ಅಕ್ಕ ಬೆಂಗಳೂರಿಗೆ ಹೋಗಿ ಮೂರು ತಿಂಗಳಾಗಿತ್ತು. ಅಕ್ಕ ಹೇಗಿದ್ದಾಳೆ ಎಂಬ ಸುದ್ದಿ ಪುಟ್ಟನಿಗೆ ತಿಳಿದಿರಲಿಲ್ಲ. ಯಾವುದಕ್ಕೂ ಒಂದು ಸರ್ತಿ ಫೋನಾದರೂ ಮಾಡುವುದಿಲ್ಲವಲ್ಲ ಎಂದು ಅವ್ವ-ಅಪ್ಪ ಒಟ್ಟಿಗೆ ಕುಳಿತಾಗ ನೊಂದುಕೊಳ್ಳುತ್ತಿದ್ದರು. ಹೀಗಿರುವಾಗ ಒಂದು ದಿನ ಬೆಳಿಗ್ಗೆ ಎದ್ದ ಪುಟ್ಟ ಮುಖ ತೊಳೆದುಕೊಂಡು ಓದಿಕೊಳ್ಳಲು ಕುಳಿತಿದ್ದ. ಚಿಕ್ಕಪ್ಪ ಯಾಕೋ ಮುಖ ಚಿಕ್ಕದು ಮಾಡಿಕೊಂಡು ‘ಯಣ್ಣೋ ಇದ್ದೀಯೇನೋ..’ಎಂದು ಕೂಗುತ್ತಲೇ ಒಳಗೆ ಬಂದ. ಚಿಕ್ಕಪ್ಪನ ದನಿ ಕೇಳಿ ಹಿತ್ತಿಲಿನಲ್ಲಿ ಮುಖ ತೊಳೆಯುತಿದ್ದ ಅಪ್ಪ ಮತ್ತು ಹಂಚಿನ ಮೇಲೆ ರೊಟ್ಟಿ ಬಡಿಯುತಿದ್ದ ಅವ್ವ ಒಟ್ಟಿಗೇ ನಡುಮನೆಗೆ ಬಂದರು. ಅಪ್ಪ ‘ಏನೋ ಸಮಾಚಾರ..’ಅಂತ ಸ್ವಲ್ಪ ಅನುಮಾನವಾಗಿಯೇ ಕೇಳಿದ. ಚಿಕ್ಕಪ್ಪ ಯಾಕೋ ಮಾತನಾಡಲು ತಡವರಿಸುತಿದ್ದುದು ಕಂಡು ಅವ್ವ ‘ತಾಯಿ ಏನಾದ್ರೂ ಫೋನು ಮಾಡಿದ್ಲೇನೋ ಚಿಕ್ಕೋನೇ..’ ಅಂದ್ಲು. ಚಿಕ್ಕಪ್ಪ ಅವ್ವ-ಅಪ್ಪನ ಮುಖ ನೋಡಲಾರದೇ ತಲೆ ತಗ್ಗಿಸಿಕೊಂಡು ‘ಬೀಗ್ರು ಫೋನು ಮಾಡಿದ್ರು.. ಅವ್ರಿಗೆ ಮತ್ತೆ ಇಪ್ಪತ್ತು ಸಾವ್ರ ದುಡ್ಡು ಅರ್ಜೆಂಟಾಗಿ ಬೇಕಂತೆ..’ ಅಂದಿದ್ದನ್ನು ಕಂಡು ಅಪ್ಪ ತಲೆಯ ಮೇಲೆ ಕೈಹೊತ್ತುಕೊಂಡು ಕುಸಿದು ಕೆಳಗೆ ಕುಳಿತ. ಅವ್ವ ‘ಎಲ್ಲಿಂದ ತಂದುಕೊಡೋದಪ್ಪೋ.. ಈಗ್ಲೇ ನಮ್ ತಿಥಿ ಆಗೋಗದೆ..’ ಎಂದು ಹಣೆ ಚಚ್ಚಿಕೊಂಡು ಗೋಡೆಗೊರಗಿ ಕುಳಿತಳು. ‘ನನ್ನ ಮಗುಳ್ನ ಇವ್ರು ಬಾಳಿಸಂಗೆ ಕಾಣಿಸೋದಿಲ್ಲ ಕಣೋ ಚಿಕ್ಕೋನೆ.. ಊರಲ್ಲಿ ಮದ್ವೆಯಾದ ಹೆಣ್ಮಕ್ಕಳೆಲ್ಲಾ ಚೆಂದಾಗೇ ಅವ್ರೆ.. ನನ್ನ ಮಗಳೀಗೆ ಹಿಂಗಾಗ್ಬೇಕಾ.. ಆ ದೇವ್ರಿಗೆ ಕಣ್ಣಿಲ್ಲ ಕಣಪ್ಪೋ.’ ಅಂತ ಗೋಳಾಡತೊಡಗಿದಾಗ ಪುಟ್ಟ ಅವ್ವನ ಬಳಿ ಹೋಗಿ ‘ಸುಮ್ನಿರವ್ವೋ ಅಳಬ್ಯಾಡ.. ಎಂದು ಹೇಳಿ ಅವ್ವನನ್ನು ಆತುಕೊಂಡು ಕುಳಿತ. ಅವ್ವ ಸ್ವಲ್ಪ ಹೊತ್ತು ಸುಮ್ಮನಿದ್ದು ‘ಇನ್ನೊಂದು ಸಲ ಫೋನ್ ಮಾಡಿದ್ರೆ ಅವರತ್ರ ದುಡ್ಡು ಇಲ್ವಂತೆ ಅಂತ ಹೇಳ್ಬುಡು..’ ಅಂತ ಹೇಳಿದಾಗ ಚಿಕ್ಕಪ್ಪ ‘ಅಂಗೇ ಹೇಳ್ತೀನಿ ಬುಡಕ್ಕೋ..’ ಅಂದು ಹೊರಟುಹೋದ. ಅವ್ವ ಮಾಡಿದ್ದ ರೊಟ್ಟಿಯನ್ನು ಯಾರೂ ತಿನ್ನಲೇ ಇಲ್ಲ.
ಅಕ್ಕನ ವಿಷಯವನ್ನೇ ಯೋಚಿಸಿಕೊಂಡು ಇಸ್ಕೂಲಿಗೆ ಹೋದ ಪುಟ್ಟನಿಗೆ ಮೇಷ್ಟ್ರು ಮಾಡುತಿದ್ದ ಪಾಠಗಳು ಅರ್ಥವಾಗಲೇ ಇಲ್ಲ. ಸುಮ್ಮನೇ ಇಸ್ಕೂಲಿನಲ್ಲಿ ಕುಳಿತಿದ್ದು ಇಸ್ಕೂಲು ಮುಗಿದ ಮೇಲೆ ಮನೆಗೆ ಬಂದವನೇ ಮನೆಯಲ್ಲಿಯೇ ಇದ್ದ ಅವ್ವನಿಗೆ ‘ನೀನೇನೋ ದುಡ್ಡಿಲ್ಲ ಅಂತ ಹೇಳ್ಬುಟ್ಟೆ.. ಅವ್ರೇನಾದ್ರೂ ಅಕ್ಕುನ್ನ ದುಡ್ಡು ತರೋಗು ಅಂತ ಮತ್ತೆ ಇಲ್ಲಿಗೆ ಕಳುಸಿದ್ರೆ ಏನ್ಮಾಡ್ತಿಯವ್ವೋ..’ ಎಂದು ಕೇಳಿದ. ‘ಅಂಗೇನಾರ ಕಳುಸಿದ್ರೆ ಇಲ್ಲೇ ಅಂಬ್ಲೀನೋ ಗಂಜೀನೋ ಕುಡಕಂಡು ಇರ್ತಾಳೆ ಬಿಡು.. ನಾವಿನ್ನೇನು ಮಾಡಕ್ಕಾಯ್ತದೆ..’ ಅಂತ ಅವ್ವ ಹೇಳಿದರೂ ಅವಳ ಮುಖ ಸಪ್ಪಗಾಗಿದ್ದು ಪುಟ್ಟನಿಗೆ ಕಾಣಿಸದೇ ಇರಲಿಲ್ಲ.
