ಮನ್ಮಥನ ಹತ್ತು ಬಾಣಗಳು

ಮನ್ಮಥನ ಹತ್ತು ಬಾಣಗಳು

ಇದೇನು ಸ್ವಾಮೀ? ಮನ್ಮಥನ ಹತ್ತಿರ ಇರೋದು ಐದು ಬಾಣಗಳು ಅಂದಿರಾ? ಅದು ಸರಿಯೇ.  ನಾಳೆ ಚಿತ್ರಾ ಪೂರ್ಣಿಮೆ. ಚೈತ್ರಮಾಸದ ಹುಣ್ಣಿಮೆ. ಚೈತ್ರ ಅಂದ್ರೆ ಎಲೆಚಿಗುರಿ, ಗಿಡಮರಗಳೆಲ್ಲ ಹೂತಾಳೋ ಕಾಲ ಅನ್ನೋದು ನಿಮಗೆ ಗೊತ್ತೇ ಇರುತ್ತೆ. ಚೈತ್ರ ಅಂದರೆ ವಸಂತ ಕಾಲ. ಈ ವಸಂತಕಾಲ ಅಂತಿಂತಹದ್ದಲ್ಲ. ಸಾಕ್ಷಾತ್ ಮನ್ಮಥನ ಬಂಟ ಈತ. ಶಿವಪಾರ್ವತಿಯರ ಮದುವೆಯ ಕಥೆ ನೀವು ಕೇಳೇ ಇರ್ತೀರ. ದಕ್ಷಬ್ರಹ್ಮನ ಮಗಳಾದ  ದಾಕ್ಷಾಯಣಿಯನ್ನಯನ್ನ ಮದುವೆಯಾಗಿದ್ದವನು ಶಿವ. ಒಮ್ಮೆ ಯಾಗ ಮಾಡುವಾಗ, ಅವನು ಬೇಕೆಂದೇ ಮಗಳು ಅಳಿಯನನ್ನ ಕರೆಯಲಿಲ್ಲ. ಅವಮಾನ ತಾಳದ ದಾಕ್ಷಾಯಣಿ, ಆ ಯಾಗದಲ್ಲಿಯ ಅಗ್ನಿಯೊಳಗೇ ನೆಗೆದು ಅಸುನೀಗಿದಳು. ಹೆಂಡತಿಯನ್ನು ಕಳೆದುಕೊಂಡ ಶಿವ ಎಲ್ಲರಿಂದ ದೂರವಾಗಿ ಕೈಲಾಸಪರ್ವತದಲ್ಲಿ ಘೋರ ತಪಸ್ಸು ಮಾಡತೊಡಗಿದ.




ಅತ್ತಕಡೆ ತಾರಕಾಸುರನ ಕಾಟ ದೇವತೆಗಳಿಗೆ ವಿಪರೀತವಾಗಿಹೋಯಿತು. ಶಿವನಮಗನೊಬ್ಬನೇ ಆ ತಾರಕನನ್ನು ಕೊಲ್ಲಬಲ್ಲ. ಆದರೆ, ಸಂಸಾರದಿಂದ ದೂರವಾದ ಶಿವನಿಂದ ತಾಳಿ ಕಟ್ಟಿಸಿಕೊಳ್ಳಬಲ್ಲವರು ಯಾರು? ಪರ್ವತರಾಜನ ಮಗಳು ಪಾರ್ವತಿಗೇನೋ ಶಿವನ ಮೇಲೆ ಮೋಹ. ಆದರೆ ಅವಳ ಆರಾಧನೆಗೆ ಶಿವ ಕಣ್ಣು ತೆರೆದು ನೋಡಿದರೆ ತಾನೇ? ಅವಳ ಕಡೆಗೆ ಕಣ್ಣೆತ್ತಿ ನೋಡಿದರೆ ಅವಳ ಪ್ರೀತಿಯಲ್ಲಿ ಶಿವನು ಬೀಳಬಹುದೆಂದು ದೇವತೆಗಳು ಶಿವನೆಡೆಗೆ, ಮನ್ಮಥ,ರತಿ ಮತ್ತೆ ಅವರ ಸಹಾಯಕ್ಕೆ ವಸಂತನನ್ನು ಕಳಿಸಿದರು. ಮನ್ಮಥನು ತನ್ನ ಹೂಬಾಣದಲ್ಲಿ ವಸಂತ ಕಾಲದಲ್ಲಿ ಬಿಡುವ ಅರವಿಂದ, ಅಶೋಕ,ಚೂತ(ಮಾವು),ನವಮಲ್ಲಿಕೆ ಮತ್ತು ನೀಲೋತ್ಪಲ ಪುಷ್ಪಗಳ ಬಾಣಗಳನ್ನು ಶಿವನತ್ತ ಬಿಟ್ಟಾಗಲೇ, ಅವನ ಏಕಾಗ್ರಮನಸ್ಸಿಗೆ ಏನೋ ಕಳವಳವಾಗಿ ಅವನು ಕಣ್ಣು ಬಿಟ್ಟಿದ್ದೂ, ಎದುರು ಕಂಡ ಮನ್ಮಥನನ್ನು ಹಣೆಗಣ್ಣಿಂದ ಸುಟ್ಟಿದ್ದೂ, ನಂತರ ಪಾರ್ವತಿಯನ್ನು ಕಂಡು ಅವಳಲ್ಲಿ ಪ್ರೀತಿಹುಟ್ಟಿ ಅವಳನ್ನು ವರಿಸಿದ್ದೂ, ನಂತರ ಷಣ್ಮುಖನು ಜನಿಸಿದ್ದೂ - ಇದೇ ಕಾಳಿದಾಸನ ಕುಮಾರಸಂಭವದ ಹೂರಣ.



