ಮಕ್ಕಳ ಕತೆ : ದಾಸಯ್ಯ ಹಾಗು ಹೆಬ್ಬುಲಿ
ದಾಸಯ್ಯ ಹಾಗು ಹೆಬ್ಬುಲಿ
===============
ಬಹಳ ಕಾಲದ ಹಿಂದೆ ಒಬ್ಬ ದಾಸಯ್ಯನಿದ್ದ. ದಾಸಯ್ಯ ನೆಂದರೆ ಕೈಯಲ್ಲಿ ಜಾಗಟೆ ಶಂಖು ಹಿಡಿದು, ಪ್ರತಿ ಮನೆ ಮುಂದೆ ಬಾರಿಸಿತ್ತು, ವೆಂಕಟೇಶ್ವರ , ನರಸಿಂಹ ಇಂತ ದೇವರುಗಳ ಹೆಸರು ಹೇಳುತ್ತ ಬಿಕ್ಷೆ ಬೇಡುತ್ತ ಇದ್ದವನು. ಅವನು ಪ್ರತಿ ಮನೆಯ ಮುಂದೆ ನಿಂತು
'ಬೊಂಂಂಂ' ಎಂದು ಶಂಖು ಊದುತ್ತ, ಡಣ್,,,,,ಡಣ್... ಎಂದು ಜಾಗಟೆ ಬಾರಿಸುತ್ತ ,
'ವೆಂಕಟೇಶಾಯ ಮಂಗಳಂ' ಎಂದು ಗಟ್ಟಿ ದ್ವನಿಯಲ್ಲಿ ಕೂಗುತ್ತಿದ್ದರೆ, ಮನೆಯಲ್ಲಿದ್ದ ಮಕ್ಕಳಿಗೆಲ್ಲ ಆನಂದ.
ಆ ದಾಸಯ್ಯಗಳು ಒಂದೆ ಊರಿನಲ್ಲಿ ಇರುತ್ತಿರಲಿಲ್ಲ, ಹಳ್ಳಿಯಿಂದ ಹಳ್ಳಿಗೆ ನಡೆದು ಹೋಗುತ್ತ ಬಿಕ್ಷೆ ಬೇಡುತ್ತಿದ್ದರು, ಆಗೆಲ್ಲ ಹಳ್ಳಿಗಳಲ್ಲಿ ಕಣ ಹಾಕುವ ಕಾಲ ಬಂತೆಂದರೆ ಸರಿ, ಬತ್ತದ ರಾಶಿ ಬಿದ್ದಿರುತ್ತಿತ್ತು, ದಾಸಯ್ಯರಿಗೆ ಸುಗ್ಗಿ, ಎಲ್ಲ ಹಳ್ಳಿ ಸುತ್ತುತ್ತ , ಬಿಕ್ಷೆ ಬೇಡುವರು. ಮಕ್ಕಳಿಗೆ ಆನಂದ ನೀಡುವರು.
ಹೀಗೆ ಒಮ್ಮೆ ದಾಸಯ್ಯ ಒಂದು ಹಳ್ಳಿಯಿಂದ ಮತ್ತೊಂದು ಹಳ್ಳಿಗೆ ನಡೆದು ಹೊರಟಿದ್ದ. ಆಗೆಲ್ಲ ಇನ್ನು ಬಸ್ಸು ಲಾರಿಗಳು ಬಂದಿರಲಿಲ್ಲ, ನಡೆದೆ ಹೋಗಬೇಕು, ಸಾಹುಕಾರರಾದರೆ ಎತ್ತಿನ ಗಾಡಿ ಅಷ್ಟೆ. ಪಾಪ ದಾಸಯ್ಯ ನಡೆದೆ ಹೋಗಬೇಕು.
