ಸ್ನೇಹಿತ‌ ಕೊಟ್ಟ‌ ಸಾಲ‌ (ಕಥೆ)

ಸ್ನೇಹಿತ‌ ಕೊಟ್ಟ‌ ಸಾಲ‌ (ಕಥೆ)

 ಬೆಳಿಗ್ಗೆಯೇ ಸ್ನೇಹಿತ ಸೀತಾರಾಮಯ್ಯನವರೊಂದಿಗೆ ವಾಕಿಂಗ್ ಮುಗಿಸಿ ಬಂದು ಸೋಫಾದ ಮೇಲೆ ಕುಳಿತು ವಿಶಾಲಾಕ್ಷಮ್ಮನವರು ಕೊಟ್ಟ ಬಿಸಿ ಬಿಸಿ ಕಾಫಿ ಕುಡಿದು ಗಿರಿಯಪ್ಪನವರು ಅಂದಿನ ದಿನಪತ್ರಿಕೆಯನ್ನು ತಿರುವಿ ಹಾಕುತಿದ್ದರು. ಜೇಬಿನಲ್ಲಿದ್ದ ಮೊಬೈಲ್ ಫೋನು ಕಿರುಗಟ್ಟತೊಡಗಿದಾಗ ಬೆಳಿಗ್ಗೆಯೇ ಯಾರದಪ್ಪ ಫೋನು ಎಂದುಕೊಂಡೇ ಮೊಬೈಲ್ ತೆಗದು ಕನ್ನಡಕದ ಹತ್ತಿರ ಹಿಡಿದು ನೋಡಿದರು. ಬಂದ ಕರೆ ಸೀತಾರಾಮಯ್ಯನವರಾದಾಗಿತ್ತು. ಈಗ ತಾನೇ ಜೊತೇಲೆ ವಾಕಿಂಗ್ ಮುಗಿಸಿಕೊಂಡು ಹೋದನಲ್ಲಾ ಎನಿಸಿ ಕರೆ ಸ್ವೀಕರಿಸಿ ‘ಏನೋ ಸೀತಾರಾಮು..’ ಎಂದರು.  ಅತ್ತ ಕಡೆಯಿಂದ ಬಂದ ಧ್ವನಿ ಸೀತಾರಾಮಯ್ಯನವರದಾಗಿರದೇ ಅವರ ಸೊಸೆ ಮೀರಾದಾಗಿತ್ತು. ‘ಅಂಕಲ್ ಮಾವ ಯಾಕೋ ನಿಂತುಕೊಂಡಿದ್ದೋರು  ಹಾಗೇ ಬಿದ್ದುಬಿಟ್ರು.. ಏನು ಮಾಡೋದು ಗೊತ್ತಾಗ್ತಾ ಇಲ್ಲ.. ಬೇಗ ಬನ್ನಿ ಅಂಕಲ್..’ ಎಂದು ಆತುರಾತುರವಾಗಿ ನುಡಿದಾಗ ಗಿರಿಯಪ್ಪನವರಿಗೆ ಏನಾಯಿತೋ ಎಂದು ಎದೆ ಡವಗುಟ್ಟತೊಡಗಿ ‘ಲೇ ವಿಶಾಲೂ..  ಸೀತಾರಾಮು ಯಾಕೋ ಬಿದ್ದುಬಿಟ್ಟನಂತೆ.. ಒಂದ್ನಿಮಿಷ ನೋಡ್ಕಂಡು ಬರ್ತೀನಿ’ ಎಂದು ಹೇಳಿ ಹೆಂಡತಿಯ ಪ್ರತಿಕ್ರಿಯೆಗೂ ಕಾಯದೇ ಪೋರ್ಟಿಕೋದಲ್ಲಿದ್ದ ತಮ್ಮ ಸ್ಕೂಟರ್ ಹತ್ತಿ ಐದೇ ನಿಮಿಷದಲ್ಲಿ ಸೀತಾರಾಮಯ್ಯನವರ ಮನೆಗೆ ಬಂದರು.

  ಗಿರಿಯಪ್ಪನವರು ಒಳಗೆ ಕಾಲಿಡುವ ಹೊತ್ತಿಗೆ ಬೆಳಗಿನ ವಾಕಿಂಗಿಗೆ ಹೋಗಿದ್ದ ಸೀತಾರಾಮಯ್ಯನವರ ಮಗ ಶಶಿಧರನೂ ಓಡೋಡಿ ಬಂದ. ಹೇಗೋ ಮಾಡಿ ಅತ್ತೆ-ಸೊಸೆ ಸೇರಿ ಕೆಳಗೆ ಬಿದ್ದಿದ್ದ ಸೀತಾರಾಮಯ್ಯನವರನ್ನು ಎತ್ತಿ ಸೋಫಾದ ಮೇಲೆ ಮಲಗಿಸಿದ್ದರು. ನಿಶ್ಚಲನಾಗಿ ಮಲಗಿದ್ದ ಸ್ನೇಹಿತನನ್ನು ಮುಟ್ಟಿ ನೋಡಿದ ಗಿರಿಯಪ್ಪನವರಿಗೆ ಅನುಮಾನವಾಗಿ  ತಡಮಾಡದೇ ‘ಶಶಿ ಬೇಗ ಕಾರು ಹೊರಗೆ ತೆಗಯಪ್ಪಾ..’ ಎಂದು ಹೇಳಿ ಸೀತಾರಾಮಯ್ಯನವರನ್ನು ಹತ್ತಿರದಲ್ಲಿದ್ದ ಆಸ್ಪತ್ರೆಗೆ ಸಾಗಿಸಿದರು. ಪರೀಕ್ಷಿಸಿದ ವೈದ್ಯರು  ಸೀತಾರಾಮಯ್ಯನವರು  ಅತೀವ ಹೃದಯಾಘಾತದಿಂದ ನಿಧನರಾಗಿದ್ದಾರೆ ಎಂದು ಹೇಳಿದಾಗ ಗಿರಿಯಪ್ಪನವರಿಗೆ ದುಃಖ ತಡೆಯಲಾಗಲಿಲ್ಲ.
