ಚುಕ್ಕುಬುಕ್ಕಿನಲ್ಲಿ ಆನ್‌ಲೈನ್ ಪುಸ್ತಕ ಬಿಡುಗಡೆ
ಚುಕ್ಕುಬುಕ್ಕಿನಲ್ಲಿ ಆನ್‌ಲೈನ್ ಪುಸ್ತಕ ಬಿಡುಗಡೆ
http://www.chukkubukku.com ಪ್ರಕಾಶಕರು, ಬರಹಗಾರರು ಮತ್ತು ಒದುಗರ ನಡುವಿನ ಸಂಪರ್ಕ ಸೇತುವೆಯಾಗಲು ಬಯಸುವ ಇಂಟರ್ನೆಟ್ ತಾಣ.ಇಲ್ಲಿ ಬರಹಗಾರರು ತಮ್ಮ ಪುಸ್ತಕಗಳ ಹಿನ್ನುಡಿ, ಮುನ್ನುಡಿ, ಪುಟಗಳ ಸಂಖ್ಯೆ,ದರ, ಪ್ರಕಾಶಕರ ವಿವರ, ಪುಸ್ತಕದ ಒಂದು ಅಧ್ಯಾಯ, ಬರಹಗಾರನ ಪರಿಚಯ ಇವೇ ಮುಂತಾದ ವಿವರಗಳನ್ನು ನೀಡಲು ಸಾಧ್ಯ. ಅದೇ ರೀತಿ ಪ್ರಕಾಶಕರೂ ತಾವು ಪ್ರಕಟಿಸಿದ ಪುಸ್ತಕಗಳ ವಿವರಗಳನ್ನು ಪ್ರಕಟಿಸಬಹುದು. ಓದುಗರು ಕನ್ನಡ ಸಾಹಿತ್ಯಲೋಕದಲ್ಲಿ ಪ್ರಕಾಶಿತವಾದ ಪುಸ್ತಕಗಳ ಬಗ್ಗೆ ವಿವರಗಳನ್ನಿಲ್ಲಿ ಪಡೆದು, ತಮ್ಮ ಓದನ್ನು ನಿರ್ಧರಿಸಬಹುದು. ಈ ತಾಣದಿಂದಲೇ ತಮ್ಮ ಆಸಕ್ತಿಯ ಪುಸ್ತಕ ಖರೀದಿಸಲು ಸಾಧ್ಯವಾಗಿದ್ದರೆ ಚೆನ್ನಾಗಿತ್ತು-ಆ ವ್ಯವಸ್ಥೆ ಮುಂದೆ ಇಲ್ಲಿ ಕಲ್ಪಿಸುವ ಯೋಜನೆ, ತಾಣದ ನಿರ್ವಾಹಕರಾದ ಸೌಮ್ಯ ಕಲ್ಯಾಣ್‌ಕರ್, ಸಿದ್ಧಾರ್ಥ್ ಕಲ್ಯಾಣ್‌ಕರ್ ಮತ್ತು ಅಪಾರ ಅವರದ್ದು. ಈ ತಾಣಕ್ಕೆ ಸೇರಿದ ನೂರನೇ ಪುಸ್ತಕವಾಗಿ ನಾಗೇಶ್ ಹೆಗಡೆಯವರ "ಬರ್ಗರ್ ಭಾರತ" ಮತ್ತು "ದುಂದುಮಾರ" ಕೃತಿಗಳನ್ನು ಆನ್‌ಲೈನಿನಲ್ಲೇ ಬಿಡುಗಡೆ ಮಾಡಲಾಯಿತು.
ಆನ್‌ಲೈನ್ ಖರೀದಿಯಲ್ಲಿ ನಾನೂ ಟೋಪಿ ಹಾಕಿಸಿಕೊಂಡೆ!