ಆಗಲೆ ಸೂರ್ಯ ಮುಳುಗುವ ಹೊತ್ತಾಗುತ್ತ ಇದೆ, ಹಳ್ಳಿಯ ಮನೆಗಳು ದೂರದಲ್ಲಿ ಕಾಣುತ್ತ ಇದೆ, ಊರ ಹೊರಗೆ ರೈತರು ಕಣ ಹಾಕಿ ಗಾಳಿಗೆ ಬತ್ತ ತೂರಿ ಸ್ವಚ್ಚಗೊಳಿಸುತ್ತಿದ್ದಾರೆ, ದಾಸಯ್ಯ ಬೇಗ ಬೇಗ ನಡೆಯುತ್ತಿದ್ದವನು ಇದ್ದಕ್ಕಿದಂತೆ ನಿಂತು ಬಿಟ್ಟ.
ಎದುರಿಗು ಒಂದು ದೊಡ್ಡ ಹೆಬ್ಬುಲ್ಲಿ, ಗರ್ಜಿಸುತ್ತ ನಿಂತಿದೆ
"ಘರ್ರ್....ಘರ್ರ್......" ದಾಸಯ್ಯ ಹೆದರಿ ಹೋದ, ಅವನ ಕಾಲುಗಳು ನಡುಗುತ್ತಿದೆ. ಮುಂದೆ ಓಡುವ ಹಾಗಿಲ್ಲ, ಹಿಂದೆ ಓಡುವ ಹಾಗಿಲ್ಲ, ಹುಲಿಗೆ ಬೆನ್ನು ತೋರಿಸಿದರೆ ಸಾಕು ಮೈಮೇಲೆ ಎಗರುತ್ತದೆ ಅಂತ ಅವನಿಗೆ ಯಾರೊ ಹೇಳಿದ್ದರು. ಮುಖವೆಲ್ಲ ಬೆವರುತ್ತಿದೆ. ಅವನ ಹೃದಯದ ಬಡಿತದ ಶಬ್ದ ಅವನಿಗೆ ಕೇಳುತ್ತಿದ್ದೆ, ಏನು ಮಾಡುವುದು. ಓಡುವ ಹಾಗಿಲ್ಲ ಅಲ್ಲೆ ನಿಂತಿರುವಂತಿಲ್ಲ. ದೂರದಲ್ಲಿ ರೈತರು ಮಾತನಾಡುವ ಶಬ್ದ ಕೇಳುತ್ತಿದೆ.
ದಾಸಯ್ಯನ ಮನದಲ್ಲಿ ಇದ್ದಕ್ಕಿದಂತೆ ಒಂದು ಉಪಾಯ ಹೊಳೆಯಿತು. ನಿದಾನಕ್ಕೆ ಶಂಖವನ್ನು ತೆಗೆದು ಬಾಯಿಗಿಟ್ಟುಕೊಂಡ. ಎಡಕೈಯಲ್ಲಿ ಜಾಗಟೆ ಹಿಡಿದ
ಶಂಖದಿಂದ ಶಬ್ದ ಪ್ರಾರಂಬವಾಯಿತು .'ಬೊಂ೦೦೦೦೦೦೦೦೦೦೦೦೦ ಬೊಂ'........
ಜಾಗಟೆ ಬಡಿಯುತ್ತಿದ್ದ "ಡಾಣ್ ಡಾಣ್......ಡಣದಣ ಡಾಣ ಡಣ.....'
ಮತ್ತೆ ಜಾಗಟೆ ತೆಗೆದು ಜೋರಾಗಿ ಕೂಗಿದ
"ಅಯ್ಯಯ್ಯೊ ಯಾರಾದ್ರು ಬಂದ್ರಪ್ಪೊ,,,,,,,, ಹೆಬ್ಬುಲ್ಲಿ ಬಂದೈತೆ,,,,, ಯಾರಾದ್ರು ಬಂದ್ರಪ್ಪೊ..." ಎಂದು ಗಟ್ಟಿಯಾಗಿ ಕೂಗುವನು
ಮತ್ತೆ ಶಂಖ ಜಾಗಟೆ ಶಬ್ದ....
