ಸಿಂಪಲ್ಲಾಗ್ ಎದೆಯೊಳಗೆ ಕಚಗುಳಿಯಿಡುತ್ತೆ ಈ ಲವ್ ಸ್ಟೋರಿ !
ಚಿತ್ರ
ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ ಸುನಿ ಎಂಬ ಹೊಸ ನಿರ್ದೇಶಕನ ಚಿತ್ರ. ಈ ಸಿನಿಮಾದಲ್ಲಿ ಯಾವುದೇ ದೊಡ್ಡ ಸ್ಟಾರ್ ನಟಿಸಿಲ್ಲ, ಇದರಲ್ಲಿ ರಕ್ಷಿತ್ ಶೆಟ್ಟಿ ಎಂಬ ಮಂಗಳೂರಿನ ಹುಡುಗ ಜೊತೆ ಕನ್ನಡ ಕಿರುತೆರೆಯಲ್ಲಿ ಹಿಂದೊಮ್ಮೆ ಕಾಣಿಸಿಕೊಂಡಿದ್ದ ಶ್ವೇತಾ ಶ್ರೀವಾಸ್ತವ್ ಎಂಬ ಹುಡುಗಿ ನಟಿಸಿದ್ದಾಳೆ. ಚಿತ್ರದ ಇತರ ತಾರಾವರ್ಗದಲ್ಲೂ ದೊಡ್ಡ ನಟರು ಯಾರೂ ಇಲ್ಲ. ನಿರ್ದೇಶಕರಿಂದ ಹಿಡಿದು ಪ್ರತಿಯೊಬ್ಬ ತಂತ್ರಜ್ಞನೂ ಹೊಸಬ, ಹಾಡುಗಳನ್ನು ಮಲೇಶಿಯಾ, ಸಿಂಗಾಪುರ, ಯೂರೋಪ್‍ಗಳಲ್ಲಿ ಚಿತ್ರಿಸಿಲ್ಲ. ಹೆಸರೇ ಹೇಳೋಹಾಗೆ ಇಲ್ಲಿ ಎಲ್ಲವೂ "ಸಿಂಪಲ್" ಆಗಿದೆ ಆದರೂ ನಂಬಿದ್ರೆ ನಂಬಿ ಈ ಚಿತ್ರ ಬಿಡುಗಡೆಯಾದ ದಿನದ ಮೊದಲ ಆಟಕ್ಕೆ ಯಾವ ಸ್ಟಾರ್ ನಟನ ಚಿತ್ರಕ್ಕೂ ಇರದಂಥ ಭರ್ಜರಿ ಜನ ಬೆಂಬಲ ವ್ಯಕ್ತವಾಗಿದೆ!. ಮಲ್ಟಿಪ್ಲೆಕ್ಸ್‍ಗಳತ್ತ ತಲೆ ಹಾಕುವುದನ್ನೇ ಮರೆತಿದ್ದ ಕನ್ನಡ ಪ್ರೇಕ್ಷಕ ಈ ಚಿತ್ರವನ್ನು ಮುಗಿಬಿದ್ದು ನೋಡುತ್ತಿದ್ದಾನೆ. ಮೊದಲ ಮೂರು ದಿನದ ಎಲ್ಲಾ ಆಟಗಳೂ ಬಹುತೇಕ ಬುಕ್ ಆಗಿವೆ. ಕೆಲವು ಮಲ್ಟಿಪ್ಲೆಕ್ಸ್‍ಗಳು ವಿಶೇಷ ಪ್ರದರ್ಶನಗಳನ್ನು ಏರ್ಪಡಿಸಿವೆ. ಕಾಲೇಜ್ ಹುಡುಗ ಹುಡುಗಿಯರ ಜೊತೆ ಕುಟುಂಬಸ್ಥರೂ ಸಿನಿಮಾ ಮಂದಿರಗಳತ್ತ ಧಾವಿಸುತ್ತಿದ್ದಾರೆ. ಟಿಕೆಟ್ ಸಿಗದೆ ವಾಪಸ್ ಬಂದವರೂ ಇದ್ದಾರೆ, ಬ್ಲ್ಯಾಕ್‍ನಲ್ಲಿ ದುಪ್ಪಟ್ಟು ಹಣಕೊಟ್ಟು ನೋಡಿದವರೂ ಇದ್ದಾರೆ. ಯಾರೂ ಊಹಿಸಿರದ ಆರಂಭ ಚಿತ್ರಕ್ಕೆ ಸಿಕ್ಕಿದ್ದು ಸ್ವತಃ ಚಿತ್ರ ತಂಡವನ್ನೇ ಒಂದು ಹಂತಕ್ಕೆ ಬೆಚ್ಚಿ ಬೀಳಿಸಿದೆ.
