ನಿಲ್ಲಿ, ಕನಸುಗಳೇ! - ಲಕ್ಷ್ಮೀಕಾಂತ ಇಟ್ನಾಳ

ನಿಲ್ಲಿ, ಕನಸುಗಳೇ! - ಲಕ್ಷ್ಮೀಕಾಂತ ಇಟ್ನಾಳ

ನಿಲ್ಲಿ, ಕನಸುಗಳೇ!
              -    ಲಕ್ಷ್ಮೀಕಾಂತ ಇಟ್ನಾಳ

ಏನು ಕನಸು ಹೊತ್ತು, ಕನಸು ಕಾಣುವಿರಿ, ಕನಸುಗಂಗಳಲ್ಲಿ!
ಕನಸುಗಣ್ಣಿಂದ ಕಂಡ  ಕನಸೊಂದು, ನಕ್ಕು ನನಸಾಗಲಲ್ಲಿ!
ಬಣ್ಣ ಬಣ್ಣದ ಕನಸು ಬೀಳುವುದೂ, ಕಪ್ಪು ಬಿಳುಪಿನಲ್ಲಿ!

ನಿಲ್ಲಿ ಕನಸುಗಳೇ ನಿಲ್ಲಿ, ನುಗ್ಗದಿರಿ ಎಲ್ಲಿ ಬೇಕೆಂದಲ್ಲಿ!
ಬಣ್ಣ ಬಣ್ಣದ ಕನಸುಗಳೇ ನಿಲ್ಲಿ, ಬೀಳದಿರಿ ಕೆಂಡ ಕಣ್ಣುಗಳಲ್ಲಿ
ಕಣ್ಣೀರ ಕೋಡಿಯಲಿ ಹರಿದು ಹೋದೀರಿ, ಬಿರಿದ ಬದುಕಿನಲ್ಲಿ!

ಮೈಮರೆಯದಿರಿ ಕನಸುಗಳೇ, ಬಿದ್ದಾವು ಕನಸುಗಳು ಜಾರಿ, ಚದುರಿ
ಕಣ್ಣ ಮುಂದೆಯೇ ಕುಸಿದಾವು ಕನಸುಗಳು, ಮುದುರುತಲಿ ಉದುರಿ,
ಚಿಗುರುಗನಸನ್ನೇ ಹೊಸಕುವುದೇ, ಹೋ!  ಜನ್ಮಭೂಮಿಯೇ ಅದುರಿ!

ಓ ಕನಸುಗಳೇ, ಈಗೆಲ್ಲಿ! ಎಲ್ಲ ಕಂಗಳಿಗೆ, ಕನಸು ಕಾಣುವ ಭೋಗ!
ಹತಭಾಗ್ಯವೇ ಹುಟ್ಟಿಹವು, ಕೆಲ ಕಂಗಳಿಗಷ್ಟೇ ಆ ವೈಭೋಗ!
ನಿಂತ ನೆಲೆಯಲ್ಲಿಯೇ ಕಾಣುವವು ಕನಸು, ಅದುವೆ ಬದುಕೆಂಬ ಯಾಗ!

ಎಚ್ಚರದ ಹೆಜ್ಜೆ ಇರಲಿ, ಕನಸುಕಾಣುವ ಮುನ್ನ,
ಬೆಚ್ಚನೆಯ ಕನಸಿನಪ್ಪುಗೆಯಲಿ, ಕನಸು ಬಿತ್ತುತ, ಬದುಕಿ,
ನಿರಂತರವಿರಲಿ, ಯುಗಯುಗದ ಕನಸ ಪಯಣ, ಓ ಪುಟ್ಟ ಕನಸುಗಳೇ!

Rating
No votes yet

Comments

Submitted by venkatb83 Sat, 04/06/2013 - 18:29

"ಹತಭಾಗ್ಯವೇ ಹುಟ್ಟಿಹವು, ಕೆಲ ಕಂಗಳಿಗಷ್ಟೇ ಆ ವೈಭೋಗ!"

