ಬಾಲ ಸಂಸ್ಕಾರ ಶಿಬಿರ - ಒಂದು ಯಶಸ್ವೀ ಪ್ರಯೋಗ

ಬಾಲ ಸಂಸ್ಕಾರ ಶಿಬಿರ - ಒಂದು ಯಶಸ್ವೀ ಪ್ರಯೋಗ

     ವೇದಭಾರತೀ ಆಶ್ರಯದಲ್ಲಿ ಹಾಸನದಲ್ಲಿ ದಿನಾಂಕ 07-04-2013ರಿಂದ 17-04-2013ರವರೆಗೆ ನಡೆದ ಬಾಲ ಸಂಸ್ಕಾರ ಶಿಬಿರದ ಉದ್ದೇಶ ನಿರೀಕ್ಷೆಗೂ ಮೀರಿ ಯಶಸ್ವಿಯೆನಿಸಿತು. ಜಾತಿ, ಮತ, ಪಂಥ, ಲಿಂಗ, ವಯಸ್ಸಿನ ಭೇದವಿಲ್ಲದೆ ವೇದಾಭ್ಯಾಸದಲ್ಲಿ ತೊಡಗಿರುವ ವೇದಾಧ್ಯಾಯಿಗಳ ಸಂಘಟಿತ ಶ್ರಮ ಫಲ ನೀಡಿದೆ. ಮಕ್ಕಳಲ್ಲೂ ವೇದಾಧ್ಯಯನದ ಕಡೆಗೆ ಆಸಕ್ತಿ, ಅವರಲ್ಲಿ ದೇಶಭಕ್ತಿ, ಸಾಮಾಜಿಕ ಪ್ರಜ್ಞೆ ಜಾಗೃತಿಗೊಳಿಸುವುದರೊಂದಿಗೆ ಉತ್ತಮ ಸಂಸ್ಕಾರ ನೀಡಲು ಶಿಬಿರದಲ್ಲಿ ಒತ್ತು ನೀಡಲಾಯಿತು. ಕೇವಲ 40 ಮಕ್ಕಳಿಗೆ ಪ್ರವೇಶಾವಕಾಶ ಕೊಡಬೇಕೆಂದು ನಿರ್ಧರಿಸಿದ್ದರೂ, ಪೋಷಕರ ಒತ್ತಾಯಕ್ಕೆ ಮಣಿದು 80 ಮಕ್ಕಳನ್ನು ಶಿಬಿರಕ್ಕೆ ಸೇರಿಸಿಕೊಳ್ಳಬೇಕಾಯಿತು.

     ದೇಶಭಕ್ತರ, ಸಾಧು-ಸಂತರ, ಉತ್ತಮ ನೀತಿ ಸಾರುವ ಸುಭಾಷ ಚಂದ್ರ ಬೋಸ್, ಮದನ ಲಾಲ್ ಧಿಂಗ್ರಾ, ಶಿವಾಜಿ, ವಿವೇಕಾನಂದ, ಧ್ರುವ, ನಚಿಕೇತ ಮುಂತಾದವರ ಕಥೆಗಳನ್ನು ಹೇಳಲಾಯಿತು. ಪ್ರತಿನಿತ್ಯ ವಿವಿಧ ರೀತಿಯ ಆಟಗಳನ್ನು ಆಡಿಸಲಾಯಿತು. ದೇಶಭಕ್ತಿ ಗೀತೆಗಳನ್ನು ಹೇಳಿಕೊಡಲಾಯಿತು. ತಮ್ಮಲ್ಲಿನ ಪ್ರತಿಭೆಗಳನ್ನು ಮಕ್ಕಳು ಹಾಡು ಹೇಳುವ, ನೃತ್ಯ ಮಾಡುವ, ಏಕಪಾತ್ರಾಭಿನಯ ಮಾಡುವ, ಆಶುಭಾಷಣದಲ್ಲಿ ಭಾಗವಹಿಸುವ ಮೂಲಕ ವ್ಯಕ್ತಪಡಿಸಿದರು. ಚಿತ್ರಗಳನ್ನು ಬಿಡಿಸುವ ಮೂಲಕ ಮಕ್ಕಳು ತಮ್ಮ ಪ್ರತಿಭೆ ಮೆರೆದರು. ಕಾಗದದಿಂದ ಕರಕುಶಲಕಲೆಗಳನ್ನು ಅವರಿಂದ ಮಾಡಿಸಲಾಯಿತು. ಅಂತ್ಯಾಕ್ಷರಿ, ಹಾಡು, ಭಜನೆ, ಸಂವಾದಗಳಲ್ಲೂ ಅವರನ್ನು ತೊಡಗಿಸಲಾಯಿತು. ಇಷ್ಟೆಲ್ಲಾ ಆಸಕ್ತಿಕರ ಚಟುವಟಿಕೆಗಳಲ್ಲಿ ಅವರನ್ನು ತೊಡಗಿಸಿ ಪ್ರತಿನಿತ್ಯ ಸುಮಾರು ಒಂದು ಗಂಟೆಯ ಕಾಲ ಅವರಿಗೆ ಸರಳ ವೇದ ಮಂತ್ರಗಳನ್ನು ವೇದಾಧ್ಯಾಯಿಗಳಾದ ಶ್ರೀಯುತ ಅನಂತನಾರಾಯಣ, ಪ್ರಸಾದ್ ಮತ್ತು ವಿಶ್ವನಾಥ ಶರ್ಮರವರು ಅರ್ಥಸಹಿತ ಹೇಳಿಕೊಟ್ಟರು.  ಸುಮಾರು 25 ಮಂತ್ರಗಳನ್ನು ಕಲಿತ ಮಕ್ಕಳು ಸಮಾರೋಪ ದಿನದಂದು ಸಾಮೂಹಿಕವಾಗಿ ವೇದಮಂತ್ರಗಳನ್ನು ಸ್ವರಸಹಿತ ಹೇಳಿದಾಗ ಪೋಷಕರು, ಕಾರ್ಯಕ್ರಮದಲ್ಲಿ ಹಾಜರಿದ್ದವರು ಬೆರಗಾಗಿದ್ದರು.

