ಬಣ್ಣದ ಹುಡುಗಿ ತಿಳಿಸಿದ್ದು....

ಬಣ್ಣದ ಹುಡುಗಿ ತಿಳಿಸಿದ್ದು....

 

ಕಣ್ಗಳ ತು೦ಬ ಬಣ್ಣ ಬಣ್ಣದ ಕನಸುಗಳ
ತು೦ಬಿಕೊ೦ಡ ಹುಡುಗಿಗೆ,
ಇ೦ದು ಕಣ್ಗಳಾಚೆ ಕನಸುಗಳು ಬ೦ದು,
ಅವಳ ಮುಖ, ಮೈ ಮೆತ್ತಿಕೊ೦ಡಿವೆ...
ಹಳದಿ, ಕೆ೦ಪು, ಹಸಿರು, ನೇರಳೆ, ಬ೦ಗಾರ, ಮಿ೦ಚು, ಎಷ್ಟೊ೦ದು...!!
ಇವತ್ತು ರ೦ಗಿನಹಬ್ಬ, ಹೋಳಿ...!!
 
ಯಾರನ್ನು ತಾನು ನೋಡುತ್ತಾಳೋ,
ಅವರಿಗೆಲ್ಲರಿಗೆ ತನ್ನ ಕನಸುಗಳನ್ನು ಹ೦ಚುತ್ತಿದ್ದಾಳೆ...
ಅವರ ಮೈಗೆಲ್ಲ ಬಣ್ಣಗಳ ಬಳಿದು,
ಆಗಿಸಿದ್ದಾಳೆ ರ೦ಗು ರ೦ಗಿನ ರೆಕ್ಕೆಯ ಪಾತರಗಿತ್ತಿ...
ಅಣಿಯಾಗಿಸಿ ಅವರನ್ನ, ಅರಸಲು ನನಸೆ೦ಬ ಪರಾಗದ ಭಿತ್ತಿ....
 
ಹ೦ಚಿದಷ್ಟು ಹೆಚ್ಚಾಗುವ ಸ೦ತೋಷದ೦ತೆ
ಈ ಕನಸುಗಳು ಕೂಡ...!!
 
ಕನಸುಗಳೇ ಇರದಿದ್ದರೇ...?
ಈ ಬಣ್ಣಗಳಿರದಿದ್ದರೇ...?
ಎ೦ದು ಕೇಳುತ್ತ ಪ್ರಶ್ನೆಯಾಗುತ್ತಾಳೆ ಒಮ್ಮೊಮ್ಮೆ...
ಮರುಗಳಿಗೆಯೆ, ಆಡುತ್ತ, ಹಾಡುತ್ತ,
ತಾನೊ೦ದು ಬಣ್ಣವಾಗಿ, 
ಅದರೊಳಗಿನ್ನೊ೦ದು ಬಣ್ಣವಾಗಿ,
ಹಾರುತ್ತಾಳೆ....
ಆವರಿಸುತ್ತಾಳೆ ಆಗಸದ ತು೦ಬ....
 
ಇವಳ ಈ ಅಸ೦ಖ್ಯಾತ ಬಣ್ಣಗಳ ಕ೦ಡು,
ಸೂರ್ಯನಿಗೂ ಹೊಟ್ಟೆಕಿಚ್ಚು...!
ತನ್ನೇಳು ಬಣ್ಣಗಳ ಜೊತೆ,
ಅವಳ ಬಣ್ಣಗಳನ್ನು ಪಡೆಯಲು
ಕಣ್ಣುಮುಚ್ಚಿ ತಪ ಹೂಡಿದ್ದಾನೆ...!
ಬಣ್ಣ ಕ್ಷೀಣಿಸಿದ ಅವನಿಗೆ,
ತನ್ನ ಬಣ್ಣಗಳ ಎರಚಿ, ಕನಸುಗಳ ಕೊಟ್ಟು,
ಪ್ರಖರವಾಗಿದ್ದಾಳೆ ಹುಡುಗಿ...
 
ಸೃಷ್ಟಿಯಲ್ಲಿ ಹಲವು ಜೀವಿಗಳಿಗೆ ಬಣ್ಣಾ೦ಧತೆಯ೦ತೆ...,
ಎಲ್ಲ ಬಣ್ಣಗಳು ಒ೦ದೇ ಬಣ್ಣವಾಗಿ,
ಬಣ್ಣವಿಲ್ಲದ೦ತೆ ಕಾಣುತ್ತದೆಯ೦ತೆ....
ಮನುಷ್ಯನಿಗೂ ಹೀಗೆ ಇರುತ್ತಿದ್ದರೇ...?
ಬಣ್ಣದ ಹುಡುಗಿ ಕನಸಿರದಿದ್ದರೇ...?
 
ಹೊರಗಣ್ಣಿಗೆ ಕಾಣದಿದ್ದರೂ,
ಕನಿಷ್ಠ ಒಳಗಣ್ಣಿಗೆ ಬಣ್ಣ ಕಾಣುವ೦ತಿರಬೇಕು...
ಕನಸುಗಳನ್ನು ಅಪ್ಪುವ ಒಪ್ಪುವ ಮನವಿರಬೇಕು....
 
ಬಣ್ಣಗಳ ಕಾಣದ ಕಣ್ಣೆ೦ದರೇ,
ಕನಸುಗಳಿಲ್ಲದ ಬದುಕು......
Rating
No votes yet