೪. ಲಲಿತಾ ಸಹಸ್ರನಾಮ - ಧ್ಯಾನ ಶ್ಲೋಕ ೧
VERSE 1
सिन्दूरारुण-विग्रहां त्रि-नयनां माणिक्य मौलि स्फुरत्
तारानायक-शेकरां स्मितमुखीं आपीन वक्षोरुहाम्।
पाणिभ्यां अलिपूर्ण-रत्न-चषकम् रक्तोत्पलम् बिभ्रतीं
सौम्यां रत्न-घटस्थ-रक्त-चरणां ध्यायेत्परामम्बिकाम्॥
ಶ್ಲೋಕ ೧
ಸಿಂಧೂರಾರುಣ-ವಿಗ್ರಹಾಂ ತ್ರಿ-ನಯನಾಂ ಮಾಣಿಕ್ಯ ಮೌಲಿ ಸ್ಫುರತ್
ತಾರಾನಾಯಕ-ಶೇಖರಾಂ ಸ್ಮಿತಮುಖೀಂ ಆಪೀನ ವಕ್ಷೋರುಹಾಮ್|
ಪಾಣಿಭ್ಯಾಂ ಅಲಿಪೂರ್ಣ-ರತ್ನ-ಚಷಕಮ್ ರಕ್ತೋತ್ಪಲಮ್ ಬಿಭ್ರತೀಂ
ಸೌಮ್ಯಾಂ ರತ್ನ-ಘಟಸ್ಥ-ರಕ್ತ-ಚರಣಾಂ ಧ್ಯಾಯೇತ್ಪರಾಮಮ್ಬಿಕಾಮ್||
ಸಿಂಧೂರಾರುಣ ವಿಗ್ರಹಮ್ - ಸಿಂಧೂರವೆಂದರೆ ಸ್ತ್ರೀಯರು ತಮ್ಮ ಹಣೆಗೆ ಇರಿಸುವ ಕುಂಕುಮದಂತೆ ಕೆಂಪಾಗಿರುವುದು. ಅರುಣಮ್ ಎಂದರೆ ಉದಯಿಸುವ ಸೂರ್ಯ; ಅದು ಕೂಡಾ ಕೆಂಪು ವರ್ಣದ್ದಾಗಿರುತ್ತದೆ. ಲಲಿತಾಂಬಿಕೆಯ ಮೈಬಣ್ಣವು ಕೆಂಪು ರಂಗಿನದಾಗಿರುತ್ತದೆ. ಅವಳ ಮೈಬಣ್ಣದ ಕುರಿತಾಗಿ ಎರಡು ಉಲ್ಲೇಖಗಳೇಕಿವೆ? ಒಂದು ಕುಂಕುಮದ ಬಣ್ಣವನ್ನು ತಿಳಿಸಿದರೆ ಮತ್ತೊಂದು ಉದಾಹರಣೆ ಉದಯಿಸುವ ಸೂರ್ಯನ ಅಥವಾ ಅರುಣನ ಬಣ್ಣವನ್ನು ಸೂಚಿಸುತ್ತದೆ. ಅವಳ ಮೈಬಣ್ಣವನ್ನು ಇವೆರಡರಲ್ಲಿ ಯಾವುದಾದರು ಒಂದರೊಡನೆ ಹೋಲಿಸಿದರೆ ಆಗುವುದಿಲ್ಲವೇ? ಬಹುಶಃ ಅವಳ ಗಾಢ ಕೆಂಪು ವರ್ಣವನ್ನು ಬಣ್ಣಿಸಲು ಶಬ್ದಶಃ ಅರ್ಥದಲ್ಲಿ ಒಂದು ಶಬ್ದವು ಸಾಲದೆಂದು ಭಾವಿಸಿ ವಾಚ್ ದೇವತೆಗಳು ಅದಕ್ಕೆ ಒತ್ತು ಕೊಡುವ ಉದ್ದೇಶದಿಂದ ಎರಡು ಉದಾಹರಣೆಗಳನ್ನು ಕೊಟ್ಟಿದ್ದಾರೆ. ವಿಗ್ರಹವೆಂದರೆ ಅವಳ ಮೂರ್ತರೂಪ. ತ್ರಿನಯನಮ್ ಎಂದರೆ ಮೂರು ಕಣ್ಣುಳ್ಳವಳು. ಮೂರನೆಯ ಕಣ್ಣೆಂದರೆ ಅದರ ಶಬ್ದಶಃ ಅರ್ಥವನ್ನು ತೆಗೆದುಕೊಳ್ಳಬಾರದು. ಮೂರನೆಯ ಕಣ್ಣೆಂದರೆ ಅದು ಜ್ಞಾನದ ಕಣ್ಣು. ನಿಮಗೆ ಜ್ಞಾನೋದಯವಾದರೆ ಯಾವುದೇ ಪ್ರಚೋದನೆಯಿಲ್ಲದೆ ಮೂರನೆಯ ಕಣ್ಣು ತನ್ನಷ್ಟಕ್ಕೇ ತಾನೇ ತೆರೆದುಕೊಳ್ಳುತ್ತದೆ. ದೇವರುಗಳಿಗೆ ನಮಗಿಂತ ಹೆಚ್ಚಿನ ಜ್ಞಾನವಿರುತ್ತದೆ; ಆದ್ದರಿಂದ ದೇವರುಗಳನ್ನು ತ್ರಿನೇತ್ರರೆಂದು ವರ್ಣಿಸುತ್ತಾರೆ. ಈ ಮೂರು ಕಣ್ಣುಗಳು ಸೂರ್ಯ, ಚಂದ್ರ ಮತ್ತು ಅಗ್ನಿಯನ್ನು ಅಥವಾ ಬಹುಶಃ ಆಜ್ಞಾಚಕ್ರವನ್ನು ಸೂಚಿಸುತ್ತವೆ.
’ಮಾಣಿಕ್ಯ ಮೌಲಿ ಸ್ಫುರಾತ್’ - ಎಂದರೆ ಅವಳು ಮಾಣಿಕ್ಯಕಚಿತವಾದ ಕಿರೀಟವನ್ನು ಧರಿಸಿರುವವಳು (ಮಾಣಿಕ್ಯಗಳು ಕೆಂಪು ಬಣ್ಣದಿಂದ ಕೂಡಿರುತ್ತವೆ) ಮತ್ತು ಶಿರದಲ್ಲಿ ಮೌಳಿ ಎಂದರೆ ಚಂದ್ರನನ್ನು ಧರಿಸಿದವಳಾಗಿದ್ದಾಳೆ. ತಾರಾನಾಯಕ ಶೇಖರಮ್ - ತಾರಾ ಎಂದರೆ ನಕ್ಷತ್ರಗಳು. ಚಂದ್ರನು ತಾರೆಗಳ ಮುಖ್ಯಸ್ಥ(ನಾಯಕ)ನೆಂದು ಪರಿಗಣಸಲ್ಪಟ್ಟಿದ್ದಾನೆ. ದೇವಿಯು ತನ್ನ ಶಿರದಲ್ಲಿ ತಾರೆಗಳ ಮುಖ್ಯಸ್ಥನನ್ನು ಅಂದರೆ ಚಂದ್ರನನ್ನು ಧರಿಸಿದವಳಾಗಿದ್ದಾಳೆ. ಅವಳು ತನ್ನ ಶಿರದಲ್ಲಿ ಚಂದ್ರನನ್ನು ಧರಿಸಿರುವುದನ್ನು ಒತ್ತುಕೊಡುವುದಕ್ಕಾಗಿ ಎರಡುಬಾರಿ ಪ್ರಸ್ತಾಪಿಸಲಾಗಿದೆ. ಮಾಣಿಕ್ಯಗಳು ಕೆಂಪು ಪ್ರಭೆಯಿಂದ ಕಂಗೊಳಿಸಲು ಅದಕ್ಕೆ ಚಂದ್ರನ ಬೆಳಕು ಕಾರಣವೆಂದು ಅರ್ಥೈಸಬಹುದು.
