ಕತೆ : ಕೋಡುವಳ್ಳಿಯ ಕರೆ. ( ತೋಟದ ಮನೆ )

ಕತೆ : ಕೋಡುವಳ್ಳಿಯ ಕರೆ. ( ತೋಟದ ಮನೆ )

ಚಿತ್ರ

 

ಎರಡನೆ ಬಾಗ  : ಚಂದ್ರಾ ಚಂದ್ರಾ
 
ಮುಂದೆ ಓದಿ...
 
 
ಬಾಗ - ೩   ತೋಟದ ಮನೆ 
===================
 
 
 
ಮುಳ್ಳಯ್ಯನ ಗಿರಿಯ ತುದಿಯಲ್ಲಿ ನಿಂತ ಗೆಳತಿಯರಿಗೆ ಆಕಾಶದಲ್ಲಿಯೆ ನಿಂತಷ್ಟು ಸಂಭ್ರಮ. ಸುತ್ತಲಿನ ಬೆಟ್ಟಗುಡ್ಡಗಳು, ಕಣಿವೆ ಕಾಡುಗಳ ದೃಶ್ಯ ನಯನಮನೋಹರವೆನಿಸಿತು. ಕರ್ನಾಟಕದ ಅತ್ಯಂತ ಎತ್ತರದ ಶೃಂಗದಲ್ಲಿ ತಾವಿದ್ದೇವೆ ಎನ್ನುವ ಭಾವ ಅವರನ್ನು ತುಂಬಿತು. ಒಂದು ತಾಸು ಅಲ್ಲಿಯೆ ಕಳೆದು ನಂತರ ಕೆಳಗಿಳಿದು ಮತ್ತೆ ಎಲ್ಲರು ಬಾಬಬುಡನ್ ಗಿರಿಯತ್ತ ಪ್ರಯಣ ಬೆಳೆಸಿದರು ಅಲ್ಲಿಯ ಪ್ರಕೃತಿ ನಿರ್ಮಿತ ಗುಹೆ,  ಮಣಿಕ್ಯದಾರ ಜಲದಾರೆ ಎಲ್ಲವನ್ನು ನೋಡುತ್ತ ಊಟದ ಸಮಯವಾದುದ್ದೆ ತಿಳಿಯಲಿಲ್ಲ. ಚಿತ್ರಾಳ ಚಿಕ್ಕಮ್ಮ ಮನೆಯಲ್ಲಿಯೆ ಮಾಡಿತಂದಿದ್ದ ಅಹಾರವನ್ನು ಹೊಟ್ಟೆತುಂಬಾ ತಿಂದು ಮತ್ತೆ ವಾಹನ ಹತ್ತಿದಾಗ ಎಲ್ಲರಿಗು ಜೊಂಪು ಕೆಳಗಿನ ಕಲ್ಲತ್ತಿಗಿರಿಗೆ ಬಂದಾಗ ಅಲ್ಲಿನ ತಂಪಿನ ವಾತವರಣ, ಬಂಡೆಯಲ್ಲಿಯೆ ಕೆತ್ತಿದ್ದ ದೇವಾಲಯ ದೇವಾಲದ ಮೇಲೆ ಸುರಿಯುವ ಜಲಪಾತ ಎಲ್ಲವನ್ನು ನೋಡುತ್ತ ಮುಗ್ದರಾದರು. ಚಿತ್ರಾಳ ಚಿಕ್ಕಪ್ಪನ ಜೊತೆ ಸೇರಿ ಜಲಪಾತದ ಪಕ್ಕದ ಬಂಡೆಯನ್ನು ಹತ್ತಿ ಸ್ವಲ್ಪದೂರ ಸಾಗಿ , ಮತ್ತೆ ಕತ್ತಲಾದಿತ್ತೆಂದು ಹಿಂದೆ ಬಂದರು. ಸಂಜೆ ಮನೆ ಸೇರಿದಾಗ ಎಲ್ಲರಿಗು ಆಯಾಸ ಮರುದಿನದ ಕಾರ್ಯಕ್ರಮದ ಯೋಜನೆ. 
 
 
 
 
ಮರುದಿನ ಬೆಳವಾಡಿಯ ನರಸಿಂಹ ದೇವಾಲಯ, ಉದ್ಭವಗಣಪತಿ, ಹಳೆಯಬೀಡು ಬೇಲೂರು ಎಲ್ಲಕಡೆಯು ನಿಂತ ಹೋಯ್ಸಳರ ಶಿಲ್ಪಕಲಾವೈಭವ ನೋಡುತ್ತ ಹೊರಗಿನ ಪ್ರಪಂಚದ ಅರಿವೆ ಇಲ್ಲದಂತಾಯಿತು ಅವರಿಗೆ. ಶಾಲಿನಿಯು ಅಷ್ಟೆ ತನ್ನ ಮನದ ಎಲ್ಲ ಯೋಚನೆಗಳನ್ನು ಬದಿಗೊತ್ತಿ ಎಲ್ಲರೊಂದಿಗೆ ಬೆರೆತು ನಗುತ್ತ ಇದ್ದಾಗ, ಚಿತ್ರಾಳಿಗೆ ಎಂತದೊ ಸಮಾದಾನ ಸದ್ಯ ಮತ್ತೆ ಸರಿಹೋದಳಲ್ಲ ಶಾಲಿನಿ ಎಂದು. 
 
ಬೇಲೂರಿನಿಂದ ಬಂದು ರಾತ್ರಿ ಎಲ್ಲರು ಊಟಕ್ಕೆ ಕುಳಿತಾಗ ಚಿತ್ರಾಳ ಚಿಕ್ಕಪ್ಪ ತಮ್ಮಯ್ಯಪ್ಪ ಹೇಳಿದರು, 
"ಎರಡು ದಿನ ಸುತ್ತಾಟವೆ ಆಯಿತು, ಶೃಂಗೇರಿಯ ಪ್ರಯಾಣ ನಾಳೆ ಬೇಡ ಎಲ್ಲರಿಗು ಆಯಾಸವಾಗುತ್ತದೆ. ಬದಲಾಗಿ ನಾಳೆ ಕೋಡುವಳ್ಳಿಯ ತಮ್ಮ ಅಡಿಕೆ ಕಾಫಿತೋಟವನ್ನೆಲ್ಲ ಸುತ್ತಾಡಲಿ. ಬೆಳಗ್ಗೆ ತಿಂಡಿ ತಿಂದು ಹೊರಟರೆ ಆಯ್ತು. ಮದ್ಯಾನ್ಹ ನಾನೆ ಅಲ್ಲಿಗೆ ಊಟವನ್ನು ತರುವೆ ವಾಹನದಲ್ಲಿ. ಸಂಜೆಯವರೆಗು ಸಮಯ ಕಳೆಯಲಿ. ನಾಳಿದ್ದು ಶೃಂಗೇರಿಗೆ ಹೋದರೆ ಸರಿಹೋಗುತ್ತದೆ"  
ಎಲ್ಲರು ಅವರ ಅಭಿಪ್ರಾಯ ಒಪ್ಪಿದರು. 
 
ಮತ್ತೆ ಅವರು
"ನೋಡಮ್ಮ ಚಿತ್ರಾ, ನಾಡಿದ್ದು ನಾನು ನಿಮ್ಮ ಜೊತೆ ಶೃಂಗೇರಿಗೆ ಬರಲಾಗುವದಿಲ್ಲ, ಹಾಸನದಲ್ಲಿ ನನಗೆ ಒಂದು ಕೋರ್ಟು ಕೆಲಸವಿದೆ,  ಬಾಬುನನ್ನು ಕರೆದುಕೊಂಡು ಹೋಗಿ, ಅಲ್ಲದೆ ನಿಮ್ಮಪ್ಪ ಹೊರಗೆ ಹೋಗಿ ತುಂಬಾ ದಿನ ಆಯ್ತು, ಅವರನ್ನು ಜೊತೆಗೆ ಕರೆದುಕೊಂಡುಹೋಗು" 
 
ಚಿತ್ರಾ ಅವರ ಅಪ್ಪ ರಾಮಕೃಷ್ಣರನ್ನು ಕೇಳಿದಳು 
"ಅಪ್ಪಾ ನೀವು ಬನ್ನಿ ನಮ್ಮ ಜೊತೆ ಶೃಂಗೇರಿಗೆ "    
ಅದೇನು ಆಶ್ಚರ್ಯವೊ ಅವರು ಒಂದೆ ಸಾರಿಗೆ ಒಪ್ಪಿಬಿಟ್ಟರು. ಚಿತ್ರಾಳಿಗಂತು ಸಂಭ್ರಮ, ಎಂದು ನನ್ನ ಜೊತೆ ಬಾರದ ಅಪ್ಪ , ಜೊತೆಗೆ ಬರಲು ಒಪ್ಪಿದ್ದಾರೆ ಎಂದು.
 
ಮರುದಿನ ಬೆಳಗ್ಗೆ ಎಲ್ಲರು ಸ್ವಲ್ಪ ನಿದಾನವಾಗಿಯೆ ಎದ್ದರು. ತೋಟದ ಕಾರ್ಯಕ್ರಮ ಎಂದು. ಚಿತ್ರಾಳ ಚಿಕ್ಕಮ್ಮ ಮಲೆನಾಡಿನ ವಿಶೇಷ ಎಂದು ಅಟ್ಟದ ಮೇಲಿದ ಒತ್ತು ಮಣೆ ಕೆಳಗಿಳಿಸಿ ಅಕ್ಕಿ ಶಾವಿಗೆ ಮಾಡಿದ್ದರು. ನಾಲ್ವರು ಅದರಲ್ಲಿ ಶಾವಿಗೆ ಒತ್ತಲು ಪ್ರಯತ್ನಿಸಿದರು. ವಿವಿದ ರುಚಿಗಳಲ್ಲಿ ಶಾವಿಗೆ ತಿಂದು ಎಲ್ಲರು ತೋಟದ ಕಡೆ ಹೊರಡುವಾಗ ಅವಳ ಚಿಕ್ಕಮ್ಮ ಹಾಗು ತಂದೆ ಇಬ್ಬರು ಎಚ್ಚರಿಸಿದರು
"ಚಿತ್ರಾ ತೋಟಕ್ಕೆ ಸುತ್ತಾಡಲು ಹೋಗುತ್ತಿದ್ದೀರ ಹುಷಾರು ಪುಟ್ಟ,  ಆದಷ್ಟು ಕೆಂಚನ ಜೊತೆಗೆ ಇರಿ, ತೋಟದ ಬಾವಿಯ ಹತ್ತಿರ ಎಚ್ಚರವಾಗಿರಿ " ಇತ್ಯಾದಿ ಎಚ್ಚರಿಕೆಗಳು , ಚಿತ್ರಾ ಎಲ್ಲಕ್ಕು ತಲೆಯಾಡಿಸಿ ಒಪ್ಪಿಗೆ ಕೊಟ್ಟು ಹೊರಟಳು.
 