ಅದಾದ ಮೂರ್ನಾಲ್ಕು ದಿನ ಕಳೆದ ಮೇಲೆ ಪುಟ್ಟ ಅಂದುಕೊಂಡಂತೆ ಅಕ್ಕ ಮದುವೆಯಲ್ಲಿ ತೆಗೆದುಕೊಂಡಿದ್ದ ಹೊಸ ಸೂಟುಕೇಸು ಹಿಡಿದು ಮನೆಗೆ ಬಂದಿದ್ದಳು. ಈ ಸರ್ತಿ ಮೊದಲಿಗಿಂತ ಬತ್ತಿಹೋಗಿದ್ದ ಅಕ್ಕನನ್ನು ಕಂಡು ಪುಟ್ಟನಿಗೆ ಕರುಳು ಕಿವಿಚಿದಂತಾಯಿತು. ಅವ್ವ ಅಕ್ಕನನ್ನು ಕಂಡು ‘ನಿನ್ ಹಣೇಲಿ ಆ ದೇವ್ರು ಏನ್ ಬರುದುಬುಟ್ಟನವ್ವಾ..’ ಎಂದು ಸಣ್ಣದನಿಯಲ್ಲಿ ಅಳತೊಡಗಿದ್ದನ್ನು ಕಂಡು ಪುಟ್ಟನ ಕಣ್ಣಿನಲ್ಲಿ ನೀರು ಹರಿಯತೊಡಗಿ ಭಾವನ ಮನೆಯವರ ಮೇಲೆ ಸಿಟ್ಟು ಬಂದಿತು. ಅಕ್ಕ ಏನೊಂದೂ ಮಾತನಾಡದೆ ಮಂಕಾಗಿ ಕುಳಿತಿದ್ದಳು. ರಾತ್ರಿ ಮನೆಗೆ ಬಂದ ಅಪ್ಪ ಅಕ್ಕನ ಬಳಿ ಕುಳಿತು ತಲೆ ನೇವರಿಸಿ ‘ಏನೂ ಚಿಂತೆ ಮಾಡಬ್ಯಾಡ ತಾಯಿ.. ಬಡ್ಡಿ ಬಸವಯ್ಯುಂಗೆ ದುಡ್ಡಿಗೇಳಿದೀನಿ..’ ಅಂದದ್ದನ್ನು ಕಂಡು ಅವ್ವ ಯಾಕೋ ಸಿಟ್ಟಿಗೆದ್ದು ‘ಯಾವ ದುಡ್ಡು ಕೊಡಾದು ಬ್ಯಾಡ.. ಹೆಂಡ್ತಿ ಬೇಕಾದ ಬೋಳಿಮಗ ಬಂದು ಕರ್ಕಂಡೋಯ್ತನೆ.. ಹಿಂಗೇ ಕಲುಸ್ಬುಟ್ರೆ ನಮ್ಮುನ್ನ ಹೀರಿ ಹಿಪ್ಪೆಕಾಯಿ ಮಾಡ್ಬುಡ್ತಾರೆ..’ ಅಂದಳು. ‘ಅಂಗಂದ್ರೆ ಆಯ್ತದೇನೆ ಜನ ಆಡ್ಕತಾರೆ..’ ಅಂದ ಅಪ್ಪನಿಗೆ ಅವ್ವ ‘ಸುಮ್ಮುನೆ ಕೂತ್ಕೋ.. ಆಡಿಕೊಂಡೋರ ಮನೆ ಹಾಳಾಯ್ತದೆ’ ಅಂದಾಗ ಅಪ್ಪ ಯಾಕೋ ಮತ್ತೆ ಮಾತನಾಡಲಿಲ್ಲ. ಪುಟ್ಟನಿಗೂ ಅವ್ವ ಹೇಳಿದ್ದು ಸರಿ ಅನ್ನಿಸಿತು.
