ಮುಂಬೈನ ಮೈಸೂರ್ ಅಸೋಸಿಯೇಷನ್ ನಲ್ಲಿ, ರಾಮನವಮಿ ಆಚರಣೆ !

ಮುಂಬೈನ ಮೈಸೂರ್ ಅಸೋಸಿಯೇಷನ್ ನಲ್ಲಿ, ರಾಮನವಮಿ ಆಚರಣೆ !

 

ಶ್ರೀಮದ್ ಹನುಮಾನ್ ನಮಃ 
 
'ಕಾರ್ಯ ಸಿದ್ಧಿ ಮಂತ್ರ '
 
ಅಸಾಧ್ಯವಾದ ಕಾರ್ಯವನ್ನು ಸಾಧಿಸುವ ಸ್ವಾಮಿಯೇ,  ನಿನಗೆ 
ಅಸಾಧ್ಯವಾದುದು ಯಾವುದು ಹೇಳು ? ನೀನು ರಾಮದೂತನು. 
ಹೇ ಕೃಪಾಸಿಂಧುವೆನಿಸಿದ ಪ್ರಭುವೇ, ನನ್ನ  ಕಾರ್ಯವನ್ನು ಸಾಧಿಸಿಕೊಡು. 
 
 
'ರಾಮನವಮಿ' ಪ್ರತಿವರ್ಷದಂತೆ ಈ ವರ್ಷವೂ 'ಮುಂಬೈನ ಮೈಸೂರ್ ಅಸೋಸಿಯೇಶನ್ ಗಣಪತಿ'  ಸಮ್ಮುಖದಲ್ಲಿ 'ಶ್ರೀ ರಾಮಚಂದ್ರ'ನನ್ನು ಪೂಜಿಸಲಾಯಿತು. ಸಂಘದ ಸದಸ್ಯರೆಲ್ಲಾ ಭಾಗವಹಿಸಿ,  ಮಂತ್ರಘೋಷದಿಂದ ಶೀರಾಮನ ಪೂಜೆಯನ್ನು ಶಾಸ್ತ್ರೋಕ್ತವಾಗಿ  ಮಾಡಿ  ದೇವರ ಕೃಪೆಗೆ ಪಾತ್ರರಾದರು. 
 
ಇದಾದಬಳಿಕ, ಒಂದು ಶ್ರೀರಾಮಚಂದ್ರನ  ಭಂಟ ಹನುಮಂತನ  ಬಗ್ಗೆ 'ಸಮರ್ಥ ಹನುಮ' ಎಂಬ   ಪ್ರವಚನವನ್ನು ಮೊದಲನೇ ಮಹಡಿಯಲ್ಲಿ ಆಯೊಜಿಸಿದ್ದರು. ಮುಂಬೈನ ಐ. ಐ. ಟಿ ಯ ನಿವೃತ್ತ ಪ್ರಾಧ್ಯಾಪಕ,  ಶೀ ನಾಗರಾಜ್ ರವರ ಪತ್ನಿ, ವಿದುಷಿ. ವೀಣಾ ನಾಗರಾಜ್ ರವರು ತಮ್ಮ ಸುಶ್ರಾವ್ಯವಾದ ಕಂಠ ದಿಂದ 'ಸುಂದರ ಕಾಂಡದ ಕಥಾ ಪಾರಾಯಣ'ವನ್ನು ಅತ್ಯಂತ ರಸವತ್ತಾಗಿ ಬಣ್ಣಿಸಿದರು. ಶ್ರೀರಾಮನ  ಪ್ರಿಯ ಭಂಟನಾದ ಮಾರುತಿಯ ಚರಿತೆಯನ್ನು  ಅತ್ಯಂತ ವಿಧಿವತ್ತಾಗಿ ವಿವರಿಸಿ,ನೆರೆದಿದ್ದ ಭಕ್ತಾದಿಗಳ ಮನಸ್ಸನ್ನು ಸಂತೋಷ ಪಡಿಸಿದರು. 
 
ಮೊದಲು ಅಸೋಸಿಯೇಶನ್ ನ ಹಿರಿಯ ಕಾರ್ಯಕರ್ತತಾದ ಶ್ರೀ. ಮಂಜುನಾಥಯ್ಯನವರು ಸಭೆಗೆ ವಿದುಷಿ. ವೀಣಾರವರನ್ನು ಪರಿಚಯಿಸಿದರು. ವೀಣಾ, ಶ್ರೀ. ನಾರಾಯಣ ಸ್ವಾಮಿಯವರ ಪುತ್ರಿ. ಭಾರತದ ನಮ್ಮ ಪರಂಪರೆಯ ಬಗ್ಗೆ ಅಪಾರ ಗೌರವ, ಶ್ರದ್ಧೆಗಳಿಂದ ಸಂಸ್ಕ್ರುತದಲ್ಲಿ ವ್ಯಾಸಂಗ ಮಾಡಿ, ಈಗ ಅವರ  ತಂದೆಯವರ ಗಮಕ ರೂಪಕಕ್ಕೆ  ವ್ಯಾಖ್ಯಾನ ಹೇಳುವ ಮಟ್ಟದಲ್ಲಿ ಬೆಳೆದಿದ್ದಾರೆ. ಸಂಸ್ಕೃತದಲ್ಲಿ  ಆಳವಾದ ಅಭ್ಯಾಸ ಮಾಡಿ ಬೆಂಗಳೂರಿನ ಕಾಶಿ ಮಠದಲ್ಲಿ ಸಂಸ್ಕೃತ ಕಲಿಸುತ್ತಿದ್ದಾರೆ. ಅವರು ಅಲ್ಲಿ 'ಗೀತಾ ಪ್ರವಚನ'ವನ್ನು ಮಾಡುತ್ತಿದ್ದಾಗ, ಮಂಜುನಾಥಯ್ಯನವರು ಅದನ್ನು ಕೇಳಿ ಪ್ರಭಾವಿತರಾದರು. ಪ್ರವಚನ ಶುರುವಾಗುವ ಮುನ್ನ, ಅಸೋಸಿಯೇಶನ್ ನ ಮತ್ತೊಬ್ಬ  ಹಿರಿಯ  ಕಾರ್ಯಕರ್ತರಾದ, ಡಾ. ಮಂಜುನಾಥ್, ವೀಣಾರಿಗೆ,  ಪುಷ್ಪ ಗೊಂಚಲನ್ನು ನೀಡಿ ಗೌರವಿಸಿದರು. 
 
ವಿನಾಯಕನ ಪ್ರಾರ್ಥನಾ ಗೀತೆಯೊಂದಿಗೆ  ಸುಮಾರು ಒಂದು ಗಂಟೆ ತಡವಾಗಿ ಅಂದರೆ  ೭-೩೦  ಕ್ಕೆ ಪ್ರವಚನ  ಆರಂಭವಾಗಿ  ೯ ಗಂಟೆಗೆ ಸರಿಯಾಗಿ  ಮುಕ್ತಾಯವಾಯಿತು. ಹನುಮನ ಬಗ್ಗೆ ಹಲವಾರು ರೋಚಕ ಸಂಗತಿಗಳನ್ನು  ವೀಣಾರವರು ತಿಳಿಸಿದ್ದಲ್ಲದೆ. 'ಕಾರ್ಯ ಸಿದ್ಧಿ ಮಂತ್ರ'ವನ್ನು ಉಪದೇಶ ಮಾಡಿ, ಮಂತ್ರದ ಪ್ರತಿಯನ್ನು ಸಭಿಕರೆಲ್ಲರಿಗೂ ಹಂಚಿದರು.  ಮಂತ್ರ,  ಇಂಗ್ಲೀಷ್,  ಹಿಂದಿ, ಮರಾಥಿ,ಮತ್ತು ಕನ್ನಡ ಭಾಷೆಗಳಲ್ಲಿದೆ.  ಪ್ರತಿದಿನವೂ ಕನಿಷ್ಠ ೩ ಬಾರಿಯಾದರೂ ದೇವರ ಮುಂದೆ ಹೇಳಿಕೊಂಡರೆ, ನಮ್ಮ ಇಷ್ಟಾರ್ತಗಳೆಲ್ಲಾ ಈಡೇರುವುದಾಗಿ ಅವರು ತಿಳಿಯಹೇಳಿದರು. ೨೪ ಸಾವಿರ ಶ್ಲೋಕಗಳಿರುವ ವಾಲ್ಮೀಕಿ ರಾಮಾಯಣದಲ್ಲಿ  ೭ ಕಾಂಡಗಳಿವೆ. ಅವೇ : 
* ಬಾಲ ಕಾಂಡ ,
* ಅಯೋಧ್ಯಾಕಾಂಡ ,
* ಅರಣ್ಯ ಕಾಂಡ ,
* ಕಿಷ್ಕಿಂಧಾ ಕಾಂಡ, 
* ಸುಂದರ ಕಾಂಡ, 
* ಯುದ್ಧ ಕಾಂಡ, ಮತ್ತು 
* ಉತ್ತರ ಕಾಂಡ. 
 