ಸುಮಾರು ಇಪ್ಪತ್ತು ಎಕರೆಗಿಂತ ಅದಿಕ ಅಡಿಕೆ, ಅದಕ್ಕಿಂತ ವಿಶಾಲ ಕಾಫಿತೋಟ, ನಡುವೆ ಮೆಣಸು, ವಿಳೆದಲೆ ಬಳ್ಳಿಗಳು, ಕೆಲವು ಕಡೆ ಹಾಕಿದ್ದ ಏಲಕ್ಕಿ ಅಲ್ಲದೆ ಅದಾಗೆ ಬೆಳೆದಿದ್ದ ಕಾಡು ಹೂಗಳು , ಹಸಿರು, ನೆಲದಲ್ಲೆಲ್ಲ ನೀರಿನ ತಂಪು. ಎಲ್ಲರಿಗೂ ತಾವೆಲ್ಲೊ ಕಾಶ್ಮೀರದಲ್ಲಿ ಇದ್ದಿವೇನೊ ಎನ್ನುವ ಭಾವ .
 
"ಹೌದ್ರೆ, ನಮ್ಮ ಚಿಕ್ಕಮಗಳೂರನ್ನು ಎಲ್ಲರು ಕರ್ನಾಟಕದ ಕಾಶ್ಮೀರವೆಂದೆ ಕರೆಯುವರು ಗೊತ್ತ" ಅಂದಳು ಹೆಮ್ಮೆಯಿಂದ ಚಿತ್ರಾ. 
ಕಾಫಿ ತೋಟದಲ್ಲಿ ಓಡಾಡುವಾಗ ಇವರ ಜೊತೆ ಮನೆಯ ಆಳು ಕೆಂಚ ಇದ್ದ. ಇವನೇನ ಕೆಂಚ ಎಂದು ಎಲ್ಲರು ನೋಡಿದರು. ಆಗಲೆ ನಡು ವಯಸನ್ನು ದಾಟುತ್ತಿದ್ದ ವ್ಯಕ್ತಿ. ಇವರ ಜೊತೆ ನಡೆಯುವಾಗ ಶಾಲಿನಿ ಎದ್ದಕಿದ್ದಂತೆ ಕೆಂಚನನ್ನು ಕೇಳಿದಳು
"ನಿನ್ನ ಜೊತೆ ಒಂದು 'ಕರಿಯ' ಎನ್ನುವ ಕಪ್ಪು ಬಣ್ಣದ  ನಾಯಿ ಇತ್ತಲ್ವ,  ಈಗ ಅದೆಲ್ಲಿ"  
 
ಚಿತ್ರಾಳ ಹೆಜ್ಜೆ ನಿಂತು ಹೋಯಿತು. ಕೆಂಚನ ಮುಖದಲ್ಲಿ ಎಂತದೋ ಗಾಭರಿ. 
"ಇಲ್ಲಮ್ಮ ನಾನು ಯಾವ ನಾಯಿಯನ್ನು ಸಾಕಿಲ್ವೆ,  ತುಂಬಾ ಹಿಂದೆ ಇತ್ತು ಅದು ಅಷ್ಟೆ, ಈಗ ಯಾವ ನಾಯಿಯು ಇಲ್ಲ " 
 
 ಕೆಂಚ ಸ್ವಲ್ಪ ಹೆದರಿದ್ದ, ಕರಿಯ ಎನ್ನುವ ನಾಯಿ ತುಂಬಾ ಹಿಂದೆ ಅಂದರೆ ಸುಮಾರು ಹದಿನೈದು ಇಪ್ಪತ್ತು ವರ್ಷದ ಹಿಂದೆ ತಾನು ಸಾಕಿದ್ದು, ಚಿತ್ರಾಳಗೆ ಸಹ ಅದು ಗೊತ್ತಿಲ್ಲ ಹಾಗಿರಲು ಇದಾವುದೊ ಮಗು ಬಂದು ಕೇಳುತ್ತಿದೆಯಲ್ಲ ಎಂದು. ಚಿತ್ರಾ ತಕ್ಷಣ ಶಾಲಿನಿಯ ಕೈ ಹಿಡಿದು ಬಾರೆ ನಾವು ತೋಟದ ಮನೆ ಹತ್ತಿರ ಹೋಗೋಣ ಎಂದು ವೇಗವಾಗಿ ಹೊರಟಳು, ಅವಳ ಕೈ ಸ್ವಲ್ಪ ನಡುಗುತ್ತಿತ್ತು. 
 
ದೂರದಲ್ಲಿ ತೋಟದ ನಡುವೆ ಮನೆಯೊಂದು ಕಂಡಿತು. ಅಚಲ ಕೇಳಿದಳು
"ಅದ್ಯಾವುದೆ ಮನೆ ... ತೋಡದ ನಡುವೆ" 
"ಅಯ್ಯೋ ಅದೆ ನಮ್ಮ ತೋಟದ ಮನೆ , ನಾವು ಕೆಲವೊಮ್ಮೆ ಇಲ್ಲಿ ಬಂದಿರುತ್ತಿದ್ದೆವು, ಈಗ ಖಾಲಿ ಬಿದ್ದಿದ್ದೆ " ಎಂದಳು.
 
