೩. ಲಲಿತಾ ಸಹಸ್ರನಾಮ – ಧ್ಯಾನ ಶ್ಲೋಕಗಳಿಗೆ ಮುನ್ನುಡಿ
ಈ ಲೇಖನವು Manblunder. comನಲ್ಲಿ ಶ್ರೀಯುತ ವಿ. ರವಿಯವರು ಬರೆದ Lalitha Sahasranma - Introduction to Dhyan verses ಆಂಗ್ಲ ಲೇಖನದ ಮೂಲ ಬರಹವಾಗಿದೆ. ಇದರ ಕೊಂಡಿ: http://www.manblunder.com/2012/06/lalita-sahasranama-introduction-to.html (ಈ ಮಾಲಿಕೆಯನ್ನು ಅವರ ಒಪ್ಪಿಗೆ ಪಡೆದು ಇಲ್ಲಿ ಪ್ರಕಟಸಲಾಗುತ್ತಿದೆ. )
******
ಲಲಿತಾ ಸಹಸ್ರನಾಮದಲ್ಲಿ ಲಲಿತಾಂಬಿಕೆಯನ್ನು ಸಾಕ್ಷಾತ್ಕರಿಸಿಕೊಳ್ಳಲು/ಕಲ್ಪಿಸಿಕೊಳ್ಳಲು ನಾಲ್ಕು ಧ್ಯಾನ ಶ್ಲೋಕಗಳಿವೆ. ’ಸಿಂಧೂರಾರುಣ ವಿಗ್ರಹಂ’ ಎಂದು ಪ್ರಾರಂಭವಾಗುವ ಮೊದಲನೆಯ ಸ್ತೋತ್ರವು ಬಹುಶಃ ಎಂಟು ವಾಚ್ (ವಾಕ್) ದೇವತೆಗಳಿಂದ ರಚಿಸಲ್ಪಟ್ಟಿರಬೇಕು. ಎರಡನೆಯದಾದ ಕರುಣಾ-ತರಂಗಿತಾಕ್ಷೀಮ್ ಸ್ತೋತ್ರವನ್ನು ತ್ರಿಮೂರ್ತಿಗಳಾದ ಬ್ರಹ್ಮ, ವಿಷ್ಣು ಮತ್ತು ಮಹೇಶ್ವರರ ದಿವ್ಯ ಅವತಾರವಾದ ದತ್ತಾತ್ರೇಯ ಸ್ವಾಮಿಯು ರಚಿಸಿದ್ದಾರೆಂದು ಭಾವಿಸಲಾಗಿದೆ. ದತ್ತ ಎಂದರೆ ಕೊಟ್ಟದ್ದು ಅಥವಾ ಕಾಣಿಕೆಯಾಗಿ ಇತ್ತದ್ದು ಎಂದು ಅರ್ಥೈಸಬಹುದು. ದಿವ್ಯ ತ್ರಿಮೂರ್ತಿಗಳು ತಮ್ಮ ಅಂಶದಿಂದ ಹುಟ್ಟಿದ ದತ್ತಾತ್ರೇಯನ ಹೆಸರಿನ ಎರಡನೆಯ ಭಾಗವಾದ ಅತ್ರೇಯವು ಅವನು ಅತ್ರಿ ಮತ್ತು ಅನುಸೂಯ ಋಷಿ ದಂಪತಿಗಳ ಪುತ್ರ ಎನ್ನುವುದನ್ನು ಸೂಚಿಸುತ್ತದೆ. ನಾಲ್ಕನೆಯ ಸ್ತೋತ್ರವು ಆದಿ ಶಂಕರಾಚಾರ್ಯರಿಂದ ರಚಿಸಲ್ಪಟ್ಟಿದೆ. ’ಧ್ಯಾಯೇತ್ ಪದ್ಮಾಸನಸ್ಥಾಮ್’ ಎಂದು ಪ್ರಾರಂಭವಾಗುವ ಮೂರನೆಯ ಸ್ತೋತ್ರವನ್ನು ಯಾರು ರಚಿಸಿದ್ದಾರೆನ್ನುವುದಕ್ಕೆ ಯಾವುದೇ ಮಾಹಿತಿ ಇಲ್ಲ. ದೇವಿಯ ಎಲ್ಲಾ ಧ್ಯಾನ ಶ್ಲೋಕಗಳಲ್ಲಿಯೂ ಉದಯಿಸುವ ಸೂರ್ಯನನ್ನು ಹೋಲುವ ಅವಳ ಕೆಂಪು ಬಣ್ಣದ ಕುರಿತಾಗಿ ವಿಶೇಷವಾದ ವರ್ಣನೆಯಿದೆ. ಲಲಿತಾಂಬಿಕೆಯು ಶಿಲ್ಪಿಯಿಂದ ಕಡೆಯಲ್ಪಟ್ಟ ಅಂದವುಳ್ಳವಳು. ಅವಳ ಬಣ್ಣ ಅಥವಾ ಸೌಂದರ್ಯಕ್ಕಿಂತ ಅವಳ ಗುಣಗಳು ಅಗಣಿತವಾಗಿವೆ. ಆಕೆಯು ಜಗನ್ಮಾತೆ, ಈ ಅಂಶವನ್ನು ಸಹಸ್ರನಾಮದಲ್ಲಿ ಒತ್ತುಕೊಟ್ಟು ಅವಳನ್ನು ‘ಶ್ರೀ ಮಾತಾ’ ಎಂದು ಸಂಭೋದಿಸುವುದರ ಮೂಲಕ ಅವಳನ್ನು ಜಗದ ತಾಯಿ ಎಂದು ಕರೆಯಲಾಗಿದೆ. ದೇವಿಯು ಸಿಂಹಾಸನದ ಮೇಲೆ ಕುಳಿತಿದ್ದು ಅವಳಿಗೆ ಲಕ್ಷ್ಮಿ ಮತ್ತು ಸರಸ್ವತಿಯರು ಇಕ್ಕೆಲಗಳಲ್ಲಿ ನಿಂತು ಅವಳಿಗೆ ಚಾಮರ ಸೇವೆಗೈಯ್ಯುತ್ತಿದ್ದಾರೆ. ಅವಳನ್ನು ‘ಪರಾಭಟ್ಟಾರಕಾ’ ಅಂದರೆ ರಾಣಿಯರಿಗೆಲ್ಲಾ ಮಹಾರಾಣಿ ಎಂದು ಕರೆದಿದ್ದಾರೆ. ಅವಳನ್ನು ‘ಪರಾಶಕ್ತಿ’, ‘ಪರಮೇಶ್ವರಿ’ ಮತ್ತು ‘ರಾಜರಾಜೇಶ್ವರಿ’ ಎಂದೂ ಕರೆದಿದ್ದಾರೆ. ಅವಳು ಪರಶಿವನ ಅರ್ಧಾಂಗಿನಿ. ರುದ್ರ ಮತ್ತು ಪರಶಿವನು ಬೇರೆ ಬೇರೆ ಎನ್ನುವುದನ್ನು ತಿಳಿಯಿರಿ. ಅವಳನ್ನು ‘ಶ್ರೀ ವಿದ್ಯಾ’ ಮತ್ತು ‘ದಶ ಮಹಾವಿದ್ಯಾ’ ಎಂದೂ ಪೂಜಿಸುತ್ತಾರೆ. ಈ ಎರಡೂ ರೂಪಗಳ ಆರಾಧನೆಯಲ್ಲಿ ಸಾಕಷ್ಟು ರಹಸ್ಯಗಳು ಅಡಗಿದ್ದು ಅವುಗಳನ್ನು ಗುರುಮುಖೇನವೇ ತಿಳಿಯತಕ್ಕದ್ದು. ದಶ ಮಹಾವಿದ್ಯಾ ಆರಾಧನೆಯ ವಿಧಾನದಲ್ಲಿ ಹಲವಾರು ವಿಧಿಗಳಿವೆ. ಅವುಗಳು ಅತ್ಯಂತ ಶಕ್ತಿಯುತವುಗಳಾಗಿದ್ದು ಫಲಿತಗಳೂ ಕೂಡ ನಿಶ್ಚಿತರೂಪದವುಗಳಾಗಿವೆ.
