ಅಕ್ಕ, ಭಾವನ ಜೊತೆ ಬಸ್ಸಿನಲ್ಲಿ ಹೊರಟುಹೋದ ಮೇಲೆ ಅಕ್ಕನನ್ನು ಕಳುಹಿಸಲು ನಿಂತಿದ್ದ ಎಲ್ಲರೂ ಟೆಂಪೋ ಹತ್ತಿದರು. ಮಂಜ ಆಗಲೇ ಹೊರಟುಹೋಗಿದ್ದ. ಪುಟ್ಟ ಟೆಂಪೋದಲ್ಲಿ ಅವ್ವನ ಪಕ್ಕ ಕುಳಿತು ಊರಿಗೆ ಬಂದ. ಅವೊತ್ತು ರಾತ್ರಿ ಚಿಕ್ಕಮ್ಮ, ಅತ್ತೆ ಮತ್ತು ಅಜ್ಜಿ ಪುಟ್ಟನ ಮನೆಯಲ್ಲಿಯೇ ಉಳಿದಿದ್ದರು. ಅವರೆಲ್ಲಾ ಇದ್ದರೂ ಪುಟ್ಟನಿಗೇಕೋ ಅಕ್ಕನಿಲ್ಲದೇ ಮನೆ ಖಾಲಿ ಖಾಲಿ ಎನಿಸಿತೊಡಗಿತು. ಬೇಕೋ ಬೇಡವೋ ಎಂಬಂತೆ ಮದುವೆಯಲ್ಲಿ ಉಳಿದಿದ್ದ ಅನ್ನ-ಸಾರನ್ನೇ ತಿಂದು ಪಡಸಾಲೆಯಲ್ಲಿ ಕುಳಿತಿದ್ದ ಅವ್ವನ ತೊಡೆಯ ಮೇಲೆ ಮಲಗಿದರೂ ಅವನಿಗೆ ಯಾಕೋ ಸಮಾಧಾನವಾಗಲಿಲ್ಲ. ನಡುಮನೆಗೆ ಬಂದು ಮೂಲೆಯಲ್ಲಿದ್ದ ಚಾಪೆ ಹಾಸಿಕೊಂಡು ಮಲಗುವಾಗ ಅಕ್ಕನ ದಿಂಬನ್ನು ಪಕ್ಕದಲ್ಲಿ ಇರಿಸಿಕೊಂಡರೂ ಅವನ ಕಣ್ಣಿಗೆ ನಿದ್ರೆ ಹತ್ತಲಿಲ್ಲ. ಬೆಂಗಳೂರಿನ ಭಾವನ ಮನೆಯಲ್ಲಿ ಅಕ್ಕ ಏನು ಮಾಡುತಿದ್ದಾಳೋ ಎಂದು ಯೋಚನೆಯಾಯಿತು. ಎಷ್ಟೋ ಹೊತ್ತಾದ ಮೇಲೆ ಹೊರಗೆ ಕುಳಿತಿದ್ದ ಅಜ್ಜಿ ಬಂದು ಪುಟ್ಟನ ಪಕ್ಕದಲ್ಲಿದ್ದ ಅಕ್ಕನ ದಿಂಬನ್ನು ಎಳೆದುಕೊಂಡು ಮಲಗಿದಳು. ನಿದ್ರೆ ಬಾರದೆ ಪದೇ ಪದೇ ಮಗ್ಗುಲು ಬದಲಿಸುತಿದ್ದ ಪುಟ್ಟನನ್ನು ಕಂಡು ಅಜ್ಜಿ ‘ಅದ್ಯಾಕಂಗೆ ಮುಲುಗರಿತಿದೀಯೋ.. ಸುಮ್ಮುನೆ ಮಲಕ್ಕೋ..’ ಎಂದಳು. ತಕ್ಷಣವೇ ಪುಟ್ಟ ‘ಅಜ್ಜೀ.. ಅಕ್ಕ ಊಟ ಮಾಡಿರ್ತಾಳಾ..’ಅಂದ. ‘ಇನ್ನೇನು ಉಪಾಸ ಇರ್ತಾಳಾ.. ಅಲ್ಲಿರೋರು ನಮ್ಮಂಗೆ ಮನುಸ್ರೇ ಅಲ್ವಾ..’ಅಂದ ಅಜ್ಜಿಯ ಮಾತು ಕೇಳಿ ಪುಟ್ಟನಿಗೆ ತುಸು ಸಮಾಧಾನವಾಯಿತು. ಒಡನೆಯೇ ಅಕ್ಕನ ಜೊತೆಯಲ್ಲಿ ಅಕ್ಕಿಯ ಗಂಟು ಹಿಡಿದು ಹೋಗಿದ್ದ ಚಿಕ್ಕಪ್ಪನ ಮಗಳು ಚಿಕ್ಕಕ್ಕನ ನೆನಪಾಗಿ ಹೆಂಗೋ ಇಬ್ರು ಅವ್ರೆ ಬಿಡು ಅಂದುಕೊಂಡು ಮುಸುಕು ಹಾಕಿ ಮಲಗಿದ.
ಮತ್ತೆ ಎರಡು ದಿನ ಬಿಟ್ಟು ಅಕ್ಕ, ಭಾವನ ಜೊತೆಯಲ್ಲಿ ಬಂದಳು. ಭಾವನಿಗೆ ಇದ್ದ ಕಡೆಯೇ ಊಟ ತಿಂಡಿ ಎಲ್ಲಾ ಸಪ್ಲೇ ಮಾಡುತಿದ್ದ ಅಕ್ಕನ ಜೊತೆ ಜಾಸ್ತಿ ಹೊತ್ತು ಕಳೆಯುವುದು ಪುಟ್ಟನಿಗೆ ಆಗಲಿಲ್ಲ. ಅಕ್ಕ-ಭಾವ ಇಬ್ಬರೂ ರಾತ್ರಿ ಚಿಕ್ಕಪ್ಪನ ಮನೆಗೆ ಹೋಗಿ ಮಲಗಿದ್ದು ಬಂದರು. ಎರಡು ದಿನ ಹೀಗೆಯೇ ಕಾಲ ಕಳೆದವರು ಮೂರನೆಯ ದಿನ ಬೆಂಗಳೂರಿಗೆ ಹೊರಟು ನಿಂತರು. ಮತ್ತೆ ಅಕ್ಕ-ಭಾವನನ್ನು ಕಳುಹಿಸಲು ಅಪ್ಪ-ಅವ್ವ, ಚಿಕ್ಕಪ್ಪ-ಚಿಕ್ಕಮ್ಮ ಎಲ್ಲರ ಜೊತೆಯಲ್ಲಿ ಪುಟ್ಟ ಮಾಗಡಿಪಾಳ್ಯದ ಕ್ರಾಸಿನವರೆಗೂ ನಡೆದುಕೊಂಡು ಬಂದು ಬಸ್ಸು ಹತ್ತಿಸಿ ಅಕ್ಕನಿಗೆ ಟಾಟಾ ಮಾಡಿದ. ಯಾವಾಗಲೂ ಪಟಪಟನೆ ಮಾತನಾಡುತಿದ್ದ ಅಕ್ಕ ಯಾಕೋ ಮಾತನಾಡುವುದನ್ನು ಕಡಿಮೆ ಮಾಡಿದ್ದಾಳೆ ಎನ್ನಿಸಿತು. ತಮ್ಮ ಮನೆಯಲ್ಲಿ ಮೊಬೈಲ್ ಫೋನು ಇಲ್ಲದೇ ಇದ್ದಿದ್ದರಿಂದ ಅವ್ವ ‘ಚಿಕ್ಕಪ್ಪುಂಗೆ ಫೋನು ಮಾಡ್ತಾ ಇರೇ ತಾಯಿ..’ ಎಂದಳು.