ಮನೆಯನು ದೂರದಲ್ಲಿ ಕಾಣುತ್ತಿರುವಂತೆ, ಶಾಲಿನಿ ಮನಸ್ಸು ಮತ್ತೆ ಕಲ್ಲೋಲ, ಇದೇನು ವಿಚಿತ್ರ, ಈ ಮನೆ ಈ ತೋಟ ಎಲ್ಲ ನೋಡುವಾಗ , ತಾನು ಮೊದಲೆ ಇಲ್ಲಿ ಬಂದಿದ್ದ, ಓಡಿಯಾಡಿದ್ದ  ನೆನಪು ಕಾಡುತ್ತಿದೆಯಲ್ಲ ಅದು ಹೇಗೆ ಅವಳಿಗೆ ತಿಳಿಯದಾಯಿತು. ಎಲ್ಲರು ಮನೆಯೊಳಗೆ ಮಾತನಾಡುತ್ತ ಕುಳಿತಿರುವಂತೆ ಅವಳು ಮನೆಯಿಂದ ಹೊರಬಂದು, ಪಕ್ಕದಿಂದ ನಡೆದಳು. ಅಲ್ಲಿ ಮರದ ಕೆಳಗೆ ಒಂದು ದೊಡ್ಡ ಬಂಡೆ ಇದ್ದಿತ್ತು. ಅದರ ಹತ್ತಿರ ಹೋಗಿ ನಿಂತಳು. ಸುತ್ತಲು ನೋಡಿದರೆ ದೂರದಲ್ಲೊಂದು ಕಲ್ಲಿನ ಮಂಟಪ ಕಾಣಿಸಿತು. ಇದೇನು ಎಂದು ಹತ್ತಿರ ಹೋಗುವಾಗಲೆ ಅವಳ ಕಣ್ಣ ಮುಂದೆ ಯಾವುದೊ ಅರ್ಥವಾಗದ ದೃಶ್ಯಗಳು
 
ಮಂಟಪದ ಹತ್ತಿರ ಹೋಗುವಾಗಲೆ ಅವಳ ಕಣ್ಣಿಗೆ ಯಾರೊ ಇಬ್ಬರು ವ್ಯಕ್ತಿಗಳು ಅಸ್ವಷ್ಟವಾಗಿ ಕಾಣುತ್ತಿದ್ದರು, ನೋಡುವಾಗಲೆ , ಒಬ್ಬರು ಮಂಟಪದಿಂದ ಆಸರೆ ತಪ್ಪಿ ಹಿಂದಿದ್ದ ಆಳವಾದ ನೆಲಬಾವಿಗೆ ಬಿದ್ದಂತೆ ಕಾಣಿಸಿತು. ನಂತರ ಯಾರು ಇಲ್ಲ. ಇದೇನು ನನ್ನ ಭ್ರಮೆ ಎನ್ನುತ್ತ ಮಂಟಪದ ಹತ್ತಿರ ಹೋದಳು, ಅಲ್ಲಿ ಹೋಗಿ ಬಗ್ಗಿ ನೋಡುವಾಗ , ಮಂಟಪದ ಹಿಂಬಾಗದಲ್ಲಿ ಆಳವಾದ ಇಳಿಜಾರು ಅಲ್ಲೊಂದು ಬಾವಿ ಕಾಣಿಸಿತು. ಅವಳ ಮನವನ್ನು ಯಾವುದೊ ಭ್ರಮೆ ಆವರಿಸಿತು, ಏನೊ ಆಗುತ್ತಿದೆ ಏನೆಂದು ಅವಳಿಗೆ ಅರಿವಾಗುತ್ತಿಲ್ಲ. 
ಯಾರೋ ' ಅಕ್ಕ ಅಕ್ಕ' ಎಂದು ಜೋರಾಗಿ ಕೂಗಿತ್ತಿದ್ದಾರೆ, ಯಾರು , ಕಣ್ಣು ಮುಚ್ಚಿದಳು
 
 
 
ಚಿತ್ರಾಳ ದ್ವನಿ ಕೇಳಿತು, ಕಣ್ಣು ಬಿಟ್ಟು ನೋಡಿದರೆ, ತನ್ನ ಸ್ನೇಹಿತೆಯರೆಲ್ಲ ಬಂದು ನಿಂತಿರುವರು, ಅವರ ಹಿಂದೆ ಚಿತ್ರಾಳ ಚಿಕ್ಕಪ್ಪ ಸಹಿತ ಇದ್ದರು
 
"ಇಲ್ಲೇಕೆ ಒಬ್ಬಳ ಬಂದೆ , ಸ್ವಲ್ಪ ಅಪಾಯದ ಜಾಗ ಇದು, ಅತ್ತ ಬಾ ಅಲ್ಲಿ ಮರದ ಕೆಳಗೆ ಬಂಡೆಯ ಮೇಲೆ ಕುಡೋಣ " ಎ೦ದಳು ಚಿತ್ರಾ
 
"ಹೌದಲ್ಲವ , ಇದು ಅಪಾಯದ ಜಾಗ, ನಿಮ್ಮ ಅಮ್ಮ ಇಲ್ಲೆ ಅಲ್ಲವ ಕೊಲೆಯಾಗಿದ್ದು"  ಶಾಲಿನಿ  ಸ್ವಗತದಂತೆ ನುಡಿದಳು. 
 
