ಕಲ್ಲಂಗಡಿ ಹಣ್ಣಿನ ಸಿಪ್ಪೆಯ ಧಿಡೀರ್ ದೋಸೆ
ದೋಸೆ ಅಕ್ಕಿ – 3 ಕಪ್, ಕಲ್ಲಂಗಡಿ ಹಣ್ಣಿನ ಸಿಪ್ಪೆಯ ಬಿಳಿ ಭಾಗ – 3 ಕಪ್, ಉಪ್ಪು – ರುಚಿಗೆ ತಕ್ಕಷ್ಟು, ಎಣ್ಣೆ – ½ ಕಪ್.
ಅಕ್ಕಿಯನ್ನು ತೊಳೆದು ನೆನೆಸಿಡಿ. ಕಲ್ಲಂಗಡಿ ಹಣ್ಣನ್ನು ತೊಳೆದು ಹಸಿರು ಸಿಪ್ಪೆಯನ್ನು ತೆಳ್ಳಗೆ ತೆಗೆಯಿರಿ. ನಂತರ ಕತ್ತರಿಸಿ ಕೆಂಪು ಹಣ್ಣಿನ ಭಾಗವನ್ನು ಬೇರ್ಪಡಿಸಿ ಉಳಿದ ಬಿಳಿ ಭಾಗವನ್ನು ಸಣ್ಣ ಸಣ್ಣ ಹೋಳುಗಳನ್ನಾಗಿ ಮಾಡಿಕೊಳ್ಳಿ. ನೆನೆದ ಅಕ್ಕಿಯನ್ನು ನೀರು ಬಸಿದು ಮಿಕ್ಸಿಗೆ ಹಾಕಿ. ಜೊತೆಯಲ್ಲೇ ಹೆಚ್ಚಿಟ್ಟುಕೊಂಡ ಕಲ್ಲಂಗಡಿ ಹಣ್ಣಿನ ಸಿಪ್ಪೆಯ ಹೊಳುಗಳನ್ನೂ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ಮಿಕ್ಸಿ ಮಾಡುವಾಗ ನೀರನ್ನು ಹಾಕುವ ಅಗತ್ಯವಿಲ್ಲ. ರುಬ್ಬಿದ ಹಿಟ್ಟನ್ನು ಒಂದು ಪಾತ್ರೆಗೆ ಬಗ್ಗಿಸಿಕೊಳ್ಳಿ. ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಅಳತೆಗೆ ತಕ್ಕಂತೆ ನೀರನ್ನು ಹಾಕಿ. ಹಿಟ್ಟು ಸಾಧಾರಣ ಬರಿ ಅಕ್ಕಿ ದೋಸೆ ಹಿಟ್ಟಿನ ಹದ ( ನೀರು ದೋಸೆಯ) ಇರಬೇಕು. ಅರ್ಧ ಚಮಚ ಎಣ್ಣೆಯನ್ನು ಕಾದ ದೋಸೆ ಕಾವಲಿಯ ಮೇಲೆ ಹರಡಿ ಹಿಟ್ಟನ್ನು ತೆಳ್ಳಗೆ ಹುಯಿದು (ಎರಚಿ) ಮೇಲೆ ಅರ್ಧ ಚಮಚ ಎಣ್ಣೆ ಹಾಕಿ. ಎರಡೂ ಬದಿ ಗರಿ ಗರಿಯಾಗಿ ಕಾಯಿಸಿ. ವಿಶಿಷ್ಟ ರುಚಿಯ ಧಿಡೀರ್ ದೋಸೆ ರೆಡಿ. ಬಿಸಿ ಬಿಸಿ ದೋಸೆಯನ್ನು ಕಾಯಿ ಚಟ್ನಿಯೊಂದಿಗೆ ಬೆಳಗಿನ ತಿಂಡಿಗೆ ಸವಿಯಿರಿ.