ಸ್ವಗತ

ಸ್ವಗತ

ಬರಹ

ಮೊನ್ನೆ ನಮ್ಮೂರಿಂದ ಮೂವರು ಪ್ರತಿಭಾವಂಥರು ಇತ್ತ ನ್ಯೂಯಾರ್ಕ್ ಕಡೆಗೆ ಬಂದಿದ್ದರು, ನ್ಯೂಯಾರ್ಕ್ ನಲ್ಲಿ ಅವರು ಯಾರದೋ ಮನೆಯಲ್ಲುಳಿದು ಕೊಂಡಿದ್ದರು, ನಾನು ಅವರನ್ನೆಲ್ಲ ಭೆಟ್ಟಿ ಮಾಡುವ ಇಚ್ಛೆಯಿಂದ
ಅವರನ್ನು ನಮ್ಮ ಕಡೆ ಬನ್ನಿ ಎಂದು ಆಹ್ವಾನಿಸಿದೆ.
ನಾನು ಊರು ಬಿಟ್ಟು ಬಹಳ ವರ್ಷಗಳಾಗಿವೆ,ವರ್ಷಕ್ಕೊಮ್ಮೆ ಹೋಗಿ ಬಂದರೂ ತಿಂಗಳಾಗುವುದರೊಳಗೆ ಊರಿನ, ಜನರ, ಆಲಸ್ಯ ತಡೆಯುವುದಕ್ಕಾಗದೆ ಮತ್ತೆ ವಿಮಾನ ಹತ್ತಿ ವಿದೇಶಕ್ಕೆ ತೆರಳುವುದು. ಇಲ್ಲಿ ಮತ್ತೆ ಊರಿನ ಕನಸು ಕಾಣುವುದು ಇದೆಲ್ಲ ಬಹುತೇಕ ನಮ್ಮೆಲ್ಲ ಅನಿವಾಸಿಗಳ ಬವಣೆ.

ಅದೆಲ್ಲ ಹೋಗಲಿ, ನನಗೆ ಕನ್ನಡವೂ ಸ್ವಲ್ಪ ಮರೆತಂತಾಗುತ್ತಿದ್ದ ಸಮಯಕ್ಕೆ ಸಂಪದಕ್ಕೆ ಬಂದದ್ದು ಸರಿಹೋಯಿತು ನೋಡಿ, ಇಷ್ಟೆಲ್ಲಾ ಕನ್ನಡ ದಲ್ಲಿ ಹೊಸ ಬರಹಗಾರರನ್ನ ನೋಡುತ್ತಿದ್ದರೆ ಸಂತೋಷವಾಗುತ್ತೆ ಆದರೂ ಕನ್ನಡದಲ್ಲಿ ಬರೆಯುವ ಹೆಣ್ಣುಮಕ್ಕಳು ಅಷ್ಟಿಲ್ಲ ನೋಡಿ,...ಇವರು ಪೀಠಿಕೆ ಹಾಕೋದ್ಯಾಕೆ ಅಂತ ನಿಮಗೆಲ್ಲ ಅನುಮಾನ ಬಂದಿರಬೇಕು, ಆದದ್ದಿಷ್ಟೇ , ನಮ್ಮ ಮೂರು ಜನ ಅತಿಥಿಗಳನ್ನ, ನಾನು ಅಡ್ರೆಸ್ ಕೊಟ್ಟು ಬರಹೇಳಿದ್ದೆ, ಅವರು ಬಂದರು! ಬರುವುದಕ್ಕೂ ಮುನ್ನ ಅವರನ್ನ ಯಾರೋ ಡ್ರಾಪ್ ಮಾಡಲು ಒಪ್ಪಿಕೊಂಡಿದ್ದರು, ಬಂದರೋ ಬಂದರು ಈಜನ ಕೈಲಿ ಅಡ್ರೆಸ್ ಇಲ್ಲದೆ ಫೋನಾಯಣ ಶುರುಹಚ್ಚಿದರು , ಎಲ್ಲಿ, ಯಾವ ರೋಡು,ಹೇಗೆ ಮುಂತಾಗಿ ...ನಾನು ಬೈದುಕೊಂಡು ಮತ್ತೆ ಅಡ್ರೆಸ್ ಕೊಟ್ಟೆ, ಸರಿ ಆ ಡ್ರಾಪ್ ಮಾದುತ್ತಿದ್ದವರೋ ಮಹಾ ಕೋಡಂಗಿ
"ಅಯ್ಯೋ, ಎಲ್ಲೆಮ್ಮ ರೋಡು...ಇಲ್ಲಿ ಇಲ್ಲವಲ್ಲ, ನೀನೆ ಬಂದು ಕರ್ಕೊಂಡು ಹೋಗೆ "...ಎನ್ನುವ ವರಾಥ, ನಾನು ನನ್ನ ಕೆಲಸ ಬಿಟ್ಟು ೫ ಬ್ಲಾಕ್ ಕ್ರಾಸ್ ಮಾಡಿ ನಡೆದು ಅವರನ್ನು ಕರೆದುಕೊಂಡು ಬರುವ ವೇಳೆಗೆ, ನೀನೆ ಡ್ರಾಪ್ ಮಾದಬಹುದಲ್ಲಮ್ಮ ಅಂತ ಸಮಜಾಯಿಸಿ ಹೇಳಿ ಕೊನೆಗೆ ಆಕೆ ಅವ್ರನ್ನ ಡ್ರಾಪ್ ಮಾಡಿದ್ದೂ ಆಯಿತು.

