ಆ ಒ೦ದು ಮನೆಗಾಗಿ...!
ನನಗೀಗ 60 ವರ್ಷ. ಎದ್ದರೆ ಕೂರಲಾಗದು, ಕೂತರೆ ಏಳಲಾಗದು. ಆದರೂ ನನ್ನ ಕೆಲಸಗಳನ್ನು ನಾನೇ ಮಾಡಿಕೊಳ್ಳಬೇಕಾದ ಅನಿವಾರ್ಯತೆ. "ಶಂಕರ್ ಗುರು" ಚಿತ್ರದ ಅಣ್ಣಾವ್ರ ಡೈಲಾಗ್ ನೆನಪಾಗುತ್ತೆ. "ನಾನು ಅರಮನೇಲಿರೋ ಭಿಕಾರಿ, ಸಿಂಹಾಸನದ ಮೇಲೆ ಕೂತಿರೊ ಭಿಕ್ಷುಕ, ನಂಗೆಲ್ಲ್ರೂ ಇದಾರೆ, ಯಾರೂ ಇಲ್ಲ, ಏನೇನೋ ಕಾಣ್ತೀನಿ, ಏನೇನೋ ಬಯಸ್ತೀನಿ, ಎಲ್ಲಾ ಕನಸು....ಕನಸು". ಸಾರಿ....ನಾನೂ ಕನ್ಫ್ಯೂಸ್ ಆಗಿ ನಿಮ್ಮನ್ನೂ ಕನ್ಫ್ಯೂಸ್ ಮಾಡುತ್ತಿದ್ದೇನೆ. ನನ್ನ ಕಥೆ ಎಲ್ಲಿಂದ ಪ್ರಾರಂಭಿಸಬೇಕು? ಎಂಬ ಗೊಂದಲ, ಅಷ್ಟೇ.
ಅಂದು ನನಗದು, ನನ್ನ ಜೀವನದ ಮಹತ್ವಾಕಾಂಕ್ಷೆ ಈಡೇರುವ, ಮೊದಲದಿನವೆನಿಸಿತ್ತು. ಗಾಜಿನ ಕಿಟಕಿಯಿಂದಾಚೆ ನನ್ನಪ್ಪ ಅಮ್ಮ, ಕೈ ಬೀಸುತ್ತಲೇಇದ್ದರು. ನನ್ನ ಬೀಳ್ಕೊಡುವ ಮೊದಲು ಅವರಿಬ್ಬರೂ ನನ್ನನ್ನು ತಬ್ಬಿಕೊಂಡು ಅತ್ತದ್ದನ್ನು ನಾನೆಂದಿಗೂ ಮರೆಯಬಾರದೆಂದುಕೊಂಡಿದ್ದೆ. ನಾನೆಂದೂ, ಮರೆತೂಯಿರಲಿಲ್ಲ. ಜೀವನದಲ್ಲಿ ಮೊಟ್ಟಮೊದಲ ಬಾರಿಗೆ ಫ್ಲೈಟ್ ಹತ್ತಿದ್ದೆ. ನನಗಾಗಿ ಕಾದಿರಿಸಿದ್ದ ಆಸನದಲ್ಲಿ ಆಸೀನನಾದೆ. ಅಪ್ಪ-ಅಮ್ಮ ಕೈ ಬೀಸುತ್ತಿದ್ದ ದೃಶ್ಯ ಕಣ್ಣಮುಂದೆ ಬಂತು. ದುಃಖ ತಡೆಯಲಾಗಲಿಲ್ಲ. ಸುತ್ತಲಿದ್ದವರೆಲ್ಲಾ ನನ್ನತ್ತಲೇ ನೋಡುತ್ತಿರುವಂತೆ ಭಾಸವಾಗಿ ಕಣ್ಣೊರೆಸಿಕೊಂಡೆ. ಫ್ಲೈಟ್, ಟೇಕಾಫ್ ಅಗಿತ್ತು. ಸೀಟಿನ ಹಿಂದಕ್ಕೆ ಒರಗಿದೆ. ಕಣ್ಣು ತಂತಾನೇ ಮುಚ್ಚಿದವು. ಮನಸ್ಸು ನೆನಪಿನಾಳದ ಹಾಳೆಗಳನ್ನು ತಿರುವಿಹಾಕಿತ್ತು.