ಅಕ್ಕ ಚೆನ್ನಾಗಿ ಓದ್ಕೋ ಅಂತ ಹೇಳಿದ್ದು ಪುಟ್ಟನ ತಲೆಗೆ ನಾಟಿತ್ತು. ಇಸ್ಕೂಲಿಂದ ಬಂದ ತಕ್ಷಣ ಪುಸ್ತಕ ಹಿಡಿದುಕೊಂಡು ಎಲ್ಲವನ್ನೂ ಬಾಯಿಪಾಠ ಮಾಡಲು ಶುರುಮಾಡಿದ. ಅಪ್ಪ-ಅವ್ವ ಇಬ್ಬರೂ ಮನೆಯಲ್ಲಿಲ್ಲ್ಲದಾಗ ಪಕ್ಕದ ಮನೆಗೆ ಬೀಗ ಕೊಟ್ಟು ಹೋಗುವುದು ಬಂದು ಬೀಗ ತೆಗೆದುಕೊಂಡು ಕೈಕಾಲು ಮುಖ ತೊಳೆದುಕೊಂಡು ಓದುವುದು ಮಾಡುತಿದ್ದ. ಆದರೂ ಅಕ್ಕನ ನೆನಪು ಅವನನ್ನು ಪದೇ ಪದೇ ಕಾಡುತಿತ್ತು. ಅಕ್ಕ ಏನಾದರೂ ಫೋನು ಮಡಿದ್ಲಾ.. ನನ್ನುನ್ನ ಕೇಳಿದ್ಲಾ ಅಂತ ವಿಚಾರಿಸಲು ಆಗಾಗ ಚಿಕ್ಕಪ್ಪನ ಮನೆಯ ಹತ್ತಿರ ಹೋಗಿ ಬರುತಿದ್ದ. ಹೋದ ಮೇಲೆ ಎರಡು ಮೂರು ಬಾರಿ ಅಕ್ಕ ಫೋನು ಮಾಡಿದ್ದಳು. ಎಲ್ಲರನ್ನೂ ಕೇಳಿದ್ದಳು. ಪುಟ್ಟನನ್ನೂ ಕೇಳಿ ಅವ್ನಿಗೆ ಚೆನ್ನಾಗಿ ಓದಕ್ಕೇಳು ಚಿಗವ್ವಾ ಅಂತ ತಿಳಿಸಿದ್ದಳು. ಅದಾದ ಮೇಲೆ ಅಕ್ಕ ಫೋನು ಮಾಡುತಿದ್ದುದು ಬಹಳ ಅಪರೂಪವಾಗಿತ್ತು.
ಅಕ್ಕನ ಮದುವೆಯಾಗಿ ಮೂರು ತಿಂಗಳು ಕಳೆದಿತ್ತು. ಒಂದು ದಿನ ಅಪ್ಪ ಬೆಳಿಗ್ಗೆಯೇ ಎದ್ದವನು ಯಾಕೋ ತಾಯಿ ಕನಸಿಗೆ ಬಂದಿದ್ಲು ಮಧ್ಯಾಹ್ನುದ ಬಸ್ಸಿಗೆ ಹೋಗಿ ನೋಡ್ಕಂಬತ್ತೀನಿ ಅಂತ ಹೊರಟಿದ್ದ. ಪುಟ್ಟನಿಗೂ ಹೋಗಬೇಕೆನ್ನುವ ಆಸೆಯುಟ್ಟಿ ನಾನೂ ಬತ್ತಿನಿ ಅಂದಾಗ ಇಸ್ಕೂಲು ತಪ್ಪಿಸ್ಕಂಡು ಹೋಗೋದು ಬ್ಯಾಡ.. ನಾನು ನೀನು ಒಂದು ಸರ್ತಿ ಹೋಗಾನ.. ಮನೆಯೋರೆಲ್ಲಾ ಹೋದ್ರೆ ಏನಂದ್ಕತಾರೋ ಎಂದು ಅವ್ವ ಅವನನ್ನು ಸುಮ್ಮನಿರಿಸಿದಳು.