ಆನ್‌ಲೈನ್ ಖರೀದಿಯಲ್ಲಿ ನೀವು ವಸ್ತುವನ್ನು ನೋಡಲಾಗದು, ಸ್ಪರ್ಶಿಸಲಾಗದು. ಆದರೆ ಅವುಗಳ ವಿವಿಧ ಕೋನಗಳ ಚಿತ್ರಗಳು ಸಿಗುತ್ತವೆ. ವಸ್ತುವಿನ ಪೂರ್ಣ ವಿವರಗಳನ್ನು ಓದಬಹುದು. ಇಲೆಕ್ಟ್ರಾನಿಕ್ಸ್ ವಸ್ತುಗಳನ್ನು ಖರೀದಿಸುವಾಗ ಇದು ಬಹುಪ್ರಯೋಜನಕಾರಿ. ಅಂಗಡಿಯಲ್ಲಿ ಸೇಲ್ಸ್‌ಮನ್‌ಗಳು ಅಪೂರ್ಣ, ತಪ್ಪು ಮಾಹಿತಿ ಕೊಡುವುದೇ ಹೆಚ್ಚು. ಬೆಲೆಯ ಬಗ್ಗೆಯೂ, ಇತರ ತಾಣಗಳಲ್ಲಿ ವಸ್ತುವಿನ ಬೆಲೆಯನ್ನು ಹೋಲಿಸಿ ನೋಡಲೂ ಬಹುದು. ಇಂಡಿಯಾಟುಡೆ ಬಳಗದ bagittoday.com,ಫ್ಲಿಪ್‌ಕಾರ್ಟ್. ಕಾಮ್ ಮುಂತಾದ ತಾಣಗಳು ಜನಮನ ಗೆದ್ದ ಭಾರತೀಯ ತಾಣಗಳು.
ಇಲ್ಲಿ ವಸ್ತುವಿನ ಗುಣಮಟ್ಟ, ದರಗಳು ಸ್ಪರ್ಧಾತ್ಮಕವಾಗಿರುತ್ತವೆ. ಬಟವಾಡೆಯೂ ಸಮಯಕ್ಕೆ ಸರಿಯಾಗಿ ನಡೆಯುತ್ತದೆ. ಬ್ಯಾಗಿಟ್‌ಟುಡೆ ತಾಣದಿಂದ ನಾನು ಸತತವಾಗಿ ವಸ್ತುಗಳನ್ನು ಆನ್‌ಲೈನಿನಲ್ಲಿ ಖರೀದಿಸಿದ್ದೆ. ಈ ಸಲ ಸ್ಲೀಕ್‌ಬುಕ್ ರೂಪಾಯಿ ಒಂದು ಸಾವಿರ ಕಡಿತದಲ್ಲಿ ಲಭ್ಯವಿತ್ತು. ಮಾತ್ರವಲ್ಲ ಮೂರು ಮಾಸಿಕ ಕಂತುಗಳಲ್ಲಿ ಪಾವತಿಸುವ ಸೌಲಭ್ಯವೂ ಇತ್ತು. ಹಾಗಾಗಿ ಅದನ್ನು ಖರೀದಿಸುವ ನಿರ್ಧಾರ ಮಾಡಿದೆ. ಸ್ಲೀಕ್‌ಬುಕ್ ಅನ್ನು ಆಯ್ದು, ಕಡಿತದ ಬೆಲೆಗೆ ಕೋಡ್ ನೀಡಿ, ಚೆಕೌಟ್ ಮಾಡಿದ್ದಾಯಿತು. ಪಾವತಿಯ ಬಗೆಯಲ್ಲಿ ಇಎಂಐ ಬಗೆಯನ್ನು ಆಯ್ದು, ಕ್ರೆಡಿಟ್‌ಕಾರ್ಡ್ ಮೂಲಕ ಪಾವತಿಸುವ ಆಯ್ಕೆಯನ್ನು ಆಯ್ದೂ ಆಯಿತು. ಮುಂದೆ ಪಾವತಿಗಾಗಿ ವ್ಯವಸ್ಥೆ ಮಾಡಲು ಮಧ್ಯವರ್ತಿಯ ತಾಣಕ್ಕೆ ನನ್ನ ಸಂಪರ್ಕವನ್ನು ವರ್ಗಾಯಿಸಲಾಯಿತು. ಅಲ್ಲಿ ಕ್ರೆಡಿಟ್‌ಕಾರ್ಡ್ ಮಾಹಿತಿಯನ್ನು ತುಂಬಬೇಕು. ನಾನು ಪಾವತಿಸಬೇಕಾದ ಮೊತ್ತದಲ್ಲಿ ಪೂರ್ಣದರವನ್ನು ತೋರಿಸಲಾಗುತ್ತಿತ್ತಾದ ಕಾರಣ, ನಾನು ಮುಂದುವರಿಯಲಿಲ್ಲ. ನನ್ನ ವ್ಯವಹಾರವಲ್ಲಿಗೆ ಅರ್ಧದಲ್ಲಿ ನಿಂತತಾಯಿತು. ಅದನ್ನು ಗಮನಿಸುವ ಬ್ಯಾಗಿಟ್‌ಟುಡೇ ತಾಣದ ಕಾಲ್‌ಸೆಂಟರಿನವರು ನನ್ನನ್ನು ಸಂಪರ್ಕಿಸಿದರು. ಖರೀದಿಯನ್ನು ಅರ್ಧಕ್ಕೆ ನಿಲ್ಲಿಸಲು ಕಾರಣವೇನೆಂದಾಗ, ಮಾಸಿಕ ಕಂತಿನ ಬದಲು ಪೂರ್ಣಪಾವತಿ ಮಾಡಬೇಕಾಗಿ ಬಂದದ್ದನ್ನು ವಿವರಿಸಿದೆ. ಕಾಲ್‌ಸೆಂಟರಿನ ಉದ್ಯೋಗಿ, ಪೂರ್ಣ ಮೊತ್ತ ತೋರಿಸಿದರೂ ಮಾಸಿಕ ಕಂತು ಮಾತ್ರಾ ತೆರಬೇಕಾಗಿ ಬರುತ್ತದೆ. ಹಾಗಾಗಿ ವ್ಯವಹಾರ ಮುಂದುವರಿಸಿ ಎಂದು ವಿವರಿಸಿದ. ಆತನು ನೀಡಿದ ಭರವಸೆಯಿಂದ ನಾನು ಖರೀದಿ ಪೂರ್ತಿ ಮಾಡಿದೆ. ಒಡನೆಯೇ ನನಗೆ ಸ್ಲೀಕ್‌ಬುಕ್ಕಿನ ಪೂರ್ತಿ ದರವು ನನ್ನ ಕ್ರೆಡಿಟ್‌ಕಾರ್ಡಿನಿಂದ ವರ್ಗಾವಣೆಯಾದ ಬಗ್ಗೆ ಸಂದೇಶ ಬಂತು. ಮತ್ತೆ ಕಾಲ್‌ಸೆಂಟರನ್ನು ಸಂಪರ್ಕಿಸಿ, ನನ್ನ ಅನುಭವವನ್ನು ಹೇಳಿದೆ. ಅದು ಒಮ್ಮೆಗೆ ಹಾಗಾಗುತ್ತದೆ. ಎರಡು ಕಂತುಗಳು ನನ್ನ ಕ್ರೆಡಿಟ್‌ಕಾರ್ಡಿಗೆ ವಾಪಸ್ಸು ಮಾಡಲಾಗುವುದು, ಎಂಬ ಸಮಜಾಯಿಷಿ ಬಂತು. ನನಗೆ ಈ ಬಗ್ಗೆ ನಂಬಿಕೆ ಬರಲಿಲ್ಲವಾದರೂ ಏನೂ ಮಾಡುವಂತಿರಲ್ಲ. ಬ್ಯಾಗಿಟ್‌ಟುಡೇ ತಾಣದಿಂದ ಮಾಮೂಲಿಯಂತೆ ನನ್ನ ಆರ್ಡರನ್ನು ಸ್ವೀಕರಿಸಿದ್ದೇವೆ, ಪಾವತಿಯನ್ನು ಸ್ವೀಕರಿಸಲಾಗಿದೆ ಎಂದು ಸಂದೇಶ ಮತ್ತು ಮಿಂಚಂಚೆ ಬಂತು. ಮಿಂಚಂಚೆಗೆ ಉತ್ತರವಾಗಿ, ನನ್ನ ಮೂರು ಮಾಸದ ಪಾವತಿಯ ಬಗ್ಗೆ ಏನು ಮಾಡಬೇಕು ಎಂದು ವಿಚಾರಿಸಿ ,ಪ್ರತ್ಯುತ್ತರ ಕಳಿಸಿದೆ. ಇದಕ್ಕುತ್ತರ ಮರುದಿನವೇ ಬಂತು. ಇಎಂಐ ಸೌಲಭ್ಯ ನೀಡುವುದು ಬ್ಯಾಂಕು. ಹಾಗಾಗಿ ತಮ್ಮ ಬ್ಯಾಂಕನ್ನು ಸಂಪರ್ಕಿಸಿ ಎಂಬ ಸಲಹೆ!