ವರ್ಗ

ವರ್ಗ

ಹೊಸ ನೀರು, ಹೊಸ ಗಾಳಿ,
ಹೊಸ ಮಣ್ಣು, ಕುಡಿಯೊಡೆದು
ಚಿಗುರಿ ಹಸನಾಗಿರಲು
ಮತ್ತೆ ವರ್ಗ;                                                              
ಹಿತಮನಗಳನು ತಟ್ಟಿ
ನೆನಪುಗಳ ಬುತ್ತಿ
ಬೇರು ಕೀಳುವ ಗಾಯ
ಗುರುತಿರದ ದೂರದೂರಲಿ
ಬೇರೂರುವ ಅನಿವಾರ್ಯ;
ತೆರೆಯಲಲ್ಲೊಂದು  ಕದ
ಆತಂಕ ಬಿಗಿತಗಳ ಕೋಟೆ
ರಾಶಿ ಅನುಭವಗಳ ಮೂಟೆ
ಪಕಳೆಯರಳಿಸುತ ಹೊಸ
ತನವನರಸುವ  ಮನ
ಸ್ನೇಹ ಕೊಳಲನೂದುತ
ಮಾಲೆ ಸೇರಬಯಸುವ
ಮತ್ತೆ ಕಳಚಿ ತೆರಳಲಿರುವ
ನಾವು ಬಿಡಿ ಹೂವುಗಳು

ತರ್ಕವಿಲ್ಲ, ಸರದಿಯಿಲ್ಲ
ಕಟ್ಟಕಡೆಯ ವರ್ಗಕೆ;
ಎಲ್ಲವನೂ ಎಲ್ಲರನೂ
ಬಿಟ್ಟು, ದೇಹ ಕಳಚಿ
ಕೊನೆಪಯಣ ಮೇಲಕೆ
ಪಾಪ ಪುಣ್ಯ ಲೇಪದೊಂದಿಗೆ
ಈ ಸರ್ಗದಲಿ ನಾವು ನೀವು
ಎಲ್ಲರೂ ಒಂಟಿ ಪಯಣಿಗರು

Rating
No votes yet