’ಸ್ಮಿತ ಮುಖೀಂ’ - ಸ್ಮಿತ ಎಂದರೆ ನಗು ಮತ್ತು ಮುಖಿಮ್ ಎಂದರೆ ಮುಖದವಳು. ಅವಳಿಗೆ ನಗುಮುಖವಿದೆ ಅಥವಾ ಅವಳು ಯಾವಾಗಲೂ ಕಿರುನಗೆ ಸೂಸುತ್ತಿರುತ್ತಾಳೆ. ಎಲ್ಲಾ ದೇವರುಗಳಿಗೂ ನಗುಮುಖವಿರುತ್ತದೆ ಆದರೆ ಅದರಲ್ಲಿ ಲಲಿತಾಂಬಿಕೆಯ ವಿಶೇಷವೇನು? ಇದಕ್ಕೆ ಉತ್ತರವು ನಮಗೆ ’ಮಹಾಲಾವಣ್ಯ ಸೇವತಿ’ ಎನ್ನುವ ೪೮ನೇ ನಾಮದಲ್ಲಿ ದೊರೆಯುತ್ತದೆ. ಅವಳು ವಿಶ್ವದಲ್ಲಿರುವ ಎಲ್ಲಾ ಸೌಂದರ್ಯದ ಮೂರ್ತರೂಪ ಮತ್ತು ಅವಳಿಗೆ ಹೋಲಿಸಬಹುದಾದ ಯಾವುದೇ ಸೌಂದರ್ಯವು ಪ್ರಪಂಚದಲ್ಲಿ ನಮಗೆ ಸಿಗುವುದಿಲ್ಲ. ಅವಳನ್ನು ಪರಬ್ರಹ್ಮವೆಂದು ವಿವಿಧ ನಾಮಾವಳಿಗಳಲ್ಲಿ ಹೇಳಲಾಗಿದೆ. ಪರಬ್ರಹ್ಮವು ಅಂತಿಮ ಆನಂದ ಅಥವಾ ಪರಮಾನಂದವಾಗಿದೆ. ಲಲಿತಾಂಬಿಕೆಯಲ್ಲಿ ಸೌಂದರ್ಯ ಮತ್ತು ಆನಂದಗಳು ಮೇಳೈಸಿವೆ. ಸೌಂದರ್ಯವು ಭೌತಿಕ ದೇಹದ ಕುರಿತದ್ದಾಗಿದ್ದರೆ ಸಂತೋಷವು ಮನಸ್ಸನ್ನು ಕುರಿತದ್ದಾಗಿದೆ. ಅವಳ ಆನಂದ ತುಂಬಿದ ಮನಸ್ಸು ಅವಳ ಭೌತಿಕ ದೇಹದಲ್ಲಿ ಪ್ರತಿಬಿಂಬಿತವಾಗಿ ಅವಳ ಸೌಂದರ್ಯಕ್ಕೆ ಇಂಬು ಕೊಡುತ್ತದೆ. ಮುಖವು ಮನಸ್ಸಿನ ಪ್ರತಿಬಿಂಬವೆಂದು ಹೇಳುತ್ತಾರೆ ಆದ್ದರಿಂದ ಒಬ್ಬ ವ್ಯಕ್ತಿಯ ಗುಣಗಳನ್ನು ಅವನ ಮುಖದ ಲಕ್ಷಣಗಳಿಂದ ಗುರುತಿಸಬಹುದು. ಯಾರು ಬಹಳಷ್ಟು ಉಪಾಸನೆಯನ್ನು ಕೈಗೊಳ್ಳುತ್ತಾರೋ ಅವರ ಮುಖದಲ್ಲಿ ತೇಜಸ್ಸು ಅಥವಾ ಹೊಳಪು ಇರುತ್ತದೆ. ಉಪಾಸನೆಯೆಂದರೆ ಐದು ವಿಧವಾದ ಪೂಜಾ ಪದ್ಧತಿಗಳು - ಅಭಿಗಮನ ಅಥವಾ ಬಳಿಸಾರುವುದು, ಉಪಾದಾನ ಅಥವಾ ಸಮರ್ಪಣಾ ಭಾವನೆ, ಐಜ್ಯ ಅಥವಾ ಆಹುತಿ, ಸ್ವಾಧ್ಯಾಯ ಅಥವಾ ಮಂತ್ರೋಚ್ಛಾರಣೆ, ಮತ್ತು ಯೋಗ ಅಥವಾ ಭಕ್ತಿ. ಯಾವಾಗ ಒಬ್ಬನು ದೇವಿಯ ಉಪಾಸನೆಯಿಂದ ಅಂತಹ ತೇಜಸ್ಸನ್ನು ಹೊರಹೊಮ್ಮಿಸಲು ತೊಡಗುತ್ತಾನೆಯೋ, ಆಗ ಆ ವ್ಯಕ್ತಿಯು ಸರಿಯಾದ ಆಧ್ಯಾತ್ಮಿಕ ಮಾರ್ಗದಲ್ಲಿ ಸಾಗುತ್ತಿದ್ದಾನೆನ್ನುವುದನ್ನು ಸಾಂಕೇತಿಕವಾಗಿ ತಿಳಿಯಬಹುದು. ಮೂರ್ತಿಪೂಜೆ - ಮೂರ್ತಿಪೂಜೆಯು ವ್ಯಕ್ತಿಯ ಸ್ವಂತ ಆಯ್ಕೆಯಾಗಿದೆ, ಅದು ವ್ಯಕ್ತಿಯ ಮಾನಸಿಕ ಪರಿಸ್ಥಿತಿಯ ಮೇಲೆ ಅವಲಂಭಿತವಾಗಿರುತ್ತದೆ. ಒಬ್ಬನಿಗೆ ಬ್ರಹ್ಮನ ಕಲ್ಪನೆಯು ಕಷ್ಟದಾಯಕವೆನಿಸಿದರೆ ಅವನು ಒಂದು ಮೂರ್ತಿ ಅಥವಾ ಚಿತ್ರದ ಮೂಲಕ ದೇವರನ್ನು ಕಾಣುತ್ತಾನೆ. ಆದರೆ ಒಬ್ಬನು ಮೂರ್ತಿ ಪೂಜೆಯನ್ನು ಕೈಗೊಳ್ಳಲು ಅನುವಾದ ಮೇಲೆ ಅದಕ್ಕೆ ಸೂಚಿಸಲ್ಪಟ್ಟಿರುವ ವಿಧಿವಿಧಾನಗಳನ್ನು ಅನುಸರಿಸುವುದು ಅತ್ಯವಶ್ಯಕ. ಯಾವಾಗ ಪೂಜೆ ಮತ್ತು ಇತರ ಶಾಸ್ತ್ರವಿಧಿತ ಕ್ರಿಯೆಗಳನ್ನು ಪ್ರಾಮಾಣಿಕವಾದ ಭಕ್ತಿ ಶ್ರದ್ಧೆಗಳಿಂದ ಕೈಗೊಳ್ಳುವಿರೋ ಆಗ ಸ್ವಲ್ಪ ಕಾಲದ ನಂತರ ಆ ಮೂರ್ತಿಯ ಅಥವಾ ಚಿತ್ರದ ಮುಖದಲ್ಲಿ ಕೆಲವೊಂದು ಬದಲಾವಣೆಗಳನ್ನು ಕಾಣಬಹುದು. ನೀವು ಶಾಸ್ತ್ರವಿಧಿತ ಕ್ರಿಯೆಗಳನ್ನು ಕೈಗೊಂಡಾಗ ಉತ್ಪನ್ನವಾದ ಈ ಆಧ್ಯಾತ್ಮಿಕ ಶಕ್ತಿಯು ಆ ವಿಗ್ರಹದೊಳಗೆ ವರ್ಗಾವಣೆಯಾಗಿ ತನ್ಮೂಲಕ ಆ ವಿಗ್ರಹ ಮತ್ತು ಸಾಧಕ ಇವರ ಮಧ್ಯೆ ಒಂದು ರೀತಿಯ ಸಂವಹನ ಏರ್ಪಡುತ್ತಾ ಹೋಗುತ್ತದೆ. ಆಧ್ಯಾತ್ಮಿಕ ಬದಲಾವಣೆಯು ಕ್ರಮೇಣವಾಗಿ ಆಗಬೇಕು. ಆಧ್ಯಾತ್ಮಿಕ ಸಾಧನೆಯ ಪ್ರಾರಂಭಿಕ ಹಂತಗಳಲ್ಲಿ ವಿಗ್ರಹಾರಾಧನೆಯೇ ಸೂಕ್ತ. ಆಧ್ಯಾತ್ಮದ ಅಂತಿಮ ಗುರಿಯು ತನ್ನೊಳಗಿರುವ ಬ್ರಹ್ಮವನ್ನು ಸಾಕ್ಷಾತ್ಕರಿಸಿಕೊಳ್ಳುವುದೇ ಆಗಿದೆ. ಆದ್ದರಿಂದ ಒಬ್ಬನು ವಿವಿಧ ಹಂತಗಳಾದ ಜಪ, ಧ್ಯಾನ, ಧಾರಣ, ಸಮಾಧಿಗಳ ಮೂಲಕ ಹಂತಹಂತವಾಗಿ ಮುಂದೆ ಸಾಗಬೇಕು.
’ಆಪೀನ ವಕ್ಷೋರುಹಾಮ್’ - ಪೂರ್ತಿಯಾಗಿ ಬೆಳವಣಿಗೆಯಾದ ಎದೆ (ಏಕೆಂದರೆ ಅವಳು ಈ ಜಗವನ್ನು ಸಲಹುವ ತಾಯಿಯಾದ ’ಶ್ರೀ ಮಾತಾ’ (ನಾಮಾವಳಿ ಒಂದು) ಆಗಿರುವುದರಿಂದ). ಪಾಣಿಭ್ಯಾಂ - ತನ್ನ ಕೈಯ್ಯಲ್ಲಿ ಹಿಡಿದಿರುವ, ಅಲಿಪೂರ್ಣ - ಜೇನು ತುಪ್ಪ/ಮಕರಂದ ಅಥವಾ ಆಧ್ಯಾತ್ಮ ಸುಧೆಯಿಂದ ತುಂಬಿದ. ಅಲಿ ಎಂದರೆ ಜೇನುನೊಣಗಳೆಂದೂ ಅರ್ಥ. ರತ್ನ ಚಷಕಮ್ - ಮಾಣಿಕ್ಯದಿಂದ ಮಾಡಲ್ಪಟ್ಟ ಪಾತ್ರೆ. ಒಂದು ಕೈಯ್ಯಲ್ಲಿ ಅವಳು ಮಕರಂದದಿಂದ ತುಂಬಿ ತುಳುಕುತ್ತಿರುವ ಮಾಣಿಕ್ಯದಿಂದ ಮಾಡಲ್ಪಟ್ಟ ಪಾತ್ರೆಯನ್ನು ಹಿಡಿದಿದ್ದಾಳೆ. ಪಾತ್ರೆಯಲ್ಲಿರುವ ಮಕರಂದದ ವಾಸನೆಗೆ ಆಕರ್ಷಿಸಲ್ಪಟ್ಟು ಜೇನ್ನೊಣಗಳು ಅದರ ಸುತ್ತಲೂ ಹಾರಾಡುತ್ತವೆ. ರಕ್ತೋತ್ಪಲಮ್ ಬಿಭ್ರತೀಂ - ಇನ್ನೊಂದು ಕೈಯ್ಯಲ್ಲಿ ಅವಳು ಕೆಂಪು ವರ್ಣದ ಹೂವೊಂದನ್ನು ಹಿಡಿದಿದ್ದಾಳೆ. ಈ ಧ್ಯಾನ ಶ್ಲೋಕದಲ್ಲಿ (ಸ್ತುತಿಯಲ್ಲಿ) ದೇವಿಯನ್ನು ಎರಡು ಕೈಗಳಷ್ಟೇ ಉಳ್ಳವಳೆಂದು ವರ್ಣಿಸಲಾಗಿದೆ. ಆದರೆ ಮುಂದಿನ ಧ್ಯಾನ ಶ್ಲೋಕದಲ್ಲಿ ಅವಳನ್ನು ನಾಲ್ಕು ಕೈಗಳನ್ನುಳ್ಳವಳೆಂದು ಮತ್ತು ಅವಳ ಷೋಡಶಿ ರೂಪದಲ್ಲಿ ಅವಳಿಗೆ ಹದಿನಾರು ಕೈಗಳಿವೆಯೆಂದು ವರ್ಣಿಸಲಾಗಿದೆ. ಸೌಮ್ಯಾಂ - ಅಂದವಾಗಿರುವ, ರತ್ನ ಘಟಸ್ಥ - ರತ್ನಗಳಿಂದ ಕೂಡಿದ ಘಟ(ಮಡಕೆ/ಗಡಿಗೆ). ರಕ್ತ ಚರಣಾಂ - ದೇವಿಯು ತನ್ನ ರಕ್ತವರ್ಣದ ಎಡಗಾಲನ್ನು ಮಾಣಿಕ್ಯಗಳಿಂದ ತುಂಬಿದ ಈ ಮಡಕೆಯಲ್ಲಿರಿಸಿದ್ದಾಳೆ. ಧ್ಯಾಯೇತ್ - ಅವಳ ರೂಪವನ್ನು ಧ್ಯಾನಿಸುತ್ತೇನೆ. ಪರಾ ಅಂಬಿಕಾಮ್ - ಪರಾ (ನಾಮಾವಳಿ ೩೬೬) ಅಂದರೆ ಅತ್ಯುನ್ನತವಾದದ್ದು ಮತ್ತು ಅಂತಿಮವಾದದ್ದು.
ಈ ಧ್ಯಾನ ಶ್ಲೋಕವು ಅವಳ ಈ ಕೆಳಗಿನ ರೂಪವನ್ನು ಬಿಂಬಿಸುತ್ತದೆ. ಅವಳ ಮೈಕಾಂತಿಯು ಕೆಂಬಣ್ಣವಾಗಿದ್ದು ಅವಳಿಗೆ ಸಂಭಂದಿಸಿದ್ದೆಲ್ಲವೂ ಕೆಂಪು ಬಣ್ಣದವುಗಳಾಗಿವೆ. ಅವಳು ಸೌಂದರ್ಯದ ಮೂರ್ತ ರೂಪ. ಅವಳು ಒಂದು ಕೈಯ್ಯಲ್ಲಿ ಮಾಣಿಕ್ಯದಿಂದ ಮಾಡಲ್ಪಟ್ಟ ಮಧು/ಜೇನುತುಪ್ಪದಿಂದ ತುಂಬಿದ ಪಾತ್ರೆಯನ್ನು ಹಿಡಿದಿದ್ದರೆ ಇನ್ನೊಂದು ಕೈಯ್ಯಲ್ಲಿ ಅವಳು ಕೆಂಪು ವರ್ಣದ ಹೂವನ್ನು ಹಿಡಿದಿದ್ದಾಳೆ. ಅವಳು ತನ್ನ ಕೆಂಪು ವರ್ಣದ ಕಾಲನ್ನು