ಸರಿ, ಬ್ಯಾಂಕಿನ ಕಾಲ್‌ಸೆಂಟರನ್ನು ಸಂಪರ್ಕಿಸಿದೆ. ಅಲ್ಲಿನ ಉದ್ಯೋಗಿ ನನ್ನ ಇಎಂಐ ಸೌಲಭ್ಯ ಕೇಳಿಕೆಗೆ ಧನಾತ್ಮಕವಾಗಿ ಸ್ಪಂದಿಸಿ,ಮೂರು, ಆರು, ಒಂಭತ್ತು, ಹನ್ನೆರಡು ಇವುಗಳಲ್ಲಿ ಯಾವುದು ಬೇಕೆಂದು ವಿಚಾರಿಸಿದ. ನನಗೆ ಮೂರು ಮಾಸಿಕ ಕಂತಿನ ಕೊಡುಗೆ ಮಾತ್ರಾ ಇದೆ ಎಂಬ ನನ್ನುತ್ತರಕ್ಕೆ, ಹಾಗೇನೂ ಇಲ್ಲ, ಬೇಕಾದ್ದನ್ನು ಆಯಬಹುದು. ನನಗೇನೂ ಸಂಶಯದ ವಾಸನೆ ಹೊಡೆಯಿತು.ಇದಕ್ಕೆ ಬಡ್ಡಿ ವಿಧಿಸುವುದಿಲ್ಲವಷ್ಟೇ ಎಂದು ವಿಚಾರಿಸಿದೆ. ಬಡ್ಡಿ ವಿಧಿಸುವುದಿಲ್ಲ,ಆದರೆ ಒಂದುಸಲ ಪ್ರಾಸೆಸಿಂಗ್ ಶುಲ್ಕ ತೆತ್ತರಾಯಿತು ಮತ್ತು ಮೂರು ಕಂತುಗಳಿಗೆ ಈ ಶುಲ್ಕ ಒಂಭೈನೂರ ನಲುವತ್ತು ರೂಪಾಯಿ ಮಾತ್ರಾ ನೀಡಿದರಾಯಿತು ಎಂದೂ ಇದು,ಸಂಸ್ಕರಣ ಶುಲ್ಕ, ಬಡ್ಡಿಯಲ್ಲ ಎಂದಾತ ವಿವರಿಸಿದ. ಅಲ್ಲಿಗೆ ನನಗೆ ಕಡಿತವಾಗಿ ಸಿಕ್ಕಿದ ಒಂದು ಸಾವಿರ ಇಲ್ಲಿ ಕೈಬಿಡುತ್ತದೆ ಎಂದು ಪಿಚ್ಚೆನಿಸಿತು. ನನಗೆ ಮಾಸಿಕ ಕಂತು ಬೇಡ ಎಂದರೆ, ಯಾಕೆ ಬೇಡ, ಮೊದಲ ತಿಂಗಳು ಬರೇ ಸಂಸ್ಕರಣ ಶುಲ್ಕ ಪಾವತಿಸಬೇಕಾಗುತ್ತದೆ. ಉಳಿದ ಮೂರು ಕಂತುಗಳನ್ನು ಮೂರು ತಿಂಗಳಲ್ಲಿ ನೀಡಬೇಕಾಗುತ್ತದೆ. ಹಾಗಾಗಿ ನಾಲ್ಕು ತಿಂಗಳು ಅವಧಿ ಸಿಗುತ್ತದೆ, ಹಾಗಾಗಿ ತ್ರೈಮಾಸಿಕ ಕಂತಿನ ಕೊಡುಗೆಯನ್ನು ಸ್ವೀಕರಿಸಿ ಎಂದು ಒತ್ತಾಯಿಸಿದಾಗ, ಸಂಧಿಗ್ದಕ್ಕೆ ಸಿಲುಕಿದ ನಾನು ಆತನ ಒತ್ತಾಯಕ್ಕೆ ಮಣಿದೆ. ಒಟ್ಟಿನಲ್ಲಿ ಈ ವ್ಯವಹಾರದಲ್ಲಿ ಮೋಸ ಹೋದ ಭಾವನೆ ನನಗೆ ಬಂತು.ಇನ್ನು ಈ ಆನ್‌ಲೈನ್ ಖರೀದಿ ಬೇಡವೆಂಬ ವೈರಾಗ್ಯವೂ ಬಂದಿದೆ. ಇನ್ಯಾವತ್ತೂ ಆನ್‌ಲೈನ್ ಖರೀದಿ ಮಾಡೆನೆಂಬ ಭೀಷ್ಮ ಪ್ರತಿಜ್ಞೆಯನ್ನಿನ್ನೂ ಮಾಡಿಲ್ಲ ಅಷ್ಟೆ!