ನನ್ನ ತಂದೆ, ಲೋಕೋಪಯೋಗಿ ಇಲಾಖೆಯಲ್ಲಿ ಸಾಧಾರಣ ಗುಮಾಸ್ತ. ನಿಜ, ಸರ್ಕಾರೀ ಕೆಲಸ. ತತ್ವ, ಸಿದ್ಧಾಂತಗಳಿಗೆ ಬದ್ಧವಾದ ಬದುಕು, ಲಂಚವನ್ನು ಹೇಸಿಗೆಯೆಂದು ತಿಳಿದಿತ್ತು. ಬರುವ ಅಲ್ಪ ಸಂಬಳದಲ್ಲೇ ನನ್ನ ಎಲ್ಲಾ ಬೇಕು-ಬೇಡಗಳನ್ನು ಪೂರೈಸುತ್ತಿದ್ದರು. ನನ್ನ ತಾಯಿ ಗೃಹಿಣಿ. ಇದ್ದದ್ದೊಬ್ಬನೇ ಮಗ. ಇಬ್ಬರೂ ತಮ್ಮೆಲ್ಲಾ ಪ್ರೀತಿಯನ್ನು ನನಗೇ ಸಂಪೂರ್ಣವಾಗಿ ಧಾರೆ ಎರೆದಿದ್ದರು. ಸರ್ಕಾರೀ ಕೆಲಸದಿಂದ ನಿವೃತ್ತರಾದ ನಂತರ ಉಳಿದ, ಉಳಿಸಿಟ್ಟ ಹಣದಿಂದ, ಸಿಂಗಲ್ ರೂಂ ಮನೆಯೊಂದನ್ನು ಸ್ವಂತವಾಗಿಸಿಕೊಂಡಿದ್ದರು. ಬಾಲ್ಯವನ್ನು ಯಶಸ್ವಿಯಾಗಿ ಮುಗಿಸಿ, ಯೌವನಕ್ಕೆ ಕಾಲಿಟ್ಟಿದ್ದೆ. ಅಷ್ಟರಲ್ಲೇ ನಮ್ಮಪ್ಪ, ಕಾಲನ ಕರೆಗೆ ಓಗೊಟ್ಟಿದ್ದರು. ನಮ್ಮನಗಲಿದ್ದರು.
ಇಲ್ಲಿಂದಾ ನಾನು ನಮ್ಮಮ್ಮನಿಗೆ ಹೊರೆಯಾದೆ. ಎಂದೂ ಏನಕ್ಕೂ ಹೊರಗೆ ಹೋದವಳಲ್ಲ ಅಮ್ಮ. ಅಂಥಹವಳು, ಅವರಿವರ ಮನೆಯಲ್ಲಿ ಮನೆಗೆಲಸ ಮಾಡಿ ಬೀಳಲಿದ್ದ ಕುಟುಂಬವನ್ನು ಎತ್ತಿಹಿಡಿದಿದ್ದಳು. ಆಧಾರ ಕಳೆದರೂ ಆಶಯ ಮಣ್ಣಾಗಲು ಅಮ್ಮ ಬಿಡಲೇಯಿಲ್ಲ. ಅಮ್ಮನ ಕಷ್ಟಾರ್ಜಿತದಲ್ಲೇ ಕಾಲೇಜು ಮೆಟ್ಟಿಲೇರಿದ್ದೆ. ಅಮ್ಮನ ನಿಶ್ಕಲ್ಮಷ ಪ್ರೀತಿ, ಅವರ ಆಶಯ, ಅವರು ಪಟ್ಟ, ಪಡುತ್ತಿದ್ದ ಕಷ್ಟ ಇವುಗಳ ಅರಿವಿದ್ದ ನಾನು ಕಲಿಕೆಯ ಕಾಯಕದ ಹಾದಿಯಲ್ಲಿ ಎಂದೂ ದಾರಿ ತಪ್ಪಲಿಲ್ಲ. ಕಂಪ್ಯೂಟರ್ ಇಂಜಿನಿಯರಿಂಗ್ ಮುಗಿಸಿದ್ದೆ.
