ಆಮೆಗತಿಯಲ್ಲಿ ಆಧಾರ್
ಆಮೆಗತಿಯಲ್ಲಿ ಆಧಾರ್
ಆಧಾರ್ ಸಂಖ್ಯೆಯನ್ನು ಬಳಸಿಕೊಂಡು, ಸರಕಾರದ ಸಬ್ಸಿಡಿ ಹಣವನ್ನು ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರವರ್ಗಾವಣೆ ಮಾಡುವ ಯೋಜನೆಯನ್ನು ಸರಕಾರ ಅವಸರದಿಂದ ಜಾರಿಗೆ ತರಲು ಉದ್ದೇಶಿಸಿದೆ. ಆದರೆ ಆಧಾರ್ ಜೋಜನೆಯು ವಿವಾದಗ್ರಸ್ತವಾಗಿದ್ದರಿಂದ ಇರಬೇಕು, ಅದರ ಪ್ರಗತಿ ಬಹು ಕುಂಠಿತವಾಗಿದೆ. ಒಂದೂವರೆ ವರ್ಷದ ಕೆಳಗೆ ತಮ್ಮ ಜೈವಿಕ ಚಹರೆಗಳಾದ ಬೆರಳಚ್ಚು, ಐರಿಸ್ ಮತ್ತು ಮುಖಪರಿಚಯ ನೀಡಿದವರಿಗಿನ್ನೂ ಆಧಾರ್ ಸಂಖ್ಯೆ ದೊರೆತಿಲ್ಲ. ಆಗ ನೋಂದಣಿ ಮಾಡಿದ ಕೆಲವರಿಗೆ ಆಧಾರ್ ಸಂಖ್ಯೆ ಲಭ್ಯವಾಗಿದೆ. ಇನ್ನು ಕೆಲವರು ಆಧಾರ್‌ನ ಅಂತರ್ಜಾಲ ತಾಣದಿಂದ, ಅದನ್ನು ಪಡೆಯಲು ಸಾಧ್ಯವಾಗಿದೆ. http://uidai.gov.in/ ತಾಣದಲ್ಲಿ ನಿಮ್ಮ ಆಧಾರ್ ಸಂಖ್ಯೆಯ ಸದ್ಯದ ಸ್ಥಿತಿಯನ್ನು ಪರಿಶೀಲಿಸಬಹುದು. ಆಧಾರ್ ಸಂಖ್ಯೆ ಪಡೆಯಲು ಹೋದಾಗ ನಿಮಗೆ ಸಿಕ್ಕಿದ ಸ್ವೀಕೃತಿ ಪತ್ರದ ಸಂಖ್ಯೆ, ದಿನಾಂಕ ಮತ್ತು ಸಮಯವನ್ನಿಲ್ಲಿ ನೀಡಬೇಕಾಗುತ್ತದೆ. ಒಂದೂವರೆ ವರ್ಷದ ಹಿಂದೆ ಈ ಸ್ವಿಕೃತಿ ಪತ್ರ ಪಡೆದವರಿಗೂ, ನಿಮ್ಮ ವಿವರಗಳಿನ್ನೂ ನಮ್ಮ ಕೈಸೇರಿಲ್ಲ ಎನ್ನುವ ಪ್ರತ್ಯುತ್ತರ ಬಂದರೆ ಅಚ್ಚರಿ ಪಡಬೇಕಿಲ್ಲ.
ರೈಲ್ವೇ ಟಿಕೆಟ್ ಕಾಯ್ದಿರಿಸುವಿಕೆ ಸರಾಗವಾಗಲಿದೆ
ಸದ್ಯ ಭಾರತೀಯ ರೈಲ್ವೇ ಟಿಕೆಟ್ ಕಾದಿರಿಸುವಿಕೆಯು IRCTC ತಾಣದ ಮೂಲಕ ನಡೆಯುತ್ತಿದೆ. ಇದರ ನಿಧಾನಗತಿ, ಸಂಪರ್ಕ ಅಲಭ್ಯತೆ ಬಗ್ಗೆ ದೂರುಗಳು ರೈಲ್ವೇ ಸಚಿವರಿಗೂ ಬರುತ್ತಿವೆಯಂತೆ. ಹೀಗಾಗಿ ಅವರು ಈ ಸಲದ ಬಜೆಟ್ ಮಂಡಿಸುವಾಗ, ವರ್ಷಾಂತ್ಯದ ವೇಳೆಗೆ ತಾಣವನ್ನು ಸುಧಾರಿಸುವ ಭರವಸೆ ನೀಡಿದರು. ಸದ್ಯ ಪ್ರತಿ ನಿಮಿಷಕ್ಕೆ ಎರಡುಸಾವಿರ ಟಿಕೆಟ್ ಕಾಯ್ದಿರಿಸಬಹುದು. ಅದನ್ನು ಏಳುಸಾವಿರದಿನ್ನೂರಕ್ಕೆ ಏರಿಸಲಾಗುತ್ತದೆ. ಒಂದು ಸಲಕ್ಕೆ ನಲುವತ್ತು ಸಾವಿರ ಜನರು ತಾಣವನ್ನು ಸಂಪರ್ಕಿಸಲು ಸಾಧ್ಯ. ಇದನ್ನು ಐದು ಪಟ್ಟು ಏರಿಸಲು ಉದ್ದೇಶಿಸಲಾಗಿದೆ. ಆಧಾರ್ ಸಂಖ್ಯೆಯನ್ನು ಬಳಸಿ, ಪ್ರಯಾಣಿಕರ ಗುರುತನ್ನು ಖಚಿತ ಪಡಿಸಿಕೊಂಡು, ಖೋಟಾ ಪ್ರಯಾಣಿಕರ ಕಾಟವನ್ನು ನಿಯಂತ್ರಿಸಲವರು ಉದ್ದೇಶಿಸಿದ್ದಾರೆ. ಅದೇ ರೀತಿ,ರೈಲ್ವೇ ಉದ್ಯೋಗಿಗಳಿಗೆ ಸಂಬಳ ಸವಲತ್ತುಗಳನ್ನು ನೀಡಲೂ ಆಧಾರ್ ಸಂಖ್ಯೆಯನ್ನು ನೆಚ್ಚಿಕೊಳ್ಳಲಾಗುತ್ತದೆ. ಆಯ್ದ ನಿಲ್ದಾಣಗಳಲ್ಲಿ ಮತ್ತು ರೈಲುಗಳಲ್ಲಿ, ವೈ_ಫೈ ಸೌಲಭ್ಯವನ್ನಳವಡಿಸುವ ಯೋಜನೆಯನ್ನು ಜಾರಿಗೆ ತರುವುದಾಗಿಯೂ ಅವರು ಘೋಷಿಸಿದರು.
ನಿಮ್ಮ ಪತ್ರ ಕಂಪ್ಯೂಟರಿನಲ್ಲಿ
ಔಟ್‌ಬಾಕ್ಸ್ ಎನ್ನುವ ಕಂಪೆನಿ, ನಿಮ್ಮ ಅಂಚೆಪತ್ರಗಳನ್ನು ಡಿಜಿಟಲ್ ರೂಪದಲ್ಲಿ ಕಳುಹಿಸಲು ಉದ್ದೇಶಿಸಿದೆ. ತನ್ನ ಉದ್ಯೋಗಿಗಳನ್ನು ನೋಂದಾಯಿತ ಬಳಕೆದಾರರ ಮನೆಗೆ ಕಳುಹಿಸಿ, ಅವರ ಅಂಚೆಪೆಟ್ಟಿಗೆಯಲ್ಲಿರುವ ಅಂಚೆಯನ್ನು ಕಚೇರಿಗೆ ತಂದು, ಅದನ್ನಿಲ್ಲಿ ತೆರೆದು, ಸ್ಕ್ಯಾನ್ ಮಾಡಿ, ಬಳಕೆದಾರನಿಗೆ ಮಿಂಚಂಚೆ ಮಾಡಲಾಗುತ್ತದೆ. ಬೇರೆಯವರು ತಮ್ಮ ಪತ್ರ ಒಡೆಯುವುದನ್ನು ಸಹಿಸದ ಜನರಿಗೆ ಅವರ ಮಾಹಿತಿ ಸೋರದ ಹಾಗೆ ಉದ್ಯೋಗಿಗಳ ಮೇಲೆ ಕಣ್ಣಿಡುವ ಭರವಸೆಯನ್ನು ಕಂಪೆನಿ ನೀಡಿದೆ.
