ಮೂಡು ಬಂದು ಬಿದ್ರೆ…….

ಮೂಡು ಬಂದು ಬಿದ್ರೆ…….

ಮೋನಿ ಸಕುಟುಂಬ ಪರಿವಾರ ಸಮೇತನಾಗಿ ಒಂದು ಮದುವೆಗೆ ಹೊರಟಿದ್ದ.  ಸಕುಟುಂಬ ಅಂದರೆ, ಮೋನಿ, ಪದ್ದಿ ಮತ್ತು ಅವನ ಮಗ ಮೋಪ, ಸಪರಿವಾರ ಅಂದರೆ, ಅವನ ಜಿಗ್ರಿದೋಸ್ತ್ ಚಡ್ಡಿ ಸತೀಶ, ಅವನ ಹೆಂಡತಿ ಮತ್ತು ಮಗಳು.  ಮದುವೆ ಮೂಡಬಿದ್ರೆಯಲ್ಲಿ.  ಮೋನಿಯ ಹೊಚ್ಚ ಹೊಸಾ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಮೋಪ ಗೊತ್ತಲ್ಲ ತರಲೆ ಸುಬ್ಬ… ಕಾರಿನಲ್ಲಿ ಮೋಪನ ತುಂಟಾಟ ಅಧಿಕವಾಗಿತ್ತು.  ಹೆತ್ತವರಿಗೆ ಹೆಗ್ಗಣ ಮುದ್ದೆಂಬಂತೆ ಮೋನಿಯ ಪರಿವಾರಕ್ಕೆ ಅವನ ತುಂಟಾಟ ಹಿತವಾಗಿತ್ತು ಆದರೆ ಚಡ್ಡಿ ಸತೀಶ ಮತ್ತವನ ಹೆಂಡತಿಗೆ ಅಸಮಾಧಾನವಾಗುತ್ತಿದ್ದರೂ, ದಾಕ್ಷಿಣ್ಯಕ್ಕೆ ಬಾಯಿ ಮುಚ್ಚಿ ಸಹಿಸುತ್ತಿದ್ದರು.  ಚಡ್ಡಿ ಸತೀಶನ ಮಗಳು ಮಾತ್ರ ಮೋಪನ ತುಂಟಾಟಗಳನ್ನು ಕಣ್ಣರಳಿಸಿ ನೋಡುತ್ತಾ ಆನಂದಿಸುತ್ತಿದ್ದಳು.  ಬಿರು ಬೇಸಿಗೆಯ ಸಖೆಯಿಂದಾಗಿ, ಎ.ಸಿ. ಕಾರಿನಲ್ಲಿ ಕುಳಿತಿದ್ದರೂ, ಮಕ್ಕಳ ಹೊರತಾಗಿ ಉಳಿದ ನಾಲ್ವರೂ ಕಿರಿಕಿರಿ ಅನುಭವಿಸುತ್ತಿದ್ದರು. 

“ಇನ್ನೂ ನೂರಾ ಐವತ್ತು ಕಿಲೋ ಮೀಟರ್ ಇದೆ… ಮೂಡಬಿದ್ರೆಗೆ” ದಾರಿಯಲ್ಲಿನ ಮೈಲಿಗಲ್ಲೊಂದನ್ನು ನೋಡಿದ ಪದ್ದಿ ಉದ್ಗರಿಸಿದಳು ಬೇಸರದಿಂದ.  ತಕ್ಷಣವೇ ಮೋಪ “ ಮಮ್ಮೀ ಮೂಡು ಬಂದು ಬಿದ್ರೆ ಮೂಡಬಿದ್ರೆ ಸಿಗುತ್ತಾ?’ ಎಂದು ಕೇಳಿದಾಗ ಅಂತಹ ಕಿರಿಕಿರಿಯಲ್ಲೂ ಎಲ್ಲರ ಮುಖಗಳಲ್ಲಿ ನಗು ಅರಳಿತ್ತು.

Rating
No votes yet

Comments