗಲು ಮಾಡುವ ಸಂಕಲ್ಪವೆ ಒಂದು ಆರೋಗ್ಯಕರ ವಿಚಾರ. ಈ ಕುರಿತಂತೆ ಕನ್ನಡ ಸಾಹಿತ್ಯದಲ್ಲಿ ಶಿವನ ಕುರಿತು ವಿಭಿನ್ನ ಪರಿಕಲ್ಪನೆಗಳಿವೆ. ಶಿವ ಎಲ್ಲ ವರ್ಗದವರ ದೇವರು ಅದರಲ್ಲಿಯೂ ವಿಶೇಷವಾಗಿ ಆತ ಜನ ಸಾಮಾನ್ಯರ ಮತ್ತು ಶ್ರಮಿಕ ವರ್ಗದವರ ದೇವರು. ಇವರಿಗೆ ಶಿವ ಎನ್ನುವುದು ಬರಿ ದೇವರ ಹೆಸರಲ್ಲ ಅದೊಂದು ಭರವಸೆ ಬದುಕು ನಂಬಿಕೆ ಮತ್ತು ಮೌಲ್ಯ ಎಲ್ಲವೂ ಕೂಡ ಹೌದು. ವಚನಕಾರರ ಶಿವನಿಗೂ ಮತ್ತು ಜನ ಸಾಮಾನ್ಯರ ಶಿವನಿಗೂ ಒಂದು ಸಾಮ್ಯತೆಯಿದೆ. ಶಿವ ಮನೆಯಿಂದ ಮನೆಗೆ ಮತ್ತು ಮನದಿಂದ ಮನಕ್ಕೆ ನಿರಂತರವಾಗಿ ಚಲಿಸುವ ಒಂದು ನಂಬಿಕೆ ಮತ್ತು ಚೇತನ.

ಆದರೆ ಇಂದಿನ ವೈಚಾರಿಕ ಯುಗದಲ್ಲಿ ಗ್ರಾಮೀಣರಿಗಿಂತ ಅನೇಕ ವಿದ್ಯಾವಂತರು ನಗರ ಪ್ರದೇಶದವರು ವೈಚಾರಿಕತೆಯನ್ನು ಬದಿಗೊತ್ತಿ ಬರಿ ಯಾಂತ್ರಿಕವಾಗಿ ತಮ್ಮದೆ ವೈಖರಿಯಲ್ಲಿ ಸಹ ಮನಸ್ಕರು ಒಂದೆಡೆ ಒಟ್ಟಿಗೆ ಸೇರಿ ಕುಡಿದು ಕುಣಿದು ಕುಪ್ಪಳಿಸಿ ಶಿವರಾತ್ರಿಯ ಆಚರಣೆಗೆ ತೊಡಗುತ್ತಿರುವುದು ಒಂದು ಖೇದಕರ ಸಂಗತಿ. ಧಾರ್ಮಿಕ ಮೂಢ ನಂಬಿಕೆಗಳು ಜನ ಸಮೂಹವನ್ನು ದಿಕ್ಕೆಡಿಸುತ್ತಿವೆ. ಹೀಗಾಗಿ ಯಾವುದೆ ಆಚರಣೆಗಳ ಕುರಿತಾಗಿ ಕೂಲಂಕುಷವಾಗಿ ವಿಚಾರ ವಿನಿಮಯ ಮಾಡಿ ವಿಮರ್ಶಿಸಿ ಅವುಗಳನ್ನು ಹೊಸ ಬೆಳಕಿನಲ್ಲಿ ನೋಡಿ ಒಪ್ಪುವುದು ಎಲ್ಲರ ಆದ್ಯ ಕರ್ತವ್ಯವಾಗಬೇಕು.