ಮೂವರು ಗೆಳತಿಯರು ದಂಗಾಗಿ ನಿಂತರು
 
ಅವರ ಹಿಂದಿದ್ದ ಚಿಕ್ಕಪ್ಪ ಚಕಿತರಾಗಿ ಶಾಲಿನಿಯನ್ನೆ ನೋಡುತ್ತಿದ್ದರು.
 
"ಶಾಲು, ಏನು ಮಾತನಾಡುತ್ತಿದ್ದೀಯಾ? ನಿನಗೆ ಏನಾಗಿದೆ, ನನ್ನ ತಾಯಿ ಏಕೆ ಕೊಲೆಯಾಗುತ್ತಾರೆ, ಹುಷಾರಾಗಿದಿ ತಾನೆ, ಬಿಸಿಲಿಗೆ ನಿನಗೆ ತಲೆ ಸುತ್ತಿರಬಹುದು, ಬಾ ಒಳಗೆ ಹೋಗೋಣ , ಇಲ್ಲಿಬೇಡ ಬಾ " ಎಂದು ಕೈ ಹಿಡಿದು ಮಂಟಪದಿಂದ ದೂರ ಕರೆತಂದಳು, ಮರದ ಕೆಳಗಿದ್ದ ಬಂಡೆಯ ಹತ್ತಿರ ಬಂದು.  
 
"ಶಾಲು ನಿನಗೆ ಹಸಿವಾಗಿರಬಹುದು ಬೆಳಗೆ ತಿಂಡಿ ಮಾಡಿದ್ದು, ಆಯಾಸ, ಇಲ್ಲೆ ಕುಳಿತು ಮನೆಯಿಂದ ಚಿಕ್ಕಪ್ಪ ತಂದಿರುವ ಊಟ ಮುಗಿಸಿಬಿಡೋಣವೆ ?" ಎಂದು ಕೇಳಿದಳು.
 
ಶಾಲಿನಿ ಯಾವುದೋ ಭ್ರಮೆಯಲ್ಲಿದ್ದಳು
"ಬೇಡ ಇಲ್ಲಿ ಬೇಡ ನನಗೆ ಭಯ ಅನಿಸುತ್ತಿದೆ, ಮನೆಯ ಒಳಗೆ ಹೋಗೋಣ, ಇಲ್ಲಿ ಬೇಡ" ಅನ್ನುತ್ತಲೆ ವೇಗವಾಗಿ ಮನೆಯ ಒಳಗೆ ಹೊರಟಳು
 
ಎಲ್ಲ ಗೆಳತಿಯರಿಗು ಆತಂಕ, ಇವಳೇಕೆ ಹೀಗೆ ಆಡುತ್ತಿರುವಳು . 
ಚಿಕ್ಕಪ್ಪ ಅಂದರು
"ಚಿತ್ರಾ, ಹಾಗೆ ಮಾಡಮ್ಮ ಇಲ್ಲಿ ಬೇಡ ಎಲ್ಲರು ಮನೆಯ ಒಳಗೆ ಹೋಗೋಣ, ಅಲ್ಲಿಯೆ ಊಟ ಮುಗಿಸಿ, ಈ ಜಾಗ ನಿನ್ನ ಸ್ನೇಹಿತೆಗೆ ಸರಿ ಹೋಗುತ್ತಿಲ್ಲ, ಇಲ್ಲಿಂದ ಬೇಗ ಹೊರಟುಬಿಡೋಣ" ಎಂದು ಅವಸರಪಡಿಸಿದರು.
 