ಅತ್ಯುನ್ನತ ಸ್ಥಿತಿಯಲ್ಲಿ ಶಿವ ಮತ್ತು ಶಕ್ತಿಯರನ್ನು ‘ಮಹಾ ಕಾಮೇಶ್ವರ’ ಮತ್ತು ‘ಮಹಾ ಕಾಮೇಶ್ವರಿ’ ಎಂದು ಕರೆಯುತ್ತಾರೆ. ಅವುಗಳು ಅಂತಿಮವಾದವುಗಳು ಮತ್ತು ಪರಿಪೂರ್ಣವಾದವುಗಳು. ಆ ಪರಿಪೂರ್ಣರೂಪದಲ್ಲಿ ಅವಳನ್ನು ‘ಪ್ರಕಾಶ ವಿಮರ್ಶ ಮಹಾ ಮಾಯಾ ಸ್ವರೂಪಿಣಿ’ ಎಂದು ಕರೆಯುತ್ತಾರೆ. ಅವರಿಬ್ಬರಿಗೂ ಈ ಪರಿಪೂರ್ಣ ರೂಪದಲ್ಲಿ ನಾಲ್ಕು-ನಾಲ್ಕು ಕೈಗಳಿರುತ್ತವೆ ಮತ್ತು ಅವರಿಬ್ಬರೂ ಒಂದೇ ತೆರೆನಾದ ಅಸ್ತ್ರಗಳನ್ನು ಹಿಡಿದಿರುತ್ತಾರೆ; ಅವುಗಳೆಂದರೆ ಪಾಶ, ಅಂಕುಶ, ಕಬ್ಬಿನ ಜಲ್ಲೆಯ ಬಿಲ್ಲು ಮತ್ತು ಹೂವಿನಿಂದ ಮಾಡಲ್ಪಟ್ಟ ಬಾಣಗಳು. ಇಬ್ಬರಿಗೂ ತಮ್ಮ ಕಿರೀಟಗಳಲ್ಲಿ ಅರ್ಧಚಂದ್ರನಿರುತ್ತಾನೆ. ಮಹಾಕಾಮೇಶ್ವರನು ಶುದ್ಧನಾಗಿದ್ದು, ಸ್ಪಟಿಕದಂತೆ ಪಾರದರ್ಶಕವಾಗಿದ್ದು ವರ್ಣರಹಿತನಾಗಿರುತ್ತಾನೆ. ಅವನು ಸಿಂಹಾಸನದ ಮೇಲೆ ಎಡಗಾಲನ್ನು ಮಡಚಿಕೊಂಡು ತನ್ನ ಬಲಗಾಲನ್ನು ನೆಲದ ಮೇಲೂರಿ ಕುಳಿತು ಕೊಂಡಿರುತ್ತಾನೆ. ಕಾಮೇಶ್ವರಿಯು ಕೆಂಪು ಬಣ್ಣದ ಸೌಂದರ್ಯವೇ ಮೈವೆತ್ತಂತಿದ್ದು, ಆನಂದ ಮತ್ತು ಕರುಣೆಯಿಂದ ಪರಿಪೂರ್ಣವಾದ ಮಂದಹಾಸವನ್ನು ಬೀರುತ್ತಾ, ತನ್ನ ಭಕ್ತರಿಗೆ ಯಾವಾಗಲೂ ಸಹಾಯ ಮಾಡುವ ಆತುರತೆಯಿಂದ ಕೂಡಿದವಳಾಗಿದ್ದು, ಮಹಾಕಾಮೇಶ್ವರನೆಡೆಗೆ ಲಜ್ಜೆ ತುಂಬಿದ ಭಾವದೊಂದಿಗೆ ನಡೆಯುವವಳಾಗಿದ್ದಾಳೆ. ಕಾಮೇಶ್ವರನ ಶುದ್ಧ, ಪಾರದರ್ಶಕ ಮತ್ತು ವರ್ಣರಹಿತ ರೂಪವು, ಅವನೆಡೆಗೆ ಕಾಮೇಶ್ವರಿಯು ಇಡುವ ಒಂದೊಂದು ಹೆಜ್ಜೆಗನುಗುಣವಾಗಿ ಕೆಂಪು ಕೆಂಪಾಗುತ್ತಾ ಹೋಗುತ್ತದೆ. ವೈಯ್ಯಾರದಿಂದ ಹೆಜ್ಜೆಯನ್ನಿಡುವುದಕ್ಕೆ ಹೆಸರಾಗಿರುವ ಹಂಸಗಳು ಕೂಡಾ ಕಾಮೇಶ್ವರನೆಡೆಗೆ ಒಂದೊಂದಾಗಿ ಹೆಜ್ಜೆಯಿಡುವ ಕಾಮೇಶ್ವರಿಯ ನಡಿಗೆಯನ್ನು ನೋಡಿ ನಾಚಿಕೊಳ್ಳುತ್ತವೆ. ಮಹಾಕಾಮೇಶ್ವರನು ಅವಳನ್ನು ನೋಡುತ್ತಲೆ ಪ್ರೇಮದ ನಗೆಯನ್ನು ಬೀರುತ್ತಾನೆ. ಆಕೆಯು ಕಾಮೇಶ್ವರನ ಎಡತೊಡೆಯ ಮೇಲೆ ತನ್ನ ಬಲಗಾಲನ್ನು ಮಡಿಚಿಕೊಂಡು ಕುಳಿತು, ತನ್ನ ಎಡಗಾಲನ್ನು ಮಾಣಿಕ್ಯಗಳಿಂದ ಕೂಡಿದ ಪಾತ್ರೆಯೊಂದರಲ್ಲಿ ಇರಿಸುತ್ತಾಳೆ. ಅವಳು ತನ್ನ ಕಾಲನ್ನು ಮಾಣಿಕ್ಯದ ಪಾತ್ರೆಯಲ್ಲಿ ಇರಿಸುವುದೇ ತಡ ಅವುಗಳ ಕೆಂಪು ಪ್ರಭೆಯು ಎಲ್ಲೆಡೆ ಪ್ರತಿಫಲಿಸುತ್ತದೆ. ಕಾಮೇಶ್ವರಿಯು ಕಾಮೇಶ್ವರನ ತೊಡೆಯ ಮೇಲೆ ಕುಳಿತ ಕೂಡಲೇ ಅವನ ರೂಪವು ಕೆಂಪುವರ್ಣವಾಗಿ ಮಾರ್ಪಾಡಾಗುತ್ತದೆ. ಹೀಗೆ ಅವರಿಬ್ಬರೂ ಪ್ರಭೆಯಿಂದ ಕಂಗೊಳಿಸುತ್ತಿರುವಾಗ ಅವರನ್ನು ನೋಡಿದ ದೇವತೆಗಳು ಇವರಿಂದ ಹೊರಟ ಕೆಂಪು ಕಿರಣಗಳನ್ನು ನೋಡಿ ಅದು ಸೂರ್ಯನಿಂದ ಬಂದದ್ದು ಎಂದು ತಪ್ಪಾಗಿ ಭಾವಿಸುತ್ತಾರೆ. ಈ ದಿವ್ಯ ದಂಪತಿಗಳು ಯಾವಾಗಲೂ ಕೂಡಿಯೇ ಇರುತ್ತಾರೆ ಆದ್ದರಿಂದ ಲಲಿತಾ ಸಹಸ್ರನಾಮದ ಕಡೆಯ ಶ್ಲೋಕದ ಮುಂದಿನದರಲ್ಲಿ ’ಶಿವಶಕ್ತಿ ಐಕ್ಯ ರೂಪಿಣಿ’ ಎಂದು ಕರೆದಿದ್ದಾರೆ. ಈ ನಾಮವು ಮೇಲಿನ ವಿವರಣೆಯನ್ನು ಸೂಕ್ತವಾಗಿ ವಿಶದಪಡಿಸುತ್ತದೆ. ಈ ರೂಪವನ್ನು ಅಂತಿಮವಾದದ್ದು ಎಂದು ಕರೆಯುತ್ತಾರೆ; ಏಕೆಂದರೆ ಇದನ್ನು ಹೊರತು ಪಡಿಸಿ ಅಂದರೆ ಶಿವ ಶಕ್ತಿಯರ ಐಕ್ಯರೂಪಕ್ಕೆ ಅತೀತವಾದದ್ದು ಮತ್ತೇನೂ ಇಲ್ಲವೆನ್ನುವುದನ್ನು ಈ ಮೂಲಕ ಪ್ರಸ್ತುತಪಡಿಸುತ್ತಾರೆ.