ಅಕ್ಕನ ಮದುವೆ(ನೀಳ್ಗತೆ) ..ಭಾಗ 1
ಐದನೆಯ ತರಗತಿಯಲ್ಲಿದ್ದ ಪುಟ್ಟ ಶಾಲೆಯೊಳಗೆ ಕುಳಿತು ಬ್ಯಾಗಿನಲ್ಲಿಟ್ಟುಕೊಂಡಿದ್ದ ಅಕ್ಕನ ಮದುವೆಯ ಲಗ್ನಪತ್ರಿಕೆಯನ್ನು ಮುಟ್ಟಿ ಮುಟ್ಟಿ ನೋಡುತ್ತಿದ್ದ. ಅವನಿಗೆ ಒಂದು ಕಡೆ ಅಕ್ಕನ ಮದುವೆಗಾಗಿ ಅಪ್ಪ ಹೊಲಿಯಲು ಹಾಕಿದ್ದ ಹೊಸಬಟ್ಟೆಯನ್ನು ತೊಡುವ ಸಂಭ್ರಮವಾದರೆ ಇನ್ನೊಂದು ಕಡೆ ಚಿಕ್ಕಂದಿನಿಂದಲೂ ತನ್ನನ್ನು ಕೈಹಿಡಿದುಕೊಂಡು ಎಲ್ಲಿಗೆ ಹೋದರೂ ಕರೆದುಕೊಂಡು ಹೋಗುತ್ತಿದ್ದ, ತನಗೆ ಅನ್ನ ಮಾಡಿ ಉಣಿಸಿ ಅವಳೇ ಒಗೆದಿದ್ದ ಇಸ್ಕೂಲಿನ ಯೂನಿಫಾರ್ಮ ಬಟ್ಟೆ ತೊಡಿಸಿ ತಲೆ ಬಾಚಿ ಇಸ್ಕೂಲಿಗೆ ಕಳುಹಿಸುತಿದ್ದ, ತಿಳಿಯದ ಗಣಿತದ ಲೆಕ್ಕಗಳನ್ನು ಮಾಡಿಕೊಡುತಿದ್ದ ಅಕ್ಕ ತನ್ನನ್ನು ಬಿಟ್ಟು ಬೇರೆಯ ಮನೆಗೆ ಹೋಗುತ್ತಾಳೆ ಎನ್ನುವ ದುಃಖವೂ ಮನಸ್ಸಿನಲ್ಲಿ ಮೂಡಿತ್ತು. ತನ್ನ ಸ್ನೇಹಿತ ಮಂಜನಿಗೆ ಕೊಡಬೇಕೆಂದು ಅಪ್ಪನ ಬಳಿ ಕೇಳಿ ತಂದಿದ್ದ ಲಗ್ನಪತ್ರಿಕೆ ಯಾಕೋ ನನ್ನ ಬಳಿಯೇ ಇರಲಿ ಎನಿಸಿ ಶಾಲೆ ಬಿಟ್ಟ ಮೇಲೆ ಮಂಜನಿಗೆ ’ಮಂಜ.. ಭಾನುವಾರ ಯಡೂರು ದೇವಸ್ಥಾನದಲ್ಲಿ ನಮ್ಮಕ್ಕುನ ಮದುವೆ.. ಊರಿಂದ ಟೆಂಪೋ ಮಾಡಿದೀವಿ.. ಬಾರೋ..’ ಅಂತ ಬಾಯಿಮಾತಿನಲ್ಲಿಯೇ ಮದುವೆಗೆ ಕರೆದ ಪುಟ್ಟನಿಗೆ ಮಂಜ ‘ಬತ್ತೀನಿ ಕಣೋ..’ಅಂದ. ‘ಮರೀಬ್ಯಾಡ..’ ಎಂದು ಹೇಳಿ ಉತ್ಸಾಹದಿಂದ ಮನೆಯ ಕಡೆ ಹೊರಟ ಪುಟ್ಟ.