  ಇಳಿವಯಸ್ಸಿನ ಕಷ್ಟಸುಖಗಳ ಬಗ್ಗೆ ಮಾತನಾಡಿಕೊಂಡು ಸಮಯ ಕಳೆಯುತಿದ್ದ ಆತ್ಮೀಯ ಸ್ನೇಹಿತ ಸೀತಾರಾಮಯ್ಯನವರು ತೀರಿಹೋಗಿ ಮೂರು ದಿನವಾದರೂ ಗಿರಿಯಪ್ಪನವರಿಗೆ ಮನೆ ಬಿಟ್ಟು ಎಲ್ಲೂ ಕದಲಲಾಗಲಿಲ್ಲ.  ಯೌವ್ವನದ ಒಡನಾಟ, ಕಾಲೇಜಿನ ದಿನಗಳು, ದಿನಕ್ಕೆ ಒಂದು ಬಾರಿಯಾದರೂ ಭೇಟಿಯಾಗುತಿದ್ದ ಗೆಳೆಯನನ್ನು ನೆನೆದು ಜೀವನವೆಂದರೆ ಇಷ್ಟೇ ಎನಿಸಿ ಮನಸ್ಸು ಭಾರವಾಗಿತ್ತು. ಗೆಳೆಯನ ಸಾವಿನ ಕ್ಷಣದಿಂದ ಅವರನ್ನು ಮತ್ತೊಂದು ಗಹನವಾದ ಚಿಂತೆ ಆವರಿಸಿತ್ತು. ಅವನು ಬದುಕಿರುವಾಗಲೇ ಅವನು ಕೊಟ್ಟಿದ್ದ ಸಾಲವನ್ನು ತೀರಿಸಲಾಗಲಿಲ್ಲವಲ್ಲ ಎಂಬ ನೋವು ಗಿರಿಯಪ್ಪನವರನ್ನು ಪದೇ ಪದೇ ಕಾಡತೊಡಗಿತು.
  ಸೀತಾರಾಮಯ್ಯನವರದು ವ್ಯಾಪಾರಸ್ಥರ ವಂಶವಾಗಿತ್ತು. ಅವರು ಚಿಕ್ಕಂದಿನಲ್ಲಿ  ಗಿರಿಯಪ್ಪನವರು  ನಗರಕ್ಕೆ ಕಾಲೇಜು ಓದಲೆಂದು ಬಂದು ಹಾಸ್ಟೆಲಿನಲ್ಲಿದ್ದಾಗಲಿಂದ ಆತ್ಮೀಯ ಸ್ನೇಹಿತರಾಗಿದ್ದರು. ಪದವಿ ಪಡೆದು ಗಿರಿಯಪ್ಪನವರು ಸರ್ಕಾರಿ ಕೆಲಸಕ್ಕೆ ಸೇರಿದರು. ಆದರೆ ಸೀತಾರಾಮಯ್ಯನವರು ತಮ್ಮ ತಂದೆಯವರಿಂದ ತಲತಲಾಂತರವಾಗಿ ಬಂದಿದ್ದ ವ್ಯಾಪಾರವನ್ನೇ ಮುಂದುವರಿಸಿಕೊಂಡು ಹೋದರು. ಗಿರಿಯಪ್ಪನವರು ಸರ್ಕಾರಿ ಕೆಲಸದಲ್ಲಿ ಬೇರೆ ಬೇರೆ ಊರು ಸುತ್ತಿಕೊಂಡು ಕೊನೆಗೆ ನಿವೃತ್ತಿಯ ವಯಸ್ಸು ಸಮೀಪಿಸಿದಾಗ ತಮ್ಮ ಹಳ್ಳಿಗೆ ಹತ್ತಿರವಾಗಿದೆಯೆಂಬ ದೃಷ್ಟಿಯಿಂದ ತಾವು ಕಾಲೇಜು ಓದಿದ ನಗರಕ್ಕೆ ವರ್ಗ ಮಾಡಿಸಿಕೊಂಡು ಬಂದು ವಾಸ್ತವ್ಯ ಹೂಡಿದರು. ಮತ್ತೆ ಸೀತಾರಾಮಯ್ಯನವರು ಗಿರಿಯಪ್ಪನವರಿಗೆ ಹತ್ತಿರವಾದರು.  ಸೀತಾರಾಮಯ್ಯನವರ ಸಲಹೆಯ ಮೇರೆಗೆ ಗಿರಿಯಪ್ಪನವರು ತಾವು ಅಲ್ಲಿಯವರೆಗೆ ಉಳಿಸಿದ ಹಣದಲ್ಲಿ ಅಲ್ಲೇ ಒಂದು ನಿವೇಶನವನ್ನು ಖರೀದಿಸಿದರು.  ಮಗ ಮಧು ಮತ್ತು ಮಗಳು ಸುಮನ ಇಬ್ಬರ ಮದುವೆಯಾಗಿತ್ತು. ಮಗ ಬೆಂಗಳೂರಿನಲ್ಲಿ ಖಾಸಗಿ ಕಂಪೆನಿಯಲ್ಲಿ ಅಕೌಂಟ್ಸ ಆಫೀಸರನಾಗಿ ಕೆಲಸದಲ್ಲಿದ್ದ. ಗಿರಿಯಪ್ಪನವರಿಗೆ ಇನ್ನಾವುದೇ ಆರ್ಥಿಕ ತೊಂದರೆಯಿರಲಿಲ್ಲವಾಗಿ ನಿವೃತ್ತರಾದ ಮೇಲೆ ಬಂದ ಹಣದಿಂದ ಒಂದು ಸಣ್ಣ ಮನೆ ಕಟ್ಟಿಸಲು ಪ್ರಾರಂಭಿಸಿದರು. ಮನೆಗೆ ಅಂದುಕೊಂಡದ್ದಕ್ಕಿಂತ ಹೆಚ್ಚು ಖರ್ಚಾಯಿತು. ಮಗನನ್ನು ಕೇಳಿ ಎರಡು ಲಕ್ಷ ಹಣ ಪಡೆದುಕೊಂಡರೂ ಅದೂ ಸಾಲದಾಗಿ ಅಂತಿಮಘಟ್ಟದಲ್ಲಿದ್ದ ಮನೆಯ ಕೆಲಸ ನಿಂತುಹೋಗಿ ಚಡಪಡಿಸುವಂತಾಯಿತು. ಉಳಿದ ಕೆಲಸ ಮಾಡಿಸಿ ಮನೆಯನ್ನು ಕಟ್ಟಿಮುಗಿಸಿ ಸರಳವಾಗಿ ಗೃಹಪ್ರವೇಶ ಮಾಡಲು ಏನಿಲ್ಲವೆಂದರೂ ಒಂದು  ಐವತ್ತು ಸಾವಿರ ರೂಪಾಯಿಯಾದರೂ ಬೇಕಾಗಿತ್ತು. ಆಗ ಅವರಿಗೆ ನೆನಪಿಗೆ ಬಂದದ್ದು ತನ್ನ ಆತ್ಮೀಯ ಸ್ನೇಹಿತ ಸೀತಾರಾಮಯ್ಯನವರು.
  ಸೀತಾರಾಮಯ್ಯನವರೇನೋ ಹಣವಂತರಾಗಿದ್ದರು. ಆದರೆ ಸ್ನೇಹಿತನನ್ನು ಹಣ ಕೊಡು ಎಂದು ಕೇಳುವುದು ಹೇಗೆ ಎಂಬ ದುಗುಡ ಗಿರಿಯಪ್ಪನವರನ್ನು ಕಾಡುತಿತ್ತು. ಅದರಲ್ಲೂ ಸೀತಾರಾಮಯ್ಯನವರು ಹಣದ ವಿಷಯದಲ್ಲಿ ಬಹಳ ಶಿಸ್ತಿನವರಾಗಿದ್ದರು.  ಅವರು ಒಂದು ರೂಪಾಯಿಯನ್ನೂ ಎಂದೂ ಸಕಾರಣವಿಲ್ಲದೇ ಖರ್ಚು ಮಾಡುತ್ತಿರಲಿಲ್ಲವೆಂಬುದು ಗಿರಿಯಪ್ಪನವರಿಗೆ ತಿಳಿದಿತ್ತು.  ವ್ಯಾಪಾರದಿಂದ ಹಣ ಗಳಿಸುವುದೇನೂ ಸುಲಭವಿಲ್ಲ ಕಣೋ ಗಿರಿ.. ನಿನ್ನಂತೆ ಸಂಬಳದಾರನಾಗಿರುವುದೇ ಎಷ್ಟೋ ವಾಸಿ.. ಎಂದು ಹಲವು ಸಂದರ್ಭಗಳಲ್ಲಿ ಅವರು ಗಿರಿಯಪ್ಪನವರಿಗೆ ಹೇಳಿದ್ದರು. ಇದರಿಂದಾಗಿ ಗಿರಿಯಪ್ಪನವರಿಗೆ ತನ್ನ ಸ್ನೇಹಿತನ್ನು ಹಣ ಕೇಳಬೇಕೆನಿಸಿದರೂ ಹಿಂಜರಿಕೆಯುಂಟಾಗುತಿತ್ತು. ಒಂದು ದಿನ ಅದೇ ವಿಷಯವನ್ನು ಯೋಚಿಸುತಿದ್ದ ಗಿರಿಯಪ್ಪನವರಿಗೆ ‘ಮನೆ ಕೆಲಸ ಬೇಗ ಬೇಗ ಮುಗಿಸಿಬಿಡೋ ಗಿರಿ.. ಲೇಟಾದಂತೆಲ್ಲಾ ಅದಕ್ಕೆ ತಗಲುವ ಖರ್ಚೂ ಜಾಸ್ತಿಯಾಗುತ್ತದೆ’ ಎಂದು ಸೀತಾರಾಮಯ್ಯನವರು ಹೇಳಿದರು. ಗಿರಿಯಪ್ಪನವರು ಇದೇ ಸರಿಯಾದ ಸಮಯವೆಂದುಕೊಂಡು ಧೈರ್ಯ ತಂದುಕೊಂಡು ‘ದುಡ್ಡು ಸಾಲದೆ ಬಂದಿದೆ ಕಣೋ ಸೀತಾರಾಮು..’ ಎಂದು ಉಗುಳು ನುಂಗಿಕೊಂಡೇ ಹೇಳಿದರು. ‘ಹೂಂ.. ಇನ್ನೂ ಎಷ್ಟು ಬೇಕಾಗಬಹುದು..’ ಎಂದು ಸೀತಾರಾಮಯ್ಯನವರು ಕೇಳಿದಾಗ ಒಂದು ಐವತ್ತು ಸಾವಿರ ಆದರೆ ಸಾಕಾಗಬಹುದು ಎಂದ ಗಿರಿಯಪ್ಪನವರಿಗೆ ಸೀತಾರಾಮಯ್ಯನವರು ‘ನಾನು ಕೊಟ್ಟಿರ್ತೀನಿ.. ನಿನಗೆ ಯಾವಾಗ ಸಾಧ್ಯ ಆಗುತ್ತೋ ಆವಾಗ ಕೊಡು..’ ಎಂದರು. ಗಿರಿಯಪ್ಪನವರಿಗೆ ಮನಸ್ಸಿನಲ್ಲಿಯೇ ಗೆಳೆಯನ ಬಗ್ಗೆ ಕೃತಜ್ಞತಾಭಾವ ತುಂಬಿ ಬಂದಿತು.