ಅಂದಿನಿಂದ ಇಂದಿನವರೆಗೆ ನಮ್ಮ ಹಲವು ಕವಿಗಳು ವಸಂತನನ್ನೂ, ಅವನ ಜೊತೆಬರುವ ಮನ್ಮಥನನ್ನೂ, ಅವನ ಐದು ಹೂಬಾಣಗಳನ್ನೂ ನೆನೆದು ಹಲವು ಪದ್ಯಗಳನ್ನು ಹೊಸೆದೇ ಇದ್ದಾರೆ. ಅಂತಹದ್ದರಲ್ಲಿ, ಮನ್ಮಥನ ಬಳಿ ಹತ್ತು ಬಾಣಗಳಿವೆಯೆಂದರೆ ಯಾರಾದರೂ ನಕ್ಕಾರು. ಆದರೆ ಸಮಸ್ಯಾಪೂರಣದ ಬಗೆಯೇ ಹೀಗೆ.



ಈಗ ಕೆಲವು ದಿನಗಳ ಹಿಂದೆ ಪದ್ಯಪಾನದಲ್ಲಿ ಕಂಡ ಒಂದು ಸಮಸ್ಯಾಪೂರಣದ ಸಾಲು ಹೀಗಿತ್ತು:



ಮನಸಿಜನ ಬಳಿ ಹತ್ತುಬಾಣಗಳಿರುವುದೇ ನಿಜವೈ!



ಸಮಸ್ಯಾಪೂರಣದಲ್ಲಿ ಬಿಡಿ! ಬಿಳಿಯನ್ನು ಕಪ್ಪು ಮಾಡಬಹುದು. ಕಪ್ಪನ್ನು ಬಿಳಿಮಾಡಬಹುದು. ಅದೇ ಅದರ ಹೆಚ್ಚುಗಾರಿಕೆ. ಸರಿ. ಇರಲಿ, ಈ ಬಾರಿ ಸ್ವಲ್ಪ ಬೇರೆಯ ರೀತಿಯ ಪೂರಣವನ್ನು ಮಾಡೋಣವೆಂದು ನಾನು ಬರೆದಿದ್ದು ಈ ಭಾಮಿನಿ ಷಟ್ಪದಿಯನ್ನು:



ಅನವರತದೊಳು ತ್ಯಾಗರಾಜನು

ವಿನಯದಲಿ ಜಾನಕಿಯ ಪತಿಯನೆ

ಕನವರಿಕೆಯಲು ಭಕ್ತಿವೈರಾಗ್ಯದಲಿ ನೆನೆದಾತ;

ಕೊನೆಯುಸಿರೆಳೆಯೆ ಮಡದಿ ಪಾರ್ವತಿ

ಯನುಜೆಯನು ಮರುಲಗ್ನವಾದನೆ!

ಮನಸಿಜನ* ಬಳಿ ಹತ್ತುಬಾಣಗಳಿರುವುದೇ ನಿಜವೈ!!



ಕರ್ನಾಟಕ ಸಂಗೀತ ತ್ರಿಮೂರ್ತಿಗಳಲ್ಲೊಬ್ಬರಾದ ವಾಗ್ಗೇಯಕಾರ ತ್ಯಾಗರಾಜರು ತಮ್ಮ ಪತ್ನಿ ಪಾರ್ವತಿ ಸಾವನ್ನೈದಿರಲು,ಆಕೆಯ ತಂಗಿ ಕಮಲೆಯನ್ನೇ ಮದುವೆಯಾದರೆಂಬುದು ಅವರ ಜೀವನ ಚರಿತ್ರೆಯಿಂದ ತಿಳಿದು ಬರುವ ಸಂಗತಿ. ಏಕಪತ್ನೀವ್ರತನಾದ ರಾಮನ ಅಪರಿಮಿತ ಭಕ್ತರಾದಂಥಾ ತ್ಯಾಗರಾಜರೇ ಹೀಗೆ ಎರಡನೇ ಮದುವೆಯಾಗಿರಲು, ಮನ್ಮಥನ ಬಳಿ ಐದು ಬಾಣಗಳ ಬತ್ತಳಿಕೆಯಲ್ಲ, ಅದರ ಎರಡರಷ್ಟು, ಅಂದರೆ ಹತ್ತು ಬಾಣಗಳು ಇದ್ದಿರಬೇಕೆಂಬ ಕಲ್ಪನೆ ಹರಿಸಿ ಕೊಟ್ಟ ಉತ್ತರವಿದು.



