ಪ್ರಜಾಪ್ರಭುತ್ವ ವ್ಯವಸ್ಥೆಯಿಂದ ಊಳಿಗಮಾನ್ಯ ವ್ಯವಸ್ಥೆಯ ಕಡೆಗೆ ಭಾರತ

ಪ್ರಜಾಪ್ರಭುತ್ವ ವ್ಯವಸ್ಥೆಯಿಂದ ಊಳಿಗಮಾನ್ಯ ವ್ಯವಸ್ಥೆಯ ಕಡೆಗೆ ಭಾರತ

ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆ ಸ್ವಾತಂತ್ರ್ಯಾನಂತರ ರೂಪುಗೊಂಡು ಆರಂಭದಲ್ಲಿ ಹೆಚ್ಚಿನ ಹಣದ ಪ್ರಭಾವವಿಲ್ಲದೆ ನಡೆಯುತ್ತಿತ್ತು.  ಇತ್ತೀಚಿನ ವರ್ಷಗಳಲ್ಲಿ ಇದು ಹಣವುಳ್ಳವರು ಹಣ, ಹೆಂಡ, ಸೀರೆ ಹಾಗೂ ಮತದಾರರಿಗೆ ವಿವಿಧ ಬಗೆಯ ಕೊಡುಗೆಗಳನ್ನು ನೀಡಿ ಮತವನ್ನು ಖರೀದಿಸುವ ವ್ಯವಹಾರವಾಗಿ ಮಾರ್ಪಾಟಾಗಿದೆ.  ಇಂಥ ವ್ಯವಸ್ಥೆಯಲ್ಲಿ ಹೆಚ್ಚು ಹಣ ಹೊಂದಿದವರೇ ಗೆದ್ದು ಮತ್ತೆ ದೇಶವನ್ನು ಐದು ವರ್ಷಗಳ ಕಾಲ ಲೂಟಿ ಮಾಡಿ ಪುನಃ ಆ ಹಣದ ಒಂದಂಶವನ್ನು ಚುನಾವಣೆಗಳಲ್ಲಿ ಹಂಚಿ ಗೆದ್ದು ಬರುವ ಪರಿಸ್ಥಿತಿ ಬಂದಿದೆ.  ಇದರಿಂದ ಪ್ರಜಾಪ್ರಭುತ್ವ ವ್ಯವಸ್ಥೆ ದುಡ್ಡಿರುವವರ ಕಾಲಿನಡಿಯಲ್ಲಿ ಬಿದ್ದು ನರಳುತ್ತಿದೆ ಮತ್ತು ಊಳಿಗಮಾನ್ಯ ವ್ಯವಸ್ಥೆಯಾಗಿ ಮಾರ್ಪಾಟಾಗಿದೆ.  ಇದಕ್ಕೆ ಯಾರು ಹೊಣೆ?  ಇದಕ್ಕೆ ಹಣ, ಹೆಂಡ, ಸೀರೆ ಹಾಗೂ ಇನ್ನಿತರ ವಸ್ತುಗಳನ್ನು ಸ್ವೀಕರಿಸಿ ಮತವನ್ನು ಮಾರಿಕೊಳ್ಳುವ ಮತದಾರರೇ ಕಾರಣ.  ಹಣ ಹಾಗೂ ಇನ್ನಿತರ ಕೊಡುಗೆಗಳನ್ನು ತೆಗೆದುಕೊಳ್ಳುವವರು ಇದ್ದಾಗ ಮಾತ್ರ ಹಣವಂತರು ಇಂಥ ಅಡ್ಡದಾರಿಯನ್ನು ಹಿಡಿದು ಗೆಲ್ಲಲು ಸಾಧ್ಯವಾಗುತ್ತದೆ.  ಸ್ವಾಭಿಮಾನ ಉಳ್ಳ ಮತದಾರರು ಇದ್ದರೆ ಇಂಥ ಆಮಿಷಗಳನ್ನು ಖಡಾಖಂಡಿತವಾಗಿ ವಿರೋಧಿಸಿ ತರಾಟೆಗೆ ತೆಗೆದುಕೊಳ್ಳುವ ಪ್ರವೃತ್ತಿ ಬೆಳೆಸಿಕೊಂಡಿದ್ದರೆ ಆಮಿಷ ಒಡ್ಡಿ ಓಟು ಖರೀದಿಸುವ ಧೈರ್ಯ ಯಾವ ಹಣವಂತನಿಗೂ ಬರುತ್ತಿರಲಿಲ್ಲ.  ಹೀಗಾಗಿ ಇಂಥ ಪ್ರವೃತ್ತಿ ಬೆಳೆಯಲು ನಮ್ಮ ಮತದಾರರೇ ಹೆಚ್ಚು ಜವಾಬ್ದಾರರು.  ಇದನ್ನು ಆರಂಭದಲ್ಲೇ ವಿರೋಧಿಸಿ ಹಣ ಹಾಗೂ ಇನ್ನಿತರ ಕೊಡುಗೆಗಳನ್ನು ನೀಡುವ ಅಭ್ಯರ್ಥಿಗಳನ್ನು ತರಾಟೆಗೆ ತೆಗೆದುಕೊಂಡಿದ್ದರೆ  ಇಂಥ ಕೆಟ್ಟ ಪ್ರವೃತ್ತಿ ಬೆಳೆಯಲು ಸಾಧ್ಯವಾಗುತ್ತಿರಲಿಲ್ಲ.