ಮೊದಲಿನಿಂದಲೂ ಸಾಫ್ಟ್‍ವೇರ್ ಇಂಜಿನಿಯರ್ ಆಗಬೇಕೆಂಬ ನನ್ನ ಕನಸು ನನಸಾಗಿತ್ತು. ಅಮೇರಿಕಾ ಮೂಲದ ಕಂಪನಿಯೊಂದರಲ್ಲಿ ಕೆಲಸವೂ ಸಿಕ್ಕಿತ್ತು. ಅಮೇರಿಕಾ.... ಎಂದೊಡನೇ ನನ್ನ ಮೈ ನವಿರೇಳುತ್ತಿತ್ತು. ಉತ್ತಮ ಅವಕಾಶಗಳ ಮಹಾಪೂರವೇ, ನಯಾಗಾರದಂತೆ ಹರಿಯುತ್ತಿದ್ದ ದೇಶವದೆಂಬ ಭಾವ ಬಲವಾಗಿತ್ತು. ಒಂದೈದುವರ್ಷ ಇಲ್ಲಿ ಕೆಲಸಮಾಡಿ, ಹೆಚ್ಚು ಹಣ ಸಂಪಾದಿಸಿ ತಾಯ್ನಾಡಿಗೆ ಮರಳಿ, ದೇವರಂತಹ ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳುವ ಬಯಕೆ ನನ್ನದಾಗಿತ್ತು. ವಿಶ್ವದ ಎಲ್ಲಾ ಸುಖವನ್ನೂ, ಅವರಿಗೆ ಧಾರೆ ಎರೆಯಬೇಕೆಂಬ ಹೆಬ್ಬಯಕೆ, ಮನದಲಡಗಿತ್ತು. ಸರ್ಕಾರೀ ಕೆಲಸದಿಂದ ನಿವೃತ್ತರಾದ ತಂದೆ ಮಾಡಿಟ್ಟಿದ್ದ ಆಸ್ತಿಯೆಂದರೆ, ಒಂದು ಕೊಠಡಿಯ ಮನೆ. (ಇದಕ್ಕಿಂಥಾ ಹೆಚ್ಚಿನ, ದೊಡ್ಡ, ಜೀವಂತ ಆಸ್ತಿ, ಅಮ್ಮನನ್ನು ನನಗಾಗಿ ಬಿಟ್ಟುಹೋಗಿರುವ ಸತ್ಯವನ್ನು ನಾನು ಆಗ ಅರಿಯಲೇಯಿಲ್ಲ) ನನ್ನ ತಂದೆಗಿಂತಲೂ ಹೆಚ್ಚಿನದನ್ನು ಸಾಧಿಸಬೇಕೆಂಬ ಛಲ ನನ್ನದು. ಈ ಛಲವನ್ನೇ ಅಚಲವಾಗಿಸಿಕೊಂಡು ಅಮೇರಿಕಾ ನೆಲದಮೇಲೆ ಬೂಟನಿಟ್ಟಿದ್ದೆ. ನ್ಯೂಜರ್ಸಿ ನನ್ನ ಕಾರ್ಯಕ್ಷೇತ್ರ.
ಯಾಂತ್ರಿಕ ಬದುಕಿನ ಬಂಡಿ ಹೊರಟಿತ್ತು. ದಿನಗಳುರುಳಿದಂತೆ ಏಕಾಂಗೀ ಭಾವ ಕಾಡತೊಡಗಿತ್ತು. ವಾರಕ್ಕೆ ಐದುದಿನ ಕೆಲಸ. ಶನಿವಾರ-ಭಾನುವಾರ ರಜಾ. ಈ ಎರಡೂ ದಿನಗಳಲ್ಲಿ ಮನೆಯಲ್ಲೇ ಕುಳಿತೂ ಕುಳಿತು ಬೋರಾಗಿತ್ತು. ಎಷ್ಟೂ ಅಂತಾ ಟಿ.ವಿ. ನೋಡುವುದು. ಹೊರಗೆ ಹೋಗೋಣವೆಂದರೇ, ಅರಿಯದ ದೇಶ, ಬಾರದ ಭಾಷೆ. ಅಲ್ಲದೇ, ಹೊರಗಡಿಯಿಟ್ಟರೇ ಸಾಕು ಡಾಲರ್ಸ್‍ಲೆಕ್ಕದಲ್ಲಿ ಖರ್ಚು. ನಾವೋ (ಭಾರತೀಯರು) ಪ್ರತಿ ಡಾಲರ್ ಖರ್ಚು ಮಾಡುವಾಗಲೂ, ಅದನ್ನು ಬಾರತೀಯ ಕರೆನ್ಸಿಗೆ ಹೋಲಿಸಿ ನೋಡಿ ಹೌಹಾರುವ ಪ್ರವೃತ್ತಿಯವರಾಗಿದ್ದೇವೆ. ಇದಕ್ಕೆ ನಾನೇನೂ ಹೊರತಾಗಿರಲಿಲ್ಲ. ಹಾಗಾಗಿ ನನಗೂ ಮನೆಯೇ ಮಂತ್ರಾಲಯವಾಗಿತ್ತು. ಏಕಾಂಗೀತನವನ್ನು ದೂರಾಗಿಸಿಕೊಳ್ಳಲು ವಾರಕ್ಕೊಮ್ಮೆ ಕಡಿಮೆ ಖರ್ಚಿನ ಅಂತರಾಷ್ಟ್ರೀಯ ಫೋನ್ ಕಾರ್ಡನ್ನು ಬಳಸಿ ಅಮ್ಮನೊಂದಿಗೆ ಮಾತನಾಡಲು ಪ್ರಾರಂಭಿಸಿದೆ. ಇದು ಮನಸಿಗೆಷ್ಟೋ ನೆಮ್ಮದಿ ನೀಡಿತ್ತು. ಹೀಗೆಯೇ ಎರಡು ವರ್ಷ ಕೆಳೆದಿದ್ದೆ. ಈ ನಡುವೆ, ಕೆಲಸದ ಒತ್ತಡದಿಂದಾಗಿ ಒಮ್ಮೆಯೂ ತಾಯ್ನಾಡಿಗೆ ಮರಳಲಾಗಲಿಲ್ಲ, ಜನ್ಮದಾತೆಯನ್ನು ಕಾಣಲಾಗಲಿಲ್ಲ.