ಸ್ಪರ್ಶಸಂವೇದಿ ತೆರೆಯುಳ್ಳ ಗೂಗಲ್‌ಕ್ರೋಮ್ ಪಿಕ್ಸೆಲ್ ಲ್ಯಾಪ್‌ಟಾಪ್
ಗೂಗಲ್ ಯಂತ್ರಾಂಶ ತಯಾರಿಗಿಳಿದದ್ದು ಹಳೆ ಸುದ್ದಿ. ಸ್ಯಾಮ್‌ಸಂಗ್, ಏಸರ್, ಲೆನೋವೋ, ಎಚ್‌ಪಿ ಕಂಪೆನಿಗಳು ಗೂಗಲ್‌ಗಾಗಿ ಸಾಧನಗಳನ್ನು ತಯಾರಿಸುತ್ತವೆ. ಆದರೆ ಪಿಕ್ಸೆಲ್ ಲ್ಯಾಪ್‌ಟಾಪ್‌ನಲ್ಲಿ ಬಿಡಿಭಾಗಗಳನ್ನು ಇತರ ಕಂಪೆನಿಗಳಿಂದ ಖರೀದಿಸಿ, ಗೂಗಲ್ ಸ್ವತ: ತಯಾರಿಸಿದೆ. ಇದರ ತೆರೆ ಮ್ಯಾಕ್‌ಬುಕ್ಕಿನ ರೆಟಿನಾ ಡಿಸ್‌ಪ್ಲೇಯಷ್ಟೇ ಸ್ಪಷ್ಟತೆ ಹೊಂದಿದೆ. ಪ್ರತಿ ಇಂಚಿಗೆ ಇನ್ನೂರ ಮೂವತ್ತೊಂಭತ್ತು, ಒಟ್ಟಾರೆಯಾಗಿ ನಲವತ್ತಮೂರು ಲಕ್ಷ ಪಿಕ್ಸೆಲುಗಳನ್ನು ತೆರೆಯ ಮೇಲಿದೆ. ಹಾಗಾಗಿ ಇದರಲ್ಲಿ ಚಿತ್ರ ಮತ್ತು ಲಿಪಿಗಳನ್ನು ಸ್ಪಷ್ಟವಾಗಿ ಕಾಣಲು ಸಾಧ್ಯವಾಗುತ್ತದೆ. ಮಾತ್ರವಲ್ಲ ಇದರ ತೆರೆ ಸ್ಪರ್ಶಸಂವೇದಿ ಕೂಡಾ. ಹಾಗಾಗಿ ವಿಂಡೋಸ್8ನಂತಹ ಆಪರೇಟಿಂಗ್ ವ್ಯವಸ್ಥೆಗಳಿಗಿದು ಹೇಳಿ ಮಾಡಿಸಿದ ಹಾಗಿದೆ. ಆದರಿದರಲ್ಲಿ ಗೂಗಲ್‌ಕ್ರೋಮ್ ಆಪರೇಟಿಂಗ್ ವ್ಯವಸ್ಥೆಯನ್ನು ಬಳಸಲಾಗಿದೆ. ಪದಸಂಸ್ಕಾರದಂತಹ ದೈನಂದಿನ ತಂತ್ರಾಂಶಗಳನ್ನು ಕ್ಲೌಡ್‌ಸೇವೆಗಳ ಮುಖಾಂತರ ಇಂಟರ್‌ನೆಟ್ಟಿನಿಂದ ಪಡೆಯಲಿಲ್ಲಿ ಅವಕಾಶ ಕಲ್ಪಿಸಲಾಗಿದೆ. ನಾಲ್ಕನೇ ತಲೆಮಾರಿನ ಫೋರಜಿ ಸಂಪರ್ಕಕ್ಕಿದರಲ್ಲಿ ಅವಕಾಶವಿದೆ.