     14-04-2013ರಂದು ಮಕ್ಕಳು ತಮ್ಮ ತಾಯಿ-ತಂದೆ, ಪೋಷಕರನ್ನು ನಮಸ್ಕರಿಸಿ ಗೌರವಿಸುವ ಮತ್ತು ಭಾರತಮಾತೆಯ ಪೂಜೆ ಮಾಡುವ ವಿಶೇಷ ಕಾರ್ಯಕ್ರಮ ಜೋಡಿಸಲಾಗಿತ್ತು. ಇದು ಮಕ್ಕಳ, ಪೋಷಕರ ಮತ್ತು ಕಾರ್ಯಕ್ರಮ ವೀಕ್ಷಿಸಿದವರ ಮೇಲೆ ಉತ್ತಮ ಪ್ರಭಾವ ಬೀರಿತು. ಪತ್ರಿಕೆಗಳು, ದೃಷ್ಯಮಾಧ್ಯಮಗಳಲ್ಲಿ ಪ್ರಶಂಸೆ ವ್ಯಕ್ತವಾಯಿತು. ಸಮಾರೋಪ ದಿನದಂದು ಮಕ್ಕಳು ಮತ್ತು ಅವರ ಪೋಷಕರು ವ್ಯಕ್ತಪಡಿಸಿದ ಅನಿಸಿಕೆಗಳು ಶಿಬಿರದ ಯಶಸ್ಸಿಗೆ ಕನ್ನಡಿಯಾಗಿತ್ತು. ಉದ್ಘಾಟನೆಯ ದಿನ, ಮಾತೃವಂದನಾ ಕಾರ್ಯಕ್ರಮದ ದಿನ ಮತ್ತು ಸಮಾರೋಪದ ದಿನಗಳಂದು ಪೋಷಕರನ್ನೂ ಆಹ್ವಾನಿಸಿ ಮಕ್ಕಳನ್ನು ಸುಸಂಸ್ಕಾರದಿಂದ ಬೆಳೆಸುವ ಹೊಣೆಗಾರಿಕೆ ಕುರಿತು ಹಾಗೂ ಮನೆಯೇ ಮೂಲತಃ ಸಂಸ್ಕಾರಗಳನ್ನು ಪೋಷಿಸುವ ಕೇಂದ್ರಗಳಾಗಬೇಕಾದ ಅಗತ್ಯತೆ ಕುರಿತು ಅವರ ಗಮನ ಸೆಳೆಯಲಾಯಿತು. 40 ಮಕ್ಕಳೂ ಸೇರಿದಂತೆ ಸುಮಾರು 80-100 ಪೋಷಕರೂ ಸಹ ವೇದಭಾರತೀ ವತಿಯಿಂದ ನಡೆಸಲಾಗುತ್ತಿರುವ ನಿತ್ಯ ವೇದಾಭ್ಯಾಸ ಕಾರ್ಯಕ್ರಮಕ್ಕೆ ಇನ್ನು ಮುಂದೆ ಬರುವುದಾಗಿ ನಿರ್ಧರಿಸಿ ತಿಳಿಸಿದ್ದು ವಿಶೇಷ. ಉತ್ತಮ ರೀತಿಯಲ್ಲಿ ಶಿಬಿರ ಯಶಸ್ವಿಯಾಗಿ ಸಂಪನ್ನಗೊಳ್ಳಲು ಶ್ರೀ ಹರಿಹರಪುರ ಶ್ರೀಧರ ಮತ್ತು ಶ್ರೀ ಕ.ವೆಂ.ನಾಗರಾಜರ ಮಾರ್ಗದರ್ಶನದಲ್ಲಿ ಉತ್ತಮ ಸಹಕಾರ ನೀಡಿದ ವೇದಭಾರತಿಯ ಎಲ್ಲಾ ವೇದಾಭ್ಯಾಸಿಗಳೂ, ಸಂಪನ್ಮೂಲ ವ್ಯಕ್ತಿಗಳಾಗಿ ಸಹಕರಿಸಿದ ಎಲ್ಲಾ ಮಿತ್ರರುಗಳೂ ಕಾರಣರಾಗಿದ್ದು, ಅವರೆಲ್ಲರೂ ಅಭಿನಂದನಾರ್ಹರಾಗಿದ್ದಾರೆ.