ಬಡತನ ಹಾಗೂ ಅಜ್ಞಾನ ಈ ರೀತಿ ಹಣ ತೆಗೆದುಕೊಂಡು ಓಟು ಹಾಕಲು ಕಾರಣ ಎಂದು ಹೇಳಿ ಇದನ್ನು ಸಮರ್ಥಿಸಲು ಸಾಧ್ಯವಿಲ್ಲ.  ನಮ್ಮ ಮತದಾರರ ನೈತಿಕ ಅಧಃಪತನವೇ ಇದಕ್ಕೆ ಕಾರಣ.  ಕೇವಲ ರಾಜಕಾರಣಿಗಳು ಮತ್ತು ರಾಜಕೀಯ ಪಕ್ಷಗಳು ಮಾತ್ರವೇ ಭ್ರಷ್ಟವಾಗಿಲ್ಲ ಮತದಾರರೂ ಭ್ರಷ್ಟರಾಗಿದ್ದಾರೆ, ನೈತಿಕ ಅಧಃಪತನವನ್ನು ಹೊಂದಿದ್ದಾರೆ ಎಂಬುದನ್ನು ಈ ಪ್ರವೃತ್ತಿ ಎತ್ತಿ ತೋರಿಸುತ್ತದೆ.  ಇತ್ತೀಚೆಗೆ ಟಿವಿ ವಾಹಿನಿಯೊಂದರಲ್ಲಿ ಈ ರೀತಿ ಹಣ ತೆಗೆದುಕೊಂಡು ಓಟು ಹಾಕುವುದನ್ನು ಮತದಾರರು ಸಮರ್ಥಿಸಿದ್ದು ಹೇಗೆಂದರೆ ಜನಪ್ರತಿನಿಧಿಗಳು ಐದು ವರ್ಷಗಳಲ್ಲಿ ಭ್ರಷ್ಟಾಚಾರ ಮಾಡುವುದಿಲ್ಲವೇ, ಹೀಗಿರುವಾಗ ನಾವು ಓಟಿಗಾಗಿ ಹಣ ತೆಗೆದುಕೊಂಡರೆ ಏನು ತಪ್ಪು ಎಂಬುದಾಗಿತ್ತು.  ಇಂಥ ಮತದಾರರು ಇರುವಾಗ ಪ್ರಜಾಪ್ರಭುತ್ವ ವ್ಯವಸ್ಥೆ ಉದ್ಧಾರವಾಗುವುದಾದರೂ ಹೇಗೆ?  ಎರಡೂ ಕೈ ಸೇರಿದರೆ ಮಾತ್ರ ಚಪ್ಪಾಳೆ ಅಗುವುದು.  ಮತದಾರರು ಚುನಾವಣಾ ಅಭ್ಯರ್ಥಿಗಳ ಜೊತೆ ಕೈ ಜೋಡಿಸಿ ಅನೈತಿಕತೆಯನ್ನು ಪ್ರೋತ್ಸಾಹಿಸುತ್ತಿರುವ ಕಾರಣವೇ ಇದು ಪ್ರಜಾಪ್ರಭುತ್ವ ವ್ಯವಸ್ಥೆಯ ಉಳಿವಿಗೇ ಗಂಡಾಂತರಕಾರಿಯಾಗಿ ಬೆಳೆಯುತ್ತಿದೆ.  ಹೀಗಾಗಿ ನಮ್ಮ ಚುನಾವಣಾ ವ್ಯವಸ್ಥೆ ಭ್ರಷ್ಟವಾಗಿದೆ ಎಂದಾದರೆ ಅದಕ್ಕೆ ಮತದಾರರು ಹೆಚ್ಚು ಜವಾಬ್ದಾರರು.  ಏಕೆಂದರೆ ಮತದಾರರು ಬಹುಸಂಖ್ಯಾತರು, ಚುನಾವಣೆಗೆ ನಿಲ್ಲುವ ಅಭ್ಯರ್ಥಿಗಳು ಕಡಿಮೆ ಸಂಖ್ಯೆಯಲ್ಲಿ ಇರುವ ಕಾರಣ ಅವರು ಅಲ್ಪಸಂಖ್ಯಾತರು.  ಬಹುಸಂಖ್ಯಾತ ಇರುವ ಮತದಾರರು ಅಲ್ಪಸಂಖ್ಯೆಯಲ್ಲಿ ಇರುವ ಅಭ್ಯರ್ಥಿಗಳು ಹಣ, ಹೆಂಡ ಹಾಗೂ ಇನ್ನಿತರ ಕೊಡುಗೆಗಳನ್ನು ಹಂಚಲು ಬರುವಾಗ ತರಾಟೆಗೆ ತೆಗೆದುಕೊಳ್ಳಲು ಅವಕಾಶ ಇದೆ.  ಹೀಗೆ ಎಲ್ಲ ಮತದಾರರೂ ಇಂಥ ಅನೈತಿಕ ಕೆಲಸವನ್ನು ತರಾಟೆಗೆ ತೆಗೆದುಕೊಂಡರೆ ಯಾವುದೇ ಅಭ್ಯರ್ಥಿಗೂ ಇಂಥವುಗಳನ್ನು ಹಂಚುವ ಧೈರ್ಯ ಬರಲಾರದು.

ಚುನಾವಣಾ ಆಯೋಗ ಹಣ ಹಾಗೂ ಇನ್ನಿತರ ಆಮಿಷಗಳನ್ನು ಒಡ್ಡುವವರು ಹಾಗೂ ಅವುಗಳನ್ನು ತೆಗೆದುಕೊಳ್ಳುವವರು ಇಬ್ಬರ ಮೇಲೂ ಜಾಮೀನುರಹಿತ ಬಂಧನಕ್ಕೆ ಅವಕಾಶ ನೀಡುವ ಕಾನೂನು ತರಲು ಯೋಚಿಸುತ್ತಿದ್ದು ಇದನ್ನು ಸರ್ಕಾರದ ಒಪ್ಪಿಗೆಗಾಗಿ ಕಳುಹಿಸಿದೆ ಎಂದು ತಿಳಿದುಬಂದಿದೆ.  ಇಂಥ ಕಾನೂನು ತಂದರೂ ಮತದಾರರು ನೈತಿಕವಾಗಿ ಬೆಳೆಯದಿದ್ದರೆ ಹೆಚ್ಚಿನ ಪ್ರಯೋಜನ ಆಗಲಾರದು ಏಕೆಂದರೆ ಇದೆಲ್ಲ ಮತದಾರರು ಹಾಗೂ ಅಭ್ಯರ್ಥಿಗಳು ಜೊತೆಗೂಡಿ ನಡೆಸುತ್ತಿರುವ ಅನೈತಿಕ ಕಾರ್ಯವಾದುದರಿಂದ ಇದು ಕಾನೂನಿನ ಕಣ್ಣು ತಪ್ಪಿಸಿ ಕದ್ದು ಮುಚ್ಚಿ ನಡೆಯುವ ವ್ಯವಹಾರವಾಗಿದೆ.  ಹೀಗಾಗಿ ಇದನ್ನು ಮತದಾರರು ವಿರೋಧಿಸದ ಹೊರತು ನ್ಯಾಯಾಲಯದಲ್ಲಿ ಸಾಬೀತುಪಡಿಸುವುದು ಅಸಾಧ್ಯ.  ಮತದಾರರೇ ನೈತಿಕವಾಗಿ ಅಧಃಪತನ ಹೊಂದಿದ್ದಾಗ ಈ ಕದ್ದುಮುಚ್ಚಿ ನಡೆಯುವ ವ್ಯವಹಾರ ನಡೆಯುತ್ತಿರುವ ಬಗ್ಗೆ ಆಯೋಗಕ್ಕೆ ಸಾಕ್ಷ್ಯ ಸಹಿತ ದೂರು ನೀಡುವವರಾದರೂ ಯಾರು?