ಎಲ್ಲರ ಸಂಭ್ರಮವು ಆತಂಕಕ್ಕೆ ತಿರುಗಿತ್ತು, ಮನೆಯೊಳಗೆ ಹೋಗಿ ಊಟ ಮುಗಿಸಿ, ಸ್ವಲ್ಪ ವಿಶ್ರಾಂತಿ ಪಡೆದು ಅಲ್ಲಿಂದ ಹೊರಟರು. 
ಚಿತ್ರಾ ಪುನಃ ಶಾಲಿನಿಯನ್ನು ಏನು ಮಾತನಾಡಿಸಲಿಲ್ಲ . ಆದರೆ ಚಿಕ್ಕಪ್ಪನ ಹತ್ತಿರ ಒಬ್ಬಳೆ ಕೇಳಿದಳು
"ಚಿಕ್ಕಪ್ಪ , ಅಮ್ಮ ನಿಜವಾಗಿ ಹೇಗೆ ಸತ್ತಿದ್ದು, ನನಗೆ ಗೊತ್ತೆ ಇಲ್ಲ ಅವಳಿಗೆ ಏನು ಆಗಿತ್ತು" ಎಂದಳು, ಚಿತ್ರಾಳ ಚಿಕ್ಕಪ್ಪ ಬೇಸರದಿಂದ
"ಈ ಸಮಯದಲ್ಲಿ ಅದೆಲ್ಲ ಏನಮ್ಮ,  ಮನುಷ್ಯನಿಗೆ ಆಯಸ್ಸು ಮುಗಿದಾಗ ಸಾವಿಗೆ ಒಂದು ಕಾರಣ ಅಷ್ಟೆ, ಹೀಗೆ ಅನಾರೋಗ್ಯ ಅಂತ ಆಯಿತು, ಪಾಪ ಆಕೆ ಹೋದರು, ಈಗ ಅದೆಲ್ಲ ಯೋಚಿಸಬೇಡ. ನಿನ್ನ ಸ್ನೇಹಿತೆಗೆ ಏನೊ ತೊಂದರೆ ಇದ್ದಂತಿದೆ. ಪರರ ಮನೆಯ ಹೆಣ್ಣು ಮಕ್ಕಳು ನಮಗೆ ಏಕೆ ಜವಾಬ್ದಾರಿ, ನೀನು ಆದಷ್ಟು ಅವಳನ್ನು ಕ್ಷೇಮವಾಗಿ ನೋಡಿಕೋ,  ನಾಳೆ ಶೃಂಗೇರಿ ಒಂದು ಮುಗಿಸಿ, ನಂತರ ಊರಿಗೆ ಹೊರಡಲಿ, ಅವಳಿಗೆ ಅದೇಕೊ ಇಲ್ಲಿನ ಹವೆ ಒಗ್ಗುತ್ತಿಲ್ಲ ಅನ್ನಿಸುತ್ತೆ ಪಾಪ" ಎಂದರು. ಅವರ ದ್ವನಿಯಲ್ಲಿ ಯಾವುದೊ ಆತಂಕ , ಚಿಂತೆ.
 
ಅಲ್ಲಿಂದ ಹೊರಟಂತೆ ಶಾಲಿನಿ ಮನದಲ್ಲಿ ಅಂದುಕೊಂಡಳು, ಇಲ್ಲ ಈ ತೋಟದ ಮನೆಯ ಹತ್ತಿರದ ಮಂಟಪಕ್ಕು ನನ್ನ ಭ್ರಮೆಗು ಏನೊ ಸಂಬಂಧ ಖಂಡೀತ ಇದೆ, ಈ ರಹಸ್ಯ ಹೇಗಾದರು ಸರಿ ತಿಳಿದುಕೊಳ್ಳಬೇಕು. ಎಲ್ಲರು ಇದ್ದರೆ ಆಗದು . ತಾನು ಹೇಗಾದರು ಮಾಡಿ ಒಬ್ಬಳೆ ಇಲ್ಲಿ ಬರಬೇಕು ಎನ್ನುವ ನಿರ್ದಾರ ಮಾಡಿದಳು.
 
 
 ಬೆಳಗ್ಗೆ ಎಲ್ಲರು ಸಿದ್ದವಾದರು ಶೃಂಗೇರಿ ಹೊರನಾಡಿಗೆ ಹೋಗಿ ಬರುವದೆಂದು. ಚಿತ್ರಾಳ ತಂದೆ ರಾಮಕೃಷ್ಣ ಸಹ ಸಿದ್ದವಾಗಿದ್ದರು. ಜೊತೆಯಲ್ಲಿ ಅಭಿ ಹಾಗು ಅಜಯ್ ಸಹ ಸಿದ್ದವಾಗಿದ್ದರು .  ಚಿತ್ರಾಳ ಚಿಕ್ಕಮ್ಮ ಎಲ್ಲರಿಗು ತಿಂಡಿ ಮಾಡಿಕೊಟ್ಟು, 
"ಊಟದ ಹೊತ್ತಿಗೆ ಶೃಂಗೇರಿಯಲ್ಲಿರುತ್ತೀರಿ , ರಾತ್ರಿ ಸಾದ್ಯವಾದಷ್ಟು ಬೇಗ ಬಂದು ಬಿಡಿ" ಎಂದರು.  ಎಲ್ಲರು ಹೊರಟರು ಎನ್ನುವಾಗ ಶಾಲಿನಿ ಇದ್ದಕ್ಕಿಂದಂತೆ ತಾನು ಹೊರಡುವದಿಲ್ಲ ಉಳಿದವರು ಹೋಗಿ ಬರಲಿ ಎಂದಳು. ಎಲ್ಲರಿಗು ಆತಂಕ. ಚಿತ್ರಾ ಳು
"ಅದೇಕೆ ಹೀಗೆ ಮಾಡುತ್ತಿದ್ದೀಯಾ, ಬೆಂಗಳೂರಿನಿಂದ ಬಂದಿರುವುದೆ ಎಲ್ಲ ನೋಡಲು ಈಗ ನೋಡಿದರೆ ಹೀಗೆ ಮಾಡ್ತೀಯ ಏಕೆ " ಎಂದಳು. 
 
ಶಾಲಿನಿ ಗುಟ್ಟಿನಲ್ಲಿ ಚಿತ್ರಾಳ ಕಿವಿಯಲ್ಲಿ, 
"ದೇವಾಸ್ಥಾನಕ್ಕೆ ಹೋಗುತ್ತಿರುವದರಿಂದ ನಾನೀಗ ಬರಲಾಗುವದಿಲ್ಲ, ಮೈಲಿಗೆಯಾಗುತ್ತೆ " ಎಂದು ತಿಳಿಸಿದಳು. 
 