ಪರಶಿವನ ಕುರಿತು ಹನ್ನೆರಡನೆ ಶತಮಾನದಲ್ಲಿ ಆಗಿ ಹೋದ ವಚನಕಾರರು ನೀಡಿದ ಪರಿಕಲ್ಪನೆ ಬಹಳ ಅದ್ಭುತ ವಾದುದು. ಆತ ಸ್ಥಿರ ಜಂಗಮನಂತೆ ಚರ ಜಂಗಮ ಕೂಡ. ಈ ಹಿನ್ನೆಲೆಯಲ್ಲಿ ನಮ್ಮ ಆಚಾರ ವಿಚಾರಗಳು ಮತ್ತು ಸತ್ಯ ಹಾಗೂ ಮಿಥ್ಯಗಳು ವೈಚಾರಿಕ ಮೂಸೆಯಲ್ಲಿ ಪರೀಕ್ಷೆಗೊಳಪಟ್ಟು ಹೊಸ ರೂಪ ಪಡೆಯಬೇಕು. ಹುಟ್ಟಿದ ಮನುಷ್ಯ ಬದುಕಲೆ ಬೇಕು, ಆದರೆ ಅದು ಅಂಧಾಚರಣೆಯ ಬದುಕು ಆಗಬಾರದು ಯಾಕೆಂದರೆ ಶಿವ ಬಹಳ ಸರಳ ಮತ್ತು ಆತ ಪರಿಶ್ರಮದ ಒಂದು ಸಂಕೇತ. ಇದು ಆಗಿಹೋದ ವಚನಕಾರರ ಆಶಯ."

>>>ಹಿರಿಯರೇ ನಿಮ್ಮೀ ಬರಹವನ್ನು ಇಂದು ಈಗ ನೋಡಿ ಪ್ರತಿಕ್ರಿಯಿಸುತ್ತಿರುವೆ..

ಹಬ್ಬ ಹರಿದಿನ ಆಚರಣೆ ವಿಷಯಕ್ಕೆ ಬಂದರೆ ನಗರದವರಿಗಿಂತ ಹಳ್ಳಿಗರೇ ಬಹುಪಾಲು ಅರ್ಥಪೂರ್ಣವಾಗಿ ಮತ್ತು ಅಚ್ಚುಕಟ್ಟಾಗಿ ಆಚರಿಸುವರು..(ಸಾಲ ಸೋಲ ಮಾಡಿಯಾದರೂ)
ಈ ಹಿಂದೆ ಸುಮಾರು ಹತ್ತು ವರುಷಗಳ ಹಿಂದೆಲ್ಲ ಪ್ರತಿ ಶಿವರಾತ್ರಿ ಜಾಗರಣೆ ದಿನ ಉಪವಾಸ ಇದ್ದು ಮಧ್ಯ ರಾತ್ರಿಯಲ್ಲಿ ಊರಿಂದ ೨ ಕಿಲೋ ಮೀಟರ್ ದೂರ ಇರುವ ನಮ್ಮೂರಿನ ಶ್ರೀ ಬೋಳ ಬಸವೇಶ್ವರ(ಸುತ್ತ ಮುತ್ತ ಗೊಡೆಗಳಿವೆ ಆದ್ರೆ ಮೇಲೆ ಚತ್ತು (ಟೆರೆಸ್)ಹಾಕಲು ಹೋದರು ಅದು ನಿಲದೆ ಬೀಳುತ್ತೆ ಹಾಗೆಯೇ ನೆರಳೂ ಸಹಾ ಮಲಗಿರುವ ಬಸವನ ಮೇಲೆ ಬೀಳುವ ಹಾಗಿಲ್ಲ ) ದೇವಸ್ಥಾನ್ಕೆಕ್ ಪಾದಯಾತ್ರೆಯಲ್ಲಿ ಸಾಗಿ ಭಜನೆ ಮಾಡಿ ಆ ನಂತರ ದೇವರ ಪ್ರಸಾದ ಎಂದು ಗುಗ್ಗರಿ -ಗಾರಿಗೆ ತಿನ್ನುತ್ತಿದ್ದೆವು..ಉಪವಾಸದ ನಂತರದ ಲಘು ಉಪಾಹಾರ ತರಹದ ಅದು ತಿನ್ನಲು ಭಲೇ ಮಜವಾಗಿರುತ್ತಿತ್ತು...ಈಗ್ಗೆ ನಾ ಬೆಂಗಳೂರು ಸೇರಿದ ಮೇಲೆ ಅದು ಸಾಧ್ಯವಾಗದೆ ಆ ರೀತಿಯ ಆಚರಣೆ ಇಲ್ಲಿ ಮಾಡಲೂ ಆಗದೆ ವ್ಯಥೆ ಪಡುವಂತಾಯ್ತು ;((

ಮುಂದಿನ ವರ್ಷ ಶಿವರಾತ್ರಿಗೆ ಅಲ್ಲಿಗೆ ಹೋಗುವೆ..