ಎರಡು ಸುದೀರ್ಘ ವರ್ಷ. ಡಾಲರ್ಸ್ ಮುಂದೆ ಭಾರತದ ರೂಪಾಯಿ ಕಳೆಗುಂದಿದಾಗಲೆಲ್ಲಾ ಆನಂದ ಪಟ್ಟಿದ್ದೆ. ಅದೇ ಪಿಜ್ಜಾ, ಅದೇ ಬರ್ಗರ್, ಅದೇ ಮ್ಯಾಕ್ ಡೊನಾಲ್ಡ್ಸ್, ಅದೇ ಡಿಸ್ಕೋ, ಜೀವನದಲ್ಲಿ ಜಿಗುಪ್ಸೆ ಬರಲು ಇದಕ್ಕಿಂಥಾ ಇನ್ನೇನು ಬೇಕು? ಬಾಳ ಸಂಗಾತಿಗಾಗಿ ತನುವು ಬಯಸಿತ್ತು, ಮದುವೆಯಾಗಲು ಇದೇ ಸುಸಮಯವೆನಿಸಿತ್ತು. ಸರಿ, ಮನೆಗೆ ಫೋನ್ ಮಾಡಿ ತಿಳಿಸಿದೆ. ಕೇವಲ 10 ದಿನಗಳ ರಜ. ಅಷ್ಟರಲ್ಲೇ, ಹೆಣ್ಣು ನೋಡುವುದರಿಂದಾ ಹಿಡಿದು, ಎಲ್ಲವನ್ನೂ ಮುಗಿಸಬೇಕಿತ್ತು. ಅಂತೂ ಇಂತೂ ಭಾರತದ ಮಣ್ಣು ಮುಟ್ಟಿದ್ದಾಯ್ತು, ಮುತ್ತನಿಟ್ಟದ್ದಾಯ್ತು. ಅಪ್ಪ-ಅಮ್ಮ ನನಗಾಗಿ ತರಿಸಿಟ್ಟಿದ್ದ ಎಲ್ಲಾ ವಧುಗಳ ಫೋಟೋಗಳನ್ನು ಎರಡೆರಡುಬಾರಿ ನೋಡಿದ್ದೆ. ಉತ್ತಮ ಆಯ್ಕೆಗೆ ಕಾಲಾವಕಾಶ ಕಡಿಮೆ ಇದ್ದುದರಿಂದ ಅನಿವಾರ್ಯವಾಗಿ ಇದ್ದುದರಲ್ಲೇ ಒಂದನ್ನು ಬಲವಂತವಾಗಿ ಒಪ್ಪಿಕೊಂಡೆ, ತಾಳಿಕಟ್ಟಿ ಅಪ್ಪಿಕೊಂಡೆ. ಕೊಟ್ಟ ಗಡುವು ಮುಗಿದಿತ್ತು. ಮುಂದಿನ ಬಾರಿ ಅಮ್ಮನನ್ನೂ ಜೊತೆಯಲ್ಲೇ ಕರೆದೊಯ್ಯುವ ನಿರ್ಧಾರ ಮಾಡಿ ವೀಸಾ ಮಾಡಿಸಲು ಹೇಳಿದೆ. ಅಮ್ಮ ನಾನು ನನ್ನ ಗಂಡನ ಮನೆಯನ್ನು ಬಿಟ್ಟು ಎಲ್ಲೂ ಬರುವುದಿಲ್ಲ ಎಂದು ಖಡಾಖಂಡಿತವಾಗಿ ಹೇಳಿದ್ದರು. ಇನ್ನು ಮಾಡುವುದೇನಿದೆ, ಅಮ್ಮನಕೈಲಿ ಒಂದಷ್ಟು ಹಣವನ್ನಿತ್ತು, ನೆರೆಹೊರೆಯವರಿಗೆ ಇವರಮೇಲೆ ನಿಗವಿರಿಸಲು ಹೇಳಿ, ಅಮ್ಮನ ಕಾಲ್ಮುಗಿದು ನವದಂಪತಿಗಳಾದ ನಾವು ಫ್ಲೈಟನೇರಿದ್ದೆವು. ಫ್ಲೈಟ್ ಮೇಲಕೇರಿದಂತೇ, ನನ್ನ ಭಾರತ ಭೂಪಟವಾಗಿತ್ತು. ತಾಯಿಯ ದರ್ಶನ ಇದೇ ಕೊನೆಯೆಂದು ಖಂಡಿತಾ ನನಗಂದು ತಿಳಿದಿರಲಿಲ್ಲ.