ಅಕ್ಕ ದಿನವೆಲ್ಲಾ ಸುಮ್ಮನೆ ಹೊದ್ದುಕೊಂಡು ಮಲಗುತಿದ್ದವಳು ಮತ್ತೆ ಗೆಲುವಾಗಲು ಮೂರು ದಿನ ಹಿಡಿಯಿತು. ಅವ್ವ ಅಕ್ಕನನ್ನು ಮೊದಲಿಗಿಂತಲೂ ಚೆನ್ನಾಗಿ ನಿಗಾ ಮಾಡತೊಡಗಿದಳು. ಅಕ್ಕ ಊರಿಗೆ ಬಂದಿರುವುದನ್ನು ತಿಳಿದವರು ಅಪ್ಪ ಅಂದುಕೊಂಡಂತೆ ಯಾರೂ ಆಡಿಕೊಳ್ಳಲಿಲ್ಲ. ವಿಷಯ ತಿಳಿದು ಮನೆಗೆ ಬಂದವರೆಲ್ಲಾ ಅವ್ವ ಹೇಳಿದಂತೆ ‘ಹೆಂಡ್ತಿ ಬೇಕಾದೋನು ಅವ್ನೇ ಬತ್ತನೆ ತಗೋ.. ನಮ್ಮ ಹೆಣ್ಮಕ್ಕಳಂತೋರುನ್ನ ಪಡೆಯೋದಿಕ್ಕೆ ಏಳೇಳು ಜನ್ಮುದ ಪುಣ್ಯ ಮಾಡಿರ್ಬೇಕು..’ ಅಂತ ಅವ್ವನಿಗೆ ಧೈರ್ಯ ಹೇಳತೊಡಗಿದ್ದನ್ನು ಕಂಡು ಪುಟ್ಟನಿಗೆ ಸಮಾಧಾನವಾಗಿತ್ತು.
ಅಕ್ಕನೇನೋ ಎಲ್ಲರೊಂದಿಗೆ ಹೊಂದಿಕೊಂಡು ನಗುನಗುತ್ತಾ ಕಾಲಕಳೆಯತೊಡಗಿದಳು. ಆದರೆ ಅವ್ವ ಅಂದುಕೊಂಡಂತೆ ಭಾವ ಬಂದು ಅಕ್ಕನನ್ನು ಕರೆದುಕೊಂಡು ಹೋಗುವ ಲಕ್ಷಣಗಳೇನೂ ಕಾಣಿಸದೆ ಮತ್ತೆ ಅವ್ವ ರಾತ್ರಿಯ ಹೊತ್ತು ಪಡಸಾಲೆಯಲ್ಲಿ ಕುಳಿತು ಯೋಚನೆಮಾಡತೊಡಗಿದಳು. ಚಿಕ್ಕಪ್ಪ ಮನೆಗೆ ಬಂದಾಗಲೆಲ್ಲಾ ‘ಏನು ಮಾಡೋದೋ ಚಿಕ್ಕೋನೆ.. ತಾಯವ್ವನ ಕತೆ ಹಿಂಗಾಗೋಯ್ತಲ್ಲೋ’ ಎಂದು ಅಳುತಿದ್ದಳು. ಚಿಕ್ಕಪ್ಪ ‘ನಂಗೂ ಏನೂ ತಿಳೀತಾ ಇಲ್ಲಾ ಕಣಕ್ಕಾ.. ಇದೊಂದು ಸತಿ ಸಾಲಾನೋ ಸೂಲಾನೋ ಮಾಡಿ ಅತ್ಲಾಗೆ ದುಡ್ಡು ಕೊಡಾನ..’ ಎಂದಿದ್ದಕ್ಕೆ ಅವ್ವ ಒಪ್ಪಿರಲಿಲ್ಲ. ‘ಅಂತ ತೆಪ್ಪು ಮಾಡಕ್ಕೆ ನನ್ನ ಮನುಸ್ಸು ಒಪ್ತಾ ಇಲ್ಲಾ ಕಣೋ ಚಿಕ್ಕೋನೆ..’ ಎಂದು ಕಡ್ಡಿ ತುಂಡು ಮಾಡಿದಂತೆ ಹೇಳಿದ್ದಳು. ಪುಟ್ಟನಿಗ್ಯಾಕೋ ಭಾವ ಬಂದು ಮತ್ತೆ ಅಕ್ಕನನ್ನು ಕರೆದುಕೊಂಡು ಹೋಗುವುದಿಲ್ಲ ಅನಿಸತೊಡಗಿತು. ಅಂಗೇನಾದರೂ ಆದರೆ ನಾನು ಸರಿಯಾಗಿ ಓದಿ ದೊಡ್ಡ ಕೆಲಸಕ್ಕೆ ಸೇರಿ ಅಕ್ಕನನ್ನು ಚೆನ್ನಾಗಿ ನೋಡಿಕೊಳ್ಳಬೇಕು ಅಂದುಕೊಂಡು ರಾತ್ರಿಯೆಲ್ಲಾ ಓದತೊಡಗಿದ.
ಒಂದು ದಿನ ರಾತ್ರಿ ಅಕ್ಕ ಅವ್ವನ ಹತ್ತಿರ ಕುಳಿತು ‘ಅವ್ವೋ.. ಮನೇಲಿ ಕುಂತೂ ಕುಂತೂ ಬೇಜಾರಾಯ್ತದೆ.. ಮ್ಯಾಗುಲ ಮನೆ ಕೆಂಪಣ್ಣಾರ ಮಗಳು ಲತಾ ಕುಣಿಗಲ್ಲಿನಲ್ಲಿ ಬಟ್ಟೆ ಹೊಲಿಯೋದು ಕಲ್ತುಕೋಳ್ಳಾಕೆ ಹೋಯ್ತಾವಳಂತೆ.. ಅಲ್ಲಿ ಒಬ್ರು ಮೇಡಮ್ಮು ಚೆನ್ನಾಗಿ ಹೇಳಿಕೊಡ್ತಾರಂತೆ.. ನಾನೂ ಹೋಯ್ತೀನಿ..’ ಅಂದಾಗ ಅವ್ವ ಯಾಕೋ ಹಿಂದೇಟು ಹಾಕಿ ‘ನಿಂಗೆ ಅವೆಲ್ಲಾ ಯಾಕ್ ಬೇಕು ತಗೋ..’ ಅಂದಳು. ಆದರೂ ಅಕ್ಕ ಹಟ ಹಿಡಿದು ಕುಳಿತಾಗ ಬೇಡವೆನ್ನಲಾಗದೆ ‘ ಹೋಗ್ವಾಗ ಬರ್ವಾಗ ಜಾಪಾನ.. ನಿನ್ನ ಬುದ್ಧಿ ನಿನ್ನ ಕೈಲಿಟ್ಟುಕೊಂಡಿರಬೇಕು..’ ಅಂದು ಹೇಳಿದ್ದಳು.