'ಭೊಂ೦೦೦೦೦೦೦೦೦೦೦೦೦೦೦೦೦......ಭೊ೦'
"ಡಾಣ್ ಡಾಣ್......ಡಣದಣ ಡಾಣ ಡಣ.....'
ಮತ್ತೆ ಕೂಗು
"ಅಯ್ಯಯ್ಯೊ ಯಾರಾದ್ರು ಬಂದ್ರಪ್ಪೊ,,,,,,,, ಹೆಬ್ಬುಲ್ಲಿ ಬಂದೈತೆ,,,,, ಯಾರಾದ್ರು ಬಂದ್ರಪ್ಪೊ..."
ದೂರದಲ್ಲಿ ಹೊಲ ಗದ್ದೆ, ಕಣದಲ್ಲಿದ್ದ ರೈತರಿಗೆಲ್ಲ ಅವನ ಕೂಗು ಕೇಳಿತು,
ಅವರೆಲ್ಲ ಮಾತನಾಡಿ ಕೊಂಡರು, 'ಲೇ ನಮ್ಮ ದಾಸಪ್ಪ ಯಾಕೊ ಕರಿತಾವನೆ, ಹೆಬ್ಬುಲ್ಲಿ ಬಂದಿರಬೇಕು, ಪಾಪ , ಬಂದ್ರಲೆ " ಎಂದು
ಒಬ್ಬೊಬ್ಬರು, ಕೈಲಿ ಕೋಲು, ಕತ್ತಿ ಹಿಡಿದು ಓಡೋಡಿ ಬಂದರು
ಇತ್ತ ಹೆಬ್ಬುಲಿ , ಪಾಪ ದಾಸಯ್ಯ ನನ್ನೆ ನೋಡಿತು, ಅದು ಎಂದು ಶಂಖು ಜಾಗಟೆ ಶಬ್ದ ಕೇಳಿರಲಿಲ್ಲ,
ದಾಸಯ್ಯನ ಕೂಗು, ಶಂಖು ಜಾಗಟೆಯ ಶಬ್ದ ಎಲ್ಲ ಸೇರಿ ಅದಕ್ಕೆ ಭಯ ಪ್ರಾರಂಬ ವಾಯಿತು,
ಅವನ ಕೂಗು ಜಾಸ್ತಿಯಾದಂತೆ, ಅದು ಗರ್ಜಿಸುವುದು ನಿಲ್ಲಿಸಿ, ಇದೇನೊ ಅಪಾಯ ಎಂದು ಭಾವಿಸಿ, ಅಲ್ಲಿಂದ ಓಡಿ ಹೋಯಿತು
ಜನರೆಲ್ಲ ಬಂದು ನೋಡುತ್ತಾರೆ, ದಾಸಯ್ಯ ನಡುಗುತ್ತ ನಿಂತಿದ್ದಾನೆ, ಹೆಬ್ಬುಲ್ಲಿ ಅಲ್ಲಿಂದ ಓಡಿ ಹೋಗಿದೆ. ದಾಸಯ್ಯನೆ ಹೇಳಿದ ಹುಲಿ ಓಡಿ ಹೋಯಿತು ಅಂತ
ಊರ ಜನರೆಲ್ಲ ನಗುತ್ತಿದ್ದರು ಅಂತು ನಮ್ಮ ದಾಸಯ್ಯ , ಹುಲಿಯನ್ನೆ ಹೆದರಿ ಓಡಿಸಿದ ಅಂತ.
ಹಾಗು ಹೀಗು ಎಲ್ಲರು ಅವರ ಕಣದಿಂದ ಬತ್ತ ರಾಗಿಯನ್ನೆಲ್ಲ ಅವನ ಜೋಳಿಗೆಗೆ ತುಂಬಿಸಿದರು. ಮತ್ತೆ ಕತ್ತಲಾಯಿತು ಎಂದು ದಾಸಯ್ಯ ಪಾಪ ಅಂದು ಅದೆ ಹಳ್ಳಿಯಲ್ಲಿಯೆ ಮಲಗಿದ್ದು ಮರುದಿನ ಬೆಳಗ್ಗೆ ಅಲ್ಲಿಂದ ಹೊರಟ.
