ಅಮ್ಮ ಹೇಳಿದ ಎಂಟು ಸುಳ್ಳುಗಳು,

ಅಮ್ಮ ಹೇಳಿದ ಎಂಟು ಸುಳ್ಳುಗಳು,

ಪುಸ್ತಕದ ಲೇಖಕ/ಕವಿಯ ಹೆಸರು
ಎ ಆರ್ ಮಣಿಕಾಂತ್
ಪ್ರಕಾಶಕರು
ನೀಲಿಮಾ ಪ್ರಕಾಶನ
ಪುಸ್ತಕದ ಬೆಲೆ
90 ರೂ

ಈ ಪುಸ್ತಕದ ಒಂದೊಂದು ಲೇಖನಗಳೂ ಜೀವನ ಪಯಣಕ್ಕೆ ದಾರಿ ದೀವಿಗೆಯಂತಿದೆ. ಸೋಲನ್ನು ಮೆಟ್ಟಿ ನಿಂತ ಜನರ ಕಥೆಗಳು ನಿಜಕ್ಕೂ ಸ್ಪೂರ್ತಿದಾಯಕ. ಒಮ್ಮೆ ಕಂಬನಿ ತರಿಸುವ, ಹಾಗೆ ಮರುಕ್ಷಣ ಕಚುಗುಳಿ ಇಡುವ, ಗಾಢ ಆಲೋಚನೆಗೆ ದಾರಿ ಮಾಡಿ ಕೊನೆಗೆ ಒಂದು ಸಣ್ಣ ಪಾಠ ಹೇಳಿ ಹೋಗುವ ಲೇಖನಗಳ ಮಾಲೆ. ಬದುಕು ಕಂಡ ಅನುಭವದ ಮಾರ್ಗದರ್ಶನಗಳು ಎಂದಿಗೂ ಸರಿಯಾಗಿಯೇ ಇರುತ್ತವೆ. ಓದಿರದಿದ್ದಲ್ಲಿ ಒಮ್ಮೆ ಓದಿ ನೋಡಿ..
 ಅಮ್ಮ ಹೇಳಿದ ಎಂಟು ಸುಳ್ಳುಗಳು ಪ್ರತಿಬಾರಿ ಓದಿದಾಗಲೂ ಹೊಸತೊಂದು ಅನುಭವದ ಪರಿಚಯ ಮಾಡಿಕೊಡುತ್ತದೆ. ಅವು ಸಕಾರಾತ್ಮಕವಾಗಿ ನಮ್ಮ ಮೇಲೆ ಪ್ರಭಾವ ಬೀರುತ್ತವೆ, ಹೊಸ ಬೆಳಕು ಚೆಲ್ಲುತ್ತವೆ, ನಮ್ಮ ತಪ್ಪು ನಿರ್ಧಾರಗಳನ್ನು ಬದಲಿಸಲು ಸಹಕರಿಸುತ್ತವೆ. ಇಲ್ಲಿನ ಬರಹಗಳು ನಮ್ಮ ಮನ ಮುಟ್ಟುತ್ತವೆ, ಸೋತೆನೆಂಬ ಭಾವ ಮನದಲ್ಲಿ ಮೂಡಿದಾಗ ಬೆನ್ನು ತಟ್ಟುತ್ತವೆ, ಕಂದನನ್ನು ಸಾಕಲು ತಾಯಿ ತಾನು ಖಾಲಿ ಹೊಟ್ಟೆಯಲ್ಲಿದ್ದುಕೊಂಡು, ಮಗುವಿಗೆ ಅನ್ನವನ್ನೀಯುವ ಸಂದರ್ಭಗಳು,  ಹೃದಯ ಮಿಡಿಯುತ್ತವೆ.  ಇಲ್ಲಿರುವ ಎಲ್ಲವೂ ಕತೆಗಳಲ್ಲ. ಕೆಲವು ನಂಬಹುದಾದಂತಹ ಕಲ್ಪನೆಗಳು, ಕೆಲವು ನಂಬಲಾರದಂತಹ ಸತ್ಯ ಕಥೆಗಳು, ಕೆಲವು ಹರಟೆಗಳು. ಈ ಪುಸ್ತಕದ ಅರ್ಪಣೆ ವೈಶಿಷ್ಟ್ಯಪೂರ್ಣವಾಗಿದೆ. (ಅಪ್ಪನಂಥ ಧೈರ್ಯದ ಅಮ್ಮನಿಗೆ / ಅಮ್ಮನಂತೆಯೇ ಬೆಳೆಸಿದ ಅಪ್ಪನಿಗೆ).