ಹೌದು, ಇಷ್ಟೆಲ್ಲಾ ಜನ ನೋಡುವಂಥದ್ದು ಏನಿದೆ ಈ ಚಿತ್ರದಲ್ಲಿ ಅಂದ್ರಾ? ಚಿತ್ರದ ಸಂಭಾಷಣೆ ಮತ್ತು ಚಿತ್ರವನ್ನು ನಿರೂಪಿಸಿದ ರೀತಿ ಪ್ರೇಕ್ಷಕರ ಎದೆಯೊಳಗೆ ನುಗ್ಗಿ ಕಚಗುಳಿ ಇಡೋದು ಖಂಡಿತ. ಅಂತದ್ದೊಂದು ಶಕ್ತಿ ಚಿತ್ರಕ್ಕಿದೆ. ಇಬ್ಬರೂ ತಂತಮ್ಮ ಹಳೆ ಲವ್ ಸ್ಟೋರಿ ಹೇಳಿಕೊಳ್ಳುತ್ತಾ ಕಥೆ ಮುಂದೆ ಸಾಗುತ್ತದೆ. ಪ್ಲ್ಯಾಷ್ ಬ್ಯಾಕ್ ಹೇಳುವಾಗ ತನ್ನೆದುರು ಕುಳಿತ ನಾಯಕಿಯನ್ನೇ ಮನಸ್ಸಲ್ಲಿ ಕಲ್ಪಿಸಿಕೊಂಡು ನಾಯಕ್ಲ ಕಥೆ ಹೇಳಿದರೆ, ನಾಯಕಿ ಕೂಡ ನಾಯಕನ್ನೇ ಮನಸಲ್ಲಿ ಕಲ್ಪಿಸಿಕೊಂಡು ತನ್ನ ಹಳೆಯ ಪ್ರೇಮ ಪುರಾಣವನ್ನು ಬಿಚ್ಚಿಡುತ್ತಾಳೆ. ಈ ಪ್ಲ್ಯಾಷ್ ಬ್ಯಾಕ್‍ನಲ್ಲೇ ಪ್ರೇಕ್ಷಕಕೂಡ ಕಳೆದು ಹೋಗುತ್ತಾನೆ. ಚಿತ್ರದ ಕೊನೆಯಲ್ಲೊಂದು ತಿರುವಿದೆ, ಹಾಗೆಯೇ ಚಿತ್ರವನ್ನು ಮುಗಿಸಿದ ರೀತಿ ಕೂಡಾ ಮೆಚ್ಚುವಂಥದ್ದು. ಕಥೆ ಸಿಂಪಲ್ ಆದರೆ ನಾಯಕ-ನಾಯಕಿ ಮಾತಾಡಿಕೊಳ್ಳುವ ರೀತಿಯೇ ಚಿತ್ರದ ಪ್ರಧಾನ ಆಕರ್ಷಣೆ. ಅಲ್ಲಲ್ಲಿ ದ್ವಂದ್ವಾರ್ಥ ಎನಿಸಿದರೂ ಯಾವುದೂ ಅತಿರೇಕವಾಗಿಲ್ಲ. ಒಂದೊಂದು ಸಂಭಾಷಣೆಗೂ ಶಿಳ್ಳೆಗಳ ಸ್ವಾಗತ. ಓಟ್ಟಿನಲ್ಲಿ ಒಂದು ಒಳ್ಳೆಯ ಚಿತ್ರ.
ಚಿತ್ರದಲ್ಲಿ ಸಂಭಾಷಣೆಯ ಜೊತೆಗೆ ಕಣ್ಣಿಗೆ ತಂಪೆರೆವ ಛಾಯಗ್ರಹಣವಿದೆ. ಕೊಡಗಿನ ಮಳೆಗಾಲವನ್ನು ಕುಂತಲ್ಲೇ ಸವಿಯಬಹುದು. ನಟನೆಯಲ್ಲೂ ನಾಯಕ ನಾಯಕಿಯರು ಹಿಂದೆ ಬಿದ್ದಿಲ್ಲ. ರೇಡಿಯೊ ಸಿಟಿ ಜಾಕಿಗಳಾದ ರಚನಾ ಮತ್ತು ಪ್ರದೀಪ ಸಹ ಚಿತ್ರದ ಪಾತ್ರಗಳಾಗುತ್ತಾರೆ. ಮಿಕ್ಕಂತೆ ಚಿತ್ರದ ತುಂಬೆಲ್ಲ ನಾಯಕ ನಾಯಕಿಯರೇ ಕಾರುಬಾರು.