ಎರಡು ತಿಂಗಳುಗಳಕಾಲ ನನ್ನ ಹೆಂಡತಿ ಅಮೇರಿಕಾದ ಸೊಬಗನ್ನು ಸವಿದಿದ್ದಳು. ಬಯಕೆಯ ಬಟ್ಟಲು ಬರಿದಾಗಿತ್ತು. ಅವಳಿಗೂ ನನ್ನಂತೆಯೇ ಏಕಾಂಗೀತನ ಕಾಡತೊಡಗಿತ್ತು. ಇದ್ದದೊಂದೇ ದಾರಿ. ವಾರಕ್ಕೊಮ್ಮೆ ತವರಿಗೆ ಮಾಡುತ್ತಿದ್ದ ಕರೆ, ಈಗ ಮೂರಕ್ಕೇರಿತ್ತು. ಕೂಡಿಟ್ಟ ಹಣದ ಥೈಲಿಗೆ ತೂತು ಬಿದ್ದಿತ್ತು. ಹೀಗೆಯೇ ವರ್ಷಗಳೆರಡು ಉರುಳಿತ್ತು. ಆರತಿಗೊಂದು, ಕೀರುತಿಗೊಂದು ಮಗುವೂ ಆಗಿತ್ತು. ಫೋನ್ ಮಾಡಿದ ಪ್ರತಿಬಾರಿಯೂ ತಾಯಿಯ ಕೋರಿಕೆ ಒಂದೇ ಅಗಿತ್ತು. ಈ ಕೂಡಲೇ ಭಾರತಕ್ಕೆ ಬನ್ನಿ, ಮೊಮ್ಮಕ್ಕಳ ನೋಡುವ, ನೋಡಿ ಅವರೊಡನೆ ಆಡುವ ಬಯಕೆ ಈ ಮುದಿ ದೇಹದ್ದು ಎಂದು. ಬಯಸಿದ್ದೆಲ್ಲಾ ಈಡೇರುವಂತಿದ್ದರೆ ಎಷ್ಟು ಚೆನ್ನಿತ್ತು...!
ಪ್ರತಿ ವರ್ಷ ಭಾರತಕ್ಕೆ ಮರಳುವ ಆಸೆ. ಅದರಂತೇ, ಅದರತ್ತ ನಿರಂತರ ವಿಫುಲ ಯತ್ನವೂ ವಿಫಲವಾಗಿತ್ತು. ಒಂದೊಂದು ಬಾರಿ ಒಂದೊಂದು ವಿಘ್ನ. ಒಮ್ಮೆ ಕೆಲಸದ ಒತ್ತಡ, ಒಮ್ಮೆ ಹಣಕಾಸಿನ ಮುಗ್ಗಟ್ಟು. ಒಟ್ಟಿನಲ್ಲಿ ಭಾರತಕ್ಕೆ ಮರಳುವ ಆಸೆ, ಕನಸಾಗುವತ್ತ ಸಾಗಿತ್ತು. ನನ್ನ ತಾಯಿಯ ಆರೋಗ್ಯ ಕ್ಷೀಣಿಸಿದೆಯೆಂಬ ಸುದ್ದಿ ನಿದ್ದೆ ಕೆಡಿಸಿತ್ತು. ನನ್ನ ಮನಸೆಲ್ಲಾ ಭಾರತದಲ್ಲೇ, ವೃದ್ಧ ತಾಯಿಯ ಸೇವೆ ಮಾಡಿ ಅವರ ಋಣ ತೀರಿಸುವ ಪ್ರಯತ್ನದ ಒಂದೇ ಒಂದು ಅವಕಾಶವನ್ನೂ ಉಳಿಸಿಕೊಳ್ಳುವ ಭಾಗ್ಯ ನನ್ನ ಹಣೆಯಲ್ಲಿ ಬರೆದಿರಲಿಲ್ಲ. ಮತ್ತೆ ಕೆಲವು ದಿನದಲ್ಲೇ ಅವರ ಮರಣದ ಸುದ್ದಿಯೂ ಬರಸಿಡಿಲಿನಂತೆ ಬಂದೆರಗಿತ್ತು.
