ನಾನಿಲ್ಲದೆ ನನ್ನ ಬದುಕು

ನಾನಿಲ್ಲದೆ ನನ್ನ ಬದುಕು

ಒಂದೆರಡು ದಿನದ ಕೆಳಗೆ my life without me (2003) ಎಂಬ ಚಿತ್ರ ನೋಡಿದೆ. ಕೆನಡಾ ದೇಶದ್ದು. ನಿರ್ದೇಶಕಿ Isabel Coixet ಎಂಬ ಸ್ಪಾನಿಶ್ ಮಹಿಳೆ. (ಈ ಚಿತ್ರ ಸ್ಪಾನಿಶ್ ಮತ್ತು ಫ್ರೆಂಚ್‌ ಭಾಷೆಯಲ್ಲೂ ಒಟ್ಟಿಗೆ ಮಾಡಿದ್ದಾರೆ)

ಹೊಟ್ಟೆಯ ಟ್ಯೂಮರ್‌ನಿಂದ ಸಾವಿಗೆ ಒಂದೆರಡು ತಿಂಗಳು ಮಾತ್ರ ಉಳಿದಿರುವ ಆನ್ ಎಂಬವಳು ರಾತ್ರಿ ಯೂನಿವರ್ಸಿಟಿ ಕ್ಲೀನ್ ಮಾಡುವ 23 ವರ್ಷದ ಹೆಣ್ಮಗಳು. ಗೊತ್ತಾದಾಗಿನಿಂದ ಕಡೆಯವರೆಗೂ ಅವಳ ಪ್ರತಿಕ್ರಿಯೆ ಯಾವುದೇ ಭಾವೋದ್ವೇಗಕ್ಕೂ ಒಳಗಳ್ಳದೆ ಉಳಿಯುವುದು ಒಂದು ವಿಶೇಷ. ಎರಡು ಪುಟ್ಟ ಮಕ್ಕಳು ಮತ್ತು ಗಂಡನ ಜತೆ ತಾಯಿಯ ಮನೆಯ ಹಿತ್ತಲಲ್ಲಿರುವ ಟ್ರೈಲರ್‌ನಲ್ಲಿ ವಾಸ ಮಾಡುವ ಇವಳು (ಕೊಂಚ eclectic ಅನ್ನಿಸುವ ಪಾತ್ರ) ಸಾಯುವ ಮುಂಚೆ ಏನೇನು ಮಾಡಬೇಕು ಎಂದು ಪಟ್ಟಿ ಮಾಡುತ್ತಾಳೆ. ಎಲ್ಲವನ್ನೂ ಯಾವುದೇ ಭಾವೋದ್ವೇಗವಿಲ್ಲದೆ ಮಾಡುತ್ತಾ ಹೋಗುತ್ತಾಳೆ. ಅತಿ ಭಾವುಕವಾಗಬಹುದಾದ ಎಲ್ಲ ಸಾಧ್ಯತೆಗಳಿದ್ದರೂ ಚಿತ್ರ ಸಲೀಸಾಗಿ ಸಾಗುತ್ತದೆ. ಆದರೆ ನೋಡುವವರಿಗೆ ಒಂದು ರೀತಿಯ ಯಾತನೆಯಾಗುವಂತಿದೆ.

ಹದಿನೇಳನೇ ವಯಸ್ಸಿನಲ್ಲಿ ತನ್ನನ್ನು ಚುಂಬಿಸಿದ ಮೊದಲ ಹುಡುಗನ ಜತೆ ಮದುವೆಯಾಗಿ ಎರಡು ಮಕ್ಕಳನ್ನು ಹೆತ್ತಿರುವ ಈಕೆ, ಇನ್ನಾದರೂ ಮತ್ತೊಬ್ಬ ಗಂಡಿನ ಸಹವಾಸ ಪಡೆಯಬೇಕು ಎಂದು ಪಟ್ಟಿಯಲ್ಲಿ ಬರೆಯುತ್ತಾಳೆ. ಈ "ಅನೈತಿಕ ಹಂಬಲ"ದ ಮೇಲೆ ಸಾವಿನ ನೆರಳು ಚಾಚಿರುವುದರಿಂದ ಅದಕ್ಕೆ ಹೇಗೆ ಪ್ರತಿಕ್ರಯಿಸಬೇಕು? ನನಗಂತೂ ಚಿತ್ರ ನೋಡುವಾಗ ಸರಿ/ತಪ್ಪುಗಳ ನಿಲುವಿನಾಚೆ ಆಕೆಯ ಬದುಕಿಗೆ ಸ್ಪಂದಿಸುವಂತಾಯಿತು. ಚಿತ್ರ ಮಾಡಿರುವುದೂ ಮಹಿಳೆಯಾದ್ದರಿಂದ ಆ "ಅನೈತಿಕ"ವೂ ರೋಚಕವಾಗುವ ಹಾಗೆ ಚಿತ್ರಿಸಿಲ್ಲ.

ಪಾಶ್ಚಿಮಾತ್ಯ ದೇಶವೊಂದರ ಕೂಗಾಟ, ಹಾರಾಟವಿಲ್ಲದ ಚಿತ್ರ ಮನಸ್ಸಿನಲ್ಲಿ ಉಳಿಸಿದ್ದು ಆನ್ ಪಾತ್ರ ಮಾಡಿದ ಸಾರಾ ಪಾಲಿ. ಭಾವವನ್ನು ಹದ್ದುಬಸ್ತಿನಲ್ಲಿಟ್ಟುಕೊಂಡು ನಟಿಸಿ ಮನಸ್ಸಿನಲ್ಲಿ ಉಳಿಯುತ್ತಾಳೆ.

Rating
No votes yet