ಬೆಂಗಳೂರಿಗೆ ಹೋಗಿ ಸಾಯಂಕಾಲದ ಬಸ್ಸಿಗೆ ವಾಪಾಸು ಬಂದ ಅಪ್ಪ ಯಾಕೋ ಸಪ್ಪೆ ಮುಖ ಹಾಕಿಕೊಂಡು ಗೋಡೆಗೊರಗಿ ಕುಳಿತದ್ದನ್ನು ಕಂಡು ಪುಟ್ಟನಿಗೆ ಯಾಕೆಂದು ತಿಳಿಯಲಿಲ್ಲ. ಅವ್ವ ಗಾಬರಿಯಿಂದ ‘ಇದ್ಯಾಕ್ ಮಾರಾಯ.. ಹಿಂಗ್ ಕುತ್ಕಂಡೆ.. ತಾಯಿ ಚೆನ್ನಾಗವ್ಳಾ..’ಅಂತ ಕೇಳಿದಳು. ‘ಏನ್ ಚೆಂದುವೋ ಏನೋ.. ಮದ್ವೆಯಾದ ಹೆಣ್ಮಗೀನ ಮುಖ ಹೆಂಗಿರಬೇಕು.. ನನ್ಮಗಳ ಮುಖದಲ್ಲಿ ಆ ಕಳೇವೇ ಇಲ್ಲ. ಮನೆ ಒರೆಸ್ಕಂಡು, ಬಟ್ಟೆ ಒಕ್ಕಂಡು ಸಾಯಂಕಾಲ ನಾಕು ಗಂಟೆಯಾಗಿದ್ರೂ ಊಟ ಮಾಡಿರಲಿಲ್ಲ.. ಬೀಗತಿ ಮಂಚದ ಮ್ಯಾಲೆ ಮಲುಕ್ಕಂಡಿದ್ದೋಳು ಆಮ್ಯಾಲೆ ತಟ್ಟೆನಲ್ಲಿ ಅನ್ನ ಸಾರು ಹಾಕ್ಕಂಡು ಬಂದು ಕೊಟ್ಟ ಮ್ಯಾಲೆ ಮೂಲೇಲಿ ಕುತ್ಕಂಡು ಊಟ ಮಾಡಿದ್ಲು. ಅಪ್ಪ ಬಂದವ್ನೆ ಅಂತ ‘ಊಟ ಮಾಡಪ್ಪೋ..’ ಅಂತ ಹೇಳೋ ಸಕ್ತೀನೂ ಅದುಕ್ಕಿಲ್ಲ..’ ಅಂತ ಹೇಳಿ ಕಣ್ಣಲ್ಲಿ ನೀರು ಹಾಕಿದಾಗ ಪುಟ್ಟನಿಗೆ ಭಾವನ ಮನೆಯಲ್ಲಿ ಅಕ್ಕ ಆರಾಮಾಗಿಲ್ಲ ಅನ್ನಿಸಿ ಹೊಟ್ಟೇನಲ್ಲಿ ಸಂಕಟವಾಯಿತು. ‘ಅದೇನು ಸಣ್ಣಮಕ್ಕಳು ಆಡದಂಗೆ ಆಡ್ತೀಯಾ.. ಹೆಣ್ಮಕ್ಕಳು ಎಲ್ಲಾ ಕೆಲ್ಸ ಮಾಡ್ಬೇಕು.. ಸುಮ್ನೆ ಕಾಲು ಮ್ಯಾಲೆ ಕಾಲು ಹಾಕ್ಕಂಡು ಕುಂತಿರಕ್ಕಾಯ್ತದಾ.. ಏನೇ ಮಾಡಿದ್ರೂ ಅದು ಅವರ ಮನೆ ಅಲ್ವಾ.. ಬ್ಯಾರೇರ ಮನೇನ.. ಸುಮ್ನಿರು ಇನ್ನೊಂದು ಸಲ್ಪ ದಿಸ ಹೋದ್ರೆ ಸರಿಯಾಯ್ತದೆ..’ ಅಂತ ಅವ್ವನೇ ಧೈರ್ಯ ಹೇಳಿದರೂ ಅವಳ ಮುಖದಲ್ಲಿ ಯಾವುದೋ ಚಿಂತೆ ಎದ್ದು ಕಾಣಿಸುತಿತ್ತು.