ಅದೇ ರಾಗ ಅದೇ ಹಾಡು. ರಜಾ ಸಿಗದೆ ಹೋಗಲಾಗಲೇ ಇಲ್ಲ. ಕರುಳು ಹಿಂಡಿದಂತಹಾ ಅನುಭವ. ನನ್ನಿರುವಿಗೆ ಕಾರಣಳಾದ ಅಮ್ಮ ಇನ್ನಿಲ್ಲ, ನನ್ನ ನೋವಿಗೆ ತತ್‍ಕ್ಷಣ ಸ್ಪಂದಿಸಿ ಸಂತೈಸುವ ಸಹೃದಯಿ ಇನ್ನಿಲ್ಲ, ಇನ್ನೆಂದೂ ಕಾಣಸಿಗುವುದಿಲ್ಲ, ಅವಳ ಮಡಿಲಲ್ಲಿ ತಲೆಯಿಟ್ಟು ಮಲಗಲಾಗುವುದಿಲ್ಲ, ನನ್ನ ತಲೆಗೂದಲನ್ನು ನವಿರಾಗಿ ಸವರುವ ಕೈಯಿರುವುದಿಲ್ಲ, ಎಲ್ಲಕ್ಕಿಂತಾ ಮಿಗಿಲಾಗಿ, ಮಗನಾಗಿ ನನ್ನ ಅಂತಿಮ ಕರ್ತವ್ಯವನ್ನು ಮಾಡಲಾಗದಿದ್ದಮೇಲೆ ನನ್ನಿರುವಿಕೆಗೆ ಅರ್ಥವೇ ಇಲ್ಲ ಎಂದೆನಿಸಿ ಮಗುವಿನಂತೆ ಅತ್ತದ್ದಷ್ಟೇ, ನನ್ನ ಹೆತ್ತಮ್ಮಗೆ ನಾ ನೀಡಲಾದ ಗೌರವ. ಎಲ್ಲರೂ ಇದ್ದು ನನ್ನ ತಂದೆ-ತಾಯಿಯರು ಅನಾಥರಾಗಿದ್ದರು, ಅಲ್ಲ ಅನಾಥರನ್ನಾಗಿಸಿದ್ದೆ. ನಮ್ಮದೇ ಸಮುದಾಯದವರು ಅವರ ಚಿತೆಗೆ ಅಗ್ನಿ ಸ್ಪರ್ಷ ಮಾಡಿ, ಅಂತ್ಯಕ್ರಿಯೆಗಳನ್ನು ಮಾಡಿ ಮುಗಿಸಿದ್ದರು. ತಮ್ಮ ಮೊಮ್ಮಕ್ಕಳನ್ನೂ ನೋಡದೆ ಇಬ್ಬರೂ ಇಹದ ಯಾತ್ರೆ ಮುಗಿಸಿದ್ದರು. ಇದ್ದೊಬ್ಬ ಮಗ, ಅವರ ಮರಣ ಕಾಲದಲ್ಲಿ ಹತ್ತಿರವಿದ್ದು, ಶುಶ್ರೂಷೆ ಮಾಡುವುದಿರಲಿ, ಅವರ ತಲೆಗೆ ಬೆಂಕಿ ಕೊಡುವುದರಿಂದಲೂ ವಂಚಿತನಾಗಿದ್ದೆ. ಧಿಕ್ಕಾರವಿರಲಿ ನನ್ನ ಜನ್ಮಕ್ಕೆ, ಎಂದೆನಿಸದಿರಲಿಲ್ಲ. ಎಂದಿನಂತೆ, ಇಲ್ಲಿಗೆ ನಾನು ಬರಬಾರದಿತ್ತೆಂಬ ಭೂತ ಬೆಂಬತ್ತಿ, ಪಾಪಭೀತಿ ಕಾಡಲನುವಾಗಿತ್ತು.