ಜೀವನದಲ್ಲಾದ ಬದಲಾವಣೆ ಒಂದು ಕತೆಗೆ ವಸ್ತುವಾಗಬಲ್ಲದು.  ನಮ್ಮ ಸಂಸ್ಕೃತಿಯಲ್ಲಿ ತಾಯಿ ಮೊದಲ ದೇವರು, ನಂತರ ತಂದೆ ಹಾಗೂ ಗುರುಗಳಿಗೆ ಸ್ಥಾನವಿದೆ. ಆದರೆ ಇಂದು ಎಲ್ಲವೂ ತಿರುಚಿದೆ. ಕೆಲಸದ ಒತ್ತಡ, ಸಮಯದ ಅಭಾವ, ಹೆಚ್ಚು ದುಡ್ಡು ಮಾಡುವ ಹಂಬಲ ಇವೆಲ್ಲದರಿಂದ  ನವ ನಾಗರಿಕತೆಯ ಪ್ರಭಾವಕ್ಕೆ ಸಿಲುಕಿ ತಂದೆತಾಯಂದಿರತ್ತ ಗಮನ ಕೊಡಲಾಗದೇ ವೃದ್ಧಾಶ್ರಮಕ್ಕೆ ಸೇರಿಸುತ್ತೇವೆ. ಅಲ್ಲಿ ಅವರಿಗೆ ಬೇಕಾದ ಎಲ್ಲಾ ಸವಲತ್ತುಗಳನ್ನೂ ದುಡ್ಡಿನ ಪ್ರಭಾವದಿಂದ ಮಾಡಿಕೊಡುತ್ತೇವೆ, ಆದರೆ ಆ ಹಿರಿ ಜೀವ ತನ್ನ ಕೊನೆ ಕಾಲದಲ್ಲಿ ಬಯಸುವ ಮಕ್ಕಳ ಪ್ರೀತಿಯೊಂದರ ಹೊರತು! ಇವರ ಕತೆ ಓದಿದಮೇಲೆ ನಾವು ನಮ್ಮ ಅಭಿಪ್ರಾಯ ಬದಲಿಸಬೇಕಾಗುವುದು. ಇವು ನಮ್ಮ ಮನ ಮುಟ್ಟುತ್ತವೆ, ಹೃದಯ ಮಿಡಿಯುತ್ತವೆ. ಇಲ್ಲಿಯ ಹೆಚ್ಚಿನ ಪಾತ್ರಗಳು ನಮ್ಮ ಸುತ್ತಮುತ್ತಲಿನವೇ ಎಂದು ಭಾಸವಾಗುತ್ತವೆ.