ವೀಣಾರವರು ತಮ್ಮ ಪ್ರವಚನದಲ್ಲಿ ಶ್ರೋತೃಗಳನ್ನು ತಮ್ಮ ಜೊತೆ ಸೇರಿಸಿಕೊಂಡು ಮುನ್ನಡೆದರು. 
 
'ಕರುಣಾಂತರಂಗಾ ಕರಿರಾಜವರದ, ಕಮಲೇಶ ಶ್ರೀ ಸಾಯೀರಾಮ',
'ಪರಬ್ರಭ್ಮ ರಾಮ, ಪ್ರಶಾಂತಿ ರಾಮ', 
'ರಾಮಾ ಕಮಲೇಶ ಶ್ರೀ ಸಾಯೀರಾಮ',
 
ವೀರ ಮಾರುತಿ,  ಗಂಭೀರ ಮಾರುತಿ 
ಅತಿ ಧೀರ ಮಾರುತಿ, ಕಮಲೇಶ ಶ್ರೀ ಸಾಯೀರಾಮ',
ಸಂಗೀತ ಮಾರುತಿ ಕಮಲೇಶ ಶ್ರೀ ಸಾಯೀರಾಮ',
ದೂತ ಮಾರುತಿ ರಾಮ ದೂತ ಮಾರುತಿ 
ಭಕ್ತ ಮಾರುತಿ ಪರಮ ಭಕ್ತ ಮಾರುತಿ 
ಕಮಲೇಶ ಶ್ರೀ ಸಾಯೀರಾಮ',
 
ಶ್ರೀರಾಮ್ ಜೈರಾಮ್ ಜೈ ಜೈ ರಾಮ್ 
ಶ್ರೀರಾಮ್ ಜೈರಾಮ್ ಜೈ ಜೈ ರಾಮ್ 
 
'ಪಂಚಮುಖಿ ಆಂಜನೇಯನ ವರ್ಣನೆ' ಮಾಡಿದರು. 'ಸುಂದರ ಕಾಂಡ' ವೆಂದರೆ ಹನುಮನ ಪ್ರಶಂಸೆಯ ಭಾಗ. ಹನುಮನ ಮೂಲಕ,  'ರಾಮ ತಾರಕ ಮಂತ್ರದ ರಾಮಸ್ತುತಿ ' ಪ್ರಸ್ತುತವಾಗುತ್ತದೆ. ಸುಂದರ ಕಾಂಡವೆಂದರೆ, ಅದು ಮಾರುತಿಯ ಶೌರ್ಯ-ಪರಾಕ್ರಮಗಳನ್ನು ಪ್ರತಿಪಾದಿಸುವ ಕಾಂಡ. ವಾನರ ವೀರ ಬಾಹ್ಯದಲ್ಲೂ ಮತ್ತು ಆಂತರ್ಯದಲ್ಲೂ ಮಿಕ್ಕ ಕಪಿಶ್ರೇಷ್ಥರಿಗೆ ಹೋಲಿಸಿದರೆ ಆತ 'ಅತಿ ಸುಂದರ'. ಆ ಪದ ಆತನಿಗೆ 'ಅನ್ವರ್ಥನಾಮ'ವಿದ್ದಂತೆ. 
 
ನೂರು ಯೋಜನ ದೂರದಲ್ಲಿದ್ದ ಲಂಕಾ ಪಟ್ಟಣಕ್ಕೆ ಹಾರಿ ಹೋಗಿ, ರಾವಣನ ಕಾರಾಗಾರದ ಅಶೋಕವನದಲ್ಲಿ ಬಂದಿಯಾಗಿದ್ದ ಸೀತಾದೇವಿಯನ್ನು ಭೇಟಿಮಾಡಿ, ಆಕೆಯಿಂದ ಮುದ್ರೆಯುಂಗುರವನ್ನು ತರುವ ಅತ್ಯಂತ ಕ್ಲಿಷ್ಟವಾದ ಮಹತ್ಕಾರ್ಯವನ್ನು ಮಾಡಲು ಸಮರ್ಥ ಹನುಮನೊಬ್ಬನಿಂದಲೇ ಸಾಧ್ಯವೆಂದು ವಾನರರಲ್ಲಿ ಹಿರಿಯ, 'ಜಾಂಬುವಂತ'ನು ನಿರ್ಧರಿಸುತ್ತಾನೆ. 
 
'ಪಾರಾಯಣ'ದ ನಂತರ ಅಸೋಸಿಯೇಶನ್ ನಲ್ಲಿ 'ಪ್ರಸಾದ ವಿನಿಯೋಗ'ವಾಯಿತು. 
 
-ವರದಿ-ಹೊರಂಲವೆಂ
೧೯, ಏಪ್ರಿಲ್, ೨೦೧೩