ಕತ್ತಲಿನಲ್ಲಿ ನಡೆಯಬಲ್ಲೆ-ಕನಸು ಕಾಣದೆ ಬದುಕಲಾರೆ -ಎಂದು ಹೇಳಿದ್ದು ನಮ್ ಕ್ರೇಜಿ* ರವಿಚಂದ್ರನ್ ನೀವ್ ನೋಡಿದರೆ ಹೀಗೆ ಹೇಳ್ತೀರಾ...!! ಯಾವ್ದು ಸ್ಸರಿ...?

ಕನಸು ಕಾಣಬಹದು -ಆದರೆ ಅದು ನನಸು ಮಾಡಲೂ ಶ್ರಮಿಸಬೇಕು.... ಅಲ್ಲವೇ..!

ಶುಭವಾಗಲಿ..

\।

Submitted by H A Patil Sat, 04/06/2013 - 19:34

ಲಕ್ಷ್ಮೀಕಾಂತ ಇಟ್ನಾಳರಿಗೆ ವಂದನೆಗಳು
' ನಿಲ್ಲಿ ಕನಸುಗಳೆ ' ಒಂದು ಒಳ್ಳೆಯ ಕವನ, ಇಲ್ಲಿ ಕವಿ ಪ್ರಸ್ತಾಪಿಸುವ ಜೀವನದ ಆಳ ಗಹನತೆ ಬಹಳ ಮಹತ್ವದ್ದು, ಮತ್ತೊಮ್ಮೆ ಓದ ಬೇಕೆಂದು ಕುತೂಹಲ ಹುಟ್ಟಿಸುವಂತಹುದು. ' ಎಚ್ಚರದ ಹೆಜ್ಜೆಯಿರಲಿ ಕನಸು ಕಾಣುವ ಮುನ್ನ .........ಯುಗ ಯುಗದ ಕನಸ ಪಯಣ ...ಓ ಪುಟ್ಟ ಕನಸುಗಳೆ ' ಇದು ಮನುಷ್ಯ ಕುಲ ಸಾಗಿ ಬಂದ ಪಥ ಮತ್ತು ಆತನ ನನಸಾಗದ ಕನಸುಗಳು ಆದರೂ ಕನಸು ಕಾಣುವುದನ್ನು ಬಿಡದ ಆತನ ಜೀವನದ ವಾಂಛೆ ಈ ಎಲ್ಲ ಭಾವಗಳು ನನ್ನ ಮನಃ ಪಟಲದಲ್ಲಿ ಸುಳಿದು ಹೋದವು. ಧನ್ಯವಾದಗಳು.

Submitted by lpitnal@gmail.com Mon, 04/08/2013 - 06:26

In reply to by H A Patil

ಹಿರಿಯರಾದ ಪಾಟೀಲರಿಗೆ, ಹಾಗೂ ಗೆಳೆಯ ವೆಂಕಟ ರವರೇ, ಲಕ್ಷ್ಮೀಕಾಂತ ಇಟ್ನಾಳ ರ ವಂದನೆಗಳು. ತಮ್ಮ ಪ್ರತಿಕ್ರಿಯೆಗಳಿಗೆ ಧನ್ಯವಾದಗಳು. ಪಾಟೀಲರವರು ಹೇಳಿದಂತೆ ಈ ಕವನ ದಲ್ಲಿ ಕೆಲ ಗಹನ ಅಂಶಗಳು ಅಡಗಿವೆ. ಸುಮ್ಮನೆ ಒಂದುಸಾರಿ 'ಮಲಾಲಾ, ದಾಮಿನಿ' ಯವರನ್ನು ನೆನಪುಮಾಡಿಕೊಳ್ಳೋಣ. ಹಲವಾರು ಅಂಶಗಳು ಹೊಳೆದಾವು. ನಮ್ಮೊಳಗೆ ಇದ್ದು, ಸಾಮರ್ಥ್ಯವಿದ್ದರೂ ಅವಕಾಶ ವಂಚಿತ ಜೀವಗಳು ಇಲ್ಲಿ ಕನಸುಗಳ 'ಪ್ರತಿಮೆ' ಪಡೆದಿದ್ದಾರೆ. ತಮ್ಮ ಪ್ರತಿಕ್ರಿಯೆಗಳಿಗೆ ಧನ್ವವಾದಗಳು ಗೆಳೆಯರೆ.