ಯುಗಾದಿಯಾಗಲಿ ಜಾಗತಿಕ...!

ಯುಗಾದಿಯಾಗಲಿ ಜಾಗತಿಕ...!

ಕವನ

 

 
ಸೊಗ ಯುಗಾದಿ ಮಧುರ ನುಡಿ 
ಮಾಧುರ್ಯ ತಿದಿಯೊತ್ತಿದ ದುಡಿ
ಹೊಸ ಸಂವತ್ಸರ ಹೊಸತಿನ ಗುಡಿ
ವಿಜಯ ದಾಟಿಸಲಿ ಮೀರಿಸೆಲ್ಲ ಗಡಿ!
 
ಬೇರೂರಿ ಭಾವ ಸಂಪ್ರದಾಯ ಹೊಳೆ
ಹೊಳೆದು ಹರಿಯಲಿ ಹರ್ಷದ ಮಳೆ
ಹಳೆ ದಿರುಸನೆ ಕಳಚಿ ಇಟ್ಟಂತೆ ಕಷ್ಟ
ಹೊಸತುಡುಗೆ ತೊಡೆ ಸುಖದಿಷ್ಟಾನಿಷ್ಟ!
 
ಸರಳತೆ ಸಂಭ್ರಮ ಆಚರಿಸೆ ಚಂದ್ರಮ
ವೆಚ್ಚ ಸೂರ್ಯನೆನೆ ಹಬ್ಬಗಳೆ ಕೊರಮ
ಆಶೆಗಳೊಲೆಗ್ಹೊತ್ತು ಹೋಮ ಸಮ್ಮಿತ್ತು
ಹಿತಮಿತದಲಿರಲಿ ಕಾಲ್ಹಾಸಿಗೆ ಗುಟ್ಟು!
 
ಮನೆಗಿರಲಿ ಸಂಭ್ರಮ ಮನಕೆಲ್ಲ ಸುಗಮ
ಸುಖದೆಸುಖವುಕ್ಕಿಸೊ ಚಿಲುಮೆ ಉಗಮ
ಬೇವಾಗಿ ಬೆಲ್ಲದಡಿ ಕಣ್ಡೂ ಕಾಣದ ಭರ್ತ್ಯ
ನಲಿವಲಿ ಬೆಂದೆ ನೋವು ನಲಿವಾಗೊ ಸತ್ಯ!
 
ಹುಡುಕಿ ಬೇವಿನ್ಹೂವ್ವು ತಡಕಾಡಿ ಮಾವು
ವಿದೇಶಗಳಲುಗಾದಿಯ ಅರಸುತ ನಾವು
ಆದಷ್ಟು ಹಬ್ಬ ಆಚರಿಸೊ ಹವಣಿಕೆ ಸುತ್ತ
ಒಟ್ಟಾಗೆ ಸ್ವಾಗತಿಸೋಣ ಜಗದೆಲ್ಲೆಡೆ ಮೊತ್ತ!
 
- ನಾಗೇಶ ಮೈಸೂರು, ಸಿಂಗಪೂರದಿಂದ