೭. ಲಲಿತಾ ಮತ್ತು ಶ್ರೀಕೃಷ್ಣ

೭. ಲಲಿತಾ ಮತ್ತು ಶ್ರೀಕೃಷ್ಣ

        ಹಿಂದಿನ ಸಂಚಿಕೆಯಲ್ಲಿ ಲಲಿತಾಸಹಸ್ರನಾಮದ ಹಿನ್ನಲೆಯನ್ನು ಕುರಿತು ತಿಳಿದುಕೊಂಡೆವು. ಸಹಸ್ರನಾಮದ ಒಂದೊಂದೇ ನಾಮಗಳ ವಿವರಣೆಗಳನ್ನು ತಿಳಿದುಕೊಳ್ಳುವುದಕ್ಕೆ ಮುಂಚೆ ಭಗವದ್ಗೀತೆ ಮತ್ತು ಲಲಿತಾ ಸಹಸ್ರನಾಮದಲ್ಲಿರುವ ಸಾಮ್ಯತೆಗಳ ಕುರಿತಾಗಿ ಸ್ವಲ್ಪ ತಿಳಿದುಕೊಳ್ಳೋಣ.

ಲಲಿತಾ ಮತ್ತು ಕೃಷ್ಣ
ಲಲಿತಾ ಸಹಸ್ರನಾಮ ಮತ್ತು ಭಗವದ್ಗೀತೆ (ಗೀತೆ) ಎರಡೂ ಭಾರತೀಯರಿಗೆ ಮಹತ್ವವಾದ ಪುರಾತನ ಕೃತಿಗಳು. ಅವೆರಡರ ಮಧ್ಯೆ ಬಹಳಷ್ಟು ಸಾಮ್ಯತೆಗಳಿವೆ. ಲಲಿತಾ ಸಹಸ್ರನಾಮವು ೧೮೨ ಶ್ಲೋಕಗಳನ್ನು ಒಳಗೊಂಡಿದೆ. ಅವುಗಳನ್ನು ಲಲಿತಾಂಬಿಕೆಯ ಒಂದು ಸಾವಿರ ನಾಮಗಳಾಗಿ ಮಾರ್ಪಡಿಸಲಾಗಿದೆ. ಗೀತೆಯು ಸ್ವಯಂ ಶ್ರೀಕೃಷ್ಣನಿಂದ ಹೇಳಲ್ಪಟ್ಟ ೭೦೦ ಶ್ಲೋಕಗಳನ್ನು ಒಳಗೊಂಡಿದೆ. ಈ ೭೦೦ ಶ್ಲೋಕಗಳು ಹೆಚ್ಚಾಗಿ ಆತ್ಮಸಾಕ್ಷಾತ್ಕಾರ, ಧ್ಯಾನ, ಕರ್ಮ ಮೊದಲಾದವುಗಳ ಕುರಿತಾಗಿ ಉಪದೇಶದ ರೂಪದಲ್ಲಿ ತಿಳಿಸುತ್ತವೆ. ಇಲ್ಲಿ ಶ್ರೀ ಕೃಷ್ಣನು ಗುರುವಾದರೆ ಅರ್ಜುನನು ಶಿಷ್ಯನು. ಸಹಸ್ರನಾಮ ಮತ್ತು ಗೀತೆ ಎರಡೂ ಉಪನಿಷತ್ತುಗಳ ಸಂಕ್ಷಿಪ್ತರೂಪಗಳು. ಕೃಷ್ಣನು ಗೀತೆಯ ಕರ್ತೃವಾಗಿರುವುದರಿಂದ ತನ್ನನ್ನೇ ಪರಬ್ರಹ್ಮನೆಂದು ಅದರಲ್ಲಿ ಉಲ್ಲೇಖಿಸಿಕೊಂಡಿದ್ದಾನೆ. ಸಹಸ್ರನಾಮವು ಎಂಟು ವಾಗ್ದೇವಿಗಳಿಂದ ರಚಿಸಲ್ಪಟ್ಟು ಇದರಲ್ಲಿ ಅವರು ೧೮೨ ಶ್ಲೋಕಗಳ ಮೂಲಕ ಲಲಿತಾಂಬಿಕೆಯನ್ನು ಸ್ತುತಿಸುತ್ತಾರೆ. ಗೀತೆಯು ಅರ್ಜುನನಿಗೆ ಯುದ್ಧಭೂಮಿಯಲ್ಲಿ ಶ್ರೀ ಕೃಷ್ಣನಿಂದ ಉಪದೇಶಿಸಲ್ಪಟ್ಟಿತು ಆದರೆ ಸಹಸ್ರನಾಮವು ಲಲಿತಾಂಬಿಕೆಯು ತನ್ನ ರಾಜಸಭೆಯಲ್ಲಿ ಆಸೀನಳಾಗಿದ್ದಾಗ ಅವಳ ಸಮ್ಮುಖದಲ್ಲಿ ಎಲ್ಲಾ ದೇವಾನು ದೇವತೆಗಳು ಉಪಸ್ಥಿತರಿದ್ದಾಗ ವಾಗ್ದೇವಿಗಳಿಂದ ನುತಿಸಲ್ಪಟ್ಟಿತು. ಎರಡರಲ್ಲಿಯೂ ಸಂದರ್ಭಗಳು ಸಂಪೂರ್ಣ ಭಿನ್ನವಾಗಿವೆ. ಸಹಸ್ರನಾಮದ ಕೆಲವು ಶ್ಲೋಕಗಳು ಲಲಿತಾ ಮತ್ತು ಕೃಷ್ಣರು ಬೇರೆ ಬೇರೆಯಲ್ಲವೆನ್ನುವ ಸೂಚನೆಗಳನ್ನು ಕೊಡುತ್ತವೆ. ಈ ಕೆಳಗಿನ ನಾಮಾವಳಿಗಳು - ಗೋವಿಂದ ರೂಪಿಣಿ (ಲ.ಸ. ೨೬೭); ಪದ್ಮನಾಭ ಸಹೋದರಿ (ಲ.ಸ. ೨೮೦), ನಾರಾಯಣೈ (ಲ.ಸ. ೨೯೮), ವಿಷ್ಣು ರೂಪಿಣಿ (ಲ.ಸ. ೮೯೩), ವಿಷ್ಣು ಮಾಯಾ (ಲ.ಸ. ೩೩೯);  ಇವುಗಳನ್ನು ಶ್ರೀ ವಿಷ್ಣು ಮತ್ತು ಲಲಿತಾಂಬಿಕೆ ಇಬ್ಬರೂ ಒಂದೇ ಎನ್ನುವುದನ್ನು ತಿಳಿಸಲು ಉದಾಹರಣೆಯಾಗಿ ಕೊಡಬಹುದು. ಈಗ ಅವರಿಬ್ಬರ ಪ್ರತ್ಯೇಕತೆ ಅಥವಾ ಸಾಮ್ಯತೆಗಳನ್ನು ಕೂಲಂಕುಷವಾಗಿ ನೋಡೋಣ. ಸಹಸ್ರನಾಮದ ೬ನೇ ನಾಮಾವಳಿಯು ಉದ್ಯದ್ ಭಾನು ಸಹಸ್ರಬ ಎಂದರೆ ಲಲಿತಾಂಬಿಕೆಯು ಒಂದೇ ಬಾರಿಗೆ ಉದಯಿಸುವ ಸಾವಿರ ಸೂರ್ಯರಂತೆ ಕಾಣುತ್ತಾಳೆ ಎನ್ನುವ ಅರ್ಥವನ್ನು ಕೊಡುತ್ತದೆ. ನಮಗೆ ಈ ಮೊದಲೇ ತಿಳಿದಿರುವಂತೆ ಲಲಿತಾಂಬಿಕೆಗೆ ಯಾವಾಗಲೂ ಕೆಂಪು ಬಣ್ಣವನ್ನು ಪ್ರತೀಕವಾಗಿ ಸೂಚಿಸಲಾಗಿದೆ. ಅದು ಏಕೆಂದರೆ ಕರುಣೆಯ ಬಣ್ಣವು ಕೆಂಪೆಂದು ವಿಧಿತವಾಗಿದೆ. ಶ್ರೀ ಲಲಿತೆಯು ಜಗನ್ಮಾತೆಯಾಗಿ ಸಂಪೂರ್ಣ ಪ್ರೀತಿ ಮತ್ತು ಕರುಣೆಯಿಂದ ತುಂಬಿದವಳಾಗಿರುವುದರಿಂದ ಕೆಂಪು ಬಣ್ಣವನ್ನೇ ಅವಳ ಪ್ರತೀಕವಾಗಿ ಯಾವಾಗಲೂ ಸೂಚಿಸಲಾಗುತ್ತದೆ. ಗೀತೆಯ ೧೧ನೆಯ ಅಧ್ಯಾಯದ ೧೨ನೇ ಶ್ಲೋಕದಲ್ಲಿ ಪರಮಾತ್ಮನ ವಿಶ್ವರೂಪವನ್ನು ಒಟ್ಟಿಗೇ ಉದಯಿಸುವ ಸಾವಿರ ಸೂರ್ಯರಿಗೆ ಹೋಲಿಸಲಾಗಿದೆ. ಸಹಸ್ರನಾಮದ ೨೮೨ನೇ ನಾಮವು ‘ಸಹಸ್ರ ಶೀರ್ಷಾ ವದನಾ’ ಅಂದರೆ ಶ್ರೀ ಲಲಿತೆಯು ಸಾವಿರ ತಲೆಗಳು ಹಾಗು ಸಾವಿರ ಮುಖಗಳು ಉಳ್ಳವಳೆಂದು ಹೇಳುತ್ತದೆ. ಗೀತೆಯ ೧೩ನೇ ಅಧ್ಯಾಯದ ೧೩ನೇ ಶ್ಲೋಕವು ’ಸರ್ವತಃ ಪಾಣಿ ಪಾದಂ ತತ್ ಸರ್ವತೋsಕ್ಷೀರೋ ಮುಖಮ್’ ಅಂದರೆ ಪರಮಾತ್ಮನಿಗೆ ಎಲ್ಲಾ ಕಡೆಗಳಲ್ಲಿಯೂ ಕೈಗಳು, ಕಾಲುಗಳು ಮತ್ತು ಮುಖಗಳು ಇವೆ ಎನ್ನುತ್ತದೆ. ಪುರುಷ ಸೂಕ್ತವು ’ಸಹಸ್ರ ಶೀರ್ಷಾ ಪುರುಷಃ’ ಅಂದರೆ ಭಗವಂತನಿಗೆ ಸಾವಿರಾರು ತಲೆಗಳಿವೆ ಎಂದು ಹೇಳುತ್ತದೆ. ಇಲ್ಲಿ ಸಾವಿರವೆಂದು ಉಲ್ಲೇಖಿಸಲ್ಪಟ್ಟಿದ್ದರೂ ಅದನ್ನು ಭಗವಂತನು ಎಲ್ಲವನ್ನೂ ನೋಡಬಲ್ಲ ಮತ್ತು ಎಲ್ಲವನ್ನೂ ಕೇಳಬಲ್ಲ ಎಂದು ಅರ್ಥೈಸಬೇಕು ಏಕೆಂದರೆ ಭಗವಂತನು ಎಲ್ಲೆಡೆ ಇದ್ದು ಎಲ್ಲರಲ್ಲಿಯೂ ಇರುತ್ತಾನೆ. ಸಹಸ್ರನಾಮದ ೩೩೯ನೇ ನಾಮವಾದ ‘ವಿಷ್ಣುಮಾಯಾ’ ಎನ್ನುವುದನ್ನು ಸಹಸ್ರನಾಮದ ೩೯೯ನೇ ನಾಮವಾದ ‘ವ್ಯಕ್ತಾವ್ಯಕ್ತ ಸ್ವರೂಪಿಣಿ’ ಎನ್ನುವುದರೊಂದಿಗೆ ಸೇರಿಸಿ ಓದಿಕೊಳ್ಳಬೇಕು. ವಿಷ್ಣುವಿನ ಮಾಯೆಯು ವ್ಯಕ್ತ+ಅವ್ಯಕ್ತ ಎರಡೂ ರೂಪದಲ್ಲಿರುವುದರಿಂದ ಲಲಿತಾಂಬಿಕೆಯು ವ್ಯಕ್ತ ಮತ್ತು ಅವ್ಯಕ್ತ ಎನ್ನುವ ಎರಡೂ ರೂಪಗಳನ್ನು ತಾಳಿದ್ದಾಳೆಂದು ತಿಳಿಯಬಹುದು. ಯಾವಾಗಲೂ ಅವಳನ್ನೇ ಕುರಿತು ಧ್ಯಾನಿಸುವವರಿಂದ ಅವಳು ಉದ್ಭವವಾಗಿದ್ದಾಳೆ. ನಮಗೆಲ್ಲಾ ಶಕ್ತಿಯೇ ಮಾಯೆಯೆಂದು ಈಗಾಗಲೇ ತಿಳಿದಿದೆ. ಆದ್ದರಿಂದ ಅವಳನ್ನು ‘ಮಹಾ ಮಾಯಾ ಸ್ವರೂಪಿಣಿ’ ಎಂದು ಕರೆಯಲಾಗಿದೆ. ‘ಪ್ರಕಾಶಾ ವಿಮರ್ಶಾ ಮಹಾ ಮಾಯಾ ಸ್ವರೂಪಿಣಿ’ ಎನ್ನುವುದನ್ನು ಈಗಾಗಲೇ ಚರ್ಚಿಸಲಾಗಿದೆ; ಪೂರ್ಣ ವಿವರಗಳಿಗೆ ಕೆಳಗಿನ ಕೊಂಡಿಯನ್ನು ನೋಡಿ - http://sampada.net/blog/%E0%B3%A8-%E0%B2%B2%E0%B2%B2%E0%B2%BF%E0%B2%A4%E0%B2%BE-%E0%B2%B8%E0%B2%B9%E0%B2%B8%E0%B3%8D%E0%B2%B0%E0%B2%A8%E0%B2%BE%E0%B2%AE%E0%B2%A6-%E0%B2%B5%E0%B2%BF%E0%B2%B5%E0%B2%B0%E0%B2%A3%E0%B3%86-%E0%B2%AA%E0%B3%8D%E0%B2%B0%E