ಮತದಾರರು ನೈತಿಕವಾಗಿ ದೃಢತೆ ಬೆಳೆಸಿಕೊಂಡರೆ ಹಣ ಹಾಗೂ ಇನ್ನಿತರ ಕೊಡುಗೆ ನೀಡಿ ಓಟು ಖರೀದಿಸಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಊಳಿಗಮಾನ್ಯ ವ್ಯವಸ್ಥೆಯಾಗಿ ಪರಿವರ್ತಿಸುತ್ತಿರುವ ಕೆಟ್ಟ ಪ್ರವೃತ್ತಿಯನ್ನು ತಡೆಯಲು ಸಾಧ್ಯ.  ಮತದಾರರೇ ಭ್ರಷ್ಟರಾದರೆ ನಮ್ಮ ನಾಗರಿಕತೆಯ ಅಧಃಪತನ ತಡೆಯುವುದು ಸಾಧ್ಯವಿಲ್ಲ.  ಬಡತನ ಹಣ ತೆಗೆದುಕೊಂಡು ಓಟು ಹಾಕಲು ಕಾರಣ ಎಂಬುದು ಒಪ್ಪತಕ್ಕ ಮಾತಲ್ಲ.  ಬಡತನವಿದ್ದರೂ ದುಡಿದು ತಿನ್ನುವ ಸ್ವಾಭಿಮಾನ ಬೆಳೆಸಿಕೊಂಡವರು ಎಂಜಲು ಕಾಸಿಗೆ ಕೈಯೊಡ್ಡುವುದಿಲ್ಲ.  ಸ್ವಾಭಿಮಾನವಿಲ್ಲದ, ದೇಶದ ಬಗ್ಗೆ ಕಾಳಜಿ ಇಲ್ಲದ ಮತದಾರರು ಮಾತ್ರ ಈ ರೀತಿ ಎಂಜಲು ಕಾಸಿಗೆ ಕೈಯೊಡ್ಡಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಹಾಳುಗೆಡವಲು ಮುಖ್ಯ ಕಾರಣರಾಗುತ್ತಿದ್ದಾರೆ.  ಇಂಥ ಪ್ರವೃತ್ತಿಯನ್ನು ಸಾಮೂಹಿಕವಾಗಿ ವಿರೋಧಿಸುವ, ತರಾಟೆಗೆ ತೆಗೆದುಕೊಳ್ಳುವ ಎಚ್ಚರ ಬೆಳೆದರೆ ಮಾತ್ರ ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಉಳಿಸಿಕೊಳ್ಳಲು ಸಾಧ್ಯ.  ಇಲ್ಲದಿದ್ದರೆ ಇದು ಉಳ್ಳವರ, ಭ್ರಷ್ಟರ ಪ್ರಭುತ್ವವಾಗಿ ಮಾತ್ರ ಮುಂಬರುವ ದಿನಗಳಲ್ಲಿ ಪರಿವರ್ತನೆಯಾಗಲಿದೆ.  ಹಾಗಾದರೆ ಅದಕ್ಕೆ ನಮ್ಮ ಮತದಾರರೇ ಜವಾಬ್ದಾರರು.  ಹಾಗಾಗದಂತೆ ತಡೆಯುವ ಹಕ್ಕು ಅವರಿಗೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಿಕ್ಕಿದೆ.  ಅದನ್ನು ಬಳಸಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಉಳಿಸುವುದು ಅವರ ಕೈಯಲ್ಲಿಯೇ ಇದೆ.