ಅಕ್ಕ ಕುಣಿಗಲ್ಲಿಗೆ ಬಟ್ಟೆ ಹೊಲಿಯುವುದನ್ನು ಕಲಿಯಲು ಹೋಗುವುದಕ್ಕೆ ಶುರುವಾದ ಮೇಲೆ ಅವಳ ಮುಖದಲ್ಲಿ ಯಾವುದೋ ಹೊಸ ಕಳೆ ಬಂದಿತ್ತು. ‘ಮೇಡಮ್ಮು ಭಾಳ ಒಳ್ಳೇವ್ರು ಕಣವ್ವಾ.. ಚೆನ್ನಾಗಿ ಹೇಳಿಕೊಡ್ತಾರೆ.. ಚುರುಕಾಗಿದೀಯಾ.. ಇನ್ನೊಂದು ತಿಂಗಳಲ್ಲಿ ಚೆನ್ನಾಗಿ ಕೆಲ್ಸ ಕಲ್ತುಕೊಂತೀಯಾ.. ಅಂತ ಹೇಳಿದ್ರು’ ಎಂದು ಅವ್ವನ ಬಳಿಯಲ್ಲಿ ಹೇಳಿದಾಗ ಅವ್ವನ ಮುಖದಲ್ಲಿ ಯಾಕೋ ಏನೋ ಖುಷಿಯೇ ಕಾಣಿಸಲಿಲ್ಲ. ಅದಾದ ಸ್ವಲ್ಪ ದಿನಗಳ ನಂತರ ಅಕ್ಕ ಅವ್ವನಿಗೊಂದು ಹೊಸ ರವಿಕೆಯನ್ನು ಹೊಲಿದು ತಂದು ‘ನಾನೇ ಹೊಲಿದಿದ್ದು.. ಹಾಕ್ಕಳವ್ವೋ..’ ಎಂದಾಗ ಅವ್ವನ ಕಣ್ಣುಗಳಲ್ಲಿ ನೀರು ತುಂಬಿದ್ದು ಯಾಕೆಂದು ಪುಟ್ಟನಿಗೆ ತಿಳಿಯಲಿಲ್ಲ. ‘ಅವ್ವೋ.. ಬಟ್ಟೆ ಹೊಲಿಯೋದು ಚೆನ್ನಾಗಿ ಕಲಿತುಕೊಂಡಿದೀನಿ.. ಮೇಡಮ್ಮು ಇಲ್ಲೇ ನಮ್ಮ ಅಂಗಡೀಲೆ ಬಟ್ಟೆ ಹೊಲಿದುಕೊಡು.. ಒಂದೊಂದು ಬಟ್ಟೆಗೆ ಇಷ್ಟಿಟ್ಟು ಅಂತ ದುಡ್ಡು ಕೊಡ್ತೀನಿ ಅಂದವ್ರೆ..’ ಅಂತ ಅಕ್ಕ ಹೇಳಿದಾಗ ಅವ್ವ ‘ಅಯ್ಯೋ ತಾಯಿ.. ಬಟ್ಟೆ ಹೊಲ್ಕಂಡು ಕೂತ್ಕಂಡು ಏನ್ ಮಾಡ್ತೀಯವ್ವೋ..’ ಎಂದು ದೊಡ್ಡದಾಗಿ ಉಸಿರು ಬಿಟ್ಟಿದ್ದು ಕಂಡು ಪುಟ್ಟನಿಗೆ ಅವ್ವ ಬ್ಯಾರೆ ಏನುನ್ನೋ ಯೋಚಿಸ್ತಾವ್ಳೆ ಅನ್ನಿಸಿತು.
ಒಂದು ದಿನ ರಾತ್ರಿ ಊಟವಾದ ಮೇಲೆ ಅವ್ವ-ಅಪ್ಪ ಇಬ್ಬರೂ ಯೋಚಿಸುತ್ತಾ ಹೊರಗೆ ಕುಳಿತಿದ್ದರು. ಅಕ್ಕ ಅವರ ಹತ್ತಿರ ಕುಳಿತು ಮಾತಿಗೆ ಶುರು ಮಾಡಿ ‘ ಅವ್ವೋ.. ನಾಳೀಕ್ಕೆ ಹೋಗಿ ಯಡೂರಲ್ಲಿ ಪೋಲೀಸ್ ಸ್ಟೇಷನ್ನಲ್ಲಿ ಕಂಪ್ಲೇಂಟು ಕೊಡಾನ ಅಂತ ಮಾಡದೀನಿ..’ ಅಂದಾಗ ಏನೂ ತಿಳಿಯದೆ ಗಾಬರಿಯಾದ ಅವ್ವ ‘ಯಾರ ಮ್ಯಾಲೆ ಏನಂತ ಕಂಪ್ಲೇಂಟು ಕೊಡ್ತೀಯವ್ವೋ..’ ಅಂತ ಕೇಳಿದಳು. ‘ ನನ್ನ ಗಂಡನ ಮನೆಯವ್ರು ದುಡ್ಡಿಗಾಗಿ ಕಿರುಕುಳ ಕೊಟ್ಟು ತವರು ಮನೆಗೆ ಕಳಿಸವ್ರೆ ಅಂತ ಕೊಡ್ತೀನಿ..’ ಎಂದು ಅಕ್ಕ ಹೇಳಿದಾಗ ಪುಟ್ಟನಿಗೆ ಅಪ್ಪ-ಅವ್ವ ಇಬ್ಬರೂ ಪೂರ್ತಿ ಹೆದರಿಕೊಂಡಂತೆ ಕಾಣಿಸಿತು. ‘ಅಯ್ಯೋ.. ತಾಯಿ ಅಂಗೇನಾರ ಮಾಡುಬುಟ್ಟೀಯಾ.. ಏನೋ ಒಂದು ಆಯ್ತದೆ ಹೋಯ್ತದೆ.. ಅದುಕ್ಕೆಲ್ಲಾ ಕಂಪ್ಲೇಂಟು ಕೊಟ್ರೆ ಸಂಸಾರ ನೆಟ್ಟಗಾಯ್ತದಾ..’ ಅಂದ ಅಪ್ಪನ ಮಾತು ಕೇಳಿ ಅಕ್ಕ ‘ನೆಟ್ಟುಗಾಗದೆ ಇದ್ರೆ ಮುರಿದೇ ಹೋಗ್ಲಿ ಬಿಡು..’ ಅಂದಿದನ್ನು ಕೇಳಿ ಅಪ್ಪ-ಅವ್ವ ಇಬ್ಬರೂ ‘ಕೈ ಮುಗೀತೀವಿ.. ಅಂಗೆಲ್ಲ ಮಾಡಬ್ಯಾಡ ತಾಯಿ..’ ಎಂದು ಬೇಡಿಕೊಂಡದ್ದನ್ನು ಕಂಡು ಅಕ್ಕನಿಗೆ ಏನನ್ನಿಸಿತೋ ಸುಮ್ಮನೆ ಎದ್ದು ಹೋಗಿ ಮಲಗಿಕೊಂಡಳು.
ಅಕ್ಕ ಒಳಗೆ ಹೋಗಿ ಮಲಗಿದ ಮೇಲೆ ಅವ್ವ ‘ಇದ್ಯಾಕೋ ಯಡವಟ್ಟಾಗಂಗೆ ಕಾಣಿಸ್ತದಲ್ಲೋ ಮಾರಾಯಾ..’ಅಂತ ಪಿಸುಮಾತಿನಲ್ಲಿ ಅಪ್ಪನಿಗೆ ಹೇಳಿದಳು. ಅಪ್ಪ ‘ಅದುಕ್ಕೆ ನಾನು ಅವತ್ತೇ ಹೇಳಿದ್ದು.. ಬಡ್ಡಿ ಬಸವಯ್ಯುನ ಹತ್ರ ದುಡ್ಡಿಗೇಳಿದೀನಿ ಅಂತ.. ಇವೆಲ್ಲ ಒಂದೋಗಿ ಇನ್ನೊಂದುಕ್ಕೆ ತಿರುಗಿಕತಾವೆ’ ಅಂದ. ‘ಅಂಗೇ ಮಾಡು ಅತ್ಲಾಗೆ.. ದುಡ್ಡು ಇಸ್ಕಂಡು ಬಂದು ಇದೊಂದು ಸರ್ತಿ ಕೊಟ್ಟು ನೋಡಾನ.. ಮುಂದುಕ್ಕೆ ಅವ್ಳ ಹಣೆಬರ ಹೆಂಗಾಯ್ತದೋ ಅಂಗಾಗ್ಲಿ..’ ಅಂದಳು ಅವ್ವ. ಅಪ್ಪ ಮಾರನೇ ದಿನ ಬಡ್ಡಿಗೆ ದುಡ್ಡು ತಂದು ‘ಬೆಂಗಳೂರಿಗೆ ಹೋಗಾನ ನಡಿಯವ್ವಾ..’ ಅಂದಾಗ ಅಕ್ಕ ಒಪ್ಪಲಿಲ್ಲ. ನಂಗೇ ಕೊಡು ಹೊಸ ಹೊಲಿಗೆ ಮೆಷಿನ್ ತಗೋತಿನಿ ಅಂದಳು. ಅಪ್ಪ-ಅವ್ವ ಇಬ್ಬರೂ ತಮಗೆ ತಿಳಿದಿದ್ದೆಲ್ಲವನ್ನೂ ಹೇಳಿ ಅಕ್ಕನನ್ನು ಒಪ್ಪಿಸುವ ಹೊತ್ತಿಗೆ ಅವರಿಗೆ ಸಾಕಾಗಿ ಹೋಗಿತ್ತು. ಹೇಗೋ ಅಕ್ಕ ಒಪ್ಪಿಕೊಂಡು ‘ ಮುಂದಿನ ಭಾನುವಾರ ಹೋಗೋಣ..’ ಎಂದು ಹೇಳಿ ಮತ್ತೆ ಬೆಂಗಳೂರಿಗೆ ಹೊರಡಲು ಸಿದ್ಧವಾದಳು.
ಅಕ್ಕ ಮಾರನೇ ದಿನ ಎದ್ದವಳೇ ಮೂಲೆಯಲ್ಲಿಟ್ಟಿದ್ದ ಸೂಟುಕೇಸಿನ ದೂಳು ಹೊಡೆದು ತನ್ನ ಬಟ್ಟೆಗಳನ್ನೆಲ್ಲಾ ಮಡಿಚಿಟ್ಟುಕೊಳ್ಳುತಿದ್ದುದನ್ನು ಕಂಡು ಅವ್ವನಿಗೆ ಸಮಾಧಾನವಾಗಿತ್ತು. ನಡುಮನೆಯಲ್ಲಿದ್ದ ದೇವರ ಫೋಟೋದ ಹತ್ತಿರ ಹೋಗಿ ಕೈಮುಗಿದವಳು ಏನು ಬೇಡಿಕೊಂಡಳು ಎಂದು ಪುಟ್ಟನಿಗೆ ಗೊತ್ತಾಗಲಿಲ್ಲ. ಅಕ್ಕ ಅವ್ವ ಮಾಡಿದ್ದ ರೊಟ್ಟಿ ತಿಂದು ‘ಮಧ್ಯಾಹ್ನುದಂಗೆ ಕುಣಿಗ್ಲುಗೆ ಹೋಗಿ ನಾಳೆಯಿಂದ ಬರಲ್ಲ ಅಂತ ಮೇಡಮ್ಮಾರಿಗೆ ಹೇಳಿ ಬತ್ತೀನಿ..’ ಅಂದಾಗ ಅವ್ವ ‘ಅಂಗೇ ಮಾಡವ್ವಾ..’ ಅಂದಳು. ಪುಟ್ಟ ರೊಟ್ಟಿ ತಿಂದು ಬ್ಯಾಗು ನೇತು ಹಾಕಿಕೊಂಡು ಇಸ್ಕೂಲಿಗೆ ಹೋಗುವಾಗ ದಾರಿಯಲ್ಲಿ ಸಿಕ್ಕಿದ ಬಂಬ್ರಾಯಿಸ್ವಾಮಿ ದೇವಸ್ಥಾನದ ಬಳಿ ನಿಂತು ಕೈಮುಗಿದು ‘ಈ ಸತಿನಾದ್ರೂ ನಮ್ಮಕ್ಕಂಗೆ ಒಳ್ಳೇದು ಮಾಡಿ ಚೆನ್ನಾಗಿರಂಗೆ ಮಾಡು..’ ಎಂದು ಬೇಡಿಕೊಂಡು ಇಸ್ಕೂಲಿಗೆ ಹೋದ.
(ಕೊನೆಯ ಭಾಗಕ್ಕೆ ಮುಂದುವರಿಯುತ್ತದೆ...)