     ಶಿಬಿರದ ಕೆಲವು ದೃಷ್ಯಗಳು:

 

ಶಿಬಿರಾರ್ಥಿಗಳು

ದೇಶಭಕ್ತಿ ಗೀತೆಗಳ ಕಲಿಕೆ

 

 ಮೊಳಗಿತು ಓಂಕಾರ - ವೇದಾಧ್ಯಾಯಿಗಳ ಮಾರ್ಗದರ್ಶನದಲ್ಲಿ

  ಸಹಕಾರಿಗಳು, ಸಂಪನ್ಮೂಲ ವ್ಯಕ್ತಿಗಳು - ಇವರಷ್ಟೇ ಅಲ್ಲ!

 ತಾಯಿ-ತಂದೆ, ಪೋಷಕರಿಗೆ ಗೌರವಾರ್ಪಣೆ

 

 ಪೋಷಕರು

 ಭಾರತ ಮಾತೆಗೆ ನಮನ

 

 ಶಿಬಿರಾರ್ಥಿಗಳ, ಪೋಷಕರ ಅನಿಸಿಕೆ

 ಒಂದು ಚಮತ್ಕಾರ ಪ್ರದರ್ಶನ - ಶಿಬಿರಾರ್ಥಿಗಳಿಂದ

 ಅಗ್ನಿಹೋತ್ರ -  ಪ್ರಾತ್ಯಕ್ಷಿಕೆ

 ನಿತ್ಯ ಮಕ್ಕಳಿಗೆ ಉಪಹಾರ, ಪಾನೀಯ ವಿತರಣೆ

 
 

 