ಹಲವು ವರ್ಷಗಳುರುಳಿದವು. ನನ್ನ ಹೆಂಡತಿಗೆ ಅಮೇರಿಕಾ ಬೇಸರ ತರಿಸಿತ್ತು. ಮಕ್ಕಳ ವಿರೋಧದ ನಡುವೆಯೂ ಭಾರತದಲ್ಲೇ ನೆಲೆಯೂರಲು ತವರಿಗೆ ಮರಳಿದೆವು. ಅಳಿದುಳಿದ ಹಣದಲ್ಲೇ ಸ್ಥಿರಾಸ್ತಿಯೊಂದನ್ನು ಕೊಳ್ಳಲು ಪ್ರಯತ್ನಿಸಿದೆ. ಪ್ರಾಪರ್ಟಿUಳ ಬೆಲೆ ಗಗನಕ್ಕೇರಿತ್ತು. ಇಲ್ಲಿ ನನಗೆ ಬೇರೇ ಕೆಲಸ ಸಿಗುವುದೂ ದುಸ್ತರವಾಗಿತ್ತು. ಹಾಗಾಗಿ ಮತ್ತೆ ಅಮೇರಿಕಾಕ್ಕೆ ಮರಳಬೇಕಾಯ್ತು. ಹೆಂಡತಿಗೆ ಅಮೇರಿಕಾ ಸಹವಾಸವೇ ಬೇಡವಾಗಿತ್ತು. ಇನ್ನೆರಡು ಮೂರು ವರ್ಷಗಳಲ್ಲಿ ವಾಪಸಾಗುವೆನೆಂದು ಹೆಂಡತಿಗೆ ಭರವಸೆಯ ಭಾಷೆಯಿತ್ತು ಮಕ್ಕಳೊಂದಿಗೆ ನಾನು ಮತ್ತೆ 'ದೂರದ ಬೆಟ್ಟಕ್ಕೆ' ತೆರಳಿದೆ.
ಕಾಲಕ್ಕೇನು ಕಾಸು ಕೊಡಬೇಕೇ? ಅದರ ಪಾಡಿಗೆ ಅದು ತಿರುಗತೊಡಗಿತ್ತು. ಪ್ರಾಪ್ತ ವಯಸಿಗೆ ಬಂದ ಮಗಳು ಮದುವೆಯಾಗಬೇಕೆಂದಳು. ಅಲ್ಲಿಯೇ ಅಮೇರಿಕದ ನಿವಾಸಿಯೋರ್ವನೊಂದಿಗೆ ಅವಳ ವಿವಾಹವೂ ಆಯಿತು. ಮಗ ಅಮೇರಿಕಾ ದೇಶದ ಪರಿಸರಕ್ಕೆ ಒಗ್ಗಿಹೋಗಿದ್ದ. ಭಾರತಕ್ಕೆ ಬರೆನೆಂದ. ಇನ್ನು ಇಲ್ಲಿದ್ದು ನಾನು ತಾನೇ ಮಾಡುವುದೇನಿದೆ, ಎಂದುಕೊಂಡು ಜನ್ಮಭೂಮಿಯತ್ತ ಮುಖಮಾಡಿದೆ. ಎರಡು ಬೆಡ್‍ರೂಂ ಮನೆಯೊಂದನ್ನು ಖರೀದಿಸಿ, ಹೆಂಡತಿಗೆ ವಿಷಯವರುಹಲು ಹೋದೆ. ಭಾಷೆಯನ್ನು ಪಡೆದಿದ್ದ ಹೆಂಡತಿ ಮತ್ತೊಬ್ಬನ ಸತಿಯಾಗಿದ್ದಳು. ಬದುಕು ಬೇಡವೆನಿಸಿತು. ಸಾಯಲು ಧೈರ್ಯ ಸಾಲದಾಯ್ತು. ನೀರಸದ ಒಂಟಿ ಬದುಕು ಪ್ರಾರಂಭವಾಯ್ತು.
ನಾನೊಬ್ಬ, ಪಿತೃ ದ್ರೋಹಿ, ಮಾತೃ ದ್ರೋಹಿ, ಪತ್ನಿ ದ್ರೋಹಿ, ದೇಶ ದ್ರೋಹಿ. ಒಂದೇ ಎರಡೇ ನಾ ಮಾಡಿದ ಪಾಪ. ಒಂದೊಂದೂ ಭಲ್ಲೆಯಂತೆ ಮನದೊಡಲ ಇರಿದಿತ್ತು. ಪ್ರತಿ ದಿನವೂ ಶಾಪದಂತೆ ಕಳೆದೆ. ಜೊತೆಯಾಗೆಂದು ಜವರಾಯನನ್ನು ಅಂಗಲಾಚಿದೆ. ಕರುಣೆ ಬಂದೀತೇ ಅವಗೆ, ಈ ಪಾಪಿಯ ಮೇಲೆ?
