ಮೋಸದಾಟದ ವಿಷ
(ಸುಖಾಂತವೋ ದುಃಖಾಂತವೋ ತಿಳಿಯದ ಬುದ್ಧ ಜಾತಕ ಕತೆಯನ್ನು ಆಧರಿಸಿದ ಕಥನ ಕವನ)
-೧-
ಊರು ಊರಿಗೆ ಸುತ್ತಿ ಸರಕನು ಕೊಂಡು ಮಾರುತ
ಇರುಳು ಇಳಿದೊಡೆ ಪೇಟೆ ಪಕ್ಕದಿ
ನಿದ್ದೆ ಝಂಪಿಗೆ ಇಳಿವವರೆಗೂ
ಜೂಜನಾಡುವ ರೂಢಿಗಿಳಿದವ ಧನಿಕ ಚುರುಕುಮತಿ.
ಎಂದಿನಂತೇ ಪಣದ ಗಂಟನು
ಹೊತ್ತ ಧನಿಕನು ಜೂಜನಾಡಲು ಕಟ್ಟೆ ಹತ್ತಿದನು.
ಪಣದ ಗಂಟನು ತೂಗಿ ಅಳೆಯುತ ಒಬ್ಬ ಠಕ್ಕಾ ಜೂಜುಕೋರನು ಎದುರು ಬಂದೊಡೆ
ದೃಷ್ಠಿ ಸಂದಿತು; ಮನಸು ಒಪ್ಪಿತು;
ಜೂಜಿನಾಟದ ಮೋಹ ಮೋಜಿಗೆ ಮಾರು ಹೋದವರಾಟವಾಡಲು
ಕೂತೊಡನೆ ಉತ್ಸಾಹದಲ್ಲಿ ಅರಳಿಕೊಂಡವು ಲಕ್ಷ ಕಂಗಳು.
-೨-
ಹಾಸಿದ ಆಟದ ಮನೆಮನೆ ಕಾಯಿಗು
ಉರುಳಿದ ದಾಳ ತೋರುತ ದಾರಿ ರಂಗೇರಿತು ಆಟ
ಏರುತ ಏರುತ ಹೋಯಿತು ಪಂಥಾ
ಆಡುತ ಆಡುತ ಪ್ರತಿ ಸುತ್ತಲ್ಲೂ ಠಕ್ಕನೆ ಗೆಲ್ಲುತ
ಧನಿಕನ ಗಂಟನು ಅರ್ಧಕೆ ಕರಗಿಸಿಬಿಟ್ಟನು ನಗುನಗುತ.
ಅಷ್ಟು ಹೊತ್ತಿಗೆ ದೆಶೆಯು ತಿರುಗಿತು ಗೆಲ್ಲ ತೊಡಗಿದ ಧನಿಕ ಮತ್ತೆ
ಸೋತ ಗಂಟಿನ ತನ್ನ ಭಾಗವ;
ಜೂಜುಕೋರನ ಬುದ್ಧಿ ತಿರುಗಿತು, ಸೋಲಲಾರೆ ಎಂದುಕೊಳ್ಳುತ
ಕತ್ತಲಲ್ಲಿ ಕಣ್ಣು ತಪ್ಪಿಸಿ ದಾಳ ಬಾಯೊಳಗೆಸೆದು ನುಂಗಿದ;
ದಾಳ ಗಂಟಲದಾಟಿದೊಡನೆ-
"ದಾಳ ಕಳೆಯಿತು! ದಾಳ ಕಳೆಯಿತು!" ಎಂದು ಕೂಗಿದ
ಆಟ ನಿಂತಿತು.
ಬಿಟ್ಟ ಕಣ್ಣನು ಬಿಟ್ಟ ಹಾಗೆ ಧನಿಕ ಕೂತನು
ಆಟ ನಿಂತಿತು.