ಮಣಿಕಾಂತ ಅವರ ಪುಸ್ತಕ ಓದಿದಾಗ ನಿಮಗೂ ಹೊಸ ಅನುಭವ ಬರುವ ಸಾಧ್ಯತೆ ಇದೆ. ಇಲ್ಲಿ ನಂಬಲು ಅಸಾಧ್ಯವಾದ ಸತ್ಯ ಕಥೆಗಳಿವೆ. ತಂದೆಯ ಮಿತ್ರನ ಟ್ರಕ್‌ನಲ್ಲಿ ಕುಳಿತು ಪ್ರವಾಸ ಮಾಡುತ್ತಿದ್ದ ಒಬ್ಬ ಬಡ ಹುಡುಗ  ಅಪಘಾತದಲ್ಲಿ ಎರಡು ಕಾಲು ಕಳೆದುಕೊಳ್ಳುತ್ತಾನೆ. ಮುಂದೆ ಹಟತೊಟ್ಟು ಓದಿ ಒಬ್ಬ ಸಾಫ್ಟ್‌ವೇರ್ ಇಂಜಿನಿಯರ್ ಆಗುತ್ತಾನೆ. ಅವನು ಏರಿದ ಸಾಧನೆಯ ಶಿಖರ ಕಾಲಿದ್ದ ಮಕ್ಕಳಿಗೂ ಸಾಧ್ಯವಾಗಿರಲಿಕ್ಕಿಲ್ಲ ಅನ್ನುವಂತೆ ಭಾಸವಾಗುತ್ತದೆ. ಸೈಕಲ್ ರಿಕ್ಷಾ ನಡೆಸುವ ಒಬ್ಬ ಬಡವನ ಮಗನೊಬ್ಬ ಐ.ಎ.ಎಸ್.ಪರೀಕ್ಷೆ ಪಾಸಾದ. ಕೊಳೆಗೇರಿಯಲ್ಲಿ ಬೆಳೆದ ಒಬ್ಬ ಬಡಹುಡುಗ  ಭಾರತದ ಶ್ರೇಷ್ಠ ಮೆನೇಜ್‌ಮೆಂಟ್ ಸಂಸ್ಥೆ  ಸೇರಿದ, ದ್ವಿತೀಯ ಸ್ಥಾನ ಪಡೆದ, ತಿಂಳಿಗೆ ಒಂದೆರಡು ಲಕ್ಷ ವರಮಾನ ಕೊಡುವ ಮಲ್ಟೀನ್ಯಾಶನಲ್ ಕಂಪನಿಗಳ ಕೆಲಸ ತಿರಸ್ಕರಿಸಿ, ರಸ್ತೆಯಲ್ಲಿ ಇಡ್ಲಿ ಮಾರಿ ತನ್ನ ಶಿಕ್ಷಣಕ್ಕೆ ಧನಸಹಾಯ ಮಾಡಿದ ತಾಯಿಯ ನೆನಪಿಗೆ ಹೊಟೆಲ್ ಉದ್ಯಮದಲ್ಲಿ ಕೈಹಾಕಿದ, ದೇಶದ ಬಹುದೊಡ್ಡ ಹೊಟೇಲ್‌ಗಳ ಶ್ರೇಣಿಯನ್ನೇ ಪ್ರಾರಂಭಿಸಿದ. ಅಮೇರಿಕೆಯ ಕೈಗಳಿಲ್ಲದ ಹುಡುಗಿ ತನ್ನ ಕಾಲುಗಳನ್ನು ಬಳಸಿ ವಿಮಾನವನ್ನು ನಡೆಸಿದಳು, ಪೈಲೆಟ್ ಆದಳು. ಲೇಖಕರ ಈ ಕಥೆಗಳ ಮೂಲಕ, ನಮಗೆ ಅವಕಾಶವಿಲ್ಲ ಎಂದು ಗೊಣಗುವ ಸೋಮಾರಿಗಳ ಕಣ್ಣು ತೆರೆಯುವ ಕೆಲಸ ಮಾಡಿದ್ದಾರೆ. ಈ ಸಂಗ್ರಹದಲ್ಲಿ ಶಿಖರಪ್ರಾಯವಾದ ಕಥೆ ಅಮ್ಮ ಹೇಳಿದ ಎಂಟು ಸುಳ್ಳುಗಳು.