Comments

Submitted by venkatb83 Thu, 04/25/2013 - 17:13

"ಮಕ್ಕಳನ್ನು ಸುಸಂಸ್ಕಾರದಿಂದ ಬೆಳೆಸುವ ಹೊಣೆಗಾರಿಕೆ ಕುರಿತು ಹಾಗೂ ಮನೆಯೇ ಮೂಲತಃ ಸಂಸ್ಕಾರಗಳನ್ನು ಪೋಷಿಸುವ ಕೇಂದ್ರಗಳಾಗಬೇಕಾದ ಅಗತ್ಯ" >>>ಮನೆಯೇ ಮೊದಲ ಪಾಠ ಶಾಲೆ ತಾಯಿಯೇ ಮೊದಲ ಗುರು ಎಂದು ಸುಮ್ಮನೆ ಹೇಳಿದ್ದಲ್ಲ... ಪ್ರತಿಯೊಬ್ಬ ಯಶಸ್ವಿ ಪುರುಷನ ಹಿಂದೆ ಮಹಾತ್ಮರ ಮಹಾ ಮಹಿಮರ ಕಥೆಗಳಲ್ಲಿ ಅವರ ತಾಯಿ ಸಹೋದರಿ ಸಂಬಂಧಿಕರ ಪಾಲು ಇರುವುದು.. ಹಾಗೆಯೆ ದುಷ್ಟ ವ್ಯಕ್ತಿಗಳ ನಡುವಳಿಕೆಯೂ ಮನೆಯಲ್ಲಿನ ಘಟನೆಗಳ ಮೂಲಕ ಪ್ರೇರಿತವಾಗುವುದು ;(( ಹಿರಿಯರೇ ಆಗಾಗ ನನಗೆ ಈ ತರಹದ ಯೋಚನೆ ಬರುವುದುಂಟು-(ಅಂದರೆ ಈಗ ನೀವ್ ಮಾಡಿದ ಈ ತರಹದ ಶಿಭಿರ ಮಾಡಿ ಮಕ್ಕಳಿಗೆ ಚಿಕ್ ವಯಸಲ್ಲೇ ಒಳಿತು ಕೆಡುಕು ಇತ್ಯಾದಿ ಕುರಿತು ತಿಳಿ ಹೇಳುವ -ಅರಿವು ಮೂಡಿಸುವ ಕಾರ್ಯಕ್ರಮಗಳು ) ನಮ್ಮ ಪೂರ್ವಿಕರು ಸ್ವಾತಂತ್ರ್ಯ ಪೂರ್ವದಲ್ಲಿ ನಿಸ್ವಾರ್ಥಿಗಳು ದಯಾ ಪರರು ಸುಸಂಸ್ಕೃತರು ಆಗಿದ್ದು ದೇಶ ನಾಡು ನುಡಿಗಾಗಿ ತಮ ಪ್ರಾಣವನ್ನೇ ಪಣವಾಗಿಟ್ಟು ಪರಂಗಿಗಳೊಡನೆ ಹೋರಾಡಿ ಗೆದ್ದವರು. ಆದರೆ ಸ್ವಾತಂತ್ರ್ಯ ನಂತರ ಅವರ ಆಶೆ ಆಕಾಂಕ್ಷೆ ಕನಸುಗಳೆಲ್ಲ ಮಣ್ಣು ಪಾಲಾಗಿ ಆದರ್ಶಗಳು ಅದೃಸ್ಯವಾಗಿ ಅತ್ಯಾಚಾರ ಅನಾಚಾರ ಕೊಲೆ ಸುಲಿಗೆ ಇತ್ಯಾದಿ ದುಷ್ಟ ಚಟುವಟಿಕೆಗಳು ಹೆಚ್ಹ್ಸಿವೆ ಎಂದರೆ ಎಲ್ಲೋ ಏನೋ ತಪ್ಪಿದೆ ಎಂದು ಹೇಳಬೇಕು .. ಆ ತಪ್ಪು ಇನ್ನೇನು ಅಲ್ಲ - ಸಂಸ್ಕಾರ ಶಿಕ್ಷಣ ಹೌದು ಈಗ ನೀವು ನಡೆಸಿದಂತ ಈ ತರಹದ ಶಿಭಿರಗಳನ್ನು ಆಗಾಗ ಎಲ್ಲೆಡೆ ನಡೆಸುತ್ತ ನೈತಿಕ ಶಿಕ್ಷಣ ಕೊಟ್ಟು ಸುಶಿಕ್ಚಿತರನ್ನಾಗಿ ಮಾಡಿದರೆ ಭಯ ಭಕ್ತಿ ಆದರ ಭಾವನೆ ಹೆಚ್ಚಿ ಕಾಲ ಕ್ರಮೇಣ ಅಪರಾಧಗಳು ಕಡಿಮೆ ಆಗಬಹುದು ಎನ್ನುವುದು ನನ್ನ ನಂಬುಗೆ ಆಶಯ/ ನಿಮ್ಮ ಬರಹ ಮತ್ತು ಚಿತ್ರಗಳನ್ನು ನೋಡಿದ ಮೇಲೆ ನನಗೆ ಆದ ಸಂತಸ ಹೇಳಲಾಗದ್ದು . .. ನಾವೆಲ್ಲಾ ಏನೆಲ್ಲಾ ಯೋಚಿಸಬಹ್ದು ಆದರೆ ಅದನ್ನು ನೀವ್ ಕಾರ್ಯಗತಗೊಳಿಸಿರುವಿರಿ .. ಈ ತರಹದ ಶಿಭಿರಗಳನ್ನು ಎಲ್ಲೆಡೆ ನಡೆಸಿ ಬಾಲಕ ಬಾಲಕಿಯರನ್ನು ಜಾಗೃತಿ ಗೊಳಿಸುವ ಅವಶ್ಯಕತೆ ಇದೆ.. ಆದರೆ ದುರಾದೃಷ್ಟ ಅಂದರೆ ಇಂದಿನ ಮಕ್ಕಳೆ ಮುಂದಿನ ಪ್ರಜೆಗಳು ದೇಶದ ಆಸ್ತಿ ಭವಿಷ್ಯ ಎಂದು ಹೇಳುವ ಹಿರಿಯರು ತಮ್ಮ ಕೆಲಸ ಕಾರ್ಯ ಕಾರಣವಾಗಿ ಮನೆಯ ಮಕ್ಕಳ ಮೇಲೆ ನಿಗಾ ಇಡದೆ ಅವರು ಹತೋಟಿ ತಪ್ಪಿ ಮಾಡುವ ಅನಾಹುತಗಳು ಒಂದೆರಡಲ್ಲ . ಈ ತರಹದ ಶಿಭಿರಗಳ ಮೂಲಕ ಹಿರಿ ಕಿರಿಯರ ಬಗ್ಗೆ ಭಯ ಭಕ್ತಿ ಆದರ ಸಹಿಷ್ಣುತೆ ಮನದಲ್ಲಿ ಚಿಗುರಲಿದೆ.. >>>>.ಕಾಕತಾಳೀಯ ಎಂಬಂತೆ ದೇಶದಲ್ಲಿ ಹೆಚ್ಚುತ್ತಿರುವ ಅತ್ಯಾಚಾರಗಳು ಇತ್ಯಾದಿ ಬಗ್ಗೆ ಒಂದು ಪುಟ್ಟ ವಿಶ್ಲೇಷಣ ಲೇಖನ ಇಂದಿನ ವಿಜಯ ಕರ್ನಾಟಕದಲ್ಲಿದೆ ಅದನ್ನು ಇಲ್ಲಿ http://www.vijaykar… ಕ್ಲಿಕ್ ಮಾಡುವ ಮೂಲಕ ನೋಡಬಹುದು.. ದೃಶ್ಯ ಮುದ್ರಣ ಮಾಧ್ಯಮಗಳಲ್ಲಿ ಈ ಹಾಳು ರಾಜಕೀಯ ಹತ್ಯೆ ಅತ್ಯಾಚಾರ ಇತ್ಯಾದಿ ಓದಿ ಮನ ಮುದುಡಿ ಮನಶಾಂತಿ ಕಲಕುವ ಸನ್ನಿವೇಶದಲ್ಲಿ ನಿಮ್ಮ ಈ ಬರಹ ಮತ್ತು ಶಿಭಿರದ ಉದ್ಧೇಶ ನಿಮ್ಮ ಮತ್ತು ಸಹ ಚಿಂತಕರ ಸಮಾನ ಮನಸ್ಕರ ಕಾಳಜಿ ಓದಿ ಮನ ಹಿಗ್ಗಿ ಹೀರೆಕಾಯಾಯ್ತು .. ಈ ತರಹದ ಪ್ರಯತ್ನಗಳು ಉದ್ದೇಶಗಳನ್ನು ಪ್ರಚುರಗೊಳಿಸುವ ಅವಶ್ಯಕತೆ ಇದೆ . ನಿಮ್ಮ ಮುಂದಿನ ಶಿಭಿರಕ್ಕೆ ಶುಭ ಹಾರೈಕೆಗಳು .. ಈ ಅತ್ಯುತ್ತಮ ಚಿತ್ರ ಸಹಿತ ಬರಹ ಮತ್ತು ನಿಮ್ಮ ಕಾಳಜಿಗೆ ನನ್ನಿ ಶುಭವಾಗಲಿ.. \।/
Submitted by venkatb83 Thu, 04/25/2013 - 17:16