ಹೊಸಬರ ಚಿತ್ರವೊಂದು ಈ ರೀತಿ ಹೆಸರು ಮಾಡುತ್ತಿರುವುದು ನಿಜಕ್ಕೂ ಖುಷಿಯ ವಿಚಾರ. ಸಿಂಪಲ್ ಜನರಾದ ನಮಗೆ ಈ ಸಿಂಪಲ್ ಲವ್ ಸ್ಟೋರಿ ಮನಸ್ಸಿಗೆ ತೀರಾ ಹತ್ತಿರವಾಗಿಬಿಡುತ್ತದೆ. ಒಂದ್ ಸಾರಿ ನೋಡಿ ನೀವೂ ಖುಷಿಪಡಿ. ಹೇಗಿದೆ ಅಂತ ನಮ್ ಜೊತೆ ಹಂಚಿಕೊಳ್ಳಿ.
ಮತ್ತೊಂದು ಸಿನಿಮಾ ವಿಮರ್ಶೆ ಜೊತೆ ಮತ್ತೆ ಬರ್ತೀನಿ.
ನಿಮ್ಮ ಗಂಧದಗುಡಿ
ಕ್ಷಣ ಕ್ಷಣದ ಕನ್ನಡ ಸಿನಿಮಾ ಸುದ್ದಿಗಳಿಗಾಗಿ ಹಿಂಬಾಲಿಸಿ - twitter.com/gandhadagudi
Rating
Comments
ಚಿತ್ರ ವಿಮರ್ಶೆ
ಚಿತ್ರ ವಿಮರ್ಶೆ ಸಂಕ್ಚಿಪ್ತವಾಗಿದ್ದು ಚೆನ್ನಾಗಿದೆ..
ಯುಟೂಬ್ ಮತ್ತಿತರ ಮುಕ್ತ ಮಾಧ್ಯಮಗಳ ಮೂಲಕ ಚಿತ್ರದ ಪ್ರಾಮ್ ಟ್ರೇಲರ್ ಬಿಡುಗಡೆ ಮಾಡಿ ಚಿತ್ರದ ಬಗ್ಗೆ ಕುತೂಹಲ ಮೂಡಿಸಿ ಪ್ರೇಕ್ಷಕರನ್ನ ಸೆಳೆವ ಪ್ರಕ್ರಿಯೆ ಹಾಲಿವುಡ್ ಬಾಲಿವುಡ್ ಟಾಲಿವುಡ್ ಕಾಲಿವುಡ್ ನಂತರ ಕನ್ನಡಕ್ಕೆ ಬಂದಿದೆ..
ಈ ಚಿತ್ರದ ಬಗ್ಗೆ ಹಲವು ಯುವಕ ಯುವತಿಯರಿಗೆ ಕುತೂಹಲ ಇತ್ತು-ಅದು ಅವರದೇ ಸ್ಟೋರಿ ಅಂತ..
ನಿನ್ನೆ ಈ ಚಿತ್ರದ ವಿಮರ್ಶೆ ಬಗ್ಗೆ ಎಲ್ಲ ಕನ್ನಡ ಆಂಗ್ಲ ಪತ್ರಿಕೆಗಳಲ್ಲಿ ಓದಿದೆ..ಬಹುಪಾಲು ಒಳ್ಳೆ ವಿಮರ್ಶೆ ಇದೆ. ಚಿತ್ರಕ್ಕಿಂತ ಹೆಚ್ಚಾಗಿ ಅದರ ಪ್ರೊಮೊಶನ್ ಮಾಡಿದಿ ಆರೀತಿ ಕನ್ನಡ ಚಿತ್ರ ರಂಗಕ್ಕೆ ಆ ರೀತಿಯ ಮುಕ್ತ ಮಾಧ್ಯಮದ ಪ್ರೊಮೊ ಅವಶ್ಯಕತೆ ಇದೆ ಎಂದು ಹೇಳಿರುವರು..
ಹಾಗೆಯೇ ಈ ರೀತಿಯ ಓಪನಿಂಗ್ ಸ್ಟಾರ್ ನಟರ ಚಿತ್ರಗಳಿಗೆ ಮಾತ್ರ ಸಿಗುತ್ತದೆ ಎಂದು ಬರೆದಿರುವರು..ಅದೂ ನಿಜ...ಆ ಮಟ್ಟಿಗೆ ಈ ಚಿತ್ರ ಸಕ್ಸೆಸ್ಸ್..
ಅದು ನಿಜ.
ನಮ್ಮಲ್ಲೂ ಒಳ್ಳೆಲ್ಲೇ ಟ್ಯಾಲೆಂಟ್ ಇರವ ನಿರ್ದೇಶಕರು ನಟರು ತಂತ್ರಜ್ಞರು ನಿರ್ಮಾಪಕರು ಇರುವರು-ಆದರೆ ಅವಕಾಶ ಕಡಿಮೆ ಅಸ್ತೆ..
ಶುಭವಾಗಲಿ..
\।