ಹೊರಗೆ ಬಾನು ಕಪ್ಪಗೆ ಇನ್ನೇನು ಹುಯ್ದೆಬಿಡುತ್ತೇನೆ ಮಳೆಯಾ ಅನ್ನುವ ಹಾಗಿತ್ತು, ಮತ್ತೆ ನನಗೆ ಅವರಿಂದ ಫೋನಾಯಣ

" ಇಲ್ಲಿದೀವಮ್ಮ , ಅಡ್ರೆಸ್ ಇನ್ನೊಂಚೂರು ಹೇಳಿ "

"ನಾನೇ ಇಳಿದು ಬರ್ತೇನೆ ಇರಿ"

ನಾನು ಸರಸರನೆ ಮನೆಯ ಮೆಟ್ಟಿಲಿಳಿದು ಮುಂಬಾಗಿಲಿಗೆ ಹೋಗಿ ಎದುರಿನ ಬೀದಿಯಲ್ಲಿ ಕಣ್ಣು ಹಾಯಿಸಿದೆ
ಅಲ್ಲಿ ಯಾರೂ ಕಾಣಬರಲಿಲ್ಲ, ಗಾಭರಿಯಾಗಿ, ಎಲ್ಲಿಹೋದರೂ, ಎಲ್ಲಿ ಆ ಮಾರಾಯಿತಿ ಇವರನ್ನ ಡ್ರಾಪ್ ಮಾಡಿದಳೋ..ಅಂತ ಯೋಚಿಸುತ್ತಾ ಪಕ್ಕದ ಬೀದಿಯಲ್ಲೊಮ್ಮೆ ನೋಡಿಬರೋಣವೆಂದು ಅಡ್ಡ ರಸ್ತೆಗೆ ತಿರುಗಿದೆ ...ಅಲ್ಲಿ ದೊಡ್ಡ ಹೈವೇ , ಬಹಳಷ್ಟು ಚೈನೀಸ್ ಜನರು, ಪುಟ್ಟ ಪುಟ್ಟ ರಂಗಿನ ಕೊಡೆಗಳು,ಅಂದದ ಬಿಳಿ ಹುಡುಗಿಯರು, ಪೂತ್ಕರಿಸುವ ಫಾರಿನ್ ಕಾರುಗಳು, ನಿರ್ಲಜ್ಜ ಆಗಸ, ರಸ್ತೆಯಂಚಿನ ದೊಡ್ಡ ನಿಡುಗಂಬ, ಅದರಲ್ಲಿ ನೆಟ್ಟ ವಾಕ್ ಸೈನ್ ಅಂದರೆ ರಸ್ತೆ ಯಲ್ಲಿ ವಾಹನಗಳು ನಿಂತಾಗ ನೀವು ಮುಂದೆ ಹೋಗಬಹುದಾ ಇಲ್ಲಾವ ಅಂತ ತೋರಿಸುವ ಪುಟ್ಟ ಯಂತ್ರ...ಇವೆಲ್ಲದರ ನಡುವೆ ನಮ್ಮ ತ್ರಿಮೂರ್ತಿಗಳು .....

ಕಳೆದುಹೋದ ಆತಂಕ, ಆ ಕ್ಷಣದ ತಬ್ಬಲಿತನ ....ಸಲ್ವಾರ್ ಕಮೀಜು , ದೊಡ್ಡ- ನಮ್ಮ ನಾರಾಯನಪ್ಪನಂಗಡಿಯ ಕೊಡೆಗಳು, ಅಸ್ಥಿರತೆಯೇ ಅವೀರ್ಭಾವಿಸಿದಂತೆ ಅವರು ನೋಡುತ್ತಾ ನಿಂತಿದ್ದ ರೀತಿ!

ಕರುಳು ಚುರುಕ್ಕೆನಿಸಿತು ...

ಅವರತ್ತ ಜೋರಾಗಿ ಕೈಬೀಸಿದೆ....ಮೂವರ ಮೊಗದಲ್ಲೂ ನಗೆಯ ದೊಡ್ಡ ಭಂಡಾರ ....

ಹೀಗೆ..ನಮ್ಮೂರಿನವರು ಒಮ್ಮೊಮ್ಮೆ ಇಲ್ಲಿಗೆ ಬಂದಾಗಲೇ ನಮಗೆ ನಾವು ವಿದೇಶೀಯರಾಗಿರುವುದರ ಅರಿವು
ಉಂಟಾಗುವುದೇನೋ ...