ಮೊಬೈಲ್ ದುಬಾರಿ
ಎರಡು ಸಾವಿರಕ್ಕಿಂತ ಹೆಚ್ಚಿನ ಬೆಲೆಯ ಮೊಬೈಲ್ ಸೆಟ್ಟುಗಳಿಗೆ ತೆರಿಗೆ ಏರಿಸುವ ಬಜೆಟ್ ಪ್ರಸ್ತಾವ ಟೀಕೆಗೊಳಗಾಗಿದೆ. ಐಫೋನ್, ಐಪ್ಯಾಡ್ ಅಂತಹ ದುಬಾರಿ ಸೆಟ್ಟುಗಳನ್ನು ಖರೀದಿಸುವ ಶ್ರೀಮಂತರಿಗೆ ಅವುಗಳ ದರ ತುಸು ಏರಿದರೆ ಲೆಕ್ಕಕ್ಕಿಲ್ಲ. ಆದರೆ ಮಧ್ಯಮವರ್ಗದವರು ಆರೇಳು ಸಾವಿರದ ಸೆಟ್ ಖರೀದಿಸಿ, ಇಂಟರ್ನೆಟ್, ತ್ರೀಜಿ ಸಂಪರ್ಕ ಪಡೆಯಬಯಸುವವರಿಗೆ ಇದು ಪಥ್ಯವಾಗದು.ಇನ್ನುಳಿದ ದಾರಿಯೆಂದರೆ,ಅವರು ಅಕ್ರಮವಾಗಿ ಮಾರಾಟವಾಗುವ ಮೊಬೈಲ್ ಸಾಧನಗಳನ್ನು ಖರೀದಿಸುವುದು. ಸರಕಾರ ಒಂದೆಡೆ ಜನರು ಇಂಟರ್‌ನೆಟ್ ಮೂಲಕ ಸರಕಾರದ ಸೇವೆಗಳನ್ನು ಪಡೆಯಲು ಅವಕಾಶ ನೀಡುತ್ತಾ ಹೀಗೆ ಮಾಡುವುದು ತರವಲ್ಲ,ಅಲ್ಲವೇ?
ಅಜ್ಜ-ಅಜ್ಜಿ ಮೂಲೆಗುಂಪು
ಮೊಮ್ಮಕ್ಕಳಿಗೆ ಕತೆಹೇಳುವುದು, ಸಲಹೆ ನೀಡುವುದು ಇವು ಅಜ್ಜ-ಅಜ್ಜಿಯರ ಹೊಣೆಯಾಗಿತ್ತು. ಆದರೆ ಈ ಇಂಟರ್‌ನೆಟ್‌ನಿಂದಾಗಿ,ಅದು ನಿಧಾನವಾಗಿ ಬದಲಾಗುತ್ತಿದೆ. ಸಣ್ಣಪ್ರಾಯದಲ್ಲೇ ಕಂಪ್ಯೂಟರ್ ಬಳಸಲು ಶುರು ಹಚ್ಚುವ ಮೊಮ್ಮಕ್ಕಳು ಅಜ್ಜ-ಅಜ್ಜಿಯರಿಗೆ ತೊಂದರೆ ಕೊಡುವುದು ಯಾಕೆಂದೋ ಏನೋ,ಗೂಗಲಿಸಿ ತಮ್ಮ ಸಂಶಯಗಳನ್ನು ನಿವಾರಿಸಿಕೊಳ್ಳುತ್ತಿದ್ದರೆ ಎಂದು ಯುಕೆಯಲ್ಲಿ ನಡೆದ ಸಮೀಕ್ಷೆ ತಿಳಿಸಿದೆ. ಈಗ ನಿಗದಿತ ನಂಬರಿಗೆ ಫೋನ್ ಕರೆ ಮಾಡಿದರೆ, ಕತೆ ಹೇಳುವ ಸೇವೆಯೂ ಆರಂಭವಾಗಿರುವುದರೊಂದಿಗೆ, ಅದಕ್ಕಾಗಿಯೂ ಅಜ್ಜ-ಅಜ್ಜಿಯಂದಿರನ್ನು ಪೀಡಿಸಬೇಕಿಲ್ಲವಾಗುತ್ತಿದೆ.ಮೊಮ್ಮಕ್ಕಳು ತಮ್ಮಿಂದ ದೂರವಾಗುವುದು ವೃದ್ಧರಿಗೆ ನೋವು ಕೊಡುವುದು ಸಂಭವನೀಯ.