ಅಕ್ಕ ಬೆಂಗಳೂರಿನಲ್ಲಿ ಭಾವನ ಮನೆಯಲ್ಲಿ ಚೆನ್ನಾಗಿಲ್ಲ ಎಂದು ತಿಳಿದೊಡನೆ ಪುಟ್ಟ ಬಂಬ್ರಾಯಿಸ್ವಾಮಿ, ಹಟ್ಟಿಲಕ್ಕಮ್ಮ, ಜಲದಿಗೆರಮ್ಮ, ದೊಡ್ಡಮ್ಮ-ಚಿಕ್ಕಮ್ಮ ನಮ್ಮಕ್ಕುನ್ನ ಚೆನ್ನಾಗಿರಂಗೆ ಮಾಡಿ ಅಂತ ದಿನವೂ ಮಲಗುವಾಗ ಪ್ರಾರ್ಥಿಸಿಕೊಳ್ಳುತಿದ್ದ. ಹೀಗಿರುವಾಗ ಒಂದು ದಿನ ಬೆಳಿಗ್ಗೆ ಚಿಕ್ಕಪ್ಪ ಮನೆಗೆ ಬಂದು ‘ಅಳೀಮಯ್ಯಾರು ಫೋನು ಮಾಡಿದ್ರು ಕಣೋ ಯಣ್ಣೋ..’ ಅಂತ ಅಪ್ಪನ ಬಳಿ ಮಾತಿಗಾರಂಭಿಸಿ ‘ಅವ್ರಿಗೆ ಏನೋ ಯಾಪಾರುಕ್ಕೆ ಅರ್ಜೆಂಟಾಗಿ ಮೂವತ್ತು ಸಾವ್ರ ದುಡ್ಡು ಕೊಡಬೇಕಂತೆ..’ ಅಂದಾಗ ಅಪ್ಪ-ಅವ್ವನ ಮುಖಗಳು ಸೀದ ರೊಟ್ಟಿಯಂತಾಗಿದ್ದವು. ‘ಈಗ್ಲೇ ಜಮೀನು ಮಾರಿ ಮದ್ವೆ ಮಾಡಿ ಕೈಯ್ಯಲ್ಲಿ ಮೂರು ಕಾಸಿಲ್ದೆ ಕೂತಿದೀವಿ.. ಎಲ್ಲಿಂದ ತಂಕೋಡಾನೊ ಚಿಕ್ಕೋನೇ..’ ಅಂತ ಅವ್ವ ರಾಗ ತೆಗೆದಿದ್ದಳು. ‘ಅಂಗಂದ್ರೆ ಆಯ್ತದೇನಕ್ಕೋ.. ಏನಾರ ಮಾಡ್ಬೇಕು... ಹೊಸ ನೆಂಟುಸ್ತನ ಬ್ಯಾರೆ..’ ಎಂದು ಚಿಕ್ಕಪ್ಪ ಹೇಳಿದಾಗ ಅಪ್ಪ-ಅವ್ವ ಇಬ್ಬರೂ ಏನು ಮಾಡುವುದೆಂದು ತಿಳಿಯದೆ ಯೋಚನೆ ಮಾಡುತಿದ್ದರು. ‘ತೊರೆ ತಾವ ಇರೋ ಗದ್ದೇನ ಮೂರು ವರ್ಸದ ಬೆಳೆಗೆ ಯಾರಿಗಾರ ಕೊಟ್ಟುಬುಡಬೇಕು.. ಅಷ್ಟೇ ಮಾಡಕ್ಕಾಗದು..’ಅಂತ ಅಪ್ಪ ಅಂದಾಗ ‘ಅಂಗೆ ಮಾಡಣ್ಣೋ.. ನಾನೂ ಯಾರಾದ್ರೂ ಸಿಕ್ಕದ್ರೆ ಇಚಾರಿಸ್ತೀನಿ’ ಎಂದು ಹೇಳಿ ಚಿಕ್ಕಪ್ಪ ಹೊರಟುಹೋಗಿದ್ದ.
ಅಪ್ಪ ದಿನಾ ರಾತ್ರಿ ಮುಖ ಒಣಗಿಸಿಕೊಂಡು ಬಂದು ‘ತೊರೇಲಿ ನೀರಿಲ್ಲ.. ಯಾರೂ ಗದ್ದೆ ತಗಳಕ್ಕೆ ಒಪ್ತಾ ಇಲ್ಲ..’ ಅಂತ ಬಂದು ಗೋಡೆಗೊರಗಿ ಕುಳಿತುಬಿಡುತಿದ್ದ. ಅವ್ವ ‘ಇನ್ಯಾರುನ್ನಾದ್ರು ಇಚಾರಿಸು ಮಾರಾಯ.. ನಮ್ಮ ಹಣೆಬರ ಎಂಗಾಯ್ತದೋ ಅಂಗಾಗ್ಲಿ..’ ಎಂದು ಹೇಳುತಿದ್ದಳು. ಪುಟ್ಟನಿಗೆ ಇದುನ್ನೆಲ್ಲಾ ಕೇಳಿಸಿಕೊಂಡು ಭಾವನ ಮನೆಯವರು ಒಳ್ಳೆಯ ಜನರಲ್ಲ ಎಂದು ತಿಳಿದು ಬೇಜಾರಾಗುತಿತ್ತು. ಅಕ್ಕ ರಾಜಣ್ಣನನ್ನೇ ಮದುವೆಯಾಗಿದ್ದರೆ ನಮ್ಮೂರಿನಲ್ಲೇ ಇದ್ದುಕಂಡು ಚೆನ್ನಾಗಿರುತಿದ್ದಳೇನೋ ಎಂಬ ಯೋಚನೆಯೂ ಬರುತಿತ್ತು. ಹೆಂಗೋ ಅಪ್ಪ ದುಡ್ಡು ತಕ್ಕಂಡೋಗಿ ಕೊಟ್ರೆ ಆಮ್ಯಾಲೆ ಅಕ್ಕ ಚೆನ್ನಾಗಿರ್ತಾಳೇನೋ ಅಂದುಕೊಂಡ. ಚಿಕ್ಕಪ್ಪ ಬಂದು ‘ಮತ್ತೆ ಬೀಗ್ರು ಫೋನು ಮಾಡಿದ್ರು ಕಣೋ ಯಣ್ಣೋ..’ ಎಂದು ಹೇಳಿ ಹೋಗಿದ್ದ. ಅವ್ವ-ಅಪ್ಪ ಇಬ್ಬರೂ ಸರಿಯಾಗಿ ಊಟ ಮಾಡದೇ ಯಾವಾಗಲೂ ಯೋಚಿಸುತ್ತಾ ಕುಳಿತಿರುತಿದ್ದರು.