Comments

Submitted by ಆರ್ ಕೆ ದಿವಾಕರ Wed, 04/24/2013 - 13:21

ಎಕ್ಕುಟ್ಟಿಹೋಗಿರುವ ಚುನಾವಣಾ ವ್ಯವಸ್ಥೆಯಲ್ಲಿ ಇದಕ್ಕೂ ಒಂದು ಪರಿಹಾರವಿದೆ. ನಮ್ಮಲ್ಲಿ ನೈಜ ಕಳಕಳಿವಂತ ಮತದಾರರು ನಿಜವಾಗಿಯೂ ಇದ್ದಾರೆಯೇ ಎನ್ನುವುದನ್ನಿದು ಅವಲಂಬಿಸಿದೆ. ’ಸಭ್ಯ-ಪ್ರಾಮಾಣಿಕ ಅಭ್ಯರ್ಥಿಯನ್ನೇ ಆರಿಸಬೇಕು’ ಎಂದು ಬುದ್ಧಿವಂತರೆಂದುಕೊಂಡ ಜೀವಿಗಳೆಲ್ಲಾ ಉಪದೇಶಿಸಿ ಬಾಯಿತೀಟೆ ತೀರಿಸಿಕೊಂಡಿದ್ದಾಗಿದೆ. ಎಲ್ಲಿದ್ದಾರೆ, ಅಂತಹ ಅಭ್ಯರ್ಥಿಗಳು? ಪ್ರಾಮಾಣಿಕರು ಸ್ವಲ್ಪ ಒಳಹೊಕ್ಕು ನೋಡಿ! ಉದೇಶಕರೆನ್ನುವಂತೆ, ಈವರೆಗಿನ ಅಯೋಗ್ಯರೆಲ್ಲರ ಅಯ್ಕೆಗೆ, ಮತದಾರರೇ ಸಾಮೂಹಿಕವಾಗಿ ಕಾರಣವೇ? ಖಂಡಿತಾ ಅಲ್ಲ. ಈ ಅವಹೇಳನವನ್ನು, ಓರ್ವ ಎಚ್ಚೆತ್ತ ಮತದಾರನಾಗಿ ನಾನು ಪ್ರತಿಭಟಿಸುತ್ತೇನೆ. ನಾನು ಎಲ್ಲಾ ಚುನಾವಣೆಯಲ್ಲೂ ಓಟ್ ಹಾಕಿದ್ದೇನೆ. ನಾನಾರಿಸಿರುವ ಬಹುತೇಕ ’ಸಭ್ಯ ಅಭ್ಯರ್ಥಿ’ಗಳು ಸೋಲನ್ನೇ ಉಂಡಿರುವುದು. ಒಬ್ಬಿಬ್ಬರು ಗೆದ್ದಿದ್ದರು. ಆದರೆ ಯಾವ Originalityಗಾಗಿ ಅವರನ್ನು ಬೆಂಬಲಿಸಿದ್ದೆನೋ ಅದರ ಪ್ರಕಾಶಕ್ಕೆ ಪಕ್ಷ ಹೈಕಮಾಂಡ್ ಅವಕಾಶವನ್ನೇ ಕೊಡಲಿಲ್ಲ. ಅದು ತಾನೇ ಏನು ಮಾಡೀತು, ಪಾಪ, Compulsion of coalition! ನಾವು, ಅಂದರೆ ಬಹುಸಂಖ್ಯೆಯ ಸಭ್ಯರು, ಆರಿಸಿದ ಪ್ರತಿನಿಧಿಗಳು ದೇಶವನ್ನಾಳುವ ಪ್ರಜಾಸತ್ತೆಯೇ ನಮ್ಮದಾಗಿಲ್ಲ. ಒಂದೆರಡು ಲಾರಿ, ಅಕ್ರಮ ಸರಾಯಿ ಹತ್ತಿಪ್ಪತ್ತು ಲಕ್ಷ ರೂಪಾಯಿ, ಪೊಲಿಸ್ ವಶವಾದ ಸುದ್ದಿ ಬರುತ್ತದೆ. ಆದರೆ ಲಕ್ಷ-ಲಕ್ಷ ಲಾರಿಗಳೂ, ಕೋಟಿ-ಕೊಟಿ ರೂಪಾಯಿಯೂ ಅದರದರ ಗಮ್ಯಸ್ಥಾನವನ್ನು ತಲುಪೇ ತಲುಪುತ್ತವೆ. ಯಾವ ದಕ್ಷಬ್ರಹ್ಮರ ಕಣ್ಗಾವಲೂ ಇದನ್ನು ತಪ್ಪಿಸಿಸುವುದು ಸಾಧ್ಯವಿಲ್ಲ. ಅಭ್ಯರ್ಥಿಗಳ ಈ ಸಾಮರ್ಥ್ಯದ ಅಗಾಧತೆಯನ್ನೇ ಅಲ್ಲವೇ, ಪಕ್ಷಗಳು ಗಮನಿಸಿ ಬಿ-ಫಾರ್ಮ್‌ ಕೊಡುವುದು; ಅವರಿಗೂ ಮೀರಿದ ತಾಖತ್‌ದಾರರೇ ಅಲ್ಲವೇ ಬಂಡೆದ್ದು ಕಣದಲ್ಲುಳಿಯುವುದು? ಈಗ ಅಕಸ್ಮಾತ್ ನಾವು ಮಾಡಬಹುದಾದ ಒಂದು Stratagy ಎಂದರೆ, ಅಭ್ಯರ್ಥಿಗಳ ಗುಣಾವಗುಣಗಳನ್ನು ಸಂಪೂರ್ಣವಾಗಿ ಬಿಟ್ಟಾಕಬೇಕು; ಚಿಲ್ಲರೆ ಪಕ್ಷ-ಪಿಶಾಚಿಗಳ ಗೋಜು-ಗೊಂದಲವೂ ಬೇಡ; ಇಷ್ಟಕ್ಕೂ, ನೆರೆಯ ತ. ನಾ. ತರಹ, ಪ್ರಾದೇಶಿಕ ಹಿತಾಸಕ್ತಿಗೆ ಶತಾಯ-ಗತಾಯ ಪ್ರಾಣ ಕೊಡುವ ಪ್ರಾದೇಶಿಕ ಪಕ್ಷವೆನ್ನುವುದು ನಮ್ಮಲ್ಲಿ ಇಲ್ಲವೇ ಇಲ್ಲ. ಹಾಗಂದುಕೊಂಡು ನಮ್ಮಲ್ಲಿರುವುದು, ಅವಕಾಶವಾದೀ ಸಮಯಸಾಧಕರ ತಾತ್ಕಾಲಿಕ ಗುಂಪು ಮಾತ್ರಾ. ಆದ್ದರಿಂದ ನಾವೇ Polarise ಮಾಡಿ ಎರಡೇ ಪಕ್ಷವನ್ನು ಗಮನದಲ್ಲಿಟ್ಟುಕೊಳ್ಳೋಣ. ಹ್ಯಾಗಿದ್ದರೂ ಕಾಂಗ್ರಸ್ ಮತ್ತು ಬಿಜೆಪಿ,ಈ ಬಾರಿ, ತಮ್ಮ ತಮ್ಮ ’ಬೆರಕೆ’ಗಳ ಹಂಗು ತೊರೆದು, ಕ್ರಮವಾಗಿ ಎಲ್ಲಾ 224 ಮತ್ತು 223 ಕ್ಷೇತ್ರಗಳಲ್ಲಿ ಹುರಿಯಾಳುಗಳನ್ನು ನಿಲ್ಲಿಸಿವೆ. ಅವರು ಎಂತಾದರೂ ಇರಲಿ; ಎರಡು ಪಕ್ಷಗಳ ಪೈಕಿ ಮಾತ್ರವೇ ಒಂದನ್ನು ಆರಿಸೋಣ. ನೋಡೊಣ, ನಮ್ಮಲ್ಲಿ ಇಂಥಾ ವಿವೇಕಶಾಲಿಗಳ ಸಂಖ್ಯೆ ಎಷ್ಟಿದೆ, ಎಂಬುದನ್ನು.
Submitted by anand33 Wed, 04/24/2013 - 17:52

