ಗಂಡ-ಹೆಂಡತಿ-ಅತ್ತೆಯ ಕುರಿತ ಮೂರು ಜೋಕುಗಳು!
ಹೆಂಡತಿಯ ಅಥವಾ ಹೆಂಡತಿಯರ ಕುರಿತ ಜೋಕುಗಳನ್ನು ಓದಿ ಸುಸ್ತಾಗಿದ್ದೀರಿ. ಇಲ್ಲಿ ಗಂಡ, ಹೆಂಡತಿ ಮತ್ತು ಅತ್ತೆಯ ಕುರಿತ ಮೂರು ಜೋಕುಗಳಿವೆ. ಓದಿ. ಮೂರೂ ಸನ್ನಿವೇಶಗಳು ನಡೆಯುವುದು ಶವಯಾತ್ರೆಯಲ್ಲಿ.
1- ಗಂಡನ ಕುರಿತ ಜೋಕು:
ಒಬ್ಬಾಕೆಯ ಗಂಡ ದೈವಾಧೀನನಾದ. ಆತನ ಶವಯಾತ್ರೆ ಸಾಗುತ್ತಿತ್ತು. ಜನರೆಲ್ಲಾ ಅವನ ಗುಣಗಾನ ಮಾಡುತ್ತಿದ್ದರು: ಅವನು ಅಷ್ಟು ಒಳ್ಳೆಯವನಾಗಿದ್ದ, ಇಷ್ಟು ಒಳ್ಳೆಯವನಾಗಿದ್ದ, ಪರರಿಗೆ ಸಹಾಯಹಸ್ತ ಚಾಚುತ್ತಿದ್ದ, ಸಮಾಜ ಸೇವಕನಾಗಿದ್ದ.... ಇತ್ಯಾದಿ ಇತ್ಯಾದಿ.
ಜನರ ಮಾತುಗಳನ್ನು ಕೇಳಿಸಿಕೊಂಡ ಸತ್ತವನ ಹೆಂಡತಿ, ತನ್ನ ಪುಟ್ಟ ಮಗನನ್ನು ಕರೆದು ಆತನ ಕಿವಿಯಲ್ಲಿ ಹೇಳಿದಳಂತೆ: `ಹೋಗಿ ಸತ್ತವನು ನಿನ್ನ ಅಪ್ಪ ಹೌದಾ ಅಲ್ಲವಾ ಎಂಬುದನ್ನು ನೋಡಿಕೊಂಡು ಬಾ!'
2- ಹೆಂಡತಿಯ ಕುರಿತ ಜೋಕು:
ಒಬ್ಬಾತನ ಹೆಂಡತಿ ತೀರಿಕೊಂಡಳು. ಶವಯಾತ್ರೆ ಸಾಗುತ್ತಿತ್ತು. ಒಂದು ಇಕ್ಕಟ್ಟಾದ ಸಂಧಿಯಲ್ಲಿ ಸಾಗುತ್ತಿರುವಾಗ ಶವದ ಪೆಟ್ಟಿಗೆಗೆ ಪಕ್ಕದ ಗೋಡೆ ತಾಗಿ ಮುಚ್ಚಳ ತೆರೆದುಕೊಂಡಿತು. ಆಶ್ಚರ್ಯ! ಹೆಂಡತಿ ಎದ್ದು ಕುಳಿತುಕೊಂಡಳು. ಅವಳು ಸತ್ತಿರಲಿಲ್ಲ.
ಕೆಲ ದಿನಗಳು ಕಳೆದ ಮೇಲೆ ಆಕೆ ಮತ್ತೊಮ್ಮೆ ಸತ್ತಳು! ಈ ಬಾರಿಯೂ ಶವಯಾತ್ರೆ ಸಾಗುತ್ತಿತ್ತು. ಕಳೆದ ಬಾರಿ ಯಾವ ಸಂಧಿಯಲ್ಲಿ ಗೋಡೆ ತಾಗಿ ಪೆಟ್ಟಿಗೆಯ ಮುಚ್ಚಳ ತೆಗೆಯಲ್ಪಟ್ಟಿತ್ತೋ ಆ ಜಾಗದ ಬಳಿ ಬಂದಾಗ ಶವಪೆಟ್ಟಿಗೆ ಹೊರುತ್ತಿರುವವರ ಬಳಿ ಗಂಡ ಹೇಳಿದನಂತೆ: `ಹುಷಾರು, ಗೋಡೆಗೆ ತಾಗಿಸಬೇಡಿ!'
3- ಅತ್ತೆಯ ಕುರಿತ ಜೋಕು:
ಒಬ್ಬನ ಅತ್ತೆ (ಹೆಂಡತಿಯ ತಾಯಿ) ತೀರಿಕೊಂಡಳು. ಆಕೆ ತೀರಿಕೊಂಡಿದ್ದು ಆತನ ಮನೆಯ ನಾಯಿ ಕಚ್ಚಿ. ಶವದ ಮೆರವಣಿಗೆ ಸಾಗುತ್ತಿತ್ತು. ಮುಂದೆ ಶವದ ಪೆಟ್ಟಿಗೆ, ಅದರ ಹಿಂದೆ ಸತ್ತವಳ ಅಳಿಯ, ಆ ಅಳಿಯನ ಹಿಂದೆ ಆಕೆಯನ್ನು ಕಚ್ಚಿದ ನಾಯಿ ಮತ್ತು ಆ ನಾಯಿಯ ಹಿಂದೆ ಜನರ ಉದ್ದನೆಯ ಸಾಲು.
ಇದನ್ನೆಲ್ಲ ನೋಡಿದ ದಾರಿಹೋಕನೊಬ್ಬನಿಗೆ ಆಶ್ಚರ್ಯವಾಯಿತು. ಸೀದಾ ಆ ಅಳಿಯನ ಬಳಿ ಹೋಗಿ ಕೇಳಿದ: `ಸ್ವಾಮೀ, ಯಾರು ಸತ್ತವರು? ಏನಾಯಿತು?'
ಅಳಿಯ ಹೇಳಿದ: `ಸತ್ತವಳು ನನ್ನ ಅತ್ತೆ. ಇಲ್ಲಿದೆಯಲ್ಲ, ಈ ನಾಯಿ ಕಚ್ಚಿದ್ದರಿಂದ ಆಕೆ ಸತ್ತುಹೋದಳು.'
ಏನೋ ಯೋಚಿಸಿದ ದಾರಿಹೋಕ ಆ ಅಳಿಯನ ಬಳಿ ಮತ್ತೆ ಕೇಳಿದ: `ಸ್ವಾಮೀ, ಈ ನಾಯಿಯನ್ನು ನನಗೆ ಕೊಡುತ್ತೀರಾ?'
ಅಳಿಯ ಸಿಟ್ಟಿನಿಂದ ಗದರಿದ: `ಕ್ಯೂ ಕಾಣಿಸುತ್ತಿಲ್ಲವೇ? ಹೋಗಿ ಸೇರಿಕೋ!