ಠಕ್ಕ ಹೊರಟನು ಮಹಾಸಂಭ್ರಮದಲ್ಲಿ ಬೆನ್ನಿನ ಮೇಲೆ ಏರಿಸಿ ಗೆದ್ದ ಮೂಟೆಯನು.
-೩-
ಮತ್ತೆ ಮರುದಿನ ಸೋತ ಭಾಗವ ಗೆದ್ದುಕೊಳ್ಳಲು ಧನಿಕ ಕೂರಲು
ಮತ್ತೆ ಹಿಂದಿನ ದಿನದ ಹಾಗೇ ಆಡುತಾಡುತ
ಪ್ರತಿಯ ಸುತ್ತಲೂ ಠಕ್ಕ ಗೆದ್ದನು ಆರ್ಧಗಂಟನ್ನು.
ತಿರುಗಿ ಧನಿಕನು ಗೆಲ್ಲ ತೊಡಗಲು
ಜೂಜುಕೋರನ ಬುದ್ಧಿ ತಿರುಗಿತು, ಸೋಲಲಾರೆ ಎಂದುಕೊಳ್ಳುತ
ಕತ್ತಲಲ್ಲಿ ಕಣ್ಣು ತಪ್ಪಿಸಿ ದಾಳ ಬಾಯೊಳಗೆಸೆದು ನುಂಗಿದ;
ದಾಳ ಗಂಟಲದಾಟಿದೊಡನೆ-
"ದಾಳ ಕಳೆಯಿತು! ದಾಳ ಕಳೆಯಿತು!" ಎಂದು ಕೂಗಿದ
ಆಟ ನಿಂತಿತು.
ಇಂದು ಮಾತ್ರ ಠಕ್ಕ ಚಕ್ಕನೆ ದಾಳ ನುಂಗ್ವುದ ನೋಡಿ ಬಿಟ್ಟನು ನಮ್ಮ ಧನಿಕ; ಚುರುಕು ಕಣ್ಣವನು;
ಧೈರ್ಯಗೆಡದೆ ದೂರದಿಂದಲೇ "ನಾಳೆ ಬರುವೆಯ, ಮತ್ತೆ ಆಡುವ" ಎಂದು ಹೊರಟನು.
ಠಕ್ಕಿನಲ್ಲಿ ಗೆಲ್ಲುತಿರುವ ಜೂಜುಕೋರಗೆ ಬುದ್ಧಿ ಕಲಿಸಲು ಮನದೊಳಾಗಲೆ ಮಾಡಿ ನಿರ್ಧಾರ.
-೪-
"ಎರಡು ದಿನವೂ ಬಿಡದೆ ಗೆದ್ದೆನು; ಇಂದು ಧನಿಕನ ಗಂಟು ಕರಗಿಸಿ ಬಿಡುವೆ" ಎನ್ನುತ
ಸೂರ್ಯ ಮುಳುಗುವ ಮೊದಲೆ ಪೇಟೆಗೆ ಬಂದು ಕಾದನು ಠಕ್ಕನು.
ದೊಡ್ಡ ಗಂಟು ಮುಂದಕ್ಕಿಟ್ಟು ಠಕ್ಕನಾಸೆ ಬೆಟ್ಟದಷ್ಟು ಬೆಳೆಸಿ ಧನಿಕ ಕರೆದ ನಗುನಗುತ.
ಮತ್ತೆ ಮುಂಚಿನ ದಿನದ ಹಾಗೇ ಎರಡು ಸುತ್ತನು ಠಕ್ಕ ಗೆದ್ದನು.
ಬಳಿಕ ಧನಿಕನ ಕೈಯ ಗುಣ ಬದಲಾಗಿ ಮತ್ತೆ ಗೆಲ್ಲ ತೊಡಗಲು
ಜೂಜಿನಾಟದಿ ಸೋಲಲರಿಯದ ಠಕ್ಕ ತಡೆಯದೆ
ದಾಳ ತಟ್ಟನೆ ಎಸೆದು ಬಾಯೊಳು ನುಂಗಿ ಸುಮ್ಮನೆ ಕೂತನು.