ಅಭ್ಯರ್ಥಿಗಳು ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ನೀಡುವ ಹಣ, ಹೆಂಡ ಹಾಗೂ ಇತರ ತರಹೇವಾರಿ ಕೊಡುಗೆಗಳನ್ನು ತೆಗೆದುಕೊಂಡು ಮತ ಹಾಕುವವರು ಚುನಾವಣೆಯಿಂದ ಚುನಾವಣೆಗೆ ಹೆಚ್ಚುತ್ತಿದ್ದಾರೆ ಎಂಬುದು ಚುನಾವಣೆಗಳಲ್ಲಿ ಚಲಾವಣೆಯಾಗುವ ಹಣದ ವಹಿವಾಟಿನಿಂದ ಸ್ಪಷ್ಟವಾಗುತ್ತದೆ. ಈ ರೀತಿ ಅಭ್ಯರ್ಥಿ ನೀಡುವ ಕೊಡುಗೆಗಳನ್ನು ನಿವಾಳಿಸಿ ಅವರ ಮುಖಕ್ಕೆ ಎಸೆಯುವ ಧೈರ್ಯವನ್ನು ಮತದಾರರು ಮಾಡಿದರೆ ಮುಂದೆ ಇಂಥ ಕೊಡುಗೆಗಳನ್ನು ನೀಡುವ ಧೈರ್ಯ ಯಾವನಿಗೂ ಬರಲಾರದು. ಅಭ್ಯರ್ಥಿಗಳು ನೀಡುವ ಎಂಜಲನ್ನು ನಾವು ಸ್ವೀಕರಿಸುವುದಿಲ್ಲ ಎಂದು ಅವುಗಳನ್ನು ಹಂಚಲು ಬರುವವರನ್ನು ಚುನಾವಣಾ ಆಯೋಗಕ್ಕೆ ಹಿಡಿದು ಕೊಡುವ ಪ್ರವೃತ್ತಿಯನ್ನು ಮತದಾರರು ಬೆಳೆಸಿಕೊಂಡರೆ ಮುಂದೆ ಈ ರೀತಿ ಹಂಚುವ ಧೈರ್ಯ ಯಾವನಿಗೆ ಬಂದೀತು? ಹೀಗಿರುವಾಗ ಚುನಾವಣೆಗಳಲ್ಲಿ ಅಭ್ಯರ್ಥಿಗಳಿಂದ ಹಣ ಅಥವಾ ಇತರ ಎಂಜಲನ್ನು ತೆಗೆದುಕೊಂಡು ಗೆಲ್ಲಲು ಸಹಕರಿಸುವ ಮತದಾರರು ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಹಾಳುಗೆಡವುತ್ತಿದ್ದಾರೆ ಎಂದು ಹೇಳಿದರೆ ತಪ್ಪಗಲಾರದು (ಇದು ಅಭ್ಯರ್ಥಿಗಳು ಕೊಡುವ ಹಣ ಅಥವಾ ಇತರ ಎಂಜಲು ಸ್ವೀಕರಿಸುವ ಮತದಾರರಿಗೆ ಮಾತ್ರ ಅನ್ವಯವಾಗುತ್ತದೆ, ಲೇಖನದಲ್ಲಿ ಬರುವ ಮತದಾರರು ಎಂದರೆ ಆ ರೀತಿಯ ಮತದಾರರು ಎಂದು ತಿಳಿದುಕೊಳ್ಳಬೇಕು. ಪ್ರಾಮಾಣಿಕ ಮತದಾರರಿಗೆ ಇದು ಅನ್ವಯ ಆಗುವುದಿಲ್ಲ).
Submitted by ಆರ್ ಕೆ ದಿವಾಕರ Thu, 04/25/2013 - 12:19

ಚುನಾವಣೆಯಿಂದ ಚುನಾವಣೆಗೆ, ಯಲ್ಲಿ ಆಮಿಶದ ಪ್ರಭಾವ ಎಷ್ಟು ಹೆಚ್ಚಾಆಗುತ್ತಿದೆ ಎನ್ನುವುದಕ್ಕೆ ವೆಚ್ಚ ಮಾಹಿತಿ ಪರಿಶೀಲಿಸುವುದೂ ಬೇಡ, ಹೆಚ್ಚುತ್ತಿರುವ ಮತದಾನದ ಶೇಕಡಾವಾರೂ ಇದಕ್ಕೊಂದು Indicator ಆಗಬಹುದು. ಆದರೆ ಹಣವನ್ನೋ, ಸೀರೆ-ಪ್ಯಾಂಟ್‌ ಪೀಸನ್ನೋ, ಅಭ್ಯರ್ಥಿಯ ಮುಖಕ್ಕೆ ನಿವಾಳಿಸಿ ಎಸೆಯುವ ಪ್ರಾಮಾಣಿಕತೆಯನ್ನೂ, ಭೌತಿಕ-ಸಾಮಾಜಿಕ ಧೈರ್ಯವನ್ನೂ ಶೇ. 60-65ಕ್ಕೂ ಹೆಚ್ಚಿನ ಮತದಾರರಲ್ಲಿ ನಿರೀಕ್ಷಿಸುವುದು ಸಾಧ್ಯವಿಲ್ಲ. ಎಲ್ಲರೂ ಕೊಡುತ್ತಾರೆ; ಕೊಟ್ಟು ಆ ಕುರಿಮಂದೆಯನ್ನು ಬೇಲಿ ಹಾಕಿಟ್ಟುಕೊಳ್ಳುತ್ತಾರೆ. IPL ಕ್ರಿಕೆಟ್‌ನಲ್ಲಿ, ಅಂತಾರಾಷ್ಟ್ರೀಯ ಆಟಗಾರರನ್ನು ಕೊಟಿ-ಕೋಟಿಗೆ ಕೊಳ್ಳುವುದನ್ನು ಬಾಯಿ ಚಪ್ಪರಿಸುತ್ತಾ ವೀಕ್ಷಿಸುವ ನಮಗೆ, ಈ ಪ್ರಕ್ರಿಯೆಯನ್ನು ಟೀಕಿಸುವ Conscience ಆದರೂ ಎಲ್ಲಿಂದ ಬರಬೇಕು? ಅದು ಹೋಗಲಿ. ಸನ್ಮಾನ್ಯ ಎಂಎಲ್‌ಎಗಳೇ Cross-vote ಮಾಡಿ ದಕ್ಕಿಸಿಕೊಳ್ಳುವಾಗ, ಪ್ರೈಮರಿ ಮತದಾರರಿಗೆ Whip ಭೀತಿಯೆಲ್ಲಿಯದು? ಬೇಲಿ ದಾಟುವ ಕುರಿಗಳೇ ಅಭ್ಯರ್ಥಿಯ ಅದೃಷ್ಟವನ್ನು ನಿರ್ಧರಿಸುವವು. ಸಮಾಜದ ಎಲ್ಲಾ ವರ್ಗಗಳ ವೋಟು, ಗೆಲುಮೆಗೆ ಅನಿವಾರ್ಯವಾದಾಗ, ಯಾರೊಬ್ಬನೂ/ಳೂ, ಶೇ.50+ ಓಟನ್ನು ಕಾಸಿಗೆ ಬಾಚಿಕೊಳ್ಳುವ ಬಗ್ಗೆ ಹಿಂದೆ-ಮುಂದೆ ನೋಡಬೇಕಾಗುತ್ತದೆ. ನಿಜವಾದ ಪ್ರಜಾಪ್ರಾತಿನಿಧ್ಯ, ಶಾಸನಸಭೆಯಲ್ಲಿ ದೊರಕುವಂತಾದಾಗ ಮಾತ್ರಾ ಪ್ರಜಾಪ್ರಭುತ್ವದ ಅವಹೇಳನ ನಿಲ್ಲುತ್ತದೆ. Plumber, Sweeper, ಬಡಗಿ, ಮೇಸ್ತ್ರಿ ಇತ್ಯಾದಿ ಎಲ್ಲೆಲ್ಲವನ್ನೂ ಮಾಡುವ ರಾಷ್ಟ್ರ ನಿರ್ಮಾಪಕ, ಎರಡು ಬುರ‍್ರೆ ಸಾರಾಯಿಗೆ ಟೈಟಾಗಿ ಬಿದ್ದುಕೊಳ್ಳುತ್ತಾನೆ; ಸಮಾಜಕ್ಕೆ ಮುರೂ ಕಾಸಿನ ಪ್ರಯೋಜನವಿಲ್ಲದ ರಾಜಕಾರಣಿ, ಶತ-ಶತ ಕೋಟಿ ನುಂಗುತ್ತಾನೆ; ದಶಕೋಟಿ ಸ್ವೀಕರಿಸುವಾಗ ಸಿಕ್ಕಿಬಿದ್ದಂತೆ ನಾಟಕವಾಡಿ, ಅಲ್ಲೂ ಪ್ರಚರ ಗಿಟ್ಟಿಸಿಕೊಳ್ಳುತ್ತಾನೆ! ಇಂತಹ ಸತ್ತಾವ್ಯವಸ್ಥೆ ನೀಗಿ, ನಮಗೆ ನಿಜವಾದ ಪ್ರಜಾಸತ್ತೆ ಬೇಕಾದ್ದೇ ಆದರೆ, ಆಂದೋಳನ ಮಾಡಿಯೇ ಅದನ್ನು ಪಡೆಯಬೇಕಾಗುತ್ತದೆ.
Submitted by anand33 Thu, 04/25/2013 - 16:24