ಇಂಟರ್ನೆಟ್ ಮೂಲಕ ಅಲ್ಲಿನ ಇಲಿ,ಇಲ್ಲಿನ ಇಲಿ ಸಂಪರ್ಕ
ಎರಡು ಬೇರೆ ಬೇರೆ ಖಂಡಗಳಲ್ಲಿದ್ದ ಇಲಿಗಳು ತಮ್ಮ ಮಿದುಳಿಗೆ ಜೋಡಿಸಲಾಗಿದ್ದ ಇಲೆಕ್ಟ್ರೋಡು ಮೂಲಕ ತಮ್ಮ ಆಲೋಚನೆಗಳನ್ನು ಇಂಟರ್ನೆಟ್ ಮೂಲಕ ವಿನಿಮಯ ಮಾಡಿದ್ದನ್ನು ಉತ್ತರ ಕೆರೋಲಿನಾ ವಿಶ್ವವಿದ್ಯಾಲಯದ ಸಂಶೋಧಕರು ದಾಖಲಿಸಿಕೊಂಡಿದ್ದಾರೆ. ಒಂದು ಇಲಿಗೆ ಬಲ್ಬ್ ಆನ್ ಆದೊಡನೆ ಸ್ವಿಚ್ ಅದುಮಿದರೆ,ನೀರು ಒದಗಿಸುವ ವ್ಯವಸ್ಥೆಯನ್ನು ಬಳಸಲು ಅಭ್ಯಾಸ ಮಾಡಿಸಲಾಯಿತು. ನಂತರ ಆ ಇಲಿಯು ಇನ್ನೊಂದು ಇಲಿಗೆ ಇದೇ ತಂತ್ರ ಬಳಸಲು ಪ್ರಚೋದಿಸಿ, ಅದು ಯಶಸ್ವಿಯಾದಾಗ, ನೀರೊದಗಿಸಲಾಯಿತು. ನಂತರ ಬೇರೆ ಬೇರೆ ಖಂಡಗಳಲ್ಲಿ ಆ ಎರಡು ಇಲಿಗಳನ್ನಿಟ್ಟು, ಅವುಗಳ ಇಲೆಕ್ಟ್ರೋಡುಗಳನ್ನು,ಇಂಟರ್ನೆಟ್ ಮೂಲಕ ಸಂಪರ್ಕಿಸಿದಾಗಲೂ ಅವು ಈ ಚಟುವಟಿಕೆಯಲ್ಲಿ ಯಶಸ್ವಿಯಾದುದನ್ನು ಸಂಶೋಧಕರು ದಾಖಲಿಸಿದ್ದಾರೆ.
ಸ್ಮಾರ್ಟ್ ವಾಕಿಂಗ್‌ಸ್ಟಿಕ್
ಜಪಾನಿನಲ್ಲಿ ವೃದ್ಧರ ಸಂಖ್ಯೆ ಹೆಚ್ಚುತ್ತಿರುವುದು, ಈ ಅಂಕಣದಲ್ಲೇ ಪ್ರಸ್ತಾಪಿತವಾಗಿತ್ತು. ಫ್ಯುಜಿತ್ಸು ಕಂಪೆನಿಯಿದೀಗ, ವೃದ್ಧರಿಗೆ ನಡೆದಾಡುವಾಗ, ದಾರಿಯ ಬಗ್ಗೆ ತಿಳುವಳಿಕೆ ನೀಡುವ ಸಾಮರ್ಥ್ಯವುಳ್ಳ, ಜಿಪಿಎಸ್ ಅಳವಡಿಸಿದ ವಾಕಿಂಗ್‌ಸ್ಟಿಕ್‌ಗಳನ್ನು ಅಭಿವೃದ್ಧಿ ಪಡಿಸಿದೆ.ಇದನ್ನು ಹಿಡಿದು ಸಾಗುವಾಗ,ವ್ಯಕ್ತಿಯು ತಪ್ಪು ದಾರಿ ಹಿಡಿದಾಗ,ವಾಕಿಂಗ್‌ಸ್ಟಿಕ್ ಅದುರಿ ಎಚ್ಚರಿಸುತ್ತದೆ ಮಾತ್ರವಲ್ಲ, ಬಾಣದ ಗುರುತು ತೋರಿಸಿ, ಸರಿಯಾದ ದಾರಿಯನ್ನು ಸೂಚಿಸುತ್ತದೆ. ಇದು ವೃದ್ಧರಿಗೆ ಮಾತ್ರವಲ್ಲ, ತೊಂದರೆ ಇರುವ ಇತರರಿಗೂ ಪ್ರಯೋಜನಕ್ಕೆ ಬರುತ್ತದೆ ಎಂದು ಕಂಪೆನಿ ಹೇಳಿದೆ.