ಅಲ್ಲದೆ ತನಗಾಗಿ ಹೊರಟಿರುವ ಕಾರ್ಯಕ್ರಮ ರದ್ದುಮಾಡುವುದು ಬೇಡ, ಒಂದು ದಿನ ತಾನೆ ತಾನು ಮನೆಯಲ್ಲಿ ಚಿಕ್ಕಮ್ಮ ಜೊತೆ ಇರುವೆ, ಅಲ್ಲದೆ ಸ್ವಲ್ಪ ಕಾಫಿ ತೋಟದಲ್ಲಿ ಅಡ್ಡಾಡುವೆ ಯಾರು ಚಿಂತಿಸಬೇಡಿ, ಎಂದು ಎಲ್ಲರನ್ನು ಒಪ್ಪಿಸಿ ಕಳಿಸಿದಳು,
 
 ಚಿತ್ರಾ ಸಹಿತ, ತನ್ನ ಅಪ್ಪ ಹೊರಗೆ ಹೊರಡುವುದೆ ಅಪರೂಪ ಈಗ, ಬೇಡ ಎಂದರೆ ಅವರು ಸಹ ಬೇಸರಿಸುವರು ಎಂದು ತನ್ನ ಉಳಿದ ಸ್ನೇಹಿತೆಯರೊಡನೆ ಹೊರಟಳು. ಅವರು ಹೊರಟ ಸ್ವಲ್ಪ ಸಮಯಕ್ಕೆ ಚಿತ್ರಾಳ ಚಿಕ್ಕಪ್ಪ ಸಹಿತ. ತಮ್ಮ ಪತ್ನಿಯನ್ನು ಕುರಿತು 
"ಹಾಸನದಲ್ಲಿ ಕೋರ್ಟಿನ ವ್ಯವಹಾರವಿದೆ ಹೋಗಿ ಬರುವೆ " ಎಂದು   ತಿಳಿಸಿ ತಮ್ಮ ಕಾರಿನಲ್ಲಿ ಹೊರಟುಬಿಟ್ಟರು. 
 
  ಶಾಲಿನಿ  ಹೊರಡುವದಿಲ್ಲ ಎಂದು ನಿಲ್ಲಲ್ಲು , ಬಲವಾದ ಕಾರಣಾವಿತ್ತು. ಬೆಂಗಳೂರಿನಿಂದ ಹೊರಟು ಚಿಕ್ಕಮಗಳೂರಿನ, ಕೋಡುವಳ್ಳಿಗೆ ಬಂದ ದಿನದಿಂದ ಅವಳ ಮನಸ್ಸು ಯಾವುದೊ ಭ್ರಮೆಯಲ್ಲಿ ಸಿಕ್ಕಿ ಹೋಗಿತ್ತು. ಮನೆಗೆ ಕಾಲಿಟ್ಟ ಕ್ಷಣವೆ ಅದೇನೊ , ಈ ಮನೆ ತನಗೆ ಹೊಸದಲ್ಲ ಮೊದಲೆ ಇಲ್ಲಿ ಓಡಿಯಾಡಿರುವೆ ಎನ್ನುಬ ಭಾವನೆ ಮೂಡಿ ಬಲವಾಗುತ್ತಿತ್ತು. ಮನೆಯ ಪ್ರತಿ ಜಾಗವು ಅವಳಿಗೆ ಪರಿಚಿತ ಅನ್ನಿಸುತ್ತಿತ್ತು. ಅಲ್ಲದೆ ಕೆಲವು ಸಂಗತಿಗಳು ಅವಳನ್ನು ತಲೆ ತಿನ್ನುತ್ತಿದ್ದವು, ಚಿತ್ರಾಳ ತಾಯಿಯ ಫೋಟೋ ಎದುರಿಗೆ ನಿಂತಾಗ ಅವಳ ಹೃದಯ ಮನಗಳನ್ನು ಯಾವುದೋ ಭಾವ ಆವರಿಸುತ್ತಿತ್ತು. ಚಿತ್ರಾಳ ಅಮ್ಮ  ಜಾನಕಿ ಅವರ ಪೋಟೊ ಕಾಣುವಾಗ ತನಗು ಅವರಿಗು ಯಾವುದೋ ಸಂಬಂಧ  ಇದೆಯೆಂಬ ಭಾವ ಮನಸನ್ನು ತುಂಬುತ್ತಿತ್ತು, ತಾನು ಅವರೊಡನೆ ತುಂಬ ಒಡನಾಡಿದಂತೆ,  ವರ್ಷಗಳ ಕಾಲ ಬೆರೆತು ಆಡಿದಂತೆ, ಮಾತನಾಡಿರುವಂತೆ ಪರಿಚಿತರು ಅನ್ನುವ ಭಾವ ಅವಳನ್ನು ದೃತಿಗೆಡಿಸುತ್ತಿತ್ತು. ತನ್ನದೆ ವಯಸಿನ ಚಿತ್ರಾಳು ಒಂದು ವರ್ಷದ ಮಗುವಾಗಿರುವಾಗಲೆ ಸತ್ತಿರುವ ಅವರನ್ನು ತಾನು ಮೊದಲೆ ನೋಡಿರಲು ಹೇಗೆ ಸಾದ್ಯ ಎಂದು ಅವಳಿಗೆ ಅರ್ಥವಾಗುತ್ತಿಲ್ಲ. ತನಗು ಚಿತ್ರಾಳಿಗು ಒಂದು ವರ್ಷದ ಅಂತರವಿದೆ ಅಷ್ಟೆ, ತನಗೆ ಹದಿನೆಂಟು ದಾಟಿ ಹತ್ತೊಂಬತು ಎಂದರೆ ಅವಳಿಗೆ ಹತ್ತೊಂಬತ್ತು ದಾಟಿ ಇಪ್ಪತ್ತು ಅಷ್ಟೆ. ತಾನು ಅವರ ಜೊತೆ ಒಡನಾಡಿರಲು ಸಾದ್ಯವೆ ಇಲ್ಲ ಅನ್ನುವ ಸತ್ಯವನ್ನು ಅವಳ ಮನ ಒಪ್ಪುತ್ತಿಲ್ಲ. 
 
