ಚೈತ್ರದಲಿ

ಚೈತ್ರದಲಿ

ಕವನ

ಮೂಡಣದ ಮರೆಯಲ್ಲಿ
ಹೊಂಬೆಳಕ ಮಳೆಯಲ್ಲಿ
ಭಾಸ್ಕರನ ಯುಗರಶ್ಮಿಗಳು
ಚೈತ್ರ ಬಟ್ಟೆಯ ತೊಟ್ಟು
ಜಗದ ಪದತಲದಾಚೆ ಮೈ ಚೆಲ್ಲಿದೆ.

ಹರುಷದ ಹಸಿರು
ಕೊಂಬೆಗಳನ್ನಪ್ಪಿ ಬಂದಾಗ
ಆಕಾಶದೆತ್ತರದ ಬಯಕೆಗಳ ಕನಸುಗಳು
ಚಿಲಿಪಿಲಿಸಿ ರೆಕ್ಕೆ ಚಾಮರ ಬೀಸಿ
ಮುಗುಳು ನಗೆ ಸೂಸಿ
ನಗೆ ಬಟ್ಟಲೊಳಗೆ ಚುಂಚು ತೂರಿ
ಹೀರಿಕೊಳ್ಳುತ್ತವೆ ದಕ್ಕಿದಷ್ಟು ಹಾಲು...!

ಬಾನೆದೆಯ ಅಂಗಳದ
ಬಿರಿದ ನಕ್ಷತ್ರ ಮೊಗ್ಗಿನ ಹಂಬಲಕೆ
ಹಾರಿ ಹೊರಳುತ್ತವೆ
ಮಾಮರದ ಕೊಂಬೆಯಲಿ
ಮಲ್ಲಿಗೆಯ ಲತೆಯಲ್ಲಿ
ದುಂಬಿಗಳ ಝೇಂಕಾರ
ಕೋಗಿಲೆಗಳಾಲಾಪ ಸವಿಯುತ್ತಾ
ಸೃಷ್ಟಿ ಸುಧೆ ತಲೆದೂಗಿದೆ.

ಯುಗಾದಿಯ ಶುಭ ಚೈತ್ರದಲಿ
ಅಜ್ನಾತದ ಆಳಕ್ಕೆ ಬೇರುಗಳು ಬಿಟ್ಟು
ನೆಲಕಚ್ಚಿ ನಿಂತ ಗಿಡದ ಹಸಿರೊಡಲಲ್ಲಿ
ಮೊಗ್ಗರಳಿ ಹೂವಾಗಿ
ಬಂದ ಬಿರುಗಾಳಿ
ಚಳಿ ಮಳೆಯನುಂಡು
ಹುದುಗಿದ್ದ ಭೂರಮೆಯ
ಸುಂದರ ಕವಿತೆಗಳು ಬಿರಿಯುತ್ತವೆ...!!