Rating
Comments
ಕವಿ ನಾಗರಾಜರೆ ನಿಮ್ಮ ಮೊಮ್ಮಗಳ
ಕವಿ ನಾಗರಾಜರೆ ನಿಮ್ಮ ಮೊಮ್ಮಗಳ ಕೋರಿಕೆಯಂತೆ ಎರಡು ಕತೆ ಬರೆದಿರುವೆ, ಅದನ್ನು ಇಲ್ಲಿ ಹಾಕಿರುವೆ, ಇದನ್ನು ನಿಮ್ಮ ಮೊಮ್ಮಗಳಿಗೆ ತಲುಪಿಸುವುದು ನಿಮ್ಮ ಜವಾಬ್ದಾರಿ :-)
ಇದು ಕಾರ್ಪೋರೇಟ್ ಕಥೆಯನ್ನು
ಇದು ಕಾರ್ಪೋರೇಟ್ ಕಥೆಯನ್ನು ಹೋಲುತ್ತದೆ ... ದಾಸಯ್ಯನಂತೆ ನಾವೆಷ್ಟು ಭಾಜಾಭಜಂತ್ರಿ ಬಾರಿಸಿದರೂ, ರೈತರಂತಹ ಮ್ಯಾನೇಜ್ಮೆಂಟ್, issues ಎಂಬ ಹೆಬ್ಬುಲಿ ಓಡಿ ಹೋಯಿತು ಎಂದರೆ ನಂಬೋದೇ ಇಲ್ಲ :-))
In reply to ಇದು ಕಾರ್ಪೋರೇಟ್ ಕಥೆಯನ್ನು by bhalle
ಬಲ್ಲೆಯವರೆ ನಮಸ್ಕಾರ
ಬಲ್ಲೆಯವರೆ ನಮಸ್ಕಾರ
ಮಕ್ಕಳ ಕತೆ ಎ0ದು ಬರೆದಿರುವುದು ಮಕ್ಕಳ ಹಾಗೆ ಓದಿ ಖುಶ್ಹಿಪಡಿ ... ನಿಮ್ಮ ಮಗನಿಗೆ ಓದಿ ಹೇಳಿ
NO Ulterior meaning
:-))))
ಒಳ್ಳೆಯ ಪೂರಕ ಚಿತ್ರಗಳೊಂದಿಗೆ
ಒಳ್ಳೆಯ ಪೂರಕ ಚಿತ್ರಗಳೊಂದಿಗೆ ದಾಸಯ್ಯ-ಹುಲಿ ಕಥೆ ಚೆನ್ನಾಗಿದೆ. ಮೊಮ್ಮಗಳಿಗೆ ಖುಷಿಯಾಯಿತು. ನಾನೂ ರಾತ್ರಿ ಹೊತ್ತಿನಲ್ಲಿ ಕಥೆ ಹೇಳುತ್ತಾ 'ಭೋ. .ಂಂಂಂ', ಢಣ ಢಣ ಅಂತ ಶಂಖ, ಜಾಗಟೆ ಶಬ್ದ ಮಾಡಿದಾಗ ಮೊಮ್ಮಗಳು ಖುಷಿ ಪಟ್ಟರೂ, ಮನೆಯವರ ಗೊಣಗಾಟವನ್ನೂ ಕೇಳಬೇಕಾಯಿತು. (ಸುಮ್ಮನೆ ಮಲಗಬಾರದೇ? ನಿಮ್ಮಗಳ ಗಲಾಟೇಲಿ ಯಾರಿಗೂ ನಿದ್ದೆಯಿಲ್ಲ. . . .ಅಂತ!)
In reply to ಒಳ್ಳೆಯ ಪೂರಕ ಚಿತ್ರಗಳೊಂದಿಗೆ by kavinagaraj
:))))
:))))