ಮಾಣಿಕ್ಯದಿಂದ ತುಂಬಿದ ಘಟದಲ್ಲಿರಿಸಿದ್ದಾಳೆ. ಅವಳ ಕಾಲು ಏಕೆ ಕೆಂಪಾಗಿದೆ ಎಂದು ಹೇಳುವುದು ಕಷ್ಟ. ಅವಳ ಹೊಳೆಯುವ ಕಾಲುಗಳ ಪ್ರತಿಫಲನದಿಂದಾಗಿಯೋ ಅಥವಾ ಮಾಣಿಕ್ಯಗಳು ಹೊರಸೂಸುವ ಪ್ರಭೆಯಿಂದಾಗಿಯೋ? ಯಾವುದು ಹೊಳೆಯುತ್ತದೆ ಎನ್ನುವುದರ ಬಗ್ಗೆ ಈಗ ಒಂದು ಸಂಶಯವು ಉದ್ಭವವಾಗುತ್ತದೆ, ಅದು ಮಾಣಿಕ್ಯಗಳಿಂದಲೋ ಅಥವಾ ಲಲಿತಾಂಬಿಕೆಯು ಮಾಣಿಕ್ಯಗಳಿಂದ ತುಂಬಿದ ಗಡಿಗೆಯಲ್ಲಿರಿಸಿರುವ ಕಾಲುಗಳಿಂದಲೋ ಅಥವಾ ಅವಳ ಕಾಲಿಗೆ ಲೇಪಿಸಿರುವ ಮಧುರಂಗಿಯಿಂದಲೋ ಅಥವಾ ಅವಳ ಕೆಂಬಣ್ಣದ ಮೈಕಾಂತಿಯಿಂದಾಗಿ ಕೆಂಪಾದ ಪಾದಗಳೋ? ಬಹುಶಃ ಇದನ್ನು ಯಾರೂ ಉತ್ತರಿಸಲಾರರು. ನಮಗೆ ಗೊತ್ತಿರುವುದೇನೆಂದರೆ ಅವಳಿಗೆ ಸಂಭಂದಪಟ್ಟ ಎಲ್ಲಾ ವಸ್ತುಗಳೂ ಕೆಂಪಾಗಿರುವುವೆನ್ನುವುದು ಮಾತ್ರ. ಇದು ದೇವಿಯ ಕುರಿತಾದ ಮೊದಲನೆಯ ಧ್ಯಾನ ಶ್ಲೋಕ.
*****
Comments
ಮು0ದುವರೆಯಲಿ ದೇವಿ ಸ್ತುತಿ.
ಮು0ದುವರೆಯಲಿ ದೇವಿ ಸ್ತುತಿ. ಸಹಸ್ರನಾಮ ಪಠಣ
In reply to ಮು0ದುವರೆಯಲಿ ದೇವಿ ಸ್ತುತಿ. by partha1059
ನಿಮ್ಮ ಪ್ರೋತ್ಸಾಹದಾಯಕ ನುಡಿಗಳಿಗೆ
ನಿಮ್ಮ ಪ್ರೋತ್ಸಾಹದಾಯಕ ನುಡಿಗಳಿಗೆ ಧನ್ಯವಾದಗಳು ಪಾರ್ಥರೆ. ಕೇವಲ ಇಲ್ಲಿ ಪ್ರತಿಕ್ರಿಯಿಸುವುದರ ಮೂಲಕವಷ್ಟೇ ಅಲ್ಲದೆ ದೂರವಾಣಿಯ ಮೂಲಕವು ಮಾತನಾಡಿ ಪ್ರೋತ್ಸಾಹಿಸಿರುವುದಕ್ಕೆ ಮತ್ತೊಮ್ಮೆ ಧನ್ಯವಾದಗಳು.