 ನಮ್ಮ ತಂದೆ ತಾಯಿ ನಮ್ಮನ್ನು ಸಾಕುವಾಗ ಬಹಳ ತ್ಯಾಗ ಮಾಡಿರುತ್ತಾರೆ, ಎಷ್ಟೋ ಸುಳ್ಳು ಹೇಳಿರುತ್ತಾರೆ. ಬಡವರಾದ ತಂದೆತಾಯಿಗಳು ಮಕ್ಕಳಿಗೆ ಉಣಬಡಿಸಿ, ತಮಗೆ ಹಸಿವೆ ಇಲ್ಲ ಎಂದು ಹೇಳಿ, ಇಲ್ಲವೆ ತಮ್ಮ ಹೊಟ್ಟೆ ತುಂಬಿದೆ ಎಂದು ಹೇಳಿ ನೀರು ಕುಡಿದು ಮಲಗಿರುತ್ತಾರೆ. ಇದು ಹಲವರ ಅನುಭವಕ್ಕೆ ಬಂದ ಸಂಗತಿ. ಇಲ್ಲಿ ತಾಯಿ ಹೇಳಿದ ಎಂಟು ಸುಳ್ಳುಗಳಲ್ಲಿ ಕೆಲವು ಲೇಖಕರ ಕಲ್ಪನೆಯೂ ಸೇರಿರಬಹುದು. ಇದು ವಾಸ್ತವವೇ ಕಲ್ಪನೆಯೇ ಎಂದು ಚರ್ಚಿಸುವುದರಲ್ಲಿ ಅರ್ಥವಿಲ್ಲ. ಈ ಕಥೆಯನ್ನು ಓದಿದ ಮೇಲೆ, ತಮ್ಮ ತಾಯಂದಿರನ್ನು ನೆನೆದವರಿದ್ದಾರೆ, ಕಣ್ಣೀರು ಹರಿಸಿದವರಿದ್ದಾರೆ, ಮುಂದೆ ಹೆತ್ತವರನ್ನು ಎಂದಿಗೂ ನೋಯಿಸುವುದಿಲ್ಲ ಎಂದವರೂ ಇದ್ದಾರೆ. ತಂದೆ ತಾಯಿಯನ್ನು ವೃದ್ಧಾಶ್ರಮಕ್ಕೆ ಕಳಿಸುವ ಮಕ್ಕಳ ಕಣ್ಣು ತೆರೆಸುವಂತಿದೆ ಈ ಕತೆ. ಏಡ್ಸ್ ವಿರುದ್ಧ ಹೋರಾಡಿದ ವೀಣಕ್ಕನ ಕತೆ, ನೂರಕ್ಕೆ 95ರಷ್ಟು ದೇಹದ ಭಾಗ ಸುಟ್ಟುಕೊಂಡ ಸ್ಪೇನದ ಹುಡುಗಿ ಮೋಟು ಕೈಯಿಂದ ಬರೆದಳು, ಕಾರು ನಡೆಸಿದಳು. ಈ ಕತೆ ಓದುವಾಗ ನಮ್ಮಲ್ಲಿ ಹೋರಾಟದ ಬೀಜ ಯಾರೋ ಬಿತ್ತಿದಂತಾಗುತ್ತದೆ. ಕೆಟ್ಟ ಮಕ್ಕಳು ಹುಟ್ಟುವ ಸಾಧ್ಯತೆ ಇದೆ, ಆದರೆ ಕೆಟ್ಟ ತಾಯಿ ಹುಟ್ಟುವ ಸಂಭವವೇ ಇಲ್ಲ.  ಬದುಕಿಗಾಗಿ ಅದೆಷ್ಟೋ ತಾಯಂದಿರು ಸುಳ್ಳುಗಳನ್ನು ಹೇಳಿರುತ್ತಾರೆ. ಆದರೆ ಆ ಸುಳ್ಳಿನಲ್ಲೂ ಒಂದು ಒಳ್ಳೆಯ ಉದ್ದೇಶವಿರುತ್ತದೆ. ಅದು ಪ್ರಾಮಾಣಿಕತೆಯ ಸುಳ್ಳು, ಯಾವುದೇ ವಂಚನೆಯಿಂದ ಕೂಡಿರುವಂತದ್ದಲ್ಲ. ಹೀಗೆ ಅಮ್ಮ ಹೇಳಿದ ಎಂಟು ಸುಳ್ಳುಗಳು,  ಮಕ್ಕಳಿಗೆ ಒಂದು ಸ್ಪೂರ್ತಿ ಬುತ್ತಿಯೇ ಆಗಿದೆ.

ಚಿತ್ರ ಕೃಪೆ:http://www.kannadastore.com/kannada-books-stories-amma-helida-entu-sullugalu-ar-manikanth-pi-4540.html