ಕಣ್ಣೀರ ಕಡಲಲ್ಲಿ....

ಕಣ್ಣೀರ ಕಡಲಲ್ಲಿ....

ಕವನ


ನಿನ್ನ ಬೊಗಸೆ ಕಣ್ಣ ಕಡಲೊಳಗಿಳಿದು
ಹೃದಯ ಬಡಿತಕ್ಕೆ ಕಿವಿಗೊಟ್ಟು
ತಣ್ಣನೆಯ ಉಸಿರಿನ ಮೇಲೆ
ಬೆತ್ತಲೆ ಮೈಚೆಲ್ಲಿ
ಆಕಾಶ ಹೊದಿಕೆಯೊಳಗೆ
ಬಿಸಿಯುಸಿರಲಿ ಬೆವರಿದರೂ
ರಭಸದ ಸೆಳೆತಗಳ ಅಲೆ ಅಲೆಗಳಲಿ
ಎದೆಗೆ ಎದೆಗೊಟ್ಟು
ಕಿಲಕಿಲ ನಕ್ಕ ಹುಡುಗಿಯ
ಹುಣ್ಣಿಮೆಯ ಹಾಲು ನಗೆಗೆ
ಆಕಾಶದೆತ್ತರಕ್ಕೆ ಉಕ್ಕಿ ಬಂಡೆಗಪ್ಪಳಿಸಿದರೂ...
ನೊರೆ ನೊರೆಗಳೊಳಗೆ ಜುಳುಜುಳು ಹರಿದು
ಅಟ್ಟಹಾಸಗೈದ ಹುಡುಗ ನೆನಪಿಲ್ಲವೇನೋ....?

ಇಷ್ಟು ಕ್ಷಣಿಕವೇ ಆ ಮಧುರ ಕ್ಷಣಗಳು...?
ನಿಶ್ಯಬ್ದ ನೀರವತೆಯಲಿ ತುಟಿಗೆ ತುಟಿಬೆಸೆದು
ಪಿಸುಗುಟ್ಟಿದ ಮಾತುಗಳು
ಜೇನ ಹನಿಸಿದ ಮುತ್ತುಗಳು
ಇಬ್ಬರ ನಡುವೆ ಅಣುವಿನಂತರ ಬಿಡದೆ
ಮುತ್ತಿಕೊಂಡಿದ್ದವಲ್ಲೋ
ಅದು ಹೇಗೆ ಇಂಗಿಹೋಯಿತು...?
ಅಬ್ಬರ ಆವೇಶಗಳು
ಇಬ್ಬರೆದೆಯ ಚಿಪ್ಪಿನೊಳಗಿಟ್ಟಿದ್ದ
ಮುತ್ತು ಹವಳದ ಪ್ರೀತಿ ಸ್ಪೋಟಗೊಂಡಿದ್ದೆಲ್ಲಿ...?

ಕನಸಿನಲಿ ನೀರ ಕಂಡ
ಮೀನು ಹೃದಯಗಳು
ಹೆಜ್ಜೆಗೆ ಗೆಜ್ಜೆ ಕಟ್ಟಿತುಳಿದ ನೀರ ಹಾದಿಗಳು
ಇಬ್ಬರಿಗೂ ಆಪ್ತವಾದರೂ
ಹುಡುಕುವುದೆಲ್ಲಿ ಕಣ್ಣೀರ ಕಡಲಲ್ಲಿ....?