ಶಿವರಾತ್ರಿ ಕುರಿತ ನಿಮ್ಮ ಸಂಕ್ಚಿಪ್ತ ಬರಹ ಅರ್ಥಪೂರ್ಣವೂ ಸಕಾಲಿಕವೂ ಆಗಿದ್ದು ಶಿವರಾತ್ರಿ ಮಹಿಮೆ ಆಚರಣೆ ಹಿಂದಿನ ಮಹತ್ವ -ಅರ್ಥಪೂರ್ಣ ಆಚರಣೆ ಬಗ್ಗೆ ಮನದಟ್ಟು ಮಾಡಿಸುವುದು..
ಕೆಲ ದಿನಗಾ ನಂತರ ನಿಮ್ಮ ಬರಹ ಮತ್ತು ಪ್ರತಿಕ್ರಿಯೆಗಳು(ಇತರ ರ ಬರಹಗಳಿಗೆ)ನೋಡಿ ಓದಿ ಖುಷಿ ಆಯ್ತು..

ಶುಭವಾಗಲಿ..

ಆ ಪರ ಶಿವನು ಸಕಲರಿಗೆ ಆಶೀರ್ವದಿಸಲಿ..

\।

Submitted by H A Patil Mon, 03/11/2013 - 18:00

In reply to by venkatb83

¸ಸಪ್ತಗಿರಿಯವರಿಗೆ ವಂದನೆಗಳು
ಈ ಲೇಖನಕ್ಕೆ ತಮ್ಮ ಪ್ರತಿಕ್ರಿಯೆ ನನಗೆ ಸಂತಸ ತಂದಿತು, ಯಾಕೆಂದರೆ ನೀವು ಈಗ ಬೆಂಗಳೂರಿನ ನಿವಾಸಿಯಾಗಿದ್ದರೂ ಇನ್ನೂ ನೀವು ನಿಮ್ಮ ಹಳ್ಳಿಯ ನೆನಪುಗಳನ್ನು ಮರೆತಿಲ್ಲದಿರುವುದು ಮತ್ತು ಮುಂದಿನ ಶಿವರಾತ್ರಿಗೆ ಅಲ್ಲಿಗೆ ಹೋಗಲು ಮನಸು ಮಾಡಿರುವುದು. ನಿಮ್ಮ ಬಾಲ್ಯದ ಶಿವರಾತ್ರಿಯ ನೆನಪುಗಳು ನನಗೂ 45 ವರ್ಷಗಳ ಹಿಂದಿನ ನಮ್ಮ ಗ್ರಾಮದ ಶಿವರಾತ್ರಿಯ ನೆನಪುಗಳ ಗತಕಾಲಕ್ಕೆ ಕೊಂಡೊಯ್ದಿತು. ತಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.

Submitted by H A Patil Mon, 03/11/2013 - 18:03

In reply to by kavinagaraj

ಕವಿ ನಾಗರಾಜ ರವರಿಗೆ ವಂದನೆಗಳು
ಹೌದು ತಮ್ಮ ಅಭಿಪ್ರಾಯ ಸರಿ, ನಮ್ಮ ಇಂದಿನ ಹಬ್ಬಗಳ ಆಚರಣೆಗಳು ಆತ್ಮ ಚಿಂತನೆಗೆ ನಮ್ಮನ್ನು ಹಚ್ಚಬೇಕು, ಇಲ್ಲವಾದರೆ ಅವು ಬರಿ ಸಾಂಪ್ರದಾಯಕ ಆಚರಣೆಗಳಾಗಿಬಿಡುವ ಅಪಾಯವೆ ಹೆಚ್ಚಿರುತ್ತದೆ. ಪ್ರತಿಕ್ರಿಯೆಗೆ ಧನ್ಯವಾದಗಳು.