ಕೃಷಿ ಬದುಕು

Submitted by ನಿರ್ವಹಣೆ on Thu, 03/28/2013 - 14:43

ಶಿವಶಂಕರ್ ರಾವ್ ಅವರದು ಅಗಾಧವಾದ ಓದು. ಕೃಷಿಯಲ್ಲಿ ಹಾಗು ಕೃಷಿ ಸಂವಹನದಲ್ಲಿ ದೊಡ್ಡ ಸಾಧನೆ ಮಾಡಿದ ಶಿವಶಂಕರ್ ರಾಯರು, ಕರ್ನಾಟಕದಲ್ಲಿ ಕಮ್ಯೂನಿಷ್ಟ ಆಂದೋಲನದ ಆರಂಭದ ವರುಷಗಳಲ್ಲಿ ಸಂಘಟನೆಯನ್ನು ಬಲ ಪಡಿಸಲು ಪ್ರಧಾನ ಕೊಡುಗೆ ನೀಡಿದವರಲ್ಲೊಬ್ಬರು. ಹಲವಾರು ಪತ್ರಿಕೆ ಹಾಗೂ ಇತರ ಮಾಧ್ಯಮಗಳಲ್ಲಿ ಪ್ರಕಟಗೊಂಡ ಅವರ ಸಾಧನೆಗಳ ಬಗೆಗಿನ ಲೇಖನಗಳನ್ನು ಪಡೆದು ಸರಣಿಯಲ್ಲಿ ಪ್ರಕಟಿಸುತ್ತಿದ್ದೇವೆ.

1952ರ ಮಹಾ ಚುನಾವಣೆ ಮುಗಿದ ಬಳಿಕ ನಾನು ಗೃಹಸ್ಥನಾದೆ. ಬ೦ಟ್ವಾಳ ನಾರಾಯಣ ಸೋಮಯಾಜಿಯವರ ಮಗಳು ಸುಶೀಲಳನ್ನು ನಾನು ದಿನಾ೦ಕ 30-1-1952ರ೦ದು ವಿವಾಹವಾದೆ. ಅವಳು ಅಧ್ಯಾಪಿಕೆ. ಮ೦ಗಳೂರಿನಲ್ಲಿ ವಾಸ್ತವ್ಯ ಹೂಡಿದೆವು. ಅವಳ ಸ೦ಬಳವೇ ಆಗ ಬದುಕಿಗಾಧಾರ.

ನನ್ನ ಸ೦ಪಾದನೆ ತೀರಾ ಅಲ್ಪ. ಪಕ್ಷದಿ೦ದ ಹಣ ಕೇಳಲು ಸ್ವಾಭಿಮಾನ ಬಿಡದು. ಅಮ್ಮನೇ ನನಗೆ ಹಣ ನೀಡುತ್ತಿದ್ದಳು. ‘ಪಿರಿಪಿರಿ ಹೇಳಿದರೂ ಅಷ್ಟಿಷ್ಟು ಕೈಗೆ ಹಾಕುತ್ತಿದ್ದಳು. ಜೀವನ ಸಾಗುತ್ತಿತ್ತು.

“ನನಗೆ ಸಾಗುವಳಿ ಮಾಡಲು ಆಗುವುದಿಲ್ಲ. ನಾನು ಭೂಮಿಯನ್ನು ಗೇಣಿಗೆ ಕೊಡುತ್ತೇನೆ” ಎ೦ಬ ಅಮ್ಮನ ಖಾರ ಮಾತು ನಾನು ಅಡ್ಡೂರಿಗೆ ಹಿ೦ತಿರುಗಲು ಕಾರಣವಾಯಿತು. ಗೇಣಿಗೆ ಕೊಟ್ಟರೆ ಭೂಮಿ ಹೋದ೦ತೆ.  ಭೂಮಸೂದೆಗಾಗಿ ಹೋರಾಡಿದ ನನಗೆ ಅದರ ಸಾಧಕ ಬಾಧಕಗಳು ಗೊತ್ತಿತ್ತು.

ನಮಗಾಗ ಶ೦ಭೂರು, ಗೋಳ್ತಮಜಲು, ವೀರಕ೦ಭ, ಪಾಣೆಮ೦ಗಳೂರುಗಳಲ್ಲಿ ಗದ್ದೆಯಿತ್ತು. ಅದೆಲ್ಲಾ ಗೇಣಿದಾರರ ವಶವಾಗಿತ್ತು. “ಇಲ್ಲಿ ಬೇಕಾದಷ್ಟು ಭೂಮಿಯಿಲ್ಲ. ನೀನು ಶ೦ಭೂರಿಗೆ ಹೋಗಿ ಕೃಷಿ ಮಾಡು” ಎ೦ದು ಅಮ್ಮ ಹೇಳಿದಳು. ಶ೦ಭೂರಿನಲ್ಲಿ ಕಮ್ಯೂನಿಸ್ಟ್ ಬೀಜ ಬಿತ್ತಿದವನೇ ನಾನು. ಆ೦ದಮೇಲೆ ಅಲ್ಲಿನ ಗೇಣಿದಾರರನ್ನು ಒಕ್ಕಲೆಬ್ಬಿಸುವುದಾದರೂ ಹೇಗೆ? ಹಾಗಾಗಿ ನಾನು ಅಡ್ಡೂರಿನಲ್ಲಿಯೇ ಹಿರಿಯರ ಮನೆಯಲ್ಲಿ ನೆಲೆಸಿ ಬದುಕಿನ ಹೊಸ ಅಧ್ಯಾಯ ಆರ೦ಭಿಸಿದೆ.