ತಮ್ಮನ್ನು ಸ್ವತ: ಜೋಡಿಸಿಕೊಳ್ಳುವ ತ್ರೀಡಿ ವಸ್ತುಗಳು
ಮಸಾಚ್ಯುಸೆಟ್ಸ್ ತಾಂತ್ರಿಕ ಸಂಸ್ಥೆಯು ಸ್ವತ: ಜೋಡಿಯಾಗಿ ದೊಡ್ಡ ವಸ್ತುವನ್ನು ಸೃಷ್ಟಿಸುವ ತಂತ್ರಜ್ಞಾನದ ಮಾದರಿಯನ್ನು ಸಿದ್ಧಪಡಿಸಿದೆ. ತ್ರೀಡಿ ವಸ್ತುಗಳನ್ನು ಮುದ್ರಿಸಿ ತಯಾರಿಸುವ ಮುದ್ರಕಗಳ ಬಗ್ಗೆ ನಿಮಗೆ ಗೊತ್ತೇ ಇದೆ. ಈಗ ಅಂತಹ ವಸ್ತುಗಳು ನೀರನ್ನು ಹೀರಿಕೊಂಡು. ದೊಡ್ಡಗಾತ್ರಕ್ಕೆ ಹಿಗ್ಗಿದಾಗ, ಅವುಗಳ ಮೇಲೆ ಬಲಪ್ರಯೋಗಿಸುವ ಮೂಲಕ ಬೇಕಾದ ರೀತಿ ಜೋಡಿಸುವ ತಂತ್ರವನ್ನು ಅಭಿವೃದ್ಧಿ ಪಡಿಸಲಾಗಿದೆ.
------------------------------------
ಬಿಟ್‌ಕಾಯಿನ್ ಎಂಬ ಮಿಥ್ಯಾಕರೆನ್ಸಿ
ಈ ಬಿಟ್‌ಕಾಯಿನ್ ಎನ್ನುವುದು,ಕಂಪ್ಯೂಟರ್ ಪ್ರಪಂಚದಲ್ಲಷ್ಟೇ ಚಲಾಯಿಸಲಾಗುವ ಕರೆನ್ಸಿ. ಯಾವುದಾದರೂ ಗಣಿತ ಸಮಸ್ಯೆಯನ್ನು ಬಿಡಿಸಿದಾಗ, ಬಿಟ್‌ಕಾಯಿನ್ ಮೂಲಕ ಸಮಸ್ಯೆ ಬಿಡಿಸಿದವನಿಗೆ ಮೊತ್ತ ಪಾವತಿಯಾಗುತ್ತದೆ.ಯಾರ ತಿಳುವಳಿಕೆಗೂ ಬಾರದಂತೆ ಹಣ ಖರ್ಚು ಮಾಡುವವರಿಗೆ ಈ ಕರೆನ್ಸಿ ಅನುಕೂಲವಾಗಿದೆ. ಕ್ಯಾಸಿನೋಗಳಲ್ಲೂ ಇದನ್ನು ಸ್ವೀಕರಿಸುವ ಕಾರಣ ಇದು ಜನಪ್ರಿಯವಾಗಿದೆ. ಇದನ್ನು ಮಾಮೂಲು ಹಣಕ್ಕೆ ಪರಿವರ್ತಿಸಲೂ ಸಾಧ್ಯ. ಇದರ ದೈನಂದಿನ ಮೌಲ್ಯವನ್ನು ನಿರ್ಧರಿಸುವ Mt Gox ಅಂತಹ ಕಂಪೆನಿ ಈ ಕೆಲಸ ಮಾಡುತ್ತದೆ. ಸದ್ಯ ಬಿಟ್‌ಕಾಯಿನ್ ಬೆಲೆ ಗಗನಮುಖಿಯಾಗಿದ್ದು, ಮೂವತ್ತಮೂರು ಡಾಲರು ಬೆಲೆಯಿದೆ.
UDAYAVANI
ಇಂಟರ್ನೆಟ್‌ನಲ್ಲಿ ಅಂಕಣ ಬರಹಗಳು: http://ashok567.blogspot.comನಲ್ಲಿ ಲಭ್ಯ.
*ಅಶೋಕ್‌ಕುಮಾರ್ ಎ
Comments
ಭೂಮಿಗೆ ಆಧಾರ ಆಮೆ. ಗತಿ