ಚಿತ್ರವನ್ನು ಪಾಸ್‌ವರ್ಡ್ ಆಗಿ ಬಳಸಿ
ವಿಂಡೋಸ್8ನಲ್ಲಿ ಚಿತ್ರವನ್ನು ಪಾಸ್‌ವರ್ಡ್ ಆಗಿ ಬಳಸಲವಕಾಶವಿದೆ. ಈ ಆಪರೇಟಿಂಗ್ ವ್ಯವಸ್ಥೆ ಅಳವಡಿಸಿದ ಸಾಧನಕ್ಕೆ ಪ್ರವೇಶ ಪಡೆಯಲು ಬಳಕೆದಾರ ಪ್ರಯತ್ನಿಸಿದಾಗ ಚಿತ್ರವೊಂದು ತೆರೆಯ ಮೇಲೆ ಮೂಡುತ್ತದೆ. ಈಗ ಚಿತ್ರದ ಮೇಲೆ ಗೆರೆಯನ್ನೋ, ವಕ್ರರೇಖೆಯನ್ನೋ ಎಳೆದು, ಪ್ರವೇಶ ಪಡೆಯಬೇಕು. ಚಿತ್ರದಲ್ಲಿ ಈರ್ವರು ವ್ಯಕ್ತಿಗಳಿದ್ದರೆ, ಅವರ ಮೂಗಿನಿಂದ ಮೂಗಿಗೆ ಗೆರೆ ಎಳೆದು ಪಾಸ್‌ವರ್ಡ್ ಏರ್ಪಡಿಸಿದ್ದರೆ, ಅದೇ ನಮೂನೆಯ ಗೆರೆ ಎಳೆದು ಪ್ರವೇಶ ಪಡೆಯಲು ಸಾಧ್ಯವಾಗುತ್ತದೆ.
ಸತ್ತ ನಂತರವೂ ಟ್ವೀಟ್ ಮಾಡಿ!
LivesOn ತಂತ್ರಾಂಶದ ಮೂಲಕ ಸತ್ತ ನಂತರವೂ ಟ್ವಿಟರಿನಲ್ಲಿ ಸಂದೇಶ ಹಾಕುವುದು ಸಾಧ್ಯ. ಈ ಲಿವ್ಸಾನ್ ತಂತ್ರಾಂಶವು ವ್ಯಕ್ತಿಯು ಇಷ್ಟಪಡುವ ಕೊಂಡಿಗಳ ಬಗೆ, ಆತನು ಯಾರ ಟ್ವೀಟುಗಳನ್ನು ಇತರರ ಜತೆ ಹೆಚ್ಚಾಗಿ ಹಂಚಿಕೊಳ್ಳುತ್ತಾನೆ ಎಂಬುದನ್ನೆಲಾ ಗಮನಿಸಿ, ಅದರ ಪ್ರಕಾರವೇ ವ್ಯಕ್ತಿಯು ಮರಣ ಹೊಂದಿದ ಬಳಿಕವೂ ಸಂದೇಶಗಳನ್ನು ಕಳುಹಿಸುವ ಸಾಮರ್ಥ್ಯ ಹೊಂದಿದೆ.
UDAYAVANI
ಇಂಟರ್ನೆಟ್‌ನಲ್ಲಿ ಅಂಕಣ ಬರಹಗಳು: http://ashok567.blogspot.comನಲ್ಲಿ ಲಭ್ಯ.
*ಅಶೋಕ್‌ಕುಮಾರ್ ಎ