ನನಗೆ ಹೆಚ್ಚಿನ ಆಸಕ್ತಿಯಿರುವ ಜ್ಯೋತಿಷ (astronomy)  ಹಿನ್ನೆಲೆಯಲ್ಲಿ ಇನ್ನೊಂದು ಉತ್ತರ ಕೊಡೋಣವೆನ್ನಿಸಿ, ಈ ಕೆಳಗಿನ ರೀತಿಯಲ್ಲಿ, ಕೊನೆಯ ಸಾಲನ್ನು ಸ್ವಲ್ಪ ಬದಲಿಸಿ ಬರೆದೆ :



ಉತ್ತರದಲರೆಭಾಗ ಪೃಥಿವಿಗೆ

ಚಿತ್ತಚೋರ ವಸಂತ ಕಾಲದ

ಲತ್ತ ಹೂಡುವನೈದು ಹೂವಿನ ಶರವ ಮುದದಿಂದ

ಮತ್ತೆ ಪೋಗುವ ದಕ್ಷಿಣದ ಕಡೆ

ಗತ್ತ ಪ್ರೀತಿಯ ಸೊದೆಯ* ಹಂಚಲು!

ಹತ್ತುಬಾಣಗಳಿಹುದೆ ಸೈ ಮನ್ಮಥನ ಚೀಲದಲಿ !



ಭೂಮಿಯ ಉತ್ತರಾರ್ಧದಲ್ಲಿರುವ ಭಾಗದಲ್ಲಿ ಮನ್ಮಥನು ವಸಂತ (ನೊಡನೆ) ಕಾಲದಲ್ಲಿ ಅರವಿಂದ ಅಶೋಕ ಚೂತ ನೀಲೋತ್ಪಲ ಮತ್ತು ನವಮಲ್ಲಿಕೆಗಳ ಬಾಣಗಳನ್ನು ಹೂಡಿ ಜೀವರಾಶಿಯಲ್ಲಿ ಪ್ರೀತಿ ಹುಟ್ಟಿಸುವನು. ಆಮೇಲೆ, ಭುವಿಯ ಉತ್ತರಾರ್ಧಗೋಳದಲ್ಲಿ ವಸಂತ ಗ್ರೀಷ್ಮ ವರ್ಷ ಕಾಲಗಳು ಕಳೆದ ನಂತರ ಅವನು ದಕ್ಷಿಣಾರ್ಧಗೋಳಕ್ಕೂ ಅಲ್ಲಿಯ ವಸಂತ ಕಾಲದಲ್ಲಿ ಹೂಡಲು ಮತ್ತೈದು  ಹೊಸ ಬಾಣಗಳು ಬೇಕಲ್ಲ? ಅದಕ್ಕೆ, ಅವನ ಬತ್ತಳಿಕೆಯಲ್ಲಿ ಹತ್ತು ಬಾಣಗಳಿರಲೇಬೇಕೆಂಬ ಕಲ್ಪನೆ.




-ಹಂಸಾನಂದಿ



ಚಿತ್ರ: ಮನ್ಮಥ ಮತ್ತು ರತಿ, ಬೇಲೂರಿನ ಚೆನ್ನಕೇಶವ ದೇವಾಲಯದಿಂದ. ಚಿತ್ರಕೃಪೆ: ವಿಕಿಪೀಡಿಯ



ಕೊ: ಮನಸಿಜ = ಮನಸ್ಸಿನಲ್ಲಿ ಹುಟ್ಟಿದ; ಪ್ರೀತಿ ಹುಟ್ಟುವುದು ಮನಸ್ಸಿನಲ್ಲಾದ್ದರಿಂದ, ಆದಕ್ಕೆ ಕಾರಣನಾದ ಮನ್ಮಥನಿಗೆ ಮನಸಿಜನೆಂದು ಹೆಸರು

ಕೊ.ಕೊ: ಸೊದೆ=ಸುಧೆ, ಅಮೃತ

 
Rating
Average: 1 (1 vote)

Comments

Submitted by venkatb83 Thu, 04/25/2013 - 13:34

In reply to by partha1059

ಮನ್ಮಥ ಬಾಣ ಕೇಳಿದ್ದೆ ಬಹುಶ ಒಂದು ಇರಬಹುದು ಎಂದು ಕೊಂಡಿದ್ದೆ ಆದರೆ ಈಗ ೫ ಎಂದು ತಿಳಿಯಿತು ಅದನ್ನು ನೀವ್ ೧೦ ಕ್ಕೆ ಹೆಚ್ಚಿಸಿದಿರಿ... !!

ಚಿತ್ರ ಸಮೇತ ಬರಹ ಸೂಪರ್
ಶುಭವಾಗಲಿ ..

\।