ಇಡೀ ವರ್ಷ ಕಷ್ಟ ಪಟ್ಟು ಓದಿ ಪರೀಕ್ಷೆ ಬರೆಯುವ ಪ್ರಾಮಾಣಿಕ ವಿದ್ಯಾರ್ಥಿಗಳನ್ನು ಪರೀಕ್ಷೆಯಲ್ಲಿ ನಕಲು ಮಾಡಿ ಬರೆಯುವ ವಿದ್ಯಾರ್ಥಿಗಳು ಹಿಮ್ಮೆಟ್ಟಿಸಿದರೆ ಹೇಗೆ ಅನ್ಯಾಯವಾಗುತ್ತದೋ ಅದೇ ರೀತಿ ಹಣ ತೆಗೆದುಕೊಂಡು ಓಟು ಹಾಕುವ ಅಭ್ಯರ್ಥಿಗಳು ಪ್ರಜಾಪ್ರಭುತ್ವ ವ್ಯವಸ್ಥೆಗೇ ಗಂಡಾಂತರ ತರುತ್ತಿದ್ದಾರೆ. ಒಂದು ಕ್ಷೇತ್ರದಲ್ಲಿ ಗೆಲುವಿನ ಅಂತರ 1,000 ಓಟು ಇದ್ದರೆ ತಲಾ ಒಂದು ಸಾವಿರ ರೂಪಾಯಿ ಎಂಜಲು ತೆಗೆದುಕೊಂಡು ಓಟು ಹಾಕುವ ಒಂದು ಸಾವಿರ ಜನ ಇದ್ದರೆ ಪ್ರಾಮಾಣಿಕವಾಗಿ ಓಟು ಹಾಕುವ ಎಲ್ಲ ಜನರ ಆಶೋತ್ತರಗಳನ್ನು ಇವರು ನಿರರ್ಥಕಗೊಳಿಸಬಲ್ಲರು. ಇದಕ್ಕೆ ಅಭ್ಯರ್ಥಿ ತಲಾ ಒಂದು ಸಾವಿರದಂತೆ ಒಟ್ಟು ಹತ್ತು ಲಕ್ಷ ಖರ್ಚು ಮಾಡಿದರೆ ಸಾಕು. ಇದು ಲಂಚ ನೀಡಿ ಪ್ರಾಮಾಣಿಕ ಅಭ್ಯರ್ಥಿಗಳನ್ನು ಕೆಲಸದ ನೇಮಕಾತಿಗಳಲ್ಲಿ ಹಿಮ್ಮೆಟ್ಟಿಸುವ ಕಡಿಮೆ ಅಂಕ ಪಡೆದ ಅಭ್ಯರ್ಥಿಗಳು ಮಾಡುವ ಅನ್ಯಾಯದಂತೆ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಹಳಿ ತಪ್ಪಿಸುವ ಸಾಮರ್ಥ್ಯ ಹೊಂದಿದೆ. ಹೀಗಾಗಿ ಮತದಾರರನ್ನು ಈ ನಿಟ್ಟಿನಲ್ಲಿ ಎಚ್ಚರಿಸುವ ಜವಾಬ್ದಾರಿ ಎಲ್ಲಾ ಮಾಧ್ಯಮಗಳಿಗೂ ಇದೆ. ಕ್ಷುಲ್ಲಕ ವಿಚಾರಗಳಿಗೆ ಇಡೀ ದಿನ ಟಿವಿ ವಾಹಿನಿಗಳಲ್ಲಿ ಚರ್ಚೆ ನಡೆಸುವ ಬದಲು ಇಂಥ ವಿಚಾರಗಳ ಬಗ್ಗೆ ಚರ್ಚೆ ನಡೆಸಿ ಜನರನ್ನು ಎಚ್ಚರಗೊಳಿಸಲು ಟಿವಿ ವಾಹಿನಿಗಳು ಮುಂದಾಗಬೇಕು. ಹಾಗಾದರೆ ಅದು ನಿಜವಾದ ದೇಶಭಕ್ತಿ.
Submitted by venkatb83 Thu, 04/25/2013 - 17:37

In reply to by anand33

"ಒಂದು ಕ್ಷೇತ್ರದಲ್ಲಿ ಗೆಲುವಿನ ಅಂತರ 1,000 ಓಟು ಇದ್ದರೆ ತಲಾ ಒಂದು ಸಾವಿರ ರೂಪಾಯಿ ಎಂಜಲು ತೆಗೆದುಕೊಂಡು ಓಟು ಹಾಕುವ ಒಂದು ಸಾವಿರ ಜನ ಇದ್ದರೆ ಪ್ರಾಮಾಣಿಕವಾಗಿ ಓಟು ಹಾಕುವ ಎಲ್ಲ ಜನರ ಆಶೋತ್ತರಗಳನ್ನು ಇವರು ನಿರರ್ಥಕಗೊಳಿಸಬಲ್ಲರು. ಇದಕ್ಕೆ ಅಭ್ಯರ್ಥಿ ತಲಾ ಒಂದು ಸಾವಿರದಂತೆ ಒಟ್ಟು ಹತ್ತು ಲಕ್ಷ ಖರ್ಚು ಮಾಡಿದರೆ ಸಾಕು. ಇದು ಲಂಚ ನೀಡಿ ಪ್ರಾಮಾಣಿಕ ಅಭ್ಯರ್ಥಿಗಳನ್ನು ಕೆಲಸದ ನೇಮಕಾತಿಗಳಲ್ಲಿ ಹಿಮ್ಮೆಟ್ಟಿಸುವ ಕಡಿಮೆ ಅಂಕ ಪಡೆದ ಅಭ್ಯರ್ಥಿಗಳು ಮಾಡುವ ಅನ್ಯಾಯದಂತೆ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಹಳಿ ತಪ್ಪಿಸುವ ಸಾಮರ್ಥ್ಯ ಹೊಂದಿದೆ." :((( ಇದು ಸತ್ಯ ... ಮತ್ತು ನಮ್ ದೌರ್ಭಾಗ್ಯ ...
Submitted by venkatb83 Thu, 04/25/2013 - 17:35

