ಈ ತರ ತರ ಋತು ಸಂವತ್ಸರ ಸ್ವರ.. ! (ಈ ವಿಜಯನಾಮ ಸಂವತ್ಸರಕ್ಕೆ ಸ್ವಾಗತ ಕೋರುತ್ತ )
......ಹಳತೊಸತು ಮೇಳೈಸಿತೊ ಬೆರೆತು!
--------------------------------------------
ಮೆಲ್ಲಮೆಲ್ಲಗಡಿಯಿಡುತ್ತ ಇನ್ನೇನು ಕಾಲಿಕ್ಕಲಿದ್ದಾಳೆ ಹೊಸ ವರ್ಷದ, ಹೊಸ ಋತುವಿನ 'ಯುಗಾದಿ' ರಾಣಿ (11.ಏಪ್ರಿಲ್); ಹಸಿರು ಬಳೆ ತೊಟ್ಟು ಸಿಂಗರಿಸಿಕೊಂಡ ನವವಧುವಿನಂತೆ ಬರುವ ಈ ಋತುಗಾನಕೆ ಅದೆಲ್ಲಿಯದೊ ಕಸುವು - ಪ್ರತಿ ವರ್ಷವೂ ಎಳಸಾಗಿ, ಬಾಲ್ಯದೆ ಸಾಗಿ, ಪ್ರಾಯದೆ ಮಾಗಿ, ವಯಸಾಗಿ ತಲೆಬಾಗಿ ಮತ್ತದೆ ಚಕ್ರದಲಿ ಮರುಕಳಿಸುವ ಅಸೀಮ ಸಾಮರ್ಥ್ಯ, ಜಾದೂಗಾರಿಕೆ ಹಾಗು ಸರಳ ತಂತ್ರ. ಅದನ್ನಾಗಲೆ ಹಾಡಿ ಹೊಗಳಿ ಕುಣಿದಾಡಿಸಿದ ವರಕವಿ ಅಂಬಿಕಾತನಯದತ್ತರಿಗಿಂತಲೂ ಸೊಗಸಾಗಿ ಹೇಳಲು ಬೇರಾರಿಗೆ ತಾನೆ ಸಾಧ್ಯವೆಲ್ಲಿದೆ? ಮತ್ತೆ ಮತ್ತೆ ಅದನ್ನೆ ಉದಾಹರಿಸಬಹುದಷ್ಟೆ - ಮತ್ತೆ ಮತ್ತೆ ಬರುವ ಅದೇ ಉಗಾದಿಯ ತರದಿ!
ಇನ್ನೊಂದೇ ವಾರದಲಿ ಹೆಜ್ಜೆಯಿಟ್ಟು ಹಳತನು ಸರಿಸಿ, ಹೊಸತಿನ ಪರದೆಯ ತೆರೆಯೆಳೆವ ನಿಸರ್ಗದ ಹಾಡಿಗೆ ದನಿಗೂಡಿಸುವ ಒಂದು ಸಣ್ಣ ಯತ್ನ - ಈ ಕವನದ ರೂಪದಲ್ಲಿ ಹೊರಬಿದ್ದಿದೆ. ಹೊಸ ವರ್ಷದತ್ತ ಹೊಸ ಆಶಯದಿಂದ, ಹೊಸ ನಿರೀಕ್ಷೆಯಿಂದ ನೋಡುವ ಹಾಗೆಯೆ, ಕಳೆದ ಸಾಲನು ಬಿಗಿದಪ್ಪಿ, ನೇವರಿಸಿ ಧನ್ಯವಾದ ಹೇಳಿ ಬೀಳ್ಕೊಡುವ ಹವಣಿಕೆ ಮತ್ತು ಹೊಸತು-ಹಳತಿನ ಸಂಧಿ ಕಾಲದ ಸಂದಿಗ್ದತೆ, ಉಲ್ಲಾಸ, ಆತಂಕಾ, ಕುತೂಹಲ - ಎಲ್ಲವೂ ಮೇಳೈಸಿದ ಕಲಸುಮೇಲೋಗರದ ಸಂಯುಕ್ತಭಾವ ಇದರ ಹಿನ್ನಲೆ.
ಹಳತು ಹಳಸದಿರಲಿ, ಹೊಸತಿಗೆ ಮುನಿಸದಿರಲಿ; ಹೊಸತು ಹಳತ ತೊಳೆಸದಿರಲಿ, ಕಳವಳಿಸದಿರಲಿ. ಎರಡರ ಮಿಳಿತ ಹಳೆ ಬೇರು ಹೊಸ ಚಿಗುರಿನ ಅವಿನಾಭಾವ ಸಂಬಂಧದಲಿ ಸೊಗಡ ಚೆಲ್ಲಲ್ಲಿ ಎಂದು ಹಾರೈಸುತ್ತ, ಹೊಸ ಸಂವತ್ಸರದ ಋತುಗಾನಕ್ಕೆ ಸ್ವಾಗತ ಹೇಳೋಣ!
--------------------------------------------
ಋತು ಸಂವತ್ಸರ ಗುಣ ಮತ್ಸರ
ಬಿಸಿಲು ಮಳೆ ಚಳಿಗ್ಹಾಹಾಕಾರ
ವರ್ಷಪೂರ ಕಾಡೇ ಕುಣಿಸಿದರ
ಹೊಸವರ್ಷಕದ ತೆರೆಯವಸರ!