ಆಮೇಲೆ ಒಂದು ದಿನ ಇಸ್ಕೂಲಿನಿಂದ ಬಂದ ಪುಟ್ಟನಿಗೆ ಅಕ್ಕ ಒಬ್ಬಳೇ ಊರಿಗೆ ಬಂದು ಮನೆಯಲ್ಲಿದ್ದುದು ಕಂಡು ಖುಷಿಯಾಯಿತು. ನೋಡಿದ ತಕ್ಷಣ ಅಕ್ಕ ಯಾಕೋ ಸವೆದುಹೋಗಿದ್ದಾಳೆ ಎನ್ನಿಸಿತು. ಆದರೂ ‘ಚೆನ್ನಾಗಿದ್ದೀಯೇನಕ್ಕೋ..’ ಎಂದು ಅಕ್ಕನ ಕೈಹಿಡಿದು ಕೇಳಿದ ಪುಟ್ಟನಿಗೆ ಅಕ್ಕ ಏನನ್ನೂ ಮಾತನಾಡದೆ ಬರೀ ‘ಊ..’ ಅಂದಿದ್ದು ಕಂಡು ನಿರಾಸೆಯಾಯಿತು. ಅಕ್ಕನ ಮುಖದಲ್ಲಿ ನಗೆ ಇರಲಿಲ್ಲ. ರಾತ್ರಿ ಅವ್ವ-ಅಪ್ಪನ ಎದುರು ‘ದುಡ್ಡು ಇಸ್ಕಂಡು ಬರೋವರ್ಗೂ ಮನೆಗೆ ಬರ್ಬೇಡ ಅಂದವ್ರೆ..’ ಅಂತ ಹೇಳಿದ ಅಕ್ಕನ ಮಾತು ಕೇಳಿ ಅವ್ವ-ಅಪ್ಪ ಇಬ್ಬರೂ ಕೆನ್ನೆಗೆ ಕೈ ಊರಿಕೊಂಡು ಕುಳಿತುಬಿಟ್ಟರು. ಅಕ್ಕ ಅವೊತ್ತು ರಾತ್ರಿ ಹೊಟ್ಟೆ ತುಂಬಾ ಬಡಿಸಿಕೊಂಡು ಊಟ ಮಾಡಿ ಬೇಗ ಮಲಗಿಕೊಂಡಿದ್ದು ಯಾಕೆಂದು ಪುಟ್ಟನಿಗೆ ತಿಳಿಯಲಿಲ್ಲ.
ಮಾರನೇ ದಿನ ಶನಿವಾರದ ಒಪ್ಪತ್ತಿನ ಇಸ್ಕೂಲು ಮುಗಿಸಿಕೊಂಡು ಅಕ್ಕ ಮನೆಯಲ್ಲಿದ್ದಾಳೆಂದು ಪುಟ್ಟ ಓಡೋಡಿ ಬಂದ. ಅಕ್ಕ ಮುಂದಿನ ಬಾಗಿಲ ಬಳಿ ಬೆಳಕಿಗೆ ಕುಳಿತಿದ್ದವಳು ತೊಟ್ಟಿದ್ದ ರವಿಕೆಯ ತೋಳನ್ನು ಮೇಲಿನವರೆಗೆ ಸರಿಸಿ ಎಡಗಡೆಯ ತೋಳಿನ ಮೇಲಿದ್ದ ಗಾಯಕ್ಕೆ ಉಗುಳು ಹಚ್ಚುತಿದ್ದಿದನ್ನು ಕಂಡು ಪುಟ್ಟನಿಗೆ ಗಾಬರಿಯಾಗಿ ‘ಅಕ್ಕೋ.. ಏನಾಯ್ತೇ..’ ಅಂದು ಕೂಗಿದ. ಪುಟ್ಟನ ದನಿ ಕೇಳಿ ಅಕ್ಕ ತಟ್ಟನೆ ರವಿಕೆಯ ತೋಳನ್ನು ಕೆಳಗೆಳೆದು ಮುಚ್ಚಿಕೊಂಡು ಪುಟ್ಟನನ್ನೇ ಒಂದು ಕ್ಷಣ ದಿಟ್ಟಿಸಿದಳು. ಪುಟ್ಟ ಕುಸಿದು ಅಕ್ಕನ ಪಕ್ಕ ಕುಳಿತು ‘ಯಾರೇ ಅಕ್ಕೋ.. ಅಂಗೆ ಬರೆ ಬರಂಗೆ ಹೊಡೆದಿದ್ದು..’ ಅಂದ. ಅಕ್ಕ ಕಣ್ಣುಗಳಲ್ಲಿ ನೀರು ತುಂಬಿಕೊಂಡು ‘ಯಾರೂ ಹೊಡೀಲಿಲ್ಲ.. ಅವ್ವ-ಅಪ್ಪುಂಗೆ ಹೇಳ್ಬೇಡ.. ಭಾಷೆ ಕೊಡು..’ಎಂದು ಪುಟ್ಟನ ಕೈಮೇಲೆ ಕೈಯಿಟ್ಟು ಭಾಷೆ ತೆಗೆದುಕೊಂಡಳು. ಪುಟ್ಟನಿಗೆ ಏನು ಮಾಡುವುದೆಂದು ತಿಳಿಯದೆ ಸುಮ್ಮನಾಗಿಬಿಟ್ಟ.
ಅಕ್ಕ ಮನೆಗೆ ಬಂದು ಒಂದು ವಾರವಾದ ನಂತರ ಅಪ್ಪ ಒಂದು ದಿನ ರಾತ್ರಿ ‘ಗದ್ದೇನ ಐದು ವರ್ಸುದ ಬೆಳೆಗೆ ಕೊಟ್ಬುಟ್ಟೆ.. ನಾಳಿಕ್ಕೆ ದುಡ್ಡು ತಂದು ಕೊಡ್ತಾರಂತೆ’ ಅಂದಾಗ ಅವ್ವನ ಮುಖದಲ್ಲಿ ಸಮಾಧಾನ ಕಾಣಿಸಿಕೊಂಡಿತ್ತು. ಮಾರನೇ ದಿನ ಅಪ್ಪ ಹೇಳಿದಂತೆ ದುಡ್ಡು ತೆಗೆದುಕೊಂಡು ಬಂದಿದ್ದ. ಅವ್ವ ‘ನಾಳೆ ಬೆಳಿಗ್ಗೆ ಚಿಕ್ಕೋನ ಜತಿ ಮಾಡಿ ತಾಯೀನ ಕಳಿಸಿಕೊಡೋನ’ ಅಂದಿದ್ದು ಕೇಳಿ ಪುಟ್ಟನಿಗೆ ಬೇಸರವಾಯಿತು. ‘ಇನ್ನೊಂದು ಸಲ್ಪ ದಿನ ಅಕ್ಕ ಇಲ್ಲೇ ಇರ್ಲಿ ಬಿಡವ್ವೋ...’ ಅಂದ ಪುಟ್ಟನಿಗೆ ಅವ್ವ ‘ನಿಂಗೊತ್ತಾಗಕ್ಕಿಲ್ಲ ಸುಮ್ನಿರು....’ ಅಂದಳು. ಬೆಳಿಗ್ಗೆ ಚಿಕ್ಕಪ್ಪ ಖಾಕಿ ಕೈಚೀಲದಲ್ಲಿ ದುಡ್ಡನ್ನು ಸುತ್ತಿಕೊಂಡು ಅಕ್ಕನನ್ನು ಕರೆದುಕೊಂಡು ಬೆಂಗಳೂರಿಗೆ ಹೋಗಿದ್ದು ಕಂಡು ಪುಟ್ಟ ಇನ್ನು ಮ್ಯಾಲೆ ಅಕ್ಕ ಚೆನ್ನಾಗಿರ್ತಾಳೆ ಅಂದುಕೊಂಡ. (ಮುಂದುವರಿಯುವುದು...)