ಕಂಡು ಕಾಣದ ಹಾಗೆ ಧನಿಕನು ದಾಳ ಕೇಳದೆ ತಾನು ಸುಮ್ಮನೆ ಕೂತನು.
ಉರುಳಿ ಅರೆಕ್ಷಣ; ಮುಖವ ಕಿವುಚುತ ಜೂಜುಕೋರನ ಕಣ್ಣಿನಾಲಿಯು ನೆಲೆಯ ತಪ್ಪಿತು;
ಮೈಯಿ ನಡುಗುತ ಮಣ್ಣಿಗುರುಳಿದ, ಕಾಲು ಬಡಿದರಚಿರಚಿ ಕೂಗಿದ
"ದಾಳ ನುಂಗಿ, ಗೆಲ್ಲಬಯಸಿದೆ; ಈಗ ದಾಳವು ಪ್ರಾಣವನ್ನೇ ನುಂಗುತಿದೆಯಲ್ಲಾ!"
ಸುತ್ತ ಸೇರಿದ ಮಂದಿ ನಿಂತಿರೆ ಏನು ಅರಿಯದೆ, ಧನಿಕ ಹೇಳಿದ-
ಮೋಸದಾಟದ ವಿಷವ ನುಂಗಿಹ,
ಸ್ವಲ್ಪ ಹೊತ್ತಿಗೆ ಮತ್ತೆ ಏಳುವ ಚಿಂತೆ ಬೇಡೆಂದು.
"ಮೋಸದಾಟದ ವಿಷವೆ?" ಎನ್ನಲು
ಮೂರುದಿನವೂ ಜೂಜುಕೋರನು ದಾಳ ನುಂಗುವ ಕಪಡವಾಡುತ
ತನ್ನ ಸೋಲಿನ ಕತೆಯ ಬಣ್ಣಿಸಿ
ಪಾಠ ಕಲಿಸಲು ತಾನು ಮಾಡಿದ ಆಟ ವಿವರಿಸಿದಾ
"ನೆನ್ನೆ ಸೋತವ ಇರುಳು ಮಲಗುವ ಮುನ್ನ ಹುಡುಕೀ,
ಸರಕು ಪೆಟ್ಟಿಗೆಯಿಂದ ಚಂದದ ದಾಳವೆರಡನು ಎತ್ತಿಕೊಂಡೆನು;
ಅದಕೆ ತೆಳ್ಳನೆ ವಿಷದ ಲೇಪವ ಹಚ್ಚಿ ಒಣಗಲು ಬಿಟ್ಟೆನು;
ಇಂದು ಆಟದಿ ವಿಷದ ದಾಳವ ನುಂಗಿ ಠಕ್ಕನು ದಾಳದಿಂದಲೆ ತನ್ನ ಪಾಠವ ಕಲಿಯಬೇಕೆಂದು."
ಇಷ್ಟು ಹೊತ್ತಿಗೆ ಕಣ್ಣು ಮೆಲ್ಲನೆ ತೆರೆದು ನೋಡಿದ ಜೂಜುಕೋರನು
ನಾಚಿ ಮಾಡಿದ ತಪ್ಪನೊಪ್ಪುತ ಗೆದ್ದುದೆಲ್ಲವ ಮತ್ತೆ ಹಿಂದಕೆ ಕೊಟ್ಟು ಹೊರಟನು ತಿರುಗಿ ನೋಡದೆಯೆ.
"ಮೋಸದಾಟದ ವಿಷವ ತೆಗೆಯಲು ವಿಷದ ದಾಳವೆ ಬೇಕು" ಎನ್ನುತ
ದೊಡ್ಟ ಗಂಟನು ಬೆನ್ನಿಗೇರಿಸಿ ಧನಿಕ ತುಳಿದ ತನ್ನೂರ ದಾರಿಯನು...