" ಇಂಥ ಪ್ರವೃತ್ತಿಯನ್ನು ಸಾಮೂಹಿಕವಾಗಿ ವಿರೋಧಿಸುವ, ತರಾಟೆಗೆ ತೆಗೆದುಕೊಳ್ಳುವ ಎಚ್ಚರ ಬೆಳೆದರೆ ಮಾತ್ರ ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಉಳಿಸಿಕೊಳ್ಳಲು ಸಾಧ್ಯ. ಇಲ್ಲದಿದ್ದರೆ ಇದು ಉಳ್ಳವರ, ಭ್ರಷ್ಟರ ಪ್ರಭುತ್ವವಾಗಿ ಮಾತ್ರ ಮುಂಬರುವ ದಿನಗಳಲ್ಲಿ ಪರಿವರ್ತನೆಯಾಗಲಿದೆ. ಹಾಗಾದರೆ ಅದಕ್ಕೆ ನಮ್ಮ ಮತದಾರರೇ ಜವಾಬ್ದಾರರು. ಹಾಗಾಗದಂತೆ ತಡೆಯುವ ಹಕ್ಕು ಅವರಿಗೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಿಕ್ಕಿದೆ. ಅದನ್ನು ಬಳಸಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಉಳಿಸುವುದು ಅವರ ಕೈಯಲ್ಲಿಯೇ ಇದೆ." ಒಂದು ಬರಹಕ್ಕೆ ಬರೆದ ಒಂದು ಪ್ರತಿಕ್ರಿಯೆ ಇನ್ನೊಂದು ಬರಹಕ್ಕೆ ಸಹ ಹೊಂದಿಕೆಯಾಗಬಹುದೇ? ನನಗೀ ಭಾವ ಬಂದಿದ್ದು ಹಿರಿಯರಾದ ಕವಿ ನಾಗರಾಜ್ ಅವರ ಬಾಲ ಸಂಸ್ಕಾರ- ಶಿಕ್ಷಣ ಶಿಭಿರದ ಬಗೆಗಿನ ಚಿತ್ರ ಸಹಿತ ವರಧಿ ಓದಿ ಪ್ರತಿಕ್ರಿಯಿಸಿ ನಿಮ್ಮೀ ಬರಹವನ್ನು ಓದಿದ ಮೇಲೆ ,.. ಅಲ್ಲಿ ಕೊಟ್ಟ ಪ್ರತಿಕ್ರಿಯೆಯೇ ಬಹುತೇಕ ಇಲ್ಲೂ ಅನ್ವಯವಾಗುತ್ತೆ.. ನೀವೂ ಒಮ್ಮೆ ಆ ಚತ್ರ ಬರಹ ಓದಿ ಹಾಗೆಯೇ ನನ್ನ ಪ್ರತಿಕ್ರಿಯೆ ನೋಡೀ. http://sampada.net/… ಆನಂದ್ ಅವರೇ ಸಕಾಲಿಕ ಚಿಂತನೆ -ನಿಮ್ಮ ಈ ಭಾವ ನಮ್ಮೆಲ್ಲರಲ್ಲೂ ಒಮ್ಮೆಯಾದರೂ ಬಂದೀತು. ಈಗೀಗ ರಾಜಕೀಯದ ಕೊಳಕು ಕೆಸರು ಕೊಚ್ಚೆ ಮತ್ತು ಅದಕ್ಕೆ ಕಾರಣ ನಾವೇ ಎಂಬ ಅಪರಾಧಿ ಭಾವ ಮನದಲ್ಲಿ ಮೂಡುತಿದೆ . . >.>>ಯೋಗ್ಯರನ್ನು ಚುನಾಯಿಸೋಣ ಅಂದರೆ ಯೋಗ್ಯರು ನಿಲ್ಲಲು ಆಗೋಲ್ಲ (ನಿಲ್ಲಲು ಡಿಪಾಸಿಟ್ ಇಡಬೇಕು - ಕನಿಸ್ಟ ಪ್ರಮಾಣದ ಮತ ಪಡೆಯದಿದ್ದರೆ ಅವರ ಡಿಪಾಸಿಟ್ ಮುಟ್ಟುಗೋಲು ..!!).. >>> ಡಿಪಾಸಿಟ್ ಇಟ್ಟು ಶಿವ ನೀ ಕಾಯಪ್ಪ ಎಂದು ಕೈ ಮುಗಿದು ಮತ ಕೇಳಿದರೆ ಹಾಕ್ತೀವಿ ಎಂದವರು ಹಾಕ್ವರು ಎಂಬ ನಂಬುಗೆ ಇಲ್ಲ ;(( >>> ಸುಶಿಕ್ಷಿತರು ಅನೇಕರು ಮತದಾನ ಮಾಡೋಲ್ಲ -ಆದರೆ ಮಾಡದೆಯೇ ದೇಶದ ಬಗ್ಗೆ ಜನ ಪ್ರತಿನಿಧಿಗಳ ಬಗ್ಗೆ ಮತ್ತು ಹಾಳು - ಕೊಳಕು ರಾಜಕೀಯ ಭ್ರಷ್ಟಾಚಾರ ಬಗ್ಗೆ ಘಂಟೆ ಗಟ್ಟಲೆ ಚರ್ಚಿಸುವರು ;(( ಇದಕೆ ಸಾಕ್ಷಿ > ಹೋದ ಎಲೆಕ್ಚನಲ್ಲಿ ಕ್ಯಾ: ಗೋಪಿನಾಥ್ ಅವರ ಸೋಲು ... ವ್ಯಕ್ತಿ ನೋಡಿ - ಪಕ್ಷ ನೋಡಿ ಮತ ಹಾಕುವವರೂ ಇರುವರು , ಹಳ್ಳಿಗಳ ಕಡೆ ಈಗಲೂ ಕಾಂಗ್ರೆಸ್ಸಿಗೇ ವೋಟು ಹಾಕುವೆವು ಎಂದು ಅಲಿಖಿತ ಪ್ರತಿಜ್ಶ್ನೆ ಮಾಡಿರುವವರು ಮತ್ತು ಇಂದಿರಾ ಗಾಂಧೀ ಈಗಲೂ ಬದುಕಿರುವರು ಎಂದು ನಮ್ಬಿದವರೂ ಇರುವರು ..!! ನಮ್ಮ ಕಣ್ಣ ಮುಂದೆಯೇ ವೋಟಿಗೆ ನೋಟು ಕೊಟ್ಟು ಕೋಟಿ ಲೂಟಿ ಹೊಡೆವವರನ್ನು ನೋಡುವ -ಆ ಬಗ್ಗೆ ಚರ್ಚಿಸುವವರು ನಾವೇ ...!! ಬದಲಾವಣೆ ಅನಿವಾರ್ಯ -ಆದರೆ ಇದು ಎಲ್ಲೆಡೆ ಸಲ್ಲುವದಲ್ಲ .. ಕಾಸು ಮಾಡಲು ರಾಜಕೀಯಕ್ಕೆ ಧುಮುಕುವರು ಎಂಬುದು ಕಣ್ಣೆದುರಿನ ಕನ್ನಡಿಯಲ್ಲಿನ ನಮಮ್ ಪ್ರತಿ ಬ್ಹಿಮ್ಬದಸ್ತೆ ಸತ್ಯ. ಆದರೂ ಅದರ ಪರಿಹಾರ ಕೀಲಿ ಕೈ ನಮ್ಮಲ್ಲಿಲ್ಲ ಆದರೆ ಯಾರೋ ಅವತಾರ ಪುರುಷ ಕಲ್ಕೀ ಯಲ್ಲಿದೆ ಎಂದು ನಾವ್ ಅವನ ಬರುವಿಕೆಗಗೈ ಎದುರು ನೋಡುತ್ತಿರುವೆವು .. ಬಂದೇ ಬರ್ತಾನ? ಅದೂ ಖಚಿತವಿಲ್ಲ .. ಹಾಗಾದ್ರೆ ?? ಇನ್ನೇನು ಇಲ್ಲ ಪ್ರತಿಭಟಿಸೋದು ಅದರ ಫಲ ಉಣ್ಣೋದು ಇಲ್ಲವೇ ಕಣ್ಣು ಮುಚ್ಚಿ ತೆಪ್ಪಗಿದ್ದು ಆಗುವ ತಪ್ಪುಗಳಿಗೆ ಅನಾಹುತಗಳಿಗೆ ನಾವ್ ಅಪರೋಕ್ಷವಾಗಿ ಜವಾಬ್ಧಾರಿ ಆಗೋದು ... ನಿಮ್ಮ ಚಿಂತನೆ ಹಿಡಿಸಿತು . ಈ ಚುನಾವಣಾ ಸಂದರ್ಭದಲ್ಲಿ ನಾನು ಒಂದು ಬರಹ ಬರೆಯಬೇಕು ಎಂದುಕೊಂಡೆ ಆದರೆ ನಿಮ್ಮ ಮತ್ತು ಇನ್ನಿತರರ ಆ ಬಗೆಗಿನ ಬರಹ ಓದಿದ ಮೇಲೆ ಹೆಚ್ಚು ಕಡಿಮೆ ನಮ್ಮೆಲ್ಲರ ಮನದಾಳದ ಭಾವನೆಗಳನ್ನು ನೀವ್ ಅನಾವರಣ ಮಾಡಿದಿರಿ ಎನ್ನಿಸಿತು ಅದಕ್ಕೆ ಬರಹಕ್ಕೆ ಬದಲಾಗಿ ದೀರ್ಘ ಪ್ರತಿಕ್ರಿಯೆ ..!! ಶುಭವಾಗಲಿ .. \।/
Submitted by anand33 Fri, 04/26/2013 - 08:56