  ಸೀತಾರಾಮಯ್ಯನವರು ಕೊಟ್ಟ ಹಣದಿಂದ ಮನೆಯ ಕೆಲಸ ಮುಗಿದು ಗೃಹಪ್ರವೇಶವೂ ಆಯಿತು. ಗಿರಿಯಪ್ಪನವರು ತಮ್ಮ ಮಡದಿ ವಿಶಾಲಾಕ್ಷಮ್ಮನವರೊಂದಿಗೆ ಹೊಸ ಮನೆಯಲ್ಲಿ ಸಂತೋಷವಾಗಿ ಕಾಲ ಕಳೆಯತೊಡಗಿದರು. ಆದರೆ ಒಂದು ವರ್ಷವಾದರೂ ಅವರಿಗೆ ತಮ್ಮ ಪೆನ್ಷನ್ ಹಣದಲ್ಲಿ ಐವತ್ತು ಸಾವಿರ ರೂಪಾಯಿ ಉಳಿಸಲು ಸಾಧ್ಯವಾಗಿರಲೇ ಇಲ್ಲ. ಅದೂ ಅಲ್ಲದೆ ಅವರು ಸೀತಾರಾಮಯ್ಯನವರ ಬಳಿಯಲ್ಲಿ ಸಾಲ ಪಡೆದಿರುವುದನ್ನು ಯಾರಿಗೂ ಹೇಳಿರಲಿಲ್ಲ. ಮನೆಯ ಕೆಲಸ ಹಣವಿಲ್ಲದೆ  ನಿಂತುಹೋದಾಗ ಮುಂದಿನ ಕಾಂಪೌಂಡು ಕಟ್ಟಿಸಿ ಕಬ್ಬಿಣದ ಗೇಟು ಹಾಕಿಸುವ ಕೆಲಸ ಬಾಕಿ ಇತ್ತು. ವಿಶಾಲಾಕ್ಷಮ್ಮನವರು ‘ಕಾಂಪೌಂಡ್ ಆಮೇಲೆ ಕಟ್ಟಿಸೋಣ, ಗೃಹಪ್ರವೇಶ ಬೇಡವೇ ಬೇಡ, ನಾವೇ ಪೂಜೆ ಮಾಡಿಕೊಂಡು ಒಳಗೆ ಹೋಗೋಣ’ ಎಂದು ಹಟ ಹಿಡಿದಿದ್ದರು. ಗಿರಿಯಪ್ಪನವರಿಗೆ ಅದು ಇಷ್ಟವಿರಲಿಲ್ಲ. ನಿನಗೆ ಹಣದ ಚಿಂತೆ ಬೇಡ ನಾನು ಹೇಗೋ ಹೊಂದಿಸುತ್ತೇನೆ ಎಂದು ಹೇಳಿ ಪತ್ನಿಯನ್ನು ಸುಮ್ಮನಿರಿಸಿದ್ದರು. ಇದರಿಂದಾಗಿ ಅವರು ಸೀತಾರಾಮಯ್ಯನವರಿಂದ ಸಾಲ ಪಡೆದದ್ದನ್ನು ವಿಶಾಲಾಕ್ಷಮ್ಮನವರಿಗೂ ಹೇಳಿರಲಿಲ್ಲ.
  ಸೀತಾರಾಮಯ್ಯನವರು ಗಿರಿಯಪ್ಪನವರನ್ನು ಎಂದೂ ದುಡ್ಡು ಕೊಡು ಎಂದು ಕೇಳಿರಲಿಲ್ಲ. ಗಿರಿಯಪ್ಪನವರೇ ಆಗಾಗ ‘ಇನ್ನೂ ದುಡ್ಡು ಅಡ್ಜಸ್ಟು ಆಗಿಲ್ಲ ಕಣೋ.. ಇನ್ನೊಂದು ಸ್ವಲ್ಪ ದಿನ ಬಿಟ್ಟು ಕೊಡ್ತೀನಿ’ ಎಂದು ಹೇಳಿದಾಗಲೆಲ್ಲಾ ‘ನಾನೇನು ಕೇಳಿದೆನೇನೋ.. ನಾನು ಹೇಳಿರುವುದು ನಿನಗೆ ಸಾಧ್ಯ ಆದಾಗ ಕೊಡು ಅಂತ.. ಮತ್ತೆ ಅದರ ಬಗ್ಗೆ ಕೊರಗಬೇಡ ತಿಳಿಯಿತೋ..’ ಎಂದು ಸೀತಾರಾಮಯ್ಯನವರು ಹೇಳಿದ್ದರು.