ನನ್ನ ಮನ, ತಂದೆಯ ಸಾಧನೆಗೂ, ನನ್ನ ಸಾಧನೆಗೂ ತುಲನೆ ಮಾಡತೊಡಗಿತು. ನನ್ನ ತಂದೆ, ತಮ್ಮ ಸ್ವಸಂಪಾದನೆಯಿಂದ ಸಿಂಗಲ್ ಬೆಡ್ ರೂಂ ಮನೆಯೊಂದನ್ನು ಕೊಂಡು, ಎಲ್ಲರೊಂದಿಗೆ ಸಂತಸದ ಜೀವನವ ನೆಡೆಸಿ, ತಮ್ಮ ಇಹದ ಯಾತ್ರೆಯನ್ನು ಮುಗಿಸಿದ್ದರು. ಆದರೆ ನಾನು? ಕೇವಲ ಇನ್ನೊಂದು ಬೆಡ್ ರೂಂ ಹೆಚ್ಚು ಇರುವ ಮನೆಮಾಡಿದೆ, ಅಷ್ಟೇ. ಆದರೆ....ಆದರೇ.....ಅದಕ್ಕಾಗಿ ನಾ ತೆತ್ತ ಬೆಲೆ? ನನ್ನ ತಂದೆ ತಾಯಿಯರಿಗೆ ನಾನಿದ್ದೂ ಇಲ್ಲವಾಗಿದ್ದೆ. ಕಂಡವರು ಅವರ ಅಂತ್ಯಕ್ರಿಯೆಗಳ ಮಾಡಿ ಮುಗಿಸಿದ್ದರು. ಮತ್ತೆ ನನಗೆ? "ಮಾಡಿದ್ದುಣ್ಣೋ ಮಹರಾಯ"
"ಜನನೀ ಜನ್ಮ ಭೂಮಿಶ್ಚ, ಸ್ವರ್ಗಾದಪಿ ಗರೀಯಸೀ" ಎಂಬ ಮರ್ಯಾದಾ ಪುರುಷೋತ್ತಮ ಶ್ರೀರಾಮಚಂದ್ರ ಮೂರ್ತಿಯ ಮಾತು ಮನದಲ್ಲಿ ಮಾರ್ಮೊರೆದಿತ್ತು. ಕಣ್ಣು ಮಂಜಾಗತೊಡಗಿತು. ಬುದ್ಧಿ ಬಂದಾಗಿನಿಂದ ನೆಡೆದ ಒಂದೊಂದು ಘಟನೆಗಳೂ ಚಿತ್ರದಂತೆ ಸರದಿಯಾಗಿ ಕಣ್ಮುಂದೆ ಸರಿದಿತ್ತು. ನನಗರಿಯದೆಲೇ ಕಣ್ಣು ನೀರು ಸುರಿಸಿತ್ತು. ಉಸಿರುಗಟ್ಟಿದ ಅನುಭವ, ಯಮಕಿಂಕರರೀರ್ವರು ಇಕ್ಕೆಲಗಳಲ್ಲೂ ನಿಂತು, ನೀನು ಹುಟ್ಟಿ ಮಾಡಿದ ಸಾಧನೆ ಸಾಕು, ಇನ್ನು ಬಾ, ಮುಂದಿದೆ ನಿಂಗೆ, ಎಂದು ನನ್ನ ತೋಳಿಗೆ ಕೈಯನಿಟ್ಟರು. ಕುತ್ತಿಗೆ ವಾಲಿತು.
(ಇದು ನನ್ನ ಮಗಳ ಮೈಲ್ ಬಾಕ್ಸ್‍ನಲ್ಲಿದ್ದ ಸಾಫ್ಟ್‍ವೇರ್ ಇಂಜಿನಿಯರೊಬ್ಬನ ಕರುಣಾಜನಕ ಸತ್ಯ ಕತೆಯ ಅಲ್ಪ ಸ್ವಲ್ಪ ಬದಲೀ ರೂಪ)
- ಎಂ.ಎಸ್.ಮುರಳಿಧರ್, ಶಿರಾ.
------