ನಿಮ್ಮ ಅಭಿಪ್ರಾಯ ನಿಜ. ಸಂಸ್ಕಾರಯುತ ನೈತಿಕ ಶಿಕ್ಷಣ ಅಗತ್ಯ ಇದೆ. ಜನತೆಯ ನೈತಿಕ ಪ್ರಜ್ಞೆಯನ್ನು ಬಡಿದೆಬ್ಬಿಸುವ ಸಾಮರ್ಥ್ಯ ಮಾಧ್ಯಮಗಳಿಗೆ ಇದೆ. ಆ ಸಾಮರ್ಥ್ಯದ ಬಳಕೆ ಆಗುತ್ತಾ ಇಲ್ಲ. ಇಂದು ಬಹುತೇಕ ಬಡವ ಬಲ್ಲಿದ ಎನ್ನದೆ ಎಲ್ಲರೂ ಟಿವಿ ಮಾಧ್ಯಮವನ್ನು ನೋಡುತ್ತಾರೆ. ಪತ್ರಿಕೆಗಳು ತಲುಪದ ಹಳ್ಳಿಯ ಮೂಲೆ ಮೂಲೆಗಳನ್ನೂ, ಸಮಾಜದ ಕಟ್ಟಕಡೆಯ ಮನುಷ್ಯನನ್ನೂ ಬಹುತೇಕ ಟಿವಿ ಮಾಧ್ಯಮ ತಲುಪಿದೆ. ಹೀಗಾಗಿ ಮತದಾರರ ನೈತಿಕ ಪ್ರಜ್ಞೆಯನ್ನು ಟಿವಿ ಮಾಧ್ಯಮದ ಮೂಲಕ ಸುಲಭವಾಗಿ ಏಕಕಾಲದಲ್ಲಿ ಬಡಿದೆಬ್ಬಿಸಬಹುದು. ಸಮಾಜದ ಹೆಸರಾಂತ ಸಾಧಕರು, ಗಣ್ಯರು ಟಿವಿ ಮಾಧ್ಯಮದ ಮೂಲಕ ನಿರಂತರವಾಗಿ ಎಂಜಲು ತಿಂದು ಓಟು ಹಾಕುವುದರ ದುಷ್ಪರಿಣಾಮಗಳನ್ನು ಮನಮುಟ್ಟುವಂತೆ ಇಡೀ ದಿನ ಚರ್ಚೆಗಳ ಮೂಲಕ ನಡೆಸಿಕೊಟ್ಟರೆ ಅದು ಪರಿಣಾಮ ಬೀರುವ ಸಂಭವ ಹೆಚ್ಚಾಗಿದೆ.