ಹೊಸ್ತಿಲು

ಹೊಸ್ತಿಲು

ಕವನ

ಸಂಬಂಧಗಳಿಲ್ಲದ ಬದುಕಿನಲಿ
ಅಳುವುದೇ ಸುಖ ನನಗೆ
ಕನಸು ಮನಸುಗಳಿಗೆ ಲೆಕ್ಕವಾಗುತ್ತಾ
ಕುರುಡು ಭಾವನೆಗಳ ಬೆಳೆಸುವುದು
ಸಾಕು ಸಾಕಾಗಿದೆ
ಬದುಕು ಬೊಗಸೆ ಮೀರಿ
ಹದವಾಗುವ ಹೊತ್ತು
ನಿಗೂಢದಲಿ ನಿಶ್ಯಬ್ಧಕ್ಕೆ ಅತ್ತು
ಚಿತ್ತ ಕಲಕುವ ಸಮಯ
ಜೊತೆಯಾಗಿರುವ ಹರೆಯ
ನನ್ನ ಗೆಳೆಯ
ದುಃಖ ದುಮ್ಮಾನಗಳು
ನನಗೆ ಹೊಸತಾಗುವ ಸಮ್ಮಾನಗಳು
ಕಣ್ಣೀರಿನಲ್ಲಿ ಕೈ ತೊಳೆಯುತ್ತಾ ಬದುಕಿದವಳು
ಬಸವಳಿದಾಗ ಸೂರ್ಯನ ಬೆಳಕಲ್ಲಿ
ಬೊಗಸೆ ಹಿಡಿದು
ಹಿಡಿ ಬೆಳಕಿಗೆ
ಕನ್ನಡಿ ಹಿಡಿದವಳು
ಯಾರು ಇಲ್ಲದೆಯೂ ಬದುಕಲು
ನೆನಪುಗಳಲ್ಲಿ ಹುಡುಕುವುದು
ಅಭ್ಯಾಸ ಮಾಡಿಕೊಂಡ ನನಗೆ
ಯೌವನದ ಕೊನೆ ಪುಟದಲ್ಲಿ
ಮೂಕ ಸಂಗಾತಿ ಹೊಸ ಹೊತ್ತಿಗೆ
ಬಾಳ ಬೆಳದಿಂಗಳ
ಕೋಟಿ ನಕ್ಷತ್ರಗಳ
ಆಸೆ ಬಾಗಿಲಿಗೆ
ಒಂದೊಂದಾಗಿ ಪೋಣಿಸಿ
ತೋರಣ ಕಟ್ಟುತ್ತಾ
ಪ್ರೀತಿ ಹೃದಯಗಳನ್ನು ಆಹ್ವಾನಿಸಲು
ಶೃಂಗರಿಸಿದ್ದೇನೆ ಮನದ ಹೊಸ್ತಿಲು