ಹಳತೆಲ್ಲಾ ಒಳಿತಾಗಿಸೊ ಪೂರ
ಹೊಸತೆಲ್ಲ ಹಳತಾಗೊ ಪ್ರವರ
ಹಳೆಯದ ಹಳಿಯದ ಚಾದರ
ಹೊಸತೆ ಹಸನೆನ್ನದಿಹ ಎಚ್ಚರ!
ಸುರಿದು ಬಿಸಿಲಾಗೊನೆ ಬಿಸಿಲೆ
ಮಳೆಯಾಗುವಳೆ ಮೈಯ್ಬೆವರೆ
ಬಿದ್ದರೆ ಹನಿಗೆ ಫಲವತ್ತಿನ ಬೆಳೆ
ಸದ್ದಿರದೆಲೆ ಚಿಗುರಿ ಹೊಂಬಾಳೆ!
ಚೈತ್ರ ವೈಶಾಖ ಚಿತ್ತ ಋತುಗತ್ತ
ಋತು ಋತುಮತಿ ಕೆಳೆ ನಡೆದಿತ್ತ
ಹೂವ್ವನರಳಿಸೊ ಕಾಲ ಸನ್ನಿಹಿತ
ಪುಷ್ಪವತಿಯಾದಳೆ ಪ್ರಕೃತಿಸುತ್ತ!
ಚಿಗುರೊಡೆದು ಪ್ರಾಯಾಡಿಪಾಯ
ಹುಡುಕೇನೆಲ್ಲ ಉಪಾಯಮಾಯ
ಕಾಲಾ ಜಾರಿದರೆಷ್ಟು ಅಪಾಯವೆ
ಋತೃತು ಮರುಕಳಿಸಿದ ಲಯವೆ!
ತಲೆ ನರೆಸಿ ಮೈನೆರೆದ ಪುಷ್ಪಮತಿ
ಗಣಿಸಿ ಎಣಿಸಿ ಸಾಲುಸಾಲ ಪ್ರಣತಿ
ಬರಲಿ ಬೇವುಬೆಲ್ಲದ ತರದಿ ಶರಧಿ
ಹಾಯೆ ಹರಿಗೋಲೆ ಮನದಂಬುದಿ!
--------------------------------------------
ನಾಗೇಶ ಮೈಸೂರು, ಸಿಂಗಾಪುರದಿಂದ
--------------------------------------------
https://nageshamysore.wordpress.com/
Rating
Comments
ಕವನ ಚೆನ್ನಾಗಿದೆ. ಯುಗಾದಿಯ
ಕವನ ಚೆನ್ನಾಗಿದೆ. ಯುಗಾದಿಯ ಶುಭಾಶಯಗಳು ನಿಮಗೂ ಸಂಪದಿಗರೆಲ್ಲರಿಗೂ.-ಗಣೇಶ.
In reply to ಕವನ ಚೆನ್ನಾಗಿದೆ. ಯುಗಾದಿಯ by ಗಣೇಶ
ಗಣೇಶರವರಿಗೆ,
ಗಣೇಶರವರಿಗೆ,
ತಮ್ಮ ಪ್ರತ್ರಿಕ್ರಿಯೆ ಹಾಗು ಮೆಚ್ಚಿಗೆಗೆ ಧನ್ಯವಾದಗಳು ಮತ್ತು ಹಾಗೆಯೆ ಯುಗಾದಿಯ ಶುಭಕಾಮನೆಗಳು!
-ನಾಗೇಶ ಮೈಸೂರು, ಸಿಂಗಪುರದಿಂದ.
ಕವನ ಚೆನ್ನಾಗಿದೆ ಯುಗಾದಿಯ
ಕವನ ಚೆನ್ನಾಗಿದೆ ಯುಗಾದಿಯ ಶುಭಾಶಯಗಳು
In reply to ಕವನ ಚೆನ್ನಾಗಿದೆ ಯುಗಾದಿಯ by basho aras
ಶೋಭಾ ಅರಸ್ ಅವರೆ,
ಶೋಭಾ ಅರಸ್ ಅವರೆ,
ತಮ್ಮ ಮೆಚ್ಚುಗೆ ಹಾಗು ಪ್ರತಿಕ್ರಿಯೆಗೆ ಧನ್ಯವಾದಗಳು . ತಮಗೂ ಸಹ ಯುಗಾದಿಯ ಹಾರ್ದಿಕ ಶುಭಾಶಯಗಳು! :-)
- ನಾಗೇಶ ಮೈಸೂರು, ಸಿಂಗಪುರದಿಂದ
In reply to ಶೋಭಾ ಅರಸ್ ಅವರೆ, by nageshamysore
ವಿಜಯನಾಮ ಸಂವತ್ಸರ ತಮಗೆಲ್ಲಾ
ವಿಜಯನಾಮ ಸಂವತ್ಸರ ತಮಗೆಲ್ಲಾ ಶುಭತರಲಿ.
In reply to ವಿಜಯನಾಮ ಸಂವತ್ಸರ ತಮಗೆಲ್ಲಾ by venkatesh
ಧನ್ಯವಾದ ವೆಂಕಟೇಶರವರೆ, ತಮಗೂ ಸಹ
ಧನ್ಯವಾದ ವೆಂಕಟೇಶರವರೆ, ತಮಗೂ ಸಹ ಅದೇ ಶುಭಕಾಮನೆಗಳು :-)