In reply to by venkatb83

ಪ್ರತಿಕ್ರಿಯೆ ಅರ್ಧ ಮಾತ್ರ ಬಂತು ಪೂರ್ಣ ಪ್ರತಿಕ್ರಿಯೆ ಇಲ್ಲಿದೆ >>>>.ಕಾಕತಾಳೀಯ ಎಂಬಂತೆ ದೇಶದಲ್ಲಿ ಹೆಚ್ಚುತ್ತಿರುವ ಅತ್ಯಾಚಾರಗಳು ಇತ್ಯಾದಿ ಬಗ್ಗೆ ಒಂದು ಪುಟ್ಟ ವಿಶ್ಲೇಷಣ ಲೇಖನ ಇಂದಿನ ವಿಜಯ ಕರ್ನಾಟಕದಲ್ಲಿದೆ ಅದನ್ನು ಇಲ್ಲಿ ಕ್ಲಿಕ್ ಮಾಡುವ ಮೂಲಕ ನೋಡಬಹುದು.. ದೃಶ್ಯ ಮುದ್ರಣ ಮಾಧ್ಯಮಗಳಲ್ಲಿ ಈ ಹಾಳು ರಾಜಕೀಯ ಹತ್ಯೆ ಅತ್ಯಾಚಾರ ಇತ್ಯಾದಿ ಓದಿ ಮನ ಮುದುಡಿ ಮನಶಾಂತಿ ಕಲಕುವ ಸನ್ನಿವೇಶದಲ್ಲಿ ನಿಮ್ಮ ಈ ಬರಹ ಮತ್ತು ಶಿಭಿರದ ಉದ್ಧೇಶ ನಿಮ್ಮ ಮತ್ತು ಸಹ ಚಿಂತಕರ ಸಮಾನ ಮನಸ್ಕರ ಕಾಳಜಿ ಓದಿ ಮನ ಹಿಗ್ಗಿ ಹೀರೆಕಾಯಾಯ್ತು ಈ ಅತ್ಯುತ್ತಮ ಚಿತ್ರ ಸಹಿತ ಬರಹ ಮತ್ತು ನಿಮ್ಮ ಕಾಳಜಿಗೆ ನನ್ನಿ ಶುಭವಾಗಲಿ.. \।/
Submitted by venkatb83 Thu, 04/25/2013 - 17:57

In reply to by venkatb83

ಮತ್ತೆ ವಿ ಕ ಲಿಂಕ್ ಕಟ್ ..!! ಇಲ್ಲಿದೆ ಆ ಬರಹದ ಲಿಂಕ್ ಕಾಕತಾಳೀಯ ಎಂಬಂತೆ ದೇಶದಲ್ಲಿ ಹೆಚ್ಚುತ್ತಿರುವ ಅತ್ಯಾಚಾರಗಳು ಇತ್ಯಾದಿ ಬಗ್ಗೆ ಒಂದು ಪುಟ್ಟ ವಿಶ್ಲೇಷಣ ಲೇಖನ ಇಂದಿನ ವಿಜಯ ಕರ್ನಾಟಕದಲ್ಲಿದೆ ಅದನ್ನು ಇಲ್ಲಿ ಕ್ಲಿಕ್ ಮಾಡುವ ಮೂಲಕ ನೋಡಬಹುದು.. http://www.vijaykar…
Submitted by partha1059 Thu, 04/25/2013 - 17:23

ಕವಿನಾಗರಾಜರೆ , ಸಪ್ತಗಿರಿಯವರ ಅಭಿಪ್ರಾಯಕ್ಕೆ ನನ್ನದು ಪುರಸ್ಕಾರವಿದೆ, ಉತ್ತಮ ಕಾರ್ಯಕ್ರಮ ನಿಮ್ಮದು, ಚಿತ್ರಗಳನ್ನು ನೋಡುವಾಗ ಮನದಲ್ಲಿ ಎಂತದೊ ಶಾಂತಿ ತುಂಬುತ್ತ ಇದೆ, ಅಲ್ಲಿ ಬರಲಾರದ್ದು ನನ್ನ ದುರಾದೃಷ್ಟವಿರಬೇಕೆಂದು ನನ್ನ ಮನ ಹೇಳುತ್ತಿದೆ
Submitted by kavinagaraj Fri, 04/26/2013 - 12:46

In reply to by partha1059

ಪಾರ್ಥರೇ, ನೀವು ಯಾವಾಗ ಬಂದರೂ ಸುಸಂಸ್ಕಾರ ನೀಡುವ ಯಾವುದೇ ಕಾರ್ಯಕ್ರಮಕ್ಕೆ ಸಹಕಾರಿಯಾಗಿ ನಿಮ್ಮನ್ನು ಉಪಯೋಗಿಸಿಕೊಳ್ಳಲಾಗುವುದು. ಪ್ರತಿಕ್ರಿಯೆಗೆ ವಂದನೆಗಳು.