  ಆದರೆ ಈಗ ತನ್ನ ಸ್ನೇಹಿತನ ನಿಧನದ ನಂತರ ಸಾಲದ ವಿಷಯ ಕುಂತಲ್ಲಿ ನಿಂತಲ್ಲಿ ಗಿರಿಯಪ್ಪನವರನ್ನು ಕಾಡತೊಡಗಿತು. ಸೀತಾರಾಮಯ್ಯನವರು ಮನೆಯಲ್ಲಿ ಮಗ, ಸೊಸೆ ಮತ್ತು ಹೆಂಡತಿಗೆ ಈ ವಿಷಯ ಹೇಳಿರಬಹುದು. ಅವರೆಲ್ಲಾ ನನ್ನ ಬಗ್ಗೆ ಏನೇನು ತಿಳಿದುಕೊಂಡಿರಬಹುದು ಎಂದು ಯೋಚಿಸಿ ತನ್ನ ಅಸಹಾಯಕ ಸ್ಥಿತಿ ನೆನೆದು ದುಃಖವಾಗುತಿತ್ತು. ಮಗನನ್ನು ಕೇಳಿ ತಂದುಕೊಡೋಣವೆಂದರೆ ಅವನೂ ಸಂಸಾರಸ್ಥ.. ಅವನಿಗೆ ಏನೇನು ತೊಂದರೆಗಳಿವೆಯೋ.. ಎನಿಸುತಿತ್ತು. ಹಣದ ವಿಷಯದ ಬಗ್ಗೆ ಯಾರಾದರೂ ಕೇಳುತ್ತಾರೇನೋ ನೋಡೋಣ ಎಂದುಕೊಂಡು ಒಂದೆರಡು ಬಾರಿ ಸೀತಾರಾಮಯ್ಯನವರ ಮನೆಗೂ ಹೋಗಿ ಬಂದರು. ಯಾರೂ ಅದರ ಸುದ್ದಿ ಎತ್ತಲಿಲ್ಲ. ಚೆನ್ನಾಗಿಯೇ ಮಾತನಾಡಿಸಿ ಕಳುಹಿಸಿದರು. ಆದರೂ ಅವರಿಗೆಲ್ಲಾ ಗೊತ್ತಿರಬಹುದು.. ಕೇಳುತ್ತಿಲ್ಲ ಅಷ್ಟೇ ಎನಿಸತೊಡಗಿತು.  ಇವರಿಗೆ ಪರಿಚಯವಿದ್ದ ಸೀತಾರಾಮಯ್ಯನವರ ಇನ್ನಿತರ ಸ್ನೇಹಿತರು ಸಿಕ್ಕಿದಾಗ ಇವರಿಗೆಲ್ಲಾ ಸಾಲದ ವಿಷಯ ತಿಳಿದಿರಬೇಕು.. ಸ್ನೇಹಿತ ಹೋದರೂ ಅವನು ಕೊಟ್ಟ ಸಾಲ ತೀರಿಸದ ಗಿರಾಕಿ ಇವನು ಅಂತ ಅಂದುಕೊಳ್ಳುತ್ತಾರೆ ಎನಿಸಿ ಅಂತಹವರು ಯಾರಾದರೂ ಸಿಕ್ಕಿದೊಡನೆ ಕಂಡೂ ಕಾಣದವರಂತೆ ದೂರ ಹೋಗುತಿದ್ದರು.
  ಒಂದು ದಿನ ಸೀತಾರಾಮಯ್ಯನವರ ಪತ್ನಿ ಪಂಕಜಮ್ಮನವರು ಸೊಸೆಯೊಂದಿಗೆ ಮನೆಗೆ ಬಂದಾಗ ಹಣವನ್ನು ಕೇಳಲೆಂದೇ ಬಂದಿದ್ದಾರೆಂದು ಗಿರಿಯಪ್ಪನವರಿಗೆ ಆತಂಕವಾಯಿತು. ಆದರೆ ಅತ್ತೆ-ಸೊಸೆ ಇಬ್ಬರೂ ಸ್ವಲ್ಪ ಹೊತ್ತು ಕುಳಿತಿದ್ದು ನಗುನಗುತ್ತಲೇ ವಿಶಾಲಾಕ್ಷಮ್ಮನವರೊಂದಿಗೆ ಮಾತನಾಡಿಕೊಂಡು ಹೋದರು. ಇನ್ನೊಂದು ದಿನ ಗಿರಿಯಪ್ಪನವರು ತಮ್ಮ ಸ್ಕೂಟರಿನಲ್ಲಿ  ರಸ್ತೆಯಲ್ಲಿ ಬರುತಿದ್ದಾಗ ಅತ್ತ ಹೋಗುತಿದ್ದ ಸೀತಾರಾಮಯ್ಯನವರ ಮಗ ಶಶಿಧರ ಇವರನ್ನು ನೋಡಿ ತನ್ನ ಬೈಕನ್ನು ತಿರುಗಿಸಿಕೊಂಡು ಹಿಂದೆ ಬಂದಾಗ ಈವತ್ತು ಖಂಡಿತ ಸಾಲದ ವಿಷಯ ತಿಳಿದೇ ಹಿಂಬಾಲಿಸುತಿದ್ದಾನೆ.. ಎಂದು ಹೆದರಿಕೆಯಾಗತೊಡಗಿತು. ಆದರೆ ಹತ್ತಿರ ಬಂದ ಶಶಿಧರ ‘ಅಂಕಲ್ ಚೆನ್ನಾಗಿದೀರಾ.. ಮನೆ ಕಡೆ ಬರೋದೇ ಬಿಟ್ಟುಬಿಟ್ಟರಿ..’ ಎಂದಾಗ ಹೋದ ಜೀವ ಬಂದಂತಾಗಿ ‘ಹೇ.. ಹೇ.. ಹಾಗೇನಿಲ್ಲ.. ಬರ್ತೀನಿ’ ಎಂದು ಪೆಚ್ಚು ನಗೆ ನಕ್ಕಿದ್ದರು.