0%B2%95%E0%B2%BE%E0%B2%B6-%E0%B2%AE%E0%B2%A4%E0%B3%8D%E0%B2%A4%E0%B3%81-%E0%B2%B5%E0%B2%BF%E0%B2%AE%E0%B2%B0%E0%B3%8D%E0%B2%B6-%E0%B2%B0%E0%B3%82%E0%B2%AA%E0%B2%97%E0%B2%B3%E0%B3%81/17-4-2013/40668  ರೂಪಾಂತರವು ನಿಜವಾದುದಲ್ಲ ಆದ್ದರಿಂದ ಅದನ್ನು ಮಾಯೆ ಅಥವಾ ಭ್ರಮೆಯೆಂದು ಕರೆಯಲಾಗಿದೆ. ಭಗವದ್ಗೀತೆಯ ಏಳನೆಯ ಅಧ್ಯಾಯದ ೧೪ನೇ ಶ್ಲೋಕದಲ್ಲಿ ’ಗುಣಮಯೀ ಮಮ ಮಾಯಾ ದುರತ್ಯಯಾ’ ಅಂದರೆ ತನ್ನ ಮೂರು ವಿಧವಾದ ಮಾಯೆಗಳನ್ನು ದಾಟುವುದು ಬಹಳ ಕಷ್ಟವೆಂದು ಕೃಷ್ಣನು ಹೇಳುತ್ತಾನೆ. ಇಲ್ಲಿ ಮೂರು ವಿಧವಾದ ಮಾಯೆಗಳೆಂದರೆ ಮೂರು ಗುಣಗಳಾದ ಸತ್ವ, ರಜೋ ಮತ್ತು ತಮೋ ಗುಣಗಳು. ಈ ಗುಣಗಳನ್ನೇ ಕೃಷ್ಣನು ಮಾಯೆಯೆಂದು ಕರೆದಿರುವುದಲ್ಲದೆ ಯಾರು ಅವನಲ್ಲಿ ಶರಣಾಗತರಾಗುತ್ತಾರೆಯೋ ಅವರಿಗೆ ಮಾತ್ರ ಇದನ್ನು ದಾಟಲು ಸಾಧ್ಯವೆನ್ನುತ್ತಾನೆ. (ಮೂಲ ಲೇಖಕರ ಬರಹಗಳಲ್ಲಿ/ಚರ್ಚೆಗಳಲ್ಲಿ ಶಕ್ತಿಯ ವಿಮರ್ಶಾ ರೂಪವು ನಮ್ಮನ್ನು ಶಿವನ ಪ್ರಕಾಶಾ ರೂಪದೆಡೆಗೆ ಕೊಂಡೊಯ್ದು ಪರಬ್ರಹ್ಮನಾದ ಶಿವನ ಬಹು ಸಮೀಪದಲ್ಲಿ ಬಿಡುತ್ತದೆ ಎಂದು ವಿವರಿಸಲಾಗಿದೆ). ಆತ್ಮಸಾಕ್ಷಾತ್ಕಾರದ ಅಂತಿಮ ಹಂತದಲ್ಲಿ ಮಾಯೆಯು ನಾಶವಾಗಿ ತನ್ನೊಳಗಿರುವ ಪರಬ್ರಹ್ಮದ ಜ್ಞಾನವುಂಟಾಗುತ್ತದೆ. ಇದರ ಬಗ್ಗೆ ಮುಂದಿನ ಕಂತುಗಳಲ್ಲಿ ನೋಡೋಣ. 
******
ವಿ.ಸೂ.: ಈ ಲೇಖನವು ಶ್ರೀಯುತ ವಿ. ರವಿಯವರಿಂದ ರಚಿಸಲ್ಪಟ್ಟ LALITHA AND KRISHNA http://www.manblunder.com/2009/04/lalitha-and-krishna.htmlಎನ್ನುವ ಆಂಗ್ಲ ಲೇಖನದ ಅನುವಾದದ ಭಾಗವಾಗಿದೆ. ಈ ಮಾಲಿಕೆಯನ್ನು ಅವರ ಒಪ್ಪಿಗೆಯನ್ನು ಪಡೆದು ಪ್ರಕಟಿಸಲಾಗುತ್ತಿದೆ. 
 
Rating
No votes yet