  ಚಿತ್ರಾಳನ್ನು ಅತೀವ ಪ್ರೀತಿಯಿಂದ ನೋಡಿಕೊಳ್ಳುತ್ತಿರುವ, ತಮ್ಮೆಲ್ಲರನ್ನು ಆತ್ಮೀಯತೆಯಿಂದ ಮಾತನಾಡಿಸುವ, ಅವರ ಚಿಕ್ಕಪ್ಪನನ್ನು ಕಂಡರೆ ತನಗೆ ಭಯ ಏಕಾಗಬೇಕು ಅವಳಿಗೆ ಅರ್ಥವಾಗುತ್ತಿಲ್ಲ. ಅಲ್ಲದೆ ಅವರ ಮನೆಯಿಂದ ಒಂದು ಮೈಲಿ ದೂರದೊಳಿಗಿರುವ ಆ ತೋಟದ ಮನೆ ಅವಳ ಮನಸನ್ನು ಆಕ್ರಮಿಸಿತ್ತು.  ಹಿಂದಿನ ದಿನ ಅಲ್ಲಿಗೆ ಹೋದಾಗ ಅವಳಿಗೆ ತನ್ನತನದ ಅರಿವು ಪೂರ್ತಿ ಹೊರಟುಹೋಗಿತ್ತು. ತಾನ್ಯಾರೊ ಪೂರ್ತಿ ಬೇರೆಯದೆ ಆದ ವ್ಯಕ್ತಿತ್ವ ಅನ್ನಿಸಿ, ಮನವನ್ನೆಲ್ಲ ಆ ಭಾವ ಅಲುಗಾಡಿಸಿ ಅವಳು ಕ್ಷೋಭೆಗೊಂಡಿದ್ದಳು. ಎಲ್ಲೋ ಬೆಂಗಳೂರಿನಲ್ಲಿ ಹುಟ್ಟಿ ಅಲ್ಲಿಯೆ ಬೆಳೆದು, ತನ್ನ ತಂದೆತಾಯಿಯ ಜೊತೆ ಇರುವ ತನಗು , ದೂರದ ಚಿಕ್ಕಮಗಳೂರಿನ ಹತ್ತಿರವಿರುವ ಕೋಡುವಳ್ಳಿಗು ಯಾವ ಸಂಭಂದ. 
 
ಕೋಡುವಳ್ಳಿಯ ಅದ್ಯಾವ ಕರೆ ತನ್ನನ್ನು ಇಷ್ಟು  ಕರೆಯುತ್ತಿದೆ?
 
ತನಗು ಇಲ್ಲಿಗು ಇರುವ ಬಂದನವೇನು ಅನ್ನುವದನ್ನು ಅರಿಯಬೇಕಾದರೆ ತಾನು ಪುನಃ ಆ ತೋಟದ ಮನೆಯ ಹತ್ತಿರ ಹೋಗಲೆ ಬೇಕೆಂದು ನಿರ್ದರಿಸಿದ್ದಳು, ಅವಳ ಮನವನ್ನು  ಆ ಬಯಕೆ ಎಷ್ಟು ಬದ್ರವಾಗಿ ಹಿಡಿದಿತ್ತೆಂದರೆ , ಅದಕ್ಕಾಗಿ ತಾನು ತನ್ನ ಸ್ನೇಹಿತೆಯರೊಡನೆ ಶೃಂಗೇರಿಗೆ ಬರಲ್ಲ ಎಂದು ನೆಪಹೇಳಿ ಕಳಿಸಿದ್ದಳು. ತಾನು ಒಂಟಿಯಾಗಿ ಆ ತೋಟದ ಮನೆಯ ಹತ್ತಿರ ಹೋದಲ್ಲಿ ಸತ್ಯ ತಿಳಿಯಬಹುದು, ತನ್ನ ಮನಸಿನ ಹೋರಾಟವೆಲ್ಲ ನಿಲ್ಲಬಹುದು ಎನ್ನುವ ಭಾವ ಅವಳನ್ನು ಸ್ನೇಹಿತೆಯರ ಸಂಗ ತಪ್ಪಿಸುವಂತೆ ಪ್ರೇರೇಪಿಸಿತ್ತು. 
 
------------------------------------------------------------
ಮುಂದುವರೆಯುವುದು....
 
ಎಲ್ಲ ಬಾಗವನ್ನು ಒಟ್ಟಿಗೆ ಓದಲು ಕೆಳಗಿನ ಸರಣಿ-ಯಲ್ಲಿನ ಪದವನ್ನು ಒತ್ತಿ....
 
Rating
No votes yet