  ರಾತ್ರಿಯ ಹೊತ್ತು ಮಲಗಿದಾಗ ಕನಸಿನಲ್ಲಿ ಸೀತಾರಾಮಯ್ಯನವರು ಬಂದು ‘ಏನೋ.. ಸ್ನೇಹಿತ ಅಂತ ಕಷ್ಟಕಾಲದಲ್ಲಿ ದುಡ್ಡುಕೊಟ್ಟರೆ ಅದನ್ನು ನುಂಗಿ ನೀರು ಕುಡಿದೆಯೆಲ್ಲೋ..’ ಎಂದಂತಾಗಿ ಬೆಚ್ಚಿ ಬಿದ್ದು ನಿದ್ರೆಯಿಂದ ಎದ್ದು ಕೂರುತಿದ್ದರು. ಇದನ್ನೆಲ್ಲಾ ಕಂಡು ವಿಶಾಲಾಕ್ಷಮ್ಮನವರಿಗೂ ಇತ್ತೀಚೆಗೆ ತಮ್ಮ ಪತಿ ಮೊದಲಿನಂತಿಲ್ಲ ಎಂದು ತಿಳಿದು ‘ಯಾವಾಗ್ಲೂ ಏನೋ ಯೋಚ್ನೆ ಮಾಡ್ತಿರ್ತೀರಲ್ರೀ..’ ಎಂದಾಗ ಏನೂ ಇಲ್ಲ ಎಂದು ಮಾತು ಬದಲಿಸುತಿದ್ದರು.
  ಅಂದು ಸಂಜೆ ಗಿರಿಯಪ್ಪನವರಿಗೆ ಯಾಕೋ ತೀವ್ರ ಬೇಸರವಾಗಿ ಒಬ್ಬರೇ ನಡೆದುಕೊಂಡು ಪಾರ್ಕಿಗೆ ಹೋದರು. ಸೀತಾರಾಮಯ್ಯನವರು ಇದ್ದಾಗ ಇಬ್ಬರೂ ಯಾವಾಗಲೂ ಅಲ್ಲಿಗೆ ಬಹಳಷ್ಟು ಸಾರಿ ಬಂದಿದ್ದರು. ಪಾರ್ಕಿನಲ್ಲಿ ಸುಮ್ಮನೆ ಸುತ್ತಾ ನಡೆದುಕೊಂಡು ಹೊರಟರು. ನಡೆಯುತಿದ್ದವರು ಒಮ್ಮೆ ಹಿಂತಿರುಗಿ ನೋಡಿದರು. ಸೀತಾರಾಮಯ್ಯನವರು ಅವರನ್ನು ಹಿಂಬಾಲಿಸಿಕೊಂಡು ಬಂದಂತೆ ಅನಿಸಿತು. ತುಸು ನಿಂತು ದೃಷ್ಟಿಯಿಟ್ಟು ನೋಡಿದರು. ಅದು ಸೀತಾರಾಮಯ್ಯನವರೇ! ಗಿರಿಯಪ್ಪನವರಿಗೆ ನಿಲ್ಲಲಾಗಲಿಲ್ಲ. ಸುಮ್ಮನೆ ಬಿರುಸಾಗಿ ನಡೆಯತೊಡಗಿದರು. ಹಿಂದೆ ತಿರುಗಿದರೆ  ಮತ್ತೆ ಸೀತಾರಾಮಯ್ಯನವರು ಹಿಂದೆಯೇ ಬರುತಿದ್ದರು! ಗಿರಿಯಪ್ಪನವರಿಗೆ ಹೆದರಿಕೆಯಾಗಿ ಹಿಂದೆ ನೋಡಿಕೊಂಡೇ ಓಡತೊಡಗಿದರು. ಅವರಿಗೆ ಎಲ್ಲಿಗೋ ಡಿಕ್ಕಿ ಹೊಡೆದಂತಾಯಿತು. ಕಣ್ಣು ಬಿಟ್ಟಾಗ ಯಾವುದೋ ಆಸ್ಪತ್ರೆಯಲ್ಲಿದ್ದರು. ತಲೆಗೆ ಬ್ಯಾಂಡೇಜು ಹಾಕಲಾಗಿತ್ತು. ವಿಶಾಲಾಕ್ಷಮ್ಮನವರು ಎದುರಿಗೆ ನಿಂತಿದ್ದರು. ಅವರನ್ನು ನೋಡಿ ‘ವಿಶಾಲೂ ಸೀತಾರಾಮು ಬಂದಿದ್ದ.. ಅವ್ನ ಹತ್ರ ಮನೆ ಕಟ್ಟುವಾಗ ಐವತ್ತು ಸಾವ್ರ ಸಾಲ ಮಾಡಿದ್ದೆ.. ಎಂದು ಬಡಬಡಿಸುತಿದ್ದರು. ತನ್ನ ಪತಿಯ ಬದಲಾಗಿದ್ದ ಮನಸ್ಥಿತಿಯ ಕಾರಣವನ್ನು ತಕ್ಷಣವೇ ಅರಿತ ಕುಶಾಗ್ರಮತಿ ವಿಶಾಲಾಕ್ಷಮ್ಮನವರು ‘ಅಯ್ಯೋ.. ಆ ಸಾಲ ಅವರಿದ್ದಂಗೇನೆ ಮಧು ತೀರಿಸಿಬಿಟ್ಟಿದಾನಲ್ರೀ..’ ಎಂದಾಗ ಗಿರಿಯಪ್ಪನವರು ಹಾಸಿಗೆಯಿಂದ ದಡಕ್ಕನೇ ಎದ್ದು ‘ಸೀತಾರಾಮು ಸಾಲ ತೀರಿ ಹೋಯ್ತಾ.. ನೀವೆಲ್ಲಾ ನಂಗೆ ಹೇಳಲೇ ಇಲ್ಲಾ..’ ಎಂದರು. ‘ಅವ್ರು ಯಾವಾಗ್ಲೋ ಮಧೂಗೆ ಬೆಂಗಳೂರಿನಲ್ಲಿ ಸಿಕ್ಕಿ, ನಿಮ್ಮಪ್ಪ ಮನೆ ಕಟ್ಟೋದಿಕ್ಕೆ ತುಂಬಾ ಕಷ್ಟಪಟ್ಟ ಕಣಪ್ಪ.. ನಾನೂ ಐವತ್ತು ಸಾವ್ರ ಕೊಟ್ಟೆ.. ಅಂದರಂತೆ. ಮಧು ಅವರನ್ನ ಮನೆಗೆ ಕರ್ಕಂಡೋಗಿ ಚೆಕ್ ಬರಕೊಟ್ನಂತೆ.. ನನಗೆ ಫೋನು ಮಾಡಿ ಹೇಳಿದ್ದ. ನಿಮಿಗೆ ಹೇಳೋದೆ ಮರ್ತು ಹೋಗಿತ್ತು’ ಅಂತ ವಿಶಾಲಾಕ್ಷಮ್ಮನವರು ಹೇಳಿದಾಗ ಗಿರಿಯಪ್ಪನವರ ಮುಖ ಸಂತಸದಿಂದ ಅರಳಿತು. ‘ಹೆಂಗೋ ಸೀತಾರಾಮು ಸಾಲ ತೀರ್ತಲ್ಲಾ ಬಿಡು. ನನಗೆ ಅದೇ ಚಿಂತೆಯಾಗಿತ್ತು..’ ಎಂದ ಗಿರಿಯಪ್ಪನವರ ಮುಖದಲ್ಲಿ ನೆಮ್ಮದಿ ನೆಲೆಯೂರಿತ್ತು.
  ಆಸ್ಪತ್ರೆಯಿಂದ ಮನೆಗೆ ಬಂದ ಗಿರಿಯಪ್ಪನವರು ಶೀಘ್ರವಾಗಿ ಗುಣಮುಖರಾದರು. ಅಮ್ಮನಿಂದ ಅಪ್ಪನ ವಿಷಯ ತಿಳಿದು ಅವರನ್ನು ನೋಡಲು ಬಂದ ಮಗ ಮಧು ಗಿರಿಯಪ್ಪನವರಿಗೆ ಗೊತ್ತಿಲ್ಲದಂತೆ ಐವತ್ತು ಸಾವಿರ ರೂಪಾಯಿಗಳನ್ನು ತಂದು ವಿಶಾಲಾಕ್ಷಮ್ಮನವರಿಗೆ ಕೊಟ್ಟ.  ‘ಸೀತಾರಾಮುಗೆ ದುಡ್ಡು ಕೊಟ್ಟಿದ್ದು ನನಗೆ ಹೇಳಲೇ ಇಲ್ಲವಲ್ಲೋ..’ ಎಂದು ಸಂತೋಷದಿಂದ ಕೇಳಿದ ಗಿರಿಯಪ್ಪನವರಿಗೆ ‘ಅಮ್ಮಂಗೆ ಹೇಳಿದ್ದೆನಲ್ಲಾ’ ಅಂದು ಸುಮ್ಮನಾದ.
   ಮಗ ಬಂದು ಹೋದ ಮೇಲೆ ವಿಶಾಲಾಕ್ಷಮ್ಮನವರು ಒಂದು ದಿನ ಸಂಜೆ ಸೀತಾರಾಮಯ್ಯನವರ ಮನೆಗೆ ಹೋದರು. ಅವರ ಪತ್ನಿ ಪಂಕಜಮ್ಮ, ಸೊಸೆ ಮೀರಾ ಮತ್ತು ಮಗ ಶಶಿಧರ ಮನೆಯಲ್ಲಿಯೇ ಇದ್ದವರು ವಿಶಾಲಾಕ್ಷಮ್ಮನವರ ಆಗಮನದಿಂದ ಸಂತೋಷಗೊಂಡರು. ‘ಅಪ್ಪ ಹೋದ ಮೇಲೆ ಅಂಕಲ್ಲು ಮನೆಗೆ ಬರೋದೆ ಬಿಟ್ಟುಬಿಟ್ರು ಆಂಟಿ..’ ಎಂದ ಶಶಿಧರನಿಗೆ ಏನೆಂದು ಹೇಳಬೇಕೆಂದು ತೋಚದೆ ವಿಶಾಲಾಕ್ಷಮ್ಮನವರು ಸುಮ್ಮನೆ ಕೃತಕವಾಗಿ ಮುಗುಳ್ನಕ್ಕರು. ಮೀರಾ ಮಾಡಿದ ಟೀ ಕುಡಿದು ಲೋಕಾಭಿರಾಮವಾಗಿ ಒಂದೆರಡು ಮಾತನಾಡಿ ವಿಷಯಕ್ಕೆ ಬಂದ ವಿಶಾಲಾಕ್ಷಮ್ಮನವರು ‘ಶಶೀ.. ನಮ್ಮನೆಯವ್ರು ಮನೆ ಕಟ್ಟಿಸೋವಾಗ ಸೀತಾರಾಮಣ್ಣೋರ ಹತ್ರ ಐವತ್ತು ಸಾವ್ರ ದುಡ್ಡು ಇಸಕೊಂಡಿದ್ರಂತೆ. ಇವ್ರು ಅದನ್ನ ನಮ್ಮತ್ರಾನೂ ಹೇಳಿರ್ಲಿಲ್ಲ. ಮೊನ್ನೆ ಹೇಳಿದ್ರು. ನಮ್ಮ ಮಧು ಇಷ್ಟು ದಿವ್ಸ ಆದ್ರೂ ಕೊಟ್ಟೇ ಇಲ್ವಾ ಅಂತ ಬಹಳ ಬೇಜಾರು ಮಾಡಿಕೊಂಡು ಮೊದಲು ಹೋಗಿ ಕೊಟ್ಟುಬಿಟ್ಟು ಬಾರಮ್ಮಾ ಅಂತ ದುಡ್ಡು ತಂದು ಕೊಟ್ಟಿದಾನೆ.. ತಗೋಳಪ್ಪಾ..’ ಅಂದರು. ‘ಹೌದಾ ಆಂಟಿ.. ಅಪ್ಪ ಒಂದು ದಿವ್ಸಾನೂ ಆ ವಿಷಯ ನಮಗೆ ಹೇಳೇ ಇಲ್ಲಾ.. ನಮ್ಮಪ್ಪ ದುಡ್ಡಿನ ವಿಷಯದಲ್ಲಿ ಭಾಳ ಸ್ಟ್ರಿಕ್ಟು.. ಯಾರಿಗೆ ಸಾಲ ಕೊಟ್ಟರೂ ಒಂದು ಪೈಸೆ ಬಿಡದಂತೆ ಬರೆದು ಇಟ್ಕೊಂಡು ವಸೂಲು ಮಾಡ್ತಿದ್ರು.. ನನ್ಮಗ ಬಂಟೀನ ಸ್ಕೂಲಿಗೆ ಸೇರಿಸೋದಿಕ್ಕೆ ಐವತ್ತು ಸಾವ್ರ ನನಗೆ  ಕೊಟ್ಟಿದ್ದನ್ನೂ ಬರೆದಿಟ್ಟುಕೊಂಡಿದಾರೆ.. ಇರೀ.. ಅವ್ರದ್ದು ಲೆಕ್ಕದ ಪುಸ್ತಕ ಇದೆ ತರ್ತೀನಿ..’ ಅಂದ ಶಶಿಧರ ರೂಮಿನ ಒಳಗೆ ಹೋಗಿ ಒಂದು ನೋಟ್ ಪುಸ್ತಕ ತಂದು ಹಾಳೆಗಳನ್ನು ತೆರೆದು ಕಣ್ಣಾಡಿಸತೊಡಗಿದ.
  ‘ಅರೆ.. ಇಲ್ನೋಡಿ ಆಂಟಿ.. ಅಂಕಲ್ಲಿಗೆ ಕೊಟ್ಟಿರೋ ಐವತ್ತು ಸಾವ್ರ ಬರೆದು ಇಟ್ಟಿದಾರೆ.. ಆದ್ರೆ ಅದು ಸಂದಾಯವಾಗಿದೆ ಅಂತ ಬರೆದು ಸೈನ್ ಮಾಡಿದಾರೆ.. ಅಂಕಲ್ಲು ನಮ್ಮಪ್ಪಂಗೆ ಯಾವಾಗಲೋ ದುಡ್ಡು ವಾಪಸ್ ಕೊಟ್ಟಿದಾರೆ.. ಮರ್ತುಬಿಟ್ಟಿರ್ಬೇಕು ಅಷ್ಟೇ..’ ಅಂದಾಗ ವಿಶಾಲಾಕ್ಷಮ್ಮನವರಿಗೆ ಪೂರ್ತಿ ಗೊಂದಲವಾಗಿ ‘ಅವರು ಕೊಟ್ಟಿಲ್ಲವಲ್ಲ..’ ಎಂದು ಅಚ್ಚರಿ ವ್ಯಕ್ತಪಡಿಸಿದರು. ‘ಕೊಟ್ಟಿಲ್ಲದೆ ಇದ್ರೆ ಸಂದಾಯವಾಗಿದೆ ಅಂತ ನಮ್ಮಪ್ಪ ಬರೀತಿರ್ಲಿಲ್ಲ ಆಂಟಿ.. ಯಾರತ್ರಾನೂ ಒಂದು ಪೈಸೆ ಬಿಡೋರಲ್ಲ ನಮ್ಮಪ್ಪ..’ ಅಂದಾಗ ಪಂಕಜಮ್ಮ ಮತ್ತು ಮೀರಾ ಕೂಡ ಅದೇ ಅನಿಸಿಕೆಯನ್ನು ವ್ಯಕ್ತಪಡಿಸಿದರು. ವಿಶಾಲಾಕ್ಷಮ್ಮನವರಿಗೆ ಏನೊಂದೂ ತಿಳಿಯದೆ ‘ಸರಿ ಬರ್ತೀನಿ.. ಸದ್ಯ ಹೇಗೋ ಸಾಲ ತೀರಿದೆಯಲ್ಲಾ..’ ಎಂದು ಹೇಳಿ ಮನೆಯ ದಾರಿ ಹಿಡಿದರು.
 
 

Comments

Submitted by H A Patil Thu, 04/04/2013 - 16:22

ತಿಮ್ಮಪ್ಪ ರವರಿಗೆ ವಂದನೆಗಳು ' ಸ್ನೇಹಕ್ಕೆ ಕೊಟ್ಟ ಸಾಲ ' ಮನ ಮಿಡಿವ ಕಥಾನಕ. ಕಥೆಯ ಅಂತ್ಯ ಬಹಳ ಸೊಗಸಾಗಿ ಮೂಡಿ ಬಂದಿದೆ. ಸ್ನೇಹಿತರಿಬ್ಬರ ಮಾನವೀಯ ಸಂಬಂಧ ಮನಮುಟ್ಟುವಂತಿದೆ, ಇದೊಂದು ಸಾರ್ಥಕ ಕಥಾನಕ ಧನ್ಯವಾದಗಳು.